Jul 31, 2017

ಬಾಜಪದ ಬಾಹುಗಳಿಗೆ ಮರಳಿದ ನಿತೀಶ್ ಕುಮಾರ್

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನಿತೀಶ್ ಕುಮಾರ್ ದಿಡೀರ್ ರಾಜೀನಾಮೆ! 

ಮಹಾಘಟಬಂದನ್ ಮುರಿದುಕೊಂಡ ನಿತೀಶ್! 

ಇಂತಹ ತಲೆಬರಹಗಳು ಆದಷ್ಟು ಬೇಗ ಬಂದರೆ ಅಚ್ಚರಿಯೇನಿಲ್ಲ ಎಂದು ಕೇವಲ ಒಂದು ತಿಂಗಳ ಹಿಂದೆಯಷ್ಟೇ ನಾನು ಬರೆದಿದ್ದೆ. ಅದೀಗ ನಿಜವಾಗಿದೆ. ರಾಷ್ಟ್ರೀಯ ಜನತಾದಳದ ನಾಯಕ ಶ್ರೀ ಲಾಲೂ ಪ್ರಸಾದ್ ಯಾದವರ ಪುತ್ರರೂ, ಬಿಹಾರ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿರುವ ತೇಜಸ್ವಿಯಾದವರ ಮೇಲಿನ ಭ್ರಷ್ಟಾಚಾರ ಆರೋಪಗಳನ್ನು ನೆಪಮಾಡಿಕೊಂಡ ನಿತೀಶ್ ಬುದವಾರ ಸಂಜೆ ರಾಜಿನಾಮೆ ನೀಡಿದ್ದಾರೆ. ಮತ್ತು ನಾವು ನಿರೀಕ್ಷಿಸಿದಂತೆಯೇ ಬಾಜಪದ ಜೊತೆ ಸೇರಿ ಇಪ್ಪತ್ನಾಲ್ಕು ಗಂಟೆಯ ಒಳಗೆಯೇ ಮತ್ತೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. 

ನಿತೀಶರ್ ಈ ಕ್ರಮದ ಹಿಂದಿರುವುದು ತೇಜಸ್ವಿ ಯಾದವರ ಮೇಲಿನ ಆರೋಪಗಳಷ್ಟೇ ಕಾರಣವೇನಲ್ಲ. ಬದಲಿಗೆ ಮೈತ್ರಿ ಮುರಿದುಕೊಳ್ಳಲು ವರ್ಷದ ಹಿಂದೆಯೇ ನಿರ್ದರಿಸಿದ್ದ ನಿತೀಶರ ನಡೆಯ ಹಿಂದೆ ಅವರ ಮತ್ತು ಬಾಜಪದ ದೀರ್ಘಕಾಲೀನ ಪಿತೂರಿಯೊಂದಿದೆ. ಅದನ್ನೀಗ ನಾವು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. 

2014 ಲೋಕಸಭಾ ಚುನಾವಣೆಯ ಹೊತ್ತಿಗೆ ನಿತೀಶ್ ಕುಮಾರ್ ಬಾಜಪದ ನರೇಂದ್ರ ಮೋದಿಯವರ ಪ್ರದಾನಮಂತ್ರಿ ಉಮೇದುವಾರಿಕೆಯನ್ನು ಕಟುವಾಗಿ ಟೀಕಿಸಿ ಅದರೊಂದಿಗಿನ ಮೈತ್ರಿ ಮುರಿದುಕೊಂಡು ಹೊರಬಂದಿದ್ದರು. ಅವತ್ತಿಗೂ ಲಾಲೂ ಪ್ರಸಾದರ ಮೇಲೆ ಭ್ರಷ್ಟಾಚಾರದ ಆರೋಪಗಳಿದ್ದವು ಮತ್ತು ಅವರ ಕುಟುಂಬದ ಸದಸ್ಯರುಗಳ ಹೆಸರಲ್ಲಿ ನೂರಾರು ಕೋಟಿಯ ಬೇನಾಮಿ ಆಸ್ತಿಯನ್ನು ಹೊಂದಿರುವ ಆರೋಪಗಳು ಎಲ್ಲರಿಗು ಗೊತ್ತಿದ್ದ ರಹಸ್ಯವೇ ಆಗಿತ್ತು. ಆದರೆ ಅವತ್ತು ಬಾಜಪದ ಮೈತ್ರಿ ಕಡಿದುಕೊಂಡು ಹೊರಬಂದ ನಿತೀಶರಿಗೆ ಮತ್ತೆ ತಾನು ಬಿಹಾರದ ಮುಖ್ಯಮಂತ್ರಿ ಆಗಲು ಹೊಸದೊಂದು ಮೈತ್ರಿಯ ಅಗತ್ಯವಿತ್ತು. ಜೊತೆಗೆ ಅದಾಗಲೇ ನಿತೀಶರ ಪ್ರಾಮಾಣಿಕತೆಯ ಬಗ್ಗೆ ರಾಷ್ಟ್ರವ್ಯಾಪಿ ಪ್ರಚಾರವಾಗಿತ್ತು. ಮಾಧ್ಯಮಗಳು ಸಹ ಬಾಜಪದ ವಿರುದ್ದ ವಿರೋಧಪಕ್ಷಗಳೇನಾದರು ಒಂದಾಗುವುದೇ ಆದರೆ ನಿತೀಶ್ಕುಮಾರರೇ ಅಂತಹ ಮೈತ್ರಿಕೂಟದ ಪ್ರದಾನಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಲು ಪ್ರಾರಂಬಿಸಿದ್ದವು. ಇದರಿಂದ ಉತ್ತೇಜಿತರಾದ ನಿತೀಶ್ ಕಾಂಗ್ರೇಸ್ ಮತ್ತು ರಾಷ್ಟ್ರೀಯಜನತಾದಳದ ಜೊತೆ ಸೇರಿ ಮಹಾಘಟಬಂದನ್ ಒಂದನ್ನುರಚಿಸಿಕೊಂಡು 2015ರ ಚುನಾವಣೆಯಲ್ಲಿ ಬಾರಿ ಬಹುಮತದೊಂದಿಗೆ ಮತ್ತೆ ಬಿಹಾರದ ಮುಖ್ಯಮಂತ್ರಿಯಾಗಿದ್ದರು. ಇಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕು. ಒಂದು ಆ ಕ್ಷಣಕ್ಕೆ ಲಾಲೂಪ್ರಸಾದರ ಭ್ರಷ್ಟಾಚಾರ ನಿತೀಶರಿಗೆ ಗೊತ್ತಿದ್ದರೂ, ಅವರಿಗೆ ಮುಖ್ಯಮಂತ್ರಿ ಸ್ಥಾನವೇ ಮುಖ್ಯವಾಗಿತ್ತು. ಇದೊಂದುರೀತಿಯ ಜಾಣ ಮರೆವು! ಇನ್ನು ಎರಡನೆಯದಾಗಿ, ಲಾಲೂಪ್ರಸಾದರವರ ಇಬ್ಬರ ಪುತ್ರರಿಗೆ ಸಂಪುಟದಲ್ಲಿ ಉನ್ನತ ಸ್ಥಾನಮಾನದ ಸಚಿವಗಿರಿಯನ್ನು ನೀಡುವಾಗ ಸಹ ಅವರುಗಳ ಮೇಲಿದ್ದ ಬೇನಾಮಿ ಆಸ್ತಿ ಹೊಂದಿದ್ದ ಆರೋಪ ನಿತೀಶರನ್ನು ಕಾಡಲಿಲ್ಲ. ವ್ಯತ್ಯಾಸವೇನೆಂದರೆಅವತ್ತು ಅವರಿಬ್ಬರ ಮೇಲೆ ಆರೋಪ ಪಟ್ಟಿಯನ್ನಿನ್ನು ಹಾಕಿರಲಿಲ್ಲ ಅಷ್ಟೆ! ಇಷ್ಟಲ್ಲದೆ ಹೇಗಾದರು ಮಾಡಿ ವಿರೋಧಪಕ್ಷಗಳ ಮಹಾಮೈತ್ರಿಕೂಟವೊಂದು ರಚನೆಯಾದರೆ ತಾನದರ ಪ್ರದಾನಮಂತ್ರಿ ಅಭ್ಯರ್ಥಿಯಾಗಬಲ್ಲೆನೆಂಬ ಮಹತ್ವಾಕಾಂಕ್ಷೆಯ ಮುಂದೆ ನಿತೀಶರಿಗೆ ರಾಷ್ಟ್ರೀಯ ಜನತಾದಳದ ಕಳಂಕ ಹೊತ್ತ ನಾಯಕರುಗಳಿಂದ ತಮ್ಮ ಆತ್ಮಸಾಕ್ಷಿಗೆ ಪೆಟ್ಟಾಗಿದೆ ಎಂದೆನಿಸಲಿಲ್ಲ. 

ಆದರೆ ರಾಷ್ಟ್ರೀಯ ನಾಯಕರಾಗುವ ನಿತೀಶರ ಮಹತ್ವಾಕಾಂಕ್ಷೆಯ ಕನಸು ನಿದಾನವಾಗಿ ಕರಗತೊಡಗಿತು, ಯಾಕೆಂದರೆ ಅವರು ಅಂದುಕೊಂಡಂತೆ ದೇಶದ ಹಲವುರಾಜ್ಯಗಳಲ್ಲಿ ಬೇರು ಬಿಟ್ಟಿರುವ ಪ್ರಾದೇಶಿಕ ಪಕ್ಷಗಳು ತಮ್ಮದೇ ಆದ ಕಾರಣಗಳಿಂದಾಗಿ ಮೈತ್ರಿಕೂಟವೊಂದರ ರಚನೆಗೆ ಮುಂದಾಗಲಿಲ್ಲ. ತಮ್ಮತಮ್ಮ ರಾಜ್ಯಗಳಲ್ಲಿ ಜಾತಿ ಆಧಾರಿತ ರಾಜಕಾರಣ ಮಾಡುತ್ತ ಪಾಳೇಗಾರರಂತೆ ಆಗಿ ಹೋಗಿದ್ದ ಪ್ರಾದೇಶಿಕ ನಾಯಕರುಗಳಿಗೆ ತಮ್ಮ ರಾಜ್ಯದೊಳಗೆ ಹೇಗಾದರು ಮಾಡಿ ಅಧಿಕಾರ ಹಿಡಿಯುವದಷ್ಟೆ ಮುಖ್ಯವಾಗಿ ರಾಷ್ಟ್ರೀಯ ಹಿತಾಸಕ್ತಿ ಎನ್ನುವುದು ಹಿಂಬಡ್ತಿ ಪಡೆಯತು. ಹೀಗಾಗಿ ವಿಶಾಲತಳಹದಿಯ ಮೇಲೆ ರಾಷ್ಟ್ರ ಮಟ್ಟದಲ್ಲಿ ಒಂದು ವಿರೋಧಿ ವೇದಿಕೆಯನ್ನು ಸೃಷ್ಠಿಸಿಕೊಳ್ಳುವಲ್ಲಿ ಅವು ವಿಫಲವಾದವು. ಈದಿಸೆಯಲ್ಲಿ ಪ್ರಯತ್ನಿಸಬಹುದಾಗಿದ್ದ ಎಡಪಕ್ಷಗಳಿಗೆ ಪಶ್ಚಿಮ ಬಂಗಾಳದ ಸೋಲನ್ನು ಅರಗಿಸಿಕೊಂಡು ರಾಜಕೀಯ ಮಾಡುವ ನಾಯಕರುಗಳೇ ಇಲ್ಲವಾಗಿದ್ದರು.ಇನ್ನು ಒಂದು ರಾಷ್ಟ್ರೀಯ ಪಕ್ಷವಾಗಿ ಈ ನಿಟ್ಟಿನಲ್ಲಿ ನಾಯಕತ್ವ ವಹಿಸಿಕೊಂಡು ಮೈತ್ರಿಕೂಟವನ್ನುರಚಿಸಲು ಮುಂದಾಗಬಹುದಾಗಿದ್ದ ಕಾಂಗ್ರೇಸ್ಸಿನ ದೊಡ್ಡಣ್ಣನ ಮನೋಬಾವವೇ ಅದಕ್ಕೆ ಅಡ್ಡಿಯಾಯಿತು. ಹೀಗಾಗಿ ಬಾಜಪಕ್ಕೆ ವಿರೋಧವಾಗಿ ಒಂದು ಮಹಾಮೈತ್ರಿಕೂಟ ಸ್ಥಾಪನೆ ಎನ್ನುವುದು ಮಿಥ್ಯೆಯಾಗಿ ಉಳಿಯಿತು. ಬಹುಶ: ಈ ಬೆಳವಣಿಗೆಗಳಿಂದ ಅಪಾರ ನಿರಾಸೆಯಾಗಿದ್ದು ನಿತೀಶ್ ಕುಮಾರ್ ಅವರಿಗೆ. ಯಾಕೆಂದರೆ ಅಂತಹದೊಂದು ಮಹಾಘಟಬಂದನ್ ಏರ್ಪಟ್ಟರೆ ತಮ್ಮನ್ನೇ ಅದರ ಪ್ರದಾನಮಂತ್ರಿಯ ಅಭ್ಯರ್ಥಿಯನ್ನಾಗಿ ವಿರೋಧ ಪಕ್ಷಗಳು ಬಿಂಬಿಸುತ್ತವೆ ಎಂದು ನಂಬಿದ್ದರು. ಇದು ಸಾದ್ಯವಿಲ್ಲವೆಂಬುದನ್ನು ಅರಿತ ನಿತೀಶರಿಗೆ 2019ರ ಚುನಾವಣೆಯಲ್ಲಿ ಬಾಜಪ ಮತ್ತೊಮ್ಮೆ ಬಹುಮತ ಪಡೆಯಬಹುದು ಹಾಗು ನರೇಂದ್ರಮೋದಿಯವರೆ ಅದರ ನಾಯಕರಾಗಿರುತ್ತಾರೆ ಎಂಬುದು ಮನದಟ್ಟಾಗುತ್ತಿದ್ದಂತೆ ತಾವು ಬಿಹಾರದಲ್ಲಿ ಮುಖ್ಯಮಂತ್ರಿಯಾಗಿ ಉಳಿಯಲು ಮುಂದಿನ ಚುನಾವಣೆಯಲ್ಲಿ ಬಾಜಪದ ಜೊತೆ ಹೋಗಬೇಕಾಗುವುದು ಅನಿವಾರ್ಯವಾಗಬಹುದೆಂಬ ಲೆಕ್ಕಾಚಾರಕ್ಕೆ ಬಿದ್ದರು. ದಿನದಿನಕ್ಕೂ ದುರ್ಬಲವಾಗುತ್ತಿರುವ ಕಾಂಗ್ರೇಸ್ ಮತ್ತು ಎಡಬಿಡಂಗಿ ಲಾಲೂ ಪ್ರಸಾದರಿಗಿತ ಎನ್.ಡಿ.ಎ. ಮೈತ್ರಿಯೇ ತಮಗೆ ಫಲದಾಯಕ ಎಂದು ತೀರ್ಮಾನಿಸಿದ ನಿತೀಶ್ ತಮ್ಮ ರಾಜಕೀಯ ನಡೆಗಳನ್ನು ಬದಲಾಯಿಸಿಕೊಳ್ಳ ತೊಡಗಿದರು. 

ಕಳೆದ ಒಂದೂವರೆ ವರ್ಷಗಳಿಂದಲೂ ನಿತೀಶರ ರಾಜಕೀಯ ನಡವಳಿಕೆಗಳು ನಿದಾನವಾಗಿ ಬದಲಾಗತೊಡಗಿದವು. ತಮ್ಮ ಮತ್ತು ನರೇಂದ್ರಮೋದಿಯವರ ನಡುವಿನ ಅಂತರವನ್ನು ಕಡಿಮೆ ಮಾಡಿಕೊಳ್ಳಲು ಪ್ರಯತ್ನಿಸ ತೊಡಗಿದರು. ಇದರ ಮೊದಲ ಭಾಗವಾಗಿಯೇ ಅವರು ಪ್ರದಾನಮಂತ್ರಿಯವರ ನೋಟುಬ್ಯಾನ್ ಕ್ರಮವನ್ನು ಹಿಂದೆಮುಂದೆಯೋಚಿಸದೆ ಸ್ವಾಗತಿಸಿದ್ದರು. ಮಿತ್ರ ಪಕ್ಷಗಳ ಜೊತೆ ಚರ್ಚಿಸಿ ತಮ್ಮ ಪ್ರತಿಕ್ರಿಯೆಯನ್ನು ನೀಡಬೇಕೆಂಬ ಮೈತ್ರಿಧರ್ಮವನ್ನು ಮರೆತು ಏಕಾಏಕಿ ಮೋದಿಯವರ ಕ್ರಮವನ್ನು ಬೆಂಬಲಿಸಿ ತಮ್ಮ ಮುಂದಿನ ದಾರಿಯ ಬಗ್ಗೆ ಮೊದಲ ಸುಳಿವು ನೀಡಿದ್ದರು. ನಂತರ ಪಟ್ನಾ ಉಚ್ಚ ನ್ಯಾಯಾಲಯದ ಕಾರ್ಯಕ್ರಮವೊಂದರಲ್ಲಿ ಬಾಗವಹಿಸಿ ಮೋದಿಯವರ ಜೊತೆ ಸುದೀರ್ಘವಾಗಿ ಖಾಸಗಿಯಾಗಿ ಮಾತನಾಡಿದ್ದ ನಿತೀಶ್ ಮೈತ್ರಿಯಿಂದ ಹೊರಬರಲು ಸಮಯ ಕಾಯತೊಡಗಿದರು. ಗುರುಗೋವಿಂದ್ ಜನ್ಮಶತಾಬ್ದಿಯ ಕಾರ್ಯಕ್ರಮದಲ್ಲಿ ಕೇಂದ್ರ ಸರಕಾರದ ಯೋಜನೆಗಳನ್ನು ಬಾಜಪದವರಿಗಿಂತ ಹೆಚ್ಚು ಹೊಗಳಿ ಮೋದಿಯವರ ಜೊತೆಗೆ ಸ್ನೇಹ ಸಂಪಾದಿಸಲು ಪ್ರಯತ್ನಿಸಿದರು. ಸರ್ಜಿಕಲ್ ಸ್ಟ್ರೈಕ್ ವಿಚಾರದಲ್ಲಿಯೂ ನಿತೀಶ್ ಮೋದಿಯವರ ಪರ ಮಾತಾಡಿದ್ದರು, 

ಇದಾದ ನಂತರ ರಾಷ್ಟ್ರಪತಿ ಹುದ್ದೆಗೆ ಶ್ರೀ ರಾಮನಾಥ್ ಕೋವಿಂದ್ ಅವರನ್ನು ತನ್ನ ಅಭ್ಯರ್ಥಿಯೆಂದು ಬಾಜಪ ಘೋಷಿಸಿದ ತಕ್ಷಣ, ಎನ್.ಡಿ.ಎ. ಅಂಗಪಕ್ಷಗಳಿಗೂ ಮೊದಲೇ ಅವರಿಗೆ ಬೆಂಬಲ ಘೋಷಿಸಿದ್ದು ಇದೇ ನಿತೀಶ್ ಕುಮಾರ್. ಸೌಜನ್ಯಕ್ಕೂ ಮಿತ್ರ ಪಕ್ಷಗಳ ಜೊತೆ ಚರ್ಚಿಸದೆ ವಿರೋಧಪಕ್ಷಗಳಿಂದ ಸರ್ವಸಮ್ಮತ ಉಮೇದುವಾರರೊಬ್ಬರನ್ನು ಕಣಕ್ಕಿಳಿಸುವ ಸದಾವಕಾಶವನ್ನು ನಿತೀಶ್ ಬೇಕೆಂತಲೇ ಹಾಳು ಮಾಡಿದ್ದರು. 

ನಿತೀಶರ ಈ ಯಾವ ನಡವಳಿಕೆಗಳೂ ಆಯಾ ಸಂದರ್ಭಕ್ಕೆ ಅನುಗುಣವಾಗಿ ತೆಗೆದುಕೊಂಡ ನಿರ್ಣಯಗಳಾಗಿರದೆ ಕಳದೆ ಕೆಲ ತಿಗಳುಗಳಿಂದ ಬಾಜಪದ ಜೊತೆಗೆಸಂಪರ್ಕ ಇರಿಸಿಕೊಂಡೇ ಬಹಳಷ್ಟು ರಾಜಕೀಯ ಲೆಕ್ಕಾಚಾರಗಳನ್ನು ಹಾಕಿಯೇ ತೆಗೆದುಕೊಂಡ ನಿರ್ದಾರಗಳಾಗಿದ್ದವು. 

ಬಾಜಪಕ್ಕೂ ಇದು ಬೇಕಾಗಿತ್ತು. ಉತ್ತರಪ್ರದೇಶವನ್ನು ಗೆದ್ದಾದ ಮೇಲೆ ಅದಕ್ಕೆ ಬಿಹಾರವನ್ನೂ ಗೆಲ್ಲಬೇಕೆಂಬ ಆಲೋಚನೆಯಿತ್ತು. ಆದರೆ ವಿರೋಧಪಕ್ಷಗಳ ಮೈತ್ರಿಕೂಟ ಇರುವವರೆಗು ಅದು ಅಸಾದ್ಯದ ಮಾತಾಗಿತ್ತು. ಆದ್ದರಿಂದಲೇ ಅದು ನಿತೀಶರ ಸಂಪರ್ಕದಲ್ಲಿಯೇ ಇದ್ದು ನಿತೀಶ್ ಕುಮಾರ್ ನಡೆಗಳನ್ನು ಬೆಂಬಲಿಸುತ್ತ ಬಂದಿತ್ತು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಬೇಕೆಂಬ ಬಾಜಪದ ನಿಲುವು ಇದಕ್ಕೆ ಪೂರಕವಾಗಿಯೇ ಇತ್ತು. 

ನಿತೀಶರು ರಾಜಿನಾಮೆ ನೀಡಿದ ಸಂದರ್ಭವನ್ನೇ ನೋಡಿ: ದೆಹಲಿಯಲಿ ಬಾಜಪದ ಪಾರ್ಲಿಮೆಂಟರಿ ಬೋರ್ಡ ಸಭೆ ಸಂಜೆಗೆ ನಿಗದಿಯಾಗಿರುತ್ತದೆ.ಅದಕ್ಕೆ ಕೆಲವೇ ಕ್ಷಣಗಳ ಮುಂಚೆ ನಿತೀಶ್ ರಾಜ್ಯಪಾಲರಿಗೆ ರಾಜಿನಾಮೆ ನೀಡಿ ಹೊರಬರುತ್ತಾರೆ. ಕೆಲವೇ ಕ್ಷಣಗಳಲ್ಲಿ ಪ್ರದಾನಿಯವರು ನಿತೀಶರ ಕ್ರಮವನ್ನು ಸ್ವಾಗತಿಸಿ ಟ್ವೀಟ್ ಮಾಡುತ್ತಾರೆ. ಬಾಜಪದ ನಾಯಕ ಸುಶೀಲ್ ಕುಮಾರ್ ತಕ್ಷಣ ಹೇಳಿಕೆಯೊಂದನ್ನು ನೀಡಿ ತಮ್ಮ ಪಕ್ಷದ ಯಾವ ಶಾಸಕರುಗಳಿಗೂ ಚುನಾವಣೆ ಬೇಕಾಗಿಲ್ಲವೆಂದು ಪರೋಕ್ಷವಾಗಿ ಮೈತ್ರಿಗೆ ತಾವು ಸಿದ್ದ ಎಂಬುದನ್ನು ಸೂಚ್ಯವಾಗಿ ತಿಳಿಸುತ್ತಾರೆ. ದೆಹಲಿಯಲ್ಲಿ ಸಭೆ ಸೇರಿದ ಬಾಜಪದ ಪಾರ್ಲಿಮೆಂಟರಿ ಬೋರ್ಡ ಮೈತ್ರಿಗೆ ಒಪ್ಪಿಗೆ ನೀಡುತ್ತದೆ. ಬೇರ್ಯಾವ ಚರ್ಚೆಗಳೂ ಸವಿವರವಾಗಿ ನಡೆಯದೆ ಮಾರನೆದಿನ ಬೆಳಿಗ್ಗೆ ಹತ್ತು ಗಂಟೆಗೆ ನಿತೀಶ್ ಕುಮಾರ್ ಎನ್.ಡಿ.ಎ.ಮುಖ್ಯಮಂತ್ರಿಯಾಗಿಯೂ, ಬಾಜಪದ ಸುಶೀಲ್ ಕುಮಾರ್ ಮೋದಿ ಉಪಮುಖ್ಯಮಂತ್ರಿಯಾಗಿಯೂ ಪ್ರಮಾಣವಚನ ಸ್ವೀಕರಿಸುತ್ತಾರೆ. ರಾಜಿನಾಮೆ ಸ್ವೀಕರಿಸಿದ ರಾಜ್ಯಪಾಲರು ಕೆಲವೇ ಗಂಟೆಗಳಲ್ಲಿ ನಿತೀಶರನ್ನು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲು ಆಹ್ವಾನಿಸುತ್ತಾರೆ. ಎಲ್ಲೂ ಒಂದು ನಿಮಿಷದ ವಿಳಂಬವೂ ಆಗುವುದಿಲ್ಲ. ಬದಲಿಗೆ ಪೂರ್ವರಚಿತವಾದ ಸಿನಿಮಾ ಚಿತ್ರಕತೆಯಂತೆ ಎಲ್ಲವೂ ಸುಗಮವಾಗಿ ನಡೆದು ಹೋಗುತ್ತದೆ. ನಿತೀಶರಿಗೆ ಬೆಂಬಲ ನೀಡುವ ಬಾಜಪ ಶಾಸಕರುಗಳ ಪತ್ರ ಯಾವಾಗ ಸಿದ್ದವಾಯಿತು, ಎಲ್ಲ ಶಾಸಕರುಗಳೂ ಸಹಿ ಹಾಕಲು ರಾಜಧಾನಿಯಲ್ಲೇ ಲಭ್ಯವಿದ್ದರಾ ಎಂಬ ಯಾವ ಮಾಹಿತಿಯನ್ನು ಯಾರೂಕೇಳುವುದಿಲ್ಲ. ವಿಶೇಷವೆಂದರೆ, ಬಿಹಾರದ ನಿಯೋಜಿತ ರಾಜ್ಯಪಾಲರಾದ ಶ್ರೀ ಕೇಸರಿನಾಥ್ ತ್ರಿಪಾಠಿಯವರು ಬುದವಾರ ಮದ್ಯಾಹ್ನವೇ ಪಶ್ಚಿಮ ಬಂಗಾಳಕ್ಕೆ ಹಿಂದಿರುಗಬೇಕಾಗಿತ್ತು. ಆದರೆ ಮದ್ಯಾಹ್ನದ ವೇಳೆಗೆ ಅವರ ಪ್ರಯಾಣ ರದ್ದಾಗುತ್ತದೆ. ಬುದವಾರ ಸಂಜೆ ಪಾಟ್ನಾದಲ್ಲಿಯೇಉಳಿಯುತ್ತಾರೆ. ಕೆಲವು ಅಧಿಕೃತ ಮೂಲಗಳ ಪ್ರಕಾರವೇ ಹೇಳುವುದಾದರೆ ಪಟ್ನಾದಲ್ಲಿಯೇ ಕೆಲಕಾಲ ವಾಸವಿರುವಂತೆ ರಾಜ್ಯಪಾಲರಾದ ಶ್ರೀ ತ್ರಿಪಾಠಿಯವರಿಗೆ ವಾರದ ಹಿಂದೆಯೇ ಮೇಲಿನಿಂದ ಆದೇಶವೂ ಬಂದಿರುತ್ತದೆ. ಬಹುಶ: ಬಿಹಾರದಲ್ಲಿ ನಡೆಯಬಹುದಾಗಿದ್ದ ರಾಜಕೀಯ ಬೆಳವಣಿಗೆಗಳ ಬಗ್ಗೆ ಕೇಂದ್ರಕ್ಕೆ ಮತ್ತು ಬಿಹಾರದ ರಾಜ್ಯಪಾಲರಿಗೆ ಮೊದಲೆ ಗೊತ್ತಿತ್ತು ಎನಿಸುತ್ತದೆ. ಹೀಗಾಗಿಯೇ ನಾನು ಲೇಖನದ ಮೊದಲಿಗೆ ಹೇಳಿದ್ದು ನಿತೀಶರ ರಾಜಿನಾಮೆಯ ಮತ್ತು ಮತ್ತೆ ಅಧಿಕಾರ ಸ್ವೀಕರಿಸುವ ಪ್ರಹಸನದಲ್ಲಿ ಅನಿರೀಕ್ಷಿತವಾದದ್ದೇನೂ ಇರಲಿಲ್ಲ. 

ಒಟ್ಟಿನಲ್ಲಿ ವಿರೋಧಪಕ್ಷಗಳ ಮೈತ್ರಿಯ ಕನಸಿಗೆ ಸದ್ಯಕ್ಕಂತು ಎಳ್ಳೂನೀರು ಬಿಟ್ಟಂತೆ ಕಾಣುತ್ತಿದೆ! 

No comments:

Post a Comment