Dec 29, 2019

ಒಂದು ಬೊಗಸೆ ಪ್ರೀತಿ - 46

ಡಾ. ಅಶೋಕ್.‌ ಕೆ. ಆರ್.‌
“ಧರಣಿ….ಏ….ಧರಣಿ” ದೂರದಿಗಂತದಲ್ಲಿ ಕೇಳಿಸುತ್ತಿದ್ದ ಅಮ್ಮನ ದನಿ. ಅಮ್ಮ ನನ್ನಿಂದ ದೂರಾಗುತ್ತಿದ್ದರೋ ನಾ ಅಮ್ಮನಿಂದ ದೂರಾಗುತ್ತಿದ್ದೆನೋ ತಿಳಿಯದೆ ಎಲ್ಲವೂ ಗೊಂದಲಮಯ. ರಾಧ ಎಲ್ಲಿ ಕಾಣಿಸುತ್ತಲೇ ಇಲ್ಲವಲ್ಲ. 

“ಧರಣಿ……ಧರಣಿ” ಅಮ್ಮನ ದನಿ ಇನ್ನಷ್ಟು ಜೋರಾಯಿತು. ಇಲ್ಲ…….ನಾ ಅಮ್ಮನಿಂದ ಅಮ್ಮ ನನ್ನಿಂದ ದೂರಾಗುತ್ತಿಲ್ಲ ಹತ್ತಿರವಾಗುತ್ತಿದ್ದೇವೆಂಬುದರಿವಾಗಿ ಒಂದಷ್ಟು ಸಮಾಧಾನ. ಧರಣಿ ಧರಣಿ….. ಅಮ್ಮನ ಕೂಗು ಮಾತ್ರ ನಿಲ್ಲುತ್ತಲೇ ಇಲ್ಲ. ಇದ್ಯಾಕೆ ಅಮ್ಮ ಹೀಗೆ ಒಂದೇ ಸಮನೆ ಕೂಗುತ್ತಿದ್ದಾರೆ? ಅಪ್ಪನಿಗೇನಾದರೂ ಆಯಿತಾ? ಅಮ್ಮನಿಗೇ ಏನಾದರಾಯಿತಾ? ಅಥವಾ ರಾಧ…… ʼಅಯ್ಯೋ ರಾಧʼ ಎಂದು ಬೆಚ್ಚಿಬಿದ್ದವಳ ಬೆನ್ನ ಮೇಲೊಂದು ಬಲವಾದ ಹೊಡೆತ ಬಿತ್ತು. ʼಅಯ್ಯೋ ಅಮ್ಮʼ ಎಂದು ಕೂಗಿಕೊಳ್ಳುತ್ತಾ ಕಣ್ಣು ತೆರೆದು ಅಗಲಿಸಿ ನೋಡಿದರೆ ಕಂಡಿದ್ದು ನಮ್ಮ ಮನೆಯ ಡೈನಿಂಗ್‌ ಟೇಬಲ್ಲು. ಟೇಬಲ್ಲಿನ ಮೇಲಿದ್ದ ತಟ್ಟೆ, ತಟ್ಟೆಯೊಳಗೆ ಮುಕ್ಕಾಲು ಚಪಾತಿ ಒಂದು ಸೌಟಿನಷ್ಟು ಬೆಂಡೆಕಾಯಿ ಪಲ್ಯ, ನನ್ನ ಕೈಯೊಳಗೆ ಚಪಾತಿಯ ಒಂದು ತುಂಡು, ಎದುರಿಗೆ ನಗಾಡುತ್ತಾ ಕುಳಿತಿದ್ದ ಅಪ್ಪ. 

“ನಿಂಗೇನೇ ಬಂದು ದೊಡ್ರೋಗ. ಊಟ ಮಾಡ್ತಾ ಮಾಡ್ತಾನೇ ನಿದ್ರೆ ಹೋಗಿದ್ದೀಯಲ್ಲ” ಅಮ್ಮನ ನಗೆಮಿಶ್ರಿತ ಮಾತು.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಇದು ಕನಸೋ ಈ ಮುಂಚೆ ಧರಣಿ ಧರಣಿ ಎಂಬ ಕೂಗು ಕೇಳಿದ್ದು ಕನಸೋ ಎನ್ನುವುದನ್ನರಿಯುವಷ್ಟರಲ್ಲಿ ತಟ್ಟೆಯಲ್ಲಿದ್ದ ಚಪಾತಿ ತಣ್ಣಗಾಗಿತ್ತು. ಊಟ ಮಾಡುತ್ತಲೇ ನಿದ್ರೆ ಮಾಡುವಷ್ಟು ಸುಸ್ತಾಗಿಬಿಟ್ಟಿದೆಯಾ ಇವತ್ತು! ಉಶ್ಯಪ್ಪ…ಕೂತರೂ ನಿದ್ರೆ, ನಿಂತರೂ ನಿದ್ರೆ. ಮತ್ತೆ ಆಸ್ಪತ್ರೆಗೆ ಹೋಗಲಾರಂಭಿಸಿ ತಿಂಗಳ ಮೇಲಾಗಿತ್ತು. ಚಿಕ್ಕ ಮಗು ಇದೆ ಪಾಪ ಅಂತ ನನ್ನ ಕೊಲೀಗ್ಸು ಎಷ್ಟೇ ಕರುಣೆ ತೋರಿ ನನಗೆ ಕೆಲಸದ ಒತ್ತಡದಿಂದ ಬಚಾವು ಮಾಡಿದರೂ ಮಾಡೋ ಕನಿಷ್ಠ ಕೆಲಸ ಕೂಡ ತ್ರಾಸದಾಯಕವೇ. ಬೆಳಿಗ್ಗೆ ಆರಕ್ಕೆದ್ದು ತಯಾರಾಗಿ ಏಳಲೊಲ್ಲದ ರಾಧಳನ್ನು ಏಳಕ್ಕೆಬ್ಬಿಸಿ ಬಲವಂತದಿಂದ ಹಾಲುಣಿಸಿ ಮತ್ತೆ ಮಲಗಿಸಿ ಬೆಳಗಿನ ತಿಂಡಿ ಮಧ್ಯಾಹ್ನದ ಅಡುಗೆಗೆ ಬೇಕುಬೇಕಾದ ತರಕಾರಿಗಳನ್ನು ಹೆಚ್ಚಿಡುವಷ್ಟರಲ್ಲಿ ಅಮ್ಮ ಎಚ್ಚರವಾಗುತ್ತಿದ್ದಳು. ಅಮ್ಮನ ಜೊತೆಗೂಡಿ ಐವರಿಗೂ ತಿಂಡಿ ತಯಾರಿಸಿ ನನ್ನ ಪಾಲಿನದನ್ನು ಗಬಗಬನೆ ತಿಂದು ಮಧ್ಯಾಹ್ನಕ್ಕೆ ಸಾರು – ಪಲ್ಯ ಅನ್ನ ಮಾಡಿ ಅಪ್ಪ ತಮ್ಮ ರಾಜೀವನಿಗೆ ಬಾಕ್ಸಿಗಾಕುವಷ್ಟರಲ್ಲಿ ಗಡಿಯಾರ ಎಂಟೂ ಕಾಲು ದಾಟಿದ ಸೂಚನೆ ನೀಡುತ್ತಿತ್ತು. ಅಷ್ಟೊತ್ತಿಗೆ ರಾಧ ಪಿಳಿಪಿಳಿ ಅಂತ ಕಣ್ಣು ಬಿಟ್ಟು ಬೆಳಗಿನ ಬೆಳಕಿನ ಜೊತೆ ಕತ್ತಲೆ ಬೆಳಕಿನಾಟವನ್ನಾಡುತ್ತಿದ್ದಳು. ಅವಳ ಡಯಾಪರ್‌ ಬದಲಿಸಿ ಇನ್ನೊಂದು ಸುತ್ತು ಹಾಲುಣಿಸಿ ಮೊಲೆಗಳಲ್ಲುಳಿದ ಅಳಿಕುಳಿಕೆ ಹಾಲನ್ನು ಶುದ್ಧ ಪಾತ್ರೆಯೊಂದಕ್ಕೆ ಹಿಂಡಿ ತೆಗೆಯುವಷ್ಟರಲ್ಲಿ ಎಂಟೂ ಮೂವತ್ತೈದು. ತೆಗೆದಿಟ್ಟ ಚೂಡಿಯ ಟಾಪನ್ನು ಮತ್ತೆ ಧರಿಸಿ ಎಂಟೂ ಮೂವತ್ತೇಳಕ್ಕೆ ಸ್ಕೂಟಿಯನ್ನೇರಿದರೆ ಎಂಟೂ ಐವತ್ತಕ್ಕೆ ಆಸ್ಪತ್ರೆಯೊಳಗಿರುತ್ತಿದ್ದೆ. ತಿಂಗಳಿಂದ ವಾರ್ಡ್‌ ಡ್ಯೂಟಿಯಲ್ಲಿದ್ದೆ. ತುಂಬ ಗಂಭೀರ ರೋಗಿಗಳೇನೂ ಇಲ್ಲಿರುತ್ತಿರಲಿಲ್ಲವಾದ್ದರಿಂದ ಸ್ವಲ್ಪ ವಾಸಿ. ವಾರ್ಡಿನ ಮಕ್ಕಳನ್ನೆಲ್ಲ ಒಂದು ಸುತ್ತು ನಗುನಗುತ್ತಾ ಮಾತನಾಡಿಸಿ ಅಳುತ್ತಿದ್ದವರನ್ನು ಸಮಾಧಾನಿಸಿ ಪಿಜಿ ನೋಟ್ಸ್‌ ಬರೆದು ಮುಗಿಸುವಷ್ಟರಲ್ಲಿ ಒಂಭತ್ತೂವರೆಯಾಗಿರುತ್ತಿತ್ತು. ಆಗ ಬರುವ ಸೀನಿಯರ್‌ ಡಾಕ್ಟರುಗಳ ಜೊತೆಗೆ ಮತ್ತೊಂದು ರೌಂಡು. ಅವರಿಂದೊಂದಷ್ಟು ಪ್ರಶ್ನೋತ್ತರ. ಮಗುವಿಗೂ….