Aug 24, 2019

ನೈತಿಕತೆಯ ಬಗೆಗೆ ಕೆಲವು ಮೂರ್ಖ ಪ್ರಶ್ನೆಗಳು!

ಕು.ಸ.ಮಧುಸೂದನ ರಂಗೇನಹಳ್ಳಿ 

ಅಂತೂ 'ಆಪರೇಷನ್ ಕಮಲ' ಅನ್ನುವ ರಾಕ್ಷಸೀಆಯುಧವನ್ನು ಬಳಸಿ,ಮೈತ್ರಿ ಸರಕಾರವನ್ನು ಉರುಳಿಸಿ ತನ್ನದೇ ಸರಕಾರ ರಚಿಸುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ಸರಕಾರ ನಡೆಸುತ್ತಿದ್ದ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳ ಆಂತರಿಕ ಭಿನ್ನಮತೀಯ ಚಟುವಟಿಕೆಗಳಲ್ಲಿ ತನ್ನ ಪಾತ್ರವಿಲ್ಲವೆನ್ನುತ್ತಲೇ ನಾಟಕವಾಡುತ್ತ ಬಂದ ಬಿಜೆಪಿಯ ನಾಯಕರುಗಳ ಮಾತುಗಳನ್ನು ಜನ ನಂಬದೇ ಹೋದರೂ, ಈ ಕ್ಷಣಕ್ಕೂ ಬಿಜೆಪಿ ತಾನು ಪರಮಪವಿತ್ರವೆಂಬ ಮುಖವಾಡದಲ್ಲಿ ಸರಕಾರ ರಚಿಸಿ. ಗೆಲುವಿನ ವಿಕೃತ ನಗು ಬೀರುತ್ತಿದೆ 

ಆದರೆ ಪ್ರಜಾಸತ್ತೆಯಲ್ಲಿನ ಈ ಕಪಟನಾಟಕ ಇಲ್ಲಿಗೇ ಮುಗಿಯುವುದಿಲ್ಲ. ಅಕಸ್ಮಾತ್ ಅತೃಪ್ತ ಶಾಸಕರುಗಳ(ಆತ್ಮಗಳ) ಅನರ್ಹತೆ ಬಗ್ಗೆ ನ್ಯಾಯಾಲಯದ ತೀರ್ಪೇನೆ ಬರಲಿ, ಇನ್ನು ಆರುತಿಂಗಳಲ್ಲಿ ನಡೆಯಲಿರುವ ಉಪಚುನಾವಣೆಗಳಲ್ಲಿ ಬಿಜೆಪಿ ಅವರುಗಳಿಗೆ ತನ್ನ 'ಬಿ'ಫಾರಂ ಕೊಟ್ಟು ಮತಬಿಕ್ಷೆಗೆ ಜನರ ಮುಂದೆ ಬರಲೇಬೇಕಾಗುತ್ತದೆ. ಆಗ ಜನ ಕೆಳಗಿನ ಪ್ರಶ್ನೆಗಳನ್ನು ಅವರಿಗೆ ಕೇಳಬೇಕಾಗುತ್ತದೆ: 

ಮೊದಲಿಗೆ, ಆಡಳಿತ ಪಕ್ಷಗಳ ಶಾಸಕರುಗಳ ರಾಜಿನಾಮೆಯಲ್ಲಿ ನನ್ನ ಪಾತ್ರವಿಲ್ಲ ಎನ್ನುವ ನಿಮ್ಮ ಮಾತನ್ನು ನಂಬುವ ಸ್ಥಿತಿಯಲ್ಲಿ ಯಾರೂಇಲ್ಲ. ಯಾಕೆಂದರೆ ಕಳೆದ ವರ್ಷ ವಿದಾನಸಭೆಯ ಚುನಾವಣಾ ಪಲಿತಾಂಶಗಳು ಬಂದಾಗ ತನಗೆ ಬಹುಮತವಿಲ್ಲವೆಂಬ ಸಂಗತಿ ಗೊತ್ತಿದ್ದರೂ ಶ್ರೀ ಬಿ.ಎಸ್.ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿದ್ದರ ಹಿನ್ನೆಲೆಯಲ್ಲಿ ಇದ್ದುದು, ಅನ್ಯಪಕ್ಷಗಳಿಂದ ಹಲವು ಶಾಸಕರುಗಳ ರಾಜಿನಾಮೆ ಕೊಡಿಸಿ, ಉಪಚುನಾವಣೆಗಳಲ್ಲಿ ಅವರನ್ನು ಗೆಲ್ಲಿಸಿಕೊಂಡು ತಮ್ಮ ಕುರ್ಚಿ ಭದ್ರ ಪಡಿಸಿಕೊಳ್ಳುವ ಗುಪ್ತ ಕಾರ್ಯತಂತ್ರವೇ ಅಲ್ಲವೇ? ಅದೊಂದನ್ನು ಹೊರತು ಪಡಿಸಿದಂತೆ ವಿಶ್ವಾಸ ಮತ ಸಾಬೀತು ಪಡಿಸಲು ನಿಮಗೆ ಅನ್ಯ ಮಾರ್ಗವೇನಾದರು ಇತ್ತೆ? ಕುಮಾರಸ್ವಾಮಿಯವರು ಬಿಡುಗಡೆ ಮಾಡಿದ ಒಂದು ಆಡಿಯೊ ಕ್ಲಿಪಿಂಗಿನಲ್ಲಿ ತಾವು ಈ ವ್ಯವಹಾರದ ಬಗ್ಗೆ ಮಾತಾಡಿದ್ದೂ ಇದೆ. 
ಎರಡನೆಯದಾಗಿ, ಪ್ರತಿ ಎರಡುಮೂರು ತಿಂಗಳಿಗೊಮ್ಮೆ ಈಗ ಇಷ್ಟು ಜನ ರಾಜಿನಾಮೆ ಕೊಡುತ್ತಾರೆ, ಅಷ್ಟು ಜನ ಕೊಡುತ್ತಾರೆ ಎನ್ನವ ಹೇಳಿಕೆ ನೀಡುತ್ತಾ ಜನತೆಯಲ್ಲಿ ನಿಮ್ಮ ಬಗ್ಗೆ ಅನುಮಾನ ಮೂಡಲು ಕಾರಣವಾದುದು ತಮ್ಮ ನಾಯಕರುಗಳ ನಡವಳಿಕೆಯೇ ಅಲ್ಲವೇ? ಕಾಂಗ್ರೆಸ್ ಮತ್ತು ಜನತಾದಳದ ಶಾಸಕರುಗಳು ರಾಜಿನಾಮೆ ನೀಡುವ ಬಗ್ಗೆ ನಿಮಗೆ ಮಾಹಿತಿಗಳಿದ್ದವೆ? ಇದ್ದರೆ ಅದರಲ್ಲಿ ನಿಮಗಿದ್ದ ನಿಜ ಆಸಕ್ತಿಯೇನು? 

ಮೂರನೆಯಾದಾಗಿ, ಕಾಂಗ್ರೆಸ್ಸಿನ ರಮೇಶ್ ಜಾರಕಿಹೊಳಿ ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದುದು ತಾವೇ ಅಲ್ಲವೆ?ರಮೇಶ್ ಜಾರಕಿಹೊಳೆಯವರು ಮಹಾರಾಷ್ಟ್ರದ ಬಿಜೆಪಿ ನಾಯಕರೊಂದಿಗೆ ಆಗಾಗ ಮಾತುಕತೆ ನಡೆಸುತ್ತಿದ್ದು ಯಾವ ಪುರುಷಾರ್ಥಕ್ಕೆ? 

ಇವೆಲ್ಲಕ್ಕೂ ಪೂರಕವೆಂಬಂತೆ ಲೋಕಸಭಾ ಚುನಾವಣೆಗಳಿಗು ಮೊದಲು ಕಾಂಗ್ರೆಸ್ಸಿನ ಉಮೇಶ್ ಜಾದವರಿಂದ ರಾಜಿನಾಮೆ ಕೊಡಿಸಿ ಅವರಿಗೆ ಲೋಕಸಭಾ ಸ್ಥಾನವನ್ನೂ, ಅವರ ಮಗನಿಗೆ ಶಾಸಕ ಸ್ಥಾನವನ್ನು ಗೆಲ್ಲಿಸಿಕೊಟ್ಟಿದ್ದು ತಮ್ಮ ಪಕ್ಷವೇ ಅಲ್ಲವೇ?ಇದನ್ನು ಆಪರೇಷನ್ ಕಮಲ ಎಂದು ಕರೆಯದೆ ಬೇರೇನೆಂದು ಕರೆಯಬಹುದು? 

