Jul 1, 2018

ಪಕ್ಷಿ ಪ್ರಪಂಚ: ನೀಲಕಂಠ.

ಚಿತ್ರ ೧: ಹಸಿರ ನಡುವೆ ನೀಲಕಂಠ 
ಡಾ. ಅಶೋಕ್. ಕೆ. ಅರ್. 
ದಾಸ ಮಗರೆ ಎಂದೂ ಕರೆಯಲ್ಪಡುವ ಈ ವರ್ಣಮಯ ಪಕ್ಷಿ ನಮ್ಮ ಕರ್ನಾಟಕದ ರಾಜ್ಯ ಪಕ್ಷಿ. ಕರ್ನಾಟಕದ್ದಷ್ಟೇ ಅಲ್ಲ ಆಂಧ್ರ, ತೆಲಂಗಾಣ ಮತ್ತು ಒರಿಸ್ಸಾದ ರಾಜ್ಯಪಕ್ಷಿಯೂ ಹೌದು. 

ಆಂಗ್ಲ ಹೆಸರು: Indian roller (ಇಂಡಿಯನ್ ರೋಲರ್) (ಈ ಮುಂಚೆ ಈ ಪಕ್ಷಿಗೆ Indian blue jay - ಇಂಡಿಯನ್ ಬ್ಲೂ ಜೇ ಎಂದೂ ಕರೆಯಲಾಗುತ್ತಿತ್ತು. ತೇಜಸ್ವಿಯವರ ಹಕ್ಕಿ ಪುಕ್ಕ ಪುಸ್ತಕದಲ್ಲಿ ಬ್ಲೂ ಜೇ ಎಂಬ ಹೆಸರೇ ಇದೆ)
ವೈಜ್ಞಾನಿಕ ಹೆಸರು: Coracias benghalensis (ಕೊರಾಕಿಯಾಸ್ ಬೆಂಗಾಲೆನ್ಸಿಸ್) 

ಈ ಪಕ್ಷಿಯನ್ನೊಮ್ಮೆ ನೋಡಿದರೆ ಮರೆಯುವ ಸಾಧ್ಯತೆ ಕಡಿಮೆ. ಗುರುತಿಸುವಿಕೆಯೂ ಸುಲಭ. ನೀಲಿ ಬಣ್ಣವನ್ನು ಹೆಚ್ಚಾಗಿ ಹೊಂದಿರುವ ಪಕ್ಷಿಯಿದು. 

ಇನ್ನಷ್ಟು ಪಕ್ಷಿಗಳ ಬಗ್ಗೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ. 

ನೀಲಿಯ ಜೊತೆಗೆ ನೇರಳೆ, ಬೂದು, ಕೆಂಪು, ಕಂದು, ಬಿಳಿ ಬಣ್ಣಗಳನ್ನೊಂದಿದೆ. ನೆತ್ತಿಯ ಬಣ್ಣ ನೀಲಿ, ಕೊಕ್ಕು ಕಂದು - ಕಪ್ಪು ಬಣ್ಣದ್ದು. ಕತ್ತಿನ ಮುಂಭಾಗವು ಕಪ್ಪು ಬಿಳಿ ಗಡ್ಡದಂತೆ ಕಾಣುತ್ತದೆ. ಎದೆಯ ಮೇಲ್ಭಾಗದಲ್ಲಿ ಕಂದು ಬಣ್ಣವಿದ್ದರೆ ಕೆಳಭಾಗದಲ್ಲಿ ನೀಲಿ ಬಣ್ಣವಿದೆ. 

ರೆಕ್ಕೆ ಮುಚ್ಚಿದಾಗ ನೀಲಿ ಮತ್ತು ಗಾಢ ನೇರಳೆ ಬಣ್ಣಗಳಷ್ಟೇ ಕಂಡರೆ ಹಾರುವಾಗ ಈ ಬಣ್ಣಗಳ ಜೊತೆಗೆ ಬಿಳಿ - ಕಪ್ಪು ಪಟ್ಟಿಗಳನ್ನೂ ಕಾಣಬಹುದು. ಇವುಗಳ ಹಾರಾಟದ ಬಣ್ಣಗಳನ್ನು ನೋಡುವುದೇ ಒಂದು ಸಂಭ್ರಮ. ಹೆಣ್ಣು ಗಂಡಿನಲ್ಲಿ ವ್ಯತ್ಯಾಸವಿಲ್ಲ. 

ಗದ್ದೆ ತೋಟಗಳ ಬಳಿಯ ಮರಗಳಲ್ಲಿರುವ ಪೊಟರೆಗಳನ್ನೇ ಇವುಗಳು ತಮ್ಮ ಮನೆಯನ್ನಾಗಿಸಿಕೊಳ್ಳುತ್ತವೆ. ಹಳೆಯ ತೆಂಗಿನ ಮರದ ಪೊಟರೆಗಳು ಇವುಗಳಿಗೆ ಅಚ್ಚುಮೆಚ್ಚು. 
ಚಿತ್ರ ೨: ಚಂದ್ರ ಮತ್ತು ನೀಲಕಂಠ 

ಮಾಂಸಾಹಾರಿಗಳಾಗಿರುವ ಈ ಪಕ್ಷಿಗಳ ಮೆಚ್ಚಿನ ಆಹಾರ ಕೀಟಗಳು, ಗದ್ದೆಯ ಸಮೀಪದಲ್ಲಿ ಹಾದು ಹೋಗುವ ವಿದ್ಯುತ್ ತಂತಿಯ ಮೇಲೆ, ಮರಗಳ ಮೇಲೆ ಸಾವಕಾಶ ಕುಳಿತು ಹುಳ ಹುಪ್ಪಟೆಗಳನ್ನು ಕಂಡಾಗ ನೆಲಕ್ಕೆ ಹಾರಿ ಹಿಡಿದು ಪುನಃ ತಂತಿಯ ಮೇಲೆ ಕುಳಿತು ವಿರಾಮದಿಂದ ತಿನ್ನುತ್ತವೆ. ಹಲ್ಲಿ, ಸಣ್ಣ ಗಾತ್ರದ ಹಾವುಗಳು, ಹಾವುರಾಣಿ, ಊಸರವಳ್ಳಿ, ಕಪ್ಪೆ ಕೂಡ ಇವುಗಳ ಆಹಾರಪಟ್ಟಿಯಲ್ಲಿದೆ. ಗದ್ದೆಯಲ್ಲಿನ ಕೀಟಗಳನ್ನು ಭಕ್ಷಿಸುವ ಇವು ರೈತಸ್ನೇಹಿ ಪಕ್ಷಿಗಳು. 

ಹಾಗೆ ನೋಡಿದರೆ ಇವುಗಳ ಕಂಠ ಅಥವಾ ಕತ್ತಿನ ಭಾಗದಲ್ಲಿ ನೀಲಿ ಬಣ್ಣವಿಲ್ಲ! ಆದರೂ ಇವುಗಳಿಗೆ ‘ನೀಲಕಂಠ'ವೆಂದು ಯಾಕೆ ಕರೆಯುತ್ತಾರೆ? ನನಗಂತೂ ತಿಳಿಯಲಾಗಿಲ್ಲ. ನಿಮಗೆ ಗೊತ್ತಿದ್ದರೆ ತಿಳಿಸಿ!

ಚಿತ್ರನೆನಪು: 
ಚಿತ್ರ ೧) ಚನ್ನಪಟ್ಟಣದ ಗೆಳೆಯ ಪಕ್ಷಿ ಪ್ರೇಮಿ ರಘುಕುಮಾರ್ ಜೊತೆ ಚನ್ನಪಟ್ಟಣದ ಸುತ್ತಮುತ್ತ ಅಲೆಯುತ್ತಿದ್ದಾಗ ತೆಗೆದ ಪಟವಿದು. ಮರದ ಗೂಟವೊಂದರ ಮೇಲೆ ಕುಳಿತಿತ್ತು ಈ ನೀಲಕಂಠ. ನಿಧಾನಕ್ಕೆ ಅದರ ಬಳಿ ಸಾಗುತ್ತಿದ್ದಾಗ ನಮ್ಮಾಗಮನದಿಂದ ಎಚ್ಚೆತ್ತ ನೀಲಕಂಠ ಹಾರಿ ಹೋಯಿತು. ಅದೃಷ್ಟವಶಾತ್ ಹಾರಿ ಹೋಗಿ ಹಸಿರೆಲೆಗಳ ಮಧ್ಯೆ ಕುಳಿತುಕೊಂಡಿತು. ಹಸಿರು - ನೀಲಿಯ ಚೆಂದದ ಸಮ್ಮಿಳನ ಕ್ಯಾಮೆರಾದಲ್ಲಿ ಸೆರೆಯಾಯಿತು.

ಚಿತ್ರ ೨) ನೀಲಕಂಠ ಮತ್ತು ಚಂದ್ರ: ಇದು ಕುಣಿಗಲ್ಲಿನಲ್ಲಿ ತೆಗೆದ ಪಟ. ಪಕ್ಷಿಯ ವಿವರಗಳು ಇದರಲ್ಲಿ ಹೆಚ್ಚು ಸ್ಪಷ್ಟವಾಗಿ ಕಾಣಿಸುವುದಿಲ್ಲವಾದರೂ ನೆತ್ತಿಯ ಮೇಲೆ ಆಗಷ್ಟೇ ಮೂಡುತ್ತಿರುವ ಚಂದ್ರನಿರುವ ಕಾರಣ ಈ ಪಟ ನನ್ನ ಮೆಚ್ಚಿನ ಚಿತ್ರಗಳಲ್ಲೊಂದು. ನಿಮಗೂ ಮೆಚ್ಚಿಗೆಯಾಗಿದೆಯೆಂದು ಭಾವಿಸುತ್ತೇನೆ.

No comments:

Post a Comment