May 18, 2019

ಅವಿಸ್ಮರಣೀಯ ಅರುಣಾಚಲ ಅದರ ಚಿತ್ರ -ವಿಚಿತ್ರ ಇತಿಹಾಸ: ಪುಸ್ತಕ ವಿಮರ್ಶೆ

ನಂದಕುಮಾರ್. ಕೆ. ಎನ್
ಅರುಣಾಚಲ ಪ್ರದೇಶ ಈಗ ಭಾರತದ ಅಂಗವನ್ನಾಗಿಯೇ ನೋಡಲಾಗುತ್ತಿದೆ. ಆದರೆ ಚೀನ ಅದನ್ನು ಈಗಲೂ ಮಾನ್ಯ ಮಾಡಿಲ್ಲ. ಅದರ ಬಗ್ಗೆ ವಿವಾದಗಳು ಈಗಲೂ ಭಾರತ, ಚೀನ ನಡುವೆ ಇವೆ. ಅರುಣಾಚಲ ಪ್ರದೇಶವನ್ನು ಭಾರತದ ಭಾಗವಾಗಿಸುವ ಪ್ರಕ್ರಿಯೆಗಳು ಬ್ರಿಟೀಷ್ ಭಾರತದಲ್ಲೇ ಶುರುವಾಗಿದ್ದವು. ಆದರೆ ಅದಕ್ಕೆ ಅಲ್ಲಿನ ಸ್ಥಳೀಯ ಸ್ವಯಂಮಾಡಳಿತ ಗಣ ವ್ಯವಸ್ಥೆಯ ಬುಡಕಟ್ಟು ಗುಂಪುಗಳು ಪ್ರಬಲವಾದ ಪ್ರತಿರೋಧ ಒಡ್ಡಿದ್ದವು. ಅವರು ಅನುಮತಿಸದೇ ಅವರ ಪ್ರದೇಶದೊಳಕ್ಕೆ ಯಾರೂ ಹೋಗುವಂತಿರಲಿಲ್ಲ. ಹೋದವರು ಜೀವಂತವಾಗಿ ವಾಪಾಸು ಬರಲಾಗುತ್ತಿರಲಿಲ್ಲ. ಬ್ರಿಟೀಷ್ ಅಧಿಕಾರಿಯೊಬ್ಬ ಆ ಪ್ರದೇಶವನ್ನು ಗ್ರಹಿಸಿ ಬ್ರಿಟೀಷ್ ಭಾರತದ ಭಾಗವಾಗಿಸಿಕೊಳ್ಳುವ ಇರಾದೆಯಿಂದ ಯಾವುದೇ ಅನುಮತಿ ಇಲ್ಲದೇ ಅಲ್ಲಿಗೆ ತೆರಳಿ ಸಾವಿಗೀಡಾಗಿದ್ದು ಬ್ರಿಟೀಷ್ ಆಡಳಿತವನ್ನು ಕೆರಳಿಸಿತ್ತು. ಆ ಪ್ರದೇಶವನ್ನು ಕೈವಶ ಮಾಡಿಕೊಳ್ಳುವ ಪ್ರಕ್ರಿಯೆಗಳು ಅಲ್ಲಿಂದ ಚುರುಕುಗೊಂಡವು ಎಂದು ಹೇಳಬಹುದು. ಅಲ್ಲಿ ಸ್ವಾಯತ್ತ ಗಣ ವ್ಯವಸ್ಥೆಯಿರುವ ಬುಡಕಟ್ಟುಗಳು ಸ್ವಯಂಪೂರ್ಣವಾಗಿ ಜೀವನ ಕಟ್ಟಿಕೊಂಡಿದ್ದರೂ ಆ ಪ್ರದೇಶದ ಮೇಲೆ ಚೀನ ಹಾಗೂ ಟಿಬೆಟ್ ನ ಹಿತಾಸಕ್ತಿಗಳೂ ಇದ್ದವು. ಟಿಬೆಟ್ ನಂತರ ಚೀನಾದ ಪ್ರದೇಶವಾಯಿತು. ಇದರ ಮಧ್ಯೆ ಆ ಪ್ರದೇಶದ ಬುಡಕಟ್ಟು ಜನರ ಅಭಿಪ್ರಾಯಗಳಿಗೆ ಯಾವುದೇ ಬೆಲೆ ನೀಡಲಿಲ್ಲ. ಹಾಗಾಗಿ ಆ ಸಮುದಾಯಗಳಲ್ಲಿ ಹಲವು ಈಗಲೂ ಭಾರತವನ್ನೂ ಅಂಗೀಕರಿಸಲಾಗದಂತಹ ಸ್ಥಿತಿಯಲ್ಲಿಯೇ ಇವೆ.

1962ರಲ್ಲಿ ಭಾರತ ಬ್ರಿಟೀಷರು ಗಡಿಯೆಂದು ಗುರುತಿಸಿದ್ದ ಮೆಕ್ ಮೋಹನ್ ರೇಖೆಯನ್ನೂ ದಾಟಿ ತನ್ನ ಸೈನಿಕ ಶಿಬಿರಗಳನ್ನು ಸ್ಥಾಪಿಸತೊಡಗಿತು. ಚೀನದೊಂದಿಗೆ ಭಾರತ ಯುದ್ಧಕ್ಕೆ ಇಳಿದಾಗ ಚೀನ ಭಾರತದ ಸೇನೆಯನ್ನು ಸೋಲಿಸಿ ಹಿಂದ್ಸರಿಸಿ ಈಗಿನ ಅಸ್ಸಾಂನ ಹಲವು ಪ್ರದೇಶಗಳನ್ನು ಚೀನ ಹಿಡಿದುಕೊಂಡಿತ್ತು. ಆಗ ಅದನ್ನು ನೇಫಾ ಪ್ರದೇಶವೆಂದು ಕರೆಯಲಾಗುತ್ತಿತ್ತು. ಯುದ್ಧದಲ್ಲಿ ಗೆದ್ದರೂ ನಂತರ ಚೀನ ಆ ಪ್ರದೇಶಗಳನ್ನು ಭಾರತಕ್ಕೆ ಬಿಟ್ಟುಕೊಟ್ಟಿತ್ತು. ಆದರೆ ಗಡಿ ನಿರ್ಣಯಿಸಲು ತೆರೆದ ಮನಸ್ಸಿನಿಂದ ಬಗೆಹರಿಸುವ ಆಸಕ್ತಿ ತೋರಿತ್ತು. ಆದರೆ ಅದು ಭಾರತದ ರಾಜಕೀಯ ಪಕ್ಷಗಳು ಇನ್ನಿತರರ ಹಿತಾಸಕ್ತಿಗಳ ಕಾರಣ ಕಾರ್ಯಗತವಾಗದೇ ಉಳಿದುಹೋಯಿತು.

1965 ರಲ್ಲಿ ಈ ಪ್ರದೇಶವನ್ನು ಭಾರತದ ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿತು.

