Nov 14, 2017

ಮತಾಂದರುಗಳನ್ನು ಇಲ್ಲಿಗೆ ಕರೆತನ್ನಿ

ಕು.ಸ.ಮಧುಸೂದನರಂಗೇನಹಳ್ಳಿ
ಒಮ್ಮೆಯಾದರು ಅಲ್ಲಿಗೆ ನಮ್ಮ ಎಲ್ಲ ಧರ್ಮಗಳ ಮತಾಂದರನ್ನು ಕರೆದುಕೊಂಡು ಹೋಗಬೇಕು ಅನಿಸುತ್ತಿದೆ.

ಅದು ಅಷ್ಟೇನೂ ಪ್ರಸಿದ್ದವಲ್ಲದ, ರಾಜ್ಯದ ಭೂಪಟದಲ್ಲಿ ಅಧಿಕೃತವಾಗಿ ಗುರುತಿಸಿಕೊಳ್ಳದ ಪುಟ್ಟ ಊರು! ಹೆಸರು ಹಣೆಗೆರೆ ಕಟ್ಟೆ-ನೀವು ಶಿವಮೊಗ್ಗದಿಂದ ಆಯನೂರಿಗೆ ಹೋಗಿ ಅಲ್ಲಿಂದ ಎಡಕ್ಕೆ ತಿರುಗಿ ಕಾಡಿನೊಳಗೆ ಇಪ್ಪತ್ತು ಕಿಲೊಮೀಟರ್ ಪ್ರಯಾಣ ಮಾಡಿದರೆ ಆ ಊರುಸಿಗುತ್ತದೆ. ಊರಪ್ರವೇಶದಿಂದಲೇ ರಸ್ತೆಯ ಬಲ ಬದಿಯಲ್ಲಿ ಹೂವು, ಹಣ್ಣು,ಕಾಯಿ,
ಊದುಬತ್ತಿ,ಕರ್ಪೂರ ನಿಂಬೆಹಣ್ಣು, ಸಕ್ಕರೆ ಖರ್ಜೂರ, ಉತ್ತುತ್ತೆ, ಬಣ್ಣದ ಚಾದರುಗಳನ್ನು ಮಾರುವ ಅಂಗಡಿಗಳ ಸಾಲು ಕಾಣುತ್ತದೆ.ಮತ್ತು ರಸ್ತೆಯ ಎಡಕ್ಕೆ ನೋಡಿದರೆ ಒಂದು ಮಸೀದಿ(ತೀರಾ ಇತ್ತೀಚೆನದು),ಅದರ ಪಕ್ಕದಲ್ಲಿ ದರ್ಗಾವೊಂದು ಕಾಣುತ್ತದೆ. ಮಸೀದಿಯ ಅಂಗಳ ದಾಟಿ ಎರಡು ಹೆಜ್ಜೆ ನಡೆದರೆ ಸಿಗುವ ದರ್ಗಾದ ಮೇಲ್ಚಾವಣಿಯನ್ನೂ ಸೀಳಿ ಬೆಳೆದು ನಿಂತ ಎರಡು ಮರಗಳು ಕಾಣುತ್ತವೆ. ಒಳಗೆ ಪ್ರವೇಶಿಸಿದರೆ ಎದುರಾಬದುರು ಇರುವ ಆ ಎರಡು ಮರಗಳಿಗೆ ಅರಿಶಿನ ಕುಂಕುಮ ಹಚ್ಚಿಕೊಂಡಿರುವ ನೂರಾರು ತ್ರಿಶೂಲಗಳನ್ನು ನೋಡಬಹುದು. ಅದರಲ್ಲಿ ಒಂದುಮರದಲ್ಲಿ ಭೂತಪ್ಪ ವಾಸಿಸುತ್ತಿದ್ದು, ಇನ್ನೊಂದರಲ್ಲಿ ಚೌಡೇಶ್ವರಿ ವಾಸಿಸುತ್ತಿದ್ದಾಳೆಂಬ ನಂಬಿಕೆ ಇದೆ. ಈ ಎರಡೂ ದೇವರುಗಳ ಪಕ್ಕವೇ ಚಾದರ್ ಹೊದ್ದು ಮಲಗಿರುವ ಸಂತನ ಸಮಾದಿಯೊಂದಿದೆ ಇಲ್ಲಿ ಪೂಜಾರಿಗಳೆಂಬುವವರು ಯಾರೂ ಇರುವುದಿಲ್ಲ. ಬಂದ ಭಕ್ತರೆ ಪೂಜೆ ಮಾಡಬಹುದಾಗಿದೆ ಈ ಸ್ಥಳಕ್ಕೆ ದಿನನಿತ್ಯ ಸಾವಿರಾರು ಜನ ಭಕ್ತರು ಬರುತ್ತಾರೆ. ತಮ್ಮ ಅಸಂಖ್ಯಾತ ಕಷ್ಟಕೋಟಲೆಗಳ ನಿವಾರಣೆಗೆ ಹರಕೆ ಸಲ್ಲಿಸಿ ಪೂಜಿಸುತ್ತಾರೆ. ವಿಶೇಷವೆಂದರೆ ಹಿಂದೂಗಳು ಮತ್ತು ಮುಸ್ಲಿಮರು ಸಮಾನ ಸಂಖ್ಯೆಯಲ್ಲಿ ಇಲ್ಲಿಗೆ ಬರುವುದು. ಹಾಗೆ ಬಂದವರು ಎರಡೂ ಕಡೆ ಪೂಜೆ ಸಲ್ಲಿಸುವುದು ಮಾಮೂಲಿಯಾಗಿರುತ್ತದೆ. ಭೂತಪ್ಪ ಮತ್ತು ಚೌಡೇಶ್ವರಿಗೆ ಕಾಯಿ ಒಡೆದು ಕರ್ಪೂರ ಬೆಳಗಿ ಪೂಜೆ ಮಾಡಿದವರು ದಗರ್ಾದ ಮುಂದೆ ಕೂತು ಪ್ರಾರ್ಥಿಸುವುದು ಸಾಮಾನ್ಯ ವಿಷಯ. ನಾನಾ ರೀತಿಯ ಹರಕೆಗಳನ್ನು ಸಲ್ಲಿಸುವ ಇಲ್ಲಿ ಕೋಳಿ ಕೊಯ್ದು, ಕುರಿ ಕಡಿದು ಅಡುಗೆಮಾಡಿ ದೇವರಿಗೆ ನೈವೇದ್ಯ ಮಾಡಿ ತಾವು ಅಲ್ಲಿಯೇ ಊಟ ಮಾಡುವುದು ಕಂಡು ಬರುತ್ತದೆ.

ಈ ಆಚರಣೆಗಳನ್ನು ವಿದ್ಯಾವಂತರುಗಳು ಸುಲಭವಾಗಿ ಮೂಢನಂಬಿಕೆಯೆಂದು ಜರಿದುಬಿಡಬಹುದು. ಆದರೆ ಇಲ್ಲಿ ನನಗೆ ಬಹಳ ಮುಖ್ಯವಾಗಿದ್ದು ಹಿಂದು ಮುಸ್ಲಿಂ ಎರಡೂ ಧರ್ಮದವರು ಒಟ್ಟಿಗೆಒಂದೇ ಜಾಗದಲ್ಲಿ ತಮ್ಮ ಭಕ್ತಿಯನ್ನು ಮೆರೆಯುವುದಾಗಿದೆ. ಭೂತಪ್ಪ, ಚೌಡೇಶ್ವರಿದೇವಿಗೆ ಪೂಜೆ ಮಾಡುವ ಹಿಂದುಗಳು, ಮುಸ್ಲಿಮರು ಸಮಾದಿಯ ಮುಂದೆ ಪ್ರಾರ್ಥಿಸಿ ಹರಕೆಯಿದ್ದರೆ ಚಾದರ್ ನೀಡುವುದು ಮಾಡುತ್ತಾರೆ. ಇಲ್ಲಿಗೆ ಬರುವ ಎರಡೂ ದರ್ಮಗಳವರಲ್ಲಿ ತಾವು ಇಂತಹ ಧರ್ಮದವರೆಂಬ ಅಹಮ್ಮಾಗಲಿ, ಕೀಳರಿಮೆಯಾಗಲಿ ಬೇದಬಾವವನ್ನಾಗಲಿ ನಾನು ನೋಡಲಿಲ್ಲ.ಇನ್ನೂ ಅಚ್ಚರಿಯೆಂದರೆ ಬಹಳಷ್ಟು ಸಾರಿ ಅಕ್ಕಪಕ್ಕದ ಅಥವಾ ಒಂದೇ ಊರಿನ ಎರಡೂ ಧರ್ಮಗಳ ಕುಟುಂಬದವರೂ ಒಟ್ಟಿಗೇ ಬಂದು ಪೂಜೆ ಹರಕೆ ಸಲ್ಲಿಸುವುದು.

ಆಗಾಗ ಇಲ್ಲಿಗೆ ಬೇಟಿ ಕೊಡುವ ನಾನು ಮೊನ್ನೆ ಹೋದಾಗ ಅಲ್ಲಿಗೆ ಒಂದೇ ವಾಹನದಲ್ಲಿ ಒಟ್ಟಿಗೆ ಬಂದಿದ್ದ ಹಿಂದು ಮತ್ತು ಮುಸ್ಲಿಂ ಕುಟುಂಬಗಳನ್ನು ಮಾತಾಡಿಸಿದೆ. ಅದರಲ್ಲಿ ಒಬ್ಬ ನಲವತ್ತು ವರ್ಷದ ಮುಸ್ಲಿಂ ಗಂಡಸನ್ನು ಕೇಳಿದೆ. ಇಲ್ಲಿ ಹೀಗೆ ಬಂದು ನಿಮ್ಮ ದರ್ಗಾದ ಜೊತೆಗೆ ಹಿಂದೂ ದೇವರಿಗೂ ಪೂಜೆ ಸಲ್ಲಿಸುತ್ತೀರಲ್ಲ, ಅದು ನಿಮ್ಮ ಧರ್ಮಕ್ಕೆವಿರುದ್ದವಲ್ಲವೆ? ಅದಕ್ಕೆ ಆತ ಕೊಟ್ಟ ಉತ್ತರ ಮಾತ್ರ ನಿಜಕ್ಕೂ ಅಚ್ಚರಿಯನ್ನುಂಟು ಮಾಡಿತು, “ಸಾರ್, ನಾನು ಎರಡು ಟ್ಯಾಕ್ಸಿಗಳನ್ನು ಇಟ್ಟುಕೊಂಡಿದಿನಿ, ಅವು ಯಾವ ತೊಂದರೆಯು ಇರದೆ ಚೆನ್ನಾಗಿ ನಡೆಯುತ್ತಿರಲೆಂದು ನಾನಿಲ್ಲಿಗೆ ಬರುತ್ತಿರುತ್ತೇನೆ. ನಮ್ಮ ಅಪ್ಪನ ಕಾಲದಿಂದಲೂ ನಾವಿಲ್ಲಿಗೆ ಬಂದು ಹೋಗುವುದನ್ನು ಮಾಡುತ್ತಿದ್ದೇವೆ. ನೀವು ಹೇಳಿದ ಹಾಗೆಯೇ ನಮ್ಮ ಊರಿನಲ್ಲಿ ನಮ್ಮ ಧರ್ಮದ ಕೆಲವು ಮುಖಂಡರು ಹೇಳುತ್ತಲೇ ಇರುತ್ತಾರೆ. ಆದರೂ ನಾವು ಬರುವುದನ್ನು ಬಿಟ್ಟಿಲ್ಲ. ನಮಗೆ ಸಮಾದಾನ, ನೆಮ್ಮದಿ ಕೊಡುವ ಯಾವುದೂ ಧರ್ಮ ವಿರೋಧಿಯಾಗಲು ಸಾದ್ಯವಿಲ್ಲ ಅಂತ ನಮ್ಮಪ್ಪ ಹೇಳ್ತಾ ಇದ್ದ ಸಾರ್”. ನಮ್ಮ ಮಾತನ್ನು ಕೇಳಿಸಿಕೊಳ್ಳುತ್ತ ಪಕ್ಕದಲ್ಲಿ ನಿಂತಿದ್ದ ಅವರ ಜೊತೆ ಬಂದಿದ್ದ ಹಿಂದು ಕುಟುಂಬದ ಮುದುಕಿಯೊಬ್ಬಳು ನನಗೆ, “ಸಾಮಿ ದಾಹವಾರಿಸಿಕೊಳ್ಳೋಕೆ ಗಂಗಾ ನದಿ ನೀರು ಕುಡಿದರೇನು? ನಮ್ಮ ಹಳ್ಳಿಯ ಹಳ್ಳದ ನೀರು ಕುಡಿದರೇನು? ಮನುಷ್ಯನ ಬಾಯಾರಿಕೆ ನೀಗಿದರೆ ಸಾಲ್ದಾ” ಅಂದಳು. ನಮ್ಮ ಅಕ್ಷರಸ್ಥರೂ ನೀಡಲಾಗದಂತಹ ಉತ್ತರಗಳನ್ನು ನೀಡಿದ ಅವರ ಪ್ರಾಮಾಣಿಕ ಶ್ರದ್ದೆ ಮತ್ತು ವಿಶಾಲ ಮನೋಬಾವನೆಯನ್ನು ಕಂಡ ನಾನು ಮತ್ತೇನು ಕೇಳದೆ ಸುಮ್ಮನಾದೆ.

ನೀವು ನಿಜವಾದ ಭಾರತವನ್ನು ಕಾಣಬೇಕೆಂದರೆ ಈಊರಿಗೆ ಬರಬೇಕು. ಇಲ್ಲಿಗೆ ಬರುವುದು ಹಿಂದುಗಳೊ ಮುಸ್ಲಿಮರೊ ಮಾತ್ರವಾಗಿರುವುದಿಲ್ಲ. ಬದಲಿಗೆ ಅಪ್ಪಟ ಮನುಷ್ಯರಾಗಿರುತ್ತಾರೆ. ಹಾಗಾಗಿಯೇ ನಾನು ಮೊದಲಿಗೆ ಹೇಳಿದ್ದು ನಮ್ಮ ದೇಶದ ಮತಾಂಧರನ್ನು ಒಮ್ಮೆಯಾದರೂ ಇಲ್ಲಿಗೆ ಕರೆತಂದು ತೋರಿಸಬೇಕು ಮತ್ತು ಕೇಳಬೇಕು ಧರ್ಮ ಎಂದರೇನೆಂದು?

ಭಾರತ ಮನುಷ್ಯರ ದೇಶವಾಗಿಯೇ ಉಳಿಯಬೇಕಾದರೆ ಇಂತಹ ಹಲವುಶ್ರದ್ದಾಕೇಂದ್ರಗಳು ಮತ್ತು ಇಲ್ಲಿಗೆ ಬರುವ ಕೋಟ್ಯಾಂತರ ಸಾಮಾನ್ಯ ಜನರುಗಳೇ ಕಾರಣವೆನಿಸಿತು. ಯಾಕೆಂದರೆ ಇಲ್ಲಿಗೆ ಬರುವ ಯಾರೂ ಕೋಮುವಾದದ ಮತ್ತು ಜಾತ್ಯಾತೀತೆಯ ಬಗ್ಗೆ ಚರ್ಚಿಸುವ, ಬರೆಯುವ ಪಂಡಿತರುಗಳ ಪೋಸುಗಳನ್ನು ಕೊಡುವವರಲ್ಲ!

ಚಿತ್ರಗಳು: ಲೇಖಕರದ್ದು. 

No comments:

Post a Comment