May 15, 2018

ಕತ್ತಿ ಝಳಪಿಸತೊಡಗಿದರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಹೊರಗಿನವರು ಒಳಗಿನವರ ತಲೆ ತರಿದರೆಂಬ
ಇತಿಹಾಸಗಳ ಓದಿ ಬೆಳೆದವರು
ಒಪ್ಪುತಪ್ಪುಗಳ ನಡುವೆ ಗೆರೆ ಕೊರೆಯಲಾಗದೆ
ಸತ್ಯವನರಿಯಲಾಗದೆ ಜಿದ್ದಿಗೆ ಬಿದ್ದರು.
ಹಗಲೂರಾತ್ರಿಗಳ ಪರಿವೆಯಿರದೆ
ಕತ್ತಿಗಳ ಮಸೆದದ್ದೇ ಮಸೆದದ್ದು
ಹರಿತವಾದ ಮೇಲೆ ಆಯುಧ
ಹುಡುಕತೊಡಗಿದರು:

ಒಳಗಿನವರ ತಲೆ ತೆಗೆದ ಆ ಹೊರಗಿನವರಲ್ಲೊಬ್ಬನ
ಮೊದಲು ಪಕ್ಕದ ಮನೆಯಲ್ಲಿ,
ಆಮೇಲೆ ತಮ್ಮದೇ ಬೀದಿಯಲ್ಲಿ,
ಊರಲ್ಲಿ,

ಕೊನೆಗೆ ಊರೂರಲ್ಲಿ ಹುಡುಕಿ ಅಲೆಯ ತೊಡಗಿದರು
ಹೊರಗಿನವನಿಗಾಗಿ.
ಹೊರಗಿವನೆಂದುಕೊಂಡವರೆಲ್ಲ
ಒಳಗಿನವರೇ ಆಗಿ ಹೋದ ಕಾಲದ ಕ್ರಿಯೆಯ ಮರೆತರು
ಕೊನೆಗೆ ಒರೆಯಿಂದ ಹೊರತೆಗೆದ
ಕತ್ತಿಗೆ ರಕ್ತದ ನೈವೇಧ್ಯವಿಡದೆ ಒರೆ ಸೇರಿಸಬಾರದೆಂಬ ಮಾತು ಕೇಳಿ
ಒಳಗಿನವರನೇ ಹುಡುಹುಡುಕಿ ಕತ್ತಿ ಝಳಪಿಸತೊಡಗಿದರು

No comments:

Post a Comment

Related Posts Plugin for WordPress, Blogger...