Oct 19, 2018

ಛತ್ತೀಸ್ ಗಡ್ ಮತ್ತು ರಾಜಸ್ಥಾನಗಳಲ್ಲಿ ಬಾಜಪದ ಹಿನ್ನಡೆಗೆ ಇರಬಹುದಾದ ಕಾರಣಗಳು?

ಕು.ಸ.ಮಧುಸೂದನ ರಂಗೇನಹಳ್ಳಿ  
ಛತ್ತೀಸ್ ಗಡ 
ಇತ್ತೀಚೆಗೆ ಹೊರಬಿದ್ದಿರುವ ಚುನಾವಣಾಪೂರ್ವ ಸಮೀಕ್ಷೆಗಳನ್ನೇ ನಂಬುವುದಾದಲ್ಲಿ ಕಳೆದ ಐದು ವರ್ಷಗಳಿಂದ ಬಾಜಪದ ತೆಕ್ಕೆಯಲ್ಲಿರುವ ಛತ್ತೀಸ್ಗಡ ರಾಜ್ಯ ಈ ಬಾರಿ ಕಾಂಗ್ರೆಸ್ಸಿನ ಮಡಿಲಿಗೆ ಜಾರಿ ಬೀಳಲಿದೆ. 

ಛತ್ತೀಸ್ ಗಡ ರಾಜ್ಯದ ಒಟ್ಟು 90 ಸ್ಥಾನಗಳ ಪೈಕಿ ಕಾಂಗ್ರೆಸ್ 47 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿದರೆ, ಬಾಜಪ 40 ಸ್ಥಾನಗಳೊಂದಿಗೆ ವಿಪಕ್ಷದಲ್ಲಿ ಕೂರಬೇಕಾಗುತ್ತದೆ. 2013ರಲ್ಲಿ ಬಾಜಪ 49 ಸ್ಥಾನಗಳನ್ನು, ಕಾಂಗ್ರೆಸ್ 39 ಸ್ಥಾನಗಳನ್ನು ಗೆದ್ದಿದ್ದನ್ನು ನಾವಿಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಐದು ವರ್ಷಗಳ ಹಿಂದೆಯೂ ಬಾಜಪ ಮತ್ತು ಕಾಂಗ್ರೆಸ್ಸಿನ ನಡುವಿನ ಮತಗಳಿಕೆಯ ಪ್ರಮಾಣದಲ್ಲಿ ಹೆಚ್ಚೇನು ವ್ಯತ್ಯಾಸವಿರಲಿಲ್ಲ.ಈ ಸಮೀಕ್ಷೆಗಳ ಪ್ರಕಾರ ಈ ಬಾರಿಯೂ ಎರಡೂ ರಾಷ್ಟ್ರೀಯ ಪಕ್ಷಗಳ ಮತಗಳಿಕೆಯ ಪ್ರಮಾಣದಲ್ಲಿ ಅಂತಹ ಅಗಾಧ ಅಂತರವೇನು ಇರುವುದಿಲ್ಲ. ಎರಡು ಪಕ್ಷಗಳ ಮತಗಳಿಕೆಯ ವ್ಯತ್ಯಾಸ ಶೇಕಡಾ 0.7ರಷ್ಟು ಮಾತ್ರ ಇರುತ್ತದೆ ಎಂದು ಹೇಳಲಾಗಿದ್ದು. ತೀವ್ರವಾದ ಹಣಾಹಣಿಯ ಕಾಳಗ ಇದಾಗಲಿರುವುದು ಖಚಿತ! 

ಈ ಹಿನ್ನೆಲೆಯಲ್ಲಿ ಛತ್ತೀಸ್ ಗಡ್ ರಾಜ್ಯದಲ್ಲಿನ ಬಾಜಪ ಸೋಲಿಗೆ ಕಾರಣಗಳೇನಾಗಿರಬಹುದೆಂಬುದನ್ನು ವಿಶ್ಲೇಷಿಸಿ ನೋಡಬೇಕಾಗುತ್ತದೆ. 
ಬಾಜಪದ ಸೋಲಿಗೆ ಬಹುಮುಖ್ಯ ಕಾರಣ ಆಡಳಿತವಿರೋಧಿ ಅಲೆಯೆಂದೇ ಹೇಳಬೇಕಾಗುತ್ತದೆ. ಮೂರು ಬಾರಿ ಮುಖ್ಯಮಂತ್ರಿ ಆಗಿರುವ ಶ್ರೀ ರಮಣಸಿಂಗ್ ಜನಪ್ರಿಯತೆಗೇನು ಕುಂದುಂಟಾಗಿಲ್ಲವಾದರೂ ಆ ಮಾತನ್ನು ಅವರ ಸಚಿವರುಗಳ ಮತ್ತು ಶಾಸಕರುಗಳ ವಿಷಯದಲ್ಲಿ ಹೇಳಲಾಗದು. ಯಾಕೆಂದರೆ ಮುಖ್ಯಮಂತ್ರಿಯನ್ನು ಹೊರತುಪಡಿಸಿದಂತೆ ಉಳಿದ ಬಹುತೇಕರ ಮೇಲೆ ಅದಕ್ಷತೆಯ ಆರೋಪ ಕೇಳಿ ಬರುತ್ತಿದೆ. ಇನ್ನು ಅಭಿವೃದ್ದಿಯ ವಿಚಾರದಲ್ಲಿಯೂ ರಾಜ್ಯ ಉಳಿದ ರಾಜ್ಯಗಳಿಗಿಂತ ತೀರಾ ಹಿಂದೆ ಬಿದ್ದಿರುವುದು ತೀರಾ ಮೇಲ್ನೋಟಕ್ಕೇನೆ ಕಂಡು ಬರುತ್ತಿದೆ. ಬಹಳ ಪ್ರಮುಖವಾಗಿ ರಾಜ್ಯವನ್ನು ನಿರುದ್ಯೋಗ ಸಮಸ್ಯೆ ಕಾಡುತ್ತಿದ್ದು, ಯುವಜನತೆ ಕೇಂದ್ರ ಮತ್ತು ರಾಜ್ಯ ಸರಕಾರಗಳೆರಡರಿಂದಲೂ ಭ್ರಮನಿರಸನಗೊಂಡಿದ್ದಾರೆ. 2013ರಲ್ಲಿ ನರೇಂದ್ರಮೋದಿಯವರ ಜನಪ್ರಿಯತೆಯ ಅಲೆಗೆ ಮಾರು ಹೋಗಿದ್ದ ಯುವಸಮುದಾಯ ಇದೀಗ ಆ ಉನ್ಮಾದದ ಸ್ಥಿತಿಯಿಂದ ಹೊರಬಂದಿರುವಂತೆ ಕಾಣುತ್ತಿದ್ದು ಬಾಜಪದ ಪರವಾಗಿ ಅಚಲವಾಗಿ ನಿಂತು ಮತನೀಡುವ ಸಾದ್ಯತೆ ಕಮ್ಮಿಯಾಗಿದೆ. ಇನ್ನು ಪ್ರಗತಿಯ ದೃಷ್ಠಿಯಿಂದ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಿ ಆಗಬೇಕಿದ್ದ ಅಭಿವೃದ್ದಿ ಪ್ರತಿಶತ ಹತ್ತರಷ್ಟೂ ಆಗದೆ ದೇಶದ ಇತರೇ ಭಾಗಗಳಿಗೆ ಹೋಲಿಸಿದರೆ ಛತ್ತೀಸ್ ಗಡ್ ಇಪ್ಪತ್ತು ವರ್ಷಗಳಷ್ಟು ಹಿಂದೆ ಬಿದ್ದಿರುವಂತೆ ಕಾಣುತ್ತದೆ. ದೇಶವ್ಯಾಪಿ ಕಂಡು ಬರುತ್ತಿರುವ ಕೃಷಿ ಬಿಕ್ಕಟ್ಟು ಇಲ್ಲಿಯೂ ಕಂಡು ಬಂದಿದ್ದು ರೈತಾಪಿ ಸಮುದಾಯ ಹತಾಶೆಯ ಅಂಚಿಗೆಬಂದು ನಿಂತಿದೆ. 

ಇನ್ನು ಇಷ್ಟೆಲ್ಲ ಹಿನ್ನಡೆಯ ಸಾಧ್ಯತೆಗಳ ನಡುವೆಯೂ ಬಾಜಪ ಏನಾದರೂ ಈ ರಾಜ್ಯವನ್ನು ಗೆಲ್ಲಲು ಸಾದ್ಯವಾದರೆ ಅದಕ್ಕೆ ಕಾರಣ ಮಿತ್ರ ಪಕ್ಷಗಳ ಜೊತೆ ಮೈತ್ರಿ ಕುದುರಿಸಲಾಗದ ಕಾಂಗ್ರೆಸ್ಸಿನ ದೌರ್ಬಲ್ಯ, ಜೊತೆಗೆ ಶೇಕಡಾ ಐದರಿಂದ ಆರರಷ್ಟು ಮತಗಳನ್ನು ಹೊಂದಿರುವ ಬಹುಜನಪಕ್ಷದ ಕುಮಾರಿ ಮಾಯಾವತಿಯವರ ಹಟಮಾರಿತನ ಕಾರಣವಾಗಬಹುದಾಗಿದೆ. ಇದರ ಜೊತೆಗೆ ಹಿಂದೆ ಕಾಂಗ್ರೆಸ್ಸಿನ ಪ್ರಶ್ನಾತೀತ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಅಜಿತ್ ಜೊಗಿಯವರೀಗ ತಮ್ಮದೇ ಆದ ಜನತಾ ಕಾಂಗ್ರೆಸ್ ಪಕ್ಷವನ್ನು ಸ್ಥಾಪಿಸಿಕೊಂಡಿದ್ದು ಬಾಜಪ ವಿರೋಧಿ ಮತಗಳನ್ನು ವಿಭಜಿಸುವಕಾರ್ಯ ಮಾಡಬಹುದಾಗಿದೆ. ಹೀಗೆ ರಕ್ಷಣಾತ್ಮಕವಾಗಿ ಬ್ಯಾಟಿಂಗ್ ಮಾಡಬೇಕಾಗಿ ಬಂದಿರುವ ಬಾಜಪ ಇದೀಗ ನಂಬಿಕೊಂಡಿರುವುದು ತನ್ನ ವಿರೋಧಿ ಮತಗಳನ್ನು ಬಹುಜನಪಕ್ಷಮತ್ತು ಸಮಾಜವಾದಿ ಪಕ್ಷ ಮತ್ತು ಜನತಾ ಕಾಂಗ್ರೆಸ್ ಪಕ್ಷಗಳು ಹಂಚಿಕೊಂಡು ತನಗೆ ಪರೋಕ್ಷವಾಗಿ ನೆರವಾಗಬಲ್ಲವೆಂಬುದನ್ನು ಮಾತ್ರ. 

ಗೆಲುವಿನ ಸಮೀಪದಲ್ಲಿರುವ ಕಾಂಗ್ರೆಸ್ ಬಹಳ ಎಚ್ಚರಿಕೆಯಿಂದ ಮತ್ತು ಸೂಕ್ಷ್ಮತೆಯಿಂದ ಈ ಚುನಾವಣೆಗಳನ್ನು ನಡೆಸಬೇಕಾದ ಅನಿವಾರ್ಯತೆ ಇದೆ. 

ರಾಜಾಸ್ಥಾನ 

ಇತ್ತೀಚೆಗಿನ ಚುನಾವಣಾ ಪೂರ್ವ ಸಮೀಕ್ಷೆಗಳನ್ನೇ ನಂಬುವುದಾದರೆ ರಾಜಾಸ್ಥಾನದಲ್ಲಿ ಆಡಳಿತಾರೂಢ ಬಾಜಪ ಪಕ್ಷ ಸೋಲುವುದು ಖಚಿತ ಎಂದು ಹೇಳಲಾಗುತ್ತಿದೆ. ರಾಜಾಸ್ಥಾನದ ಒಟ್ಟು 200 ಸ್ಥಾನಗಳ ಪೈಕಿ ಕಾಂಗ್ರೆಸ್ 130 ಸ್ಥಾನಗಳನ್ನು ಗೆದ್ದು ಅಧಿಕಾರ ಹಿಡಿಯುತ್ತದೆಯೆಂದು ಸದರಿ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ಹೇಳಲಾಗಿದ್ದು, ಈ ಸಮೀಕ್ಷೆ ಪ್ರಕಟವಾದ ಎರಡೇ ವಾರಕ್ಕೆ ಚುನಾವಣೆಯ ದಿನಾಂಕಗಳನ್ನು ಸಹ ಅಧಿಕೃತವಾಗಿ ಪ್ರಕಟಿಸಲಾಗಿದೆ. 

ಹಾಗಾದರೆ 2013ರಲ್ಲಿ ಐದು ವರ್ಷಗಳ ಹಿಂದೆ ಬಾರಿ ಬಹುಮತದಿಂದ ಅಧಿಕಾರಕ್ಕೇರಿದ್ದ ಬಾಜಪ ಈ ಬಾರಿ ಸೋಲಲು ಕಾರಣಗಳೇನಿರಬಹುದೆಂಬುದನ್ನು ವಿಶ್ಲೇಷಿಸಿನೋಡಬೇಕಾಗುತ್ತದೆ. 

ಮೊದಲಿಗೆ ರಾಜಾಸ್ಥಾನದಲ್ಲಿನ ವಿದಾನಸಭಾ ಚುನಾವಣೆಗಳೇ ವಿಚಿತ್ರ ರೀತಿಯಲ್ಲಿ ನಡೆಯುತ್ತವೆ. ಅಲ್ಲಿನ ಜನ ಕಾಂಗ್ರೆಸ್ ಮತ್ತು ಬಾಜಪವನ್ನು ಸರತಿಯಂತೆ ಗೆಲ್ಲಿಸುವ ಅಭ್ಯಾಸ ಮಾಡಿಕೊಂಡಿದ್ದಾರೆ. ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತಾರೂಢಪಕ್ಷವನ್ನು ಬದಲಾಯಿಸುತ್ತ ಬರುವುದು ರಾಜಾಸ್ಥಾನದ ಮತದಾರರ ವಿಶೇಷತೆಯಾಗಿದೆ. ಈ ಬಾರಿ ಬಾಜಪ ಸೋತು ಕಾಂಗ್ರೆಸ್ ಗೆಲ್ಲಲು ಇದೂ ಒಂದು ಕಾರಣವೆನ್ನಬಹುದು. 

ಇನ್ನು ಮದ್ಯಪ್ರದೇಶ ಮತ್ತು ಛತ್ತೀಸ್ಗಡ್ ನಲ್ಲಿ ಅಧಿಕಾರದಲ್ಲಿರುವ ಬಾಜಪದ ಮುಖ್ಯಮಂತ್ರಿಗಳಿಗೆ ಹೋಲಿಸಿದರೆ ರಾಜಾಸ್ಥಾನದ ಮುಖ್ಯಮಂತ್ರಿಗಳಾದ ಶ್ರೀಮತಿ ವಸುಂದರರಾಜೆ ಅವರು ಅಷ್ಟೇನು ಜನಪ್ರಿಯರಾಗಿ ಉಳಿದಿಲ್ಲ. ಅವರ ಸರ್ವಾಧಿಕಾರಿ ಧೋರಣೆ ಮತ್ತು ಜನಸಾಮಾನ್ಯರ ಜೊತೆ ಮಿಳಿತವಾಗದ ಅವರ ರಾಜಮನೆತನದ ಹಿನ್ನಲೆಯ ನಡವಳಿಕೆಗಳು ಜನರಿಂದ ಅವರನ್ನು ದೂರ ಇಟ್ಟಿವೆ. ಅದೂ ಅಲ್ಲದೆ ರಾಜ್ಯದ ದೈನಂದಿನ ಆಡಳಿತದಲ್ಲಿ ಮುಖ್ಯಮಂತ್ರಿಯವರ ಕುಟುಂಬ ಎಲ್ಲ ವಿಷಯಗಳಲ್ಲಿಯೂ ಹಸ್ತಕ್ಷೇಪ ನಡೆಸುವುದನ್ನು ಬಾಜಪದ ಶಾಸಕರು ಮೌನವಾಗಿ ಸಹಿಸಿಕೊಂಡಿದ್ದರೂ, ಕೆಳ ಹಂತದ ಕಾರ್ಯಕರ್ತರಲ್ಲಿ ಈ ಬಗ್ಗೆ ಅಸಮಾದಾನ ಮಡುಗಟ್ಟಿದೆ. 

ರಾಂಪಾಲ್ ಎನ್ ಕೌಂಟರ್ ಪ್ರಕರಣದ ನಂತರ ರಾಜಾಸ್ಥಾನದ ರಾಜಕಾರಣ ಸಂಪೂರ್ಣವಾಗಿ ಜಾತಿಯ ಮೇಲಾಟಗಳಿಗೆ ಈಡಾಗಿದ್ದು ಬಹುಸಂಖ್ಯಾತ ರಜಪೂತರು ಬಾಜಪದ ವಿರುದ್ದ ತಿರುಗಿ ಬಿದ್ದಿದ್ದಾರೆ. ಕರ್ಣಿ ಸೇನೆಯ ಪ್ರಾಬಲ್ಯದ ನಂತರವಂತು ಜಾತಿ ಜಾತಿಗಳ ನಡುವೆ ದ್ವೇಷಾಸೂಯೆಗಳು ತೀವ್ರವಾಗಿದ್ದು ಇದನ್ನು ಶಮನಗೊಳಿಸುವತ್ತ ಬಾಜಪ ಮನಸ್ಸು ಮಾಡದೇ ಇರುವುದು ಜನಸಾಮಾನ್ಯರಲ್ಲಿ ಅತೃಪ್ತಿ ಮೂಡಿಸಿದೆ. 

ಹಲವು ವರ್ಷಗಳಿಂದ ಮೀಸಲಾತಿಗಾಗಿ ಹೋರಾಟನಡೆಸಿದ್ದ ಗುಜ್ಜಾರ್ ಸಮುದಾಯವನ್ನು ಸಮಾಧಾನ ಪಡಿಸಲು ಆ ಸಮುದಾಯಕ್ಕೆ ಶೇಕಡಾ 5ರಷ್ಟು ಮೀಸಲಾತಿ ನಿಗದಿ ಪಡಿಸುವ ಮಸೂದೆಯನ್ನು ವಿದಾನಸಭೆ ಅಂಗೀಕರಿಸಿದ್ದು ಉಳಿದ ಹಿಂದುಳಿದ ಜಾತಿಗಳಲ್ಲಿ ಮತ್ತು ರಜಪೂತ ಸಮುದಾಯದಲ್ಲಿ ಅಸಮಾಧಾನ ಮೂಡಿಸಿದೆ. ಇದೇ ವೇಳೆಗೆ ಸುಗ್ರೀವಾಜ್ಞೆ ಹೊರಡಿಸದೆ ಕೇವಲ ಮಸೂದೆ ಅಂಗೀಕರಿಸಿರುವುದು ಗುಜ್ಜಾರರರನ್ನು ದಾರಿತಪ್ಪಿಸುವ ಒಂದು ಕ್ರಮವೆಂಬ ವಿರೋಧಪಕ್ಷಗಳ ಪ್ರಚಾರದಿಂದ ಗುಜ್ಜಾರ ಸಮುದಾಯ ಸಹ ಬಾಜಪದ ಮೇಲೆ ಮುನಿಸಿಕೊಂಡಿದೆ. 

ಇದೆಲ್ಲಕ್ಕಿಂತ ಮುಖ್ಯವಾಗಿ ಕಳೆದ ಅವಧಿಯಲ್ಲಿ ರಾಜಾಸ್ಥಾನದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಅಶೋಕ್ ಗೆಹ್ಲೋಟ್ ಅವರು ಪ್ರಕಟಿಸಿದ್ದ ಹಲವು ಜನಪರ ಯೋಜನೆಗಳನ್ನು ಬಾಜಪ ಅಧಿಕಾರಕ್ಕೆ ಬಂದ ನಂತರ ತಡೆ ಹಿಡಿಯಲಾಯಿತು.ಒಂದು ರೂಪಾಯಿಗೆ ಒಂದು ಕೆಜಿ ಗೋದಿ, ವಿದ್ಯಾರ್ಥಿಗಳಿಗೆ ಉಚಿತ ಲ್ಯಾಪ್ ಟಾಪ್ ವಿತರಣೆ,ಅತ್ಯಂತ ಕಡು ಬಡವರಿಗೆ ಉಚಿತ ವೈದ್ಯಕೀಯ ಸೌಲಭ್ಯ ಮತ್ತು ವಸ್ತ್ರ ವಿತರಣೆಯಂತಹ ಯೋಜನೆಗಳನ್ನು ಗೆಹ್ಲೋಟ್ ಅವರು ಆರಂಭಿಸಿದ್ದು ನಿಜವಾದರು ಅವುಗಳನ್ನು ಅವರುಜಾರಿಗೊಳಿಸುವಷ್ಟರಲ್ಲಿ ಅಧಿಕಾರ ಕಳೆದುಕೊಳ್ಳಬೇಕಾಯಿತು. ಹಿಂದಿನ ಸರಕಾರದ ಜನಪ್ರಿಯ ಯೋಜನೆಗಳನ್ನು ಬಾಜಪಸರಕಾರ ಮುಂದುವರೆಸುತ್ತದೆ ಎನ್ನುವ ಮತದಾರರ ನಿರೀಕ್ಷೆಗಳನ್ನು ತಲೆಕೆಳಗಾಗಿ ಮಾಡಿದ ಮುಖ್ಯಮಂತ್ರಿಗಳಾದ ಶ್ರೀಮತಿ ವಸುಂದರಾ ರಾಜೆಯವರು ತಳ ಸಮುದಾಯಗಳ ವಿರೋಧ ಕಟ್ಟಿಕೊಳ್ಳಬೇಕಾಯಿತು. 

2013ರಲ್ಲಿಶ್ರೀ ನರೇಂದ್ರಮೋದಿಯವರನ್ನು ಪ್ರದಾನಮಂತ್ರಿ ಅಭ್ಯಥರ್ಿಯನ್ನಾಗಿ ಘೋಷಿಸಿದ್ದು, ಮೋದಿಯವರ ಜನಪ್ರಿಯತೆ ಉತ್ತುಂಗ ಸ್ಥಿತಿಯಲ್ಲಿತ್ತು. ಆ ಮೋದಿ ಅಲೆಯಲ್ಲಿ ಶ್ರೀ ಅಶೋಕ್ ಗೆಹ್ಲೋಟ್ ಅವರ ಜನಪ್ರಿಯತೆ ಕೆಲಸ ಮಾಡದೆ ಅನಾಯಾಸವಾಗಿ ಶ್ರೀಮತಿ ರಾಜೆಯವರು ಅಧಿಕಾರದ ಗದ್ದುಗೆ ಏರಿದ್ದರು. 

ಆದರೆ ಕಳೆದ ಐದು ವರ್ಷಗಳಲ್ಲಿ ರಾಜಕಾರಣ ಸಾಕಷ್ಟು ಬದಲಾಗಿದ್ದು, ಸ್ವತ: ಮೋದಿಯವರ ಜನಪ್ರಿಯತೆಯನ್ನು ಪ್ರಶ್ನೆ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ವೈಫಲ್ಯಗಳನ್ನು ಜನತೆ ನೋಡುತ್ತಿದ್ದಾರೆ. ಸಹಜವಾಗಿಯೇ ಐದು ವರ್ಷ ಆಳ್ವಿಕೆ ನಡೆಸಿದ ಸರಕಾರವೊಂದನ್ನು ಕಾಡಬಹುದಾದ ಆಡಳಿತವಿರೋಧಿ ಅಲೆ ಈ ಸರಕಾರವನ್ನೂ ಕಾಡುತ್ತಿದ್ದು, ಜನತೆ ಬದಲಾಬಣೆ ಬಯಸಿ ಮತ ಚಲಾಯಿಸಿದರೆ ಅದರಲ್ಲಿ ಅಚ್ಚರಿಯೇನು ಇಲ್ಲ. ಅದೂ ಅಲ್ಲದೆ ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತ ಪಕ್ಷವನ್ನು ಬದಲಿಸುವುದು ರಾಜಾಸ್ಥಾನದ ಮತದಾರರ ಅಭ್ಯಾಸವಾಗಿದ್ದು, ಈ ಬಾರಿಯೂ ಅದನ್ನವರು ಮುಮದುವರೆಸುತ್ತಾರೆಯೊ ಇಲ್ಲವೊ ಎಂಬುದನ್ನು ಕಾದು ನೋಡಬೇಕಾಗಿದೆ. 

ಆದರೆ 2008ರಲ್ಲಿ ರಾಜಾಸ್ಥಾನದಲ್ಲಿ 6ಸ್ಥಾನಗಳನ್ನು ಗೆದ್ದಿದ್ದ ಬಹುಜನಪಕ್ಷ (ಶೇಕಡಾ 6 ಮತಗಳಿಕೆ) ನಂತರ 2013ರಲ್ಲಿ ಶೇಕಡಾ3.4ರಷ್ಟು ಮತಗಳಿಸಿ 3 ಸ್ಥಾನಗಳಿಗೆ ಸೀಮಿತವಾಗಿದ್ದು. ಇವೆಲ್ಲವನ್ನೂ ಗಮನಿಸಿದರೆ,ಇವತ್ತು ಬಹುಜನಪಕ್ಷಕ್ಕೆ ರಾಜಾಸ್ಥಾನದಲ್ಲಿ ಶೇಕಡಾ 5 ರಿಂದ 6ರಷ್ಟು ಮತಗಳಿಕೆಯ ಶಕ್ತಿ ಇದೆ ಎನ್ನಬಹುದು. ಬಾಜಪವನ್ನು ಸೋಲಿಸಲು ಕಾಂಗ್ರೆಸ್ ಮತ್ತು ಬಿ.ಎಸ್.ಪಿ ಮೈತ್ರಿ ಮಾಡಿಕೊಳ್ಳುತ್ತವೆಯೆಂದು ಎಲ್ಲರೂ ನಿರೀಕ್ಷಿಸಿದ್ದರು. ಆದರೀಗ ಬಹುಜನಪಕ್ಷ ಕಾಂಗ್ರೇಸ್ಸಿನ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲವೆಂದು ಸ್ಪಷ್ಟಪಡಿಸಿದ್ದು,ಇದು ಬಾಜಪಕ್ಕೆ ವರವಾಗಬಹುದು. ಬಹುಜನಪಕ್ಷ ಎಷ್ಟರಮಟ್ಟಿಗೆ ಹೆಚ್ಚು ಮತಗಳನ್ನು ಸೆಲೆಯುತ್ತದೆಯೊ ಅಷ್ಟರ ಮಟ್ಟಿಗೆ ಅದು ಬಾಜಪಕ್ಕೆ ಲಾಭ ತಂದುಕೊಡುವುದು ಖಚಿತ. ಹೀಗಾದಲ್ಲಿ ಬಾಜಪ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಹೋರಾಟ ನಡೆದು ಅಂತಿಮ ಪಲಿತಾಂಶ ಅಚ್ಚರಿದಾಯಕವಾಗಿರಲೂ ಬಹುದು. 

No comments:

Post a Comment