Apr 18, 2017

ಹೀಗೊಂದು ಪತ್ರ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರೀತಿಯ ಕೆ,

ಮೊನ್ನೆ ನೀವೆಲ್ಲ ಮಾತಾಡಿದ ಪರ್ಯಾಯ ರಾಜಕಾರಣದ ಮಾತುಗಳನ್ನು ಬಹಳ ಆಸಕ್ತಿಯಿಂದ, ಕುತೂಹಲದಿಂದ ಕೇಳಿಸಿಕೊಂಡೆ. ಬಹಳ ವಿದ್ವತ್ ಪೂರ್ಣವಾದ ಆ ಮಾತುಗಳನ್ನು, ಅದರಲ್ಲಿದ್ದ ಸಮರ್ಥನೀಯ ಗುಣವನ್ನು ಅಲ್ಲಗೆಳೆಯಲು ಸಾದ್ಯವೇ ಇಲ್ಲವಾದರೂ ಆ ಕ್ಷಣಕ್ಕೆ ನನ್ನಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದ್ದಂತು ನಿಜ. ಆದರೆ ಆ ಪ್ರಶ್ನೆಗಳಿಗೆ ಒಂದು ಸ್ಪಷ್ಟರೂಪ ಬರಲು ಒಂದಷ್ಟು ದಿನಗಳೇ ಬೇಕಾಗಿದ್ದು, ಇದೀಗ ಆ ಪ್ರಶ್ನೆಗಳನ್ನು ನಿನಗೆ ಕೇಳುತ್ತಿರುವೆ. ನಿಮ್ಮ ಬದ್ದತೆಯನ್ನಾಗಲಿ, ನೀವು ನಡೆಯಹೊರಟಿರುವ ಹಾದಿಯ ಬಗ್ಗೆಯಾಗಲಿ ನನಗೆ ಕಿಂಚಿತ್ತೂ ಅನುಮಾನವಿಲ್ಲ ಮತ್ತು ಅಸಹನೆಯೂ ಇಲ್ಲ. 

ನೀವು ಮಾತುಮಾತಿಗೆ ಪರ್ಯಾಯ ರಾಜಕಾರಣವೊಂದರ ಬಗ್ಗೆ ಮಾತಾಡುತ್ತೀರಿ : ಜೊತೆಗೆ ಬಾಜಪದ ಕೋಮುವಾದವನ್ನು, ದೇಶದೊಳಗೆ ಬಲಿಷ್ಠವಾಗುತ್ತಿರುವ ಫ್ಯಾಸಿಸ್ಟ್ ಶಕ್ತಿಗಳ ಬಗ್ಗೆ ಆತಂಕದಿಂದ ಮಾತಾಡುತ್ತೀರಿ. ಏನೂ ಮಾಡಲಾಗದ ಕಾಂಗ್ರೆಸ್ಸಿನ ಜಡತೆಯ ಬಗ್ಗೆ ಮತ್ತು ಅದರ ಭ್ರಷ್ಟತೆಯ ಬಗ್ಗೆಯೂ ಮಾತಾಡುತ್ತೀರಿ. ಮುಂದುವರೆದು ಬಾಜಪ ಮತ್ತು ಕಾಂಗ್ರೆಸ್ ಪಕ್ಷಗಳೆರಡು ಅಣ್ಣತಮ್ಮಂದಿರು, ಅವುಗಳ ನಡುವೆ ಅಂತಹ ವ್ಯತ್ಯಾಸವೇನು ಇಲ್ಲ ವೆನ್ನುತ್ತೀರಿ. ಕರ್ನಾಟಕದ ಮಟ್ಟಿಗೆ ಜನತಾದಳವನ್ನು ಎರಡೂ ರಾಷ್ಟ್ರೀಯ ಪಕ್ಷಗಳ ಬಿ ಟೀಂ ಎಂದೂ ವ್ಯಾಖ್ಯಾನಿಸುತ್ತೀರಿ.ಇನ್ನೂ ಹೇಳಬೇಕೆಂದರೆ ಆಗಾಗ ನೀವು ಮಾತ್ರವಲ್ಲದೆ ನಾನೂ ಸಹ ತೃತೀರಂಗದ ಬಗ್ಗೆ ಬಹಳ ಮಾತಾಡುತ್ತ ಬಂದಿದ್ದೆವೆ. ಆದರೆ ಒಮ್ಮೆ ಸೂಕ್ಷ್ಮವಾಗಿ ಯೋಚಿಸಿನೋಡು. ಕಾಲಕಾಲಕ್ಕೆ ತೃತೀಯ ರಂಗವೂ ಸಹ ತನ್ನ ಬಣ್ಣ ಬದಲಾಯಿಸುತ್ತ ಒಮ್ಮೆ ಬಾಜಪವನ್ನು ಮತ್ತೊಮ್ಮೆ ಕಾಂಗ್ರೆಸ್ಸನ್ನು ಪ್ರತ್ಯಕ್ಷವಾಗಿ ಇಲ್ಲ ಪರೋಕ್ಷವಾಗಿ ಬೆಂಬಲಿಸುತ್ತಲೇ ಬಂದಿರುವುದನ್ನು ಗಮನಿಸಬಹುದು. ಇವತ್ತು ಬಾಜಪವೇನಾದರು ಈ ಮಟ್ಟಿಗೆ ಶಕ್ತಿಶಾಲಿಯಾಗಿ ಬೆಳೆದು ನಿಂತಿದ್ದರೆ ಅದಕ್ಕೆ ನಮ್ಮಸಮಾಜವಾದಿ ಹಿನ್ನೆಲೆಯಿಂದ ಬಂದಿದ್ದಾವೆಂದು ಹೇಳಿಕೊಳ್ಳುವ ಈ ಮೂರನೇ ಶಕ್ತಿಯೂ ಕಾರಣವಲ್ಲವೆ?

ಅಲ್ಲಿಗೆ ಶಕ್ತಿರಾಜಕಾರಣದ ಅಂಗಳದಲ್ಲಿ ಆಟವಾಡುತ್ತಿರುವ ಎಲ್ಲ ಪಕ್ಷಗಳನ್ನೂ ನೀವು ನಿರಾಕರಿಸುತ್ತೀರಿ. ನನ್ನ ಪ್ರಶ್ನೆ ಇರುವುದೇ ಇದರ ಬಗ್ಗೆ. ಹಾಗಾದರೆ ನಾವು ಯಾವ ಪಕ್ಷವನ್ನು ಬೆಂಬಲಿಸಬೇಕು? ಪರ್ಯಾಯ ರಾಜಕಾರಣವನ್ನು ಯಾವುದರಿಂದ ಶುರುಮಾಡಬೇಕು?ಯಾವ ತೆರನಾದ ಪರ್ಯಾಯ ರಾಜಕಾರಣ ಮಾಡಬೇಕು?

ರಾಜಕಾರಣವೆಂದರೆ ನಮ್ಮ ಹೋರಾಟಗಳು, ಚಳುವಳಿಗಳು, ಬಾಷಣಗಳು ಮಾತ್ರವಲ್ಲ. ಅಧಿಕಾರ ರಾಜಕಾರಣವೆಂದರೆ ಚುನಾವಣೆಗಳಿರುತ್ತವೆ. ಮತದಾರರನ್ನು ತಲುಪಲು ಅಗತ್ಯವಾದ ಪ್ರಚಾರವಿರುತ್ತದೆ. ಮತಗಟ್ಟೆಗೆ ಬರುವ ಮತದಾರನನ್ನು ತಲುಪಲು ಸಾದ್ಯವಾಗದ ಯಾವ ಹೋರಾಟವೂ, ಅದೆಷ್ಟೇ ಸೈದ್ದಾಂತಿಕವಾಗಿ ಬಲಾಢ್ಯವಾಗಿದ್ದರೂ, ಸಫಲವಾಗುವುದಿಲ್ಲ. ಇದರ ಅರಿವು ನಿನಗಿದೆಯೆಂದು ಬಾವಿಸುತ್ತೇನೆ. ಇನ್ನು ಪ್ರಗತಿಪರವಾಗಿ ಯೋಚಿಸುವವರೆಲ್ಲ ಸೇರಿ ಹೊಸ ಪಕ್ಷವೊಂದನ್ನೇನಾದರೂ ಕಟ್ಟುತ್ತೀರಾ? ಯಾಕೆಂದರೆ ಫ್ಯಾಸಿಸ್ಟ್ ಶಕ್ತಿಗಳನ್ನು, ಬಲಪಂಥೀಯ ಕೋಮುವಾದವನ್ನು ಎದುರಿಸಲು ಚುನಾವಣಾ ರಾಜಕೀಯದಲ್ಲಿ ಬಾಗವಹಿಸಿ ಹೋರಾಡಲೇ ಬೇಕೆಂಬುದು ಈ ನೆಲದ ಸತ್ಯ. ಯಾಕೆಂದರೆ ಸದ್ಯಕ್ಕೆ ನಮ್ಮ ಜನ ಕೋಮುವಾದಿ ಶಕ್ತಿಗಳಿಗೆ ಮತಹಾಕುತ್ತಿದ್ದಾರೆ ಮತ್ತು ಅವನ್ನು ಅದಿಕಾರದಲ್ಲಿ ಕೂರಿಸುತ್ತಿದ್ದಾರೆ. ಇದನ್ನಂತು ನಾವು ಒಪ್ಪಲೇಬೇಕು. ಸೈದ್ದಾಂತಿಕವಾಗಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಪ್ರಜಾಸತ್ತೆಯಲ್ಲಿ ನಂಬಿಕೆಯಿರುವ ಎಲ್ಲರೂ ಚುನಾಯಿತ ಸರಕಾರವೊಂದನ್ನು ಒಪ್ಪಲೇ ಬೇಕು, ಅದರ ಸಿದ್ದಾಂತಗಳನ್ನು ಒಪ್ಪದೇ ಹೋದರೂ! ಈ ಫ್ಯಾಸಿಸ್ಟ್ ಶಕ್ತಿಗಳನ್ನು ನಾವೂ ಸಹ ಮತಗಟ್ಟೆಯ ಮೂಲಕವೇ ಸೋಲಿಸಬೇಕಲ್ಲವೇ? ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿರುವ ಯಾರೂ ಇದನ್ನು ಅಲ್ಲಗೆಳೆಯಲಾರರು. 