ನಮಗೂ…..ಮಗು ಉತ್ತರ ಕೊಡದಿದ್ದರೆ ನಗು. ನಾವು ಉತ್ತರ ನೀಡದಿದ್ದರೆ ʼಇನ್ಯಾವಾಗ್ರಮ್ಮ ಓದೋದು ನೀವೆಲ್ಲʼ ಎಂಬ ನಿಟ್ಟುಸಿರು. ನನಗಂತೂ ಬಯ್ಯೋ ಹಾಗೂ ಇಲ್ಲ. ʼರೌಂಡ್ಸು ಮುಗಿಸಿ ಮತ್ತೊಂದು ರೌಂಡು ನೋಟ್ಸೆಲ್ಲ ಬರೆದಿಟ್ಟು ನರ್ಸುಗಳಿಗೊಂದಷ್ಟು ಸೂಚನೆ ಕೊಟ್ಟು ಪ್ರಶ್ನೆಗಳ ಮೂಟೆ ಹೊತ್ತು ತರುವ ಮಕ್ಕಳ ಪೋಷಕರಿಗೊಂದಷ್ಟು ವಿವರಣೆ ನೀಡಿ ಹನ್ನೊಂದರಷ್ಟೊತ್ತಿಗೆ ಓಪಿಡಿ ಸೇರಬೇಕು. ಓಪಿಡಿಯಲ್ಲಿ ಹೆಚ್ಚಿನ ಜನಸಂದಣಿಯೇನಿರುತ್ತಿರಲಿಲ್ಲ. ಅಲ್ಲೇ ಮಧ್ಯೆ ಮಧ್ಯೆ ಪುರುಸೊತ್ತಿನಲ್ಲಿ ಕೇಸುಗಳ ಬಗ್ಗೆ, ಬೆಳಿಗ್ಗೆ ರೌಂಡ್ಸಿನಲ್ಲಿ ಕೇಳಿದ ಪ್ರಶ್ನೆಗಳ ಬಗ್ಗೆ ಒಂದಷ್ಟು ಓದು. 

ಹನ್ನೆರಡು ದಾಟುತ್ತಿದ್ದಂತೆ ಎದೆ ಭಾರವಾಗಿಬಿಡುತ್ತಿತ್ತು. ಮೊಲೆಗಳಿಂದ ಚಿಮ್ಮ ಬಯಸುತ್ತಿದ್ದ ಹಾಲು ತ್ರಾಸು ಕೊಡುತ್ತಿತ್ತು. ಮೊದಲ ವಾರದಲ್ಲಂತೂ ಅಸಾಧ್ಯ ನೋವು. ನೋವು ತಡೆಯಲಾರದೆ ಟಾಯ್ಲೆಟ್ಟಿಗೆ ಹೋಗಿ ಒಂದಷ್ಟು ಹಾಲು ಹಿಂಡಿ ತೆಗೆದು ಬಚ್ಚಲಿಗೆ ಸುರಿದು ಅರ್ಧ ಘಂಟೆ ಕಣ್ಣೀರಾಗಿದ್ದೆ. ಈಗ ವಾಸಿ, ಮುಂಚಿನಷ್ಟು ನೋವಾಗುವುದಿಲ್ಲ, ಅಥವಾ ಆ ನೋವಿಗೆ ನಾ ಒಗ್ಗಿ ಹೋಗಿರಬೇಕು. ಒಂದು ಘಂಟೆಗೆ ಒಪಿಡಿ ಬಾಗಿಲು ಹಾಕುವುದನ್ನೇ ಕಾಯುತ್ತ ಎಷ್ಟು ಬೇಗವಾಗಿ ಸಾಧ್ಯವೋ ಅಷ್ಟು ವೇಗವಾಗಿ ಮನೆ ತಲುಪುತ್ತಿದ್ದೆ. ಬೆಳಿಗ್ಗೆ ಪಾತ್ರೆಗೆ ಹಿಂಡಿದ್ದ ಹಾಲನ್ನು ಹೊಳ್ಳೆಯ ಮೂಲಕ ಮಧ್ಯದಲ್ಲೊಮ್ಮೆ ಅಮ್ಮ ಕುಡಿಸಿರುತ್ತಿದ್ದರು. ಅದಷ್ಟು ಸಾಲುತ್ತಿರಲಿಲ್ಲವೋ ಏನೋ. ರಸ್ತೆಯ ತಿರುವಿನಲ್ಲೇ ಮಗಳ ಅಳು ಕೇಳಿಸಿದಂತಾಗುತ್ತಿತ್ತು. ಮಗಳನ್ನು ಸಮಾಧಾನಿಸಲಾಗದೇ ಅಮ್ಮ ಸುಸ್ತು ಹೊಡೆದಿರುತ್ತಿದ್ದರು. “ಇಷ್ಟು ಬೇಗ ಹೋಗೋದು ಬೇಡ ಅಂದಿದ್ದೆ. ಕೇಳಬೇಕಲ್ಲ ನಮ್ಮ ಮಾತ್ಗಳನ್ನ. ಹಿರಿಯರ ಮಾತು ಅಂದ್ರೆ ಕಾಲಕಸಕ್ಕಿಂತ ಕಡೆ” ಅಮ್ಮನ ಗೊಣಗಾಟ ಯಾವತ್ತಿಗೂ ತಪ್ಪುತ್ತಲೇ ಇರಲಿಲ್ಲ. ಅಮ್ಮನ ಗೊಣಗಾಟಕ್ಕೆ ಪ್ರತಿಕ್ರಿಯೆ ನೀಡುವಷ್ಟು ತಾಳ್ಮೆಯಾಗಲೀ ಸಮಯವಾಗಲೀ ನನ್ನಲ್ಲಿರುತ್ತಿರಲಿಲ್ಲ. ಗಡಿಯಾರದ ಕಡೆಗೇ ಒಂದು ಕಣ್ಣುನೆಟ್ಟು ಹಾಲುಣಿಸುತ್ತಿದ್ದೆ. ಹಾಲು ಕುಡಿದ ನಂತರ ಮಗಳು ಮೊಲೆಯನ್ನು ಬಿಟ್ಟರೆ ಸರಿ….. ಕೆಲವೊಮ್ಮೆ ಹಾಲು ಕುಡಿದು ಮುಗಿದರೂ ಅಮ್ಮ ಎಲ್ಲಿ ಎದ್ದು ಹೋಗಿಬಿಡುತ್ತಾಳೋ ಎಂಬ ಭೀತಿಯಿಂದ ಹಾಲಿಲ್ಲದ ಮೊಲೆಯನ್ನೇ ಚೀಪುತ್ತಾ ಮಲಗಿರುತ್ತಿದ್ದಳು. ಚೂರು ಮೊಲೆ ಬಿಡಿಸಿದರೆ ಜೋರು ಅಳು. ʼಇಲ್ಲೇ ತಟ್ಟೆಗ್‌ ಹಾಕಂಡ್‌ ಬಮ್ಮʼ ಎಂದು ಹೇಳಿ ಗಡಿಯಾರದ ಕಡೆಗೇ ಕಣ್ಣು ನೆಟ್ಟು ಅನ್ನ ಸಾರು ಪಲ್ಯವನ್ನೆಲ್ಲ ಜೊತೆ ಮಾಡಿ ಹಿಸುಕಿ ಕಲಸಿ ಅರ್ಧ ಅಗಿದು ಅರ್ಧ ನುಂಗಿದರೆ ಊಟದ ಶಾಸ್ತ್ರ ಮುಗಿಯುತ್ತಿತ್ತು. ಅಷ್ಟರೊಳಗೆ ಖಾಲಿ ಮೊಲೆ ಚೀಪಿ ಬೇಸರವಾದ ರಾಧಳೂ ಮೊಲೆಯಿಂದ ಬಾಯಿ ತೆಗೆದಿರುತ್ತಿದ್ದಳು. ಅಮ್ಮನ ಕೈಗೆ ರಾಧಳನ್ನಿಟ್ಟು ಮುಖಕ್ಕೆ ನೀರೆರಚಿಕೊಂಡು ಆಸ್ಪತ್ರೆಯ ಕಡೆಗೆ ಗಾಡಿ ಓಡಿಸಿದರೆ ಘಂಟೆ ಎರಡು ದಾಟಿರುತ್ತಿತ್ತು. ಸೀನಿಯರ್‌ ಡಾಕ್ಟರುಗಳಾಗಲೇ ಓಪಿಡಿಯಲ್ಲಿ ಆಸೀನರಾಗಿರುತ್ತಿದ್ದರು. ಪೆಚ್ಚು ನಗೆ ನಗುತ್ತಾ ಹೋಗಿ ಅವರೆದು ಕುಳಿತು ಅರ್ಧ ಮುಕ್ಕಾಲು ಘಂಟೆ ರೋಗಿಗಳನ್ನು ನೋಡಿ ಮುಗಿಸಿದರೆ ಸೆಮಿನಾರೋ ಜರ್ನಲ್‌ ಕ್ಲಬ್ಬೋ ಇರುತ್ತಿತ್ತು. ಪುಟಾಣಿ ಮಗಳಿದ್ದ ಕಾರಣಕ್ಕೆ ನನಗೆ ಸೆಮಿನಾರು ಜರ್ನಲ್‌ ಕ್ಲಬ್ಬುಗಳನ್ನಾಕುತ್ತಿರಲಿಲ್ಲ. ಬೇರೆಯವರದ್ದಿರುತ್ತಿತ್ತು. ಮುಚ್ಚಿಕೊಳ್ಳಲು ಹವಣಿಸುತ್ತಿದ್ದ ಕಣ್ಣುಗಳನ್ನು ಬಲವಂತವಾಗಿ ತೆರೆದಿಡುತ್ತಾ ಕಣ್ಣಿಗೆ ಕಾಣುತ್ತಿದ್ದ ಪಿಪಿಟಿ ಸ್ಲೈಡುಗಳಿಂದ ಕೇಳಿಸಿಕೊಳ್ಳದಿದ್ದರೂ ಕಿವಿಗೆ ಬೀಳುತ್ತಿದ್ದ ಒಂದಷ್ಟು ಪದಗಳಿಂದ ಎಷ್ಟು ಸಾಧ್ಯವೋ ಅಷ್ಟು ಜ್ಞಾನವನ್ನು ಬಸಿದುಕೊಳ್ಳುವಾಗ ಐದಾಗಿರುತ್ತಿತ್ತು. ಪಟಪಟನೆ ಎಲ್ಲರಿಗೂ ಒಂದೊಂದು ಬಾಯ್‌ ಹೇಳಿ ಮನೆ ತಲುಪುವಷ್ಟರಲ್ಲಿ ಐದೂಕಾಲು. ಮಗಳು ಮಧ್ಯಾಹ್ನ ಕೋಳಿ ನಿದ್ರೆ ತೆಗೆದು ಎದ್ದುಬಿಟ್ಟಿರುತ್ತಿದ್ದಳು. ಎದ್ದ ಬಳಿಕ ಅಮ್ಮನ ಹೆಗಲ ಮೇಲೆ ಅಮ್ಮನ ಮಡಿಲಿನಲ್ಲೇ ಇರಬೇಕಿತ್ತು. ಬಾತ್ರೂಮಿಗೆ ಹೋಗುವುದಕ್ಕೂ ಅಮ್ಮ ಮಗಳನ್ನು ಹಾಸಿಗೆಯ ಮೇಲಾಗಲೀ ತೊಟ್ಟಿಲಲ್ಲಾಗಲೀ ಬಿಡುವಂತಿರಲಿಲ್ಲ. ಮಡಿಲಿನಿಂದ ಕೆಳಗಿಳಿಸುವ ಸೂಚನೆ ಸಿಕ್ಕರೂ ಅಳುವಿನ ದನಿ ತಾರಕ ಸ್ವರಕ್ಕೇರುತ್ತಿತ್ತು. ʼಇನ್ನೂ ನಾಲ್ಕು ತಿಂಗಳು ತುಂಬಿಲ್ಲ. ಆಗಲೇ ಎಷ್ಟು ಕಾಟ ಇವಳದ್ದುʼ ಎಂದು ಗೊಣಗುವ ಅಮ್ಮ ʼಚಿಕ್ಕಂದಿನಲ್ಲಿ ಹೆಚ್ಚು ಕಾಟವಿಕ್ಕುವ ಮಕ್ಕಳು ದೊಡ್ಡವರಾದ ಮೇಲೆ ನೆಮ್ಮದಿ ನೀಡ್ತಾರಂತೆʼ ಎಂದು ಸಮಾಧಾನಿಸಿಕೊಳ್ಳುತ್ತಾ ನನ್ನಡೆಗೆ ವ್ಯಂಗ್ಯದೃಷ್ಟಿ ಬೀರುತ್ತಿದ್ದರು. ನಾ ಚಿಕ್ಕಂದಿನಲ್ಲಿ ತುಂಬಾ ಅಂದರೆ ತುಂಬಾ….ನಂಬಲಿಕ್ಕೇ ಕಷ್ಟವಾಗುವಷ್ಟು ಶಾಂತಳಾಗಿರುತ್ತಿದ್ದನಂತೆ. ದೊಡ್ಡವಳಾದ ಮೇಲೆ ಕೊಟ್ಟ ಕಾಟಗಳ ಪಟ್ಟಿ ದೊಡ್ಡದೇ ಹೌದು. 

ಮಧ್ಯಾಹ್ನ ಗಡದ್ದು ನಿದ್ರೆ ಹೊಡೆಯುವ ಅಮ್ಮನ ನಿದ್ರಾಪಟ್ಟಿ ಏರುಪೇರಾಗಿ ನಾ ಐದೂಕಾಲಿಗೆ ಮನೆಗೆ ಕಾಲಿಡುತ್ತಿದ್ದಂತೆಯೇ ನಾ ಬಟ್ಟೆ ಬದಲಿಸಿ ಬರುವುದಕ್ಕೂ, ನಾ ಒಮ್ಮೆ ಮುಖ ತೊಳೆದು ಅರ್ಧ ಗ್ಲಾಸು ಹಾಲು ಕುಡಿಯುವುದಕ್ಕೂ ಕಾಯದೆ ಮಗಳನ್ನು ನನ್ನ ಮಡಿಲಿಗಾಕಿ ಬಚ್ಚಲಿನ ಕಡೆಗೆ ಓಡುತ್ತಿದ್ದರು. ಮಧ್ಯಾಹ್ನದಿಂದ ಬಲವಂತದಿಂದ ಕಟ್ಟಿಕೊಂಡಿದ್ದನ್ನೆಲ್ಲಾ ಹೊರಗಾಕಿ ಬಂದು ನನ್ನೆಡೆಗೆ ಕಣ್ಣೆತ್ತಿ ಸಹ ನೋಡದೆ ರೂಮಿಗೋಗಿ ಕಾಲುಚಾಚಿ ಬಿಡುತ್ತಿದ್ದರು. ಆರರ ಸುಮಾರಿಗೆ ಅಪ್ಪ ಬಂದು ಮಗಳನ್ನೆತ್ತಿಕೊಳ್ಳುವವರೆಗೂ ನಾ ಅಲುಗಾಡುವಂತಿರಲಿಲ್ಲ. ಐದು ಐದೂವರೆಯಷ್ಟೊತ್ತಿಗೆ ಮನೆ ಸೇರುತ್ತಿದ್ದ ರಾಜೀವ ಅಪ್ಪಿತಪ್ಪಿಯೂ ಎಂಟಕ್ಕೆ ಮುಂಚೆ ಮನೆಗೆ ಬರುತ್ತಿರಲಿಲ್ಲ. ʼಬಂದು ಮಗು ನೋಡ್ಕೋಳ್ಳೋಕ್‌ ಆಗಲ್ವೇನ್ರೀ? ನನಗೂ ಸ್ವಲ್ಪ ವಿಶ್ರಾಂತಿ ಸಿಕ್ಕಂತಾಗ್ತದೆʼ ಎಂದು ಬಾಯಿ ಬಿಟ್ಟು ರೇಗಿ ಕೇಳಿದ್ದೂ ಉಪಯೋಗಕ್ಕೆ ಬಂದಿರಲಿಲ್ಲ. ಶಶಿಯೇನೋ ಆರೂವರೆಯಷ್ಟೊತ್ತಿಗೆ ಬರ್ತಿದ್ದ. ಎತ್ತಿಕೊಳ್ಳೋಕೆಲ್ಲ ಅವನಿಂದಾಗುತ್ತಿರಲಿಲ್ಲ. ಸಾಗರನೇಳಿದಂತೆ ಇವನೂ ಹೇಳುತ್ತಿದ್ದ ಚಿಕ್ಕ ಮಗುವನ್ನು ಎತ್ತಿಕೊಳ್ಳೋಕೆ ಭಯವಂತೇ! ಇವರಿಗೇ ಮಕ್ಕಳಾದಾಗ ಅದೆಂಗೆ ವರ್ತಿಸ್ತಾರೋ ನೋಡಬೇಕು. ಶಶಿಯನ್ನೇನೋ ನೋಡಬಹುದು, ಸಾಗರ? ಅವ ನನಗೆ ಮೆಸೇಜು ಮಾಡಿ ಎಷ್ಟು ವಾರಗಳಾಯಿತು ಎನ್ನುವ ಲೆಕ್ಕವೇ ತಪ್ಪಿಹೋಗಿತ್ತು. ಮೆಸೇಜು ಮಾಡಲು ನನಗೇ ಸಮಯವೂ ಇರಲಿಲ್ಲ, ನಿಜವಾಗಿ ಸಮಯವಿರಲಿಲ್ಲ. ಅಪ್ಪ ಬಂದ ಮೇಲೆ ನಾ ಬಟ್ಟೆ ಬದಲಿಸಿ ಕೈಕಾಲು ಮುಖ ತೊಳೆದು ಹೊಟ್ಟೆಗೊಂದಷ್ಟು ಹಾಕಿಕೊಂಡು ಅಪ್ಪನಿಗೂ ನನಗೂ ಒಂದೊಂದು ಲೋಟ ಕಾಫಿ ಮಾಡಿ ಕುಡಿದು ತರಕಾರಿ ಹೆಚ್ಚಲಾರಂಭಿಸಿದರೆ ಅಥವಾ ಅಪ್ಪ ತರುವ ಚಿಕನ್ನೋ ಮಟನ್ನನ್ನೋ ತೊಳೆಯಲಾರಂಭಿಸಿದಾಗ ಅಮ್ಮ ನಿದ್ರೆಯಿಂದೆದ್ದು ಬರುತ್ತಿದ್ದರು. ಅಡುಗೆಯ ಕೆಲಸವನ್ನವರಿಗೆ ವಹಿಸಿ ಹೊರಬಂದು ಮಗಳಿಗೆ ಮತ್ತೊಂದು ಸುತ್ತು ಹಾಲು ಕುಡಿಸುವಷ್ಟರಲ್ಲಿ ಘಂಟೆ ಎಂಟಾಗಿರುತ್ತಿತ್ತು. ಹಾಲು ಕುಡಿದ ಐದು ನಿಮಿಷಕ್ಕೇ ಮಗಳಿಗೆ ಗಡದ್ದು ನಿದ್ರೆ. ಇಷ್ಟು ಬೇಗ ಅವಳು ಮಲಗಿಬಿಡುವುದನ್ನು ತಪ್ಪಿಸುವುದೇಗೆ? ತಿಳಿಯುತ್ತಿರಲಿಲ್ಲ. ಒಂಭತ್ತರಷ್ಟೊತ್ತಿಗೆ ಗಡದ್ದು ತಿಂದು ಒಂಭತ್ತೂವರೆಗೆ ಮಲಗಿದರೆ ಅಲಾರಂ ಮೊಳಗಿದಂತೆ ಹನ್ನೆರಡಕ್ಕೆ ಮಗಳು ಕಿಟಾರೆಂದು ಕಿರುಚಿ ಎದ್ದು ಅಳಲಾರಂಭಿಸುತ್ತಿದ್ದಳು. ಅಷ್ಟು ಪುಟ್ಟ ಮೆದುಳಿನಲ್ಲೂ ಕೆಟ್ಟ ಕನಸುಗಳು – ಬೆಚ್ಚಿ ಬೀಳಿಸುವ ದುಷ್ಟ ಕನಸುಗಳು ಬೀಳುತ್ತವಾ? ಹೋದ ತಿಂಗಳೆಲ್ಲ ಮಗಳು ಹೀಗೆ ಮಧ್ಯರಾತ್ರಿ ಎದ್ದು ಕೂರುತ್ತಿರಲಿಲ್ಲ. ಯಾಕೋ ನಾ ಡ್ಯೂಟಿಗೆ ಹೋಗಲು ಶುರುಮಾಡಿದ ನಂತರ ಹೀಗಾಡ್ತಾಳೆ. ಏನೋಡ್ತಿದೆಯೋ ಏನೋ ಅವಳ ಮನಸ್ಸಿನಲ್ಲಿ…..ಎದ್ದ ಮಗಳಿಗೆ ಹಾಲುಣಿಸಿ ಸಮಾಧಾನಿಸಿದರೆ ಮಗಳು ಪೂರ್ತಿ ಫ್ರೆಶ್ಶಾಗಿ ಆಟವಾಡಲಾರಂಭಿಸುತ್ತಿದ್ದಳು. ಅವಳ ಆಟಕ್ಕೇನೂ ನಾ ಜೊತೆಯಾಗಬೇಕಿರಲಿಲ್ಲ. ಸುಮ್ಮನೆ ಅವಳ ಪಕ್ಕದಲ್ಲಿ ಮಲಗಿದ್ದರೆ ಸಾಕಿತ್ತು. ಮಲಗಿದ್ದರೆ ಸಾಕಿತ್ತು, ನಿದ್ರೆ ಮಾಡುವಂತಿರಲಿಲ್ಲ. ಎರಡು ಕ್ಷಣಕ್ಕಿಂತ ಹೆಚ್ಚು ತೆರೆದರೆ ಅಳುವಿನ ಕುರುಹೇ ಇಲ್ಲದೆ ತನ್ನೊಳಗೇ ನಗಾಡುತ್ತಾ ಆಟವಾಡುತ್ತಿದ್ದಳು. ಇವಳು ಅತ್ತಿದ್ದೇ ಒಂದು ಕನಸಾ ಹೇಗೆ ಎಂಬ ಗೊಂದಲ ನನ್ನಲ್ಲಿ, ಕನಸಿರಬೇಕೇನೋ ಎಂದು ಕಣ್ಣು ಮುಚ್ಚಿದರೆ ಮತ್ತೊಂದು ಸುತ್ತಿನ ಅಳು. ʼರಾತ್ರಿನಾದ್ರೂ ಇಲ್ಲೇ ಮಲಗಿ. ನಂಗೂ ಸ್ವಲ್ಪ ರೆಷ್ಟು ಸಿಗ್ತದೆʼ ಅಂತ ರಾಜೀವನಿಗೆ ಕೇಳಿಕೊಂಡೆ. “ಅಯ್ಯೋ ಬರೀ ನಿಂದೇ ಹೇಳ್ತೀಯಲ್ಲ. ನನಗೂ ಬೆಳಿಗ್ಗೆ ಕೆಲಸಕ್ಕೆ ಹೋಗ್ಬೇಕಲ್ಲ” ಎನ್ನುತ್ತಿದ್ದರು. ಮಗು ಮಗು ಅಂತ ಬಾಯಿ ಬಡ್ಕಂಡದ್ದು ನೀನೇ ಅಲ್ವಾ ಅನುಭವಿಸಿಕೋ ಎಂದು ಒಳಗೊಳಗೇ ಹೇಳಿಕೊಳ್ಳುತ್ತಿದ್ದರೇನೋ? ಅಮ್ಮನಿಗೂ ಮಲಗಲು ಕೇಳಿಕೊಂಡೆ. “ಅಯ್ಯೋ! ರಾತ್ರಿ ನಿದ್ರೆ ಆಗದಿದ್ದರೆ ಬೆಳಿಗ್ಗೆ ಯಾರು ನೋಡ್ಕೋತಾರಮ್ಮ. ನಂಗೂ ವಯಸ್ಸಾಯ್ತಲ್ಲ” ಎಂದು ಬಿಡೋರು. ಅದೂ ಸತ್ಯವೇ ಅಲ್ಲವಾ ಎನ್ನಿಸುತ್ತಿತ್ತು. ಇದೇ ಅಮ್ಮ ಅಲ್ಲವಾ “ಒಂದ್‌ ಮಗು ಮಾಡ್ಕಂಡ್‌ ನನ್‌ ಕೈಗ್‌ ಕೊಟ್ಟು ಬಿಡಮ್ಮ. ಅದುನ್‌ ನೋಡ್ಕೊಳ್ಳೋ ಪೂರ್ತಿ ಜವಾಬ್ದಾರಿ ನಂದೇ" ಅಂತ ಹೇಳ್ತಿದ್ದಿದ್ದು. ಮುಂಚೆಯಾದರೆ ಅವರ ಹಿಂದಿನ ಮಾತುಗಳನ್ನೆಲ್ಲ ಎತ್ತಾಡಿ ಜಗಳವಾಡುತ್ತಿದ್ದೆನೋ ಏನೋ. ಈಗ ಅವರೂ ನನಗೆ ಅನಿವಾರ್ಯವೇ ಅಲ್ಲ. ಸುಮ್ಮನಾಗುತ್ತಿದ್ದೆ. ಏನೋ ಬಾಣಂತಿ ದಿನಗಳು ಮುಗಿದು ನಾಮಕರಣದ ಶಾಸ್ತ್ರ ಮುಗಿಸಿ ಅತ್ತೆಯ ಮನೆಗೋಗಿ ಅತ್ತೆಯ ಕೈಗೆ ಮಗುವನ್ನಿಟ್ಟು ಬಿಡುವಂತಿದ್ದರೂ ಜಗಳವಾಡದೆ ಇರುತ್ತಿರಲಿಲ್ಲ. ಹೆಚ್ಚು ಕಡಿಮೆ ಮಗಳು ಶಾಲೆಗೋಗುವವರೆಗೂ ಅಮ್ಮನೇ ನೋಡಿಕೊಳ್ಳಬೇಕು ಎಂಬುದರಿವಿತ್ತಲ್ಲ. ಮತ್ತಷ್ಟು ಮೌನಕ್ಕೆ ಶರಣಾಗಿ ಶಾಂತತೆಯನ್ನು ಬಲವಂತವಾಗಿ ಆವಾಹಿಸಿಕೊಂಡು ಸುಮ್ಮನಾಗುತ್ತಿದ್ದೆ. ಅತ್ತೆಯ ಮನೆಯವರು ತಿಂಗಳಿಗೊಂದು ಸಲವೂ ಬಂದು ನೋಡಿಕೊಂಡು ಹೋಗುತ್ತಿರಲಿಲ್ಲ. ಇಷ್ಟು ಹತ್ತಿರವಿದ್ದರೂ ಮೊಮ್ಮಗಳನ್ನು ಕಾಣಲು ಬರುವುದಿಲ್ಲವಲ್ಲ ಎಂದು ಪ್ರಾರಂಭದಲ್ಲಿ ಬೇಸರವಾಗುತ್ತಿತ್ತು. ಅವರುಗಳು ಬಂದರೆ ಮಗುವನ್ನು ನೋಡಿಕೊಳ್ಳುವುದರ ಜೊತೆಜೊತೆಗೆ ಅವರ ಉಪಚಾರವನ್ನೂ ಕಡಿಮೆಯಿಲ್ಲದಂತೆ ಮಾಡಬೇಕಿತ್ತು. ಅನ್ನ ಸಾರಷ್ಟೇ ಇದ್ದರೆ ಇದೇನ್‌ ಪಲ್ಯ ಮಾಡಿಲ್ವ ಅಂತ, ಅನ್ನ ಸಾರು ಪಲ್ಯವಿದ್ದರೆ ಇದ್ಯಾಕೆ ಹಪ್ಪಳ ಎಣ್ಣೇಗಾಕಿಲ್ವ ಅಂತ, ಅನ್ನ ಸಾರು ಪಲ್ಯ ಹಪ್ಪಳವಿದ್ದರೆ ಇದೇನು ಮೊಸರಿಟ್ಟಿಲ್ವ ಅಂತ, ಅನ್ನ ಸಾರು ಪಲ್ಯ ಹಪ್ಪಳ ಮೊಸರಿದ್ದರೆ ಯಾಕೋ ಮೊಸರು ಸ್ವಲ್ಪ ಹುಳಿ ಹುಳಿ ಅಲ್ವ ಅಂತ…..ಅವರ ಆಕ್ಷೇಪಣೆಗಳಿಗೆ ಕೊನೆ ಮೊದಲಿರುತ್ತಿರಲಿಲ್ಲ. ಇವರುಗಳು ಬರದೇ ಹೋದ್ರೆ ನೆಮ್ಮದಿ ಅಂತಾಗಿತ್ತು. ಹನ್ನೆರಡಕ್ಕೇಳುವ ಮಗಳು ಮತ್ತೆ ನನಗೆ ಕಣ್ಣು ಮುಚ್ಚಲು ಅನುಮತಿ ನೀಡುತ್ತಿದ್ದಿದ್ದು ಬೆಳಗಿನ ಜಾವ ನಾಲ್ಕಕ್ಕೆ ಮತ್ತೊಂದು ಸುತ್ತು ನಾಲ್ಕೈದು ಹನಿ ಹಾಲು ಕುಡಿದ ನಂತರ. ಇನ್ನೇನು ನಿದ್ರೆ ಬಂತು ಅನ್ನುವಷ್ಟರಲ್ಲಿ ಆರು ಘಂಟೆಗೆ ಕೊಟ್ಟ ಮೊಬೈಲಿನ ಅಲಾರಾಂ ಕೂಗಿ ಕರೆದು ಹಿಂದಿನ ದಿನದ ತದ್ರೂಪಿನಂತಹ ದಿನದಾರಂಭವನ್ನು ಸೂಚಿಸುತ್ತಿತ್ತು.

ಮುಖಪುಟ ಚಿತ್ರ: ಚೇತನ ತೀರ್ಥಹಳ್ಳಿ. 
ಮುಂದುವರೆಯುವುದು

No comments:

Post a Comment