ಇನ್ನು ಮೊನ್ನೆ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಅತೃಪ್ತ(?) ಶಾಸಕರುಗಳ ಕೈಲಿ ರಾಜಿನಾಮೆ ಕೊಡಿಸಿ ಅವರುಗಳನ್ನು ಮುಂಬೈನ ಪಂಚತಾರಾ ಹೋಟೇಲಿಲ್ಲಿನಲ್ಲಿ ರಕ್ಷಿಸಿಟ್ಟಿದ್ದು ತಮ್ಮ ಪಕ್ಷವೇ ಅಲ್ಲವೇ? 

ಅವರ ರಾಜಿನಾಮೆಗಳು ಕ್ರಮಬದ್ದವಾಗಿಲ್ಲವೆಂದು ಸ್ಪೀಕರ್ ಹೇಳಿದಾಗ ಆ ಶಾಸಕರುಗಳನ್ನು ಉಚ್ಚ ನ್ಯಾಯಾಲಯದ ಮೆಟ್ಟಿಲು ಹತ್ತಿಸಿದ್ದು ತಮ್ಮ ಪಕ್ಷವೇ ಅಲ್ಲವೇ? ಅವರ ಪರವಾಗಿ ನ್ಯಾಯಾಲಯದಲ್ಲಿ ವಾದಿಸಿದ ವಕೀಲರು ಸಹ ತಮ್ಮ ಪಕ್ಷದ ಸದಸ್ಯರೇ ಅಲ್ಲವೇ? ವಕೀಲರು ಯಾರ ಕೇಸನ್ನಾದರೂ ನಡೆಸಬಹುದೆಂಬುದೇ ನಿಜವಾದರೂ, ಅವರ ಶುಲ್ಕವನ್ನು ಭರಿಸಿದವರು ಯಾರು? 

ಸುಪ್ರೀಂ ಆದೇಶದಂತೆ ರಾಜಿನಾಮೆ ನೀಡಲು ಆ ಅತೃಪ್ತ ಆತ್ಮಗಳು ಮುಂಬೈನಿಂದ ಬೆಂಗಳೂರಿಗೆ, ಬೆಂಗಳೂರಿನಿಂದ ಮುಂಬೈಗೆ ವಿಶೇಷ ವಿಮಾನದಲ್ಲಿ ಕರೆದುಕೊಂಡು ಹೋಗಿ ಬರುವುದನ್ನು ಮಾಡಿದ್ದು ತಮ್ಮ ಪಕ್ಷದವರಿಗೆ ಸೇರಿದ ನಾಯಕರೊಬ್ಬರ ವಿಮಾನದಲ್ಲಿಯೇ ಅಲ್ಲವೇ? ಆ ಸಂಸ್ಥೆಯ ವಿಮಾವನ್ನು ಯಾರು ಬೇಕಾದರು ಬಾಡಿಗೆಗೆ ಪಡೆಯಬಹುದೆನ್ನುವುದಾರೆ ಆ ಬಾಡಿಗೆಯನ್ನು ಭರಿಸಿದವರು ಯಾರು? 

ಅತೃಪ್ತ ಶಾಸಕರುಗಳ ಪ್ರಯಾಣದ ವೆಚ್ಚವನ್ನು ಮುಂಬೈ ವಾಸದ ವೆಚ್ಚವನ್ನು ತಮ್ಮಪಕ್ಷ ಭರಿಸಿಲ್ಲವೆಂದಾದರೆ, ಭರಿಸಿದ್ದು ಯಾರೆಂಬುದಾದರೂ ತಮಗೆ ತಿಳಿದಿರಲೇ ಬೇಕಲ್ಲವೇ? ಹಾಗೆ ಭರಿಸಿದ ಹಣದ ಮೂಲ ಯಾವುದು? 

ಕಳೆದ ಲೋಕಸಭಾ ಚುನಾವಣೆಗಳ ಸಮಯದಲ್ಲಿ ದಿಡೀರನೆ ಸಕ್ರಿಯವಾಗಿದ್ದ ನಿಮ್ಮದೇ ಕೇಂದ್ರ ಸರಕಾರದ ಅಧೀನದಲ್ಲಿರುವ ಆದಾಯ ತೆರಿಗೆ ಇಲಾಖೆ ನಿಮ್ಮೀ ರಾಜಕೀಯ ಚಟುವಟಿಕೆಗಳ ಹಿಂದಿರಬಹುದಾದ ಹಣದ ವಹಿವಾಟನ್ನು ಗಮನಿಸಲಿಲ್ಲವೇ? ಇಲ್ಲ ಗಮನಿಸಿಯೂ ಮೌನವಾಗುಳಿಯಿತೆ? 

ರಾಜ್ಯದ ಮತದಾರರ ಸಂಕಷ್ಟದ ಬಗ್ಗೆ ಮಾತನಾಡುವ ತಾವು ಈ ಹದಿನೈದು ಶಾಸಕರ ಗೈರಿನಲ್ಲಿ ಅವರ ಕ್ಷೇತ್ರದ ಮತದಾರರು ಪಟ್ಟಿರಬಹುದಾದ ಸಂಕಷ್ಟಗಳಿಗೇನು ಉತ್ತರ ಕೊಡಬಲ್ಲಿರಿ? 

ನಿಜ, ತಾಂತ್ರಿಕವಾಗಿ ಈ ಯಾವ ಪ್ರಶ್ನೆಗಳಿಗೂ ಉತ್ತರ ಕೊಡಬೇಕಾಗದ ಅಗತ್ಯ ನಿಮಗಿಲ್ಲವೆಂದು ನೀವು ಬಾವಿಸಬಹುದು. ಆದರೆ ಮುಂದೆ ನಡೆಯಬಹುದಾದ ಚುನಾವಣೆಗಳಲ್ಲಿ ತಾವು ಮತದಾರರ ಮುಂದೆ ಹೋದಾಗ ಈ ಪ್ರಶ್ನೆಗಳಿಗೆ ಉತ್ತರ ಕೊಡಬೇಕಾದ ನೈತಿಕತೆಯಂತೂ ನಿಮಗಿರಬಹುದೆಂದು ನಿರೀಕ್ಷಿಸುತ್ತೇವೆ. ಇಂತಹುದೇ ಪ್ರಶ್ನೆಗಳನ್ನು ಕಾಂಗ್ರೆಸ್ ಮತ್ತು ಜನತಾದಳಗಳಿಗೂ ಜನ ಕೇಳಲಿದ್ದಾರೆ. 

ಆದರೆ ಈ ದೇಶದ ರಾಜಕಾರಣದ ದುರಂತವೆಂದರೆ ಕಾಂಗ್ರೆಸ್, ಬಾಜಪ, ಜನತಾದಳ ಸೇರಿದಂತೆ ಯಾವ ರಾಜಕೀಯ ಪಕ್ಷವೂ ಜನತೆಗೆ ಉತ್ತರದಾಯಿತ್ವವಾಗಿಲ್ಲದೆ ಇರುವುದು. 

ಶಕ್ತಿ ರಾಜಕಾರಣದ ಪಗಡೆಯಾಟದಲ್ಲಿ ನೈತಿಕತೆಯ ಮಾತಾಡುವುದೇ ನಮ್ಮ ಮೂರ್ಖತನವೆಂದು ನೀವನ್ನಬಹುದು. ನಿಜ, ಆದರೆ ಅಂತಹ ಮೂರ್ಖತನವನ್ನು ನಾವೀಗ ಮಾಡದೆ ಇದ್ದರೆ ನಮ್ಮಿ ಪ್ರಜಾಸತ್ತೆಯನ್ನು ಉಳಿಸಿಕೊಳ್ಳುವುದು ಕಷ್ಟ! 

ಮಧುಸೂದನ್ ರವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

No comments:

Post a Comment