ಇರಲಿ ನಾನು ಕನಾಟಕದ ಬಗ್ಗೆ ಮಾತ್ರ ಇಲ್ಲಿ ಕೆಲವು ಮಾತುಗಳನ್ನಾಡುತ್ತೇನೆ. ಮೊನ್ನೆ ನೀವುಗಳು ಶಿವಮೊಗ್ಗದಲ್ಲಿ ಸೇರಿ ಫ್ಯಾಸಿಸ್ಟ್ ಶಕ್ತಿಗಳ ಬಗ್ಗೆ ಅವುಗಳನ್ನು ಎದುರಿಸುವ ಮಾರ್ಗಗಳ ಬಗ್ಗೆ ಮಾತನಾಡುತ್ತಿರುವಾಗಲೇ ಗುಂಡ್ಲುಪೇಟೆ ಮತ್ತು ನಂಜನಗೂಡಿನಲ್ಲಿ ಬಾಜಪ ತನ್ನ ಮತಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಲುತ್ತ ಗೆಲ್ಲುವ ಪ್ರಯತ್ನ ಮಾಡುತ್ತಿತ್ತು. ನಾವ್ಯಾರು ಆ ಕ್ಷೇತ್ರಗಳಲ್ಲಿನ ಜನರಿಗೆ ಫ್ಯಾಸಿಸ್ಟ್ ಶಕ್ತಿಗಳ ಕೆಡುಕಿ ಬಗ್ಗೆಯಾಗಲಿ, ಬಲಪಂಥೀಯ ರಾಜಕಾರಣದ ಅಪಾಯಗಳ ಬಗ್ಗೆಯಾಗಲಿ ತಿಳಿಸಲಿಲ್ಲ. ಆ ಕ್ಷೇತ್ರದ ಜನತೆ ಮೌನವಾಗಿ ಕಾಂಗ್ರೆಸ್ಸಿಗೆ ಮತ ಹಾಕಿ ಗೆಲ್ಲಿಸಿತ್ತು. ಸಿದ್ದಾಂತಗಳ ಬಗ್ಗೆ ಮಾತೇ ಆಡದ ಜನತೆ ನಮಗಿಂತ ಬುದ್ದಿವಂತರು ಅನಿಸುವುದಿಲ್ಲವೆ? 

