Aug 14, 2018

ಏಕಕಾಲಕ್ಕೆ ಚುನಾವಣೆಗೆ ಬಾಜಪದ ಶಿಫಾರಸ್ಸು! ಯಾಕೆ ಮತ್ತು ಹೇಗೆ?

ಕು.ಸ.ಮಧುಸೂದನ ರಂಗೇನಹಳ್ಳಿ 
ಅಂತೂ ವಿವಿದ ರಾಜಕೀಯ ಪಕ್ಷಗಳ ಮತ್ತು ರಾಜಕೀಯ ಪಂಡಿತರುಗಳ ವಿರೋಧಗಳ ನಡುವೆಯೂ ದೇಶದಲ್ಲಿ ಲೋಕಸಭೆ ಮತ್ತು ಎಲ್ಲ ರಾಜ್ಯಗಳ ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಸುವ ತನ್ನ ನಿಲುವಿಗೆ ಬದ್ದವಾಗಿರುವ ಬಾಜಪ ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯನ್ನು ಇಟ್ಟಂತೆ ಕಾಣುತ್ತಿದೆ. ಇದೀಗ ಅದು ಮುಂದಿನ ವರ್ಷದ ಮೇ ತಿಂಗಳಲ್ಲಿ ನಡೆಯಬಹುದಾದ ಲೋಕಸಭಾ ಚುನಾವಣೆಗಳ ಜೊತೆಗೆ ದೇಶದ ಇತರೆ ಹನ್ನೊಂದು ರಾಜ್ಯಗಳ ವಿದಾನಸಭೆಗಳಿಗೂ ಚುನಾವಣೆ ನಡೆಸುವ ಶಿಫಾರಸ್ಸೊಂದನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ಕಳಿಸುವ ಬಗ್ಗೆ ಚಿಂತಿಸುತ್ತಿದೆ. ಈ ಹಿನ್ನೆಲೆಯಲ್ಲಿಯೇ ಬಾಜಪದ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಅಮಿತ್ ಷಾರವರು ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರವೊಂದನ್ನು ಬರೆದಿದ್ದಾರೆ. ಇನ್ನು ಕೇಂದ್ರ ಸರಕಾರ ಅಧಿಕೃತವಾಗಿ ಈ ಬಗ್ಗೆ ಚುನಾವಣಾ ಅಯೋಗಕ್ಕೆ ಶಿಫಾರಸ್ಸು ಮಾಡುವ ಸಾದ್ಯತೆ ಹೆಚ್ಚಿದೆ. 

ಈ ವರ್ಷದ ಕೊನೆಯಲ್ಲಿ ಚುನಾವಣೆ ನಡೆಯಬೇಕಿರುವ ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್ ಗಡ್, ಮಿಜೋರಾಂ ರಾಜ್ಯಗಳಲ್ಲಿ ಮುಂದಿನ ಮೆ ತಿಂಗಳವರೆಗು ರಾಜ್ಯಪಾಲರ ಆಡಳಿತವನ್ನು ಹೇರುವುದು. 2019ರ ಅಂತ್ಯಕ್ಕೆ ಅವಧಿ ಮುಗಿಯಲಿರುವ ತಮ್ಮದೇ ಆಡಳಿತ ಇರುವ ಮಹಾರಾಷ್ಟ್ರ,ಹರಿಯಾಣ, ಜಾರ್ಖಂಡ್ ರಾಜ್ಯಗಳ ಸರಕಾರಗಳನ್ನು ಅವಧಿಗೆ ಮುಂಚಿತವಾಗಿಯೇ ವಿದಾನಸಭೆ ವಿಸರ್ಜಿಸಿ ಲೋಕಸಭಾ ಚುನಾವಣೆಯ ಜೊತೆಗೆ ಸದರಿ ರಾಜ್ಯಗಳಿಗೂ ಚುನಾವಣೆ ನಡೆಸುವಂತೆ ಆಯೋಗವನ್ನು ಕೋರುವ ನಿರ್ಣಯವನ್ನು ಅಂಗೀಕರಿಸುವಂತೆ ಮಾಡುವುದು. 2020ಕ್ಕೆ ಚುನಾವಣೆಗೆ ಹೋಗಬೇಕಿರುವ ಬಿಹಾರದಲ್ಲಿ ತಮ್ಮ ಮೈತ್ರಿ ಸರಕಾರದ ನೇತೃತ್ವ ವಹಿಸಿರುವ ಸಂಯುಕ್ತ ಜನತಾದಳದ ಶ್ರೀ ನಿತೀಶ್ ಕುಮಾರ್ ಅವರ ಮನವೊಲಿಸಿ ಬಿಹಾರದ ವಿದಾನಸಭೆಯನ್ನೂ ಅವಧಿಗೆ ಮುನ್ನವೇ ವಿಸರ್ಜಿಸಿ ಲೋಕಸಭೆಯ ಜೊತೆಗೇನೆ ಚುನಾವಣೆಗೆ ಹೋಗುವಂತೆ ಮಾಡುವುದು. ಅಲ್ಲಿಗೆ ತಮ್ಮ ಹಿಡಿತದಲ್ಲಿರುವ ಎಂಟು ರಾಜ್ಯಗಳನ್ನು ಚುನಾವಣೆಗೆ ಸಿದ್ದಪಡಿಸಿದಂತಾಗುತ್ತದೆ. ಇದರ ಜೊತೆಗೆ ಹೇಗಿದ್ದರೂ ಮುಂದಿನ ಮೇ ತಿಂಗಳ ಹೊತ್ತಿಗೆ ಸಹಜವಾಗಿಯೆ ಚುನಾವಣೆ ನಡೆಯಬೇಕಿರುವ ಆಂದ್ರ ಪ್ರದೇಶ, ತೆಲಂಗಾಣ, ಒಡಿಶ್ಸಾ ರಾಜ್ಯಗಳೂ ಸೇರಿಕೊಂಡರೆ ದೇಶದ ಮುವತ್ತು ರಾಜ್ಯಗಳ ಪೈಕಿ ಸುಮಾರು ಹನ್ನೊಂದು ರಾಜ್ಯಗಳು ಲೋಕಸಭೆಯ ಜೊತೆಗೆಯೇ ಚುನಾವಣೆ ಎದುರಿಸುವಂತಾಗುತ್ತದೆ. ಇದು ಸದ್ಯದಲ್ಲಿ ಬಾಜಪ ಮಾಡಲಿರುವ ಶಿಫಾರಸ್ಸಿನ ಹಿಂದಿರುವ ಚಾಣಾಕ್ಷ್ಯ ನಡೆಯಾಗಿದೆ. 
ಇದರ ಜೊತೆಗೆ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳದ ಮೈತ್ರಿ ಸರಕಾರವಿರುವ ಕರ್ನಾಟಕದಲ್ಲಿ ರಾಜಕೀಯ ಅಸ್ಥಿರತೆಯನ್ನುಂಟು ಮಾಡಿ ವಿದಾನಸಭೆ ವಿಸರ್ಜನೆಯಾಗುವಂತೆ ನೋಡಿಕೊಳ್ಳಬಹುದಾಗಿದೆ. ಇನ್ನು ತಮಿಳುನಾಡಿನಲ್ಲಿ ಆಡಳಿತ ನಡೆಸುತ್ತಿರುವ ಎ.ಐ.ಎ.ಡಿ.ಎಂ.ಕೆ. ಪಕ್ಷ ಒಡೆದ ಮನೆಯಾಗಿದ್ದು ಅದರ ಲಾಭ ಪಡೆದು ಆ ಸರಕಾರವನ್ನೂ ಬೀಳಿಸುವ ತಂತ್ರವೊಂದು ಸಹ ಅದರ ಮುಂದಿರುವಂತೆ ಕಾಣುತ್ತಿದೆ. ಇತ್ತೀಚೆಗೆ ನಿಧನ ಹೊಂದಿದ ಎಂ.ಕೆ.ಕರುಣಾ ನಿಧಿಯವರ ಅನುಪಸ್ಥಿತಿ ಕೂಡ ಈ ನಡೆಗೆ ಪೂರಕವಾಗಬಲ್ಲದು. ಇದೇನಾದರು ಸಾದ್ಯವಾಗಿ ಬಿಟ್ಟರೆ ದೇಶದ ಒಟ್ಟು ಮುವತ್ತು ರಾಜ್ಯಗಳ ಪೈಕಿ ಹೆಚ್ಚೂ ಕಡಿಮೆ ಅರ್ದದಷ್ಟು ರಾಜ್ಯಗಳಲ್ಲಿ ಲೋಕಸಭೆಯ ಜತೆಗೆ ಒಂದೇ ವೇಳಾ ಪಟ್ಟಿಯಲ್ಲಿ ಚುನಾವಣೆ ನಡೆಸಿದಂತಾಗುತ್ತದೆ. 

ಬಾಜಪದ ಈ ಲೆಕ್ಕಾಚಾರದ ಹಿಂದಿರುವ ಕಾರಣಗಳನ್ನು ಸ್ವಲ್ಪ ನೋಡೋಣ:

ಬಾಜಪ ಅದಿಕಾರದಲ್ಲಿರುವ ರಾಜಸ್ಥಾನ್, ಮಧ್ಯಪ್ರದೇಶ ಮತ್ತು ಛತ್ತೀಸ್ ಗಡ ರಾಜ್ಯಗಳಿಗೆ ಈ ವರ್ಷಾಂತ್ಯಕ್ಕೆ ಚುನಾವಣೆಗಳು ನಡೆಯಬೇಕಿವೆ. ಈ ಮೂರೂ ರಾಜ್ಯಗಳಲ್ಲಿ ಆಡಳಿತ ವಿರೋದಿ ಅಲೆಯೊಂದು ಬಲವಾಗಿ ಬೀಸುತ್ತಿದ್ದು ಕಾಂಗ್ರೆಸ್ ಇದರ ಲಾಭ ಪಡೆಯಬಹುದೆಂದು ಹೇಳಲಾಗುತ್ತಿದೆ. ಇತ್ತೀಚೆಗಿನ ಸಮೀಕ್ಷೆಗಳು ಈ ಮೂರೂ ರಾಜ್ಯಗಳಲ್ಲಿ ಬಾಜಪ ಅಧಿಕಾರ ಕಳೆದುಕೊಳ್ಳಬಹುದೆಂದು ಹೇಳಿವೆ. ಈ ಮೂರು ರಾಜ್ಯಗಳನ್ನು ಕಳೆದುಕೊಂಡರೆ ಲೋಕಸಭಾ ಚುನಾವಣೆಯಲ್ಲಿ ಬಾಜಪಕ್ಕೆ ಬಾರಿ ಹಿನ್ನಡೆಯಾಗುವ ಸಾದ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಯಾಕೆಂದರೆ ಈ ರಾಜ್ಯಗಳಲ್ಲಿ ಅರವತ್ತೈದು ಲೋಕಸಭಾ ಸ್ಥಾನಗಳಿದ್ದು ಕಳೆದ ಬಾರಿ ಅಂದರೆ 2014ರ ಲೋಕಸಭಾ ಚುನಾವಣೆಯಲ್ಲಿ ಬಾಜಪ ಐವತ್ತಾರು ಸ್ಥಾನಗಳನ್ನು ಗೆದ್ದಿತ್ತು. 2019ರ ಚುನಾವಣೆಯಲ್ಲಿ ಮತ್ತೆ ಬಾಜಪ ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಅಷ್ಟೇ ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಹೀಗಾಗಿ ಈ ಮೂರು ರಾಜ್ಯಗಳಲ್ಲಿ ಹೇಗಾದರು ಮಾಡಿ ಗೆಲ್ಲುವುದು ಬಾಜಪದ ನಿಜ ಉದ್ದೇಶವಾಗಿದೆ. 

ಲೋಕಸಭಾ ಚುನಾವಣೆಗಳ ಮಟ್ಟಿಗೆ ಸದ್ಯಕ್ಕೆ ಪ್ರದಾನಮಂತ್ರಿಗಳಾದ ಶ್ರೀನರೇಂದ್ರ ಮೋದಿಯವರಿಗೆ ಪರ್ಯಾಯ ನಾಯಕ ಇಲ್ಲವೆಂಬ ಒಂದು ಅಭಿಪ್ರಾಯ ಸಾಮಾನ್ಯ ಮತದಾರರಲ್ಲಿ ಇದ್ದು ಇದನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಮುಂದಿನ ಲೋಕಸಭಾ ಚುನಾವಣೆಗಳನ್ನು ಗೆಲ್ಲಬಹುದೆಂಬುದು ಬಾಜಪದ ಲೆಕ್ಕಾಚಾರವಾಗಿದೆ. ಮೋದಿಯವರ ಪರವಿರುವ ಈ ಒಲವನ್ನು ರಾಜ್ಯಗಳ ಚುನಾವಣೆಯಲ್ಲಿಯೂ ಬಳಸಿಕೊಂಡರೆ ಮಾತ್ರ ಆ ರಾಜ್ಯಗಳ ಚುನಾವಣೆಗಳನ್ನು ಗೆಲ್ಲಬಹುದೆಂಬುದು ಬಾಜಪಕ್ಕೆ ಅರ್ಥವಾಗಿದೆ. ಇತ್ತೀಚೆಗೆ ರಾಜಸ್ಥಾನದಲ್ಲಿ ನಡೆದ ಮೂರು ಉಪಚುನಾವಣೆಗಳಲ್ಲಿ ಬಾಜಪ ಸೋತು ಕಾಂಗ್ರೆಸ್ ಗೆದ್ದಿತ್ತು. ಅಲ್ಲಿನ ಮುಖ್ಯಮಂತ್ರಿ ಶ್ರೀಮತಿ ವಸುಂದರಾ ರಾಜೆಯವರ ವಿರುದ್ದ ಜನಾಭಿಪ್ರಾಯ ಸ್ಪಷ್ಟವಾಗಿ ರೂಪುಗೊಳ್ಳುತ್ತಿದ್ದು, ಮೋದಿಯವರ ಹೆಸರು ಮಾತ್ರ ಅಲ್ಲಿ ಬಾಜಪದ ಪಾಲಿಗೆ ವರವಾಗುವ ಸನ್ನಿವೇಶವೊಂದು ಸೃಷ್ಠಿಯಾಗಿದೆ. ಹೀಗಾಗಿ ಹೇಗಾದರು ಮಾಡಿ ಏಕಕಾಲಕ್ಕೆ ಚುನಾವಣೆ ನಡೆಸಿ ಮೋದಿ ಪರವಾದ ಕೃತಕವಾದ ಅಲೆಯೊಂದನ್ನು ಸೃಷ್ಠಿಸಿ ಗೆಲ್ಲುವ ತಂತ್ರಗಾರಿಕೆಯನ್ನು ಬಾಜಪ ಮಾಡುತ್ತಿದೆ. 

ಕು.ಸ.ಮಧುಸೂದನ ರಂಗೇನಹಳ್ಳಿಯವರ ಮತ್ತಷ್ಟು ಬರಹಗಳನ್ನೂ ಓದಲು ಇಲ್ಲಿ ಕ್ಲಿಕ್ಕಿಸಿ.

ಆದರಿದು ಆ ರಾಜ್ಯಗಳ ಮತದಾರರಿಗೆ ಮಾಡುವ ಅನ್ಯಾಯವಾಗುತ್ತದೆ. ಯಾಕೆಂದರೆ ಏಕಕಾಲಕ್ಕೆ ಚುನಾವಣೆ ನಡೆದರೆ ಸ್ಥಳೀಯ ವಿಷಯಗಳ ಬಗ್ಗೆ ಚರ್ಚೆ ನಡೆಯುವುದೇ ಇಲ್ಲ. ಲೋಕಸಭಾ ಚುನಾವಣೆಗಳಲ್ಲಿ ಪ್ರಸ್ತಾಪವಾಗುವ ರಾಷ್ಟ್ರೀಯ ವಿಷಯಗಳ ಸುತ್ತಲೇ ಇಡೀ ಚುನಾವಣಾ ಪ್ರಚಾರ ಗಿರಕಿ ಹೊಡೆಯುತ್ತ ರಾಜ್ಯಗಳಿಗೆ ಸಂಬಂದಿಸಿದ ಸಮಸ್ಯೆಗಳ ಬಗ್ಗೆ ಯಾವ ರಾಜಕೀಯ ಪಕ್ಷಗಲೂ ತಲೆ ಕೆಡಿಸಿಕೊಳ್ಳುವುದಿಲ್ಲ. ಇದರಿಂದ ರಾಜ್ಯಗಳ ಮತದಾರನಿಗೆ ತನ್ನ ಮೂಲಭೂತ ಅವಶ್ಯಕತೆಗಳ ಮತ್ತು ಅವುಗಳ ಕೊರತೆಯ ಬಗ್ಗೆ ರಾಜಕೀಯ ಪಕ್ಷಗಳ ನಿಲುವುಗಳನ್ನು ತಿಳಿದುಕೊಂಡು ಮತಚಲಾಯಿಸುವ ಅವಕಾಶವನ್ನೇ ನಿರಾಕರಿಸಿದಂತಾಗುತ್ತದೆ. 

ಒಟ್ಟಿನಲ್ಲಿ ಲೋಕಸಭೆ ಮತ್ತು ರಾಜ್ಯಗಳ ವಿದಾನಸಭೆಗಳಿಗೆ ಏಕಕಾಲಕ್ಕೆ ಚುನಾವಣೆಗಳನ್ನು ನಡೆಸುವ ಹುನ್ನಾರದ ಹಿಂದಿರುವುದು ಬಾಜಪದ ಗೆಲುವಿನ ಮಹತ್ವಾಕಾಂಕ್ಷೆಯೇ ಹೊರತು ಬೇರೇನಲ್ಲ. ಇದನ್ನು ಮರೆ ಮಾಡಲು ಖರ್ಚಾಗುವ ಹಣ, ವ್ಯಯವಾಗುವ ಸಮಯ, ಚುನಾವಣಾ ಶಿಸ್ತಿನ ನೆಪಗಳನ್ನು ಹೇಳಲಾಗುತ್ತಿದೆ. ಯಾವುದೇ ಗಂಭೀರವಾದ ವಿಷಯಗಳ ಬಗ್ಗೆಯೂ ಒಂದಾಗಿ ಸರಕಾರದ ವಿರುದ್ದ ಹೋರಾಡಲು ಇದುವರೆಗು ವಿಫಲವಾಗಿರುವ ವಿರೋಧ ಪಕ್ಷಗಳು ಇದೀಗ ಏನು ಮಾಡುತ್ತವೆ ಎನ್ನುವುದನ್ನು ಕಾದು ನೋಡಬೇಕಾಗಿದೆ. 

No comments:

Post a Comment