Feb 1, 2019

ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಮೈತ್ರಿಕೂಟ ರಚನೆಯಾಗುತ್ತದೆಯೇ?

ಕು.ಸ.ಮಧುಸೂದನರಂಗೇನಹಳ್ಳಿ
ತಮಿಳುನಾಡಿನ ಅಧಿಕಾರರೂಢಪಕ್ಷ ಎ.ಐ.ಎ.ಡಿ.ಎಂ.ಕೆ. ನಿದಾನವಾಗಿ ಬಾಜಪ ನೇತೃತ್ವದ ಎನ್.ಡಿ.ಎ. ಮೈತ್ರಿಕೂಟದತ್ತ ಸರಿಯುತ್ತಿರುವ ಎಲ್ಲ ಲಕ್ಷಣಗಳೂ ಸ್ಪಷ್ಟವಾಗಿ ಗೋಚರವಾಗುತ್ತಿವೆ. ಬಾಜಪ ಸಹ ಇದಕ್ಕೆ ಪೂರಕವಾಗಿಯೇ ತನ್ನ ರಾಜಕಾರಣದ ದಾಳಗಳನ್ನು ಉರುಳಿಸುತ್ತಿದೆ.

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರುವುದು ಕಷ್ಟವೆಂಬುದು ಬಾಜಪಕ್ಕೆ ಮನವರಿಕೆಯಾಗಿದೆ. ಕೆಲತಿಂಗಳ ಹಿಂದೆ ನಡೆದ ಮದ್ಯಪ್ರದೇಶ, ರಾಜಾಸ್ಥಾನ, ಚತ್ತೀಸಗಡ ಮೂರು ರಾಜ್ಯಗಳ ವ್ಯತಿರಿಕ್ತ ಪಲಿತಾಂಶ, ದಿನದಿಂದ ದಿನಕ್ಕೆ ಗಟ್ಟಿಯಾಗುವತ್ತ ನಡೆದಿರುವ ವಿರೋಧಪಕ್ಷಗಳ ಮಹಾಮೈತ್ರಿಯ ಮಾತುಗಳು, ಉತ್ತರಪ್ರದೇಶದಲ್ಲಿ ಬಹುಜನಪಕ್ಷ ಮತ್ತು ಸಮಾಜವಾದಿ ಪಕ್ಷಗಳ ನಡುವೆ ನಡೆದ ಸ್ಥಾನ ಹೊಂದಾಣಿಕೆಯ ಅಂತಿಮ ಪ್ರಕ್ರಿಯೆ, ಕೊಲ್ಕೊತ್ತಾದಲ್ಲಿ ತೃಣಮೂಲ ಕಾಂಗ್ರೇಸ್ಸಿನ ನಾಯಕಿ ಕುಮಾರಿ ಮಮತಾ ಬ್ಯಾನರ್ಜಿ ಆಯೋಜಿಸಿದ್ದ ವಿರೋಧಪಕ್ಷಗಳ ಬೃಹತ್ ರ್ಯಾಲಿ, ಉತ್ತರ ಪ್ರದೇಶದ ರಾಜಕಾರಣಕ್ಕೆ ಕಾಂಗ್ರೇಸ್ಸಿನ ಪ್ರಿಯಾಂಕಗಾಂದಿ ಪ್ರವೇಶಿಸಿರುವುದು ಬಾಜಪ ನಾಯಕರುಗಳ ನಿದ್ದೆಗೆಡಿಸಿರುವುದು ನಿಜ. ಇದರ ಜೊತೆಗೆ ಅದರ ಕೆಲವು ಮಿತ್ರಪಕ್ಷಗಳು ದೂರವಾಗಿವೆ. ಆಂದ್ರಪ್ರದೇಶದ ತೆಲುಗುದೇಶಂ ಹಾಗು ಜಮ್ಮು ಕಾಶ್ಮೀರದ ಪಿ.ಡಿ.ಪಿ. ಪಕ್ಷಗಳು ಈಗಾಗಲೇ ಎನ್.ಡಿ.ಎ. ಮೈತ್ರಿಕೂಟದಿಂದ ಹೊರಬಂದಿವೆ.ಮಹಾರಾಷ್ಟ್ರದಲ್ಲಿ ಶಿವಸೇನೆ ಬಾಜಪದ ವಿರುದ್ದ ಸ್ವತಂತ್ರವಾಗಿ ಸ್ಪರ್ದಿಸುವುದಾಗಿ ಹೇಳಿಕೊಂಡಿದೆ. ಈ ನಡುವೆ ಬಿಹಾರದ ಮುಖ್ಯಮಂತ್ರಿಗಳಾದ ಸಂಯುಕ್ತ ಜನತಾದಳದ ಶ್ರೀ ನಿತೀಶ್ ಕುಮಾರ್ ತ್ರಿವಳಿ ತಲಾಖ್ ಮತ್ತು ಪೌರತ್ವ ಮಸೂದೆಗಳ ಬಗೆಗಿನ ಕೇಂದ್ರ ಸರಕಾರದ ನೀತಿಗಳನ್ನು ನೇರವಾಗಿಯೇ ಟೀಕಿಸುತ್ತಿದ್ದಾರೆ. ಈಗಾಗಲೇ ಬಾಜಪದೊಂದಿಗೆ ಮಾಡಿಕೊಂಡಿರುವ ಸ್ಥಾನ ಹೊಂದಾಣಿಕೆಯ ಕರಾರನ್ನು ಕೊನೆಗಳಿಗೆಯಲ್ಲಿ ಅವರು ಮುರಿದರೂ ಅಚ್ಚರಿಯೇನೂ ಇಲ್ಲ.

ಇಂತಹ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಬಾಜಪ ಈಗ ಹೊಸ ಮಿತ್ರಪಕ್ಷಗಳ ಹುಡುಕಾಟದಲ್ಲಿದೆ.ಈ ದಿಸೆಯಲ್ಲಿ ಬಾಜಪದ ದೃಷ್ಠಿ ದಕ್ಷಿಣಭಾರತದ ರಾಜಕಾರಣದತ್ತ ಹೊರಳಿದೆ. ತನ್ನ ಆಂತರೀಕ ಕಚ್ಚಾಟಗಳಿಂದ ಮತ್ತು ಬಲಿಷ್ಠ ನಾಯಕತ್ವ ಇರದೆ ಕವಲುದಾರಿಯಲ್ಲಿರುವ ಎ.ಐ.ಎ.ಡಿ.ಎಂ.ಕೆಯನ್ನು ತನ್ನ ಮೈತ್ರಿಕೂಟಕ್ಕೆ ಸೆಳೆಯಲು ಬಾಜಪ ಪ್ರಯತ್ನಿಸುತ್ತಿದೆ. ತಮಿಳುನಾಡಿನ ಇನ್ನೊಂದು ಪ್ರಮುಖ ರಾಜಕೀಯ ಪಕ್ಷ ಎಂ.ಕೆ.ಸ್ಟಾಲಿನ್ ಅವರ ಡಿ.ಎಂ.ಕೆ. ಈಗಾಗಲೇ ಕಾಂಗ್ರೇಸ್ ಜೊತೆ ಇರುವುದರಿಂದ ಮತ್ತು ಸ್ವತಂತ್ರವಾಗಿ ಸ್ಪರ್ದಿಸುವ ಧೈರ್ಯವಿರದ ಎ.ಐ.ಎ.ಡಿ.ಎಂ.ಕೆ. ಕೊನೆ ಗಳಿಗೆಯಲ್ಲಿ ಬಾಜಪದ ಜೊತೆ ಮೈತ್ರಿ ಮಾಡಿಕೊಂಡರೂ ಅಚ್ಚರಿಯೇನಿಲ್ಲ.ಎ.ಐ.ಎ.ಡಿ.ಎಂ.ಕೆ.ಪಕ್ಷದ ರಾಷ್ಟ್ರೀಯ ನಾಯಕ ಶ್ರೀ ತಂಬಿದುರೈ ಮಾತ್ರ ಬಾಜಪ ಈ ವಿಷಯದಲ್ಲಿ ತಮ್ಮ ಪಕ್ಷದ ಮೇಲೆ ಒತ್ತಡಗಳನ್ನು ಹೇರುತ್ತಿದೆಯೆಂದು ಬಹಿರಂಗವಾಗಿಯೇ ಟೀಕಿಸುತ್ತಿದ್ದರೂ, ಮೊದಲಿಂದಲೂ ಅವರು ಬಾಜಪದ ನಾಯಕರುಗಳ ಜೊತೆ ಉತ್ತಮ ಸಂಬಂದವನ್ನು ಹೊಂದಿದ್ದು ಅವರ ಮಾತುಗಳನ್ನು ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ.

ಇಷ್ಟಲ್ಲದೆ ಎ.ಐ.ಎ.,ಡಿ.ಎಂ.ಕೆ. ಪಕ್ಷದಿಂದ ಉಚ್ಚಾಟನೆಯಾಗಿ ತಮ್ಮದೇ ಆದ ಎ.ಎಂ.ಎಂ.ಕೆ. ಎಂಬ ಪಕ್ಷವನ್ನು ಸ್ಥಾಪಿಸಿಕೊಂಡಿರುವ ಟಿ.ಟಿ.ವಿ. ದಿನಕರನ್ ಅವರ ಬಲಗೈಬಂಟ, ಶಾಸಕ ತಂಗತಮಿಳ್ ಸೆಲ್ವನ್ ಅವರು ಮಾಧ್ಯಮದೊಂದಿಗೆ ಮಾತಾಡುತ್ತ ಎ.ಐ.ಎ.ಡಿ.ಎಂ.ಕೆ. ದುರ್ಬಲವಾಗಿದ್ದು ಬಾಜಪ ತಮ್ಮ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ ಎಂದು ಹೇಳಿದ್ದಾರೆ. ಇದಕ್ಕೆ ಇಂಬು ಕೊಡುವಂತೆ ಕೇಂದ್ರದ ಸಚಿವರಾದ ಶ್ರೀ ರಾಮದಾಸ್ ಅತಾವಲೆಯವರು ದಿನಕರ್ ತಮ್ಮ ಹಳೆಯ ಸ್ನೇಹಿತರಾಗಿದ್ದು, ಬಾಜಪದೊಂದಿಗೆ ಮೈತ್ರಿ ಮಾಡಿಕೊಳ್ಳುವಲ್ಲಿ ಅವರಿಗೆ ಅಭ್ಯಂತರವಿರಲಾರದೆಂದು ಹೇಳಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ದಿನಕರ್ ಅವರ ಬಣ ಎ.ಐ.ಎ.ಡಿ.ಎಂ.ಕೆ.ಜೊತೆ ವಿಲೀನವಾಗುವ ಯಾವ ಸಾದ್ಯತೆಯೂ ಇಲ್ಲವಾಗಿದ್ದು ಬಾಜಪ ಇವೆರಡರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದರ ಜೊತೆಗೆ ಎಸ್ ರಾಮದಾಸ್ ಅವರ ಪಿ.ಎಂ.ಕೆ.ಮತ್ತು ರಜನಿಕಾಂತ್ ಜೊತೆಗು ಮೈತ್ರಿ ಮಾಡಿಕೊಳ್ಳಲು ಮುಂದಾಗಿದೆ.ಮೊದಲಿನಿಂದಲೂ ನರೇಂದ್ರಮೋದಿಯವರ ಜೊತೆಗೆ ಉತ್ತಮ ಭಾಂದವ್ಯ ಹೊಂದಿರುವ ರಜನಿಕಾಂತ್ ಇದಕ್ಕೆ ಒಪ್ಪ ಬಹುದಾಗಿದೆ. ಹೀಗೆ ತಮಿಳುನಾಡಿನಲ್ಲಿನ ಕಾಂಗ್ರೇಸ್ ಡಿ..ಎಂ.ಕೆ. ಮೈತ್ರಿಕೂಟಕ್ಕೆ ವಿರುದ್ದವಾಗಿ ಬಾಜಪ, ಎ.ಐ.ಎ.ಡಿ.ಎಂ.ಕೆ., ಎ.ಎಂ.ಎಂ.ಕೆ.,ಪಿ.ಎಂ.ಕೆ., ರಜನಿಕಾಂತ್ ಒಳಗೊಂಡ ಮೈತ್ರಿಕೂಟವೊಂದನ್ನು ರಚಿಸಿಕೊಳ್ಳಲು ಯತ್ನಿಸುತ್ತಿದೆ. ತನ್ಮೂಲಕ ಉತ್ತರ ಭಾರತದಲ್ಲಿ ತಮ್ಮ ಬಹುಮತಕ್ಕೆ ಕಡಿಮೆಯಾಗಿರುವ ಸ್ಥಾನಗಳಲ್ಲಿ ಕೆಲವನ್ನು ತಮಿಳುನಾಡಿಂದ ಪಡೆಯಲು ಬಾಜಪ ಪ್ರಯತ್ನಿಸುತ್ತಿದೆ. 
ಮಧುಸೂದನರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment