Nov 19, 2018

ಡ್ರಾಫ್ಟ್ ಮೇಲ್: ಭಾಗ 3 - ಗೌತಮ #1


ಚೇತನ ತೀರ್ಥಹಳ್ಳಿ. 

ಚಿನ್ಮಯಿ ಆ ಮೇಲ್ ಕಳಿಸಲೂ ಇಲ್ಲ, ಸಾಯಲೂ ಇಲ್ಲ. ಆ ಮೊದಲ ಡ್ರಾಫ್ಟ್‍ನಿಂದ ಈವರೆಗಿನ ಕೊನೆಯ ಡ್ರಾಫ್ಟ್’ವರೆಗೆ ಹತ್ತು ವರ್ಷಗಳು ಕಳೆದಿವೆ. 

ಅದಕ್ಕೂ ಹಿಂದಿನದೆಲ್ಲ ಸೇರಿ, ಈ ಹದಿನೈದು ವರ್ಷಗಳ ಹರಿವಿನಲ್ಲಿ ಅವಳು ಈಜಿದ್ದೆಷ್ಟು, ಮುಳುಗಿದ್ದೆಷ್ಟು!

ಆಗಾಗ ಮನೆಗೆ ಬರುವ ತವರು ಅವಳ ತಲೆ ನೇವರಿಸಿ ಕಣ್ಣೀರಿಡುತ್ತದೆ. ಚಿನ್ಮಯಿಗೆ ಯಾಕೆಂದೇ ಅರ್ಥವಾಗೋದಿಲ್ಲ.

ಮಧ್ಯಾಹ್ನದಲ್ಲಿ ಬೆಳಕಿನ ಬಾಗಿಲಾಗುವ ಬಿಸಿಲು, ಹೊತ್ತು ಕಳೆದಂತೆ ಕರಗುವುದು ಅವಳಿಗೆ ಗೊತ್ತಿದೆ; ಮತ್ತೆ ಮರುದಿನ ಮೂಡುತ್ತದೆ ಅನ್ನೋದು ಕೂಡಾ.

ಒಂದೇ ಒಂದು ಜನ್ಮದಲ್ಲಿ ಹಲವು ಬದುಕು ಬಾಳುವ ಅವಕಾಶ ಎಲ್ಲರಿಗೂ ಸಿಗೋದಿಲ್ಲ. 

ವಾಸ್ತವದಲ್ಲಿ, ಅದು ಸಿಗುವಂಥದಲ್ಲ… ನಾವೇ ಕಂಡುಕೊಳ್ಳುವಂಥದ್ದು. ಹಲವು ಬದುಕುಗಳ ಅವಕಾಶ ನಾವೇ ಸೃಷ್ಟಿ ಮಾಡಿಕೊಳ್ಳಬೇಕು. ಹಾಗಂತ ಚಿನ್ಮಯಿ ನಂಬಿಕೊಂಡಿದ್ದಾಳೆ. ಅದನ್ನು ಸಾವಧಾನವಾಗಿ ಸಾಕಾರ ಮಾಡಿಕೊಂಡಿದ್ದಾಳೆ ಕೂಡ.

ತಾನು ಏನಾಗಿದ್ದಾಳೋ ಆ ಬಗ್ಗೆ ಅವಳಿಗೆ ಖುಷಿ ಇದೆ. ಹಾಗಂತ ಅವಳು ಏನೋ ಆಗಿಬಿಟ್ಟಿದ್ದಾಳೆ ಎಂದಲ್ಲ. ಅವಳಿಗೆ ತಾನು ‘ಚಿನ್ಮಯಿ’ ಆಗಿರುವ ಬಗ್ಗೆ ನೆಮ್ಮದಿಯಿದೆ! ಹಾಗೆಂದೇ ಮನಮಂದಿಯ ದುಃಖ ಅವಳನ್ನು ಗಲಿಬಿಲಿಗೊಳಿಸುತ್ತದೆ. ಕೆಲವೊಮ್ಮೆ ರೇಜಿಗೆ ಹುಟ್ಟಿಸುತ್ತೆ ಕೂಡಾ. 

ಚಿನ್ಮಯಿಗೆ ಹಲವು ‘ಹಿಂದಿನ ಬದುಕು’ಗಳಿವೆ. ಅಂಥವುಗಳಲ್ಲಿ ಮೊದಲನೆಯದ್ದು ‘ಮದುವೆ’. 

ಹದಿಹರೆಯ ಕಳೆದ ಕೂಡಲೇ ಅವಳ ಮದುವೆಯಾಯಿತು. ಮದುವೆಯಾದ ತಿಂಗಳಿಗೆ ಗಂಡ ತೀರಿಕೊಂಡ. ಆಸ್ತಿ ಗಲಾಟೆ, ಕೊಲೆ ಎಂದೆಲ್ಲ ಪುಕಾರು.

ವಿಧವೆಯಾಗಿ ಅಮ್ಮನ ಮಡಿಲು ಸೇರಿದರೆ, ದಿನಾ ಬೆಳಗು ಕರ್ಮಠ ತಂದೆಯ ಚುಚ್ಚು ಮಾತು. ಪೂಜೆ ಹೊತ್ತಿಗೆ ಎದುರು ಬಂದರೆ ಮನೆಯಲ್ಲಿ ಮಹಾಭಾರತ!

ಬೇಸತ್ತು, ಸಂಜೆ ಕಳೆಯಲು ಮಗ್ಗಲು ರಸ್ತೆಯ ಸಮಿತಿಗೆ ಹೋಗುವ ರೂಢಿ ಮಾಡಿಕೊಂಡಳು ಚಿನ್ಮಯಿ. ಹೊತ್ತು ಹೋಗಬೇಕಲ್ಲ? ಅವಳದ್ದು ಸುಮ್ಮನೆ ಕೂರುವ ಜಾಯಮಾನವಲ್ಲ.

ಸಮಿತಿಯಲ್ಲಿ ಗೀತಕ್ಕ ಮೊದಲು ಓದಲು ಕೊಟ್ಟ ಪುಸ್ತಕ ಸೂರ್ಯನಾಥ ಕಾಮತರ ‘ಥೇಮ್ಸ್‍ನಿಂದ ಗಂಗೆಗೆ. ಪುಸ್ತಕ ಕೈಲಿ ಹಿಡಿದಾಗ ಅವಳಿಗೆ ಅದನ್ನೇ ಯಾಕೆ ಕೊಟ್ಟರೆಂದು ಅರ್ಥವಾಗಿರಲಿಲ್ಲ. ಓದುತ್ತ ಇರುವಾಗ ಅರ್ಥವಾಯಿತೆಂದೂ ಅಲ್ಲ. 

ಆದರೆ, ಈ ಓದಿನಲ್ಲೇನೋ ರಾಜಕಾರಣವಿದೆ ಅನ್ನಿಸಿದ್ದಂತೂ ಹೌದು.

ಅವಳಿಗೆ, ಗೀತಕ್ಕ ‘ಥೇಮ್ಸ್ ನಿಂದ ಗಂಗೆಗೆ’ ಪುಸ್ತಕವನ್ನೇ ಮೊದಲ ಓದಿಗೆ ಕೊಟ್ಟಿದ್ಯಾಕೆ ಅನ್ನೋದು ಖಚಿತವಾಗಿ ಅರ್ಥವಾಗಲು ಎರಡು – ಮೂರು ವರ್ಷಗಳೇ ಬೇಕಾದವು! ಕಾಲೇಜು ದಿನಗಳಲ್ಲಿ ‘ವೋಲ್ಗಾ – ಗಂಗಾ’ ಓದಿದ್ದ ಚಿನ್ಮಯಿ, ಈ ಪುಸ್ತಕವನ್ನು ಉಸಿರು ಕಟ್ಟಿಕೊಂಡೇ ಓದಿ ಮುಗಿಸಿದ್ದಳು. 

ಗೀತಕ್ಕ, “ನಿನ್ನ ಇಷ್ಟದ ಪುಸ್ತಕಗಳು ಯಾವುದೆಲ್ಲ?” ಅಂತ ಕೇಳಿದಾಗ ಅವಳು ಕೊಟ್ಟಿದ್ದ ಪಟ್ಟಿ ಸಮಿತಿಯವರನ್ನು ಗಾಬರಿ ಬೀಳಿಸಿತ್ತು. ಆದರೆ ಅವೆಲ್ಲ ಅವಳ ಗಮನಕ್ಕೆ ಬಂದಿದ್ದು ನಂತರದ ದಿನಗಳಲ್ಲಿ. 

ಈ ನಡುವೆ ಚಿನ್ಮಯಿಗೆ ಎಜುಕೇಶನ್ ಮುಂದುವರಿಸಬೇಕು ಅನ್ನುವ ಆಸೆಯಿತ್ತು. ಆದರೆ, ಅವಳಪ್ಪ ಕಾಲೇಜಿಗೆ ಕಳಿಸಲು ತಯಾರಿರಲಿಲ್ಲ. ಹೋಗಲಿ ಕೆಲಸ ಮಾಡುತ್ತೀನಿ ಅಂದರೂ ಬಿಡಲಿಲ್ಲ. 

ಚಿನ್ಮಯಿಗೆ ಹೊತ್ತು ಕಳೆಯಲು ಸಮಿತಿಯ ಹೊರತಾಗಿ ಬೇರೆ ದಾರಿಯೇ ಉಳಿಯಲಿಲ್ಲ. 

ಮಗಳು ಅಲ್ಲಿಗೆ ಹೋಗೋದು ಅಪ್ಪನಿಗೂ ಒಂದು ಥರದ ಸಮಾಧಾನ!

ಈ ದಿನಗಳಲ್ಲೇ ಅವಳಿಗೆ ಗೌತಮನ ಪರಿಚಯವಾಗಿದ್ದು. 

ಸಮಿತಿಯಲ್ಲಿ ಚಿನ್ಮಯಿ ಕೇಳುತ್ತಿದ್ದ ‘ಅಧಿಕಪ್ರಸಂಗ’ದ ಪ್ರಶ್ನೆಗಳಿಗೆ ಉತ್ತರಿಸಲೆಂದೇ ವಿಶೇಷವಾಗಿ ಗೀತಕ್ಕ ಅವನನ್ನು ಕರೆಸಿದ್ದರು. 

ಗೌತಮನಿಗೆ ಚಿನ್ಮಯಿಯ ಪ್ರಶ್ನೆಗಳು ಇಷ್ಟವಾಗುತ್ತಿದ್ದವು. ಅವನ್ನು ತನ್ನ ಕಲಿಕೆಗೆ ಸವಾಲಿನಷ್ಟೆ ಪುಷ್ಟಿ ಎಂದೂ ಅವನು ಭಾವಿಸುತ್ತಿದ್ದ. 

ಚರ್ಚೆ ಅಂದುಕೊಂಡು ಜಗಳವಾಡುತ್ತಲೇ ಅವರ ನಡುವೆ ಒಂದು ವಿಚಿತ್ರ ಆಪ್ತತೆ ಹುಟ್ಟಿಕೊಂಡಿತು. 

ಹೆಣ್ಣುಮಕ್ಕಳ ಬಗ್ಗೆ ಅಷ್ಟೇನೂ ಮೃದು ಧೋರಣೆ ಇಲ್ಲದೆ ಹೋದರೂ ಗೌತಮನಿಗೆ ಅವಳ ಕತೆ ಕೇಳಿ ಸಂಕಟವಾಗಿತ್ತು.

ಸಮಿತಿಯ ಸಹವಾಸದಲ್ಲಿ ಚಿನ್ಮಯಿ, ತನಗಿನ್ನು ಬೇರೆ ಬದುಕಿಲ್ಲ ಅಂದುಕೊಂಡು ಸೇವಾವ್ರತಿ ತರಬೇತಿ ಪಡೆಯುವ ನಿರ್ಧಾರ ಮಾಡಿದಳು. 

ಅವಳಪ್ಪ, ಮಗಳು ಮನೆ ಸೇರಿದ ಎಂಟು ತಿಂಗಳ ನಂತರ ಅದೇ ಮೊದಲ ಸಲ ಕೈಯೆತ್ತಿ ಒಂದಷ್ಟು ದುಡ್ಡು ಕೊಟ್ಟರು. 

ಅದು, ತರಬೇತಿ ಶಿಬಿರಕ್ಕೆ ಕೆಂಪಂಚಿನ ಬಿಳಿ ಸೀರೆ ಕೊಳ್ಳಲು ಕೊಟ್ಟ ಹಣವಾಗಿತ್ತು!

ಗೌತಮ ಚಿನ್ಮಯಿಯೊಳಗೆ ಬೇರೊಂದು ಕಿಡಿ ಕಂಡಿದ್ದ. 

ಸಮಿತಿಯ ವಿಚಾರಗಳಿಗೂ ಅವಳ ಆಲೋಚನೆಗೂ ಸಂಬಂಧವೇ ಇಲ್ಲವೆಂದು ಅವನಿಗೆ ಸ್ಪಷ್ಟವಿತ್ತು. 

ಅವಳ ನಿರ್ಧಾರ ಅವಳನ್ನು ಖುಷಿಯಾಗಿಡುವುದಿಲ್ಲ ಎಂದು ತಿಳಿದಿತ್ತು. 

ಅಷ್ಟು ಮಾತ್ರವಲ್ಲ, ಮುಂದೆ ಅವಳು ಸಮಿತಿಗೆ ಖುಷಿ ಕೊಡುವ ಕೆಲಸ ಮಾಡುವವಳಲ್ಲ ಅಂತಲೂ ಖಾತ್ರಿಯಿತ್ತು!

ಇನ್ನೂ ಹೇಳಬೇಕೆಂದರೆ, ಅಷ್ಟು ಪುಸ್ತಕ ಓದಿಸಿ, ಶಿಬಿರಗಳಿಗೆ ಕಳಿಸಿ, ತಲೆ ತೊಳೆದರೂ ಚಿನ್ಮಯಿ ಆಡುತ್ತಿದ್ದ ಮಾತುಗಳು ಅವನಲ್ಲಿ ಅನುಮಾನ ಹುಟ್ಟಿಸಿದ್ದವು.

ಹಾಗಂತ ಅವಳ ಬಗೆಗೆ ಅವನಲ್ಲೊಂದು ಕರುಣೆ ಇದೆ. ಅವಳ ಪಾಲಿಗೆ ಅವನೊಂದು ಅಕ್ಕರೆಯ ಕಡಲು. ಅವನೂ ಅವಳನ್ನು ಹಾಗೆಲ್ಲ ಬಿಟ್ಟುಬಿಡಲಾರ. ಅವಳೊಡನೆ ಆಪ್ತತೆ ಉಳಿಸಿಕೊಂಡೇ, ಸಮಿತಿಯಿಂದ ಅವಳನ್ನು ದೂರವಿಡಬೇಕು ಅಂದುಕೊಂಡ ಗೌತಮ. 

ಅವನ ಈ ಆಲೋಚನೆ ಚಿನ್ಮಯಿಗೆ ದೊಡ್ಡ ವರದಾನವಾಯಿತು. ಅವಳ ಮತ್ತೊಂದು ಬದುಕಿಗೆ ಮುನ್ನುಡಿಯಾಯಿತು ಕೂಡಾ. 

~

ಒಂದು ಬೆಳಗ್ಗೆ ಗೌತಮ ಸೀದಾ ಚಿನ್ಮಯಿಯ ಮನೆಗೆ ಬಂದವನೇ, “ನಿನಗೊಂದು ಕೆಲಸ ನೋಡಿದ್ದೇನೆ” ಅಂದ. 

ಅದೊಂದು ದೊಡ್ಡ ಪಬ್ಲಿಶಿಂಗ್ ಹೌಸ್. ಬರೆಯೋದು, ಪ್ರೂಫ್ ತಿದ್ದೋದು.. ಚಿನ್ಮಯಿಗೆ ಎರಡೂ ಸರಾಗ. ಸಂಬಳವೂ ಅವಳ ಖರ್ಚೆಲ್ಲ ಕಳೆದು ಮಿಗುವಷ್ಟು!

ಆದರೆ ಅವಳ ಕರ್ಮಠ ತಂದೆ ಮುಖ ತಿರುಗಿಸಿದರು. ಊರಿನ ಮತ್ತೊಂದು ತುದಿಯಲ್ಲಿದ್ದ ಆಫೀಸಿಗೆ ದಿನಾ ಓಡಾಡುವುದು ಕಷ್ಟ.. 

ಚಿಕ್ಕ ಮನೆ ಮಾಡಬೇಕು ಅನ್ನುವ ನಿರ್ಧಾರವಂತೂ ಅವರನ್ನು ಕೆಂಡದಂತೆ ಕೆರಳಿಸಿತು. 

ತಮ್ಮ ಮನೆತನದ ಪ್ರವರ ಹಾಡಿಹೊಗಳಿಕೊಳ್ಳುತ್ತಾ ‘ಮಂಗಳವಾರದ ಮುಂಡೆ’ ಎಂದು ಮಗಳನ್ನು ಬೈದರು.

ಅವರ ಒಂದೊಂದು ಬೈಗುಳವೂ ಚಿನ್ಮಯಿಯ ನಿರ್ಧಾರ ಗಟ್ಟಿಗೊಳಿಸುತ್ತಿತ್ತು. 

ಅವರ ವೀರಾವೇಶ ಸಾಗಿರುವಾಗಲೇ ಪೆಟ್ಟಿಗೆ ತಂದು ವರಾಂಡದಲ್ಲಿ ಇಟ್ಟಳು.ಅವಳಪ್ಪ ಮಾತು ನಿಲ್ಲಿಸಿ, ಜನಿವಾರ ಉಲ್ಟಾ ಹಾಕಿಕೊಂಡು, “ನನ್ನ ಪಾಲಿಗೆ ನೀನು ಸತ್ತೆ”ಅಂದರು.

1 comment:

  1. 99%ಕನ್ನಡ, 1%ಇತರೆ ಕನ್ನಡ ಕಂದನ ಕನ್ನಡದ ತಾಣ ಅದುವೇ www.spn3187.blogspot.in & https://t.me/spn3187 ಕನ್ನಡವನ್ನು ಕನ್ನಡಿಗರೇ ಬೆಳೆಸದಿದ್ದರೆ ಮತ್ಯಾರು ಬೆಳೆಸುವರು ಅದಕ್ಕೆ ನಮ್ಮ ಕನ್ನಡವನ್ನು ನಾವು ಬೆಳೆಸಲು ಚಿಕ್ಕ ಪ್ರಯತ್ನ ಜೈ ಕನ್ನಡಾಂಬೆ

    ReplyDelete