Dec 18, 2018

ಅವಳ ನೆನಪಿನಲ್ಲಿ.


ಡಾ. ಅಶೋಕ್. ಕೆ. ಆರ್. 
ಒಂದ್ ಹುಡ್ಗೀನ್ ಇಷ್ಟ ಪಟ್ಟು ಧೈರ್ಯ ತಕಂಡ್ ಪ್ರಪೋಸು ಮಾಡಿ ಅಪ್ಪಿ ತಪ್ಪಿ ಅವಳು ಒಪ್ಪೂ ಬಿಟ್ಟು 'ಶುಭಂ' ಅಂತೊಂದ್ ಬೋರ್ಡು ಹಾಕೊಳ್ಳೋದಕ್ಕಿಂತ ಗ್ಯಾಪ್ ಗ್ಯಾಪಲ್ಲಿ ಒಂದೊಂದ್ ಹುಡ್ಗಿ ಜೊತೆ ಒನ್ ವೇ ಲವ್ವಲ್ ಬಿದ್ದು ನಾಕೈದು ವರ್ಷಕ್ಕೊಂದ್ಸಲ ಹಳೇ ಗಾಯ ಕೆರ್ಕಂಡ್ ಕೂರೋದ್ ಚೆಂದ್ವೋ ಏನೋಪ! 

ಮೊನ್ಮೊನ್ನೆ ನಮ್ ಜೆ.ಎಸ್.ಎಸ್. ಮೆಡಿಕಲ್ ಕಾಲೇಜಿನ ಇಮಿಡೀಯಟ್ ಸೀನಿಯರ್ಸು ಗೆಟ್ ಟುಗೆದರ್ ಮಾಡ್ಕಂಡಿದ್ ಫೋಟೋಗಳನ್ನ ಹಾಕಂಡಿದ್ರು ಎಫ್.ಬೀಲಿ. ಅದರಲ್ಲಿದ್ದ ಗ್ರೂಪ್ ಫೋಟೋನ ತಟಕ್ಕಂತ ಝೂಮ್ ಮಾಡಿದ್ದು ಅವಳ ನೋಡುವ ನೆಪದಿಂದ! ಆರೇಳು ವರ್ಷ ಆಗಿತ್ತಾಂತ ಅವಳ ಮುಖ ನೋಡಿ?! 

ಹೆಚ್ಚು ಕಡಿಮೆ ಹದಿನೇಳು ವರುಷದ ಹಿಂದಿನ ನೆನಪುಗಳು. ನಮ್ ಕಾಲೇಜ್ ಶುರುವಾಗಿ ಮೊದಲ ಇಂಟರ್ನಲ್ಸ್ ಮುಗಿಯುವ ಸುಮಾರಿಗೆ ನಮ್ ಇಮಿಡೀಯಟ್ ಸೀನಿಯರ್ಸುಗಳ ರಿಸಲ್ಟ್ ಬಂದಿತ್ತು. ಊರಿಗೋಗಿದ್ದ ಸೀನಿಯರ್ಸ್ ಎಲ್ಲಾ ಕಾಲೇಜಿಗೆ ವಾಪಸ್ಸಾದ್ರು. ಎರಡನೇ ವರ್ಷದ ಶುರುವಿನಲ್ಲಿ ಓದಿ ದಬಾಕೋಕು ಏನೂ ಇರೋಲ್ಲ. ಜೊತೆಗೆ ಮೆಡಿಕಲ್ನಲ್ಲಿ ಮೊದಲ ವರ್ಷ ಪಾಸಾದ್ರೆ ಡಾಕ್ಟರಾಗಿಬಿಟ್ಟ ಫೀಲಿಂಗ್ ತಲೇಲ್ ಇರ್ತದೆ! ಸೀನಿಯರ್ಸ್ ಎಲ್ಲಾ ಗುಂಪು ಗುಂಪಾಗಿ ಲೈಬ್ರರಿಗೆ ಬಂದು ಕೂರೋರು. ಜೂನಿಯರ್ಸ್ ಯಾರ್ನಾದ್ರೂ ಕರುಸ್ಕಂಡು ಅದೂ ಇದೂ ತರ್ಲೆ ಪ್ರಶ್ನೆ ಕೇಳ್ತಾ ಮಜಾ ತಗೊಳ್ಳೋರು. ಆಗಲೇ ಅವಳು ಕಂಡಿದ್ದು. 
ಕಾಲೇಜು ಮುಗಿಸಿ ರೂಮಿಗೆ ಬಂದು ಒಂದರ್ಧ ಒಂದು ಘಂಟೆ ಬಿಟ್ಟು ಲೈಬ್ರರಿಗೆ ಹೊರಟುಬಿಡ್ತಿದ್ದೊ. ಲೈಬ್ರರಿಗೆ ಹೋಗಿ ಒಂದೆರಡು ಮೂರು ಘಂಟೆ ಓದು - ಮಾತು - ಓದು. ಮೂರ್ ಟೇಬಲ್ ಬಿಟ್ಟು ಕುಳಿತವಳ ಕಡೆಗೆ ನೋಟ ಹೊರಳಿದ್ದೇಕೋ ಇವತ್ತಿಗೂ ಗೊತ್ತಿಲ್ಲ. ನಾ ನೋಡ್ದೆ, ನಾ ನೋಡಿದ್ದನ್ನ ಅವಳೂ ಗಮನಿಸಿದಳು. ಜೂನಿಯರ್ ಹುಡುಗ ಗಂಭೀರವಾಗಿ ತಲೆ ತಗ್ಗಿಸಿಕೊಂಡು ಆಕಸ್ಮಿಕವಾಗಿ ನೋಡಿದ್ದು ಅನ್ನೋ ಭಾವನೆ ದಾಟಿಸಬೇಕಿತ್ತೇನೋ. ದಾಟಿಸಲಿಲ್ಲ. ಅವಳು ಗಮನಿಸಿದಷ್ಟೂ ನಾ ನೋಡಿದ್ದು ಹೆಚ್ಚಾಯಿತಷ್ಟೇ. ದಿನಕ್ ಮೂರ್ನಾಲ್ಕು ಜನರನ್ನ ಕರೆಸಿ ತರ್ಲೆ ಪ್ರಶ್ನೆಗಳನ್ನ ಕೇಳಿ ಮಜಾ ತಗೊಳ್ತಿದ್ದವಳವಳು. ಅಂತವಳಿಗೆ ಜೂನಿಯರೊಬ್ಬ ಹಿಂಗ್ ಗುರಾಯ್ಸೋದು ಸರಿ ಕಾಣಲು ಸಾಧ್ಯವೇ! ಎರಡ್ ದಿನ ನೋಡಿದ್ಲು, ನಾನೂ ನೋಡಿದೆ ಮೂರನೇ ದಿನ ಅವಳ ಕಸಿನ್ನೋ ಊರಿನವವೋ ದೂರದ ನೆಂಟನೋ ನಮ್ಮ ಕ್ಲಾಸಿನಲ್ಲೇ ಇದ್ದ ಗೆಳೆಯನ ಮೂಲಕ ನನ್ನನ್ನು ಕರೆಸಿದಳು ಲೈಬ್ರರಿಯ ಹೊರಗೆ. ‘ಏನ್ ಹೆದ್ರುಕೋಬೇಡ. ಸುಮ್ನೆ ನಾಕ್ ಪ್ರಶ್ನೆ ಕೇಳ್ತಾರಷ್ಟೇ’ ಅಂದ. ಅಷ್ಟೊತ್ತಿಗಾಗಲೇ ಸೂಪರ್ ಸೀನಿಯರ್ಸುಗಳಿಗೆಲ್ಲ ತಿರುಗಿ ಮಾತನಾಡಿ ಏನ್ ಕಿತ್ಕೋತೀರೋ ಕಿತ್ಕೋ ಹೋಗ್ರಿ ಅಂತೆಲ್ಲ ಅಂದಿದ್ದ ಇತಿಹಾಸವಿತ್ತು. ಜೊತೆಗೆ ಅವಳು ನನ್ನ ಕರೆಸ್ತಿರೋದು ಬರೀ ಪ್ರಶ್ನೆ ಕೇಳೋಕಷ್ಟೇ ಅಲ್ಲ ಅಂತಾನೂ ಗೊತ್ತಿತ್ತಲ್ಲ. ಗೆಳೆಯನ ಮಾತಿಗೆ ಸುಮ್ಮನೆ ನಕ್ಕೆ. 

ಅವಳೂ ಅವಳ ಗೆಳತಿ (ಯಾರದು ಅಂತ ಮರ್ತೋಗಿದೆ) ಲೈಬ್ರರಿಯ ಹೊರಗಿನ ಮೆಟ್ಟಿಲುಗಳ ಕೆಳಗೆ ರಸ್ತೆ ಬದಿಯಲ್ಲಿ ನಿಂತಿದ್ದರು. ಹೋದೆ. ಹೆಸರು ಊರು ಅಪ್ಪ ಅಮ್ಮ ಇತ್ಯಾದಿ ಕುಶಲೋಪರಿಗಳೆಲ್ಲ ಮುಗಿಯಿತು. ಹೆಚ್ಚು ಕೇಳಿದ್ದು ಅವಳ ಗೆಳತಿಯೇ. ತರ್ಲೆ ಪ್ರಶ್ನೆಗಳೇನು ಮೂಡಿ ಬರಲಿಲ್ಲ. ‘ಎಷ್ಟು ಬಯೋಕೆಮಿಸ್ಟ್ರೀಲಿ’ ಒಂದಷ್ಟು ಧಿಮಾಕಿನಿಂದಲೇ ಕೇಳಿದಳು. ಬಯೋಕೆಮಿಸ್ಟ್ರೀ ಬಗ್ಗೇನೇ ಕೇಳಿದ್ದಕ್ಕೂ ಒಂದು ಕಾರಣವಿತ್ತು. ಮೊದಲ ಇಂಟರ್ನಲ್ಸ್ ನಲ್ಲಿ ಬಯೋಕೆಮ್ ಪಾಸಾಗಿದ್ದೋರ ಸಂಖ್ಯೆ ತುಂಬಾನೇ ಕಡಿಮೆ. ಇವ್ನೂ ಹೆಂಗಿದ್ರೂ ಫೇಲಾಗಿರ್ತಾನೆ ಆ ನೆಪದಲ್ಲೇ ಒಂದಷ್ಟು ಬಯ್ದು ಬುದ್ವಾದ ಹೇಳುವ ಅಂತಿತ್ತೇನೋ ಅವಳ ಮನದಲ್ಲಿ. ಸಣ್ಣಗೆ ನಗುತ್ತಾ ‘ಪಾಸು' ಅಂತೇಳಿದೆ. ಎಲಾ ಇವನ ಅನ್ನುವ ಅಚ್ಚರಿಯ ಭಾವವನ್ನು ತಡೆಯುವ ಪ್ರಯತ್ನವನ್ನೇನೂ ಅವಳು ಮಾಡಲಿಲ್ಲ. ಪುಣ್ಯಕ್ಕೆ ಫಿಸಿಯಾಲಜಿ ಏನಾಯ್ತು ಅಂತ ಕೇಳಲಿಲ್ಲ. ಹೆಚ್ಚು ಕಮ್ಮಿ ಎಲ್ರೂ ಪಾಸಾಗಿರೋ ಫಿಸಿಯಾಲಜಿಯಲ್ಲಿ ಪಾಸಾಗ್ದೆ ಇರ್ತಾನಾ ಅಂದ್ಕೊಂಡ್ಲೋ ಏನೋ ಪಾಪ. ನಾ ಫೇಲಾಗಿದ್ದೆ! ‘ಗುಡ್ ಗುಡ್’ ಅಂತ ಮುಗುಳ್ನಕ್ಕಳು. ಚಳಿಗಾಲ, ರಸ್ತೆ ಬದಿಯಲ್ಲಾಕಿದ್ದ ಪ್ರಖರ ದೀಪದ ಬೆಳಕಿನಡಿ ಬಿಳಿ ಚೂಡಿ ಧರಿಸಿ ನಿಂತಿದ್ದವಳ ಮುಗುಳ್ನಗು ಸೆಳೆಯದೇ ಇರುವುದಾದರೂ ಹೇಗೆ ಸಾಧ್ಯ. ಸೆಳೆಯಿತು, ಪ್ರಬಲವಾಗೇ ಸೆಳೆಯಿತು. ಮೂರು ವರ್ಷದಿಂದ ಮನವನ್ನಾವರಿಸಿದ್ದ ಹೈಸ್ಕೂಲಿನ ಮೊದಲ ಕ್ರಶ್ಶನ್ನು ಮನದಿಂದ ದೂರ ಸರಿಸುವಷ್ಟು ಪ್ರಬಲವಾಗಿ ನನ್ನನ್ನು ಸೆಳೆದಳು. ಯಾಕೆ ಸೆಳೆದಳು? ಖಂಡಿತ ಗೊತ್ತಿಲ್ಲ. 

ಇನ್ನೊಂದೆರಡು ಮಾತನಾಡಿ ಹೋಗುವಾಗ 'ಲೈಬ್ರರೀಲಿ ಬಂದು ಸೀನಿಯರ್ ಹುಡ್ಗೀರನ್ನ ನೋಡ್ಕಂಡೇ ಇದ್ದು ಬಿಡಬೇಡ. ಇನ್ನೂ ಚೆನ್ನಾಗ್ ಓದ್ಕೋ’ ಎಂದೇಳಿ ಮತ್ತೊಮ್ಮೆ ತಲೆ ತಿರುಗಿಸುವ ಮುಗುಳ್ನಗು ಬಿಸಾಕಿ ಹೊರಟುಹೋದಳು. ಶರ್ಟು ಜೇಬಿನಲ್ಲಿದ್ದ ಫ್ಲೇಕಿಗೆ ಬೆಂಕಿಕೊಟ್ಟುಕೊಂಡು ರೂಮಿನ ಕಡೆಗೆ ನಾ ಹೊರಟೆ. 

ಸೀನಿಯರ್ಸ್ ಮಾತುಗಳನ್ನೆಲ್ಲ ಸೀರಿಯಸ್ ಆಗಿ ತಗೊಳ್ಳೋಕಾಗ್ತದಾ?! ಅವಳು ಸೀನಿಯರ್ಗಳ ಕಡೆ ನೋಡ್ಬೇಡ ಅಂದಿದ್ರೂ ನೋಡೋದು ಮುಂದುವರೆದಿತ್ತು. ಒಂದೆರಡು ಕ್ಷಣದಲ್ಲೇ ನಗು ವಿನಿಮಯವಾಗಿಬಿಡುತ್ತಿದ್ದರಿಂದ ಹೆಚ್ಚು ಕಾಲ ನೋಡಲು ಸಾಧ್ಯವಾಗುತ್ತಿರಲಿಲ್ಲ! ಎದುರಿಗೆ ಸಿಕ್ಕಾಗೊಮ್ಮೊಮ್ಮೆ ಒಂದೆರಡು ಮಾತು. ಇನ್ನೇನಪ್ಪ ಸಿಕ್ಕಿದ್ಲಲ್ಲ ನನ್ ಹುಡುಗಿ ಲವ್ ಲೆಟ್ರು ಬರ್ದೇ ಬಿಡೋಣ ಅಂತಂದ್ಕೊಂಡು ಬರಿಯೋಕೆ ಕೂತೆ. ಬರ್ದೆ ಬರ್ದೆ ಬರ್ದೆ ಬರೋಬ್ಬರಿ ಮೂರು ಪೇಜು ಬರ್ದೆ. ಬರ್ದು ಮುಗಿಸಿದ ಮೇಲೆ ಇದೇನ್ ಲವ್ ಲೆಟ್ರೋ ಲಾಂಗ್ ಎಸ್ಸೇ ಆನ್ಸರ್ರೋ ಅಂತ ಗಾಬರಿ ಬಿದ್ದು ಮೂರು ಪೇಜುಗಳನ್ನರಿದು ಹಾಕಿದೆ. ಉಹೂಂ…. ಈಗೆಲ್ಲ ಪ್ರಪೋಸ್ ಮಾಡೋದ್ ಬೇಡ, ಮೊದಲ ವರ್ಷ ಪಾಸಾದ ಮರುದಿನ ಸೀದಾ ಹೋಗಿ ಪ್ರಪೋಸ್ ಮಾಡ್ಬಿಡೋದೆ ಸರಿ ಅಂತ ನಿರ್ಧರಿಸಿದೆ. 

ಅದ್ಯಾಕೋ ಇದ್ದಕ್ಕಿದ್ದಂತೆ ಅವಳು ಲೈಬ್ರರಿ ಕಡೆಗೆ ಒಂದತ್ತು ಹದಿನೈದು ದಿನದಿಂದ ಬರಲೇ ಇಲ್ಲ. ಕಾಲೇಜಿಗೆ ಬರ್ತಿದ್ಲು ಲೈಬ್ರರಿ ಕಡೆಗೆ ಉಹೂಂ….. ಆ ವಯಸ್ಸಲ್ಲಿ ನಮ್ ಸುತ್ಮುತ್ತ ಆಗೋದಿಕ್ಕೆ ನಾವೇ ಮೇನ್ ರೀಸನ್ನು ಅನ್ನೋ ಭ್ರಮೆ ಇರ್ತದಲ್ಲ.... ಅಂತದ್ದೇ ಭ್ರಮೆ ನಂಗೂ ಇತ್ತು. ನನ್ನಿಂದಾನೇ ಅವಳು ಲೈಬ್ರರಿಗೆ ಬರೋದು ಬಿಟ್ಲು ಅನ್ನೋ ಸಂಕಟ. ಕ್ಲಾಸಿನಲ್ಲಿ ಅವಳು ಸಾಮಾನ್ಯವಾಗಿ ಕೂರುವ ಬೆಂಚಿನ ಮೇಲೆ ನನ್ನ ವಿರಹವೇದನೆಯನ್ನು ಕೆತ್ತಿದ್ದೇನು…… ಸ್ಪೋರ್ಟ್ಸ್ ಡೇ ಟೈಮಲ್ಲಿ ಅವಳ ಹೆಸರಿಗೆ ಹಾಡು ಡೆಡಿಕೇಟ್ ಮಾಡ್ಸಿದ್ದೇನು……. ಜೂನಿಯರ್ ಹುಡುಗ ಇಷ್ಟೆಲ್ಲ ಮಾಡುವಾಗ ಅವಳ ಫ್ರೆಂಡ್ಸು ಅನಿಸ್ಕೊಂಡೋರು ವಿಚಾರಿಸ್ದೆ ಇರ್ತಾರ….. 

ಲೈಬ್ರರೀಲಿ ಒಬ್ನೇ ಓದ್ತಾ ಕೂತಿದ್ದಾಗೊಮ್ಮೆ ಅವಳ ಕ್ಲಾಸ್ ಮೇಟೊಬ್ಬ ಬಂದ….. ಬಂದು ಎದುರಿಗೆ ಕುಳಿತ. ಅವನು ಕುಂತ ಧಿಮಾಕಿನಲ್ಲೇ ವಿಷಯವೇನು ಅಂತ ಅರ್ಥವಾಗಿತ್ತು. ‘ಏನ್ ನಿನ್ ಕತೆ. ಇನ್ನು ಫಸ್ಟ್ ಇಯರ್ ಜೂನಿಯರ್ ನೀನು. ಸೀನಿಯರ್ ಹುಡ್ಗೀಗ್ ಲೈನ್ ಹಾಕೋಕ್ ಎಷ್ಟ್ ಧೈರ್ಯ ನಿಂಗೆ’ ದರ್ಪದಿಂದ ಕೇಳಿದ. ಇವನ್ಯಾರ್ ಗುರು ಅನ್ವಂಗ್ ಒಂದ್ ಲುಕ್ ಕೊಟ್ಟು 'ನಂದೂ ಅವಳ್ದೂ ಲವ್ ಸ್ಟೋರಿ. ಬೇಕಾದ್ರೆ ಅವಳೇ ಬಂದು ಕೇಳ್ತಾಳೆ. ನೀನ್ಯಾವನ್ ಗುರು ಮಧ್ಯಸ್ಥಿಕೆ ಮಾಡೋಕೆ. ಮುಚ್ಕಂಡ್ ಎದ್ದೋಗು’ ಇಂತ ಪ್ರತಿಕ್ರಿಯೆಯನ್ನಾತ ನಿರೀಕ್ಷಿಸಿರಲಿಲ್ಲವೋ ಏನೋ. ಪಾಪ ಎದ್ದೋದ. ವಿಷ್ಯ ಇನ್ನೊಂದ್ ನಾಲಕ್ ಜನಕ್ಕೆ ಗೊತ್ತಾಯ್ತು. ಅವಳ ಕ್ಲಾಸಿನಲ್ಲೇ ನನ್ನ ಫ್ರೆಂಡ್ಸೂ ಇದ್ರಲ್ಲ. ಏನಪ್ಪ ಸಮಾಚಾರ ಅಂತ ವಿಚಾರಿಸಿದ್ರು. ಹಿಂಗಿಂಗೆ ಗುರು, ಫಸ್ಟ್ ಇಯರ್ ಪಾಸಾದ್ಮೇಲೆ ಪ್ರಪೋಸ್ ಮಾಡುವ ಅಂತ ಹೇಳ್ಕಂಡಿದ್ದೆ. 

ಇಷ್ಟೆಲ್ಲ ಆದ್ಮೇಲೆ ಅವಳು ನನ್ನ ಮಾತಾಡ್ಸೋದಾಗಲೀ ನೋಡೋದಾಗಲೀ ಮುಗ್ದೋದ ಕತೆಯಾಗಿತ್ತು ಅಂತ ಹೇಳೋದ್ ಬೇಕಾ! ನಾ ಅಷ್ಟ್ ದೂರ ಇದ್ದೀನಿ ಅಂದ್ರೆ ತಲೆ ತಗ್ಗಿಸಿಕೊಂಡು ಬರಬರನೇ ನಡೆದುಬಿಡೋಳು. ಅಥವಾ ನಂಗಂಗ್ ಅನ್ನಿಸ್ತಿತ್ತೋ ಏನೋ! 

ಮೂರನೇ ಇಂಟರ್ನಲ್ಸ್ ಬರೋ ಹೊತ್ಗೆ ನಮ್ ಆಸಕ್ತಿಗಳು ಕ್ರಾಂತಿ ಆಧ್ಯಾತ್ಮ ಜೀವನ ಬದುಕು ಮನ್ಶ ನಾವೆಲ್ಲು ಹಾಯ್ ಬೆಂಗ್ಳೂರ್ ರಾಜೀವ್ ದೀಕ್ಷಿತ್ತು ಅಂತೆಲ್ಲ ಸುತ್ತಾಡ್ಕಂಡು ಗೊಂದಲಪುರಿಯಲ್ಲಿತ್ತು. ಮೂರನೇ ಇಂಟರ್ನಲ್ಸಿನ ಹಿಂದಿನ ದಿನ. ಮೊದಲೆರಡು ಇಂಟರ್ನಲ್ಸ್ ನಲ್ಲಿ ಪಾಸಾಗಿದ್ದರಿಂದ ಈ ಸಲ ಸುಮ್ನೆ ಹೋಗಿ ಬರುದ್ರೆ ಸಾಕಿತ್ತು. ನಾನು ಮತ್ತು ರುದ್ರ ರೂಮಿನೊರಗಡೆ ಜೂಕಾಲಿಯಲ್ಲಿ ಕೂತ್ಕಂಡು ಸಮಾಜದ ಸಮಸ್ತ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಿದ್ದ ಸುಸಂದರ್ಭದಲ್ಲಿ ಇಬ್ಬರಲ್ಲೊಬ್ಬರಿಗೆ ಚಾಮುಂಡಿ ಬೆಟ್ಟಕ್ಕೋಗಿ ಜ್ಞಾನೋದಯ ಪಡೆಯಬೇಕೆಂಬ ಉತ್ಕಟ ಬಯಕೆ ಮೂಡಿದಾಗ ರಾತ್ರಿ ಒಂದು ದಾಟಿತ್ತು. ನಮ್ ಹುಡುಗರ್ಯಾರೂ ಇನ್ನೂ ಬೈಕು ಖರೀದಿಸಿರಲಿಲ್ಲ. ‘ನಡೀ ಮಗ ಹಾಸ್ಟೆಲ್ಲಿಗೆ ಹೋಗಿ ಯಾವ್ದಾರ ಬೈಕ್ ಹೊಂದಿಸ್ಕೊಳ್ಳೋಣ’ ಅಂತಂದ ರುದ್ರ. ನಮ್ ರೂಮಿಂದ ಹಾಸ್ಟ್ಲು ಒಂದ್ ಮುಕ್ಕಾಲ್ ಕಿಲೋಮೀಟ್ರಾಗ್ತಿತ್ತು. ಲೇಡೀಸ್ ಹಾಸ್ಟ್ಲು ಪಕ್ಕದ ಕಾಲುದಾರೀಲಿ ಪೂರ್ತಿ ಟೈಟಾಗಿ ಬೈಕನ್ನು ಕಷ್ಟಪಟ್ಟು ಓಡಿಸುತ್ತಿದ್ದ ಆಂಧ್ರದ ಸೂಪರ್ ಸೀನಿಯರ್ಸು ಒಂದಷ್ಟು ಮಜಾ ಕೊಟ್ಟರು. ಹಾಸ್ಟೆಲ್ಲಿಗೆ ಹೋದೋ. ಬೈಕ್ ಸಿಗಲಿಲ್ಲ. ಹಾಸ್ಟೆಲ್ ಮೆಸ್ಸಿನೆದುರಿಗಿದ್ದ ಮರದ ಕೆಳಗೆ ಕುಂತು ಹರಟುವಾಗ ‘ಕ್ಯಾನ್ವಾಸ್ ಆಫ್ ಲೈಫ್ ಇಸ್ ಲಾರ್ಜರ್ ದ್ಯಾನ್ ಲವ್’ ಅಂತ ಜ್ಞಾನೋದಯವಾಯಿತು. 

ಅಲ್ಲಿಗೆ ಸೀನಿಯರ್ ಹುಡುಗಿಗೆ ಪ್ರಪೋಸ್ ಮಾಡೋ ಪ್ರಪೋಸಲ್ಲು ನೆಗೆದುಬಿತ್ತು! 

ಇನ್ನುಳಿದ ಮೆಡಿಕಲ್ ಅವಧಿಯಲ್ಲಿ ಅವಳನ್ನು ಒಂದೇ ಸಲ ಕಾಮನ್ ಫ್ರೆಂಡ್ ಒಬ್ಬನ ವಿಷಯವಾಗಿ ಮಾತನಾಡಿಸಿದ್ದು. ಒಂದತ್ತು ಸೆಕೆಂಡಿನ ಮಾತು. ಅದಾದ ಮೇಲೆ ಅವಳನ್ನು ಕಂಡಿದ್ದು ಎರಡು ಮೂರು ವರ್ಷದ ನಂತರ ಅವಳ ಕ್ಲಾಸ್ ಮೇಟ್ ಮದುವೆಯಲ್ಲಿ. ನಾನೂ ನನ್ನ ಗೆಳೆಯ ವಿನಿ ಮದುವೆಗೆ ಹೋಗಿದ್ದೊ. ಅವಳೇ ಇಬ್ಬರನ್ನೂ ಮಾತನಾಡಿಸಿದಳು. ‘ಹೇಗಿದ್ದೀರ. ಎಲ್ಲಿರೋದು ನೀವೀಗ’ ಅಂತೆಲ್ಲ ನನ್ನನ್ನು ವಿಚಾರಿಸಿಕೊಂಡಳು. ಸ್ಟೇಜ್ ಮೇಲಕ್ಕೋಗಿ ಫೋಟೋ ತೆಗುಸ್ಕೊಂಡು ಊಟಕ್ಕೋಗುವಾಗ ವಿನಿ ‘ಅಲ್ಲ ಮಗ. ಅವಳು ನನ್ನನ್ನ ಸಿಂಗುಲ್ರರ್ರಲ್ಲೇ ಮಾತನಾಡ್ಸಿದ್ಲು. ನೀನು ಅವಳಿಗೆ ಜ್ಯೂನಿಯರ್ರೇ. ನಿನ್ನುನ್ ಮಾತ್ರ ಅದೇನು ಹೋಗಿ ಬನ್ನಿ ನೀವು ಅಂತ ಪ್ಲೂರಲ್ಲು!’ ನಗುತ್ತಾ ಕೇಳಿದ. ಅಲ್ವಾ ಅಂತ ನಂಗೂ ಅಚ್ಚರಿಯಾಯ್ತು. ಅದೂ ಮೆಡಿಕಲ್ ಓದುವಾಗೆಲ್ಲ ಇದ್ದ ಸಿಂಗ್ಯುಲರ್ರು ಇವತ್ಯಾಕೆ ಪ್ಲೂರಲ್ಲಾಯ್ತು?! 'ಅದಂಗೆ ಮಾಮ್ಸ್! ಎಷ್ಟೇ ಆಗ್ಲಿ ಒಂದ್ ಕಾಲ್ದಲ್ ಅವಳನ್ನ ಇಷ್ಟ ಪಟ್ಟೋನಲ್ವ. ಆ ಮರ್ಯಾದೆ ಇರ್ತದೆ’ ಅಂತೇಳಿ ನಾನೂ ನಕ್ಕೆ. 



ಸೀನಿಯರ್ಸುಗಳ ಗೆಟ್ ಟುಗೆದರ್ ಫೋಟೋ ಇಷ್ಟೆಲ್ಲವನ್ನೂ ನೆನಪಿಸಿತು ನೋಡಿ!

No comments:

Post a Comment