Nov 20, 2019

ಪಕ್ಷಿ ಪ್ರಪಂಚ: ಕೆಂಪು ಟಿಟ್ಟಿಭ.

ಚಿತ್ರ ೧: ಎರೆಹುಳುವಿನ ಬೇಟೆಯಲ್ಲಿ ಕೆಂಪು ಟಿಟ್ಟಿಭ.
ಡಾ. ಅಶೋಕ್. ಕೆ. ಆರ್. 
ನಿನಗಾಗದೇ ಇರೋ ಪಕ್ಷಿ ಯಾವ್ದು ಅಂತ ಯಾರಾದ್ರೂ ಕೇಳಿದ್ರೆ, ನನ್ನ ಮನಸಲ್ಲಿ ಪಟ್ಟಂತ ಮೂಡೋ ಪಕ್ಷಿ ಹೆಸರು ಕೆಂಪು ಟಿಟ್ಟಿಭ! ನನಗೆ ಈ ಪಕ್ಷಿ ಕಂಡರಾಗೋದಿಲ್ಲ ಅನ್ನುವುದಕ್ಕಿಂತಲೂ ಈ ಟಿಟ್ಟಿಭಗಳಿಗೆ ನಮ್ಮನ್ನು ಕಂಡರಾಗೋದಿಲ್ಲ ಅನ್ನೋದು ಸತ್ಯ. ಮನುಷ್ಯರನ್ನು ಕಂಡಾಗ ಪಕ್ಷಿಗಳಿಗೆ ಭಯವಾಗೋದು ಸಹಜವೇ, ಭಯ ಆದರೆ ದೂರ ಹಾರಿ ಹೋಗಲಿ ಬೇಕಿದ್ರೆ! ಆದರೀ ಟಿಟ್ಟಿಭಗಳು ಜೋರು ದನಿಯಲ್ಲಿ ಗಲಾಟೆ ಎಬ್ಬಿಸುತ್ತಾ ಸುತ್ತಮುತ್ತಲಿರುವ ಇನ್ನಿತರೆ ಪಕ್ಷಿಗಳೂ ದೂರ ದೂರಕ್ಕೆ ಹಾರುವಂತೆ ಮಾಡಿಬಿಡುತ್ತವೆ. ಅದಕ್ಕೂ ಕಾರಣವಿದೆ ಅನ್ನಿ.

ಆಂಗ್ಲ ಹೆಸರು: Red wattled lapwing (ರೆಡ್ ವ್ಯಾಟಲ್ಡ್ ಲ್ಯಾಪ್ ವಿಂಗ್)

ವೈಜ್ಞಾನಿಕ ಹೆಸರು: Vanellu Indicus (ವ್ಯಾನೆಲಸ್ ಇಂಡಿಕಸ್)

ಉದ್ದ ನೀಳ ಹಳದಿ ಕಾಲುಗಳನ್ನು ಹೊಂದಿರುವ ಟಿಟ್ಟಿಭಗಳು ಕೆರೆ, ನದಿಯಂಚಿನಲ್ಲಿ, ಗದ್ದೆಯಂಚಿನಲ್ಲಿ ಹೆಚ್ಚಿನ ಸಮಯ ಕಾಣಿಸಿಕೊಳ್ಳುತ್ತವೆ. ಕಂದು ಬಣ್ಣದ ರೆಕ್ಕೆಗಳು ಹರಡಿಕೊಂಡಾಗ ಬಿಳಿ - ಕಪ್ಪು ಬಣ್ಣಗಳನ್ನೂ ಕಾಣಬಹುದು. ಕೆಂಪು ಕೊಕ್ಕು, ಕಣ್ಣಿನ ಮುಂದಿನ ಕೆಂಪಿನ ಸಹಾಯದಿಂದ ಪಕ್ಷಿಯನ್ನು ಸುಲಭವಾಗಿ ಗುರುತಿಸಬಹುದು. ಕೊಕ್ಕಿನಿಂದ ಕೆಳಗೆ ಶುರುವಾಗುವ ಕಪ್ಪು ಬಣ್ಣ ಎದೆಯವರೆಗೂ ಚಾಚಿಕೊಳ್ಳುತ್ತದೆ. ಟೋಪಿ ಹಾಕಿದಂತೆ ತಲೆಯ ಮೇಲಷ್ಟು ಕಪ್ಪು ಬಣ್ಣ, ಅದರ ಎರಡು ಬದಿಯಲ್ಲಿ ಬಿಳಿ ಪಟ್ಟಿ. ಹೆಣ್ಣು ಮತ್ತು ಗಂಡಿನ ನಡುವೆ ವ್ಯತ್ಯಾಸಗಳಿಲ್ಲ.ಸಣ್ಣ ಸಣ್ಣ ಹುಳ ಹುಪ್ಪಟೆ, ಎರೆಹುಳುಗಳೆಂದರೆ ಟಿಟ್ಟಿಭಗಳಿಗೆ ಅಚ್ಚುಮೆಚ್ಚು. ಗೂಡು ಕಟ್ಟುವ ಶ್ರಮ ತೆಗೆದುಕೊಳ್ಳದ ಟಿಟ್ಟಿಭಗಳು ತೇವಾಂಶವಿರುವ ಮಣ್ಣಿನ ಮೇಲ್ಮೆಯಲ್ಲೇ ಮೊಟ್ಟೆ ಇಡುತ್ತವೆ. ಮೊಟ್ಟೆ ಇರುವ ಜಾಗದೆಡೆಗೆ ನಾವು ಅಚಾನಕ್ಕಾಗಿ ನಡೆಯುವಾಗ ಜೋರು ದನಿಯಲ್ಲಿ ಗದ್ದಲ ಮಾಡುತ್ತವೆ. ನಮ್ಮ ತಲೆಯ ಹಿಂಚುಮುಂಚೆಯೇ ಸುಳಿದು ಓಡಲೆತ್ನಿಸುತ್ತವೆ. ಮೊಟ್ಟೆಯಿಟ್ಟಾಗ, ಮೊಟ್ಟೆ ಮರಿಯಾದ ದಿನಗಳಲ್ಲಿ ಇವುಗಳ ದನಿಯ ಆರ್ಭಟವೂ ಜೋರು.

ಬಯಲಿನಲ್ಲಿ ಮೊಟ್ಟೆ ಇಡುವುದರಿಂದ ಅನ್ಯ ಪ್ರಾಣಿ ಪಕ್ಷಿಗಳಿಗೆ ಸುಲಭ ತುತ್ತಾಗುತ್ತವೆ ಟಿಟ್ಟಿಭದ ಮೊಟ್ಟೆ ಮತ್ತು ಮರಿಗಳು. ಆಗಾಗ್ಯೂ ಇವುಗಳ ಸಂಕುಲವೇನೂ ಅಪಾಯದ ಮಟ್ಟ ತಲುಪಿಲ್ಲವೆಂದರೆ ಅದಕ್ಕೆ ಕಾರಣ ಟಿಟ್ಟಿಭದ ಹೋರಾಡುವ ಛಲ. ದೊಡ್ಡ ದೊಡ್ಡ ನಾಯಿಗಳನ್ನೂ ಬೆದರಿಸಿ ಓಡಿಸುವ ಛಾತಿ ಈ ಪಕ್ಷಿಗಳದ್ದು.
ಚಿತ್ರ ೨: ಕೆಂಪು ಟಿಟ್ಟಿಭ ಪಕ್ಷಿಯ ಮೊಟ್ಟೆಗಳು. 


ಮತ್ತಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ. 

ಚಿತ್ರನೆನಪು:
ಚಿತ್ರ ೧: ಮಂಡ್ಯದ ಹೊರವಲಯದಲ್ಲಿ ಸೆರೆಯಾದ ಪಟವಿದು. ಕೆಳಗದ್ದೆಯೇರಿಯಲ್ಲಿ ಕುಳಿತ ನನ್ನನ್ನು ಮೇಲ್ಗದ್ದೆಯ ನೀರಿನ ತುದಿಯಲ್ಲವಿತಿದ್ದ, ಎರೆಹುಳುಗಳನ್ನಿಡಿಯುವುದರಲ್ಲಿ ಮಗ್ನವಾಗಿದ್ದ ಕೆಂಪು ಟಿಟ್ಟಿಭ ಗಮನಿಸಲಿಲ್ಲ! ನನ್ನ ಅದೃಷ್ಟ! ಬೆಳಕೂ ಚೆಂದಿದ್ದ ಕಾರಣ ಎರೆಹುಳುವನ್ನು ಬಾಯಲ್ಲಿಡಿದ ಟಿಟ್ಟಿಭದ ಚಿತ್ರ ಕ್ಯಾಮೆರಾದಲ್ಲಿ ದಾಖಲಾಯಿತು.

ಚಿತ್ರ ೨: ಸಂತೇಮಾವತ್ತೂರಿನ ಬಳಿಯ ಕೆರೆಯೊಂದರ ಬಳಿ ತೆಗೆದ ಪಟವಿದು. ಅಲ್ಲಿ ಕೆರೆಯಂಚಿನಲ್ಲಿ ಆಹಾರ ಅರಸುವುದರಲ್ಲಿ ನಿರತವಾಗಿದ್ದ ಜೋಡಿ ಟಿಟ್ಟಿಭಗಳ ಚಿತ್ರ ತೆಗೆಯುವುದರಲ್ಲಿ ಮಗ್ನನಾಗಿದ್ದವನ ಬಳಿಗೆ ಪಕ್ಕದ ಊರಿನ ಮೋಹನ ಬಂದು ‘ಇದರ ಮೊಟ್ಟೆ ಅಲ್ಲಿದೆ’ ಅಂತೇಳಿ ಕರೆದುಕೊಂಡು ಹೋದ. ಮೊಟ್ಟೆಗಳ ಪಟ ತೆಗೆದು ಟಿಟ್ಟಿಭಗಳಿಗೆ ನಮ್ಮ ಅನಿರೀಕ್ಷಿತ ಆಗಮನದ ಸುಳಿವು ಸಿಗುವುದಕ್ಕೆ ಮುಂಚಿತವಾಗಿಯೇ ಜಾಗ ಖಾಲಿ ಮಾಡಿದೆವು. ಆ ಮೊಟ್ಟೆಗಳು ಮರಿಯಾದಂತಹ ಸೂಚನೆಗಳು ಮುಂದಿನ ದಿನಗಳಲ್ಲಿ ಕಾಣಸಿಗಲಿಲ್ಲ.

No comments:

Post a Comment