Jun 3, 2018

ಪಕ್ಷಿ ಪ್ರಪಂಚ: ನೇರಳೆ ಸೂರಕ್ಕಿ

ಗಂಡು ನೇರಳೆ ಸೂರಕ್ಕಿ. 
ಡಾ. ಅಶೋಕ್.ಕೆ.ಅರ್ 
ಭಾರತದಲ್ಲಿ ರೆಕ್ಕೆಯನ್ನು ಪಟಪಟನೆ ಬಡಿಯುವ ಹಮ್ಮಿಂಗ್ ಬರ್ಡುಗಳಿಲ್ಲ. ಅವುಗಳ ಬದಲಿಗೆ ನಮ್ಮಲ್ಲಿ ವಿಧವಿಧದ ಸೂರಕ್ಕಿಗಳಿವೆ. ಸೂರಕ್ಕಿಗಳಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಸಿಗುವುದು ನೇರಳೆ ಸೂರಕ್ಕಿ.

ಆಂಗ್ಲ ಹೆಸರು: - Purple sunbird (ಪರ್ಪಲ್ ಸನ್ ಬರ್ಡ್)

ವೈಜ್ನಾನಿಕ ಹೆಸರು: - Cinnyris asiaticus (ಸಿನಿರಿಸ್ ಏಷಿಯಾಟಿಕಸ್)

ಗುಬ್ಬಿ ಗಾತ್ರದ ಪಕ್ಷಿಯಿದು. ಹೂವಿನ ಮಕರಂದವನ್ನು ಹೀರಲು ಅನುಕೂಲ ಮಾಡಿಕೊಡುವಂತೆ ಚೂರೇ ಚೂರು ಬಾಗಿದ ಉದ್ದನೆಯ ಕೊಕ್ಕಿದೆ. ನೇರಳೆ ಸೂರಕ್ಕಿ ಎಂಬ ಹೆಸರು ಬಂದಿರುವುದು ಗಂಡು ಪಕ್ಷಿಯ ಬಣ್ಣದ ದೆಸೆಯಿಂದ. ದೂರದಿಂದ ನೋಡಿದರೆ, ಪಕ್ಷಿಯು ನೆರಳಿನಲ್ಲಿದ್ದಾಗ ಗಮನಿಸಿದರೆ ಇಡೀ ಪಕ್ಷಿ ಕಪ್ಪಾಗಿ ಕಾಣುತ್ತದೆ. ಸೂರ್ಯನ ಬೆಳಕಿನಲ್ಲಿ ಪಕ್ಷಿ ದೇಹ ಮಿಂದಾಗಷ್ಟೇ ತಲೆಯ ಭಾಗ ಮತ್ತು ದೇಹದ ಮೇಲ್ಭಾಗ ನೇರಳೆ ಬಣ್ಣದಿಂದ ಹೊಳೆಯುತ್ತಿರುವುದನ್ನು ಗಮನಿಸಬಹುದು.
Click here to read in English.

ಹೆಣ್ಣು ನೇರಳೆ ಸೂರಕ್ಕಿ. 

ಹೆಣ್ಣು ಪಕ್ಷಿಯ ಬೆನ್ನಿನ ಭಾಗ ಮತ್ತು ರೆಕ್ಕೆಗಳು ತೆಳು ಕಂದು - ಬೂದು ಮಿಶ್ರಿತ ಬಣ್ಣದಾಗಿದ್ದರೆ ಕತ್ತು ಮತ್ತು ಎದೆಯ ಭಾಗದಲ್ಲಿ ಹಳದಿ - ಬಿಳಿ ಭಾಗಗಳನ್ನು ಗಮನಿಸಬಹುದಾಗಿದೆ.

ಸಾಮಾನ್ಯವಾಗಿ ಜೋಡಿಯಾಗಿಯೇ ಇವುಗಳು ಆಹಾರವನ್ನರಸುತ್ತವೆ. ಹಲವಾರು ಗಿಡಗಳ ಹೂವಿನ ಮಕರಂದವನ್ನು ಹೀರಿ ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಬಹಳಷ್ಟು ಸಲ ಎಲೆಯನ್ನೋ ಪಕ್ಕದ ಹೂವನ್ನೋ ಆಸರೆಯಾಗಿರಿಸಿಕೊಂಡು ಮಕರಂದ ಹೀರುವ ಈ ಪಕ್ಷಿಗಳು ಕೆಲವೊಮ್ಮೆ ಗಾಳಿಯಲ್ಲಿ ರೆಕ್ಕೆಯನ್ನು ವೇಗವಾಗಿ ಬಡಿಯುತ್ತಲೇ ಮಕರಂದ ಹೀರಿ ಮತ್ತೊಂದು ಹೂವಿನ ಬಳಿ ಸಾಗುತ್ತದೆ.

ಮರಿ ಮಾಡಿದ ಸಂದರ್ಭದಲ್ಲಿ ಮಗುವಿನ ಮತ್ತು ತನ್ನ ಪೋಷಣೆಗಾಗಿ ತಾತ್ಕಾಲಿಕವಾಗಿ ಮಾಂಸಾಹಾರಿಗಳಾಗುವ ಸೂರಕ್ಕಿಗಳು ಚಿಕ್ಕ ಪುಟ್ಟ ಹುಳಗಳು, ಜೇಡಗಳನ್ನು ಹಿಡಿಯುವುದೂ ಉಂಟು.

ಒಂದು ಹೂವಿಂದ ಮತ್ತೊಂದು ಹೂವಿಗೆ ದುಂಬಿಗಿಂತಲೂ ವೇಗವಾಗಿ ಹಾರಿಬಿಡುವ ಈ ಪಕ್ಷಿಗಳ ಚಟುವಟಿಕೆ ಗಮನಿಸುವಾಗ ನಮ್ಮೊಳಗೂ ಒಂದು ಉತ್ಸಾಹ ಮನೆ ಮಾಡುವುದು ಖಂಡಿತ.

ಚಿತ್ರ ನೆನಪು: -
ಗಂಡು ನೇರಳೆ ಸೂರಕ್ಕಿ: ಎಕ್ಕದ ಹೂವಿನ ಮಕರಂದವೆಂದರೆ ಇವುಗಳಿಗೆ ಅಚ್ಚುಮೆಚ್ಚು. ಮಂಡ್ಯದ ಸೂಳೆಕೆರೆಯ ಏರಿಯಲ್ಲಿರುವ ಎಕ್ಕದ ಗಿಡಗಳಿಗೆ ಹಲವಾರು ಸೂರಕ್ಕಿ ಕುಟುಂಬಗಳು ಖಾಯಂ ಗಿರಾಕಿಗಳಾಗಿಬಿಟ್ಟಿವೆ. ಕ್ಯಾಮೆರಾದ ಶಟರ್ರಿನ ವೇಗ ಹೆಚ್ಚಿದ್ದಷ್ಟೂ ಇವುಗಳನ್ನು ಕ್ಯಾಮೆರಾದೊಳಗೆ ಸೆರೆಯಾಗಿಸುವುದು ಸುಲಭ. ಒಂದು ಗಿಡದ ಮೇಲಿನ ಹೂವಿನ ಮಕರಂದವನ್ನೀರಲು ಪಕ್ಷಿ ಬಂದರೆ ಆ ಗಿಡದ ಬಹುತೇಕ ಹೂವಿನ ಮಕರಂದವನ್ನು ಹೀರಿ ಮುಗಿಸಿಯೇ ಇವು ಮುಂದಿನ ಗಿಡಕ್ಕೆ ಸಾಗುತ್ತವೆ. ಯಾವ ಹೂವಿನ ಮೇಲೆ ಕುಳಿತರೆ ಪಟ ಚೆನ್ನಾಗಿ ಬರುತ್ತದೆನ್ನುವುದನ್ನು ಗಮನಿಸಿ ಆ ಹೂವಿನ ಮೇಲೆ ಪಕ್ಷಿ ಕೂರುವವರೆಗೂ ಕಾದು ತೆಗೆದ ಪಟವಿದು.

ಹೆಣ್ಣು ನೇರಳೆ ಸೂರಕ್ಕಿ: ರಾಮನಗರ ಬಳಿಯ ಕಣ್ವದಲ್ಲಿ ತೆಗೆದ ಪಟವಿದು. ಗಾಳಿಯಲ್ಲಿ ಪಟಪಟನೆ ರೆಕ್ಕೆ ಬಡಿಯುತ್ತಾ ಒಣಗಿದ ಹೂವಿನ ಮಕರಂದ ಹೀರಿದ ಪಕ್ಷಿ ಮತ್ತೊಂದು ಎಲೆಯ ಮೇಲೆ ಕುಳಿತು ಬಗ್ಗಿ ಜೇಡರ ಬಲೆಯ ಮಾಲೀಕನನ್ನು ಕೊಕ್ಕಿನಲ್ಲಿಡಿದುಕೊಂಡು ಒಂದರೆಕ್ಷಣ ಕುಳೀತು ಹಾರಿ ಹೋಯಿತು. ಗೂಡಿನಲ್ಲಿದ್ದ ತನ್ನ ಮರಿಗೆ ಗುಟುಕು ನೀಡುವ ಸಲುವಾಗಿ….
ಜೇಡದ ಬೇಟೆಯೊಂದಿಗೆ ಹೆಣ್ಣು ನೇರಳೆ ಸೂರಕ್ಕಿ. 

No comments:

Post a Comment