Mar 28, 2019

ಒಂದು ಬೊಗಸೆ ಪ್ರೀತಿ - 11

ಡಾ. ಅಶೋಕ್.‌ ಕೆ. ಆರ್.‌
ಒಂದು ಬೊಗಸೆ ಪ್ರೀತಿಯ ಹಿಂದಿನ ಅಧ್ಯಾಯಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ.
ಕರೆಂಟು ಬಂದು ಟಿವಿ ಆನ್ ಆಯಿತು. ಯಾಕಿಷ್ಟು ಖುಷಿ. ಗೊತ್ತಾಗಲಿಲ್ಲ. ಸಾಗರ್ ಇಷ್ಟವಾಗುತ್ತಿದ್ದ. ಎಂಬಿಬಿಎಸ್ ಮಾಡಿದಾಗಲೇ ಇಷ್ಟವಾಗಿದ್ದ, ಈಗ ಮತ್ತಷ್ಟು ಇಷ್ಟವಾಗುತ್ತಿದ್ದಾನೆ. ಹತ್ತಿರವೂ ಆಗುತ್ತಿದ್ದಾನೆ. ಅವನ ಬಗ್ಗೆ ಇನ್ನೂ ಹೆಚ್ಚೇನು ಗೊತ್ತಿಲ್ಲ. ನನ್ನ ಬಗ್ಗೆಯೂ ಅವನಿಗೆ ಇನ್ನೂ ಹೆಚ್ಚು ತಿಳಿದಿಲ್ಲ. ಆದರೂ ಯಾಕವನು ಇಷ್ಟವಾಗಬೇಕು? ಕಪಟ ನಾಟಕವಿಲ್ಲದ ಅವನ ಮಾತುಗಳಿಂದಲೇ ಹೆಚ್ಚು ಇಷ್ಟವಾಗುತ್ತಾನೆ. ಇದ್ದದನ್ನು ಇದ್ದಂಗೆ ಹೇಳಿಬಿಡುವ ಅವನ ಗುಣ ಕೆಲವೊಮ್ಮೆ ಕಿರಿಕಿರಿ ಉಂಟುಮಾಡುತ್ತೆ. ಕೆಲವೊಮ್ಮೆ ಮಾತ್ರ. ಅವನನ್ನು ಭೇಟಿಯಾಗಿ ಎದುರಾಎದುರು ಕುಳಿತು ಮಾತನಾಡಬೇಕು ಅನ್ನಿಸುತ್ತೆ. ನನ್ನಿಡೀ ಜೀವನದ ಕತೆಯನ್ನು ಹೇಳಿಕೊಂಡು ಹಗುರಾಗಬೇಕು ಅನ್ನಿಸುತ್ತೆ. ಏನ್ ಮಾಡೋದು ಅವನಿರೋದು ಮಂಗಳೂರಿನಲ್ಲಿ ನಾನಿರೋದು ಮೈಸೂರಿನಲ್ಲಿ. ಪರೀಕ್ಷೆಯೆಲ್ಲ ಮುಗಿಸಿಕೊಂಡ ತಕ್ಷಣ ಮೈಸೂರಿಗೆ ಬಾ ತುಂಬಾ ಮಾತನಾಡಬೇಕು ನಿನ್ನೊಟ್ಟಿಗೆ ಅಂದುಬಿಡಲಾ? ಅವನ ಪರೀಕ್ಷೆ ಮುಗಿಯೋದಿಕ್ಕೆ ತಿಂಗಳುಗಟ್ಟಲೆ ಕಾಯಬೇಕು. ಮನದ ದುಗುಡವೇನೋ ಅಲ್ಲಿಯವರೆಗೂ ಕಾಯುತ್ತೆ, ಕಾಯೋ ತಾಳ್ಮೆ ನನಗೇ ಇಲ್ಲದಂತಾಗಿದೆ. ಮೆಸೇಜಿನಲ್ಲೇ ಸಾಧ್ಯವಾದಷ್ಟು ಹೇಳಿಬಿಡಬೇಕು ಇವತ್ತೇ. ಈಗಲೇ ಹೇಳಿಬಿಡೋಣ ಎಂದು ಮೊಬೈಲು ತೆಗೆದುಕೊಂಡೆ. ಮೆಸೇಜ್ ಟೈಪು ಮಾಡಲು ಪ್ರಾರಂಭಿಸುವಷ್ಟರಲ್ಲಿ ರಾಜೀವನ ಫೋನ್ ಬಂತು.

‘ಹಲೋ ಎಲ್ರೀ ಇದ್ದೀರ. ನಾಟ್ ರೀಚೆಬಲ್ ಬರ್ತಿತ್ತು’

“ಹನುಮಂತನ ಗುಂಡಿ ಫಾಲ್ಸಿಗೆ ಬಂದಿದ್ದೋ. ಅಲ್ಲಿ ನೆಟ್ ವರ್ಕ್ ಇರಲಿಲ್ಲ. ಈಗ ಮಿಸ್ಡ್ ಕಾಲ್ ತೋರಿಸ್ತು. ಫೋನ್ ಮಾಡ್ದೆ”
‘ಫ್ರೆಂಡ್ಸ್ ಜೊತೆ ಹೋದ ಮೇಲೆ ಇರೋ ಒಬ್ಳು ಹೆಂಡ್ತೀನ ಮರೆತೇಬಿಟ್ರಲ್ಲ’

“ಹೆ ಹೆ. ಹಂಗೆಲ್ಲ ಏನೂ ಇಲ್ಲ ಡಾರ್ಲಿಂಗ್”

‘ಎಷ್ಟು ಕುಡಿದಿದ್ದೀರ’

“ಇಲ್ಲಪ್ಪ”

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

‘ಫ್ರೆಂಡ್ಸ್ ಇದ್ದಾಗ ಡಾರ್ಲಿಂಗ್ ಅಂತೆಲ್ಲ ಅನ್ನಲ್ಲವಲ್ಲ ನೀವು. ಕುಡಿದಿರೋದು ಗ್ಯಾರಂಟಿ. ಎಷ್ಟು ಹೇಳಿ’

“ಇಲ್ಲಿ ಸ್ವಲ್ಪ ಚಳಿ ಇತ್ತಲ್ಲ. ಒಂದೇ ಒಂದು ಬೀರು ಅಷ್ಟೇ”

‘ಸರಿ ಸರಿ. ನಶೆ ಇಳಿದ ಮೇಲೆ ಫೋನ್ ಮಾಡಿ’ ಎಂದ್ಹೇಳಿ ಅವರ ಪ್ರತಿಕ್ರಿಯೆಗೂ ಕಾಯದೆ ಫೋನ್ ಕಟ್ ಮಾಡಿದೆ. ನನ್ನೊಬ್ಬಳನ್ನೇ ಬಿಟ್ಟು ಹೋಗಿ ಮಜಾ ಮಾಡ್ತಿದ್ದಾರಲ್ಲ ಅನ್ನೋ ಕೋಪಕ್ಕೆ ಫೋನ್ ಕಟ್ ಮಾಡಿದ್ದು. ಸಾಗರನಿಗೆ ಮೆಸೇಜು ಮಾಡಲೆಂದು ಫೋನ್ ತೆಗೆದುಕೊಂಡದ್ದು. ಮೆಸೇಜು ಮಾಡುವ ಮನಸ್ಸು ಹೋಯಿತು. ಮೊಬೈಲನ್ನು ಸೋಫಾದ ಮೇಲೆ ಬಿಸಾಕಿ ಟಿವಿ ನೋಡುತ್ತ ಕುಳಿತುಕೊಂಡೆ. ಚಾನೆಲ್ಲು ಬದಲಿಸುತ್ತ ಕಾಲಕಳೆದೆ. ಫ್ರಿಜ್ಜಿನಲ್ಲಿ ನಿನ್ನೆ ಮಾಡಿದ್ದ ಅನ್ನ ಚೂರು ಉಳಿದಿತ್ತು. ಮೊನ್ನೆ ಬೇಳೆಸಾರು ಚಿಕ್ಕ ಪಾತ್ರೆಯಲ್ಲಿತ್ತು. ಅದೆರಡನ್ನೇ ಬಿಸಿ ಮಾಡಿಕೊಂಡು ಒಂದು ಸ್ಪೂನು ಉಪ್ಪಿನಕಾಯಿಯೊಂದಿಗೆ ತಿಂದು ಮುಗಿಸಿದೆ. ಮದುವೆಯಾದ ಹೊಸತರಲ್ಲಿ ರಾಜಿ ಕೊಡಿಸಿದ್ದ ಬ್ಲೂಟೂಥ್ ಹಿಯರ್ ಫೋನನ್ನು ಕಿವಿಗೆ ಸಿಕ್ಕಿಸಿಕೊಂಡು ಹಾಡು ಕೇಳುತ್ತ ಮಲಗಿದೆ. ಹೆಚ್ಚಾಗಿ ಕೇಳುತ್ತಿದ್ದದ್ದು ಸಿನಿಮಾ ಹಾಡುಗಳೇ. ಬೇಸರಕ್ಕೆ ಖುಷಿಗೆ ಸಂತಸಕ್ಕೆ ದುಃಖಕ್ಕೆಲ್ಲ ಹಾಡುಗಳು ಒಳ್ಳೆಯ ಮದ್ದು. ಮದುವೆಯಾದ ಮೇಲೆ ಇವರ ಸಹವಾಸದಿಂದ ಒಂದಷ್ಟು ಭಾವಗೀತೆಗಳನ್ನು ಕೇಳಲು ಶುರು ಮಾಡಿದ್ದೆ. ಹಾಡುಗಳು ಏಕಾಂತ ನೀಗಿಸಲೂ ಸೈ ಏಕಾಂತ ಸೃಷ್ಟಿಸಲೂ ಸೈ. ಐದಾರು ಹಾಡು ಕೇಳುವಷ್ಟರಲ್ಲಿ ನಿದ್ರೆ ಬಂದುಬಿಡುತ್ತಿತ್ತು. ಇವತ್ಯಾಕೋ ನಿದ್ರೆಯೂ ಇಲ್ಲ. ಮೊಬೈಲ್ ರಿಂಗಣಿಸಿತು. ಸಾಗರ್ ಮೆಸೇಜ್ ಮಾಡಿದ್ದ.

“ಊಟ ಆಯ್ತೇನೆ”

‘ಆಯ್ತು ನಿಂದು’

“ಈಗ ಮಾಡ್ತಿದ್ದೆ”

‘ಏನ್ ಊಟ’

“ಬಿರ್ಯಾನಿ ಪಾರ್ಸಲ್ ತಂದಿದ್ದೆ”

‘ಮ್’

“ನಿನ್ದು”

‘ಪ್ರಿಜ್ಜಲ್ಲಿ ಚೂರು ಅನ್ನ ಸಾರಿತ್ತು. ಅದನ್ನೇ ತಿಂದು ಮುಗಿಸಿದೆ’

“ಯಾಕೋ ಬೇಜಾರಲ್ಲಿದ್ದೀಯ ಅನ್ಸುತ್ತೆ”

‘ಹಂಗೇನಿಲ್ಲಪ್ಪ’

“ಹೌದಾ. ಯಾಕೋ ಹಂಗನ್ನಿಸ್ತು”

ಅಷ್ಟು ದೂರದಲ್ಲಿರುವವನಿಗೂ ನನ್ನ ಬೇಸರ ಮೆಸೇಜುಗಳಲ್ಲೇ ಗೊತ್ತಾಗಿಹೋಯ್ತ. ಬೇಸರ ಒಂದಷ್ಟು ನೀಗಿತು.

‘ಯಾಕೆ ಅನ್ನಿಸ್ತು?’

“ಏನೋ ನಿನ್ನ ಮೆಸೇಜುಗಳಲ್ಲಿ ಎಂದಿನ ಲವಲವಿಕೆ ಇಲ್ಲ ಅನ್ನಿಸ್ತು. ಅದಕ್ಕೇ ಕೇಳ್ದೆ”

‘ಟೆಲಿಪತಿ ಕೆಲಸ ಮಾಡ್ತಿರಬೇಕು ನಮ್ಮಿಬ್ಬರ ಮಧ್ಯೆ’

“ಅಂದ್ರೆ”

‘ನಿಜ್ವಾಗ್ಲೂ ನಾನು ಬೇಜಾರಲ್ಲೇ ಇದ್ದೆ. ಬರೀ ಮೆಸೇಜಲ್ಲೇ ತಿಳ್ಕೊಬಿಟ್ಟಲ್ಲ ಅದಕ್ಕೆ ಕೇಳ್ದೆ’

“ಹ್ಹ ಹ್ಹ. ಇರಬೋದು. ಯಾಕೆ ಬೇಜಾರು?”

‘ಹಿಂಗೆ ಸುಮ್ನೆ’

“ನನಗ್ ಗೊತ್ತು”

‘ಏನ್ ಗೊತ್ತು’

“ಗಂಡ ಇಲ್ವಲ್ಲ ಅದಕ್ಕೆ ಬೇಜಾರು” ಕಣ್ಣು ಮಿಟುಕಿಸಿದೆ.

‘ಮ್. ಅರ್ಧ ಸತ್ಯ. ನನಗೂ ರಜೆ ಸಿಗುತ್ತೆ ಕಣ್ರೀ. ಇಬ್ಬರೂ ಎಲ್ಲಾದರೂ ಸುತ್ತಾಡಿಕೊಂಡು ಬರೋಣ ಅಂದಿದ್ದೆ. ನಾನು ಹೇಳೋಷ್ಟರಲ್ಲಿ ಫ್ರೆಂಡ್ಸ್ ಜೊತೆ ಒಬ್ರೇ ಅಲೆಯೋಕೆ ಹೋಗಿಬಿಟ್ಟಿದ್ದಾರೆ. ಬೇಜಾರಾಗಲ್ವ ಮತ್ತೆ’

“ಮದ್ವೆಯಾದ ಮೇಲೆ ಬರೀ ಹೆಂಡತಿ ಜೊತೇನೆ ಇರೋದಿಕ್ಕೆ ಆಗುತ್ತಾ? ಎಷ್ಟೋ ವರ್ಷ ಫ್ರೆಂಡ್ಸ್ ಆಗಿದ್ದವರಿಗೂ ಸ್ವಲ್ಪ ಸಮಯ ಕೊಡಬೇಕಲ್ವ”

‘ಆಹಾ! ನೀನೇನು ನನ್ನ ಫ್ರೆಂಡೋ ರಾಜೀವನ ಫ್ರೆಂಡೋ. ನನಗೆ ಬೆಂಬಲ ಕೊಡೋದು ಬಿಟ್ಟು ಅವನಿಗೆ ಕೊಡ್ತೀಯಲ್ಲ’

“ನಾನು ಸತ್ಯಕ್ಕೆ ಬೆಂಬಲ ಕೊಡ್ತೀನಿ” ಕಣ್ಣು ಹೊಡೆದ.

‘ಸತ್ಯ ಹರೀಶ್ಚಂದ್ರ! ಹೋಗ್ಲಿ ಬಿಡು. ಮುಗೀತಾ ಊಟ’

“ಹ್ಞೂ. ಮುಗಿಸಿ ಈಗ ಸಿಗರೇಟು ಹಚ್ಚಿದೆ”

‘ತುಂಬ ಒಳ್ಳೆ ಕೆಲಸ’

“ಹ್ಹ ಹ್ಹ”

‘ನಿಮ್ ಮನೆಯಲ್ಲೇನು ಮದುವೆ ಅಂತೆಲ್ಲ ಹೇಳ್ತಿಲ್ವ’

“ಯಾರೋ ಹುಡುಗಿ ಮನೆಯವರು ಕೇಳ್ಕೊಂಡು ಬಂದಿದ್ರಂತೆ. ನನಗೂ ಸ್ವಲ್ಪ ತಲೆ ತಿಂದ್ರು. ಪರೀಕ್ಷೆ ಮುಗಿಯೋವರ್ಗೂ ಅದರ ಸುದ್ದಿ ಎತ್ತಬೇಡಿ. ಸುಮ್ನಿರಿ ಅಂದೆ”

‘ನಿನಗೆ ಯಾರನ್ನ ಮದುವೆಯಾಗಬೇಕು ಅಂತ ಆಸೆ’

“ಯಾರನ್ನ ಅಂದ್ರೆ? ಹುಡುಗೀನ ಇನ್ಯಾರನ್ನ?”

‘ತರ್ಲೆ ತಕೊಂಬಂದು. ತಲೆ ಮೇಲೆ ಹಾಕ್ತೀನಿ ನೋಡು. ಡಾಕ್ಟರ್ರೋ ಇಂಜಿನಿಯರ್ರೋ ಹೌಸ್ ವೈಫಾ ವರ್ಕಿಂಗಾ ಅಂತ’

“ಆ ತರ ಏನು ಯೋಚ್ನೆ ಮಾಡಿಲ್ಲ. ಯಾರಾದ್ರೂ ಒಕೆ ನನಗೆ”

‘ನೀನ್ಯಾರನ್ನು ಲವ್ ಮಾಡಿಲ್ವಾ?’

“ಲವ್ ಮಾಡಿದ್ರೆ ಮನೆಯವರಿಗೆ ಹುಡುಗಿ ಎಲ್ಲಾ ಹುಡುಕೋ ಶ್ರಮ ತಗೋಬೇಡಿ ಅಂತ ಹೇಳ್ತಿರಲಿಲ್ಲವಾ?”

‘ಎಂಬಿಬಿಎಸ್ ಟೈಮಲ್ಲೂ ಯಾರನ್ನೂ ಲವ್ ಮಾಡಲಿಲ್ವ’

“ಮಾಡದೇ ಇರೋಕಾಗುತ್ತ?”

‘ಯಾರು’

“ಇದ್ಲು ಒಬ್ಳು ನಮ್ ಜೂನಿಯರ್ರು”

‘ಹೆಸರು’

“ಹೆಸರೆಲ್ಲ ಬೇಡ ಬಿಡು”

‘ನಾನ್ಯಾರಿಗೆ ಹೇಳ್ತೀನೋ? ಹೇಳು’

“ನೀನು ಹೇಳ್ತಿ ಅಂತಲ್ಲ. ಅವಳಿಗೀಗ ಮದುವೆಯಾಗಿದೆ. ಮೈಸೂರಲ್ಲೇ ಇರೋದು. ನೀನು ಬೇಕೂಂತ ಹೇಳದಿದ್ದರೂ ಏನೋ ಬೈ ಮಿಸ್ ಬಾಯ್ಬಿಟ್ಟು ಅದವಳಿಗೆ ಅವಳ ಗಂಡನಿಗೆಲ್ಲ ಗೊತ್ತಾಗೋದು ಯಾಕೆ ಅಂತ?”

‘ನನ್ನ ಮೇಲೆ ಅಷ್ಟೂ ನಂಬಿಕೆ ಇಲ್ವೇನೋ?’

“ಅಯ್ಯೋ ಏನೂ ಇಲ್ಲ ಕಣವ್ವ. ಮೇಲಾಗಿ ನಂದೇನೂ ಅದ್ಭುತ ಲವ್ ಸ್ಟೋರೀನೂ ಅಲ್ಲ”

‘ಎಲ್ಲರಿಗೂ ಅವರವರ ಲವ್ ಸ್ಟೋರಿ ಅದ್ಭುತವಾಗೇ ಇರುತ್ತೆ. ಸರಿ ಬಿಡು ನಿನ್ನಿಷ್ಟ’

“ಬೇಜಾರ್ ಮಾಡ್ಕೋಬೇಡ ಕಣೇ. ಹೋಗ್ಲಿ ಹೇಳ್ತೀನಿ ಬಿಡು. ಮಧು ಅಂತ ಅವಳ ಹೆಸರು”

‘ಓ ಮಧೂನ! ಅವಳು ಅವಳ ಗಂಡ ನಮ್ಮ ಆಸ್ಪತ್ರೆಯಲ್ಲೇ ಕೆಲಸ ಮಾಡೋದು’

“ಗೊತ್ತು. ಅದಕ್ಕೆ ಹೆಸರು ಹೇಳೋದ ತಡವರಿಸಿದ್ದು”

‘ಹೇ. ಹೋಗೋ. ನಾನ್ಯಾಕೆ ಅವರ ಹತ್ತಿರ ಹೋಗಿ ಹೇಳಲಿ. ಇಲ್ಲಿ ವಿಷಯ ಅಲ್ಲಿ ಅಲ್ಲಿ ವಿಷಯ ಇಲ್ಲಿ ಹೇಳೋ ದುರಭ್ಯಾಸವೆಲ್ಲ ಇಲ್ಲ ನನಗೆ’

“ದುರಭ್ಯಾಸ ಇದೆ ಅಂದ್ನ?”

‘ಸರಿ ಸರಿ. ವಿಷಯಾಂತರವಾಗೋದು ಬೇಡ. ಕತೆ ಹೇಳು’

“ನೀನು ನಗಲ್ಲ ಅಂದ್ರೆ ಹೇಳ್ತೀನಿ”

‘ಲವ್ ಸ್ಟೋರೀಲಿ ನಗೋದಕ್ಕೇನಿರುತ್ತೆ? ನಗಲ್ಲ ಹೇಳು’

“ಅವಾಗಷ್ಟೇ ಫಸ್ಟ್ ಇಯರ್ ಎಂಬಿಬಿಎಸ್ ಪಾಸಾಗಿ ಸೆಕೆಂಡ್ ಇಯರ್ರಿಗೆ ಕಾಲಿಟ್ಟಿದ್ದೊ. ಅವತ್ತೊಂದಿನ ಕಾಲೇಜು ಮುಗಿದ ಮೇಲೆ ಫ್ರೆಂಡ್ಸ್ ಎಲ್ಲ ಕ್ಯಾಂಟೀನಿನಲ್ಲಿ ಹರಟುತ್ತ ಕುಳಿತಿದ್ದೊ. ನನಗೆ ಸಿಗರೇಟು ಸೇದುವಂತಾಯಿತು. ಕ್ಯಾಂಟೀನಿನ ಪಕ್ಕದಲ್ಲಿ ಒಂದು ಜ್ಯೂಸ್ ಅಂಗಡಿಯಿತ್ತಲ್ಲ. ಅಲ್ಲಿ ಸಿಗರೇಟು ಸಿಗುತ್ತಿತ್ತು. ಸೇದ್ತಾ ನಿಂತಿದ್ದೆ. ಆರೂ ಆರೂವರೆ ಆಗಿತ್ತು ಅನ್ನಿಸುತ್ತೆ. ಇವಳು ಕೆಂಪು ಬಣ್ಣದ ಚೂಡಿ ಧರಿಸಿ ಹಾಸ್ಟೆಲ್ಲಿನ ಕಡೆಗೆ ಹೋಗುತ್ತಿದ್ದಳು. ಕೈಯಲ್ಲೊಂದು ಬಕೆಟು, ಬಕೆಟಿನ ಒಳಗಿದ್ದ ಚೊಂಬು ಲಡ ಲಡ ಅನ್ನುತ್ತಿತ್ತು. ಎಡಗೈಲಿ ಪೊರಕೆ. ಅವಳು ಹಾಸ್ಟೆಲ್ ಗೇಟು ಮುಟ್ಟುವವರೆಗೂ ನೋಡುತ್ತಲೇ ಇದ್ದೆ. ಕಳೆದುಹೋದಂತಾಯಿತು”

‘ಏನು ಕಳೆದುಹೋಯ್ತು’

“ನೋಡ್ದಾ ಆಡ್ಕೊಳ್ಳೋದಾ! ಸರಿ ಬಿಡು ಏನಿಲ್ಲ”

‘ಸಾರಿ ಸಾರಿ. ಹೇಳೋ’

“ಒಂದು ವಾರ ನೋಡ್ದೆ. ಅವಳೊಂದೆರಡು ಸಲ ಗಮನಿಸಿದ್ಲು. ಸೀನಿಯರ್ರು; ರ್‍ಯಾಗಿಂಗೇನಾದ್ರೂ ಮಾಡಿಬಿಡ್ತಾರ ಕರೆದು ಅನ್ನೋ ಗೊಂದಲ ಅವಳ ಮುಖದಲ್ಲಿ ಎದ್ದು ಕಾಣುತ್ತಿತ್ತು. ತಡಿಯೋಕೆ ಆಗಲಿಲ್ಲ. ಒಂದು ವಾರ ಆದಮೇಲೆ ಅದೇ ಕ್ಯಾಂಟೀನ್ ಪಕ್ಕದ ಜ್ಯೂಸ್ ಅಂಗಡಿಯಲ್ಲಿ ಸಿಗರೇಟು ಹಚ್ಚಿ ಕುಳಿತಿದ್ದೆ. ಅವಳು ಇಬ್ಬರು ಗೆಳತಿಯರೊಂದಿಗೆ ಹಾಸ್ಟೆಲ್ಲಿಗೆ ಹೋಗುತ್ತಿದ್ದಳು. ‘ಯೋಯ್ ಬಾಇಲ್ಲಿ’ ಎಂದೆ. ಮೂರು ಜನ ನನ್ನ ಕಡೆ ನೋಡಿದರು. ‘ನಿನಗೇ ಹೇಳ್ತಿರೋದು ಬಾ ಇಲ್ಲಿ’ ಎಂದೆ. ಮೂರು ಜನ ಬರಲಾರಂಭಿಸಿದರು. ಇವಳು ಮಧ್ಯದಲ್ಲಿದ್ದಳು. ‘ಮಧ್ಯದಲ್ಲಿರೋಳು ಮಾತ್ರ’ ಎಂದೆ. ಮೂವರು ಧಾರವಾಹಿಯಲ್ಲಿ ತೋರಿಸುವಂತೆ ಒಬ್ಬರ ಮುಖ ಮತ್ತೊಬ್ಬರು ಸ್ಲೋ ಮೋಷನ್ ನಲ್ಲಿ ನೋಡಿಕೊಂಡರು. ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಇರಲಿಲ್ಲ ಅಷ್ಟೆ. ಇವಳು ಬರಲಾರಂಭಿಸಿದಳು. ಅವರಿಬ್ಬರು ಅಲ್ಲಿಯೇ ನಿಂತಿದ್ದರು”

‘ಹೆಸರಿಡಿದು ಕರೆಯೋದಲ್ವ’

“ಹೆಸರು ಗೊತ್ತಿದ್ರೆ ತಾನೇ”

‘ಒಂದು ವಾರದಿಂದ ನೋಡಿದ್ದೆ ಅಂತಿ. ಹೆಸರು ತಿಳ್ಕೋಬೇಕು ಅನ್ನಿಸಿರಲಿಲ್ವ’

“ಇಲ್ಲಪ್ಪ. ಹೆಸರು ತಿಳ್ಕೋಬೇಕು ಅಂತ ತಲೆಗೆ ಹೊಳಿಯಲೇ ಇಲ್ಲ. ಅವಳು ಬಂದಾಗ ಹೆಸರು ಕೇಳಿದೆ. ‘ಮಧು’ ಎಂದಳು. ದನಿ ನಡುಗುತ್ತಿತ್ತು. ‘ಒಕೆ. ಮಧು…ಮಧು…ಮಧು’ ಸಿಗರೇಟು ಮುಗಿದಿತ್ತು. ‘ಒಂದು ವಾರದ ಹಿಂದೆ ನಿನ್ನ ನೋಡಿದೆ. ಮೂರು ದಿನದಿಂದ ಲವ್ ಆಗಿದೆ ಅನ್ನಿಸ್ತು. ಅದಕ್ಕೇ ಕರೆಸಿದ್ದು. ನಿನ್ನ ಡಿಸಿಷನ್ ನಾಳೆ ತಿಳಿಸು. ನಾಡಿದ್ದಿಂದ ಲವ್ ಮಾಡೋಣ’ ಎಂದು ಹೇಳಿ ಮತ್ತೊಂದು ಸಿಗರೇಟ್ ಹಚ್ಚಿಕೊಂಡು ‘ಸರಿ ನೀನಿನ್ನು ಹೋಗು’ ಎಂದೆ. ಸೊರಸೊರ ಎಂದು ಅಳುತ್ತ ಗೆಳತಿಯರ ಕಡೆಗೆ ಹೊರಟಳು. ‘ಏಯ್ ಮಧು’ ಎಂದೆ. ನಿಂತಳು. ತಿರುಗಲಿಲ್ಲ. ‘ಅಳೋ ಸೀನೆಲ್ಲ ಬೇಡ. ನಿನಗೆ ಏನು ನಿರ್ಧಾರ ತಗೋಬೇಕು ಅನ್ನಿಸುತ್ತೋ ತಗೋ’ ಎಂದೆ. ನಿಂತಲ್ಲೇ ತಲೆಯಾಡಿಸಿ ಹೊರಟುಹೋದಳು”

‘ಆಮೇಲೆ’

“ಆಮೇಲೇನಿದೆ ಮಣ್ಣು. ಮಾರನೇ ದಿನದಿಂದ ನನ್ನ ಮುಖ ಕಂಡರೆ ಸಾಕು ಹಾದಿ ಬದಲಿಸುತ್ತಿದ್ದಳು. ಇಲ್ಲ ತಲೆತಗ್ಗಿಸಿ ಬಿರಬಿರನೆ ನಡೆದುಬಿಡುತ್ತಿದ್ದಳು!”

‘ನೀನು ಮತ್ತೆ ಕರೆದು ಮಾತನಾಡಿಸಲಿಲ್ಲವಾ?’

“ಅವಳಾಗೇ ಬಂದು ಏನು ಹೇಳಲಿಲ್ಲವಲ್ಲ. ನನಗೂ ಮತ್ತೆ ಕೇಳಬೇಕು ಅನ್ನಿಸಲಿಲ್ಲ. ಬರೀ ಅಟ್ರಾಕ್ಷನ್ ಇತ್ತೇನೋ. ಅಪರೂಪಕ್ಕೆ ಎದುರಿಗೆ ಸಿಕ್ಕಿ ನೋಡಿದಾಗ ‘ಏನೂ ಹೇಳಲೇ ಇಲ್ಲವಲ್ಲ ಇವಳು’ ಅನ್ನಿಸೋದು. ಅವಳು ಮರೆಯಾಗುತ್ತಿದ್ದಂತೆ ಮರೆತುಹೋಗೋದು! ಇವೆಲ್ಲ ಲವ್ ಅಲ್ಲ ಅನ್ಕೊಂಡು ಸುಮ್ಮನಾಗಿಬಿಟ್ಟೆನೇನೋ”

‘ಹ್ಹ ಹ್ಹ’

“ನೋಡ್ದಾ! ನಗಲ್ಲ ಅಂತ ಪೂರ್ತಿ ಕತೆ ಕೇಳ್ಬಿಟ್ಟು ನಗೋದ”

‘ಹೆ. ಹಂಗಲ್ಲ ಕಣೋ. ನೀನು ಹೇಳೋ ಶೈಲಿಗೆ ನಗು ಬಂತು ಅಷ್ಟೇ. ಹೋಗ್ಲಿ ಬಿಡು. ಅವಳೇನೋ ಚೆನ್ನಾಗಿದ್ದಾಳೆ. ನಿನಗೆ ಇನ್ನೂ ಚೆನ್ನಾಗಿರೋಳು ಸಿಗ್ತಾಳೆ ಬಿಡು’

“ಅಂದ್ರು ಅವಳು ಸಿಕ್ಕಂಗಾಗಲ್ಲವಲ್ಲ”

‘ಬೇಜಾರ್ ನೋಡಪ್ಪ ಹುಡುಗನಿಗೆ’

“ಬೇಜಾರೇನಿಲ್ಲ. ಸುಮ್ನೆ ಹೇಳ್ದೆ ಅಷ್ಟೆ. ಮತ್ತೆ ಮತ್ತೆ ಹಿಂದೆ ಹೋಗಿದ್ರೆ ಒಪ್ತಿದ್ಲು”

‘ಓ. ಓ. ಅದೆಂಗಪ್ಪ ಅಷ್ಟು ಗ್ಯಾರಂಟಿಯಾಗಿ ಹೇಳ್ತಿ’

“ಅವಳೇ ಹೇಳಿದ್ಲು”

‘ಇದೇನಿದು ಸ್ಟೋರೀಲಿ ಟ್ವಿಸ್ಟು. ಯಾವಾಗ ಹೇಳಿದ್ಲು’

“ಅವಳ ಮದುವೆಗೆ ಕರೆದಾಗ!”

‘ಓ! ಮದುವೆಗೆ ಕರೆಯುವಷ್ಟು ಪರಿಚಯವಿತ್ತ?’

“ಪರಿಚಯ ಅಂತ ಇರಲಿಲ್ಲ. ಎಂಬಿಬಿಎಸ್ ಮುಗಿದ ಮೇಲೆ ಒಂದು ವರುಷ ಕೇರಳದಲ್ಲಿ ಕೋಚಿಂಗ್ ಸೇರಿಕೊಂಡು ಓದಿದೆ. ನನಗೆ ಬೇಕಾಗಿದ್ದಿದ್ದು ಸರ್ಜರಿ ಅಥವಾ ಆರ್ತೋಪಿಡಿಕ್ಸ್. ಎರಡೂ ಸಿಗಲಿಲ್ಲ. ಮುಂದಿನ ವರುಷ ಬೆಂಗಳೂರಿಗೆ, ಮನೆಗೇ ಬಂದುಬಿಟ್ಟೆ. ಮನೆಯಲ್ಲಿ ಓದೋದು ಕಷ್ಟವಾಗ್ತಿತ್ತು. ಐಎಮ್ಎ ಲೈಬ್ರರಿಗೆ ಹೋಗ್ತಿದ್ದೆ. ಅವಳದು ಆಗಷ್ಟೇ ಇಂಟರ್ನ್ ಶಿಪ್ ಮುಗಿದಿತ್ತು. ಅವಳು ಬೆಂಗಳೂರಿನಲ್ಲೇ ಸ್ಪೀಡ್ ಕೋಚಿಂಗಿಗೆ ಸೇರ್ಕೊಂಡು ನಮ್ಮ ಲೈಬ್ರರಿಗೇ ಬರೋಳು”

‘ಓ! ಸೆಕೆಂಡ್ ಇನ್ನಿಂಗ್ಸ್ ಬೆಂಗಳೂರಲ್ಲಾ?’

“ಫಸ್ಟ್ ಇನ್ನಿಂಗ್ಸಿನಲ್ಲೇ ನಾನು ರಿಟೈರ್ಡ್ ಹರ್ಟೂ. ಇನ್ನು ಸೆಕೆಂಡ್ ಇನ್ನಿಂಗ್ಸ್ ಎಲ್ಲಿಂದ! ಅವಳು ಬರೋಳು. ಓದೋದ್ರಲ್ಲೇ ಮುಳುಗಿಹೋದವನಿಗೆ ಹಳೆಯದೇನು ನೆನಪಾಗುತ್ತಿರಲಿಲ್ಲ. ಒಂದು ದಿನ ಅವಳೇ ಬಂದು ನೆನಪಿಸಿದಳು! ಓದ್ತಾ ಕುಳಿತಿದ್ದೆ. ಹತ್ತಿರ ಬಂದಳು. ಓದುವಾಗ ಕಿವಿಗೆ ಹಿಯರ್ ಫೋನ್ ಸಿಕ್ಕಿಸಿಕೊಂಡು ಹಾಡು ಕೇಳ್ತಿರ್ತೀನಿ. ಅವಳು ಎರಡು ಸಲ ಕರೆದಳೋ ಏನೋ ನನಗೆ ಕೇಳಿರಲಿಲ್ಲ. ಭುಜ ತಟ್ಟಿ ಕರೆದಳು. ಆಗ ನನಗೆ ಗಾಬರಿಯಾಗಿತ್ತು! ‘ಹಾಯ್. ಹೇಳು’ ಅಂದೆ. ‘ಮುಂದಿನ ತಿಂಗಳು ನನ್ನ ಮದುವೆ. ಬೆಂಗಳೂರಲ್ಲೇ. ತಪ್ಪದೆ ಬರಬೇಕು’ ಎಂದಳು. ಕಾರ್ಡು ಕೈಗಿತ್ತಳು. ಗಂಡ ಮೈಸೂರಿನ ಫಸ್ಟ್ ಹೆಲ್ತ್, ಅದೇ ನಿಮ್ಮ ಆಸ್ಪತ್ರೆಯಲ್ಲಿ ಆರ್ಥೋಪಿಡಿಷಿಯನ್. ನಗು ಬಂತು ನಕ್ಕೆ. ‘ಯಾಕ್ ನಗ್ತಿದ್ದೀರ’ ಎಂದು ಕೇಳಿದಳು. ‘ಅಲ್ಲ ಐದು ವರುಷದ ಕೆಳಗೆ ಪ್ರಪೋಸ್ ಮಾಡಿದವನಿಗೆ ಒಂದು ದಿನವೂ ಉತ್ತರ ಹೇಳಲಿಲ್ಲ. ಎದುರಿಗೆ ಸಿಕ್ಕಾಗಲೂ ಮಾತನಾಡಿಸಿರಲಿಲ್ಲ. ಅಕ್ಷರಶಃ ಓಡಿ ಹೋಗ್ತಿದ್ದೆ. ಈಗ ಮಾತನಾಡಿಸಿ ಮದುವೆಗೆ ಕರೆಯುತ್ತಿದ್ದೀಯಲ್ಲ ನಗು ಬರದೆ ಇರುತ್ತ’ ಎಂದಿದ್ದಕ್ಕೆ ಅವಳೂ ನಗುತ್ತ ಪಕ್ಕದ ಕುರ್ಚಿಯಲ್ಲಿ ಕುಳಿತಳು. ‘ನೀವೂ ಒಂದೇ ಸಲ ಮಾತನಾಡಿಸಿ ಮಾಯವಾಗಿಬಿಟ್ಟಿರಿ’. ‘ನಾನು ನಿನ್ನ ಉತ್ತರಕ್ಕೆ ಕಾಯುತ್ತಿದ್ದೆನಪ್ಪ’. ‘ಎದುರಿಗೆ ಸಿಕ್ಕಾಗೆಲ್ಲ ನಿಲ್ಲಿಸಿ ಉತ್ತರಾನೇ ಹೇಳಲಿಲ್ಲ ಅಂತ ತಲೆ ತಿನ್ಬೇಕಿತ್ತು’ ಎಂದು ನಕ್ಕಳು. ‘ಒಹೋ! ಏನ್ ದಿನಾ ತಲೆ ತಿಂದಿದ್ರೆ ಒಪ್ಪಿಬಿಡೋಳ ತರ ಡೈಲಾಗ್ ಹೊಡೀತಿದ್ದೀಯ’ ಎಂದು ನಗುತ್ತಲೇ ಅವಳ ಕಣ್ಣು ನೋಡಿದವನಿಗೆ ಅಲ್ಲಿದ್ದ ಭಾವನೆಗಳು ಗಲಿಬಿಲಿಗೊಳಿಸಿದವು. ನಾನೇ ಮಾತು ಮರೆಸುತ್ತ ‘ಮತ್ತೆ ಮದುವೆಯಾದಮೇಲೆ ಮೈಸೂರೇ ಸೆಟ್ಲಾ?’ ಎಂದೆ. ಅವಳೊಂದು ದೀರ್ಘ ಉಸಿರು ಬಿಟ್ಟಂತೆ ಅನ್ನಿಸಿತು. ಅದು ನನ್ನ ಮನದ ಭ್ರಮೆಯೂ ಇರಬಹುದು. ‘ಉಡ್ಬಿ ಮನೆ ಅಲ್ಲೇ ಅಲ್ಲವಾ. ಅಲ್ಲೇ ಸೆಟ್ಲ್ ಆಗಬೇಕು’. ‘ನಿಮ್ಮ ಊರು ಯಾವುದು?’. ಅಚ್ಚರಿಯಾಯಿತವಳಿಗೆ. ‘ನನ್ನ ಊರು ಗೊತ್ತಿಲ್ವ’. ‘ಇಲ್ಲ’ ಎಂದೆ. ‘ಭದ್ರಾವತಿ ನಮ್ಮ ಊರು. ಈಗ ಎರಡು ವರ್ಷದಿಂದ ಬೆಂಗಳೂರಲ್ಲೇ ಇರೋದು’ ಎಂದಳು. ಮುಂದೆ ಏನು ಮಾತನಾಡಬೇಕೆಂದು ನನಗೆ ತಿಳಿಯಲಿಲ್ಲ. ಎರಡು ನಿಮಿಷದ ಮೌನದ ನಂತರ ‘ಸರಿ ಸರ್. ಬರ್ತೀನಿ’ ಎಂದವಳಿಗೆ ‘ಸರ್. ಎಲ್ಲ ಬೇಡಪ್ಪ. ಸಾಗರ್ ಅಂದ್ರೆ ಸಾಕು’ ಎಂದೆ. ನಗುತ್ತ ಹೋದಳು. ಅವತ್ತೆಲ್ಲ ನನಗೆ ಮುಂದಕ್ಕೆ ಓದುವುದಕ್ಕಾಗಲಿಲ್ಲ. ಹೊರಟುಹೋದೆ”

