Mar 25, 2020

ದಿ ಕ್ಯೂರಿಯಸ್‌ ಕೇಸ್‌ 1: ಟ್ಯಾಕ್ಸೋಪ್ಲಾಸ್ಮ ಮತ್ತು ಇಲಿ.

ಡಾ. ಅಶೋಕ್.‌ ಕೆ. ಆರ್ 
ಸದ್ಯಕ್ಕೆ ಎಲ್ಲಿ ನೋಡಿದರೂ ಕೊರೋನಾದೇ ಸುದ್ದಿ. ಹಂಗಾಗಿ ಕೊರೋನಾ ಮೂಲಕವೇ ಈ ಕೇಸನ್ನು ಪ್ರಾರಂಭಿಸೋಣ. ಈ ಕೊರೋನಾ ಎಂಬ ವೈರಸ್ಸು ನಮ್ಮ ದೇಹ ಪ್ರವೇಶಿಸಿದಾಗ ಏನಾಗ್ತದೆ? ಕೊರೋನಾ ಇನ್‌ಫೆಕ್ಷನ್ನಿನಿಂದ ಸದ್ಯಕ್ಕೆ ಮನುಷ್ಯರಲ್ಲಿ ಸಾಮಾನ್ಯವಾಗಿ ಕಂಡುಬರುವ ರೋಗಲಕ್ಷಣಗಳೆಂದರೆ ಜ್ವರ, ನೆಗಡಿ, ಕೆಮ್ಮು, ಭೇದಿ. ನಮ್ಮ ಸದ್ಯದ ತಿಳುವಳಿಕೆಯ ಪ್ರಕಾರ ಈ ರೀತಿಯ ರೋಗಲಕ್ಷಣಗಳಿಗೆ ಕಾರಣ ವೈರಸ್ಸಿಗೆ ಪ್ರತಿರೋಧ ತೋರುವ ನಮ್ಮ ದೇಹದ ರಕ್ಷಣಾ ವ್ಯವಸ್ಥೆ, ಅಂದರೆ ಇಮ್ಯುನಿಟಿ ಸಿಸ್ಟಮ್ಮು. ವೈರಸ್ಸನ್ನು ದೇಹದಿಂದ ಹೊರಗೋಡಿಸುವ ನಿಟ್ಟಿನಲ್ಲಿ ದೇಹ ತನ್ನೆಲ್ಲಾ ಪ್ರಯತ್ನವನ್ನೂ ಈ ಇಮ್ಯುನಿಟಿ ವ್ಯವಸ್ಥೆಯ ಮೂಲಕ ಮಾಡಲೆತ್ನಿಸುತ್ತದೆ. ಈ ಪ್ರತಿರೋಧ ಕಡಿಮೆ ಇದ್ದರೆ ‍ಶ್ವಾಸಕೋಶದೊಳಗೆ ನುಗ್ಗುವ ವೈರಸ್ಸುಗಳು ನಿಧಾನಕ್ಕೆ ಮನುಷ್ಯನನ್ನು ಸಾವಿನಂಚಿಗೆ ದೂಡುತ್ತದೆ. 

ಇದಿಷ್ಟೂ ಮನುಷ್ಯನ ದೃಷ್ಟಿಯಿಂದ ವೈರಸ್ಸಿನ ದಾಳಿಯನ್ನು ಕಂಡಾಗ ಅರ್ಥವಾಗುವ ಸಂಗತಿಗಳು. ಅದೇ ಕಣ್ಣಿಲ್ಲದ ವೈರಸ್ಸಿನ ದೃಷ್ಟಿಯಿಂದ ನೋಡಿದರೆ? ವೈರಸ್ಸಿಗೆ ನಮ್ಮಗಳ ಹಾಗೆ ಮನೆ ಕಟ್ಟು, ಬೈಕ್‌ ತಗೋ, ಕಾರ್‌ ತಗೋ, ಮೊಬೈಲ್‌ ತಗೋ, ಇಪ್ಪತ್ತೈದು ದಾಟಿದ ಮೇಲೆ ಮದುವೆಯಾಗು, ಮನಸ್ಸಾದರೆ ಒಂದೋ ಎರಡೋ ಮಕ್ಕಳು ಮಾಡಿಕೋ, ಸೆಟಲ್‌ ಆಗು ಅನ್ನೋ ಯೋಚನೆಗಳೆಲ್ಲ ಇರೋದಿಲ್ಲ. ಪ್ರಕೃತಿಯ ಲೆಕ್ಕದಲ್ಲಿ ವೈರಸ್ಸಿಗಿರುವ ಒಂದೇ ಒಂದು ಗುರಿ ಸಾಧ್ಯವಾದಷ್ಟು ತನ್ನ ಬಳಗವನ್ನು ಹೆಚ್ಚಿಸಿಕೊಳ್ಳುತ್ತ ಪರಿಸರದಲ್ಲಿ ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದು ಮಾತ್ರ! ಮನುಷ್ಯನ ದೇಹದೊಳಗೆ ಪ್ರವೇಶಿಸುತ್ತಿದ್ದಂತೆ ವೈರಸ್ಸು ತನ್ನ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತದೆ. ಒಬ್ಬ ಮನುಷ್ಯನಲ್ಲಿ ತನ್ನ ಸಂಖೈಯನ್ನು ಹೆಚ್ಚಿಸಿಕೊಂಡರೆ ಸಾಕಾಗುವುದಿಲ್ಲವಲ್ಲ? ಮತ್ತಷ್ಟು ಅಭಿವೃದ್ಧಿಯಾಗಲು ಆ ಮನುಷ್ಯನಿಂದ ಬಿಡುಗಡೆಯಾಗಿ ಮತ್ತೊಬ್ಬ ಮನುಷ್ಯನನ್ನು ಅಪ್ಪಿಕೊಳ್ಳುವ ಅನಿವಾರ್ಯತೆ ವೈರಸ್ಸಿಗೆ. ಆಗ ವೈರಸ್ಸು ಮನುಷ್ಯನ ದೇಹದ ರಕ್ಷಣಾ ವ್ಯವಸ್ಥೆಯನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ʻನೋಡಪ್ಪಾ ಇಮ್ಯುನಿಟಿ. ಈಗ ನೀನೇನು ಮಾಡಬೇಕಂದ್ರೆ ವಿಪರೀತ ಯಾಕ್ಟೀವ್‌ ಆಗು. ಆಗ್ಬಿಟ್ಟು ನಿನ್ನ ಹಳೆ ಯಜಮಾನ ಮನುಷ್ಯ ಕೆಮ್ಮುವಂತೆ ಮಾಡು, ಸಿಂಬಳ ಸುರಿಯುವಷ್ಟು ನೆಗಡಿ ಬರಿಸು, ಸೀನುವಂಗೆ ಮಾಡು, ವಾಂತಿ ಭೇದಿಯಾಗುವಂತೆ ನೋಡಿಕೊ. ನಾ ಆರಾಮ್ವಾಗಿ ನನ್ನ ಸಂಖೈ ಹೆಚ್ಚಿಸಿಕೊಳ್ತೀನಿʼ ಅಂತ ತಾಕೀತು ಮಾಡುತ್ತದೆ. ವೈರಸ್ಸಿಗೆ ಸಂಪೂರ್ಣ ಶರಣಾಗತವಾದ ನಮ್ಮ ದೇಹದ ಇಮ್ಯುನಿಟಿ ವ್ಯವಸ್ಥೆ ವೈರಸ್ಸಿನ ಆಜ್ಞೆಗೆ ತಲೆಬಾಗುತ್ತಾ ಅದೇಳಿದ್ದನ್ನೆಲ್ಲವನ್ನೂ ಚಾಚೂ ತಪ್ಪದೆ ಪಾಲಿಸುತ್ತದೆ. ವೈರಸ್ಸಿಗೂ ಪಾಪ ಮನುಷ್ಯನನ್ನು ಸಾಯಿಸುವ ಉದ್ದೇಶವಿರುವುದಿಲ್ಲ. ಸತ್ತ ಮನುಷ್ಯನಿಗಿಂತ ನಿರಂತರವಾಗಿ ಕೆಮ್ಮುತ್ತಾ ಸೀನುತ್ತಾ ಸಿಂಬಳ ಸುರಿಸುತ್ತಿರುವ ಮನುಷ್ಯನೇ ವೈರಸ್ಸಿಗೆ ಹೆಚ್ಚು ಪ್ರಿಯ. ವೈರಸ್ಸಿನ ದೃಷ್ಟಿಯಲ್ಲಿ ಮನುಷ್ಯನ ಸಾವಿಲ್ಲಿ ಕೊಲ್ಯಾಟರಲ್‌ ಡ್ಯಾಮೇಜ್‌ ಅಷ್ಟೇ! 

ಇವನ್ಯಾವನ್‌ ಗುರು ಈ ಸಂಕಷ್ಟದ ಕಾಲದಲ್ಲಿ ಯಾವುದೋ ಕಾಗಕ್ಕ ಗೂಬಕ್ಕನ ಕತೆ ಹೇಳ್ತಾ ಕುಂತವ್ನೆ. ಯಕಶ್ಚಿತ್‌ ಒಂದ್‌ ವೈರಸ್ಸು ನಮ್ಮನ್ನೆಂಗೆ ನಿಯಂತ್ರಿಸೋದಿಕ್ಕೆ ಸಾಧ್ಯ ಅಂತ ನಗ್ತಿದ್ದೀರೇನೋ?! ಹಂಗಾದ್ರೆ ನೀವು ಈ ಟ್ಯಾಕ್ಸೋಪ್ಲಾಸ್ಮದ ಪ್ರಯೋಗದ ಕುರಿತು ಓದಲೇಬೇಕು! 

ಟ್ಯಾಕ್ಸೋಪ್ಲಾಸ್ಮ ಒಂದು ಪ್ಯಾರಾಸೈಟು, ಪರಾವಲಂಬಿ ಜೀವಿ. ಕಲುಷಿತ ನೀರು, ತರಕಾರಿ, ಸರಿಯಾಗಿ ಬೇಯಿಸದ ಮಾಂಸ, ಕುದಿಸದ ಹಾಲಿನ ಮೂಲಕ ಮನುಷ್ಯನ ದೇಹ ಪ್ರವೇಶಿಸುವ ಟ್ಯಾಕ್ಸೋಪ್ಲಾಸ್ಮ ಒಂದು ಹಂತದ ಬೆಳವಣಿಗೆಯನ್ನು ಹೊಂದಿ ಮಾಂಸಖಂಡ, ಮೆದುಳು, ಹೃದಯ, ಕಣ್ಣಿನಲ್ಲಿ ಸೇರಿಕೊಂಡು ವರ್ಷಗಳ ಕಾಲ ಉಳಿದುಬಿಡುತ್ತದೆ. ಬಹುತೇಕರಲ್ಲಿ ಯಾವುದೇ ರೋಗಲಕ್ಷಣಗಳನ್ನುಂಟು ಮಾಡುವುದಿಲ್ಲ. 

ಈ ಟ್ಯಾಕ್ಸೋಪ್ಲಾಸ್ಮ ಮನುಷ್ಯರನ್ನಷ್ಟೇ ಅಲ್ಲದೆ ಇಲಿ, ಹಸು, ಕುರಿ, ಪಕ್ಷಿಗಳನ್ನೂ ಭಾದಿಸುತ್ತದೆ. ಟ್ಯಾಕ್ಸೋಪ್ಲಾಸ್ಮ ಪೀಡಿತ ಇಲಿಗಳಲ್ಲಿನ ವರ್ತನೆಯಲ್ಲಿ ಒಂದಷ್ಟು ವ್ಯತ್ಯಾಸಗಳನ್ನು ಗಮನಿಸಿದ ವಿಜ್ಞಾನಿಗಳು ಪ್ರಯೋಗವೊಂದನ್ನು ನಡೆಸಲು ನಿರ್ಧರಿಸುತ್ತಾರೆ. 

ಮೊದಲ ಹಂತದಲ್ಲಿ ಒಂದಷ್ಟು ಇಲಿಗಳಿಗೆ ಕೃತಕವಾಗಿ ಟ್ಯಾಕ್ಸೋಪ್ಲಾಸ್ಮ ಇನ್‌ಫೆಕ್ಷನ್‌ ಆಗುವಂತೆ ಮಾಡುತ್ತಾರೆ. ಇಲಿಗಳಲ್ಲಿ ಆ ಟ್ಯಾಕ್ಸೋಪ್ಲಾಸ್ಮ ಒಂದು ಹಂತದ ಬೆಳವಣಿಗೆ ಕಂಡು ಇಲಿಯ ಮೆದುಳನ್ನೂ ಸೇರಿಸಿ ಬೇರೆ ಬೇರೆ ಭಾಗಗಳಲ್ಲಿ ಸೇರಿಕೊಂಡದ್ದನ್ನು ಖಚಿತಪಡಿಸಿಕೊಂಡ ನಂತರ ಪ್ರಯೋಗದ ಎರಡನೇ ಹಂತಕ್ಕೆ ಮುನ್ನಡೆಯುತ್ತಾರೆ. 

ಎರಡನೇ ಹಂತದ ಪ್ರಯೋಗದಲ್ಲಿ ಒಂದಷ್ಟು ಟ್ಯಾಕ್ಸೋಪ್ಲಾಸ್ಮ ಪೀಡಿತ ಇಲಿಗಳನ್ನು ಮತ್ತೊಂದಷ್ಟು ರೋಗರಹಿತ ಇಲಿಗಳನ್ನು ಜೊತೆಯಾಗಿ ಗುಡ್ಡೆ ಹಾಕಿಕೊಳ್ಳುತ್ತಾರೆ. ಒಂದಷ್ಟು ಬೋನುಗಳಲ್ಲಿ ನೀರು, ಒಂದಷ್ಟರಲ್ಲಿ ಬೆಕ್ಕಿನ ಮೂತ್ರವನ್ನಿಡುತ್ತಾರೆ. ಇಲಿಗೆ ಬೆಕ್ಕೆಂದರೆ ಭಯವಲ್ಲವೇ, ಬೆಕ್ಕಿನ ಮೂತ್ರದ ವಾಸನೆಯಿಂದಲೇ ಭಯಬಿದ್ದ ರೋಗರಹಿತ ಇಲಿಗಳು ಆ ಕಡೆಗೆ ಸುಳಿಯಲೂ ಇಲ್ಲ. ನೀರಷ್ಟೇ ಇರುವ ಬೋನುಗಳ ಕಡೆಗಷ್ಟೇ ಅವುಗಳು ಹೋದವು. ಮೆದುಳಿನಲ್ಲಿ ಟ್ಯಾಕ್ಸೋಪ್ಲಾಸ್ಮ ಸಾಕಿಕೊಂಡಿರುವ ಇಲಿಗಳು ಸೀದಾ ಬೆಕ್ಕಿನ ಮೂತ್ರವಿರುವ ಕಡೆಗೇ ಹೋಗಿ ನಿಂತುಬಿಟ್ಟವು! ಬೆಕ್ಕಿನ ಮೂತ್ರ ಮೂಡಿಸಬೇಕಿದ್ದ ಭಯ ಆ ಟ್ಯಾಕ್ಸೋಪ್ಲಾಸ್ಮ ಪೀಡಿತ ಇಲಿಗಳಲ್ಲಿ ಪೂರ್ಣ ಮಾಯವಾಗಿತ್ತು! 

ಸ್ಕ್ಯಾನಿಂಗ್‌ ಮೂಲಕ ತಿಳಿದುಬಂದದ್ದೆಂದರೆ ಟ್ಯಾಕ್ಸೋಪ್ಲಾಸ್ಮ ಮೆದುಳಿನ ಒಂದು ಭಾಗವಾದ ಅಮಿಗ್ಡಲಾವನ್ನಾಕ್ರಮಿಸಿಕೊಂಡು ಬಹುಶಃ ತನ್ನದೇ ಪ್ರೋಟೀನುಗಳ ಮೂಲಕ ಇಲಿಯ ಮೆದುಳನ್ನು ನಿಯಂತ್ರಿಸುತ್ತಿತ್ತು! ಅಮಿಗ್ಡಲಾ ದೇಹಕ್ಕೆ ಭಯದ ಸಂಕೇತಗಳನ್ನು ರವಾನಿಸುತ್ತದೆ, ಜೊತೆಗೆ ಸಂಗಾತಿ ಹತ್ತಿರವಿರುವ ಸೂಚನೆ ಸಿಕ್ಕಾಗಲೂ ಸಂಗಾತಿಯ ಕಡೆಗೆ ಹೋಗುವಂತೆ ಮಾಡುತ್ತದೆ. ಬೆಕ್ಕಿನ ಮೂತ್ರದ ವಾಸನೆ ರೋಗಪೀಡಿತ ಇಲಿಗಳಲ್ಲಿ ಭಯದ ಸಂಕೇತಗಳನ್ನು ಮೂಡಿಸಲಿಲ್ಲ, ಬದಲಿಗೆ ಅದರಿಂದೇನೂ ಭಯವಿಲ್ಲ ಅತ್ಲಾಕಡೆಗೆ ಹೋಗು ಎಂದು ಮೆದುಳು ದೇಹಕ್ಕೆ ತಿಳಿಸಿತು. ಇದರ ಜೊತೆಗೆ ಸಂಗಾತಿ ಹತ್ತಿರವಿರುವಾಗ ಹೊಮ್ಮುವ ಸಂಕೇತಗಳನ್ನು ಹರಿಬಿಟ್ಟಿತು! ಆ ಕಾರಣಕ್ಕಾಗೇ ಈ ಇಲಿಗಳು ಬೆಕ್ಕಿನ ಮೂತ್ರದ ಬಳಿಯೇ ಹೋಗಿ ನಿಂತುಬಿಟ್ಟವು. ಬೆಕ್ಕಿನ ಮೂತ್ರದ ವಾಸನೆ, ಅಂದರೆ ಬೆಕ್ಕಿನ ಇರುವಿಕೆ ಇಲಿಗಳಲ್ಲಿ ಭಯ ಮೂಡಿಸಲಿಲ್ಲ. ಕಾರಣ, ಅಮಿಗ್ಡಲಾ ಇಲಿಯ ನಿಯಂತ್ರಣದಲ್ಲಿರಲಿಲ್ಲ, ಟ್ಯಾಕ್ಸೋಪ್ಲಾಸ್ಮ ಎಂಬ ಪ್ಯಾರಾಸೈಟಿನ ನಿಯಂತ್ರಣದಲ್ಲಿತ್ತು! 

ಈ ಪ್ರಯೋಗಕ್ಕೆ ಬೆಕ್ಕಿನ ಮೂತ್ರವನ್ನೇ ಉಪಯೋಗಿಸಿದ್ಯಾಕೆ? ಟ್ಯಾಕ್ಸೋಪ್ಲಾಸ್ಮ ಮನುಷ್ಯನನ್ನೂ ಸೇರಿಸಿ ಬಹಳಷ್ಟು ಪ್ರಾಣಿ ಪಕ್ಷಿಗಳಲ್ಲಿ ವಾಸಿಸಬಹುದಾದರೂ ಅದರ ಸಂತಾನೋತ್ಪತ್ತಿ ಸಾಧ್ಯವಾಗುವುದು ಬೆಕ್ಕಿನ ಜಠರದಲ್ಲಿ ಮಾತ್ರ. ಬೆಕ್ಕಿನ ಜಠರದಲ್ಲಿ ಸಂತಾನೋತ್ಪತ್ತಿಯಾಗಿ ಮರಿಗಳು ಬೆಕ್ಕಿನ ಕಕ್ಕಸಿನ ಮೂಲಕ ಹೊರಬಂದು ಉಳಿದ ಪ್ರಾಣಿಗಳ ದೇಹ ಸೇರಿಕೊಳ್ಳುತ್ತವೆ. 

ಲ್ಯಾಬಿನಲ್ಲಿ ನಡೆದ ಪ್ರಯೋಗ ನೈಜ ಪರಿಸರದಲ್ಲಿ ಯಾವ ರೀತಿಯ ಪರಿಣಾಮ ಬೀರಬಹುದು? ಬೆಕ್ಕಿನ ಇರುವಿಕೆಯ ಸೂಚನೆ ಸಿಕ್ಕುತ್ತಿದ್ದಂತೆಯೇ ಇಲಿ ಓಡಿಹೋಗುತ್ತವೆ. ಆದರೆ ಟ್ಯಾಕ್ಸೋಪ್ಲಾಸ್ಮ ಪೀಡಿತ ಇಲಿಗಳು ಕುಣ್ಕಂಡು ಕುಣ್ಕಂಡು ಬೆಕ್ಕಿನ ಸಮೀಪಕ್ಕೇ ಹೋಗಿಬಿಡುತ್ತವೆ! ಸುಲಭಕ್ಕೆ ಸಿಗುವ ಆಹಾರವನ್ನು ಬಿಟ್ಟವರುಂಟೆ! ಖುಷಿಖುಷಿಯಾಗಿ ಬೆಕ್ಕು ಇಲಿಯನ್ನು ತಿಂದು ತೇಗುತ್ತದೆ. ಇಲಿ ಮತ್ತು ಬೆಕ್ಕುಗಳನ್ನು ತನ್ನನುಕೂಲಕ್ಕೆ ಬಳಸಿಕೊಂಡ ಟ್ಯಾಕ್ಸೋಪ್ಲಾಸ್ಮ ವಿಜಯದ ನಗೆ ಬೀರಿ ಸಂತಾನೋತ್ಪತ್ತಿಗೆ ತೊಡಗುತ್ತದೆ! ಟ್ಯಾಕ್ಸೋಪ್ಲಾಸ್ಮ ಪೀಡಿತ ಮನುಷ್ಯರ ವರ್ತನೆಯಲ್ಲೂ ಇದೇ ರೀತಿಯ ಬದಲಾವಣೆಗಳು ಆಗುತ್ತವೆಯಾ? ಮನುಷ್ಯ ಬೆಕ್ಕಿನ ಸಹಜ ಆಹಾರವೇನಲ್ಲ, ಆದರೂ ವಿಪರೀತ ಅಪಘಾತಕ್ಕೊಳಗಾಗುವ ವ್ಯಕ್ತಿಗಳಲ್ಲಿ ಟ್ಯಾಕ್ಸೋಪ್ಲಾಸ್ಮ ಇನ್‌ಫೆಕ್ಷನ್‌ ಹೆಚ್ಚಿರುವ ಸಾಧ್ಯತೆ ಇದೆಯಾ ಎನ್ನುವ ಪ್ರಶ್ನೆಗಳಿವೆ ವಿಜ್ಞಾನಿಗಳಲ್ಲಿ. 

ಈಗ ಹೇಳಿ ಕಣ್ಣಿಗೆ ಕಾಣದ ಒಂದು ಯಕಶ್ಚಿತ್‌ ವೈರಸ್ಸು ನಮ್ಮ ದೇಹವನ್ನು ನಿಯಂತ್ರಿಸುತ್ತಿಲ್ಲ ಅನ್ನುತ್ತೀರಾ? 

ನಾವು ಪರಿಸರವನ್ನು ನಮ್ಮನುಕೂಲಕ್ಕೆ ಬಳಸಿಕೊಂಡಂತೆ ವೈರಸ್ಸು ನಮ್ಮನ್ನು ಅದರನುಕೂಲಕ್ಕೆ ಬಳಸಿಕೊಳ್ಳುತ್ತಿದೆಯಲ್ಲವೇ?!

ಟ್ಯಾಕ್ಸೋಪ್ಲಾಸ್ಮ ಮತ್ತು ಇಲಿಯ ಮೇಲಿನ ಹೆಚ್ಚಿನ ಪ್ರಯೋಗಗಳ ಕುರಿತಾದ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿ.

No comments:

Post a Comment