Feb 15, 2018

ಮಿತ್ರಪಕ್ಷಗಳನ್ನು ನಿರ್ಲಕ್ಷಿಸುತ್ತಿರುವ ಬಾಜಪ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಎನ್.ಡಿ.ಎ. ಮೈತ್ರಿಕೂಟದಲ್ಲಿ ಬಾಜಪದ ಬಹುಮುಖ್ಯ ಮಿತ್ರಪಕ್ಷಗಳೆಂದರೆ ಶಿವಸೇನೆ, ಅಕಾಲಿದಳ ಮತ್ತು ತೆಲುಗುದೇಶಂ! ಇದೀಗ ಬಾಜಪದ ದೊಡ್ಡಣ್ಣನ ರೀತಿಯ ನಡವಳಿಕೆಯಿಂದ ಅದರ ಮಿತ್ರಪಕ್ಷಗಳಲ್ಲಿ ನಿದಾನವಾಗಿ ಅಸಮಾದಾನ ಹೊಗೆಯಾಡುತ್ತಿದ್ದು, 2019ರ ಸಾರ್ವತ್ರಿಕ ಚುನಾವಣೆಗಳ ಹೊತ್ತಿಗೆ ಈ ಮೈತ್ರಿಕೂಟದಲ್ಲಿ ಬಹಳಷ್ಟು ಬದಲಾವಣೆಗಳಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ. ಅದರ ಬಗ್ಗೆ ಒಂದಿಷ್ಟು ನೋಡೋಣ:

ಚುನಾವಣೆಗಳನ್ನು ಗೆಲ್ಲಲು ಪ್ರಾದೇಶಿಕ ಪಕ್ಷಗಳ ಜೊತೆ ಮೈತ್ರಿಮಾಡಿಕೊಳ್ಳುವ ಮೂಲಕ, ತಮ್ಮ ಅಸ್ತಿತ್ವ ಇಲ್ಲದ ರಾಜ್ಯಗಳಲ್ಲಿ ಬೇರು ಬಿಡಲು ಪ್ರಯತ್ನಿಸುವುದು ನಮ್ಮ ಎರಡೂ ರಾಷ್ಟ್ರೀಯ ಪಕ್ಷಗಳ ಮಾಮೂಲಿ ವರಸೆಯಾಗಿದೆ. ಕಾಂಗ್ರೆಸ್ ಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡ ನಂತರದಲ್ಲಿ ಎಂಭತ್ತರ ದಶಕದಿಂದೀಚೆಗೆ ಇಂತಹ ಮೈತ್ರಿಗಳು ಸರ್ವೇಸಾದಾರಣವಾಗಿವೆ. ತೊಂಭತ್ತರ ದಶಕದಲ್ಲಿ ರಾಷ್ಟ್ರದಾದ್ಯಂತ ಬಲಿಷ್ಠ ಶಕ್ತಿಯಾಗಿ ಬೆಳೆಯುತ್ತಿದ್ದ ತೃತೀಯ ರಂಗವನ್ನು ಇಲ್ಲವಾಗಿಸಲು ಕಾಂಗ್ರೆಸ್ ಮತ್ತು ಬಾಜಪಗಳು ನಿದಾನವಾಗಿ ತಮ್ಮ ಪ್ರಯತ್ನ ಪ್ರಾರಂಭಿಸಿದವು ತೃತೀಯ ರಂಗದ ಅಂಗಪಕ್ಷಗಳನ್ನು ( ಎಡಪಕ್ಷಗಳನ್ನು ಹೊರತು ಪಡಿಸಿ) ಒಂದೊಂದಾಗಿ ತಮ್ಮ ತೆಕ್ಕೆಗೆ ಸೆಳೆಯುತ್ತ ತಾವು ಗಟ್ಟಿಯಾಗಿ ಬೆಳೆಯುತ್ತ ಹೋದವು. 
ಮೈತ್ರಿರಾಜಕಾರಣದ ಮಹತ್ವವನ್ನು ಮೊದಲು ಅರ್ಥಮಾಡಿಕೊಂಡಿದ್ದು ಬಾಜಪವೇ. ಹೀಗಾಗಿಯೇ ಅದು 1999ರ ಹೊತ್ತಿಗೆ ರಾಷ್ಟ್ರದ ಹಲವು ಪ್ರಾದೇಶಿಕ ಪಕ್ಷಗಳನ್ನು ತನ್ನ ನೇತೃತ್ವದ ಎನ.ಡಿ.ಎ. ಮೈತ್ರಿಕೂಟದ ಅಡಿಯಲ್ಲಿ ತಂದು, ಲೋಕಸಭಾ ಚುನಾವಣೆಗಳನ್ನು ಗೆದ್ದು ಅಧಿಕಾರ ಹಿಡಿದು ಶ್ರೀ ಅಟಲ್ ಬಿಹಾರಿ ವಾಜಪೇಯಿಯವರನ್ನು ಪ್ರದಾನಮಂತ್ರಿಗಳನ್ನಾಗಿಸುವಲ್ಲಿ ಯಶಸ್ವಿಯಾಯಿತು. ಅದಾಗ ತಾನೆ ಕಾಂಗ್ರೆಸ್ಸಿನ ಅದ್ಯಕ್ಷೆಯಾಗಿದ್ದ ಶ್ರೀಮತಿ ಸೋನಿಯಾ ಗಾಂದಿಯವರ ನೇತೃತ್ವದ ಕಾಂಗ್ರೆಸ್ ಏಕಾಂಗಿಯಗಿ ಸ್ಪರ್ದಿಸಿ(ಕೆಲವು ಅಪವಾದಗಳನ್ನು ಹೊರತು ಪಡಿಸಿ) 144 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಯಿತು. 2004ರ ಹೊತ್ತಿಗೆ ಮೈತ್ರಿ ರಾಜಕಾರಣದ ಲಾಭಗಳ ಬಗ್ಗೆ ಎಚ್ಚೆತ್ತ ಕಾಂಗ್ರೆಸ್ ತನ್ನ ನೇತೃತ್ವದಲ್ಲಿ ಯು.ಪಿ.ಎ. ಎಂಬ ಮೈತ್ರಿಕೂಟವೊಂದನ್ನು ಸ್ಥಾಪಿಸಿಕೊಂಡಿತು. ಕೇಂದ್ರದಲ್ಲಿ ಅಧಿಕಾರ ಹಿಡಿಯಲು ಮೈತ್ರಿಕೂಟವೊಂದರ ಅಗತ್ಯವನ್ನು ತಡವಾಗಿಯಾದರು ಅರಿತುಕೊಂಡ ಕಾಂಗ್ರೆಸ್ಸಿಗೆ 2004ರ ಚುನಾವಣೆ ಗೆಲುವನ್ನು ತಂದುಕೊಟ್ಟಿತು. 2009ರಲ್ಲಿ ಅದೇ ಯು.ಪಿ.ಎ.ಮೈತ್ರಿಕೂಟ ಮತ್ತೊಮ್ಮೆ ಯಾಶಸ್ವಿಯಾಗಿ ಅಧಿಕಾರ ಹಿಡಿಯಿತು.

ಅಲ್ಲಿಗೆ ಕಾಂಗ್ರೆಸ್ ಮತ್ತು ಬಾಜಪದ ಒಂದು ಕಲ್ಲಿನಲ್ಲಿ ಎರಡು ಹಕ್ಕಿಗಳನ್ನು ಹೊಡೆಯುವ ಗುರಿ ಈಡೇರಿದಂತಾಗಿತ್ತು. ಮೈತ್ರಿ ಮಡಿಕೊಳ್ಳುವುದರ ಮೂಲಕ ಅಧಿಕಾರವನ್ನು ಹಿಡಿಯುವುದು, ಅದೇ ಕಾಲಕ್ಕೆ ತೃತೀಯ ರಂಗವನ್ನು ಒಡೆದು ಇಂಡಿಯಾದ ಚುನಾವಣಾ ಕಣದಲ್ಲಿ ಎರಡೇ ಪಕ್ಷಗಳು ಉಳಿಯುವಂತಾಗಬೇಕೆಂಬ ಅವುಗಳ ಕನಸು ಹೆಚ್ಚೂ ಕಡಿಮೆ ಈಡೇರಿದಂತಾಗಿತ್ತು. ಎರಡೂ ರಾಷ್ಟ್ರೀಯ ಪಕ್ಷಗಳ ಈ ಗುಪ್ತಕಾರ್ಯಸೂಚಿಯ ಅರಿವಿಲ್ಲದೆಯೊ ಇಲ್ಲ ಸಾದ್ಯವಾದ ಮಟ್ಟಿಗೆ ಅಧಿಕಾರದಲ್ಲಿ ತಮ್ಮ ಪಾಲೂ ಪಡೆದು ಬಿಡೋಣ ಎಂಬ ಹಪಾಹಪಿಯೋ ಗೊತ್ತಿಲ್ಲ ಬಹಳಷ್ಟು ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷಗಳು ಹೆಣೆದ ಬಲೆಯಲ್ಲಿ ಬಿದ್ದು ತಮ್ಮ ಅಸ್ಥಿತ್ವಕ್ಕೆ ಸಂಚಕಾರ ತಂದುಕೊಳ್ಳಲು ಮುಂದಾದವು.

2014 ರ ಲೋಕಸಭಾ ಚುನಾವಣೆಯಲ್ಲಿಯೂ ಯು.ಪಿ.ಎ. ಮತ್ತು ಎನ್.ಡಿ.ಎ. ಮೈತ್ರಿಕೂಟಗಳು ಚುನಾವಣೆಯಲ್ಲಿ ಎದುರಾಬದುರು ನಿಂತು ಸೆಣೆಸಿದವು. ಈ ನಡವೆ ಮೈತ್ರಿಕೂಟದ ಪಕ್ಷಗಳ ಸಮೀಕರಣದಲ್ಲಿ ಒಂದಿಷ್ಟು ಸಣ್ಣಪುಟ್ಟ ಬದಲಾವಣೆಗಳೂ ಸಹ ನಡೆದುಹೋದವು. 2014ರ ಚುನಾವಣೆಯಲ್ಲಿ ತನ್ನ ಮೈತ್ರಿಕೂಟಕ್ಕೆ ಗೆಲುವು ಸಿಗುತ್ತದೆಯೆಂಬ ನಂಬಿಕೆ ಬಾಜಪಕ್ಕೆ ಇತ್ತೇ ಹೊರತು ತನ್ನ ಪಕ್ಷಕ್ಕೇನೆ ಸ್ಪಷ್ಟಬಹುಮತ ದೊರೆಯುತ್ತದೆಯೆಂಬ ಕಲ್ಪನೆಯನ್ನೇನು ಬಾಜಪ ಇಟ್ಟು ಕೊಂಡಿರಲಿಲ್ಲ. ಅದೇ ರೀತಿ ಸ್ವತ: ಬಾಜಪದ ನಾಯಕರುಗಳೇ ಅಚ್ಚರಿ ಪಡುವಷ್ಟರ ಮಟ್ಟಿಗೆ ಬಾಜಪ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಗದ್ದುಗೆ ಏರಲು ಸಾದ್ಯವಾಯಿತು.ಇಲ್ಲಿಂದಾಚೆಗೆ ಶುರುವಾಗಿದ್ದು ಪ್ರಾದೇಶಿಕ ಪಕ್ಷಗಳನ್ನು ಹಣಿಯುವ ಅಟ.

2014ರ ಸಾರ್ವತ್ರಿಕ ಚುನಾವಣೆಗಳ ನಂತರದ ಕೆಲವೆ ತಿಂಗಳಲ್ಲಿ ಬಂದ ಮಹಾರಾಷ್ಟ್ರ ವಿದಾನಸಭೆಯ ಚುನಾವಣೆಯಲ್ಲಿ ಸ್ಥಾನ ಹಂಚಿಕೆಯ ವಿಷಯದಲ್ಲಿ ಬಾಜಪ ಶಿವಸೇನೆಯ ಜೊತೆಯಲ್ಲಿ ಹಿರಿಯಣ್ಣನ ರೀತಿಯಲ್ಲಿ ವರ್ತಿಸಿತು. ಹಿಂದೆ ಬಾಜಪ ಶಿವಸೇನೆಯ ನಂತರದ ಪಾತ್ರ ನಿರ್ವಹಿಸುತ್ತಿತ್ತು. ಆದರೆ 2014ರ ಅಭೂತಪೂರ್ವ ಗೆಲುವು ಅದರ ವರಸೆಯನ್ನೆ ಬದಲಾಯಿಸಿ ಶಿವಸೇನೆಯ ಜತೆಗಿನ ಚುನಾವಣಾ ಪೂರ್ವ ಮೈತ್ರಿಯನ್ನು ಮುರಿದುಕೊಂಡು ಏಕಾಂಗಿಯಾಗಿ ಸ್ಪರ್ದಿಸಿತು. ನರೇಂದ್ರ ಮೋದಿಯವರ ಅಲೆಯ ಹಿನ್ನೆಲೆಯಲ್ಲಿ 122 ಸ್ಥಾನಗಳನ್ನು ಗೆದ್ದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ನಂತರ ಸರಕಾರ ರಚಿಸುವಾಗಲೂ ತನಗೆ ಎನ್.ಸಿ.ಪಿ.ಯಂತಹ ಪಕ್ಷಗಳು ಬೆಂಬಲ ನೀಡಲು ಸಿದ್ದವಿದ್ದಾವೆಂಬ ಬೆದರಿಕೆ ಹಾಕುತ್ತಲೇ ಸರಕಾರದ ಒಳಗೆ ಸೇರಲು ಶಿವಸೇನೆ ಸ್ವತ: ಒಪ್ಪಿಕೊಳ್ಳುವಂತಹ ವಾತಾವರಣ ನಿರ್ಮಿಸಿ ಶಿವಸೇನೆಯ ಆಂತರೀಕ ವಲಯದಲ್ಲಿ ಅಸಮಾದಾನವನ್ನು ಹುಟ್ಟು ಹಾಕಿತು. ತದನಂತರದ ಮುಂಬೈ ನಗರಪಾಲಿಕೆಯಲ್ಲಿಯೂ ಬಾಜಪ ಶಿವಸೇನೆಗಳು ಪ್ರತ್ಯೇಕವಾಗಿ ಸ್ಪರ್ದಿಸಿದವು.ಇವತ್ತಿಗೂ ಕೇಂದ್ರದ ಸಂಪುಟದಲ್ಲಾಗಲಿ, ಮಹಾರಾಷ್ಟ್ರ ರಾಜ್ಯದ ಸಂಪುಟದಲ್ಲಾಗಲಿ ಶಿವಸೇನೆಗೆ ಅಮುಖ್ಯವಾದ ಖಾತೆಗಳನ್ನು ನೀಡಿ ಅವಮಾನಿಸಲಾಗುತ್ತಿದೆ. ಆದರೆ ಜೊತೆಗಿರಲೆ ಬೇಕಾದ ಅನಿವಾರ್ಯತೆಗೆ ಸಿಲುಕಿರುವ ಶಿವಸೇನೆ ಸಾರ್ವಜನಿಕವಾಗಿ ಮೋದಿಯವರ ಮತ್ತು ಬಾಜಪದ ನೀತಿಗಳನ್ನು ಟೀಕಿಸುತ್ತ ಸ್ವತಂತ್ರ ವಿರೋಧಪಕ್ಷದಂತೆ ಕೆಲಸ ಮಾಡುತ್ತಿದೆ. ಇದೀಗ ಶಿವಸೇನೆಯ ವಿರುದ್ದ ಬಾಜಪದ ಕಾರ್ಯಾಚರಣೆ ಅಂತಿಮ ಘಟ್ಟಕ್ಕೆ ಬಂದಂತೆ ಕಾಣುತ್ತಿದೆ. ಯಾಕೆಂದರೆ ಬಾಜಪ ಮತ್ತು ಶಿವಸೇನೆಯ ಮಹಾರಾಷ್ಟದಲ್ಲಿ ನಂಬಿಕೊಂಡಿರುವುದು ಬಹುಸಂಖ್ಯಾತ ಹಿಂದೂ ಮತಬ್ಯಾಂಕನ್ನು. ಹಿಂದೂ ಮತಗಳ ಮೇಲೆ ಕಣ್ಣಿಟ್ಟಿರುವ ಎರಡೂ ಪಕ್ಷಗಳಲ್ಲಿ ಒಂದು ಬೆಳೆಯಲು ಇನ್ನೊಂದು ಕಳೆದುಕೊಳ್ಳಲೇ ಬೇಕಾದ ಸ್ಥಿತಿ ಇದೆ. ಈ ವಿಷಯವೇ ಇವತ್ತು ಇವೆರಡೂ ಪಕ್ಷಗಳ ನಡುವಿನ ಬಿಕ್ಕಟ್ಟಿಗೆ ಕಾರಣ. ತಾನು ರಾಷ್ಟ್ರೀಯ ಪಕ್ಷವೆಂಬ ಅಹಂಕಾರದಲ್ಲಿ ಹಿಂದೊಮ್ಮೆ ತನ್ನ ಬೆಳವಣಿಗೆಗೆ ಕಾರಣವಾಗಿದ್ದ ಶಿವಸೇನೆಯನ್ನು ಮುಗಿಸಲು ಬಾಜಪ ಹೊರಟಿದ್ದು, ಇದು ಉದ್ದವ್ ಠಾಕ್ರೆಯನ್ನು ಕೆರಳಿಸಿದೆ. ಹೀಗಾಗಿಯೇ 2019ರ ಲೋಕಸಭಾ ಚುನಾವಣೆಯನ್ನು ತಾವು ಏಕಾಂಗಿಯಾಗಿ ಎದುರಿಸುವುದಾಗಿ ಶಿವಸೇನೆಯ ಉದ್ದವ್ ಹೇಳಿದ್ದಾರೆ. ಬಾಜಪ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಅದಕ್ಕೆ ಬೇಕಿರುವುದೂ ಅದೆ ಎನ್ನುವಂತಿದೆ ಅದರ ವರ್ತನೆ. 1989ರ ಸಮಯದಲ್ಲಿ ಮಹಾರಾಷ್ಟ್ರದ ರಾಜಕಾರಣದಲ್ಲಿ ಏನೇನೂ ಆಗಿರದಿದ್ದ ಬಾಜಪವನ್ನು ಇದೇ ಶಿವಸೇನೆಯ ಬಾಳಾಠಾಕ್ರೆಯವರು ತಮ್ಮ ಪಕ್ಷದ ಜೊತೆ ಸೇರಿಸಿಕೊಂಡು, ಮೈತ್ರಿಮಾಡಿಕೊಂಡು ಕಾಂಗ್ರೆಸ್ಸಿನ ವಿರುದ್ದ ಸೆಣೆಸಾಡಿ ಬಾಜಪ ತನ್ನ ಅಸ್ತಿತ್ವ ಕಂಡುಕೊಳ್ಳಲು ನೆರವಾಗಿದ್ದರು. ಅವತ್ತಿನಿಂದಲೂ ಶಿವಸೇನೆಯನ್ನೇ ಬಳಸಿಕೊಂಡು ಬೆಳೆದ ಬಾಜಪ ಇವತ್ತು ಅದೇ ಶಿವಸೇನೆಯನ್ನು ಅದರ ಅಖಾಡದಲ್ಲಿಯೇ ಮಣಿಸಿ-ಮುಗಿಸಲು ಪ್ರಯತ್ನಿಸುತ್ತಿದೆ.

ಇನ್ನು ಪಂಜಾಬ್ ರಾಜ್ಯದಲ್ಲಿಯೂ ಬಹಳ ವರ್ಷಗಳಿಂದಲೂ ಮಿತ್ರಪಕ್ಷವಾಗಿರುವ ಅಕಾಲಿದಳದ ಜೊತೆ ದೊಡ್ಡಣ್ಣನ ರೀತಿಯಲ್ಲಿ ವರ್ತಿಸುತ್ತಿರುವ ಬಾಜಪದ ನಡೆಯಿಂದ ಅಕಾಲಿದಳಕ್ಕೂ ಇರುಸು ಮುರುಸುಂಟಾಗಿದೆ. 2017ರ ಚುನಾವಣೆಯ ಹೊತ್ತಿಗೆ ಅತ್ಮವಿಶ್ವಾಸದಿಂದ ಬೀಗುತ್ತಿದ್ದ ಬಾಜಪದ ಪಂಜಾಬ್ ರಾಜ್ಯ ಘಟಕ ಅಕಾಲಿದಳದ ಜೊತೆ ಮೈತ್ರಿ ಮುರಿದುಕೊಂಡು ಏಕಾಂಗಿಯಾಗಿ ಸ್ಪರ್ದಿಸಬೇಕೆಂದು ಬಾಜಪದ ವರಿಷ್ಠರಿಗೆ ಮನವಿ ಸಲ್ಲಿಸಿತ್ತು. ಬಾಜಪ ಸಹ ಈ ದಿಸೆಯಲ್ಲಿಯೇ ಯೋಚಿಸುತ್ತ ಮುಂದಡಿಯಿಡುವ ಹೊತ್ತಿಗೆ ಬಾಜಪದ ಒಳಗಿನ ಒಂದು ಬೆಳವಣಿಗೆ ಅದನ್ನು ತಡೆಯುವಂತಾಯಿತು. ಬಾಜಪದ ವರಿಷ್ಠರ ಜೊತೆಮುನಿಸಿಕೊಂಡ ಸಂಸದ ಮತ್ತು ಕ್ರಿಕೇಟಿಗ ಶ್ರೀ ನವಜೋತ್ ಸಿಂಗ್ ಸಿದ್ದು ಬಾಜಪ ತೊರೆದು ಕಾಂಗ್ರೆಸ್ ಸೇರಿಬಿಟ್ಟಿದ್ದರು. ಇದರಿಂದ ತಮ್ಮ ಪಕ್ಷಕ್ಕೆ ಹಿನ್ನಡೆಯಾಗುವುದು ಖಚಿತವೆಂದು ಅರಿತುಕೊಂಡ ಬಾಜಪ ಅಕಾಲಿದಳದ ಜೊತೆಮೈತ್ರಿ ಮುಂದುವರೆಸಲೇ ಬೇಕಾಯಿತು. ನಂತರದಲ್ಲಿ ನಡೆದ ಚುನಾವಣೆಯಲ್ಲಿ ಬಾಜಪ ಅಕಾಲಿದಳ ಸೋಲುಣ್ಣಬೇಕಾಯಿತು. ಈಗಲೂ ಬಾಜಪದ ಪ್ರಕಾರ ಅಕಾಲಿದಳದ ದೆಸೆಯಿಂದಲೆ ಬಾಜಪ ಸೋಲಬೇಕಾಯಿತೆಂದು ನಂಬಿದ್ದು, ಅದರ ಜೊತೆ ಮೈತ್ರಿ ಕಡಿದುಕೊಳ್ಳಬೇಕೆಂದು ಬಯಸಿಸುತ್ತಿದೆ. ಹೀಗೆ ಕಳೆದ ಇಪ್ಪತ್ತು ವರ್ಷಗಳಿಂದ ತಾನು ಬೆಳೆಯಲು ಅವಕಾಶ ಮಾಡಿಕೊಟ್ಟ ಅಕಾಲಿದಳವನ್ನು ಅದರ ಸೋಲಿನ ಸಮಯದಲ್ಲಿ ಬಾಜಪ ಕೈ ಬಿಡಲು ಯೋಚಿಸುತ್ತಿರುವುದು ನಮ್ಮ ರಾಷ್ಟ್ರೀಯ ಪಕ್ಷಗಳ ಸಮಯಸಾಧಕತನವನ್ನು ತೋರಿಸುತ್ತದೆ.
ಸಾಂದರ್ಭಿಕ ಚಿತ್ರ 

ಇದೀಗ ಬಾಜಪ ತನ್ನ ಮತ್ತೊಂದು ಮಿತ್ರಪಕ್ಷವಾದ ಆಂದ್ರಪ್ರದೇಶದ ತೆಲುಗುದೇಶಂ ಪಕ್ಷವನ್ನು ತಾತ್ಸಾರದಿಂದ ನೋಡುತ್ತಿದ್ದು, ತೆಲುಗುದೇಶಂ ಪಕ್ಷಕ್ಕೆ ಸಾಕಷ್ಟು ನೋವುಂಟಾಗಿದ್ದು ಸ್ವತ: ತೆಲುಗುದೇಸಂ ಮೈತ್ರಿ ಮುರಿದುಕೊಳ್ಳುವ ಮಾತಾಡುತ್ತಿದೆ. ಈ ಬಾರಿಯ ಕೇಂದ್ರದ ಆಯವ್ಯಯ ಮಂಡಿಸುವ ಸಂದರ್ಭದಲ್ಲಿ ಅಂದ್ರಪ್ರದೇಶವನ್ನು ಕಡೆಗಣಿಸಲಾಗಿದೆಯೆಂದು ಅರೋಪಿಸಿರುವ ಚಂದ್ರಬಾಬು ನಾಯ್ಡುರವರು ಅದಕ್ಕೆ ಹಲವು ಉದಾಹರಣೆಗಳನ್ನೂ ಕೊಡುತ್ತಾರೆ. ತೆಲಂಗಾಣ ಪ್ರತ್ಯೇಕವಾದಾಗ ಆಂದ್ರಕ್ಕೆ ಆದ ನಷ್ಟವನ್ನು ಸರಿದೂಗಿಸಲು ಕೇಂದ್ರ ವಿಶೇಷ ಪ್ಯಾಕೇಜ್ ನೀಡಲು ಒಪ್ಪಿಕೊಂಡಿದ್ದು ಇದುವರೆಗೂ ಅದನ್ನು ಘೋಷಿಸಲಾಗಿಲ್ಲ. ಜೊತೆಗೆ ಆಂದ್ರದ ಹೊಸರಾಜಧಾನಿ ಅಮರಾವತಿಯ ನಿರ್ಮಾಣಕ್ಕೆ ನೀಡಬೇಕಿದ್ದ ಅನುದಾನದಲ್ಲಿ ಒಂದೇ ಒಂದು ಪೈಸೆಯನ್ನೂ ಬಿಡುಗಡೆ ಮಾಡಿಲ್ಲ. ನಬಾರ್ಡ್ ಅಡಿಯಲ್ಲಿ ಅನುಷ್ಠಾನಗೊಳ್ಳಬೇಕಿದ್ದ ಪೊಲಾವರಂ ಯೋಜನೆಗು ಸಹ ಹಣ ಬಿಡುಗಡೆ ಮಾಡಿಲ್ಲ. ವಿಶಾಖಪಟ್ಟಣಂ ಮತ್ತು ವಿಜಯವಾಡಾದಲ್ಲಿ ಪ್ರಾರಂಬಿಸಲು ಉದ್ದೇಶಿಸಿದ್ದ ಮೆಟ್ರೋ ಕಾಮಗಾರಿಯನ್ನು ಆರಂಭಿಸಲು ಮುಂದಾಗಿಲ್ಲ ಎಂಬಿತ್ಯಾದಿ ಆರೋಪಗಳನ್ನು ಮಾಡಿರುವ ಚಂದ್ರಬಾಬು ನಾಯ್ಡುವರು ಎನ್.ಡಿ.ಎ.ಯಿಂದ ಹೊರಬರುವ ಬೆದರಿಕೆ ಹಾಕಿದ್ದು, ಇದೀಗ ಅದನ್ನು ಹಿಂಪಡೆದಿದ್ದಾರೆ.

ಹಾಗೆ ನೋಡಿದರೆ ಚಂದ್ರಬಾಬು ನಾಯ್ಡುರವರು ಕೇವಲ ಅನುದಾನದ ವಿಷಯಕ್ಕೆ ಮೈತ್ರಿ ಮುರಿದುಕೊಳ್ಳುವ ಮಾತಾಡಿದ್ದರೆಂಬುದನ್ನು ನಂಬಲು ಯಾರೂ ತಯಾರಿಲ್ಲ. ಯಾಕೆಂದರೆ ಅದರ ಹಿಂದೆ ಬೇರೆಯದೇ ಆದ ಕಾರಣಗಳಿವೆ. ಕೆಲವೇ ದಿನಗಳ ಹಿಂದೆ ಬಾಜಪ ಒಪ್ಪುವುದಾದರೆ ತಾನು ಎನ್.ಡಿ.ಎ.ಮೈತ್ರಿಕೂಟಕ್ಕೆ ಸೇರಲು ಸಿದ್ದವಿರುವುದಾಗಿ ವೈ.ಎಸ್.ಆರ್. ಕಾಂಗ್ರೆಸ್ಸಿನ ನಾಯಕ ಶ್ರೀ ಜಗಮೋಹನ್ ರೆಡ್ಡಿಯವರು ಹೇಳಿದ್ದು ಇದನ್ನು ಬಾಜಪ ನಿರಾಕರಿಸದೆ ಮೌನವಾಗಿದ್ದು ತೆಲುಗುದೇಶಂ ವಲಯದಲ್ಲಿ ಅನುಮಾನದ ಹುತ್ತ ಕಟ್ಟಲು ಕಾರಣವಾಗಿದೆ. ಆಂದ್ರಪ್ರದೇಶದ ಮಟ್ಟಿಗೆ ಬಾಜಪ ತೆಲುಗುದೇಶಂ ಪಕ್ಷಕ್ಕೆ ಯಾವ ರೀತಿಯಲ್ಲೂ ಸಹಕಾರಿಯಾಗಲು ಸಾದ್ಯವಿಲ್ಲ. ಮುಸ್ಲಿಂ ಮತಗಳು ತೆಲುಗುದೇಶಂ ಪಕ್ಷಕ್ಕೆ ಬರುತ್ತವೆ ಎನ್ನುವ ನಂಬಿಕೆ ನಂದ್ಯಾಲ ಉಪಚುನಾವಣೆಯ ಮೂಲಕ ತೆಲುಗುದೇಶಂ ಪಕ್ಷಕ್ಕೆ ಅರ್ಥವಾಗಿದ್ದು, ವೈ.ಎಸ್.ಆರ್. ಬೆಂಬಲ ಪಡೆಯಲು ಬಾಜಪ ತೆಲುಗುದೇಶಂ ಪಕ್ಷವನ್ನು ಕೈ ಬಿಡಬಹುದೆಂಬ ಅನುಮಾನ ಚಂದ್ರಬಾಬು ನಾಯ್ಡು ಅವರಿಗೆ ಇರುವುದರಿಂದ ಮುಂಚಿತವಾಗಿಯೇ ಅವರು ಬಾಜಪಕ್ಕೆ ಮೈತ್ರಿ ಮುರಿಯುವ ಎಚ್ಚರಿಕೆಯನ್ನು ನೀಡಿದ್ದಾರೆ. ಆದರೀಗ ಸದ್ಯಕ್ಕೆ ಈ ಮೈತ್ರಿಮುರಿದುಕೊಳ್ಳುವ ಮಾತಿಗೆ ಬ್ರೇಕ್ ಹಾಕಿರುವ ನಾಯ್ಡುರವರು ಬಾಜಪದ ಬಗ್ಗೆ ಒಂದು ಎಚ್ಚರದ ಕಣ್ಣನ್ನಿಟ್ಟುಕೊಂಡೆ ಅಧಿಕಾರ ನಡೆಸಬೇಕಾದ ಅಗತ್ಯವನ್ನು ಮನಗಂಡಿದ್ದಾರೆ.

ಹೀಗೆ ಬಾಜಪ ಪಕ್ಷವು ತಾನು ಬೆಳೆಯಲು ಬಳಸಿಕೊಂಡ ಮಿತ್ರ ಪಕ್ಷಗಳ ಜೊತೆಗಿನ ಮೈತ್ರಿಯನ್ನು ಕಡಿದುಕೊಂಡು ಸ್ವತಂತ್ರವಾಗಿ ಸ್ಪರ್ದಿಸಿ ಗೆಲ್ಲುವ ಆತ್ಮವಿಶ್ವಾಸವನ್ನು ತೋರಿಸಲು ಪ್ರಾರಂಭಿಸಿದೆ. ಅದಕ್ಕಾಗಿಯೇ ಅದು ತನ್ನ ಬೆಳವಣಿಗೆಗೆ ಸಹಕರಿಸಿದ ಪಕ್ಷಗಳನ್ನು ನಿರ್ಲಕ್ಷ್ಯದಿಂದ ನೋಡುತ್ತಾ ಅವುಗಳು ತಾವಾಗಿಯೇ ಮೈತ್ರಿಯಿಂದ ದೂರಾಗುವಂತಹ ಸನ್ನಿವೇಶವೊಂದನ್ನು ನಿರ್ಮಿಸುತ್ತಿದೆ. ಶಿವಸೇನೆಗೆ ಆದ ಗತಿಯೇ ನಾಳೆ ತೆಲುಗುದೇಶಂ, ಅಕಾಲಿದಳಿತ್ಯಾದಿ ಪಕ್ಷಗಳಿಗೂ ಆಗಬಹುದೆಂಬುದರಲ್ಲಿ ಸಂದೇಹವೇನಿಲ್ಲ. ಈ ವಿಚಾರದಲ್ಲಿ ಮತ್ತೊಂದು ರಾಷ್ಟ್ರೀಯ ಪಕ್ಷವೇನೂ ಬಾಜಪಕ್ಕಿಂತ ಭಿನ್ನವಲ್ಲ ಎನ್ನುವುದನ್ನು ಸಹ ನಾವು ಗಮನಿಸಬೇಕು.

No comments:

Post a Comment