Apr 28, 2019

ಚುನಾವಣಾ ನೀತಿಸಂಹಿತೆ ಎಂಬ ಪ್ರಹಸನ

ಕು.ಸ.ಮಧುಸೂದನರಂಗೇನಹಳ್ಳಿ
ನಮ್ಮದು ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ.

ಇಲ್ಲಿನ ಮತದಾರರ ಸಂಖ್ಯೆ ತೊಂಭತ್ತು ಕೋಟಿ.ಇಪ್ಪತ್ತು ಲಕ್ಷ ಮತಯಂತ್ರಗಳು. ಒಂದೂಕಾಲು ಕೋಟಿಗೂ ಅಧಿಕ ಮತಗಟ್ಟೆಯನ್ನು ನಿರ್ವಹಿಸುವ ಸಿಬ್ಬಂದಿಗಳು, ಎರಡೂವರೆ ಕೋಟಿಗೂ ಅಧಿಕ ಭದ್ರತಾ ಸಿಬ್ಬಂದಿ. ಅಧಿಕೃತವಾಗಿ ಇಷ್ಟಲ್ಲದೆ ಚುನಾವಣೆಗಳಿಗೆ ಪರೋಕ್ಷವಾಗಿ ನೆರವಾಗುವ ಮೂರು ಕೋಟಿ ಇತರೇ ನೌಕರರು. ಇಷ್ಟು ದೊಡ್ಡ ಮಟ್ಟದ ಚುನಾವಣಾ ವ್ಯವಸ್ಥೆ ಹೊಂದಿರುವ ನಮ್ಮ ದೇಶದಲ್ಲಿ ಇದುವರೆಗು ಬಹುತೇಕ ಚುನಾವಣೆಗಳು ಶಾಂತಿಯುತವಾಗಿ (ಜಮ್ಮು ಮತ್ತು ಕಾಶ್ಮೀರದಲ್ಲಿ ಕೆಲವು ಚುನಾವಣೆಗಳನ್ನು ಹೊರತು ಪಡಿಸಿದರೆ) ನಡೆದಿದ್ದು ತಮ್ಮ ವಿಸ್ವಾಸಾರ್ಹತೆಯನ್ನು ಉಳಿಸಿಕೊಂಡು ಬರುತ್ತಿವೆ.

ಅದರೆ ಈ ಬಾರಿ ನಡೆದ ಇದುವರೆಗಿನ ಮೂರು ಹಂತದ ಚುನಾವಣೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಚುನಾವಣಾ ನೀತಿ ಸಂಹಿತೆ ಎನ್ನುವುದು ಹಾಸ್ಯಾಸ್ಪದ ವಿಷಯವಾಗಿ ಬಿಟ್ಟಿದೆ. ತಾನೆ ವಿಧಿಸಿದ ಚುನಾವಣಾ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವಲ್ಲಿ ಚುನಾವಣಾ ಆಯೋಗ ವಿಫಲವಾಗುತ್ತಿಯೆಂಬ ಅನುಮಾನ ತಲೆದೋರುತ್ತಿದೆ. ನೀತಿ ಸಂಹಿತೆ ಉಲ್ಲಂಘಿಸುವವರ ವಿರುದ್ದ ಕಠಿಣ ಕ್ರಮಗಳನ್ನು ಕೈಗೊಳ್ಳಬಹುದಾದಂತ ದತ್ತ ಅಧಿಕಾರವನ್ನು ಹೊಂದಿರುವ ಆಯೋಗ ಯಾಕೊ ಈ ಅಧಿಕಾರವನ್ನು ಉಪಯೋಗಿಸಿಕೊಳ್ಳುವಲ್ಲಿ ಆಸಕ್ತಿಯನ್ನೇನು ತೋರುತ್ತಿಲ್ಲ. ಚುನಾವಣಾ ಆಯೋಗದ ಈ ಕ್ರಿಯಾಹೀನತೆಯನ್ನು ಕಂಡ ಸುಪ್ರೀಂ ಕೋರ್ಟ ಮದ್ಯಪ್ರವೇಶಿಸಿ ನೀತಿಸಂಹಿತೆ ಉಲ್ಲಂಘಿಸಿದವರ ವಿರುದ್ದಕ್ರಮ ತೆಗೆದುಕೊಳ್ಳಲು ಆಯೋಗಕ್ಕೆ ಸೂಚನೆ ನೀಡಬೇಕಾಗಿ ಬಂದಿತು. ಉದಾಹರಣೆಗೆ ಚುನಾವಣಾ ಪ್ರಚಾರದಲ್ಲಿ ರಾಷ್ಟ್ರದ ರಕ್ಷಣೆ ಮತ್ತು ಸೈನ್ಯದ ಹೆಸರನ್ನು ಆಡಳಿತಪಕ್ಷವು ವ್ಯಾಪಕವಾಗಿ ಬಳಸಿಕೊಳ್ಳುತ್ತಿರುವಾಗ, ಅದನ್ನು ವಿರೋಧಿಸುವ ನೆಪದಲ್ಲಿ ವಿರೋಧ ಪಕ್ಷಗಳು ಸಹ ಯಾವ ಎಗ್ಗೂ ಇಲ್ಲದೆ ಸೈನ್ಯದ ವಿಷಯವನ್ನು ತಮ್ಮ ಪ್ರಚಾರ ಕಾರ್ಯದಲ್ಲಿ ಬಳಸಿಕೊಂಡಾಗ ಮಧ್ಯ ಪ್ರವೇಶಿಸಿದ ಸುಪ್ರೀಂ ಕೋರ್ಟ ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ಆಯೊಗಕ್ಕೆ ಸೂಚಿಸಿದಾಗ, ತನಗೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಇಲ್ಲವೆಂದು ಆಯೋಗ ಕೈ ಚೆಲ್ಲಿದ್ದು ನೀತಿ ಸಂಹಿತೆಯ ಮತ್ತಷ್ಟು ಉಲ್ಲಂಘನೆಗೆ ಕಾರಣವಾಗುತ್ತ ಹೋಯಿತು. ತಮ್ಮ ಪ್ರಚಾರ ಬಾಷಣಗಳಲ್ಲಿ ಜಾತಿ, ದರ್ಮ, ದೇವರುಗಳ ಹೆಸರುಗಳನ್ನು ಪ್ರಸ್ತಾಪಿಸಿದ್ದಕ್ಕೆ ಬಹುಜನಪಕ್ಷದ ಮಾಯಾವತಿಯವರಿಗೆ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ ಅವರಿಗೆ ಕೆಲ ದಿನಗಳ ಪ್ರಚಾರ ನಿರ್ಬಂದನೆ ವಿದಿಸಿದ್ದು ಸಹ ಕೋರ್ಟಿನ ಮದ್ಯಪ್ರವೇಶದ ಕಾರಣದಿಂದಾಗಿ. ತನಗೆ ಕ್ರಮ ಕೈಗೊಳ್ಳುವ ಅಧಿಕಾರ ಇಲ್ಲವೆಂದು ಹೇಳುತ್ತಿರುವ ಆಯೋಗದ ಮಾತು ಸುಳ್ಳೆಂದು ಸಾರ್ವಜನಿಕರಿಗೆ ಗೊತ್ತುರುವ ವಿಷಯ. ಆದರೆ ಆಯೋಗ ಮಾತ್ರ ತನ್ನ ಕೈಲಿ ಅಧಿಕಾರ ಇಲ್ಲವೆಂಬ ಹುಸಿನಾಟಕವನ್ನಾಡುತ್ತಲೇ ಬರುತ್ತಿದೆ. ತೊಂಭತ್ತರ ದಶಕದಲ್ಲಿ ಚುನಾವಣೆಯಲ್ಲಿ ಹಿಂದುತ್ವದ ವಿಚಾರವನ್ನು ಬಳಸಿಕೊಂಡು ಉದ್ರೇಕಕಾರಿ ಪ್ರಚಾರ ಮಾಡಿದ್ದಕ್ಕಾಗಿ ಈ ಹಿಂದೆ ಮಹಾರಾಷ್ಟ್ರದ ಶಾಸಕರೊಬ್ಬರನ್ನು ಅನರ್ಹಗೊಳಿಸಲಾಗಿತ್ತು ಎಂಬುದನ್ನು ಆಯೋಗ ಇದೀಗ ಮರೆತಂತೆ ವರ್ತಿಸುತ್ತಿದೆ. ಹಾಗೆಯೇ ಹಿಂದೆ ಟಿ. ಎನ್. ಶೇಷನ್ ಚುನಾವಣಾಧಿಕಾರಿಯಾಗಿದ್ದಾಗ ಈ ತೆರನಾದ ಉದ್ರೇಕಕಾರಿ ಪ್ರಚಾರ ಭಾಷಣಗಳನ್ನು ನಿಯಂತ್ರಿಸಲು ಎಲ್ಲ ಪ್ರಚಾರ ಸಭೆಗಳ ವೀಡಿಯೊ ದಾಖಲೆ ಮಾಡಿಸುವ ಕ್ರಮ ಕೈಗೊಂಡಿದ್ದರು. ಆದರಿವತ್ತು ತಂತ್ರಜ್ಞಾನ ಮತ್ತಷ್ಟು ಮುಂದುವರೆದಿದ್ದರೂ ಸಹ ನಮ್ಮ ಆಯೋಗ ಅವ್ಯಾವನ್ನು ಬಳಸಿಕೊಳ್ಳುವ ಇಚ್ಚಾ ಶಕ್ತಿ ತೋರಿಸುತ್ತಿಲ್ಲ. ಜೊತೆಗೆ ಅದು ನಿಯಮಾವಳಿಗಳನ್ನು ಜಾರಿಗೆ ತರುವಲ್ಲಿ ಸ್ಪಷ್ಟವಾಗಿ ನಿರ್ಲಕ್ಷ್ಯ ತೋರುತ್ತಿರುವುದು ಪದೇ ಪದೇ ಸಾಭೀತಾಗುತ್ತಿದೆ. ಇದಕ್ಕೆ ಕೆಲವು ಉದಾಹರಣೆಗಳನ್ನು ನಾವು ನೋಡಬಹುದಾಗಿದೆ. ಸೇನೆಯ ವಿಚಾರ ಬಳಸದಂತೆ ನಿರ್ಬಂಧವಿದ್ದರೂ ಮೊನ್ನೆ ಪ್ರದಾನಿಯವರು ಪ್ರಚಾರ ಬಾಷಣ ಮಾಡುತ್ತ, ಪಾಕಿಸ್ತಾನದ ವಿಚಾರ ಪ್ರಸ್ತಾಪಿಸುತ್ತ ನಮ್ಮ ಕೈಲಿಯೂ ಅಣುಬಾಂಬು ಇದೆಯೆಂದು ನಾನು ಪಾಕಿಗೆ ಎಚ್ಚರಿಕೆ ನೀಡಿದ್ದರಿಂದಲೇ ಅವರು ನಮ್ಮ ಪೈಲಟ್ ಅವರನ್ನು ಬಿಟ್ಟುಕಳಿಸಿದ್ದು ಎಂದು ಹೇಳಿ ಮತ್ತೆ ಸೇನೆಯ ಬಗ್ಗೆ ಮಾತಾಡಿದ್ದಾರೆ. ಈ ಬಗ್ಗೆ ಆಯೋಗ ಗಾಢಮೌನ ತಾಳಿದೆ. ಇನ್ನು ಗುಜರಾತಿನ ಶಾಸಕರೊಬ್ಬರು ಎಲ್ಲ ಮತಗಟ್ಟೆಗಳಲ್ಲಿಯೂ ನಾವು ಕ್ಯಾಮೆರಾ ಅಳವಡಿಸಿದ್ದು ನೀವು ಯಾರಿಗೆ ಮತ ಚಲಾಯಿಸುತ್ತೀರೆಂಬುದು ನಮಗೆ ಗೊತ್ತಾಗುತ್ತದೆಯೆಂದು ಮತದಾರರಿಗೆ ಸಾರ್ವಜನಿಕವಾಗಿ ಬೆದರಿಕೆ ಹಾಕಿದ್ದರೂ ಚುನಾವಣಾ ಆಯೋಗ ಮಗುಮ್ಮಗಿ ಕೂತಿದೆ. ಹಾಗೆಯೇ ಮದ್ಯಪ್ರದೇಶದ ಸಂಸತ್ ಸದಸ್ಯರೊಬ್ಬರು ನೀವುಗಳು ನನಗೆ ಮತಹಾಕದಿದ್ದರೆ ನಿಮ್ಮ ಪುಣ್ಯವನ್ನೆಲ್ಲ ನಾನು ತೆಗೆದುಕೊಂಡು ನಿಮಗೆ ಪಾಪ ನೀಡುತ್ತೇನೆ ಎಂದು ಧರ್ಮದ ಹೆಸರಲ್ಲಿ ಬೆದರಿಕೆ ಹಾಕಿದ್ದನ್ನು ಆಯೋಗ ಗಂಭೀರವಾಗಿ ತೆಗೆದುಕೊಂಡಂತೆ ಕಾಣುತ್ತಿಲ್ಲ. ಇನ್ನು ಸಾದ್ವಿ ಪ್ರಗ್ಯಾ ಠಾಕೂರವರು ಪೋಲೀಸ್ ಅಧಿಕಾರಿ ಶ್ರೀಕರ್ಕರೆ ಅವರಿಗೆ ಸಾವು ಬಂದಿದ್ದೆ ನನ್ನ ಶಾಪದಿಂದ ಎಂದು ಹೇಳಿ ಮತದಾರರಲ್ಲಿ ಭಯ ಹುಟ್ಟಿಸುವ ಮಾತಾಡಿ ಮತದಾರರರಲ್ಲಿ ಭಯ ಬಿತ್ತಿದ್ದರೂ ಆಯೋಗ ಯಾವ ಕ್ರಮವನ್ನೂ ಕೈ ಗೊಳ್ಳುತ್ತಿಲ್ಲ.

ಇಷ್ಟಲ್ಲದೆ ಎಲ್ಲಾ ಪಕ್ಷಗಳ ನಾಯಕರುಗಳೂ ನೀತಿ ಸಂಹಿತೆಯನ್ನು ಸತತವಾಗಿ ಉಲ್ಲಂಘಿಸುತ್ತಲೇ ಪ್ರಚಾರ ಕಾರ್ಯ ನಡೆಸುತ್ತಿದ್ದಾರೆ. ಆದರೆ ಆಯೋಗ ಮಾತ್ರ ಮೌನವಾಗಿದ್ದು, ನಾಮಕಾವಸ್ತೆಗೆ ನೋಟೀಸು ನೀಡುವ ನಾಟಕವಾಡುತ್ತಿದೆ.

ಒಟ್ಟಿನಲ್ಲಿ ತಮ್ಮ ಸಾಧನೆಗಳನ್ನು, ಯೋಜನೆಗಳನ್ನು ಪ್ರಚುರ ಪಡಿಸಿ ಮತ ಕೇಳಬೇಕಾದ ನಾಯಕರುಗಳು ಅನಗತ್ಯ ವಿವಾದಗಳನ್ನು ಸೃಷ್ಠಿಸುವ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಾ ಹೋಗುತ್ತಿದ್ದರೆ, ಚುನಾವಣಾ ನೀತಿ ಸಂಹಿತೆ ಎನ್ನುವುದು ಅಪಹಾಸ್ಯದ ವಿಷಯವಾಗಿದೆ.

ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆ ಪ್ರಮುಖ ದೋಷವೆಂದರೆ ನೀತಿ ಸಂಹಿತೆ ಸರಿಯಾಗಿ ಜಾರಿಯಾಗದೆ ಇರುವುದಾಗಿದೆ. 

No comments:

Post a Comment