Nov 13, 2018

ಮೇರ್ಕು ತೊಡರ್ಚಿ ಮಲೈ ಎಂಬ ದೃಶ್ಯ ಕಾವ್ಯ.

ಡಾ. ಅಶೋಕ್. ಕೆ. ಆರ್.
ಜಾತಿ ವ್ಯವಸ್ಥೆಯ ಬಗ್ಗೆ ವರ್ಗ ವ್ಯವಸ್ಥೆಯ ಬಗ್ಗೆ ನಮ್ಮಲ್ಲಿ ಆವಾಗವಾಗ ಒಂದೊಂದು ಚಿತ್ರ ಬಂದಿದೆಯಾದರೂ ಭೂರಹಿತ ಕಾರ್ಮಿಕರನ್ನೇ ಮುಖ್ಯಭೂಮಿಯಲ್ಲಿರಿಸಿಕೊಂಡು ಬಂದ ಚಿತ್ರಗಳು ಇಲ್ಲವೇ ಇಲ್ಲವೆನ್ನುವಷ್ಟು ಕಡಿಮೆಯೆಂದು ಹೇಳಬಹುದು. ಜಾತಿ ವರ್ಗ ವ್ಯವಸ್ಥೆಯ ಕುರಿತಾದ ಚಿತ್ರಗಳಲ್ಲಿ ಕೆಲವೊಂದು ವಾಸ್ತವಿಕತೆಯನ್ನು ನಮ್ಮ ಕಣ್ಣ ಮುಂದೆ ಇರಿಸುತ್ತಾದರೂ ವಾಸ್ತವಿಕತೆಯನ್ನು ತಲುಪಿಸುವ ನಿಟ್ಟಿನಲ್ಲಿ ಅದನ್ನು ವೈಭವೀಕರಿಸುವ ಕೆಲಸ ಮಾಡುತ್ತವೆ, ನಾಯಕ ಪಾತ್ರದ ಒಳಿತನ್ನು ಋಜುವಾತುಪಡಿಸುವುದಕ್ಕೆ ಪ್ರತಿನಾಯಕರ ರಕ್ತದಲ್ಲೇ ಕೆಟ್ಟತನವಿದೆಯೆನ್ನುವಂಶವನ್ನು ಒತ್ತಿ ಒತ್ತಿ ಹೇಳುವ ಕ್ರಮವನ್ನೇ ಬಹಳಷ್ಟು ಸಿನಿಮಾಗಳು ಅಳವಡಿಸಿಕೊಂಡಿರುತ್ತವೆ. ಈ ಚಿತ್ರಗಳ ಇನ್ನೊಂದು ದೌರ್ಬಲ್ಯ (ಅದನ್ನು ಈ ಚಿತ್ರಗಳ ಶಕ್ತಿಯೆಂದೂ ಕರೆಯಬಹುದು!) ಅತಿ ಭಾವುಕತೆ. ನಿಜ ಜೀವನದಲ್ಲಿ ಕಂಡುಬರದಷ್ಟು ಭಾವುಕತೆಯನ್ನು ಚಿತ್ರಗಳಲ್ಲಿ ತುಂಬಿಬಿಡಲಾಗುತ್ತದೆ. ಅತಿ ಭಾವುಕತೆ ಅತಿ ವಾಸ್ತವತೆಯ ಕ್ರಮದಿಂದೊರತಾಗಿ ನಿಂತು, ಅತಿ ಎನ್ನುವಷ್ಟು ಒಳ್ಳೆಯ ನಾಯಕ, ಅತಿ ಎನ್ನಿಸುವಷ್ಟು ಕೆಟ್ಟ ವಿಲನ್ನು ಎಂಬ ಕ್ರಮದಿಂದಲೂ ಹೊರತಾಗಿದ್ದು ದೀರ್ಘಕಾಲದವರೆಗೆ ಕಾಡುವಂತಹ ದೃಶ್ಯಕಾವ್ಯವೇ ‘ಮೇರ್ಕು ತೊಡರ್ಚಿ ಮಲೈ’ (ಅರ್ಥಾತ್ ಪಶ್ಚಿಮ ಘಟ್ಟ). 

ಲೆನಿನ್ ಭಾರತಿ ನಿರ್ದೇಶನದ ಚಿತ್ರವನ್ನು ನಿರ್ಮಿಸಿರುವುದು ವಿಜಯ್ ಸೇತುಪತಿ. ಸ್ವತಃ ಉತ್ತಮ ನಟನಾದರೂ ವಿಜಯ್ ಸೇತುಪತಿ ಈ ಚಿತ್ರದಲ್ಲಿ ಅಭಿನಯಿಸಿಲ್ಲ. ಒಂದು ಚಿಕ್ಕ ಪಾತ್ರದಲ್ಲಾದರೂ ವಿಜಯ್ ಸೇತುಪತಿ ನಟಿಸಿದ್ದರೆ ಇಂತಹುದೊಂದು ಚಿತ್ರ ಹೆಚ್ಚು ಜನರನ್ನು ತಲುಪುತ್ತಿತ್ತು ಎನ್ನುವುದು ಸತ್ಯ. ಚಿತ್ರದ ನಾಯಕ ರಂಗಸ್ವಾಮಿ. ಭೂರಹಿತ ಕಾರ್ಮಿಕ. ತಮಿಳುನಾಡು ಕೇರಳ ಗಡಿಪ್ರದೇಶದ ಘಟ್ಟ ಪ್ರದೇಶದಲ್ಲಿ ಆತನ ವಾಸ. ಏಲಕ್ಕಿ ಕಾಯಿಯ ಮೂಟೆಯನ್ನು ಹೆಗಲ ಮೇಲೊತ್ತು ಘಟ್ಟದಿಂದ ಮಾರುಕಟ್ಟೆಗೆ ಸಾಗಿಸುವ ಕೆಲಸ ಆತನದು. ಘಟ್ಟ ಪ್ರದೇಶವನ್ನು ಹೊಸತಾಗಿ ದಾಟುವವರಿಗೆ ದಾರಿಯಾಗುತ್ತಾನೆ, ಆಸರೆಯಾಗುತ್ತಾನೆ. ಎಲ್ಲರ ಮೆಚ್ಚಿನ ವ್ಯಕ್ತಿ ರಂಗಸ್ವಾಮಿ ತನ್ನೂರಿನ ಮನೆಯಲ್ಲಿ ಅಮ್ಮನೊಂದಿಗೆ ವಾಸವಾಗಿದ್ದಾನೆ. ಇಂತಿಪ್ಪ ರಂಗಸ್ವಾಮಿಗೆ ಒಂದು ತುಂಡು ಭೂಮಿಯನ್ನು ಖರೀದಿಸಬೇಕೆಂಬುದೇ ಜೀವನದ ಗುರಿ. ಯಾವುದೇ ದುಶ್ಚಟಗಳಿಲ್ಲದ ರಂಗಸ್ವಾಮಿ ಕೂಡಿಹಾಕಿದ್ದ ಹಣದಿಂದ ಇನ್ನೇನು ಭೂಮಿ ಖರೀದಿಸಿಯೇಬಿಟ್ಟ ಎನ್ನುವಾಗ ಭೂಮಿಯ ಒಡೆಯರ ಕೌಟುಂಬಿಕ ಜಗಳದಿಂದ ಆಸೆಗೆ ಕಲ್ಲು ಬೀಳುತ್ತದೆ. ಮತ್ತೆ ಏಲಕ್ಕಿ ಮೂಟೆಯನ್ನು ಘಟ್ಟದಿಂದಿಳಿಸುವ ಕೆಲಸಕ್ಕೆ ರಂಗಸ್ವಾಮಿ ಮುಂದಾಗುತ್ತಾನೆ. 
ತಮಿಳುನಾಡಿನ ಕಾರ್ಮಿಕರು ಕೇರಳ ಪ್ರದೇಶಕ್ಕೆ ತೆರಳಿ ಕೆಲಸ ಮಾಡುತ್ತಿರುತ್ತಾರೆ. ಅಲ್ಲವರಿಗೆ ಆಸರೆಯಾಗಿ ಕಮ್ಯುನಿಸ್ಟ್ ಸಂಘಟನೆಯ ಕಾಮ್ರೇಡ್ ಚಾಕೋ ಕೆಲಸ ಮಾಡುತ್ತಿರುತ್ತಾನೆ. ವಯಸ್ಸಾದ ಚಾಕೋನ ತಂದೆ ತಾಯಿಗೆ ಔಷಧಿ ಒದಗಿಸುವವನು ಕೂಡ ನಮ್ಮ ರಂಗಸ್ವಾಮಿಯೇ. ಕೇರಳ ಭೂಮಾಲೀಕರಲ್ಲಿ ಕೆಲವರಿಗೆ ತಮಿಳುನಾಡಿನ ಕೂಲಿಯಾಳುಗಳ ಮೇಲೆ, ಕಾರ್ಮಿಕರಿಗೆ ಇಂತಿಷ್ಟು ಸಂಬಳವನ್ನೇ ನೀಡಬೇಕು ಎನ್ನುವ ಕಾಮ್ರೇಡ್ ಚಾಕೋವಿನ ಮೇಲೆ ನಿರಂತರ ಅಸಹನೆ. ಕಾಮ್ರೇಡ್ ಚಾಕೋವಿನ ಪ್ರಾಬಲ್ಯವನ್ನು ತೊಡೆದುಹಾಕಲು ಕಮ್ಯುನಿಷ್ಟ್ ಪಕ್ಷದ ಹಿರಿಯ ಸದಸ್ಯರನ್ನೇ ಖರೀದಿಸುತ್ತಾನೆ ಭೂಮಾಲೀಕ. ಹಣದ ನೆರವಿನಿಂದ ಎಸ್ಟೇಟುಗಳನ್ನು ಖರೀದಿಸಿ ತಮಿಳು ಕೂಲಿಯಾಳುಗಳನ್ನು ಓಡಿಸಲೆತ್ನಿಸುತ್ತಾನೆ ಭೂಮಾಲೀಕ. 

ಇವೆಲ್ಲದರ ಮಧ್ಯೆ ನಮ್ಮ ರಂಗಸ್ವಾಮಿಗೆ ಮದುವೆಯಾಗುತ್ತದೆ. ಮಗುವಾಗುತ್ತದೆ. ಮಗ ಬೆಳೆದು ದೊಡ್ಡವನಾಗುತ್ತಾನೆ. ಭೂ ಖರೀದಿಯ ಯೋಚನೆಯನ್ನು ಬಿಟ್ಟೇ ಬಿಟ್ಟ ಸಂದರ್ಭದಲ್ಲೇ ಘಟ್ಟದ ಹಾದಿಯ ಹೋಟೆಲಿನಮ್ಮ ತನ್ನ ಹುಡುಗಿಯ ಮದುವೆಗಾಗಿ ಭೂಮಿಯನ್ನು ಮಾರಬೇಕೆಂದಿದ್ದೇನೆ. ನೀನೇ ತೆಗೆದುಕೊ ಎಂದಾಗ ಮತ್ತೆ ಭೂ ಮಾಲೀಕನಾಗುವ ಆಸೆಯಾಗುತ್ತದೆ. ಇದ್ದ ಬದ್ದ ಒಡವೆಯಲ್ಲವನ್ನೂ ಮಾರಿ ದುಡ್ಡು ಹೊಂಚಿ ಅದರಿಂದ ಒಂದು ಮೂಟೆ ಏಲಕ್ಕಿ ಖರೀದಿಸಿ ಆ ಏಲಕ್ಕಿಯನ್ನು ಮಾರಿ ಬಂದ ಲಾಭದಿಂದ ಭೂಮಿ ಖರೀದಿಸಬೇಕೆಂದು ಕೊಳ್ಳುತ್ತಾನೆ. ಆ ಏಲಕ್ಕಿ ಘಟ್ಟದ ಕಮರಿಗೆ ಬಿದ್ದು ಹಾಳಾಗುತ್ತದೆ. ರಂಗಸ್ವಾಮಿಯ ಒಳ್ಳೆಯತನಕ್ಕೆ ಪ್ರತಿಫಲವೆಂಬಂತೆ ಹಣ ಬಂದು ಸೇರಿ ಭೂಮಿಯನ್ನು ಖರೀದಿಸಿಯೇ ಬಿಡುತ್ತಾನೆ. ಭೂರಹಿತರ ಕಷ್ಟವನ್ನಿಷ್ಟು ದಿನ ಅನುಭವಿಸಿದ್ದ ರಂಗಸ್ವಾಮಿ ಸಕಾಲಿಕ ಮಳೆಗೆ ಸಂತಸ ವ್ಯಕ್ತಪಡಿಸುತ್ತಾ ಅಕಾಲಿಕ ಮಳೆಗೆ ದಿಗಿಲುಬೀಳುತ್ತಾನೆ. ಹೈಬ್ರಿಡ್ ತಳಿಯ ಬೀಜಗಳು ರಾಸಾಯನಿಕಗಳು ರಂಗಸ್ವಾಮಿಯ ಸಾಲದ ಹೊರೆಯನ್ನು ಹೆಚ್ಚಿಸುತ್ತಾ ಹೋಗುತ್ತವೆ. ಇವೆಲ್ಲಕ್ಕೂ ಕಳಶವಿಟ್ಟಂತೆ ಕಾಮ್ರೇಡ್ ಚಾಕೋವಿಗೆ ಜೊತೆಯಾಗಿ ಕೊಲೆಯಲ್ಲಿ ಭಾಗಿಯಾಗಿದ್ದಕ್ಕೆ ಜೈಲುಪಾಲಾಗುತ್ತಾನೆ. ರಂಗಸ್ವಾಮಿಯ ಮಡದಿ ಈಶ್ವರಿ ಅದೇ ಬೀಜ ರಾಸಾಯನಿಕ ಮಾರುವವನಿಂದ ಸಾಲದ ಮೇಲೆ ಸಾಲ ಪಡೆದುಕೊಳ್ಳುತ್ತಾಳೆ, ಜೀವನದ ನಿರ್ವಹಣೆಗೆ. 

ಜೈಲಿನಿಂದ ಹೊರಬರುವಷ್ಟರಲ್ಲಿ ರಂಗಸ್ವಾಮಿಯ ಜಗತ್ತೇ ಬದಲಾಗಿ ಹೋಗಿರುತ್ತದೆ. ವಿಶಾಲ ರಸ್ತೆಗಳು, ರಸ್ತೆಗಳನ್ನು ಸೀಳಿ ನುಗ್ಗುವ ವಾಹನಗಳು, ಯಾವ ‘ಅಭಿವೃದ್ಧಿ’ಯನ್ನು ಕಾಮ್ರೇಡ್ ಚಾಕೋ ವಿರೋಧದ ದೃಷ್ಟಿಯಿಂದ ಕಂಡಿರುತ್ತಾನೋ ಆ ಅಭಿವೃದ್ಧಿಯೆಲ್ಲವೂ ಘಟ್ಟ ಪ್ರದೇಶದ ಭಾಗವಾಗಿ ಹೋಗಿದೆ. ಈ ಎಲ್ಲಾ ಅಭಿವೃದ್ಧಿಯೊಂದಿಗೆ ರಂಗಸ್ವಾಮಿಯ ಸಾಲದ ಮೊತ್ತವೂ ಅಧಿಕವಾಗಿ ಆ ಸಾಲಕ್ಕೆ ಬದಲಾಗಿ ಖರೀದಿಸಿದ್ದ ಭೂಮಿಯನ್ನು ಅತಿ ಭಾವುಕತೆಯ ಯಾವ ಕುರುಹುಗಳನ್ನೂ ತೋರಿಸದೆ ಬರೆದುಕೊಡುತ್ತಾನೆ. ಕೊನೆಗೆ ತನ್ನ ಭೂಮಿಯಲ್ಲಿ ಸ್ಥಾಪಿಸಲಾದ ಗಾಳಿಯಂತ್ರಗಳನ್ನು ಕಾಯುವ ಸೆಕ್ಯುರಿಟಿ ಗಾರ್ಡಾಗುವುದರೊಂದಿಗೆ ಚಿತ್ರ ಸಮಾಪ್ತಿಯಾಗುತ್ತದೆ. 

ಕತೆ, ಚಿತ್ರಕತೆ, ನಟರ (ಬಹುತೇಕರು ಅಲ್ಲಿನ ಸ್ಥಳೀಯರೇ ಅಂತೆ) ಅಭಿನಯದ ಜೊತೆಗೆ ಚಿತ್ರದಲ್ಲಿ ಬಹುವಾಗಿ ಕಾಡುವುದು ಕ್ಯಾಮೆರಾ ಕೆಲಸ. ಡ್ರೋಣ್ ಕ್ಯಾಮೆರಾಗಳನ್ನು ಸ್ಥಳದ ಸುಂದರತೆಯನ್ನು ಸೆರೆಹಿಡಿಯುವುದಕ್ಕಷ್ಟೇ ಹೆಚ್ಚು ಬಳಸಲಾಗುತ್ತದೆ. ಕತೆಯ ಸಾಗುವಿಕೆಗೆ, ಸುಂದರ ಸ್ಥಳವೊಂದು ನೋಡುಗರಲ್ಲಿ ದುಃಖದ ಭಾವನೆ ತುಂಬುವುದಕ್ಕೂ ಡ್ರೋಣ್ ಕ್ಯಾಮೆರಾವನ್ನು ಎಷ್ಟು ಸಶಕ್ತವಾಗಿ ಬಳಸಬಹುದು ಎನ್ನುವುದಕ್ಕೆ ಮೇರ್ಕು ತೊಡರ್ಚಿ ಮಲೈ ಸಾಕ್ಷಿ. ಅದರಲ್ಲೂ ಕೊನೆಯ ದೃಶ್ಯದಲ್ಲಿ ಡ್ರೋಣ್ ಬಳಸಿರುವ ರೀತಿ ಬಹುದಿನಗಳ ಕಾಲ ಕಾಡುತ್ತದೆ. ಎಲ್ಲರಿಗೂ ಸಹಾಯ ಮಾಡುವ, ಎಲ್ಲ ಕೆಲಸವನ್ನೂ ಶೃದ್ಧಾಸಕ್ತಿಯಿಂದ ಮಾಡುವ ಶ್ರಮಜೀವಿ ರಂಗಸ್ವಾಮಿಗೆ ಆತನ ಭೂಮಾಲೀಕರು, ನೆರೆಹೊರೆಯವರು ನೆಂಟರು ಎಲ್ಲರೂ ಸಹಾಯವನ್ನೇ ಮಾಡುತ್ತಾರೆ. ಆದರೂ ಆತನಿಗ್ಯಾಕೆ ಅನ್ಯಾಯವಾಯಿತು? ‘ಅಭಿವೃದ್ಧಿಯ' ಮಾನದಂಡದಲ್ಲಿ ಇಂತಹ ಅನ್ಯಾಯಗಳು ಕೂಡ ಸಮ್ಮತವೇ ಹೌದಾ?

No comments:

Post a Comment