‘ಮದುವೆಗೆ ಹೋಗಿದ್ದ’

“ಥೂ. ಏನ್ ಆತುರ ನಿನಗೆ. ಇನ್ನು ಕತೆ ಮುಗಿದಿಲ್ಲ”

‘ಸಾರಿ ಸಾರಿ ಕಂಟಿನ್ಯೂ’

“ಮಾರನೇ ದಿನದಿಂದ ನೋಡಿದಾಗೊಮ್ಮೆ ಮುಗುಳ್ನಗು ವಿನಿಮಯವಾಗುತ್ತಿತ್ತು. ಲೈಬ್ರರಿ ಪಕ್ಕದಲ್ಲೊಂದು ಹೋಟೆಲ್ಲಿಗೆ ಊಟಕ್ಕೆ ಹೋಗುತ್ತಿದ್ದೆ. ಅವಳೂ ಅಲ್ಲೇ ಬರುತ್ತಿದ್ದಳು. ಇಷ್ಟು ದಿನ ಮಾತನಾಡುತ್ತಿರಲಿಲ್ಲ. ಈಗ ಜೊತೆಯಲ್ಲಿ ಕುಳಿತು ಊಟ ಮಾಡುತ್ತ ಲೋಕಾಭಿರಾಮವಾಗಿ ಹರಟೆ ಹೊಡೆಯುತ್ತಿದ್ದೆವು. ಆ ಹೋಟೆಲಿನ ಹಿಂದೆ ಸಿಗರೇಟು ಅಂಗಡಿಯಿತ್ತು. ಸಂಜೆ ಅಲ್ಲೇ ಸಿಗರೇಟು ಸೇದುತ್ತ ಕಾಫಿ ಕುಡಿದು ಬರುತ್ತಿದ್ದೆ. ಇವಳ ಜೊತೆ ಎರಡು ಸಲ ಹೋಟೆಲ್ಲಿಗೇ ಹೋಗಿ ಕಾಫಿ ಕುಡಿಯುವಂತಾಗಿತ್ತು. ಕಾಫಿ ಕುಡಿದ ಮೇಲೆ ‘ನೀನು ಹೋಗಿರು. ನಾನು ಬರ್ತೀನಿ’ ಎಂದ್ಹೇಳಿ ಸಿಗರೇಟಿಗೆ ಹೋಗಿದ್ದೆ. ಅದವಳಿಗೆ ಗೊತ್ತಾಗಿತ್ತು ಅನ್ನಿಸುತ್ತೆ. ಮೂರನೇ ದಿನ ‘ಹೋಟೆಲ್ಲಿಗೇನು ಬೇಡ ನೀನು ಸಿಗರೇಟು ಸೇದೋ ಜಾಗಕ್ಕೇ ನಡಿ. ಅಲ್ಲೇ ಕಾಫಿ ಕುಡೀತೀನಿ’ ಎಂದಳು. ಮಾತೆಲ್ಲ ಫಾರ್ಮಾಲಿಟೀಸ್ ಲೆಕ್ಕದಲ್ಲೇ ಇರ್ತಿತ್ತು. But probably we both enjoyed spending time with each other ಅನ್ಸುತ್ತೆ. ಅವಳ ಮದುವೆಗಿನ್ನು ಹದಿನೈದು ದಿನವಿತ್ತು. ಸಂಜೆ ಆರರ ಸುಮಾರಿಗೆ ಅದೇ ಸಿಗರೇಟು ಅಂಗಡಿಯ ಹತ್ತಿರ ನಿಂತಿದ್ದೊ. ‘ನಾಳೆಯಿಂದ ಲೈಬ್ರರಿ ಕಡೆ ಬರಲ್ಲ ಸಾಗರ್. ಮದುವೆಗೆ ರೆಡಿಯಾಗಬೇಕು’ ಖುಷಿಯಾಗೇ ಹೇಳಿದಳು. ‘ಓ. ನಾಳೆಯಿಂದ ನಾನೊಬ್ಬನೇ ಸಿಗರೇಟು ಸೇದ್ಬೇಕು ಹಾಗಾದ್ರೆ’ ನಗುತ್ತ ಹೇಳಿದೆ. ‘ಯಾರಾದ್ರೂ ಕೇಳಿಸ್ಕೊಂಡ್ರೆ ನಾನೂ ಸಿಗರೇಟು ಸೇದ್ತೀನಿ ಅಂದ್ಕೋಬೇಕು’ ಅವಳೂ ನಕ್ಕಳು. ‘ಮದುವೆ ತಯಾರಿ ಎಲ್ಲಾ ಮುಗೀತ’ ‘ನಡೀತಿದೆ. ಇನ್ನೂ ನಾನೇ ಬಟ್ಟೆ ತಗೊಂಡಿಲ್ಲ. ಸೀರೆ ತಗೊಳ್ಳೋಕೆ ನಾಳೆ ಚಿಕ್ಕಪೇಟೆಗೆ ಹೋಗಬೇಕು’ ಎಂದಳು. ಸಿಗರೇಟು ಸೇದಿ ಮುಗಿದಿತ್ತು. ‘ಸರಿ. ಹಾಗಾದ್ರೆ. ವಿಷ್ ಯು ಗುಡ್ ಲಕ್. ಮದುವೆ ಮನೇಲಿ ಸಿಗೋಣ’ ಎಂದೆ. ಮೂರೆಜ್ಜೆ ನಡೆದೆವು. ‘ಸಾಗರ್ ಒಂದು ಮಾತು ಹೇಳಿದ್ರೆ ನೀನು ಬೇಜಾರು ಮಾಡ್ಕೋಬಾರ್ದು’. ‘ಏನ್ ಹೇಳು?’ ಎಂದೆ. ‘ನೀನು ನನ್ನ ಮದುವೆಗೆ ಬಂದರೆ No Doubt ನನಗೆ ಖುಷಿಯಾಗುತ್ತೆ. ನೀನು ಬರದೇ ಇದ್ರೆ ಬಹುಶಃ ನನಗೆ ಜಾಸ್ತಿ ಖುಷಿಯಾಗುತ್ತೆ’ ಎಂದುಬಿಟ್ಟಳು. ಅವಳೆಡೆಗೆ ನೋಡಿದೆ. ಕಣ್ಣೀರಿತ್ತು. ಮುಂದೆ ಏನು ಮಾತನಾಡಲೂ ತೋಚಲಿಲ್ಲ. ‘ನೀನು ಹೋಗಿರು ಮಧು’ ಎಂದಷ್ಟೇ ಹೇಳಿ ಮತ್ತೆ ಸಿಗರೇಟು ಅಂಗಡಿ ಕಡೆಗೆ ನಡೆದೆ. ತಿರುಗಿ ನೋಡದೆ ಅಳುತ್ತ ಹೊರಟು ಹೋದಳು” ಸಾಗರ್ ಹತ್ತು ನಿಮಿಷ ಮತ್ಯಾವ ಮೆಸೇಜು ಕಳುಹಿಸಲಿಲ್ಲ. ಅವನ ಮೌನಕ್ಕೆ ಭಂಗ ತರಲು ನನಗೂ ಇಷ್ಟವಾಗಲಿಲ್ಲ.

‘ಮಲಗಿಬಿಟ್ಟಾ?’ ಎಂದು ಮೆಸೇಜಿಸಿದೆ.

“ಮಲಗಿರಲಿಲ್ಲ. ಮನಸ್ಸು ಕಳೆದುಹೋಗಿತ್ತು”

‘ಹೋಗಲಿಲ್ಲವಾ ಮದುವೆಗೆ’

“ಅವಳು ಹಾಗೆ ಹೇಳಿ ಹೋದ ಮೇಲೆ ಮನಸ್ಸು ಗೊಂದಲಗೊಂಡಿತ್ತು. ಅವಳನ್ನು ಅರ್ಥ ಮಾಡಿಕೊಳ್ಳಲು ನಾನೇ ಸೋತು ಹೋದೆನಾ ಎನ್ನಿಸುತ್ತಿತ್ತು. ಮದುವೆಗೆ ಇನ್ನದಿನೈದು ದಿನಗಳಿರುವಾಗ ಅರ್ಥ ಮಾಡಿಕೊಂಡು ಸಾಧಿಸುವುದಾದರೂ ಏನನ್ನು ಎಂದು ಸಮಾಧಾನ ಮಾಡಿಕೊಳ್ಳುತ್ತಿದ್ದೆ. ಹತ್ತಲವು ಸಲ ‘ಸಾರಿ’ ಎಂದು ಮೆಸೇಜು ಮಾಡಿದ್ದಳು. ಕೊನೆಗೆ ‘Its ok ಕಣೇ. ಮದುವೆ ತಯಾರಿ ಮಾಡಿಕೊ’ ಎಂದು ಮೆಸೇಜು ಮಾಡಿದ ಮೇಲಷ್ಟೇ ಅವಳ ‘ಸಾರಿ’ ಮೆಸೇಜುಗಳು ನಿಂತಿದ್ದು”

‘ಮದುವೆಗೆ ಹೋದ ಇಲ್ಲವಾ?’

“ಅವಳಿಗೇ ಬೇಡ ನಾನು ಬರೋದು. ಇನ್ಯಾಕೆ ಹೋಗೋದು ಎಂದುಕೊಂಡೆ. ಆದರೆ ಅವಳ ಜೊತೆ ಕಳೆದ ಹದಿನೈದು ದಿನಗಳಲ್ಲಿ ನನ್ನಲ್ಯಾವತ್ತೂ ಪ್ರೀತಿ ಪ್ರೇಮದ ಭಾವನೆ ಮೂಡಿರಲಿಲ್ಲ. ನಾನವಳಿಗೆ ಪ್ರಪೋಸ್ ಮಾಡಿದ್ದು ಕೂಡ ನನಗೆ ಮರೆತಂತಾಗಿತ್ತು. ನಾನಿದ್ದಿದ್ದು ಸ್ನೇಹದಿಂದ. ಹೋಗದೇ ಇರೋದು ತಪ್ಪು ಅನ್ನಿಸಿತು. ಗೊಂದಲಗಳು ಎಷ್ಟಿದ್ದವೆಂದರೆ ಹೋಗದಿರೋದೆ ಸರಿ. ಸುಮ್ಮನ್ಯಾಕೆ ಅವಳ ಮನಸ್ಸನ್ನು ಮತ್ತಷ್ಟು ಚಂಚಲವಾಗಿಸಬೇಕು ಎಂದೂ ಅನ್ನಿಸುತ್ತಿತ್ತು. ರಾತ್ರಿ ರಿಸೆಪ್ಶನ್ ಇತ್ತು. ಹೋಗಲಿಲ್ಲ. ಅವತ್ತು ರಾತ್ರಿ ಸರಿಯಾಗಿ ನಿದ್ರೆಯೂ ಬರಲಿಲ್ಲ. ಬೆಳಿಗ್ಗೆ ಲೈಬ್ರರಿಗೆ ಹೋಗಿ ಪುಸ್ತಕ ಹಿಡಿದವನಿಗೆ ಯಾಕೋ ಮನಸ್ಸು ತಡೀಲಿಲ್ಲ. ಮುಹೂರ್ತ ಹನ್ನೊಂದಕ್ಕಿತ್ತು. ಛತ್ರದ ಕಡೆಗೆ ಹೊರಟೆ. ನಾನು ತಲುಪಿದಾಗ ತಾಳಿ ಕಟ್ಟಿಸಿಕೊಳ್ಳುತ್ತಿದ್ದಳು. ಕಣ್ಣಲ್ಲಿ ನೀರಿತ್ತು. ಅದೇನು ಹೆಣ್ಣುಮಕ್ಕಳಿಗೆ ಮದುವೆ ಸಮಯದಲ್ಲಿ ಬರುವ ಕಣ್ಣೀರೋ ಅಥವಾ ನನ್ನನ್ನು ನೆನಪಿಸಿಕೊಂಡು ಅಳುತ್ತಿದ್ದಳೋ ಗೊತ್ತಿಲ್ಲ. ಹಿಂದುಗಡೆ ಒಂದು ಕುರ್ಚಿಯಲ್ಲಿ ಕುಳಿತೆ. ತಾಳಿ ಕಟ್ಟಿದ ಸಂಭ್ರಮ ಮುಗಿದ ನಂತರ ಒಂದಷ್ಟು ಶಾಸ್ತ್ರ ನಡೆಯಿತು. ಮತ್ತೊಂದು ರೌಂಡು ಕ್ಯಾಮೆರಾದ ಮುಂದೆ ನಿಂತರು. ರಾತ್ರಿ ರಿಸೆಪ್ಶನ್ನಿಗೆ ಬರದವರು ಗಂಡು ಹೆಣ್ಣನ್ನು ಭೇಟಿಯಾಗಲು ಸ್ಟೇಜಿನ ಮೇಲೆ ಹೋದರು. ನಾನೂ ಹೋದೆ. ಮೆಟ್ಟಿಲ ಮೇಲೆ ನಿಂತಾಗ ಅವಳು ನನ್ನನ್ನು ಗಮನಿಸಿದಳು. ಒಂದು ಪಶ್ಚಾತ್ತಾಪದ ನಗೆ ನಕ್ಕಳು. ಹೋಗಿ ಗಂಡು ಹೆಣ್ಣಿಗಿಬ್ಬರಿಗೂ ವಿಷ್ ಮಾಡಿ ಅವಳ ಪಕ್ಕ ನಿಂತೆ. ಫೋಟೋ ಕ್ಲಿಕ್ಕಿಸಿದರು. ಆಗ ಗಂಡಿನ ತಂಗಿ ‘ಅಣ್ಣ ನಿನ್ನ ಫ್ರೆಂಡ್ ಮಾತಾಡ್ತಿದ್ದಾನೆ’ ಎಂದವನಿಗೆ ಫೋನ್ ನೀಡಿದಳು. ಹುಡುಗ ಎರಡು ಹೆಜ್ಜೆ ಅತ್ತ ಸರಿದ. ಮತ್ತೊಮ್ಮೆ ಅವಳ ಕೈಕುಲುಕಿ ಮೆಲ್ಲಗಿನ ದನಿಯಲ್ಲಿ ‘ನಾನು ಬರದೇ ಇದ್ರೆ ತುಂಬಾ ಖುಷಿಯಾಗುತ್ತೆ ಅಂದಿದ್ದೆ. ನಿನ್ನನ್ನು ತುಂಬಾ ಖುಷಿಯಾಗಿಡೋದಿಕ್ಕೆ ಮನಸ್ಸಾಗಲಿಲ್ಲ. ಅದಕ್ಕೆ ಬಂದೆ’ ಎಂದು ನಕ್ಕೆ. ‘ಥ್ಯಾಂಕ್ಸ್ ಕಣೋ. ನೀನು ಬರದೇ ಇದ್ದಿದ್ದರೆ ತುಂಬ ಗಿಲ್ಟಾಗ್ತಿತ್ತು. ಅವತ್ತು ಹಾಗೆ ನಡೆದುಕೊಂಡಿದ್ದಕ್ಕೆ ಸಾರಿ’ ಎಂದಳು. ‘ಹೋಗ್ಲಿ ಬಿಡು. ಎಷ್ಟು ಸಲ ಸಾರಿ ಕೇಳ್ತೀಯ. ಇಬ್ರುದು ಒಳ್ಳೆ ಜೋಡಿ’ ಎಂದೆ. ‘ಥ್ಯಾಂಕ್ ಯು. ಆದರೆ ಸಾಗರ್ ನಿನ್ನನ್ನು ತುಂಬಾ ಮಿಸ್ ಮಾಡ್ಕೋತೀನಿ’ ಎಂದಳು. ಪ್ರತಿಕ್ರಿಯಿಸುವ ಮನಸ್ಸಾಗಲಿಲ್ಲ. ಒಮ್ಮೆ ನಕ್ಕು, ಫೋನಲ್ಲಿ ಮಾತಾಡಿ ಮುಗಿಸಿದ ಹುಡುಗನಿಗೆ ಮತ್ತೊಮ್ಮೆ ವಿಷ್ ಮಾಡಿ ಕೆಳಗಿಳಿದೆ. ಹಿಂದಿರುಗಿ ನೋಡಬೇಕು ಎನ್ನಿಸಿತು. ನೋಡಲಿಲ್ಲ. ಊಟ ಮಾಡಲೂ ಮನಸ್ಸಾಗಲಿಲ್ಲ. ಅರ್ಧ ಪ್ಯಾಕ್ ಸಿಗರೇಟು ಸೇದಿ ಮನೆಗೆ ಹೊರಟುಹೋದೆ”

ಅವನು ಕಳುಹಿಸಿದ ಮೆಸೇಜನ್ನು ಎರಡೆರಡು ಸಲ ಓದಿದೆ. ನನ್ನ ಕಣ್ಣಲ್ಲೇ ನೀರು ಮೂಡಿತ್ತು.

‘ಈಗ್ಲೂ ಮಾತಾಡ್ತಿರ್ತೀರ’

“ಮದುವೆಯಾದ ಸಂಜೆಯೇ ಫೋನ್ ಮಾಡಿದ್ದಳು. ರಿಸೀವ್ ಮಾಡಲಿಲ್ಲ. ‘ಯಾಕೋ ರಿಸೀವ್ ಮಾಡ್ತಿಲ್ಲ? ಬೇಜಾರ’ ಎಂದು ಮೆಸೇಜ್ ಮಾಡಿದಳು. ರಿಪ್ಲೈ ಮಾಡಲಿಲ್ಲ. ಅವಳಿಗೂ ಅರ್ಥವಾಗಿರಬೇಕು. ಅರ್ಧ ಘಂಟೆ ಬಿಟ್ಟು ‘ಸಾರಿ’ ಎಂದಷ್ಟೇ ಕಳುಹಿಸಿದಳು. ಮಾರನೇ ದಿನ ನನ್ನ ಫೋನ್ ನಂಬರ್ ಬದಲಿಸಿದೆ”

ಏನು ಮೆಸೇಜಿಸಬೇಕೆಂದು ತಿಳಿಯಲಿಲ್ಲ.

“ಮಲಗಿಬಿಟ್ಯಾ?”

‘ಇಲ್ಲ’

“ಮತ್ತೆ”

‘ಫೋನ್ ನಂಬರ್ ಬದಲಿಸುವ ಅವಶ್ಯಕತೆಯಿತ್ತ ಅಂತ?’

“ಅವಶ್ಯಕತೆಯೇನು ಇರಲಿಲ್ಲ. ಸ್ನೇಹಿತರಾಗೇ ಉಳಿಯಬಹುದಿತ್ತು. ನನಗೇ ಮನಸ್ಸಿರಲಿಲ್ಲ”

‘ಯಾಕೆ?’

“ಮದುವೆಯಾದ ಮೇಲೆ ಗಂಡನ ಜೊತೆಗೆ ಕಾಲಕಳೆಯುತ್ತ ಹಳೆಯ ಪ್ರೀತಿ - ಪ್ರೀತಿಯೇನಲ್ಲ ಅದು ಆಕರ್ಷಣೆ ಅಷ್ಟೇ ಅನ್ನಿಸುತ್ತೆ – ಮತ್ತದಕ್ಕೆ ಸಂಬಂಧಪಟ್ಟಂತ ನೆನಪುಗಳು ಕಡಿಮೆಯಾಗುತ್ತಾ ಹೋಗುತ್ತೆ. ಕಡಿಮೆಯಾಗುವ ನೆನಪುಗಳನ್ನು ಮತ್ತೆ ಮತ್ತೆ ನೆನಪಿಸುವ ಕೆಲಸವನ್ನು ನಮ್ಮ ಸ್ನೇಹ ಮಾಡಿಬಿಡುತ್ತೆ ಅನ್ನೋ ಭಯವಾಯಿತು. ಜೊತೆಗೆ ನನ್ನಲ್ಲಿವತ್ತು ಇಲ್ಲದಿರೋ ಪ್ರೀತಿ ಮುಂದೊಂದು ದಿನ ಮೂಡಿಬಿಟ್ಟರೆ ಎನ್ನುವ ಭಯವೂ ಇತ್ತು. ನನ್ನ ಸದ್ಯದ ಗುರಿ ಪಿಜಿ ಸೀಟ್ ತೆಗೆದುಕೊಳ್ಳುವುದು. ಆ ಗುರಿಯಿಂದ ವಿಚಲಿತನಾಗುವ ಮನಸ್ಸೂ ಇರಲಿಲ್ಲ”

‘ನಿನ್ನ ಮಾತೆಲ್ಲ ಒಪ್ತೀನಿ. ಆದರೆ ಹಳೆಯ ಪ್ರೀತಿ ಮತ್ತದಕ್ಕೆ ಸಂಬಂಧಪಟ್ಟಂತ ನೆನಪುಗಳು ಕಡಿಮೆಯಾಗುತ್ತವೆ ಎನ್ನುವುದು ಸುಳ್ಳು. ನಿನಗೆ ಅವಳ ನೆನಪುಗಳು ಕಡಿಮೆಯಾಗಿಬಿಟ್ಟಿದೆಯಾ?’

“ಕಡಿಮೆಯಾಗೋದಿಕ್ಕೆ ಹೇಗೆ ಸಾಧ್ಯ? ದಿನನಿತ್ಯದ ಜಂಜಾಟದಲ್ಲಿ ತೊಡಗಿಕೊಂಡಿರುವಾಗ ನೆನಪಿನಿಂದ ದೂರವಿದ್ದಂತೆಯೇ ಅನ್ನಿಸುತ್ತೆ. ಆದರೆ ನೆನಪಾಗ್ತಾನೇ ಇರುತ್ತೆ”

‘ಸತ್ಯ’

“ತುಂಬಾ ಹುಳ ಬಿಟ್ಟು ಬೇಜಾರು ಮಾಡಿಬಿಟ್ನೇನೋ. ಬೆಳಿಗ್ಗೆ ನೀನು ಡ್ಯೂಟಿಗೆ ಬೇರೆ ಹೋಗಬೇಕು ಅನ್ನಿಸುತ್ತೆ. ಗುಡ್ ನೈಟ್”

‘ಇಲ್ಲ. ನಾಳೆ ನನಗೆ ಮಧ್ಯಾಹ್ನದ ಶಿಫ್ಟು. ನಿನಗೆ ನಿದ್ರೆ ಬರ್ತಿದ್ರೆ ಗುಡ್ ನೈಟ್’

“ನನಗೂ ನಿದ್ರೆ ಬರ್ತಿಲ್ಲ”

‘ಹಂಗಾಂದ್ರೆ ಏನಾದ್ರೂ ಹೇಳು’

“ನಾನೇಳಿದ್ದೆಲ್ಲ ಮುಗೀತು. ನೀನೇ ಹೇಳ್ಬೇಕು”

‘ನನಗೆ ಆ ಮಧು ಬಗ್ಗೆ ಜೆಲಸಿ ಆಗ್ತಿದೆ’

“ಹ್ಹ ಹ್ಹ ಯಾಕೋ”

‘ಗೊತ್ತಿಲ್ಲ. ಹೋಗ್ಲಿ ಬಿಡು’

“ಸರಿ. ನನ್ನ ಸ್ಟೋರಿ ಕೇಳಿ ಆಯ್ತಲ್ಲ. ನಿನ್ನದೇನಾದ್ರೂ ಲವ್ ಸ್ಟೋರಿ? ನಿನ್ದೇನು ಅರೇಂಜ್ ಮ್ಯಾರೇಜೋ ಲವ್ ಮ್ಯಾರೇಜೋ”

‘ನನ್ನದು ಒಂದು ದೊಡ್ಡ ಲವ್ ಸ್ಟೋರಿ ಇದೆ. ನಿನ್ನ ಕತೆಯಷ್ಟು ನವಿರಾಗಿಲ್ಲ. ಒರಟುತನ ತುಂಬಿಬಿಟ್ಟಿದೆ’

ಮುಂದಿನ ಭಾಗವನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment