Jan 14, 2019

ಬಾಜಪದ ಬಲ ಕುಗ್ಗಿಸಬಲ್ಲ ಮೈತ್ರಿ

ಕು.ಸ.ಮಧುಸೂದನ ರಂಗೇನಹಳ್ಳಿ
ಇಂಡಿಯಾದ ಬಹುಪಕ್ಷೀಯ ರಾಜಕೀಯ ವ್ಯವಸ್ಥೆಯಲ್ಲಿ ಶಾಶ್ವತ ಶತ್ರುಗಳಾಗಲಿ, ಶಾಶ್ವತ ಮಿತ್ರರುಗಳಾಗಲಿ ಇರಲು ಸಾದ್ಯವಿಲ್ಲವೆಂಬ ಮಾತು ಮತ್ತೆ ಮತ್ತೆ ಸಾಬೀತಾಗುತ್ತಲೇ ಇದೆ. ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾಗುವ ಮುನ್ನವೇ ಉತ್ತರ ಪ್ರದೇಶದ ಎರಡು ಬಲಿಷ್ಠ ಪ್ರಾದೇಶಿಕ ಪಕ್ಷಗಳಾದ ಶ್ರೀಅಖಿಲೇಶಯಾದವರ ಸಮಾಜವಾದಿ ಪಕ್ಷ ಮತ್ತು ಕುಮಾರಿ ಮಾಯಾವತಿಯವರ ಬಹುಜನ ಪಕ್ಷ ಚುನಾವಣಾಪೂರ್ವ ಮೈತ್ರಿಯನ್ನು ಮಾಡಿಕೊಂಡಿರುವುದೇ ಇದಕ್ಕೆ ಸಾಕ್ಷಿ! ತೊಂಭತ್ತರ ದಶಕದಲ್ಲಿ ಮಿತ್ರರಾಗಿದ್ದ ಈ ಎರಡೂ ಪಕ್ಷಗಳು ತದನಂತರ ವ್ಯಕ್ತಿಗತ ಪ್ರತಿಷ್ಠೆಯ ಪ್ರತಿಷ್ಠಾಪನೆಯಿಂದ ದೂರವಾಗಿ, ಸರದಿಯಂತೆ ಉತ್ತರ ಪ್ರದೇಶದಲ್ಲಿ ಆಡಳಿತ ನಡೆಸುತ್ತ ಬಂದಿದ್ದವು. ಆದರೆ 2017ರ ಹೊತ್ತಿಗೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರ ವರ್ಚಸ್ಸು ಮತ್ತು ರಾಮಮಂದಿರದ ವಿಷಯಗಳಿಂದಾಗಿ ಬಾಜಪ ಈ ಎರಡೂ ಪಕ್ಷಗಳನ್ನು ಸೋಲಿಸಿ ಉತ್ತರ ಪ್ರದೇಶದ ಗದ್ದುಗೆ ಹಿಡಿಯಿತು. ಆ ಸೋಲಿನ ಕಾರಣಗಳನ್ನು ಅರ್ಥಮಾಡಿಕೊಂಡಂತೆ ಇದೀಗ ಬಾಜಪವನ್ನು ಸೋಲಿಸಲೇಬೇಕೆಂಬ ಕಾರಣದಿಂದ, ಸುಮಾರು ಎರಡು ದಶಕಗಳ ತಮ್ಮ ವೈಮನಸ್ಸನ್ನು ಹಿನ್ನೆಲೆಗೆ ನೂಕಿ ಮೈತ್ರಿಕೂಟವನ್ನು ರಚಿಸಿಕೊಂಡಿವೆ.

ಬಾಜಪ ವಿರೋಧಿ ಮೈತ್ರಿಕೂಟವೊಂದರ ನಿರೀಕ್ಷೆಯಲ್ಲಿದ್ದವರಲ್ಲಿ ಈ ಎರಡೂ ಪಕ್ಷಗಳು ಕಾಂಗ್ರೆಸ್ಸನ್ನು ಹೊರಗಿಟ್ಟು ಮಾಡಿಕೊಂಡ ಈ ಮೈತ್ರಿ ಬಾಜಪಕ್ಕೆ ಅನುಕೂಲಕರವಾಗುತ್ತದೆಯೆಂಬ ಸಣ್ಣದೊಂದು ಅನುಮಾನ ಹುಟ್ಟು ಹಾಕುವುದು ಸಹಜ. ಆದರೆ ಉತ್ತರಪ್ರದೇಶದ ಜಾತಿ ಸಮೀಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿದವರಿಗೆ ಕಾಂಗ್ರೆಸ್ಸನ್ನು ಹೊರಗಿಟ್ಟು ಮಾಡಿಕೊಂಡ ಮೈತ್ರಿ ಕಾಂಗ್ರೆಸ್ಸು ಸೇರಿದಂತೆ ಮೂರೂ ಪಕ್ಷಗಳಿಗೆ ಅನುಕೂಲಕರವಾಗಿ ಪರಿಣಮಿಸುವುದು ಖಚಿತವೆನಿಸುತ್ತದೆ.

ಸಮಾಜವಾದಿ ಪಕ್ಷ ಮತ್ತು ಬಹುಜನಪಕ್ಷಗಳ ಮೈತ್ರಿಯಿಂದ ಹೊರಗಿರುವ ಕಾಂಗ್ರೆಸ್ ಸಹ ಈ ಮೈತ್ರಿಯಿಂದ ಲಾಭ ಪಡೆಯುತ್ತದೆಯೆಂಬುದು ರಾಜಕೀಯ ಪಂಡಿತರುಗಳ ಲೆಕ್ಕಾಚಾರ. ಉತ್ತರಪ್ರದೇಶದ ಮಟ್ಟಿಗೆ ಮೇಲ್ವರ್ಗಗಳು ಮತ್ತು ಬ್ರಾಹ್ಮಣರು, ಕೆಲವು ವಿಶೇಷ ಸಂದರ್ಭಗಳನ್ನು ಹೊರತುಪಡಿಸಿ, ಕಾಂಗ್ರೆಸ್ಸಿಗೆ ಬೆಂಬಲ ನೀಡುತ್ತ ಬಂದಿದ್ದಾರೆ. 2017ರ ವಿದಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷಗಳು ಮೈತ್ರಿ ಮಾಡಿಕೊಂಡಾಗ ಈ ವರ್ಗಗಳು ಸಹಜವಾಗಿ ಬಾಜಪದ ಕಡೆಗೆ ಹೋಗಿದ್ದವು. ಯಾಕೆಂದರೆ ಈ ಮೇಲ್ಜಾತಿಗಳು ಸಮಾಜವಾದಿ ಪಕ್ಷದ ವಿರೋಧಿ ರಾಜಕಾರಣದ ಪರವಾಗಿ ನಿಲ್ಲುವಂತವು. ಈ ವರ್ಗ ಸಮಾಜವಾದಿ ಪಕ್ಷವನ್ನು ದ್ವೇಷಿಸುವ, ಬಾಜಪವನ್ನು ಅಷ್ಟಾಗಿ ಇಷ್ಟಪಡದ ರಾಜಕಾರಣ ಮಾಡುತ್ತ ಬಂದವು. ಕಾಂಗ್ರೆಸ್ ಸಮಾಜವಾದಿ ಪಕ್ಷದ ಜೊತೆ ಹೋದರೆ ಈ ಮೇಲ್ವರ್ಗಗಳು ಸಹಜವಾಗಿ ಬಾಜಪದ ಕಡೆ ಹೋಗುತ್ತವೆ. ಈಗ ಸಮಾಜವಾದಿ ಪಕ್ಷದಿಂದ ದೂರ ನಿಲ್ಲುವ ಕಾಂಗ್ರೆಸ್ ಆ ಮತಗಳನ್ನು ಪಡೆಯುವುದರಿಂದ ಬಾಜಪ ಗೆಲ್ಲಲು ಪ್ರಯಾಸ ಪಡಬೇಕಾಗಿ ಬರುತ್ತದೆ. ಇದರ ಜೊತೆಜೊತೆಗೆ ಸಮಾಜವಾದಿಪಕ್ಷ ಗೆಲ್ಲುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹಾಗು ಕಾಂಗ್ರೆಸ್ ಗೆಲ್ಲಬಲ್ಲ ಸಾದ್ಯತೆ ಇರುವ ಕ್ಷೇತ್ರಗಳಲ್ಲಿ ಸಮಾಜವಾದಿ ಪಕ್ಷಗಳು ಸಾಂಕೇತಿಕವಾಗಿ ಸ್ಪರ್ದಿಸುವುದರಿಂದ ಬಾಜಪದ ಗೆಲುವಿನ ಓಟಕ್ಕೆ ತಡೆಯೊಡ್ಡಬಹುದಾದ ಸನ್ನಿವೇಶವೊಂದನ್ನು ನಿರ್ಮಿಸುವ ಸಾಧ್ಯತೆ ಸಹ ಇದೆ.

ದಲಿತ ಮತ್ತು ಮುಸ್ಲಿಂ ವರ್ಗಗಳು ಸಮಾಜವಾದಿ ಮತ್ತು ಬಹುಜನಪಕ್ಷಗಳ ಜೊತೆ ನಿಲ್ಲುವುದರಿಂದ ದೃವೀಕರಣಗೊಳ್ಳುವ ಮೇಲ್ವರ್ಗಗಳ ಮತಗಳು ಸಾರಾಸಗಟಾಗಿ ಬಾಜಪಕ್ಕೆ ಹೋಗುವುದನ್ನು ತಡೆಯಬಹುದಾಗಿದೆ. ಕಳೆದ ವರ್ಷ ನಡೆದ ಉಪಚುನಾವಣೆಗಳ ಪಲಿತಾಂಶಗಳು ಇದನ್ನು ಸಾಬೀತು ಪಡಿಸಿವೆ.

ಇಂತಹ ಆಶಾವಾದದೊಂದಿಗೆ ಸಮಾಜವಾದಿ ಮತ್ತು ಬಹುಜನ ಪಕ್ಷಗಳು ಕಾಂಗ್ರೆಸ್ಸನ್ನು ಹೊರಗಿಟ್ಟು ಮೈತ್ರಿಮಾಡಿಕೊಂಡಿದ್ದರೆ, ಕಾಂಗ್ರೆಸ್ ಕೂಡಾ ಇದನ್ನು ಅರ್ಥ ಮಾಡಿಕೊಂಡು ತನ್ನ ಚುನಾವಣಾ ತಂತ್ರವನ್ನು ರೂಪಿಸಬೇಕಾಗಿದೆ.

ಕು.ಸ. ಮಧುಸೂದನರ ಮತ್ತಷ್ಟು ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ಕಿಸಿ. 

No comments:

Post a Comment