Mar 18, 2019

ತೆವಳುವ ಕಾಲ

ಕು.ಸ.ಮಧುಸೂದನ ರಂಗೇನಹಳ್ಳಿ
ಬೇಸಿಗೆ ಬಿಸಿಲಿಗೆ ಕಾದ ನೆಲದೊಳಗೆ 
ಉರಿಯುವ ಕಾಣದ ಕೆಂಪು 
ಮದ್ಯಾಹ್ನದ ಧಗೆಗೆ ಉಬ್ಬೆ ಹಾಕಿದಂತೆ 
ನಿಸ್ತೇಜವಾಗಿ ಬಿಳಿಚಿಕೊಂಡ ಕಣ್ಣುಗಳಿಗೆ ಜೊಂಪು 
ಹೊಲವಿದ್ದರೂ ಹಸಿರಿಲ್ಲ 
ಹಸಿರಿದ್ದರೂ ಉಸಿರಿಲ್ಲ 

ತೆವಳುವ ಮುಳ್ಳುಗಳ ಗಡಿಯಾರ ನಿಂತ ವರುಷ ಜ್ಞಾಪಕಕೆ ಬರುತಿಲ್ಲ 
ಮೊನ್ನೆ ಹಾರಿ ಹೋದ ಹಕ್ಕಿಗಳು 
ಹಿಂದಿನ ಸಾಯಂಕಾಲ ಬಾರದೆ ಇರುಳಿಡೀ ಖಾಲಿಯುಳಿದ ಗೂಡುಗಳು 
ಮೇಯಲು ಹೋದ ಹಸುವ ಹುಲಿ ಹಿಡಿಯಿತೊ 
ಹುಲಿ ಹೆಸರಲಿ ಮನುಜರೇ ಮುಕ್ಕಿದರೊ 
ಹುಡುಕುತ್ತ ಕಾಡಿಗೋದವನ ಹೆಣ ಹೊತ್ತು ತಂದರು 
ಹಾಡಿಯ ಜನ ಗೋಣಿತಾಟೊಳಗೆ ಸುತ್ತಿ 
--- 
ನಕ್ಷತ್ರಗಳಂತಿದ್ದವಳು ಕಾಣೆಯಾಗಿ ಕಾಲವಾಯಿತು 
ಹುಡುಕಬೇಕೆಂಬ ನೆದರಿದೆಯೇ ಯಾರಿಗಾದರೂ 
ಗೊಣಗುತ್ತಲೇ ವಂಶಾವಳಿಯ ಹೆಸರಿಡಿದು ಬಯ್ಯುತಿಹ ಮುದುಕಿಗೆ 
ಬಾಯಿ ಕೊಟ್ಟು ಉಳಿದವರುಂಟೆ 
ಹಾರಿ ಹೋದ ಹಕ್ಕಿಗಳು ಬಂದಾವು 
ಮೂಡದೆ ಉಳಿದ ಚುಕ್ಕಿಗಳು ಮೂಡಿಯಾವು 
ಹಾಡದೆ ಮೌನವಾಗುಳಿದ ಮಕ್ಕಳು ಹಾಡಿಯಾವು 
ಅಂತಹದೊಂದು ಹೊಸ ಮುಂಜಾನೆ 
ಊರ ತುಂಬಾ ಹಸಿರು ಚಿಗುರಿ 
ಮರಗಳ ತುಂಬ ಹೂಹಣ್ಣುಗಳ ಗೊನೆಗಳು ತೂಗಿ 
ಸೂರ್ಯನೂ ಶಿರಬಾಗಿ 
ಎಳೆಕಿರಣಗಳಲ್ಲಿ ಭೂಮಿಯ ಬೆಳಗುವನು 
ಬಿಸಾಕು ನಿನ್ನ ಕೊಡಲಿಗಳ 
ಅವಿತಿಟ್ಟ ಆಯುಧಗಳನೆಲ್ಲ 
ಗುಂಡಿ ತೆಗೆದು ಹೂತು ಹಾಕು 
ಅಲ್ಲಿವರೆಗೂ ಬಾ ಹತ್ತಿರದ ಕಾಡಿಗೋಗಿ 
ಔಷದಿ ಎಲೆಗಳ ಬಿಡಿಸಿ ತಂದು ಎದೆಯ ಗಾಯಗಳಿಗೆ ಮದ್ದು ಅರೆಯೋಣ 

ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment