Jan 5, 2019

ಒಂದು ಬೊಗಸೆ ಪ್ರೀತಿ: ಪ್ರವೇಶ.

ಡಾ. ಅಶೋಕ್. ಕೆ. ಆರ್
“ಉಹ್ಞೂ. ಅವಳೆಡೆಗೆ ನನ್ನಲ್ಲಿರುವ ಪ್ರೀತಿ, ಪ್ರೇಮದ ಭಾವನೆಗಳನ್ನು ಸುಳ್ಳೆಂದು ಹೇಳಲಾರೆ, ತಿರಸ್ಕರಿಸಲಾರೆ, ಪದಗಳನ್ನು ಸುಂದರವಾಗಿ ಜೋಡಿಸಿ – ಪೋಣಿಸಿ ಭಾವನೆಗಳನ್ನು ತೇಲಿಬಿಡಲಾರೆ. ಹೌದು, ಅವಳೆಂದರೆ ನನಗಿಷ್ಟ, ಅವಳ ಮಾತು, ನಗು, ವ್ಯಕ್ತಿತ್ವ, ಬುದ್ಧಿಮತ್ತೆ, ಯೋಚನಾಶಕ್ತಿ, ಆತ್ಮ, ದೇಹ ಎಲ್ಲವೂ ನನಗಿಷ್ಟ. ಆದರೆ ನಮ್ಮಿಬ್ಬರ ಮನಸ್ಸಿನ ಹಸಿವು ಮತ್ತೊಬ್ಬರಿಗೆ ನೋವುಂಟುಮಾಡುವ ಹಸಿವಾಗಿಬಿಟ್ಟರೆ ನನ್ನ, ಅವಳ, ಅವನ ಜೀವನದ ನೆಮ್ಮದಿ ಹಾಳಾಗುವುದು. ಒಪ್ತೀನಿ, ಅವಳನ್ನು ಸಂಪೂರ್ಣವಾಗಿ ಮರೆಯುವುದು ಅಸಾಧ್ಯ, ಮನಸ್ಸಿನ ಮೂಲೆ ಮೂಲೆಯಲ್ಲೂ ವ್ಯಾಪಿಸಿರುವ, ಆಳಕ್ಕೆ ಇಳಿದಿರುವ ಅವಳನ್ನು ಹೊರದಬ್ಬುವುದು ಕಷ್ಟದ ಕೆಲಸ ಮಾತ್ರವಲ್ಲ ಅಸಾಧ್ಯವೂ ಹೌದು. ಆದರದು ಸಾಧುವಾದ, ಅನಿವಾರ್ಯವಾದ ಕೆಲಸ. ಅವನಿಗೋಸ್ಕರ ನನಗೆ ಮತ್ತು ಅವಳಿಗೆ ನೋವಾಗುವುದಾದರೆ ಆಗಲಿ. ನಮ್ಮಿಬ್ಬರಿಗೂ ಆ ನೋವನ್ನು ತಡೆದುಕೊಳ್ಳುವ ಶಕ್ತಿಯಿದೆ ಎಂಬುದು ಉತ್ಪ್ರೇಕ್ಷೆಯ ಮಾತಾಗದಿರಲಿ ಎನ್ನುವುದೇ ನನ್ನ ಆಸೆ ಆಶಯ.

ಇಷ್ಟು ದಿನದ ಗೊಂದಲಗಳಿಗೆ ತೆರೆಬೀಳಿಸಲು ಇವತ್ತಿನಿಂದಾದರೂ ಕಾರ್ಯ ಶುರುವಾಗಲಿ. ಮನಸ್ಸಿನ ಹಸಿವು ನೀಗಿಸಿದ ಈ ನಾಲ್ಕು ತಿಂಗಳು ನಿಜಕ್ಕೂ ಮರೆಯಲಾಗದಂಥಹುದು. ಮನಸ್ಸಿನ ಹಸಿವನ್ನು ಮೀರಿ ನಿಲ್ಲುವುದು ಮೇಲ್ನೋಟಕ್ಕೆ ತ್ರಾಸದಾಯಕವೆಂಬ ಭಾವನೆ ಇದೆಯಾದರೂ ಜೀವನದ ವ್ಯಾಪ್ತಿ ಈ ಮನಸ್ಸಿನ ಹಸಿವು, ಪ್ರೀತಿ, ಪ್ರೇಮದಿಂದಾಚೆಗೂ ವ್ಯಾಪಿಸಿದೆ ಎಂಬ ಸತ್ಯ (ಕೊನೇಪಕ್ಷ ನನಗೆ ಅರಿವಾಗಿರುವ ಸತ್ಯ) ನನ್ನನ್ನು ಈ ಒಂದು ಹೆಸರಿಡದ, ಹೆಸರಿಡಲಾಗದ ನಿಷ್ಕಾಮ, ಶುದ್ಧ ಸಂಬಂಧದಿಂದ ಹೊರಬರಲು ಸಹಕರಿಸುತ್ತದೆಂಬ ನಂಬಿಕೆಯಿದೆ. Soulmate ಎಂಬ ಈ ಆತ್ಮದ ಗೆಳೆತನದಿಂದ ಹೊರಬರಲು ನನಗೆ ಅತ್ಯಗತ್ಯವಾಗಿ ಬೇಕಾಗಿರುವ ಶಕ್ತಿ ನನ್ನ ಮನಸ್ಸಿನಾಳದಿಂದ ಉದ್ಭವಿಸಿ ಆತ್ಮ ದೇಹ ಮನಸ್ಸಿನಲ್ಲೆಲ್ಲ ಸಂಚರಿಸಲೆಂದು ಆಶಿಸುತ್ತೇನೆ.

ಒಂದೊಂದೇ ಎಪಿಸೋಡು ಹುಡುಕುಡುಕಿ ಓದೋಕೆ ಬೇಸರವಾ? ಪೂರ್ತಿ ಇ - ಪುಸ್ತಕ ತೆಗೆದುಕೊಳ್ಳಲು ಇಲ್ಲಿ ಕ್ಲಿಕ್ಕಿಸಿ.

ಒಂದಷ್ಟು ದಿನ ಹಿಂಸೆಯಾಗಬಹುದು, ಪರೀಕ್ಷೆಗೆ ತಯಾರಾಗುವ ನೆಪದಲ್ಲಿ ಸದ್ಯಕ್ಕೆ ಈ ಹಿಂಸೆಯನ್ನು ಬದಿಗೆ ಸರಿಸಬಹುದು. ಪರೀಕ್ಷೆಯ ನಂತರ ಮತ್ತೆ ದುತ್ತನೆ ಎದುರಾಗುವ ಮನದ ಆ ಹಿಂಸ್ರಪಶುವನ್ನು ಸೋಲಿಸಲು ನಾನು ಕನಸಿರುವ ಕೆಲಸಗಳಲ್ಲಿ, ಗುರಿಗಳತ್ತ ಸಾಗುವ ಹಾದಿಯ ಏಳುಬೀಳುಗಳಲ್ಲಿ ಪ್ರಯತ್ನಿಸುವೆ. ಸಾಧ್ಯ ಅಸಾಧ್ಯಗಳು ನಮ್ಮ ಮನಸ್ಸಿನಲ್ಲಿದೆ. ಆಸೆಯನ್ನು ಸೋಲಿಸಿದರಷ್ಟೇ ಮುಕ್ತಿ ದಕ್ಕಲಾರದು. ನಿಜವಾಗಿಯೂ ನಾವು ಮುಕ್ತರಾಗಬೇಕಾದರೆ ಆತ್ಮವನ್ನೇ ಸಾಯಿಸಬೇಕೇನೋ. ಎಲ್ಲವನ್ನೂ ತೊರೆದು – ಮೀರಿ ನಿಲ್ಲುವುದೇ ಮುಕ್ತತನವಾದಲ್ಲಿ ಆತ್ಮ ಕೂಡ ಆ ಎಲ್ಲದರ ಒಂದು ಭಾಗವೇ ಇರಬೇಕೆನ್ನಿಸುತ್ತದೆ.

ಇಲ್ಲಿ ಈ ಹಿಂಸೆ, ಪ್ರಶ್ನೆ ಕೇವಲ ನನಗೆ ಸೀಮಿತವಾಗಿರುವುದಲ್ಲ. ಅವಳಿಗೂ ಸಂಬಂಧಿಸಿದಂಥವು. ನನ್ನಲ್ಲಿನ ಗೊಂದಲಗಳು, ನೈತಿಕತೆಯ ಪ್ರಶ್ನೆ (ಆ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾನು ಸೋತಿರುವೆನೆಂಬುದು ನಿಜ) ಅವಳಿಗೆ ಯಾಕೆ ಕಾಡುತ್ತಿಲ್ಲ? ಪ್ರೀತಿಯ ಅರ್ಥ ನನಗೆ ತಿಳಿದಿಲ್ಲವೇ? ಅಥವಾ ಪ್ರೀತಿ, ಪ್ರೇಮ ಮತ್ತು ಸಮಾಜವನ್ನು ಅವಳ ಹಾಗೆ ಬೇರೆಬೇರೆಯಾಗಿ ನೋಡುವುದು ನನಗೆ ಸಾಧ್ಯವಾಗುತ್ತಿಲ್ಲವಾ? ಪ್ರಶ್ನೆಗಳಿಗೇನು ಸಾವಿರವಿದೆ. ಕೆಲವೊಂದು ಪ್ರಶ್ನೆಗೆ ನಮ್ಮ ಸಮಾಧಾನಕ್ಕೆ ತಕ್ಕಹಾಗೆ ಉತ್ತರ ಹುಡುಕುವುದೂ ಸುಲಭ. ಪ್ರಶ್ನೆಗಳ ನಡುವೆಯೇ ಸಿಕ್ಕಿಹಾಕಿಕೊಂಡು ಉತ್ತರ ಹುಡುಕುವ ಹಂಬಲವ್ಯಾಕೆ? ಆ ಪ್ರಶ್ನೆಗಳು ಹುಟ್ಟಿದ ಸಂದರ್ಭ ಸನ್ನಿವೇಶಗಳ ಯಾವ ದಡದಲ್ಲಿ ನಾವು ನಿಂತಿದ್ದೀವೆನ್ನುವುದರ ಮೇಲೆ ನಮ್ಮ ಉತ್ತರಗಳೂ ಹುಟ್ಟುತ್ತವೆ. ಒಂದು ದಡದಲ್ಲಿ ನಿಂತು ಇಷ್ಟು ದಿನ ಚಿಂತಿಸಿದ್ದಾಯಿತು. ಇನ್ನಿದು ಹೊರಡುವ ಸಮಯ. ಮತ್ತೊಂದು ದಡಕ್ಕೂ ನಾನೀಗ ನಿಂತಿರುವ ದಡಕ್ಕೂ ನಡುವೆ ಅಗಾಧ ಶಕ್ತಿಯ ಹರಿವಿರುವ ಗೊಂದಲಗಳ, ಯೋಚನೆ ಚಿಂತನೆಗಳ ನದಿಯಿದೆ. ಅದನ್ನು ಈಸಿ ದಾಟಬೇಕು. ಕೊಚ್ಚಿ ಹೋಗಬಹುದು, ಹುಚ್ಚು ರಭಸದ ನದಿ ಮತ್ತೆ ಹಳೆಯ ದಡಕ್ಕೇ ನನ್ನನ್ನು ಎಳೆತಂದು ಬಿಸಾಡಬಹುದು. ಮರೆತು ಮತ್ತೊಂದು ದಡಕ್ಕೂ ಎಸೆಯಬಹುದು. ಆ ನದಿಯ ಮೇಲಿನ ನಂಬುಗೆಯನ್ನು ಈ ದಡದಲ್ಲೇ ತೊರೆದು ಸ್ವಪ್ರಯತ್ನದಿಂದ ಮತ್ತೊಂದು ದಡ ಸೇರುವ ಪ್ರಯತ್ನ ಈಗಿನಿಂದಲೇ ಶುರುವಾಗಲಿ. ಆ ದಡ ತಲುಪಿ ಹೊಸ ಉತ್ತರಗಳು ಚಿಂತನೆಯ ಮೂಸೆಯಲ್ಲಿ ಅರಳಿದರೆ ನಾನು ಮುಕ್ತನಾಗಬಹುದು, ಮುಕ್ತನಾಗಬಲ್ಲೆ ಎಂಬ ಭರವಸೆಯಿದೆ. ತಲುಪಲು ವಿಫಲನಾದರೆ ಪ್ರಯತ್ನಪಟ್ಟ ನೆಮ್ಮದಿಯದರೂ ಉಳಿದೀತು” ಸಾಗರ್ ಓದಿ ಮುಗಿಸಿದ. ಆತನ ಧ್ವನಿಯಲ್ಲಿದ್ದ ಉದ್ವಿಗ್ನತೆ ಫೋನಿನಲ್ಲೂ ಸ್ಪಷ್ಟವಾಗಿ ಕೇಳುತ್ತಿತ್ತು. ಏನು ಪ್ರತಿಕ್ರಿಯಿಸಬೇಕೆಂದು ತಿಳಿಯಲಿಲ್ಲ. ಮೌನವಾಗಿದ್ದೆ.

“ಏನಾದ್ರೂ ಹೇಳೇ ಧರು” ಸಾಗರ್ ಗೋಗರೆದ.

“ಏನ್ ಹೇಳ್ಲೋ?” ಕಣ್ಣೀರಾಗಿದ್ದೆ. “ಒಟ್ನಲ್ಲಿ ಯಾರಿಗೂ ನೆಮ್ಮದಿ ಕೊಡೋ ಜನ್ಮವಾಗಲಿಲ್ಲ ನಂದು. ನಾಳೆ ಮಾತಾಡ್ತೀನಿ ಕಣೋ. ಸುಸ್ತಾಗಿ ಹೋಗಿದೆ, ದೇಹಕ್ಕೂ ಮನಸ್ಸಿಗೂ” ಕಾಲ್ ಕಟ್ ಮಾಡಿದೆ. ‘ಡಾಕ್ಟರ್ ಕೇಸ್ ಬಂದಿದೆ’ ರಾತ್ರಿ ಪಾಳಿಯಲ್ಲಿದ್ದ ನರ್ಸ್ ವಿಮಲಾ ಬಾಗಿಲು ಬಡಿದಳು. ‘ಹ್ಞಾಂ. ಬಂದೆ’ ಎಂದ್ಹೇಳಿ ಮುಖಕ್ಕೊಂದಷ್ಟು ನೀರು ಚಿಮುಕಿಸಿಕೊಂಡು ಕನ್ನಡಿ ನೋಡಿದೆ. ಧರಣಿಯ ಎಂದಿನ ನಗು ಮಾಯವಾಗಿತ್ತು. ಅರೆಕ್ಷಣದಲ್ಲಿ ಎಲ್ಲರೂ ಹೊಗಳುವ ಮಾಂತ್ರಿಕ ನಗುವನ್ನು ಮರಳಿ ಗಳಿಸಿ ರೋಗಿಯನ್ನು ಪರೀಕ್ಷಿಸಲು ಹೊರನಡೆದೆ.

No comments:

Post a Comment