Dec 9, 2017

ಅಕ್ಷರ ಪ್ರೀತಿ ಬೆಳೆಸಿದ ರವಿ ಬೆಳಗೆರೆಯ ನೆನಪಲ್ಲಿ......

ಡಾ. ಅಶೋಕ್.ಕೆ.ಆರ್

ರವಿ ಬೆಳಗೆರೆ ಅರೆಸ್ಟ್ ಎಂಬ ಸುದ್ದಿ ನಿನ್ನೆ ಮಧ್ಯಾಹ್ನದಿಂದ ಟಿವಿ, ಸುದ್ದಿ ಯ್ಯಾಪ್‍ಗಳು, ಎಫ್.ಬಿಯಲ್ಲಿ ರಾರಾಜಿಸಲಾರಂಭಿಸಿದೆ. ರವಿ ಬೆಳಗೆರೆ ಎಂಬ ವ್ಯಕ್ತಿ ಹೊತ್ತು ತಂದ ನೆನಪುಗಳ ಬುತ್ತಿ ಚಿಕ್ಕದಲ್ಲ. 

ಎರಡನೆ ವರ್ಷದ ಪಿ.ಯು.ಸಿಯ ದಿನಗಳವು. ಅವತ್ಯಾವ ಕಾರಣಕ್ಕೋ ನೆನಪಿಲ್ಲ, ಕಾಲೇಜು ಬೇಗ ಮುಗಿದಿತ್ತು. ಮನೆಗೆ ಹೋಗುವ ದಾರಿಯಲ್ಲಿ ಸಿಗುತ್ತಿದ್ದ ಸ್ಟೇಡಿಯಂ ಬಳಿ ಚೆಂದದ ಚುರ್ಮುರಿ ಮಾಡುತ್ತಿದ್ದ ಗಾಡಿಯ ಬಳಿ ನಿಂತು ಚುರ್ಮುರಿ ತಿನ್ನುವಾಗ ಎದುರುಗಡೆ ನಗರ ಕೇಂದ್ರ ಗ್ರಂಥಾಲಯ ಅನ್ನೋ ಬೋರ್ಡು ಕಾಣಿಸಿತು. ಹುಣಸೂರಿನಲ್ಲಿದ್ದಾಗ ಅಪರೂಪಕ್ಕೆ ಲೈಬ್ರರಿಗೆ ಹೋಗುತ್ತಿದ್ದೆ, ಮಂಡ್ಯದ ಲೈಬ್ರರಿಗಿನ್ನೂ ಕಾಲಿಟ್ಟಿರಲಿಲ್ಲ. ನಡೀ ಲೈಬ್ರರಿಗಾದ್ರೂ ಹೋಗೋಣ ಅಂದ್ಕೊಂಡು ಒಳಗೆ ಕಾಲಿಟ್ಟೆ. ಒಂದಷ್ಟು ದಿನಪತ್ರಿಕೆ ತಿರುವು ಹಾಕಿ, ರೂಪತಾರ ತರಂಗ ಮಂಗಳ ತಿರುವು ಹಾಕಿದ ನಂತರ ಕಣ್ಣಿಗೆ ಬಿದ್ದಿದ್ದು ಕಪ್ಪು ಸುಂದರಿ! ಕೈಗೆತ್ತಿಕೊಂಡ ಮೊದಲ ಟ್ಯಾಬ್ಲಾಯ್ಡ್ ಪತ್ರಿಕೆ ಹಾಯ್ ಬೆಂಗಳೂರ್! ಆ ವಯಸ್ಸಲ್ಲಿ ಪತ್ರಿಕೆಯಲ್ಲಿದ್ದ ಕ್ರೈಂ – ರಾಜಕೀಯ ವರದಿಗಳ ರಂಜನೀಯ ಟೈಟಲ್ಲುಗಳು ಇಷ್ಟವಾಯ್ತೋ, ಖಾಸ್ ಬಾತ್ ಬಾಟಮ್ ಐಟಮ್ ಹಲೋ ಕೇಳಿ ಅನ್ನೋ ಹೆಸರುಗಳು ಇಷ್ಟವಾಯ್ತೋ ಈಗ ನಿರ್ಧರಿಸುವುದು ಕಷ್ಟದ ಕೆಲಸ. ಹೀಗೆ ಶುರುವಾಗಿತ್ತು ಹಾಯ್ ಬೆಂಗಳೂರ್ ಜೊತೆಗಿನ ಒಡನಾಟ.
ಪಿ.ಯು ಮುಗಿಸೋವರ್ಗೂ ಹೆಚ್ಚಿನಂಶ ಲೈಬ್ರರಿಯಲ್ಲೇ ಹಾಯ್ ಬೆಂಗಳೂರ್ ಅನ್ನು ಓದುತ್ತಿದ್ದಿದ್ದು. ಅಪರೂಪಕ್ಕೆ ಮನೆಗೆ ಕೊಂಡೊಯ್ಯುತ್ತಿದ್ದೆ. ‘ಇದ್ಯಾಕ್ ತರ್ತಿ?’ ಅಂತ ಅಪ್ಪ ಗೊಣಗೋರು. ಮನೆಗೆ ತಗಂಡು ಹೋಗೋದನ್ನ ಕಡಿಮೆ ಮಾಡಿದ್ದೆ. ಪಿಯುಸಿ ಮುಗಿಸಿ ಮೆಡಿಕಲ್ ಓದಲು ಮೈಸೂರಿಗೆ ಹೋದ ನಂತರ ವಾರಕ್ಕೊಮ್ಮೆ ಪತ್ರಿಕೆ ತರೋದು ಜೀವನದ ಭಾಗವಾಗಿ ಬಿಟ್ಟಿತ್ತು. ನಮ್ ಕಾಲೇಜಿನತ್ರ ಪತ್ರಿಕೆ ಸಿಗ್ತಾನೂ ಇರ್ಲಿಲ್ಲ. ಬನ್ನಿಮಂಟಪದತ್ರ ಟೆಂಪೋ ಹತ್ತಿ ಮೂರು ರುಪಾಯಿ ಕೊಟ್ಟು ಫೌಂಟೇನ್ ಸರ್ಕಲ್ಲಿನಲ್ಲಿ ಇಳಿದು ಒಂದು ನೂರಿನ್ನೂರು ಮೀಟರ್ ನಡೆದರೆ ಪೇಪರ್ ಅಂಗಡಿ ಸಿಗುತ್ತಿತ್ತು. ಅಲ್ಲಿ ಕಪ್ಪು ಸುಂದರಿಯನ್ನು ಕೊಂಡುಕೊಂಡು ಲಗುಬಗನೆ ಪುಟಗಳನ್ನು ತಿರುವಿ ಹೆಡ್‍ಲೈನ್ಸುಗಳನ್ನು ಓದಿ ಮತ್ತೆ ಫೌಂಟೇನ್ ಸರ್ಕಲ್ಲಿಗೆ ಬಂದು ಟೆಂಪೋ ಹತ್ತಿ ರೂಮಿಗೆ ಬರುವಷ್ಟರಲ್ಲಿ ಸಂಜೆ ಐದೂವರೆ ಆರಾಗುತ್ತಿತ್ತು. ರಾತ್ರಿ ಊಟಕ್ಕೆ ಹೋಗುವವರೆಗೂ ಓದು ನಿಲ್ಲುತ್ತಿರಲಿಲ್ಲ. ಮೊದಲು ಹಿಂಬದಿಯ ಎರಡು ಸಿನಿಮಾ ಪುಟಗಳನ್ನು ಓದಿ, ನಂತರ ಸಂಪಾದಕೀಯ ಹಲೋ ಓದಿ, ಅದಾದ ಮೇಲೆ ಖಾಸ್ ಬಾತ್ ಬಾಟಮ್ ಐಟಮ್ಮಿನ ಓದು ಸಾಗುತ್ತಿತ್ತು. ನಂತರ ರಾಜಕೀಯದ ಕುರಿತ ಲೇಖನ, ಕ್ರೈಂ ಕುರಿತಾದ ಲೇಖನಗಳು. ಇನ್ನೂ ಸಮಯವಿದ್ದರೆ 'ಕೇಳಿ'ಯ ಓದು. ಇಂಟರ್ನಲ್ಸ್ ಇರಲಿ, ಪರೀಕ್ಷೆಗಳಿರಲಿ ಹಾಯ್ ಬೆಂಗಳೂರಿನ ಓದು ನಿಲ್ಲುತ್ತಿರಲಿಲ್ಲ. ಒಂದೆರಡು ವರುಷಗಳಲ್ಲಿ ಕ್ರೈಂ ಕಥಾನಕಗಳು ಆಸಕ್ತಿ ಕಳೆದುಕೊಂಡವು. ಓದಿದ್ರೆ ಓದಿದೆ ಇಲ್ಲಾಂದ್ರೆ ಇಲ್ಲ. ತ್ಯಾಗರಾಜ್, ವಿಠಲಮೂರ್ತಿ, ಶೃಂಗೇಶ್‍‍ರ ಲೇಖನಗಳು ಹೆಚ್ಚು ಓದಿಸಿಕೊಳ್ಳುತ್ತಿದ್ದವು. ಖಾಸ್ ಬಾತ್, ಬಾಟಮ್ ಐಟಮ್ ಎರಡು ಮೂರು ವರ್ಷದ ಹಿಂದಿನ ಲೇಖನಗಳಂತೆಯೇ ಕಾಣಿಸಲಾರಂಭಿಸಿತ್ತು. ಆದರೂ ಓದುವುದು ನಿಂತಿರಲಿಲ್ಲ. ಇದನ್ನು ಹೊರತುಪಡಿಸಿ ಪತ್ರಿಕೆ ಮಾಡಿದ ಉಪಕಾರ ಹಲವಿತ್ತು. 

ಚಂದ್ರಶೇಖರ ಆಲೂರು, ಜೋಗಿ, ನಾಗತಿಹಳ್ಳಿಯವರ ಬರಹಗಳು ಓದುವುದಕ್ಕೆ ಸಿಕ್ಕಿದ್ದಿಲ್ಲಿ. ಅದರಲ್ಲೂ ಚಂದ್ರಶೇಖರ ಆಲೂರರು ಆ್ಯಂಟನಿ ಚೆಕಾಫ್‍‍ನ ಕತೆಗಳನ್ನೊಂದಷ್ಟನ್ನು ಭಾವಾನುವಾದಿಸಿ ತಮ್ಮ ಅಂಕಣದಲ್ಲಿ ಹಾಕುತ್ತಿದ್ದರು. ಯಾರೀತ ಚೆಕಾಫ್ ಎನ್ನುವುದನ್ನು ಹುಡುಕಿ ಆತನ ಪುಸ್ತಕಗಳನ್ನು ಓದಿದೆ, ಚೆಕಾಫ್ ನ ಹಿಂದೆಯೇ ಲಿಯೋ ಟಾಲ್ಸ್ಟಾಯ್, ದಾಸ್ತೋವಸ್ಕಿ ಪರಿಚಿತರಾದರು. ಇವರೆಲ್ಲ ಪರಿಚಯವಾದ ಮೇಲೆ ಮಾರ್ಕ್ಸ್, ಲೆನಿನ್ ಪರಿಚಯವಾಗದೇ ಉಳಿಯುವರೇ! ಅವರ ಪರಿಚಯವೂ ಆಯಿತು!. ಇನ್ನು ರವಿ ಬೆಳಗೆರೆ ಪದೇ ಪದೇ ಪೋಲಿ ಮುದುಕನ ಪ್ರಸ್ತಾಪ ಮಾಡುತ್ತಿದ್ದರು. ಖುಷ್ವಂತ್ ಸಿಂಗ್ ರ ಪುಸ್ತಕಗಳ ಪರಿಚಯವಾಗಿದ್ದೇ ರವಿ ಬೆಳಗೆರೆಯಿಂದ. ಪತ್ರಿಕೆ ಓದುತ್ತಿದ್ದ ಸಮಯದಲ್ಲೇ ರಾಜೀವ್ ದೀಕ್ಷಿತರ ಹೆಸರು ಪರಿಚಯವಾಯಿತು. ಅವರದೊಂದು ಆಜಾದಿ ಎನ್ನುವ ಪುಸ್ತಕ (ಬಹುಶಃ ರವಿ ಬೆಳಗೆರೆ ಪ್ರಕಾಶನವೇ ಇರಬೇಕು) ಓದಿದ ನಂತರ ಸಾಧ್ಯವಾದಷ್ಟು ವಿದೇಶಿ ಕಂಪನಿಗಳ ವಸ್ತುಗಳನ್ನು ಬಳಸುವುದನ್ನು ಕಡಿಮೆ ಮಾಡಿದೆ. ನಮ್ಮ ಕಾಲೇಜಿನ ಎದುರಿಗಿದ್ದ ಫಾರ್ಮ ಕಾಲೇಜಿನಲ್ಲಿ ರಾಜೀವ್ ದೀಕ್ಷಿತ್‍‍ರನ್ನು ಒಮ್ಮೆ ಕರೆಸಿದ್ದರು. ಪುಸ್ತಕದ ಮೂಲಕ ಅವರ ಗುರುತಿತ್ತಲ್ಲ, ಆ ಕಾರ್ಯಕ್ರಮಕ್ಕೆ ಹೋಗಿ ಅವರ ಭಾಷಣ ಕೇಳಿ ರೋಮಾಂಚನಗೊಂಡು ಅವರ ಕ್ಯಾಸೆಟ್ಟುಗಳನ್ನು ಕೊಂಡುತಂದಿದ್ದೆ. ಜಾಗತೀಕರಣದ ದಿನಗಳಲ್ಲಿ ಕಷ್ಟವೆನ್ನುವುದು ಹೌದಾದರೂ ಇವತ್ತಿಗೂ ಸಾಧ್ಯವಾದಷ್ಟು ಮಟ್ಟಿಗೆ ಭಾರತೀಯ ಉತ್ಪನ್ನಗಳನ್ನೇ ಉಪಯೋಗಿಸಲು ರಾಜೀವ್ ದೀಕ್ಷಿತ್ ಕಾರಣ. ರಾಜೀವ್ ದೀಕ್ಷಿತ್ ಪರಿಚಯವಾಗಿದ್ದು ಇದೇ ಹಾಯ್ ಬೆಂಗಳೂರ್ ಮೂಲಕ.

ಇನ್ನು ಪಟ್ಟು ಬಿಡದಂತೆ ಮೊದಲ ಪುಟದಿಂದ ಕೊನೆಯ ಪುಟದವರೆಗೂ ಓದುವ ಅಭ್ಯಾಸ ಮಾಡಿಸಿದ್ದು ರವಿ ಬೆಳಗೆರೆಯ ಪುಸ್ತಕಗಳು ಎನ್ನುವುದರಲ್ಲಿ ಅತಿಶಯೋಕ್ತಿಯೇನಿಲ್ಲ. ಸರ್ಪ ಸಂಬಂಧ, ಮಾಟಗಾತಿ, ಒಮಾರ್ಟ, ಹೇಳಿ ಹೋಗು ಕಾರಣ, ಹಿಮಾಲಯನ್ ಬ್ಲಂಡರ್, ಚಲಂ, ಮಾಂಡೋವಿ ಪುಸ್ತಕಗಳು ಓದುವ ಅಭ್ಯಾಸವನ್ನು ಮತ್ತಷ್ಟು ಹೆಚ್ಚಿಸಿದವು, ಪಠ್ಯೇತರ ಓದು ಮುಂದುವರಿಯಲು ಪ್ರೋತ್ಸಾಹಿಸಿದವು. 

ಹಾಯ್ ಬೆಂಗಳೂರ್, ರವಿ ಬೆಳಗೆರೆಯನ್ನು ಓದುವ ಕಾರಣಕ್ಕೇ ಒಂದಷ್ಟು ಗೆಳೆಯರ ಬಳಗ ಸಿಕ್ಕಿತ್ತು. ರವಿ ಬೆಳಗೆರೆಯ ಪುಸ್ತಕಗಳನ್ನೆಲ್ಲ ಕೊಂಡು ನಮಗೆ ಓದಲು ಕೊಡುತ್ತಿದ್ದ ಸೀನಿಯರ್ ಲೋಕಿ, ರವಿ ಬೆಳಗೆರೆಯ ಕಟ್ಟಾ ಅಭಿಮಾನಿಯಾಗಿದ್ದ ಕ್ಲಾಸ್ ಮೇಟ್ ಮಂಜ, ಹಾಯ್ ಬೆಂಗಳೂರು ಓದಿನಿಂದ ಪತ್ರಕರ್ತನಾಗಬೇಕೆಂಬ ನಿರ್ಧಾರ ಮಾಡಿ ಮೈಸೂರಿಗೆ ಬಿ.ಎ ಓದಲು ಬಂದ ಗೆಳೆಯ ಅವಿನಾಶ್ ಇದರಲ್ಲಿ ಪ್ರಮುಖರು. ಒಂದಷ್ಟು ಗೆಳೆಯರು ರವಿ ಬೆಳಗೆರೆಯನ್ನು ಬಿಟ್ಟು ಬೇರೇನೂ ಓದಲಿಲ್ಲ, ಮಿಕ್ಕ ಕೆಲವರು ರವಿ ಬೆಳಗೆರೆಯ ಪುಸ್ತಕಗಳನ್ನು ಮುಂದಿನ ಹಂತದ ಓದಿಗೆ ಮೆಟ್ಟಿಲಾಗಿಸಿಕೊಂಡರು. ಹಾಗೇ ನೋಡಿದರೆ ನನ್ನ ಮೊದಲ ಓದು ಪ್ರಾರಂಭವಾಗಿದ್ದು ಪತ್ತೇದಾರಿ ಪಾಕ್ಷಿಕ ಪತ್ರಿಕೆಗಳಿಂದ. ಅನಂತರಾವ್, ಪ್ರಕಾಶ್ (ನನ್ನ ಗೆಳೆಯನ ತಂದೆಯಿವರು) ಕತೆಗಳು ಓದುವ ಅಭ್ಯಾಸವನ್ನು ಶುರುಮಾಡಿಸಿದ್ದು, ನರಸಿಂಹಯ್ಯನವರ ಕತೆಗಳು ಅದನ್ನು ಮತ್ತಷ್ಟು ಬೆಳೆಸಿತು.

ರವಿ ಬೆಳಗೆರೆಯನ್ನು ಮೊದಲು ನೋಡಿದ್ದು ಮಂಡ್ಯದ ಕಾರ್ಯಕ್ರಮದಲ್ಲಿ. ಕಾರ್ಯಕ್ರಮದ ವಿವರಗಳು ನೆನಪಿನಿಂದ ಮರೆಯಾಗಿವೆ. ಅವರದೊಂದು ಭಾಷಣವಿತ್ತು. ಭಾಷಣ ಮುಗಿಸಿದ ನಂತರ ಹೋಗಿ ನಮಸ್ಕರಿಸಿದೆ. ಪ್ರತಿ ವಂದಿಸಿದರು. ಇನ್ನೊಬ್ಬ ಹುಡುಗ 'ಸಾರ್ ನಾನು ನಿಮ್ಮ ಬಾಟಮ್ ಐಟಮ್ ತರಾನೇ ಹಲವಾರು ಲೇಖನ ಬರ್ದಿದ್ದೀನಿ' ಎಂದ. 'ಸರಿ. ಕಳಿಸಪ್ಪ. ಓದ್ತೀನಿ' ಎಂದವರು ಒಂದು ಸಿಗರೇಟ್ ಹಚ್ಚಿಕೊಂಡು ಕಾರತ್ತಿ ಹೊರಟು ಹೋದರು. ಅದಾದ ಮೇಲೆ ಇನ್ನೊಂದು ಸಲ ಅವರನ್ನು ಭೇಟಿಯಾಗಿದ್ದು ಬೆಂಗಳೂರಿನ ಅವರ ಆಫೀಸಿನಲ್ಲಿ. ಶಾಸಕರ ಭವನಕ್ಕೆ (?) ಹುಸಿ ಬಾಂಬ್ ಇಟ್ಟು ಗಿರೀಶ್ ಮಟ್ಟೆಣ್ಣನವರ್ ಬಂಧಿತರಾಗಿ, ಜಾಮೀನಿನ ಮೇಲೆ ಹೊರಬಂದಿದ್ದರು. ಗಿರೀಶ್ ಮಟ್ಟೆಣ್ಣನವರ ಮುಖಂಡತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ 'ನಮ್ಮಿಂದ' ಅನ್ನೋ ಸಂಘಟನೆ ಮಾಡೋಣ. ನೀವೆಲ್ಲರೂ ಬನ್ನಿ ಎಂಬ ಆಹ್ವಾನವಿತ್ತಿದ್ದಳು ಕಪ್ಪು ಸುಂದರಿ. ಸರಿ ಮೈಸೂರಿನಿಂದ ಬೆಳಿಗ್ಗೆ ಮೈಸೂರು ಮಲ್ಲಿಗೆ 180 ಬಸ್ಸಿಡಿದು ನಾಯಂಡನಹಳ್ಳಿಯಲ್ಲಿ ಇಳಿದುಕೊಂಡು ರಿಂಗ್ ರೋಡಿನಲ್ಲಿ ಬಿ.ಎಂ.ಟಿ.ಸಿ ಬಸ್ ಹತ್ತಿ ದೇವೇಗೌಡ ಪೆಟ್ರೋಲ್ ಬಂಕಿನ ಬಳಿ ಇಳಿದು ಹಾಯ್ ಬೆಂಗಳೂರ್ ಆಫೀಸಿನ ಕಡೆಗೆ ಪಾದ ಬೆಳೆಸಿದ್ದೆ. ಆಫೀಸಿನ ಟೆರೇಸಿನಲ್ಲೇ ಕಾರ್ಯಕ್ರಮವಿತ್ತು. ನೂರಿನ್ನೂರು ಜನಕ್ಕಿಂತ ಹೆಚ್ಚಿನವರು ಬಂದಿದ್ದರಲ್ಲಿ. ದೂರದೂರಿನ ಊರಿನಿಂದಲೂ ಜನರು ಬಂದಿದ್ದರು. ಕಾರ್ಯಕ್ರಮ ಮುಗಿಯಿತು. ಒಂದಷ್ಟು ಕನಸುಗಳೊಂದಿಗೆ ಮೈಸೂರಿಗೆ ವಾಪಸ್ಸಾದಾಗ ರಾತ್ರಿ ಹನ್ನೆರಡರ ಮೇಲಾಗಿತ್ತು. 'ನಮ್ಮಿಂದ' ತಂಡ ಒಂದೆರಡು ಕಾರ್ಯಕ್ರಮಗಳನ್ನು ಮಾಡಿತು. ಅಷ್ಟರಲ್ಲಿ ಗಿರೀಶ್ ಮಟ್ಟೆಣ್ಣನವರ್ ಬಿಜೆಪಿ ಸೇರಿದರು. 

ಗೆಳೆಯ ಅವಿಯ ಸ್ನೇಹಿತ, ನಂತರದಲ್ಲಿ ನನಗೂ ಪರಿಚಿತನಾದ ಈಶ ಆಕಸ್ಮಿಕವಾಗಿ ಹಾಯ್ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿಕೊಂಡ. ಹಾಯ್ ಬೆಂಗಳೂರಿನ ಅಂತರಂಗ, ರವಿ ಬೆಳಗೆರೆಯ ಖಾಸಗಿ ಬದುಕಿನ ನಿಜ ಪರಿಚಯವಾದದ್ದು ಅವನಿಂದ. ಒಂದಷ್ಟು ಬೇಸರವಾಯಿತು. ಬರೆಯೋದಕ್ಕೂ ಬದುಕೋದಕ್ಕೂ ಸ್ವಲ್ಪವೂ ಸಂಬಂಧವಿಲ್ಲದೇ ಇರುವುದು ಸಾಧ್ಯವಾ ಎಂದು ಅಚ್ಚರಿಯಾಯಿತು. ಈಗೇನು ಅಚ್ಚರಿಯಾಗುವುದಿಲ್ಲ. ರಾಮ ಮಂದಿರದ ಬಗ್ಗೆ, ರಾಮನ ಏಕಪತ್ನೀವೃತದ ಬಗ್ಗೆ ಪುಟಗಟ್ಟಲೆ ಬರೆಯುವ ಹನುಮ ಭಕ್ತರು ನಿಜಜೀವನದಲ್ಲಿ ಕೃಷ್ಣನನ್ನೂ ಮೀರಿಸುವಂತಿದ್ದಾರೆ, ಪ್ರಗತಿಪರ - ವೈಚಾರಿಕತೆ, ಸಮಾನತೆ ಬಗ್ಗೆ ಮಾತನಾಡುವ - ಬರೆಯುವ ಮೂಲಕ ಪ್ರಸಿದ್ಧರಾದವರು ಮಹಿಳಾ ಲೇಖಕಿಯರ ಖಾಸಗಿ ಜೀವನದ ಬಗ್ಗೆ ಅನವಶ್ಯಕವಾಗಿ ಚರ್ಚಿಸುವುದನ್ನೆಲ್ಲ ಕೇಳಿದ ಮೇಲೆ ಅಚ್ಚರಿಯಾಗುವುದಿಲ್ಲ! ಅಂದ್ರೂ ತಮ್ಮದೇ ಲೇಖನದ ಐದು ಪರ್ಸೆಂಟಿನಷ್ಟಾದರೂ ತಮ್ಮದೇ ಜೀವನದಲ್ಲಿ ಅಳವಡಿಸಿಕೊಳ್ಳದೇ ಇರುವುದಾದರೂ ಹೇಗೆ ಎನ್ನುವುದು ನನಗಿನ್ನೂ ಗೊತ್ತಾಗಿಲ್ಲ!

ರವಿ ಬೆಳಗೆರೆಯನ್ನು ಆರಾಧ್ಯ ದೈವವನ್ನಾಗಿಸಿಕೊಂಡಿದ್ದ ನನ್ನ ಕೆಲವು ಮಿತ್ರರು ‍ರವಿ ಬೆಳಗೆರೆಯ ಖಾಸಗಿ ಬದುಕಿನ ರೀತಿಯನ್ನು ಕೇಳಿದ ಮೇಲೆ ಹಾಯ್ ಬೆಂಗಳೂರ್, ರವಿ ಬೆಳಗೆರೆಯ ಬರಹಗಳನ್ನು ಓದುವುದನ್ನೇ ನಿಲ್ಲಿಸಿಬಿಟ್ಟರು. ರವಿ ಬೆಳಗೆರೆಯ ಜೊತೆಗೆ ಇತರರನ್ನೂ ಓದಿಕೊಳ್ಳುತ್ತಿದ್ದ ನನಗೆ ಹಾಯ್ ಬೆಂಗಳೂರಿನ ಓದನ್ನು ನಿಲ್ಲಿಸಬೇಕೆಂದೆನಿಸಲಿಲ್ಲ. ರೋಚಕ ವರದಿಯ ಪುಟಗಳ ಮೇಲೆ ಬೆರಳ ಗುರುತು ಮೂಡುವುದು ಕಡಿಮೆಯಾಗುತ್ತ ಹೋಯಿತು. ಮೇಲೆ ಹೇಳಿದ ವಿವಿಧ ಅಂಕಣಕಾರರ ಲೇಖನಗಳು ಪತ್ರಿಕೆಯನ್ನು ತೆಗೆದುಕೊಳ್ಳುವಂತೆ ಪುಸಲಾಯಿಸುತ್ತಿತ್ತು. ಖಾಸ್ ಬಾತ್, ಬಾಟಮ್ ಐಟಮ್ ಅದರ ಏಕತಾನತೆ, ಹೆಚ್ಚೇ ಆಗುತ್ತಿದ್ದ ಆತ್ಮರತಿಯಿಂದ ಬೇಸರಮೂಡಿಸುತ್ತಿತ್ತಾದರೂ ಹಲೋ ಮೆಚ್ಚುಗೆಯಾಗುತ್ತಿತ್ತು. ನಂತರದ ದಿನಗಳಲ್ಲಿ ಬಂದ ಓ ಮನಸೇಯನ್ನು ಕೊಂಡು ಓದುತ್ತಿದ್ದೆ. ನನ್ನ ಮೊದಲ ಹನಿಗವನ, ಒಂದು ಕತೆ, ಒಂದೆರಡು ಲೇಖನಗಳು ಪ್ರಕಟವಾಗಿತ್ತು ಓ ಮನಸೇ ಪಾಕ್ಷಿಕದಲ್ಲಿ. ಹಾಯ್ ಬೆಂಗಳೂರಿನಲ್ಲಿ ಸಾಕೇತ್ ರಾಜನ್ ಬಗ್ಗೆ ಬರೆದ ಪುಟ್ಟ ಬರಹವೊಂದಕ್ಕೆ ಚಂದ್ರಶೇಖರ ಆಲೂರರ 'ಅಮೆರಿಕಾದಲ್ಲಿ ಆಲೂರು' ಸಂಭಾವನೆಯ ರೂಪದಲ್ಲಿ ಸಿಕ್ಕಿತ್ತು. ಕತೆ ಲೇಖನಗಳಿಗೂ ತಪ್ಪದೇ ದುಡ್ಡು ಕಳುಹಿಸುತ್ತಿದ್ದರು. ಮೈಸೂರಿನ ಓದು ನಂತರ ಗುಲ್ಬರ್ಗಾಗೆ ಹೋದ ನಂತರವೂ ಮುಂದುವರೆಯಿತು. ಓದುವ ಪುಟಗಳು ಕಡಿಮೆಯಾಗುತ್ತಿತ್ತಷ್ಟೇ. ಗುಲ್ಬರ್ಗಾದಿಂದ ಸುಳ್ಯಕ್ಕೆ ಬಂದ ಮೇಲೆ ಓದಿನ ಹರಿವು ಬೇರೆಡೆ ಹೋದ ಕಾರಣಕ್ಕೋ, ಪತ್ರಿಕೆಯ ಬರಹಗಳು ರುಚಿಸಲು ನಿಲ್ಲಿಸಿದ ಕಾರಣಕ್ಕೋ ಓದು ಅಪರೂಪವಾಯಿತು. ಬೆಂಗಳೂರಿಗೆ ಬಂದ ಮೇಲಂತೂ ಹೆಚ್ಚು ಕಮ್ಮಿ ನಿಂತೇ ಹೋಯಿತು. ವರ್ಷಕ್ಕೊಮ್ಮೆ ಪತ್ರಿಕೆ ಕೊಂಡರದು ಹೆಚ್ಚು ಅಷ್ಟೇ. ಅವರ ಕ್ರೈಂ ಡೈರಿ ಕೂಡ ಯಶ ಕಂಡಿತ್ತು. ಆದರೇನೋ ಮಲಗುವ ಹೊತ್ತಿನಲ್ಲಿ ಅಪರಾಧ ಜಗತ್ತನ್ನು ಆಸ್ವಾದಿಸುವ ಮನಸ್ಥಿತಿ ನನಗಿರಲಿಲ್ಲ! ಬರಹಗಾರ ರವಿ ಬೆಳಗೆರೆ ಇಷ್ಟವಾದಷ್ಟು ಅವರ ಮಾತುಗಳಿದ್ದ ಓ ಮನಸೇ ಸಿಡಿಗಳಾಗಲೀ, ಟಿವಿಗೆ ಬಂದ ರವಿ ಬೆಳಗೆರೆಯಾಗಲೀ ಇಷ್ಟವಾಗಲಿಲ್ಲ.

ನಂತರದ ದಿನಗಳಲ್ಲಿ ರವಿ ಬೆಳಗೆರೆ ತಮ್ಮ ಎರಡನೆ ಹೆಂಡತಿ ಬಗ್ಗೆ, ಮತ್ತೊಬ್ಬ ಮಗನ ಬಗ್ಗೆ ಬರೆದುಕೊಳ್ಳುತ್ತಿದ್ದರಂತೆ. ನಾನೋದುವುದು ನಿಂತು ಹೋಗಿತ್ತು, ಅವರ ಖಾಸಗಿ ಜೀವನದ ಬಗ್ಗೆ ಆಸಕ್ತಿಯೂ ಇರಲಿಲ್ಲ. ಕುಡಿತ ಬಿಟ್ಟಿದ್ದೇನೆಂದು ತಮ್ಮ ಖಾಸ್ ಬಾತ್‍‍ನಲ್ಲಿ ಪದೇ ಪದೇ ಅವರು ಬರೆದುಕೊಳ್ಳುತ್ತಿದ್ದರಾದರೂ ಬಿಟ್ಟಿರಲಿಲ್ಲ. ಅನಾರೋಗ್ಯ ಪೀಡಿತರಾಗಿದ್ದರು. ದೇಹ ಸೊರಗಿತ್ತು. ಬದುಕುವುದೇ ಇಲ್ಲ ಎನ್ನುವ ಹಂತದಿಂದ ಅದೆಂಗೋ ಮತ್ತೆ ಪುಟಿದೆದ್ದು ಬರುತ್ತಿದ್ದರು. ಆಸ್ಪತ್ರೆಯಲ್ಲಿ ಸಿಗರೇಟ್ ಬೇಕು ಎಂದು ವರಾತ ತೆಗೆಯುತ್ತಿದ್ದರಂತೆ! ಈಗ ಜೊತೆಯಲ್ಲೇ ಕೆಲಸ ಮಾಡುತ್ತಿದ್ದ ಸುನಿಲ್ ಹೆಗ್ಗರವಳ್ಳಿಯೆಂಬ ಪತ್ರಕರ್ತನ ಹತ್ಯೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ರವಿ ಬೆಳಗೆರೆಯ ಬಂಧನವಾಗಿದೆ. 

ಸಾಮಾಜಿಕ ಜಾಲತಾಣಗಳಲ್ಲಿ ರವಿ ಬೆಳಗೆರೆಯನ್ನು ಹೀನಾಮಾನ ಬಯ್ಯಲಾಗುತ್ತಿದೆ. ಲಂಕೇಶರನ್ನು ಅವರು ಹೇಗೆಲ್ಲ ಹೀಯಾಳಿಸಿದರು ಎನ್ನುವುದನ್ನು ಮತ್ತೆ ಮತ್ತೆ ನೆನಪಿಸಿಕೊಂಡು ರವಿ ಬೆಳಗೆರೆಗೆ ಬಯ್ಯುತ್ತಿದ್ದಾರೆ. ನಾನಂತೂ ಲಂಕೇಶರ ಮೂಲಕ ಓದು ಪ್ರಾರಂಭಿಸಿದವನಲ್ಲ. ನಾನು ಟ್ಯಾಬ್ಲಾಯ್ಡ್ ಕೈಗೆತ್ತಿಕೊಳ್ಳುವ ವೇಳೆಗೆ ಲಂಕೇಶ್ ಪತ್ರಿಕೆ ತನ್ನ ಖ್ಯಾತಿಯನ್ನು ಕಳೆದುಕೊಂಡಿತ್ತು. ಲಂಕೇಶರ ಬಗ್ಗೆ ರವಿ ಬೆಳಗೆರೆಯ ಹೀಯಾಳಿಕೆಯ ಮಾತುಗಳು ಆಗೀಗ ಖಾಸ್ ಬಾತ್ ನಲ್ಲಿ ಕಾಣಿಸುತ್ತಿದ್ದಿದ್ದು ಹೌದಾದರೂ ಅದೇ ಲಂಕೇಶರ ಬಗ್ಗೆ ಹೊಗಳಿಯೂ ಬರೆಯುತ್ತಿದ್ದರು, ಅವರ ಪುಸ್ತಕಗಳ ಬಗ್ಗೆಯೂ ಬರೆಯುತ್ತಿದ್ದರು. ಲಂಕೇಶರ ಪುಸ್ತಕಗಳನ್ನು ನಾನು ಓದುವುದಕ್ಕೂ ಹಾಯ್ ಬೆಂಗಳೂರೇ ಕಾರಣ! ನನ್ನನ್ನು, ನನ್ನ ಹಲವು ಗೆಳೆಯರನ್ನು ಓದಲು ಹಚ್ಚಿದ, ಮತ್ತಷ್ಟು ಮಗದಷ್ಟು ಓದುವಂತೆ ಪ್ರೇರೇಪಿಸಿದವರಲ್ಲಿ ರವಿ ಬೆಳಗೆರೆ ಪ್ರಮುಖರು. ಅದಕ್ಕಾಗಿ ಅವರಿಗೆ ಕೃತಜ್ಞ. ರವಿ ಬೆಳಗೆರೆಯ ಪುಸ್ತಕಗಳಿಗಷ್ಟೇ ಸೀಮಿತನಾಗದೆ ಅನ್ಯದೇಶದ ಪುಸ್ತಕಗಳನ್ನೂ ಓದುವಂತೆ ತನ್ನಲ್ಲಿ ಬರುತ್ತಿದ್ದ ಅಂಕಣಗಳ ಮೂಲಕ ನನಗೆ ಸಹಾಯ ಮಾಡಿದ ಹಾಯ್ ಬೆಂಗಳೂರ್ ಪತ್ರಿಕೆಗೂ ನಾನು ಕೃತಜ್ಞ. ಈಗಿರುವ ಆರೋಪದ ಕಾರಣಕ್ಕೆ ಅವರನ್ನು ಮನಸೋ ಇಚ್ಛೆ ಟೀಕಿಸುವುದಕ್ಕೆ ನನ್ನ ಮನಸ್ಯಾಕೋ ಒಪ್ಪದು. ಈ ಆರೋಪ ಟೀಕಾರ್ಹವೇ, ಅದರಲ್ಲೇನೂ ಅನುಮಾನವಿಲ್ಲ. ಹಾಯ್ ಬೆಂಗಳೂರಿನ ರೋಚಕತೆಯನ್ನು ನೆಪವಾಗಿಟ್ಟುಕೊಂಡು ಟೀಕಿಸುವವರೂ ಕೂಡ ಅದೇ ರೀತಿಯ ರೋಚಕತೆಯ ಪದಗಳ ತೆಕ್ಕೆಗೆ ಬೀಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ? ಆರೋಪ ನಿಜವಾಗಿದ್ದರೆ ಕಾನೂನಿನ ಪ್ರಕಾರ ಅವರಿಗೆ ಶಿಕ್ಷೆಯಾಗಲಿ, ಆರೋಪ ಸುಳ್ಳಾಗಿದ್ದರೆ ಅದೇ ಕಾನೂನಿನ ಪ್ರಕಾರವೇ ಅವರಿಗೆ ಬಿಡುಗಡೆಯಾಗಲಿ ಅಷ್ಟೆ. 

ಅಚ್ಚರಿಯ ವಿಷಯವೆಂದರೆ ನಮ್ಮ ದೃಶ್ಯ ಮಾಧ್ಯಮಗಳು ಈ ಸುದ್ದಿಗೆ ಕೊಡುತ್ತಿರುವ ಅತಿಯಾದ ಪ್ರಾಮುಖ್ಯತೆ ಅಚ್ಚರಿ ತರಿಸುತ್ತಿದೆ! ಅಫ್ ಕೋರ್ಸ್ ಇದು ಸುದ್ದಿಯಾಗಬೇಕಾದ ಸುದ್ದಿಯೇನೋ ಹೌದು. ಹೆಸರು ಮಾಡಿದ ಪತ್ರಕರ್ತ, ಬರಹಗಾರನ ಮೇಲೆ ಈ ರೀತಿಯ ಆರೋಪ ಬಂದಿರುವಾಗ ಸಹಜವಾಗಿ ದೃಶ್ಯ ಮಾಧ್ಯಮಗಳು ಅದನ್ನು ಪ್ರಸಾರ ಮಾಡಲೇಬೇಕು. ಜೊತೆಗೆ ಸುದ್ದಿಯನ್ನು ರಂಜನೀಯವಾಗಿಸಲು ಇಲ್ಲಿ ಎರಡನೇ ಹೆಂಡತಿ, 'ಅಕ್ರಮ' ಸಂಬಂಧ ಮುಂತಾದ ರೋಚಕೀಯತೆಯಿದೆ. ರವಿ ಬೆಳಗೆರೆಯ ರೋಚಕ ವರದಿಗಳನ್ನು ಟೀಕಿಸುತ್ತಾ ರವಿ ಬೆಳಗೆರೆಯ ಸುದ್ದಿಯನ್ನು ರೋಚಕವಾಗಿಸಲಾಗುತ್ತಿದೆ! ಕೆಲವು ವರುಷಗಳ ಹಿಂದೆ ಆರ್.ಬಿ, ವಿ.ಭಟ್ ಹೆಸರಿನ ಪತ್ರಕರ್ತರಿಗೆ ಗಣಿ ಧಣಿಗಳಿಂದ ಹತ್ತು ಲಕ್ಷ ಕಪ್ಪ ತಲುಪಿರುವ ಬಗ್ಗೆ ಲೋಕಾಯುಕ್ತ ವರದಿಯಲ್ಲಿ ಪ್ರಸ್ತಾಪವಾಗಿತ್ತು. ಆ ಪ್ರಕರಣವನ್ನು ಆಗಿದ್ದ ಯಾವುದಾದರೂ ದೃಶ್ಯ ಮಾಧ್ಯಮ ದಿನವಿಡೀ ಚರ್ಚೆಯ ವಿಷಯವಾಗಿಸಿದ್ದು ನಿಮ್ಮಲ್ಯಾರಿಗಾದರೂ ನೆನಪಿದೆಯೇ? 

ರವಿ ಬೆಳಗೆರೆಯ ಬಂಧನದ ಸುದ್ದಿಯನ್ನೋದಿದ ನಂತರ ಇಷ್ಟೆಲ್ಲ ನೆನಪಾಯಿತು.

No comments:

Post a Comment