1972 ರಲ್ಲಿ ಈ ಪ್ರದೇಶವನ್ನು ಅರುಣಾಚಲ ಪ್ರದೇಶವೆಂದು ನಾಮಕರಣವನ್ನೂ ಮಾಡಲಾಯಿತು. 1987ರಲ್ಲಿ ಈ ಪ್ರದೇಶಕ್ಕೆ ರಾಜ್ಯದ ಸ್ಥಾನಮಾನವನ್ನು ನೀಡಲಾಯಿತು. ಆದರೆ ಚೀನ ಇದನ್ನು ದಕ್ಷಿಣ ಟಿಬೇಟ್ ಎಂದು ಈಗಲೂ ಕರೆಯುತ್ತಿದೆ. ಚೀನ ಗಡಿ ಸಮಸ್ಯೆಯನ್ನು ಸೌಹಾರ್ಧಯುತವಾಗಿ ಬಗೆಹರಿಸಿಕೊಳ್ಳಲು ಚೌ ಎನ್ ಲಾಯ್ ಮೂಲಕ ಮುಂದಕ್ಕೆ ಬಂದರೂ ಅಮೇರಿಕದ ಗೂಢಚಾರ ಸಂಸ್ಥೆ ಸಿ ಐ ಎ ಕುಮ್ಮಕ್ಕಿನಿಂದಾಗಿ ಭಾರತದ ಅಧಿಕಾರಿಗಳು ಅದನ್ನು ಆಗಗೊಡಲಿಲ್ಲ. ನೆಹರೂ ಕೂಡ ಹೆಚ್ಚು ಆಸಕ್ತಿ ವಹಿಸಲಾಗದೇ ಹೋದರು. ಹಾಗಾಗಿ ಗಡಿವಿವಾದ ಅಂದಿನಿಂದ ಇಂದಿನವರೆಗೂ ಹಾಗೇ ಜೀವಂತವಾಗಿರಿಸಲಾಗಿದೆ.
ಈ ಬಗ್ಗೆ ಸಮಗ್ರವಾದ ವಿವರಗಳುಳ್ಳ ಪುಸ್ತಕವೊಂದನ್ನು ಯಡೂರ ಮಹಾಬಲರವರು ರಚಿಸಿದ್ದಾರೆ. ‘ಅವಿಸ್ಮರಣೀಯ ಅರುಣಾಚಲ’ ಎಂಬ ಶೀರ್ಷಿಕೆಯ ಇದನ್ನು ಮೈಸೂರಿನ ಸಮೈಕ್ಯ ಪ್ರಕಾಶನದವರು ಹೊರತಂದಿದ್ದಾರೆ’ ‘ಅದರ ಚಿತ್ರ ವಿಚಿತ್ರ ಇತಿಹಾಸ’ ಎಂಬ ಉಪಶೀರ್ಷಿಕೆಯೂ ಇದೆ. ನೂರಾರು ಪತ್ರ ವ್ಯವಹಾರಗಳು, ದಾಖಲೆಗಳು, ಹತ್ತು ಹಲವು ಒಪ್ಪಂದಗಳು, ಘಟನಾವಳಿಗಳು, ಹೇಳಿಕೆಗಳು ಹೀಗೆ ಬಲವಾದ ಸಾಕ್ಷ್ಯಾಧಾರಗಳನ್ನು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಹಲವಾರು ದಾಖಲೆಗಳನ್ನು ಸಂಗ್ರಹಿಸಿ ಅಧ್ಯಯನ ಮಾಡಿ ಸಾಕಷ್ಟು ಶ್ರಮ ವಹಿಸಿ 304 ಪುಟಗಳ ಈ ಕೃತಿಯನ್ನು ರಚಿಸಿರುವುದು ಯಾರಿಗೇ ಆದರೂ ಕೃತಿ ಮೇಲೆ ಕಣ್ಣಾಡಿಸಿದಾಗಲೇ ಗೊತ್ತಾಗುತ್ತದೆ.
“‘ಅಸ್ಸಾಮ್’ ಎನ್ನುವುದು ‘ಅಹೋಮ್’ ಹಾಗೂ ‘ಸಮ’ ಎಂಬ ಎರಡು ಶಬ್ದಗಳ ಸಂಯೋಜನೆಯಿಂದ ಆದುದು. ಸಮ’ ಎಂದರೆ ಬೆಂಗಾಳಿ ಭಾಷೆಯಲ್ಲಿರುವ ಸಮತಟ ಎನ್ನುವ ಶಬ್ದಕ್ಕೆ ಸಮನಾಗಿದ್ದು ಸಮತಟ್ಟಾದ ಭೂ ಪ್ರದೇಶ ಎಂದರ್ಥ. ‘ಅಹೋಮ್’ ಎಂದರೆ ಅಸಮಾನರು ಎಂದರ್ಥ”

“ಅಂದಿನ ಅಸ್ಸಾಂ ಇಂದು ಉಳಿದಿಲ್ಲ1947ರಲ್ಲಿ ಭಾರತದ ವಿಭಜನೆಯಾದಾಗ ಕರೀಂ ಗಂಜ್ ಉಪವಿಭಾಗವನ್ನು ಬಿಟ್ಟು ಉಳಿದ ಸಿಲ್ಹೆಟ್ ಜಿಲ್ಲೆ ಪೂರ್ತಿಯಾಗಿ ಪೂರ್ವ ಪಾಕಿಸ್ತಾನಕ್ಕೆ ( ಈಗಿನ ಬಾಂಗ್ಲಾದೇಶಕ್ಕೆ ) ಹೋಯಿತು. 1963ರಲ್ಲಿ ನಾಗಾ ಗುಡ್ಡಗಾಡು ಜಿಲ್ಲೆ ಪ್ರತ್ಯೇಕ ರಾಜ್ಯವಾಯಿತು. ನಂತರ ಸ್ಯೂನ್ಯಾಂಗ್ ಜಿಲ್ಲೆಯ ಒಂದು ಭಾಗವನ್ನು ನಾಗಾಲ್ಯಾಂಡಿಗೆ ಸೇರಿಸಲಾಯಿತು. ಅಸ್ಸಾಂನ ಕಾಸಿ, ಜೈಂತಿಯಾ, ಗ್ಯಾರೋ ಗುಡ್ಡಗಾಡು ಪ್ರದೇಶಗಳು ಮೇಘಾಲಯಕ್ಕೆ ಹೋದವು. ಮಣಿಪುರ ಮಿಜೋರಾಂ ಪ್ರದೇಶಗಳು ಪ್ರತ್ಯೇಕ ರಾಜ್ಯವಾಯಿತು. ಹೆಚ್ಚೂ ಕಡಿಮೆ ಅಂದಿನ ಅಸ್ಸಾಂನ ಅರ್ದಕ್ಕಿಂತ ಸ್ವಲ್ಪ ಜಾಸ್ತಿ ಉಳಿದಿದೆ ಅಷ್ಟೇ.”

“ಮೆಕ್ ಮೋಹನ್ ಮತ್ತು ಲೋಂಚೆನ್ ಶತ್ರ ಇಬ್ಬರೇ ಇನಿಷಿಯಲ್ ಮಾಡಿರುವ 1914ರ ಒಡಂಬಡಿಕೆಗೆ ಲಗತ್ತಿಸಿದ ಟಿಪ್ಪಣಿಯಲ್ಲಿಯೂ ಒಪ್ಪಂದದ ಪಕ್ಷಗಳ ನಡುವೆ ಟಿಬೇಟ್ ಚೈನಾದ ಭೂಭಾಗವೆನ್ನುವ ತಿಳುವಳಿಕೆ ಇದೆ”

ಇಂತಹ ತಿಳಿಯಬೇಕಾದ ನೂರಾರು ಮಾಹಿತಿಗಳನ್ನು ಈ ಪುಸ್ತಕ ಒಳಗೊಂಡಿದೆ

ದಾಖಲೆಗಳು, ಘಟನಾವಳಿಗಳು, ಪತ್ರ ವ್ಯವಹಾರ ಮೊದಲಾದವನ್ನು ಸರಿಯಾದ ರೀತಿಯಲ್ಲಿ ಜೋಡಿಸಿಕೊಂಡು ಅಗತ್ಯ ವಿಶ್ಲೇಷಣೆಯೊಂದಿಗೆ ವಿಚಾರಗಳನ್ನು ಕ್ರಮವಾಗಿ ಮಂಡಿಸದೇ ಹೋಗಿರುವುದೇ ಈ ಕೃತಿಯ ದೊಡ್ಡ ಕೊರತೆಯಾಗಿದೆ. ಭಾಷಾ ಬಳಕೆ ಕೂಡ ಹಲವು ಕಡೆಗಳಲ್ಲಿ ಸ್ವಲ್ಪ ಕ್ಲಿಷ್ಟಕರವಾಗಿದೆ. ಹಾಗಾಗಿ ಓದುಗರು ಸ್ವಲ್ಪ ತಿಣುಕಾಡಿ ಓದಬೇಕಾದ ಮಹತ್ವದ ಕೃತಿಯಾಗಿದೆ ಇದು. ಅರುಣಾಚಲ ಪ್ರದೇಶವನ್ನು ಭಾರತ ತನ್ನ ಭಾಗವನ್ನಾಗಿ ಮಾಡಿದ ಮಾಹಿತಿಗಳುಳ್ಳ, ದಾಖಲೆಗಳಿಂದ ಕೂಡಿರುವ ಇಂತಹ ಚಾರಿತ್ರಿಕ ಮಹತ್ವವಿರುವ ಕೃತಿ ಕನ್ನಡದಲ್ಲಿ ಇಲ್ಲ. ಹಾಗಾಗಿ ಈ ಕೃತಿಯ ಪ್ರಾಮುಖ್ಯತೆ ಹೆಚ್ಚಿದೆ. ರಾಷ್ಟ್ರೀಯ ಆಶೋತ್ತರಗಳನ್ನು ಹಾಗೂ ಬಹುತ್ವವನ್ನು ದಮನಿಸುತ್ತಾ ಕೇಂದ್ರೀಕರಣದೆಡೆಗೆ ಭಾರತದ ಆಳುವಶಕ್ತಿಗಳು ವೇಗವಾಗಿ ದೌಡಾಯಿಸುತ್ತಿರುವ ಈ ಸಂದರ್ಭದಲ್ಲಿ ಇಂತಹ ಮಾಹಿತಿಗಳು ಭಾರಿ ಮಹತ್ವವನ್ನು ಪಡೆಯುತ್ತವೆ.

No comments:

Post a Comment