Apr 19, 2020

ಒಂದು ಬೊಗಸೆ ಪ್ರೀತಿ - 61

ಊಟಿ, ಕೊಡೈ, ಮುನ್ನಾರ್‌, ಕೊಡಗು ನೋಡಿದ್ದ ನನಗಾಗಲೀ ರಾಜೀವನಿಗಾಗಲೀ ಯರ್ಕಾಡು ಅಷ್ಟೇನೂ ಆಕರ್ಷಣೀಯವೆನ್ನಿಸಲಿಲ್ಲ. ಇಲ್ಲೆಲ್ಲ ಇರುವಷ್ಟು ದಟ್ಟ ಕಾಡುಗಳಾಗಲೀ ಕಣ್ಣು ಚಾಚುವವರೆಗೂ ಹರಡಿಕೊಂಡಿರುವ ಟೀ ಕಾಫಿ ಎಸ್ಟೇಟುಗಳಾಗಲೀ ಯರ್ಕಾಡಿನಲ್ಲಿರಲಿಲ್ಲ. ನಮಗೆ ರುಚಿಸದ ಯರ್ಕಾಡು ಮಗಳಿಗೆ ವಿಪರೀತ ಇಷ್ಟವಾಯಿತು. ಕಿರಿಯೂರು ಜಲಪಾತವನ್ನು ಅಚ್ಚರಿಯ ಕಂಗಳಿಂದ ನೋಡಿದಳು, ಅದಕ್ಕಿಂತ ಹೆಚ್ಚು ಇಷ್ಟವಾಗಿದ್ದು ಎಮೆರಾಲ್ಡ್‌ ಕೆರೆಯಲ್ಲಿ ಬೋಟಿಂಗ್‌ ಹೋಗಿದ್ದು. ಕುಣಿದು ಕುಪ್ಪಳಿಸಿದ್ದೇ ಕುಪ್ಪಳಿಸಿದ್ದು. ಸಾಗರನ ಮದುವೆ ಮೂಡಿಸಿದ ಮಿಶ್ರಭಾವಗಳನ್ನು ರಾಧಳ ಖುಷಿ ದೂರಾಗಿಸಿತು. ಅದಕ್ಕಿಂತ ಖುಷಿ ರಾಜೀವ ರಾಧಳೊಡನೆ ಖುಷಿಖುಷಿಯಾಗಿ ಆಟವಾಡಿದ್ದು. ಅಪ್ಪ ಮಗಳು ಹಿಂಗೇ ಇರಬಾರದಾ? 

ಯರ್ಕಾಡಿನಿಂದ ಹೊರಟಾಗ ಮಧ್ಯಾಹ್ನ ಮೂರರ ಮೇಲಾಗಿತ್ತು. 'ಬೆಂಗಳೂರು ತಲುಪೋದೆ ಸುಮಾರೊತ್ತಾಗ್ತದೆ ನಡೀರಿ ನನ್ನ ಕಸಿನ್ ಮನೆಗೆ ಹೋಗಿ ನಾಳೆ ಬೆಳಿಗ್ಗೆ ಹೋಗುವ' ಅಂದಿದ್ದೇ ತಡ ರಾಜೀವನ ಗೊಣಗಾಟ ಸಣ್ಣದಾಗಿ ಶುರುವಾಯಿತು. ತೀರ ಅನಿರೀಕ್ಷಿತವೇನಲ್ಲ! ನಮ್ಮ ಕಡೆಯವರ ಮನೆಗೆ ಹೋಗುವ ಸಂದರ್ಭ ಬಂದಾಗೆಲ್ಲ ರಾಜೀವ ಹಿಂಗಾಡೋದು ಸಾಮಾನ್ಯ! ನಾ ಅವರ ಮನೆಯವರ ಕಡೆಗೆ ಹೋಗುವಾಗ ಆಡ್ತೀನಲ್ಲ ಥೇಟ್ ಹಂಗೆ! ನನ್ನ ಕಸಿನ್ ಮನೆಯಿದ್ದಿದ್ದು ಮಲ್ಲೇಶ್ವರದಲ್ಲಿ. ಹೊಸೂರುವರೆಗೇನೋ ಆರಾಮಾಗಿ ತಲುಪಿಬಿಟ್ಟೊ. ಅಲ್ಲಿಂದ ವಿಪರೀತ ಟ್ರಾಫಿಕ್ಕು. ಎಲೆಕ್ಟ್ರಾನಿಕ್ ಸಿಟಿಗೆ ಬರುವಷ್ಟರಲ್ಲಿ ಸಾಕು ಸಾಕಾಗಿತ್ತು. ಇನ್ನು ಮಲ್ಲೇಶ್ವರಕ್ಕೆ ಹೋಗುವಷ್ಟರಲ್ಲಿ ಮತ್ತಷ್ಟು ಸುಸ್ತಾಗ್ತದೆ. ನೈಸ್ ರೋಡಲ್ ಮೈಸೂರ್ ರಸ್ತೆ ತಲುಪಿ ಮನೆಗೆ ಹೋಗುವ ಅಂತ ರಾಜೀವ ಹೇಳಿದಾಗ ನನಗೂ ಹೌದೆನ್ನಿಸಿತು. ಕಸಿನ್ನಿಗೆ ಫೋನ್ ಮಾಡಿ 'ಸಡನ್ನಾಗಿ ಯಾವ್ದೋ ಅರ್ಜೆಂಟ್ ಕೆಲಸ ಬಂದಿದೆ. ಊರಿಗೆ ಹೊರಟುಬಿಟ್ಟೊ. ಇನ್ನೊಂದ್ಸಲ ಬರ್ತೀವಿ' ಅಂತೊಂದು ನೆಪ ಹೇಳಿ ಅವಳಿಂದ ಒಂದೈದು ನಿಮಿಷ ಬಯ್ಯಿಸಿಕೊಂಡಿದ್ದಾಯಿತು. 

'ಖುಷಿಯೇನಪ್ಪ ಈಗ' ಅಂತ ಕಿಚಾಯಿಸಿದೆ. 

"ಹು. ಡಾರ್ಲಿಂಗ್" ಅಂತ ಕೆನ್ನೆ ಗಿಲ್ಲಿದರು. 

ಮೈಸೂರು ತಲುಪುವವರೆಗೂ ನನಗೂ ಮಗಳಿಗೂ ಗಾಢ ನಿದ್ರೆ. ಪಕ್ಕದಲ್ಲಿ ಕೂತವರು ಮಲಗಿದರೆ ರಾಜೀವನಿಗೂ ನಿದ್ದೆ ತೂಗ್ತದೆ. ಸುಮಾರ್ ಸಲ ಕೂಗಿದರು, ತೊಡೆ ತಟ್ಟಿದರೂ ನಾ ಆ ಹೂ ಅಂತಂದು ಮತ್ತೆ ನಿದ್ರೆಗೆ ಜಾರುತ್ತಿದ್ದೆ. ಮನೆ ತಲುಪುವಷ್ಟರಲ್ಲಿ ಮಧ್ಯರಾತ್ರಿ ದಾಟಿತ್ತು. ಮಗಳಿಗೆ ಒಂಚೂರು ಹಾಲು ಕಾಯಿಸಿ ಕುಡಿಸಲೆತ್ನಿಸಿದೆ. ನಿದ್ರೆಯಲ್ಲಿದ್ದವಳು ನಾಲ್ಕನಿ ತೋಯಿಸಿಕೊಂಡು ಮಿಕ್ಕಿದ್ದನ್ನು ನನಗೆ ಕುಡಿಯಲು ಬಿಟ್ಟಳು. ನಿಮಗೇನಾದ್ರೂ ರೊಟ್ಟಿ ಬಳೀಲಾ ಅಂತ ಕೇಳೋಣವೆಂದುಕೊಂಡು ಬಂದರೆ ರಾಜೀವನಾಗಲೇ ಗೊರಕೆ ಹೊಡೆಯುತ್ತಿದ್ದರು. ಅವರ ಹಣೆಗೊಂದು ಮುತ್ತು ಕೊಟ್ಟು ನಾನೂ ಉರುಳಿಕೊಂಡೆ. 

ಬೆಳಿಗ್ಗೆ ಯಾರಿಗೂ ಆತುರವಿರಲಿಲ್ಲವಾದ್ದರಿಂದ ಎದ್ದಿದ್ದು ತಡವಾಗಿ. ಸಾಮಾನ್ಯ ರಾತ್ರಿ ಒಂದೆರಡು ಸಲವಾದರೂ ಏಳುತ್ತಿದ್ದ ರಾಧ ಕೂಡ ತುಟಿಕ್ ಪಿಟಿಕ್ ಅನ್ನದೇ ಮಲಗಿದ್ದಳು. ಎದ್ದು ಮಗಳು ಕೆಳಗೆ ಒದ್ದಿದ್ದ ಬೆಡ್ಶೀಟನ್ನು ಅವಳ ಮೇಲೆ ಒದ್ದಿಸುವಾಗ ಅವಳ ಮೈ ಬೆಚ್ಚಗಾಗಿರುವುದರಿವಿಗೆ ಬಂತು. ಸತತ ಓಡಾಟ, ಬದಲಾದ ಹವಾಮಾನ ಜ್ವರ ಬರಿಸಿದೆ. ಹೆಚ್ಚೇನೂ ಜ್ವರವಿರಲಿಲ್ಲ, ಒಂದೆರಡು ಬಿಸ್ಕತ್ತು ತಿನ್ನಿಸಿ ಸಿರಪ್ ಕುಡಿಸಿದೆ. ನಿದ್ರೆಗಣ್ಣಿನಲ್ಲೇ ಹೆಂಗೋ ತಿಂದ್ಕೊಂಡು ಕುಡ್ಕಂಡು ಮಲಗಿಕೊಂಡಳು. ಫ್ರಿಜ್ಜಿನಲ್ಲಿ ಹೆಚ್ಚು ತರಕಾರಿಗಳು ಕೂಡ ಇರಲಿಲ್ಲ. ಒಂದೆರಡು ಈರುಳ್ಳಿ ಟೊಮ್ಯಾಟೊ ಇತ್ತಷ್ಟೇ. ಪುಣ್ಯಕ್ಕೆ ರವೆ ಇತ್ತು. ಉಪ್ಪಿಟ್ಟು ಮಾಡಿಡುವಷ್ಟರಲ್ಲಿ ರಾಜಿ ಎದ್ದರು. ಅಡುಗೆಮನೆಗೆ ಬಂದವರು ತಬ್ಬಿ ಚುಂಬಿಸಿದರು. ಆಹಾ.... ಎಷ್ಟ್ ದಿನ.... ದಿನವೇನು ತಿಂಗಳುಗಳೇ ಆಗಿಹೋಗಿತ್ತೇನೋ ಇಂತದೊಂದು ಚುಂಬನ ಸಿಕ್ಕು. 

"ಮಗ್ಳು ಇನ್ನೂ ಸ್ವಲ್ಪ ಸಮಯ ಮಲಗಿರ್ತಾಳಲ್ವ" ಬೆನ್ನು ಸವರುತ್ತಾ ಕೇಳಿದರು. 

'ಮ್' ಎನ್ನಲಷ್ಟೇ ಸಾಧ್ಯವಾಗಿದ್ದು. ಇನ್ನೊಂದು ರೂಮಿಗೆ ಹೋಗ್ತೀವೇನೋ ಅಂದುಕೊಂಡೆ, ಇಲ್ಲ, ರಾಜಿ ಅಲ್ಲೇ ಅಡುಗೆಮನೆಯ ಬಾಗಿಲನ್ನು ಮುಂದೆ ದೂಡಿದ. ಇದ್ಯಾವುದಿದು ಹೊಸದಾಗಿ ಅಡುಗೆಮನೆಯಲ್ಲಿ ಅನ್ನೋ ಯೋಚನೆ ಬಂತು. ಕೇಳಲೋಗಲಿಲ್ಲ, ಎಲ್ಲಿ ಮೂಡ್ ಹಾಳಾಗ್ ಹೋಗ್ತದೋ ಅಂತ. ಇಬ್ಬರ ಕೆಳಗಿನ ಬಟ್ಟೆಗಳು ನೆಲ ಸೇರಿತು. ಬಹಳ ದಿನಗಳಾಗಿದ್ದಕ್ಕೋ ಏನೋ ಕಣ್ಮುಚ್ಚಿ ಬಿಡುವಷ್ಟರಲ್ಲಿ ಸ್ಖಲನವಾಗಿತ್ತು! 'ಥೂ.‌ ಪೋಲಿ ಬಿದ್ದೋಗಿದ್ದೀರ ನೀವು! ಎಲ್ಲಂದ್ರಲ್ಲಿ ಶುರು ಹಚ್ಕೋಬೋದಾ ಹಿಂಗೆ' ಎಂದು ಕೇಳಿದ್ದಕ್ಕೆ ಮುಗುಳ್ನಕ್ಕು ಬಚ್ಚಲುಮನೆ ಕಡೆಗೆ ನಡೆದರು. 

ರಾಧಳಿಗೆ ಸ್ವಲ್ಪ ಉಪ್ಪಿಟ್ಟನ್ನು ಹಾಟ್ ಬಾಕ್ಸಿಗೆ ಹಾಕಿ ರೂಮಿಗೆ ಬಂದೆ. ನಿದ್ರೆಗಣ್ಣಲ್ಲೇ ಒಂದಷ್ಟು ವಾಂತಿ ಮಾಡಿಕೊಂಡಿದ್ದಳು. ಕುಡಿದ ಸಿರಪ್ ಎಲ್ಲ ಹೊರಬಂದಂತಿತ್ತು. ಮಗಳಿಗಿಲ್ಲಿ ಹುಷಾರಿಲ್ಲದಿದ್ದಾಗ ನಾವು ಅಡುಗೆ ಮನೆಯಲ್ಲಿ.... ಛೇ.... 

ಜ್ವರ ಕಡಿಮೆಯಾಗಿತ್ತು. ಕಾಲು ಘಂಟೆಯಲ್ಲಿ ಎದ್ದವಳು ಮತ್ತೊಂದು ಸಲ ವಾಂತಿ ಮಾಡಿಕೊಂಡಳು, ಜೊತೆಗೊಂದು ಸಲ ಭೇದಿ. 'ಮಗಳಿಗೆ ಉಪ್ಪಿಟ್ಟು ಬೇಡ, ಒಂದಷ್ಟು ಗಂಜಿ ಮಾಡ್ತೀನಿ. ನೀವ್ ತಿಂಡಿ ತಿಂದಾದ ಮೇಲೆ ಒಂದಷ್ಟು ಹಣ್ಣು ತೆಗೆದುಕೊಂಡು ಬನ್ನಿ. ಜೊತೆಗೆ ನಾಲಕ್ ಐದು ಓ.ಆರ್.ಎಸ್ ಟೆಟ್ರಾಪ್ಯಾಕ್ ತನ್ನಿ. ಅವಳಿಗೆ ಆರೆಂಜ್ ಫ್ಲೇವರ್ ಇಷ್ಟ. ಸಿಕ್ರೆ ಅದನ್ನೇ ತನ್ನಿ' 

"ಒಂದೊಂದ್ಸಲ ಆಗಿರೋದಲ್ವ. ನೋಡೋಣ ಬಿಡು ಮಧ್ಯಾಹ್ನದವರೆಗೆ" ರಾಗ ಎಳೆದರು. 

'ಇಲ್ಲ. ತಿಂಡಿ ಊಟ ಹೆಚ್ಚು ಕಡಿಮೆ ಆದಂಗಿದೆ. ಸುಸ್ತಾಗದಂಗೆ ನೋಡ್ಕೋಬೇಕಲ್ಲ' ಎಂದ ಮೇಲೆ ಹೋಗಿ ತೆಗೆದುಕೊಂಡು ಬಂದರು. ಮನೆ ಒಳಗೆ ಬರುವಾಗ ಅವರ ಸ್ನೇಹಿತರ್ಯಾರದ್ದೋ ಫೋನು ಬಂತು. 

"ಇವತ್ ಪಾರ್ಟೀನಾ? ಏನಪ್ಪ ವಿಶೇಷ?"... "ಹೌದಾ ಸರಿ ಸರಿ. ಬರ್ದೇ ಇರ್ತೀನಾ... ಎಲ್ಲಿ" 

....... 

" ಓ. ಮಂಜನ ತೋಟದಲ್ಲಾ.... ಸರಿ ಸರಿ. ಎಷ್ಟೊತ್ತಿಗೆ ಹೊರಟ್ರಿ ಎಲ್ಲ...." 

........ 

"ಮಟ ಮಟ ಮಧ್ಯಾಹ್ನಾನೇ ಶುರು ಅನ್ರಪ್ಪ. ಸರಿ ಸರಿ.‌ ನಾನೂ ಇನ್ನೊಂದರ್ಧ ಘಂಟೆ ಹೊರಟು ಬರ್ತೀನಿ" 

ಔಷಧಿ ಹಣ್ಣಿನ ಕವರುಗಳನ್ನು ನನ್ನ ಕೈಗೆ ವರ್ಗಾಯಿಸುತ್ತ "ಅದೇ ನಮ್ ಆದಿ ಗೊತ್ತಲ್ಲ ನಿನಗೆ. ಅವನೇನೋ ಊಟ ಇಟ್ಕಂಡಿದ್ದಾನಂತೆ ಅವನ ಫ್ರೆಂಡು ಮಂಜನ ತೋಟದಲ್ಲಿ. ನಾ ಹೋಗಿ ಬರ್ತೀನಿ ಸ್ನಾನ ಮಾಡ್ಕಂಡು" 

'ಇಲ್ಲಿ ಮಗಳಿಗೆ ಹುಷಾರಿಲ್ಲ... ಅಂತದ್ರಲ್ಲಿ ನೀವು...' 

"ಹುಷಾರಾಗೇ ಇದ್ದಾಳಲ್ಲ. ಏನ್ ಯಾರಿಗೂ ಆಗದೇ ಇರೋದಾ... ಸರಿ ಹೋಗ್ತಳೆ ಬಿಡು. ನೀನೇ ಇದ್ದೀಯಲ್ಲ ಮಕ್ಕಳ ಡಾಕ್ಟ್ರು ನೋಡ್ಕೊಳ್ಳೋಕೆ" 

'ಅಂದ್ರೂ...' 

"ರಾಗ ಎಳೀಬೇಡ ಈಗ. ಮೂರ್ ದಿನ ನಿನ್ ಫ್ರೆಂಡ್ ಮದ್ವೆ ನೆಪದಲ್ಲಿ ನಿನಗೋಸ್ಕರ ಸುತ್ತಾಡಿಲ್ವ... ಈಗ ನನ್ನ ಫ್ರೆಂಡ್ ಕರೆದ್ರೆ ಹೋಗ್ಬಾರ್ದ?" 

'ಯಾವತ್ತಾದ್ರೂ ಹಂಗ್ ಹೇಳಿದ್ದೀನಾ? ಏನೋ ಇವಳಿಗೆ ಹುಷಾರಿಲ್ಲ ಅಂತ.... ಜೊತೆಗೆ ಅಪ್ಪ ಅಮ್ಮ‌ ಕೂಡ ಊರಲಿಲ್ಲ' 

"ಈಗೇನ್ ಆಸ್ಪತ್ರೆಗೆ ಸೇರಿಸುವಷ್ಟು ಹುಷಾರು ತಪ್ಪಿದ್ದಾಳ? ಇಲ್ಲವಲ್ಲ. ಮಂಜನ ತೋಟ ಗದ್ದಿಗೆ ರೋಡಲ್ಲಿ ಇಪ್ಪತ್ತು ಕಿಲೋಮೀಟ್ರು ಅಷ್ಟೇ. ಸಂಜೆಯಷ್ಟೊತ್ತಿಗೆ ವಾಪಸ್ ಬರ್ತೀನಲ್ಲ?" 

'ನೀವ್ ಕುಡಿಯೋಕ್ ಕೂತ್ರೆ ಅಷ್ಟು ಬೇಗ ಬರೋರಲ್ಲ ಅಲ್ವ' 

"ಹೇ. ಡ್ರಿಂಕ್ಸ್ ಇದ್ದಂಗಿಲ್ಲ. ಊಟ ಅಷ್ಟೇ ಅನ್ಸುತ್ತೆ" ಅವರೇಳಿದ್ದು ಸುಳ್ಳು ಅಂತ ಗೊತ್ತಾಯಿತು, ನನಗೆ ಗೊತ್ತಾಗಿದ್ದು ಅವರಿಗೂ ತಿಳಿಯಿತು. ಮಾತು ಮುಂದುವರೆಸಲೋಗಲಿಲ್ಲ. ಸ್ನಾನ ಮಾಡಿಕೊಂಡು 'ನಿನಗೆ ಊಟಕ್ಕೆ?' ಅಂತ ಒಂದು ಮಾತೂ ಕೇಳದೆ ಹೊರಟುಹೋದರು. 

ಮ್.‌ ಸುತ್ತಾಡ್ಕೋತಾ ಹೊಸ ಜಾಗಗಳಿಗೆ ಹೋಗಿ ಮನಸ್ಸು ರಿಫ್ರೆಶ್‌ ಮಾಡ್ಕೋತೀವಿ, ಪ್ರೀತಿ ರೀಜುವನೇಟ್‌ ಮಾಡ್ಕೋತೀವಿ ಅನ್ನೋದೆಲ್ಲ ಬೊಗಳೆ. ಇರೋ ಜಾಗದಲ್ಲೇ ಮನಸ್ಸು ಸರಿ ಹೋಗಬೇಕು, ಪ್ರೀತಿ ಮೂಡಬೇಕು. 

ಸಂಜೆವರೆಗೂ ರಾಧ ಚೆನ್ನಾಗಿಯೇ ಇದ್ದಳು. ಜ್ವರ ಕೂಡ ಕಡಿಮೆಯಾಗಿತ್ತು. ಒಂದು ಸಲ ವಾಂತಿ ಮಾಡಿಕೊಂಡಳಷ್ಟೇ. ಮಧ್ಯಾಹ್ನ ಒಂದಷ್ಟು ಬೇಳೆ ಬೇಯಿಸಿ ಅನ್ನದ ಜೊತೆಗೆ ಹಿಸುಕಿ ಕಲಸಿ ತಿನ್ನಿಸಿದಾಗ ಬೇಡವೆನ್ನಲಿಲ್ಲ. ಒಂದು ಪ್ಯಾಕ್‌ ಓ.ಆರ್.‌ಎಸ್‌ ಕುಡಿದಳು. ಸ್ವಲ್ಪ ಗೆಲುವಾದಂತೆ ಕಂಡಳು. ಸ್ವಲ್ಪ ಸಮಯ ಮಾತ್ರ. ಸಂಜೆ ಐದರಷ್ಟೊತ್ತಿಗೆ ಮತ್ತೆ ವಾಂತಿ ಶುರುವಾಯಿತು. ಸತತ ನಾಲಕ್ಕು ಸಲ ವಾಂತಿ ಮಾಡಿಕೊಂಡಳು. ಮಧ್ಯಾಹ್ನ ತಿಂದಿದ್ದ ಅನ್ನ ಬೇಳೆ ಓ.ಆರ್.ಎಸ್‌ ಜೊತೆಗೆ ಕಲಸಿಕೊಂಡು ವಾಂತಿಯಾಯಿತು. ಅದಾದ ನಂತರ ಮೂರು ಸಲ ಭೇದಿ. ಪೂರಾ ನೀರು ನೀರು ಭೇದಿ. ಎಷ್ಟು ಸಲ ಭೇದಿಯಾದರೂ ವಾಂತಿಯಾದರೂ, ಪುನಃ ಪುನಃ ವಾಂತಿಯಾದರೂ ಮಕ್ಕಳಿಗೆ ಓ.ಆರ್.ಎಸ್‌ ಕುಡಿಸುವುದನ್ನು ನಿಲ್ಲಿಸಬೇಡಿ ಅಂತ ಆಸ್ಪತ್ರೆಯಲ್ಲಿ ವಾಂತಿ ಭೇದಿಯಾಗುವ ಮಕ್ಕಳ ತಂದೆ ತಾಯಿಗಳಿಗೆ ಪದೇ ಪದೇ ಹೇಳುತ್ತಲೇ ಇರ್ತೀವಿ. ಇಲ್ಲಿ ರಾಧಳಿಗೆ ಕುಡಿಸುವಾಗ ಆ ಸಲಹೆಯನ್ನು ಪಾಲಿಸುವ ಕಷ್ಟದ ಅರಿವಾಗಿದ್ದು. ಬಾಯಿಂದಲೇ ಉಗುಳಿ ಬಿಡುತ್ತಿದ್ದಳು. ಚೂರು ಸಮಾಧಾನವಾದ ಮೇಲೆ ಕುಡಿಯುತ್ತಾಳೆಂದು ಕಾದೆ. ಕುಡಿಯಲಿಲ್ಲ. ವಾಂತಿ ನಿಂತಂತೆ ತೋರಿತು. ಹೊಟ್ಟೆಯಲ್ಲೇನೂ ಇರದ ಮೇಲೆ ವಾಂತಿಯಾಗುವುದಾದರೂ ಹೇಗೆ? ಶುರುವಾದ ಭೇದಿ ನಿಲ್ಲಲಿಲ್ಲ. ಇಷ್ಟಿಷ್ಟೇ ಇಷ್ಟಿಷ್ಟೇ ನೀರಿನಂಶ ಸತತವಾಗಿ ಭೇದಿಯಲ್ಲಿ ಹೋಗುತ್ತಲೇ ಇತ್ತು. ಆರೂವರೆಯಾಗುವಷ್ಟರಲ್ಲಿ ಹದಿನೈದಿಪ್ಪತ್ತು ಸಲ ಭೇದಿಯಾಗಿತ್ತು. ರಾಧಳ ನಾಲಿಗೆ ತುಟಿಗಳು ಒಣಗಿ ಹೋಗಿತ್ತು, ಚರ್ಮದಲ್ಲಿನ ನೀರಿನಂಶ ಕಡಿಮೆಯಾಗಿದ್ದರಿವಿಗೆ ಬರುತ್ತಿತ್ತು. ಊಹ್ಞೂ... ಇದು ಮನೆಯಲ್ಲಿ ಓಆರೆಸ್‌ ನೀಡಿದರೆ ಸರಿಹೋಗುವ ವಾಂತಿ ಭೇದಿಯಲ್ಲ, ಆಸ್ಪತ್ರೆಗೆ ಕರೆದುಕೊಂಡು ಹೋಗಲೇಬೇಕು. ನಮ್ಮಾಸ್ಪತ್ರೆ ಹೆಚ್ಚಿನ ವೆಚ್ಚದ್ದು, ಈಗ ನಾ ಪಿಜಿ ಸ್ಟೂಡೆಂಟ್‌ ಬೇರೆ, ಡಿಸ್ಕೌಂಟ್‌ ಕೊಡ್ತಾರೋ ಇಲ್ವೋ ಗೊತ್ತಿಲ್ಲ. ಕೊನೇ ಪಕ್ಷ ಬಿಲ್‌ ನಿಧಾನಕ್ಕೆ ಕಟ್ಟಲಂತೂ ಅನುಕೂಲ ಮಾಡಿಕೊಡುತ್ತಾರೆ. ಬೇರೆ ಕಡೆಗೆ ಹೋಗಿ ಒದ್ದಾಡುವುದಕ್ಕಿಂತ ನಮ್ಮಾಸ್ಪತ್ರೆಗೆ ಹೋಗುವುದೇ ಸರಿ ಎಂದುಕೊಂಡು ರಾಜೀವನಿಗೆ ಫೋನ್‌ ಮಾಡಿದೆ. ಸಂಜೆಯಷ್ಟೊತ್ತಿಗೆ ಬಂದು ಬಿಡುತ್ತೇನೆ ಎಂದವರು ಫೋನೇ ಎತ್ತಲಿಲ್ಲ. ಎರಡು ಮೂರು ಸಲ ಮಾಡಿದೆ. ಊಹ್ಞೂ...ಪ್ರಯೋಜನವಾಗಲಿಲ್ಲ. ಇನ್ನವರಿಗೆ ಕಾಯುವುದು ಉಪಯೋಗವಿಲ್ಲ. ಕಾರು ಬೇರೆ ತೆಗೆದುಕೊಂಡು ಹೋಗಿದ್ದಾರೆ. ಸ್ಕೂಟರಿನಲ್ಲಿ ಮುಂದೆ ನಿಲ್ಲುವಷ್ಟು ತ್ರಾಣ ರಾಧಾಳಲ್ಲಿಲ್ಲ. ಮಗಳ ಒಂದೆರಡು ಜೊತೆ ಬಟ್ಟೆಯನ್ನು ಬ್ಯಾಗಿಗಾಕಿಕೊಂಡು ಮಗಳನ್ನೆತ್ತಿಕೊಂಡು ಮನೆಯಿಂದ ಹೊರಟು ಮುಖ್ಯ ರಸ್ತೆ ತಲುಪಿ ಆಟೋದಲ್ಲಿ ಕುಳಿತಾಗ ರಾಜೀವನ ಫೋನ್‌ ಬಂತು. 

"ಸಾರಿ ಕಣೋ. ಈಗ ನೋಡಿದೆ ನಿನ್ನ ಫೋನು. ಏನ್‌ ಡಾರ್ಲಿಂಗ್‌ ಫೋನ್‌ ಮಾಡಿದ್ದು" ಡ್ರಿಂಕ್ಸ್‌ ಇಲ್ಲ ಅಂತ ಬೇರೆ ಸುಳ್ಳಾಡಿದ್ದರು! 

ʼಮಗಳಿಗೆ ತುಂಬಾ ಹುಷಾರಿಲ್ಲ. ಆಸ್ಪತ್ರೆಗೆ ಕರೆದುಕೊಂಡು ಹೋಗ್ತಿದ್ದೆ. ಬೇಗ ಬನ್ನಿ ನೀವುʼ 

"ಅಯ್ಯೋ. ಒಂದು ವಾಂತಿ ಭೇದಿಗೆಲ್ಲ ಇಷ್ಟು ಗಾಬರಿಯಾಗ್ತಾರ. ನೀನೇ ಡಾಕ್ಟ್ರು ಬೇರೆ. ಮನೇಲೆ ನೋಡ್ಕೋಳ್ಳೋಕೆ ಆಗಲ್ಲವಾ? ಸುಮ್ನೆ ಖರ್ಚು ಆಸ್ಪತ್ರೆಗೆ ಹೋದರೆ" 

ʼಖರ್ಚಿನ ಮುಖ ನೋಡೋಕಾಗ್ತದಾ ಈಗ?! ಒಂದು ವಾಂತಿ ಭೇದಿಗೆಲ್ಲ ಗಾಬರಿಯಾಗ್ತಿದ್ನಾ! ಇಪ್ಪತ್ತು ಮೂವತ್ತು ಸಲ ಆಗಿದೆ ಆಗಲೇ. ಮಗಳು ಹೊಟ್ಟೆಗೆ ಏನೂ ತೆಗೆದುಕೊಳ್ತಿಲ್ಲ. ಬನ್ನಿ ಬೇಗ ನೀವುʼ 

“ಹು. ಸರಿ ಸರಿ. ಒಂದ್‌ ದಿನ ನೆಮ್ಮದಿಯಾಗಿ ಇರೋದು ನನ್ನ ಹಣೇಲಿ ಬರೆದಿಲ್ಲ. ಯಾವ್‌ ಆಸ್ಪತ್ರೆಗೆ ಹೋಗ್ತಿದ್ದಿ" 

ʼನಮ್ಮಾಸ್ಪತ್ರೆಗೇನೆʼ 

"ಅದ್ಯಾಕೆ ಅಲ್ಲಿಗೆ? ಅಲ್ಲಿ ತುಂಬಾ ಕಾಸ್ಟ್ಲಿ ಅಲ್ವ. ಅಷ್ಟೆಲ್ಲ ಕಟ್ಟೋಕೆ ಎಲ್ಲಿ ಆಗ್ತದೆ ಈಗ" 

ʼಕಾಸ್ಟ್ಲೀನೇ. ಆದರೆ ಗೊತ್ತಿರೋರ್‌ ಇರ್ತಾರಲ್ವ. ನಂಗೂ ಅನುಕೂಲ. ದುಡ್ಡು ಒಂದೆರಡು ದಿನ ನಿಧಾನಕ್ಕೆ ಕಟ್ಟಿದ್ರೂ ನಡೀತದೆʼ 

"ನಿಧಾನಕ್‌ ಆದ್ರೂ ಕಟ್ಟಲೇಬೇಕು ತಾನೇ" 

ʼಹುʼ 

"ಒಂದ್‌ ಕೆಲಸ ಮಾಡು. ಅಲ್ಲೇ ನಮ್ಮ ಮನೆ ಹತ್ರ ಪ್ರಶಾಂತ್‌ ನರ್ಸಿಂಗ್‌ ಹೋಂ ಇದ್ಯಲ್ಲ, ಅದೇ ಡಾ. ಪ್ರಶಾಂತ್‌ ಅವರ್ದು. ಅಲ್ಲಿಗೇ ಹೋಗು. ಅಲ್ಲಿ ಮೆಡಿಕಲ್‌ ಸ್ಟೋರ್‌ ಇಟ್ಟಿರೋರು ನನಗೆ ಗೊತ್ತಿರೋರೆ. ಒಂದ್‌ ಮಾತು ನಾನೂ ಹೇಳಿರ್ತೀನಿ. ಹೋಗಿರು ಬರ್ತೀನಿ" 

ʼಆದರೂ...ʼ 

"ಹೇ. ನಿಮ್ಮಾಸ್ಪತ್ರೆಗಿಂತ ಚೀಪು.... ಜೊತೆಗೆ ನಿಮ್ಮಾಸ್ಪತ್ರೆಯಲ್ಲಿರೋ ಎಲ್ಲಾ ಮಕ್ಳು ಡಾಕ್ಟ್ರುಗಳಿಗಿಂತಲೂ ಫೇಮಸ್ಸು ಈ ಯಪ್ಪ" 

ʼಅದೇನೋ ಗೊತ್ತಿರೋದೆ. ಆದರೂ....ʼ 

"ಮತ್ತಿನ್ನೇನು ಗೊಣಗಾಟ ನಿಂದು" 

ಆಟೋದವನಿಗೆ ಕೇಳಿಸದಂತೆ ʼನನ್ನ ಕಾರ್ಡ್‌ ನಿಮ್ಮ ಬಳಿ ಇದೆ. ನನ್ನತ್ರ ತುಂಬಾ ಕ್ಯಾಶೂ ಇಲ್ಲ. ನಮ್ಮಾಸ್ಪತ್ರೆಯಲ್ಲಾದರೆ ನಡೀತದೆ ನಾಳೆ ಕಟ್ತೀನಿ, ಆಮೇಲೆ ಕಟ್ತೀನಿ ಅಂದ್ರೆ. ಔಷಧಿ ಕೂಡ ಅವರೇ ಹಾಕಿರ್ತಾರೆ. ಇಲ್ಲಿ ಎಲ್ಲಾದಕ್ಕು ದುಡ್ಡು ಕಟ್ಟಬೇಕಲ್ಲ? ನೀವ್‌ ಎಷ್ಟೊತ್ತಿಗೆ ಬರ್ತೀರೋ ಏನೋʼ 

"ಹೇಳಿದ್ನಲ್ಲ ನನ್ನ ಫ್ರೆಂಡ್‌ ಇದ್ದಾರೆ ಅಂತ. ಅವರು ನೋಡ್ಕೋತಾರೆ. ಮುಚ್ಕಂಡ್‌ ಹೋಗು ಅಲ್ಲಿಗೆ. ಒಂದ್‌ ದಿನ ನೆಮ್ಮದಿಯಾಗ್‌ ಇರೋ ಹಂಗಿಲ್ಲ" ಅಂತೇಳುತ್ತಲೇ ಫೋನ್‌ ಕಟ್‌ ಮಾಡಿಬಿಟ್ಟರು. ಆಟೋದವನಿಗೆ ನನ್ನ ಕಣ್ಣಂಚಿನಲ್ಲಿದ್ದ ನೀರು ಕಾಣಿಸಿತು. ಗಾಡಿ ನಿಧಾನಿಸಿದ, ಎಲ್ಲಿಗೆ ತಿರುಗಿಸಲಿ ಗಾಡಿ ಎಂಬಂತೆ. 

ʼಇಲ್ಲೇ ಪ್ರಶಾಂತ್‌ ನರ್ಸಿಂಗ್‌ ಹೋಂ ಗೊತ್ತೇನಪ್ಪ. ಅಲ್ಲಿಗೋಗಿʼ 

"ಸರಿ ಮೇಡಂ" ಎಂದವನೇ ಭರ್ರನೆ ನರ್ಸಿಂಗ್‌ ಹೋಮಿನ ಕಡೆಗೆ ಆಟೋ ಚಲಾಯಿಸಿದ.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment