Feb 17, 2018

ಹಾದಿ ತಪ್ಪುತ್ತಿರುವ ಚುನಾವಣಾ ಪ್ರಚಾರ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಅಂದುಕೊಂಡಂತೆಯೇ ಕರ್ನಾಟಕ ರಾಜ್ಯದ ಬರಲಿರುವ ಚುನಾವಣಾ ಪ್ರಚಾರದ ಹಾದಿ ತಪ್ಪುತ್ತಿದೆ. ಪ್ರಜಾಸತ್ತೆಯಲ್ಲಿ ಪ್ರತಿ ಐದು(ಕೆಲವು ಅಪವಾದಗಳನ್ನು ಹೊರತು ಪಡಿಸಿ)ವರುಷಗಳಿಗೊಮ್ಮೆ ಬರುವ ಚುನಾವಣೆಗಳು ರಾಜ್ಯದ ಪ್ರಗತಿಗೆ ಮತ್ತು ತನ್ಮೂಲಕ ಜನರ ಜೀವನ ಸುದಾರಿಸುವ ನಿಟ್ಟಿನಲ್ಲಿ ಬಹುಮಹತ್ವಪೂರ್ಣವಾಗಿದ್ದು, ನಿಷ್ಪಕ್ಷಪಾತವಾದ ಹಾಗು ವಿಷಯಾಧಾರಿತ ಚುನಾವಣೆಗಳು ಜನರ ಈ ಆಶಯವನ್ನು ಯಶಸ್ವಿಗೊಳಿಸುವುದು ಸಹಜ. ಇಂತಹ ಚುನಾವಣೆಗಳಲ್ಲಿ ಬಹಳ ಮುಖ್ಯವಾದ ಹಂತವೆಂದರೆ ಚುನಾವಣ ಪ್ರಚಾರವೆಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ವೈಯುಕ್ತಿಕವಾಗಿ ಅಭ್ಯರ್ಥಿಗಳು ಮತ್ತು ಸಮಗ್ರವಾಗಿ ರಾಜಕೀಯ ಪಕ್ಷಗಳು ಕೈಗೊಳ್ಳುವ ಚುನಾವಣಾ ಪ್ರಚಾರವೇ ಮುಖ್ಯವಾಗಿದ್ದು, ಇದು ಆಡಳಿತದ ಚುಕ್ಕಾಣಿ ಹಿಡಿಯಲಿರುವ ಪಕ್ಷವೊಂದನ್ನು ಆಯ್ಕೆ ಮಾಡಲು ಜನರಿಗೆ ನೆರವಾಗುತ್ತದೆ. ಅದರಲ್ಲೂ ಸಂಪೂರ್ಣವಾಗಿ ಸಾಕ್ಷರವಾಗದ ಇವತ್ತಿಗೂ ಶೇಕಡಾ 28ರಷ್ಟು ಅನಕ್ಷರಸ್ಥರನ್ನು ಹೊಂದಿರುವ ಕರ್ನಾಟಕದಂತಹ ರಾಜ್ಯದಲ್ಲಿ ಪಕ್ಷಗಳು ನಡೆಸುವ ಬಹಿರಂಗ ಪ್ರಚಾರಗಳೇ ಕನಿಷ್ಠ ಶೇಕಡಾ ಐವತ್ತರಷ್ಟು ಮತದಾರರನ್ನು ಪ್ರಭಾವಿಸುವ ಶಕ್ತಿ ಹೊಂದಿರುತ್ತದೆ. 

ಈ ಹಿನ್ನೆಲೆಯಲ್ಲಿ ಪ್ರತಿ ರಾಜಕೀಯ ಪಕ್ಷಗಳು ನಡೆಸುವ ಸಮಾವೇಶಗಳು, ಯಾತ್ರೆಗಳು, ಬಹಿರಂಗ ಸಭೆಗಳು, ರೋಡ್ ಶೋಗಳು ಮುಖ್ಯವಾಗಿದ್ದು, ಅವುಗಳ ನಾಯಕರುಗಳು ಮಾಡುವ ಸಾರ್ವಜನಿಕ ಬಾಷಣಗಳು ಜನರನ್ನು ತಲುಪುವ ಸುಲಭ ಮಾರ್ಗಗಳಾಗಿರುತ್ತವೆ. ಪಕ್ಷಗಳು ಹೊರತರುವ ಪ್ರಣಾಳಿಕೆಗಳು ಸಹ ಪಕ್ಷಗಳ ಸಿದ್ದಾಂತಗಳನ್ನು, ಅವು ಜನಕಲ್ಯಾಣಕ್ಕಾಗಿ ಜಾರಿಗೆ ತರಲು ಉದ್ದೇಶಿಸಿರಬಹುದಾದ ಹಲವು ಯೋಜನೆಗಳ ಮಾಹಿತಿಗಳನ್ನು ಜನತೆಗೆ ತಿಳಿಸುವಲ್ಲಿ ಯಶಸ್ವಿಯಾಗುತ್ತವೆ. ಹೀಗೆ ಸಂಸದೀಯ ಪ್ರಜಾಸತ್ತೆಯಲ್ಲಿ ನಮ್ಮನ್ನು ಅಳಲು ಇಚ್ಚಿಸುವ ರಾಜಕೀಯ ಪಕ್ಷಗಳು ಅಂತಿಮವಾಗಿ ಜನರನ್ನು ತಲುಪಲು ಅಗತ್ಯವಿರಬಹುದಾದ ಎಲ್ಲಾ ಮಾರ್ಗಗಳನ್ನೂ ಬಳಸುವುದು ಸಹಜ ಕ್ರಿಯೆ.
ಆದರೆ ತೊಂಭತ್ತರ ದಶಕದಲ್ಲಿ ಜಾರಿಗೊಂಡ ಮುಕ್ತ ಅರ್ಥಿಕ ನೀತಿಯ ಪ್ರಭಾವ ನಿದಾನವಾಗಿ ನಮ್ಮ ಸಾರ್ವತ್ರಿಕ ಚುನಾವಣೆಗಳ ಮೇಲೆಯೂ ಅಗುತ್ತಾ ಹೋಯಿತು. ಖಾಸಗೀಕರಣದ ಪ್ರಭಾವದಿಂದಾಗಿ ವಿದ್ಯುನ್ಮಾನ ಮಾಧ್ಯಮ ಪ್ರಭಾವಶಾಲಿಯಾಗುತ್ತಾ ಹೋಯಿತು. ಎಂಭತ್ತರ ದಶಕದ ಅಂತ್ಯದಲ್ಲಿ ಬೆರಳೆಣಿಕೆಯಷ್ಟಿದ್ದ ಸುದ್ದಿವಾಹಿನಿಗಳ ಸಂಖ್ಯೆ ಇವತ್ತು ನೂರೈವತ್ತರ ಸಂಖ್ಯೆಯನ್ನು ದಾಟಿದೆ. ಜೊತಗೆ ರಾಷ್ಟ್ರ ಮಟ್ಟದ ಆಂಗ್ಲವಾಹಿನಿಗಳನ್ನು ಮೀರಿಸುವಂತೆ ಸ್ಥಳೀಯ ಬಾಷೆಗಳ ಪ್ರಾದೇಶಿಕ ಸುದ್ದಿವಾಹಿನಿಗಳು ಅಗಾಧವಾಗಿ ಬೆಳೆದು ನಿಂತಿವೆ. ಖಾಸಗಿ ಬಂಡವಾಳಶಾಹಿಗಳ ಹಿಡಿತದಲ್ಲಿರುವ ಈ ವಾಹಿನಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡುವ ರಾಜಕೀಯ ಪಕ್ಷಗಳನ್ನು ಪ್ರಮೋಟ್ ಮಾಡುವ ದಿಸೆಯಲ್ಲಿ ಸಕ್ರಿಯ ರಾಜಕಾರಣಿಗಳಿಗಿಂತ ಹೆಚ್ಚಾಗಿ ರಾಜಕಾರಣ ಮಾಡುತ್ತಿವೆ. (ಇದರ ಬಗ್ಗೆ ಪ್ರತ್ಯೇಕವಾದ ಲೇಖನವೊಂದನ್ನೇ ಬರೆಯಬೇಕಾಗುತ್ತದೆ) ಅವು ನಡೆಸುವ ಟಾಕ್ ಶೋಗಳು ಮತ್ತು ರಾಜಕೀಯ ಚರ್ಚೆಗಳು ಸಮಾಜದ ಕಟ್ಟ ಕಡೆಯ ಮನುಷ್ಯನನ್ನೂ ತಲುಪುವಷ್ಟರ ಮಟ್ಟಿಗೆ ತಮ್ಮ ಜಾಲಗಳನ್ನು ವಿಸ್ತರಿಸಿಕೊಂಡಿವೆ. ನಮ್ಮ ರಾಜಕೀಯ ಪಕ್ಷಗಳು ಸಹ ಈ ವಾಹಿನಿಗಳನ್ನು ಬಳಸಿಕೊಂಡು ಚುನಾವಣೆಗಳು ಘೋಷಣೆಯಾಗುವ ಮುಂಚೆಯೇ ಪ್ರಚಾರವನ್ನು ಶುರು ಹಚ್ಚಿಕೊಳ್ಳುತ್ತಿವೆ. ಚುನಾವಣೆಗಳನ್ನೂ ತಮ್ಮ ಲಾಭಕ್ಕಾಗಿ ಬಳಸಿಕೊಳ್ಳುವ ವಾಹಿನಿಗಳು ಚುನಾವಣಾ ಪೂರ್ವ ಸಮೀಕ್ಷೆಗಳಹೆಸರಲ್ಲಿ ಜನಾಭಿಪ್ರಾಯವನ್ನು ರೂಪಿಸುವ ಕೆಲಸ ಮಾಡತೊಡಗಿವೆ. ಉದಾಹರಣೆಗೆ ಕಳೆದ ವರ್ಷ ಅಕ್ಟೋಬರ್ ತಿಂಗಳಿನಿಂದಲೇ ನಮ್ಮ ರಾಜ್ಯ ವಿದಾನಸಭೆಗಳ ಕುರಿತಾದ ಸಮೀಕ್ಷೆಗಳನ್ನು ವಾಹಿನಿಗಳು ನಡೆಸತೊಡಗಿರುವುದನ್ನು ನಾವು ನೋಡಬಹುದಾಗಿದೆ. ಈಗಾಗಲೇ ಕರ್ನಾಟಕದ ಅಷ್ಟೂ ವಾಹಿನಿಗಳೂ ಪ್ರತಿವಿದಾನಸಭಾ ಕ್ಷೇತ್ರಗಳಿಗೂ ಬೇಟಿ ನೀಡುತ್ತಾ ಅಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಾ ಜನರ ಅಭಿಪ್ರಾಯಗಳನ್ನು ಸಂಗ್ರಹಿಸುವ ಕೆಲಸದಲ್ಲಿ ನಿರತವಾಗಿವೆ.

ಇದರ ಜೊತೆಗೆ ಕಳೆದ ದಶಕದ ಹೊತ್ತಿಗೆ ವಿಸ್ತರಿಸತೊಡಗಿದ ಅಂತರ್ಜಾಲದ ಪರಿಣಾಮವಾಗಿ ಹಲವು ಅಂತರ್ಜಾಲ ಮಾಧ್ಯಮಗಳು ಸೃಷ್ಠಿಯಾಗಿದ್ದು, ಅವುಗಳು ಸಹ ಸುದ್ದಿವಾಹಿನಿಗಳ ಕೆಲಸವನ್ನೇ ಮಾಡತೊಡಗಿವೆ, ಇನ್ನು ಹಲವು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಜನರು ಆ ತಾಣಗಳಲ್ಲಿಯೂ ರಾಜಕಾರಣವನ್ನೇ ಪ್ರಮುಖ ವಿಷಯವನ್ನಾಗಿಸಿ ಹಲವು ರೀತಿಯ ಚರ್ಚೆಗಳನ್ನು ಹುಟ್ಟು ಹಾಕುತ್ತಿದ್ದಾರೆ.

ಹೀಗೆ ಇವತ್ತು ಚುನಾವಣ ಪ್ರಚಾರ ಎನ್ನುವುದು ಅಭ್ಯರ್ಥಿಯೊಬ್ಬನ ಏಕವ್ಯಕ್ತಿ ಪ್ರದರ್ಶನವಾಗಿರದೆ, ರಾಜಕೀಯ ಪಕ್ಷಗಳ ಪ್ರಚಾರಗಳು ಸಭೆ ಸಮಾರಂಭಗಳಿಗೆ ಮಾತ್ರ ಸೀಮಿತವಾಗಿರದೆ, ಹಲವು ರೀತಿಯ ಮಾಧ್ಯಮಗಳ ಸಮರವಾಗಿ ಬದಲಾಗಿ ಹೋಗಿದೆ.

ಈ ಹಿನ್ನೆಲೆಯಲ್ಲೀಗ ನಾವು ಕರ್ನಾಟಕ ರಾಜ್ಯದ ಚುನಾವಣಾ ಪ್ರಚಾರ ನಡೆಯುತ್ತಿರುವ ರೀತಿಯನ್ನು, ಅದು ನಡೆಯುತ್ತಿರುವ ಹಾದಿಯನ್ನು ಸೂಕ್ಷ್ಮವಾಗಿ, ವಸ್ತುನಿಷ್ಠವಾಗಿ ವಿಮರ್ಶಿಸಿನೋಡಬೇಕಾಗಿದೆ.

ಈ ಹಿಂದಿನ ಚುನಾವಣೆಗಳಿಗಿಂತ ಈ ಬಾರಿಯ ಬರಲಿರುವ ಚುನಾವಣೆಗಳ ಪ್ರಚಾರ ವಿಭಿನ್ನವಾಗಿರಲು ಕೆಲವು ಕಾರಣಗಳಿವೆ. ಇದುವರೆಗು ನಡೆಯುತ್ತಿದ್ದ ಚುನಾವಣೆಗಳ ಪ್ರಚಾರ ಆರಂಭವಾಗುತ್ತಿದ್ದುದು ಬಹುತೇಕ ಚುನಾವಣಾ ಆಯೋಗವು ಚುನಾವಣಾ ದಿನಾಂಕಗಳನ್ನು ಘೋಷಿಸಿದ ತರುವಾಯವೆ. ಅಕಸ್ಮಾತ್ ಅದಕ್ಕೂ ಮೊದಲೇ ಆರಂಭವಾದರೂ ಇನ್ನೇನು ಘೋಷಣೆ ಹೊರಬೀಳಲಿದೆ ಎಂದು ಸ್ಪಷವಾಗಿ ತಿಳಿದ ನಂತರವಷ್ಟೆ! ಆದರೆ ಈ ಬಾರಿ ಚುನಾವಣೆಗಳಿಗೆ ಸುಮಾರು ಹತ್ತು ತಿಂಗಳುಗಳಿರುವಾಗಲೇ ಪ್ರಚಾರ ಕಾರ್ಯ ಆರಂಭಗೊಂಡಿತು ಎನ್ನಬಹುದು. ಇಂತಹ ಚುನಾವಣಾ ಪ್ರಚಾರದ ಮುನ್ನುಡಿ ಬರೆದಿದ್ದು ಈ ಬಾರಿ ಕಾಂಗ್ರೆಸ್ ಎನ್ನುವುದೆ ಈ ಬಾರಿಯ ವಿಶೇಷ! ಶ್ರೀ ಸಿದ್ದರಾಮಯ್ಯನವರ ಸರಕಾರಕ್ಕೆ ನಾಲ್ಕು ವರ್ಷ ತುಂಬಿದ ಹಿನ್ನೆಲೆಯಲ್ಲಿ ಕಳೆದ ಜೂನ್ ತಿಂಗಳಲ್ಲಿ ಕಾಂಗ್ರೆಸ್ ಸರಕಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ತನ್ನ ಸಾಧನೆಗಳನ್ನು ತಿಳಿಸುವ ‘ಸಾಧನಾ ಸಮಾವೇಶ'ಗಳನ್ನು ಹಮ್ಮಿಕೊಂಡಿತು. ಅದಾಗ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಸಿದ್ದರಾಮಯ್ಯನವರು ಅವಧಿಗೆ ಮುನ್ನವೇ ಚುನಾವಣೆಗೆ ಹೋಗಲೆಂದೇ ಈ ‘ಸಾದನಾ ಸಮಾವೇಶ'ಗಳನ್ನು ನಡೆಸುತ್ತಿದ್ದಾರೆಂಬ ವದಂತಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆಯೇ ವಿರೋಧ ಪಕ್ಷ ಬಾಜಪ ಎಚ್ಚೆತ್ತುಕೊಂಡಿತು. ತನ್ನ ಅಂತರೀಕ ಭಿನ್ನಭಿಪ್ರಾಯಗಳಿಂದ ಕಂಗೆಟ್ಟು ಕೂತಿದ್ದ ಬಾಜಪಕ್ಕೆ ಕಾಂಗ್ರೆಸ್ ಸರಕಾರದ ಈ ನಡೆ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು. ಹೀಗಾಗಿ ಅದರ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ಅಮಿತ್ ಷಾರವರ ಆದೇಶದಂತೆ ಬಾಜಪದ ರಾಜ್ಯಘಟಕ ಚುನಾವಣೆಗಳಿಗೆ ಸಿದ್ದವಾಗ ತೊಡಗಿತು. ಈ ಸಿದ್ದತೆಯ ಫಲವಾಗಿ ಅದು ನವೆಂಬರ್ ತಿಂಗಳಿನಿಂದ ರಾಜ್ಯದಾದ್ಯಂತ ಪರಿವರ್ತನಾ ಯಾತ್ರೆಯನ್ನು ಕೈಗೊಂಡಿತು. ಈ ಯಾತ್ರೆಯ ಉದ್ಘಾಟನೆಯನ್ನು ನವೆಂಬರ್ ಎರಡನೆ ತಾರೀಖಿನಂದು ಬೆಂಗಳೂರಲ್ಲಿ ಅದರ ರಾಷ್ಟ್ರೀಯ ಅದ್ಯಕ್ಷರೇ ಖುದ್ದಾಗಿ ನೆರವೇರಿಸಿದರು. ಈ ಎರಡೂ ರಾಷ್ಟ್ರೀಯ ಪಕ್ಷಗಳ ಚುನಾವಣಾ ರಣೋತ್ಸಾಹವನ್ನು ಕಂಡ ಜಾತ್ಯಾತೀತ ಜನತಾದಳ ಸಹ ನವೆಂಬರ್ ತಿಂಗಳಲ್ಲಿ ರಾಜ್ಯದಾದ್ಯಂತ 'ಕುಮಾರಪರ್ವ' ಯಾತ್ರೆಯನ್ನು ಕೈ ಗೊಂಡಿತು. ಹೀಗೆ ರಾಜ್ಯದಲ್ಲಿ ಸಕ್ರಿಯವಾಗಿರುವ ಮೂರೂ ಪಕ್ಷಗಳೂ ಮೂರು ರೀತಿಯ ಯಾತ್ರೆಗಳನ್ನು ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ಚುನಾವಣಾ ಕಾವನ್ನು ಸೃಷ್ಠಿಸುವಲ್ಲಿ ಯಶಸ್ವಿಯಾದವು.

ಆದರೆ ಈ ಚುನಾವಣಾ ಘೋಷಣಾಪೂರ್ವ ಪ್ರಚಾರಕ್ಕೆ ನಿಜವಾದ ಪ್ರಖರತೆ ಬಂದಿದ್ದು, ಇದೇ ಫೆಬ್ರವರಿ ನಾಲ್ಕನೇ ತಾರೀಖಿನಂದು ‘ಪರಿವರ್ತನಾ ಯಾತ್ರೆ’ಯ ಮುಕ್ತಾಯಸಮಾರಭಕ್ಕೆ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದು ಸಮಾವೇಶವನ್ನು ಉದ್ದೇಶಿಸಿ ಬಾಷಣ ಮಾಡಿದ ಮೇಲೇನೆ ಎನ್ನಬಹುದು. ತದನಂತರದಲ್ಲಿ ಫೆಬ್ರವರಿ ಹನ್ನೊಂದನೇ ತಾರೀಖಿನಂದು ಕಾಂಗ್ರೆಸ್ಸಿನ ರಾಷ್ಟ್ರೀಯ ಅದ್ಯಕ್ಷರಾದ ಶ್ರೀ ರಾಹುಲ್ ಗಾಂದಿಯವರು 'ಹೈದರಾಬಾದ್ ಕರ್ನಾಟಕ'ದಲ್ಲಿ ನಾಲ್ಕು ದಿನಗಳ ಪ್ರವಾಸ ಕೈಗೊಳ್ಳುವುದರ ಮೂಲಕ ಮೋದಿಯವರು ಶುರು ಮಾಡಿ ಹೋದ ಚುನಾವಣಾ ಪ್ರಚಾರದ ರಂಗಿಗೆ ತಮ್ಮ ಪಾಲನ್ನೂ ನೀಡಿದರು. ಇವೆರಡೂ ಪಕ್ಷಗಳ ಭರಾಟೆಯ ನಡುವೆ ಜಾತ್ಯಾತೀತ ಜನತಾದಳ ಅಷ್ಟೇನು ಅಬ್ಬರವಿರದೆ ತನ್ನ ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತ, ಬಹುಜನಪಕ್ಷದೊಂದಿಗೆ ಮೈತ್ರಿಯನ್ನು ಸಹ ಮಾಡಿಕೊಂಡಿದೆ.

ಆದರೆ ನನ್ನ ತಕರಾರಿರುವುದು ಈ ಚುನಾವಣಾ ಪ್ರಚಾರ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆಯಾ ಮತ್ತು ಜನರ ಸಮಸ್ಯೆಗಳನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿದೆಯಾ ಎಂಬುದರ ಬಗ್ಗೆ. ಯಾಕೆಂದರೆ ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಡೆಯುತ್ತಿರುವ ಆರೋಪ ಪ್ರತ್ಯಾರೋಪಗಳನ್ನು , ಅಡಳಿತ ಮತ್ತು ವಿರೋಧಪಕ್ಷಗಳ ನಾಯಕರುಗಳ ಹೇಳಿಕೆಗಳನ್ನು, ಬಾಷಣಗಳನ್ನು ಕೇಳುತ್ತಾ ಹೋದರೆ ಜನರ ನೈಜ ಸಮಸ್ಯೆಗಳ ಬಗ್ಗೆ ಇವರ್ಯಾರಿಗೂ ಕಾಳಜಿ ಇದ್ದಂತೆ ಕಾಣುತ್ತಿಲ್ಲ. ಬದಲಿಗೆ ಈ ನಾಯಕರುಗಳ ಬಹುತೇಕ ಮಾತುಗಳು ರಾಜ್ಯದ ಜನರ ಜಾತಿ, ಧರ್ಮ, ಅವರು ತಿನ್ನುವ ಆಹಾರಗಳ ಬಗ್ಗೆಯೇ ಗಿರಕಿ ಹೊಡೆಯುತ್ತಿವೆ. ಇದನ್ನು ಅರ್ಥ ಮಾಡಿಕೊಳ್ಳಬೇಕಾದರೆ ಸ್ವಲ್ಪ ಕರಾವಳಿಯ ಕಡೆಗೆ ಗಮನಕೊಡಬೇಕಾಗುತ್ತದೆ. ಕರಾವಳಿ ಭಾಗದಲ್ಲಿ ನಡೆದ ಕೆಲವು ಹತ್ಯೆಗಳನ್ನು ಕಾರಣವಾಗಿಟ್ಟುಕೊಂಡ ಬಾಜಪ ಅವು ತನ್ನ ಹಿಂದೂ ಕಾರ್ಯಕರ್ತರ ಮೇಲೆ ನಡೆದ ಹತ್ಯೆಗಳೆಂದು ಆರೋಪಿಸುತ್ತ, ಕಾಂಗ್ರೆಸ್ ಸರಕಾರ ಅನ್ಯಧರ್ಮೀಯ ಹಂತಕರ ರಕ್ಷಣೆಗೆ ನಿಂತಿದೆಯೆಂದು ಜನರ ನಡುವೆ ಪ್ರಚಾರ ಮಾಡುತ್ತ ಹೋದರೆ, ಕಾಂಗ್ರೆಸ್ ಬಾಜಪ ಸಾವಿನಲ್ಲಿ ಧರ್ಮರಾಜಕಾರಣ ಮಾಡುತ್ತಿದೆಯೆಂದು ಹೇಳುತ್ತಿದೆ. ಇದರ ನೆರಳಿನಲ್ಲಿ ಆಗಿ ಹೋದ ಟಿಪ್ಪೂ ಜಯಂತಿಯ ವಿಚಾರವನ್ನು ಎತ್ತುವ ಬಾಜಪ ಇದು ಅಲ್ಪಸಂಖ್ಯಾತರನ್ನು ಓಲೈಸಲು ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ತಂತ್ರವೆಂದು ಅರೋಪಿಸುತ್ತದೆ. ಈ ಅರೋಪಗಳನ್ನು ನಿರಾಕರಿಸುವ ಸರಕಾರ ಅಮಾಯಕ ಅಲ್ಪಸಂಖ್ಯಾತರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯುವ ಸುತ್ತೋಲೆಯೊಂದನ್ನು ಹೊರಡಿಸಿ ಚುನಾವಣಾ ಸಮಯದಲ್ಲಿ ವಿವಾದವೊಂದನ್ನು ಮೈ ಮೇಲೆ ಎಳೆದುಕೊಳ್ಳುತ್ತಾ ಹೊಗುತ್ತದೆ. ಮುಖ್ಯಮಂತ್ರಿಗಳು ಮಾಂಸ ಸೇವಿಸಿ ಶ್ರೀದರ್ಮಸ್ಥಳದ ದೇವಾಲಯಕ್ಕೆ ಬೇಟಿನೀಡಿ ಹಿಂದೂ ದೇವರಿಗೆ ಅಪಚಾರ ಮಾಡಿದ್ದಾರೆಂದು ಅರೋಪಿಸುವ ಬಾಜಪ ಜನರ ಆಹಾರ ಕ್ರಮಗಳನ್ನು ಪರೋಕ್ಷವಾಗಿ ಹೀಗಳೆಯುತ್ತಿದೆ. 

ಬೆಂಗಳೂರಿನ ಸಮಾವೇಶದಲ್ಲಿ ಮಾತನಾಡಿದ ಮೋದಿಯವರು ತಮ್ಮ ಬಾಷಣದುದ್ದಕ್ಕೂ ಕಾಂಗ್ರೆಸ್ ಪಕ್ಷವನ್ನು ಅದರ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸುತ್ತ ಹೋದರೇ ಹೊರತು ರಾಜ್ಯದ ಜನರ ನೈಜ ಸಮಸ್ಯೆಗಳ ಬಗ್ಗಯಾಗಲಿ, ಮುಂದೆ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಮ್ಮಿಕೊಳ್ಳಬಹುದಾದ ಒಂದೇ ಒಂದು ಯೋಜನೆಯ ಬಗ್ಗೆಯಾಗಲಿ ಮಾತನಾಡಲೇ ಇಲ್ಲ. ಇನ್ನು ಹಲವು ವರುಷಗಳಿಂದ ನೆನೆಗುದಿಗೆ ಬಿದ್ದಿರುವ ಕಳಸಾ ಬಂಡೂರಿ- ಮಹಾದಾಯಿ ವಿಚಾರದ ಬಗೆಗೆ ಪ್ರದಾನಮಂತ್ರಿಯಾಗಿ ಒಂದೇ ಶಬ್ದವನ್ನೂ ನುಡಿಯಲಿಲ್ಲ. ನಂತರ ರಾಜ್ಯದಲ್ಲಿ ಪ್ರವಾಸ ಮಾಡಿದ ರಾಹುಲ್ ಗಾಂದಿಯವರು ಸಹ ತಮ್ಮ ಮಾತುಗಳಲ್ಲಿ ಹೆಚ್ಚಿನ ಅಂಶ ಕೇಂದ್ರದ ಕಾರ್ಯವೈಖರಿಯನ್ನು ಮೋದಿಯವರನ್ನು ಟೀಕಿಸುವಲ್ಲಿ ಕಾಲ ಕಳೆದರೆ ಹೊರತು ರಾಜ್ಯದ ಸಮಸ್ಯೆಗಳ ಬಗ್ಗೆ ಮಾತಾಡಲೇ ಇಲ್ಲ. ಮೋದಿಯವರಂತೆಯೇ ರಾಹುಲರು ಸಹ ಮಹಾದಾಯಿ ವಿಚಾರದಲ್ಲಿ ಮೌನ ತಳೆದು ಜನರಲ್ಲಿ ಭ್ರಮನಿರಸನ ಉಂಟುಮಾಡಿದರು.

ಈ ನಡುವೆ ಎಲ್ಲ ಪಕ್ಷಗಳ ರಾಜ್ಯಮಟ್ಟದ ನಾಯಕರುಗಳು ಸಹ ರಾಜ್ಯದ ಜನತೆಯ ನೈಜ ಸಮಸ್ಯೆಗಳನ್ನು ಅಲಕ್ಷಿಸುತ್ತ, ಎದುರಾಳಿ ಪಕ್ಷದ ನಾಯಕರುಗಳ ವೈಯುಕ್ತಿಕ ತೇಜೋವಧೆಗಳನ್ನು ಮಾಡುವ ಹೇಳಿಕೆಗಳನ್ನು ನೀಡುತ್ತಾ, ಜನರನ್ನು ಬಾವನಾತ್ಮಕವಾಗಿ ಕೆರಳಿಸುವ ಸೂಕ್ಷ್ಮ ವಿಚಾರಗಳನ್ನಷ್ಟೆ ಪ್ರಸ್ತಾಪಿಸುತ್ತ ಕೀಳು ಮಟ್ಟದ ರಾಜಕಾರಣವನ್ನು ಮಾಡುತ್ತಿದ್ದಾರೆ. ಇವರ್ಯಾರಿಗೂ ರಾಜ್ಯದ ಜ್ವಲಂತ ಸಮಸ್ಯೆಗಳ ಬಗ್ಗೆ ಅರಿವಿಲ್ಲವೆಂದೇನೂ ಅಲ್ಲ. ಆದರೆ ತಮಗೆ ಸುಲಭವಾಗಿ ದೊರೆಯಬಹುದಾದ ಮತಬ್ಯಾಂಕುಗಳನ್ನು ಒಲಿಸಿಕೊಳ್ಳಲು ಜಾತಿ, ಧರ್ಮ, ತಿನ್ನುವ ಆಹಾರಗಳ ವಿಚಾರವಾಗಿಯೇ ಚುನಾವಣ ಪ್ರಚಾರ ಕೇಂದ್ರೀಕೃತಗೊಳ್ಳುವಂತೆ ಮಾಡುವ ಹುನ್ನಾರವಿದು. 

ನಿಜಕ್ಕೂ ಇವತ್ತು ಕನ್ನಡ ಜನತೆ ಬಯಸುತ್ತಿರುವುದು ರಾಜ್ಯ ಎದುರಿಸುತ್ತಿರುವ ಸಮಸ್ಯೆಗಳು ಚುನಾವಣಾ ವಿಷಯಗಳಾಗಿ ಚರ್ಚೆಗೆ ಬಂದು ಅವುಗಳನ್ನು ಪರಿಹರಿಸುವ ದಿಕ್ಕಿನಲ್ಲಿ ರಾಜಕೀಯಪಕ್ಷಗಳು ಒಂದಿಷ್ಟಾದರು ಬದ್ದತೆ ಪ್ರದರ್ಶಿಸಲಿ ಎಂದಷ್ಟೆ!. ಎಲ್ಲರಿಗೂ ಅರಿವಿರುವ ಆ ಸಮಸ್ಯೆಗಳು ಯಾವ್ಯಾವು ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ: ಹೆಚ್ಚಾಗುತ್ತಿರುವ ನಿರುದ್ಯೋಗ ಸಮಸ್ಯೆ, ನೀರಾವರಿ ಸಮಸ್ಯೆ, ಕುಸಿಯುತ್ತಿರುವ ಅಂತರ್ಜಲದ ಸಮಸ್ಯೆ, ರೈತರ ಸರಣಿ ಆತ್ಮಹತ್ಯೆ, ದುಬಾರಿಯಾಗುತ್ತಿರುವ ಪ್ರಾಥಮಿಕ ಮತ್ತು ಉನ್ನತ ಶಿಕ್ಷಣ,ದುರ್ಬಲವಾಗಿರುವ ಅರೋಗ್ಯ ವ್ಯವಸ್ಥೆ. ಹೀಗೆ ಇವತ್ತು ರಾಜ್ಯಗಳಲ್ಲಿ ಹಲವಾರು ಸಮಸ್ಯೆಗಳು ತಾಂಡವವಾಡುತ್ತಿದ್ದು ಬೆಲೆ ಏರಿಕೆಯಿಂದ ಜನರು ತತ್ತರಿಸಿ ಹೋಗುತ್ತಿದ್ದಾರೆ. ಕೆಳ ಮತ್ತು ಮಧ್ಯಮವರ್ಗದ ಜನರ ಜೀವನ ದುಸ್ತರವಾಗುತ್ತಿದೆ. ಆದರೆ ನಮ್ಮ ರಾಜಕೀಯ ಪಕ್ಷಗಳಿಗೆ ಇವ್ಯಾವುದರ ಬಗ್ಗೆಯೂ ಕಾಳಜಿ ಇರುವಂತೆ ಕಾಣುತ್ತಿಲ್ಲ. ಹೇಗಾದರು ಮಾಡಿ ಅಧಿಕಾರ ಪಡೆಯುವುದೇ ತಮ್ಮ ಏಕೈಕ ಉದ್ದೇಶವೆಂಬಂತೆ ಅವರುನಡೆದುಕೊಳ್ಳುತ್ತಿದ್ದಾರೆ.

ದಿನ ನಿತ್ಯ ಸುದ್ದಿ ಮಾಧ್ಯಮಗಳನ್ನು ನೋಡುವ, ಪತ್ರಿಕೆಗಳನ್ನು ಓದುವ ಜನಸಾಮಾನ್ಯರಿಗೆ ನಮ್ಮ ರಾಜಕೀಯ ಪಕ್ಷಗಳ ಈ ಹೊಣೆಗೇಡಿತನ ಅರ್ಥವಾಗ ಬೇಕಿದೆ. ಹಾಗೆ ಅರ್ಥ ಮಾಡಿಕೊಂಡಾಗಲಾದರೂ ತಮ್ಮ ಮತವನ್ನು ಜವಾಬ್ದಾರಿಯಿಂದ ಚಲಾಯಿಸಬಲ್ಲರೇನೋ ಎಂಬ ನಿರೀಕ್ಷೆ ನನ್ನದು.

No comments:

Post a Comment