ಇನ್ನು ಒಂದು ವರುಷದೊಳಗೆ ಕರ್ನಾಟಕದ ವಿದಾನಸಭೆಗೆ ಚುನಾವಣೆಗಳು ಬರುತ್ತವೆ. ಆಗ ನೀವು ಹೇಳಿದ ಎಲ್ಲ ಫ್ಯಾಸಿಸ್ಟ್ ಶಕ್ತಿಗಳೂ ಇನ್ನಷ್ಟು ಬಲಿಷ್ಠವಾಗಿ ತಮ್ಮೆಲ್ಲ ಶಕ್ತಿಯನ್ನು ಕ್ರೋಢೀಕರಿಸಿಕೊಂಡು ನಮ್ಮ ನೆಲದಲ್ಲಿ ಬಂದಿಳಿಯುತ್ತವೆ. ಹಿಂದೆಂದಿಗಿಂತಲೂ ಹೆಚ್ಚು ತೀವ್ರವಾಗಿ ತಮ್ಮ ಬಲಪಂಥೀಯ ಸಿದ್ದಾಂತಗಳನ್ನು , ಜನರ ಬಾವನಾತ್ಮಕ ವಿಷಯಗಳನ್ನು ಬಳಸಿಕೊಂಡು ಚುನಾವಣಾ ಪ್ರಚಾರವನ್ನು ಕೈಗೊಳ್ಳುತ್ತವೆ. ನೀವೇ ಹೇಳುವಂತೆ ಅದರ ಅಣ್ಣನೊ ತಮ್ಮನೊ ಆಗಿರುವ ಕಾಂಗ್ರೆಸ್ಸಿಗಾಗಲಿ, ಇಲ್ಲ ಅದರ ಬಿ ಟೀಂ ಆದ ಜನತಾದಳಕ್ಕಾಗಲಿ ಅದನ್ನು ಎದುರಿಸಿ ನಿಲ್ಲುವ ಶಕ್ತಿ ಸಿಗದೇ ಹೋದರೆ ಬಾಜಪ ಸುಲಭವಾಗಿ ಅಧಿಕಾರಕ್ಕೇರುತ್ತದೆ. ಆ ಚುನಾವಣೆಯ ಸಂದರ್ಭದಲ್ಲಿಯೂ ನಾವುಗಳು ಎಲ್ಲಾದರು ಸೇರಿ ಮತ್ತದೆ ಫ್ಯಾಸಿಸ್ಟ್ ಶಕ್ತಿಗಳ ಬಗ್ಗೆ ಮಾತನಾಡುತ್ತ ಕೂತಿದ್ದರೆ ಅದು ಜನದ್ರೋಹವಾಗುವುದಿಲ್ಲವೆ? ಆ ಚುನಾವಣೆಯ ಸಂದರ್ಭದಲ್ಲಿ ನಾವೇನಾದರು ಮಾಡಬೇಕಾಗಿರುವುದು ನಿಮ್ಮ ಕರ್ತವ್ಯವಲ್ಲವೇ? ಹಾಗೆ ಮಾಡದೆ ಹೋದರೆ ನಮ್ಮದು ಪಲಾಯನವಾದವಲ್ಲವೆ?

ಹಾಗಾದರೆ ನಾವುಗಳೇನು ಮಾಡಬೇಕು? ಹೀಗೆ ಸುಮ್ಮನೆ ನಾವೆಲ್ಲ ಒಂದೆಡೆ ಕಲೆತು ನಮ್ಮನಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುತ್ತ, ನಮ್ಮೊಳಗಿನ ಅಸಹನೆಗಳನ್ನು ಹರಿಯ ಬಿಡುತ್ತ ಸಭೆಗಳನ್ನು ಜಾಥಾಗಳನ್ನು ಸಮಾವೇಶಗಳನ್ನು ಮಾಡಿದರೆ ಸಾಕೇ? ಅಥವಾ ಇವೆಲ್ಲವನ್ನೂ ದಾಟಿ ಚುನಾವಣಾ ರಾಜಕೀಯದತ್ತ ಗಮನ ಹರಿಸಿ ಮತಗಟ್ಟೆಗಳಲ್ಲಿ ಬದಲಾವಣೆ ತರುವತ್ತ ಚಿಂತಿಸಬೇಕೆ? ಈ ಬಗ್ಗೆ ನಿನ್ನಂತವರು ಮಾತಾಡಬೇಕೆಂದು ನಾನು ಬಯಸಿದ್ದೆ. ಯಾಕೆಂದರೆ ಅಂತಹ ಸ್ಪಷ್ಟ ಮಾತುಗಳು ಮಾತ್ರ ನಮ್ಮನ್ನು ದಡ ಸೇರಿಸಬಲ್ಲವು.

ಇರಲಿ ಇಲ್ಲಿ ಎಲ್ಲಕ್ಕೂ ನಾನು ಮತ್ತು ನಾವು ಎಂಬುದನ್ನು ಬಿಟ್ಟು ನೀನು ಮತ್ತು ನಿಮ್ಮ ಎಂದು ಸೇರಿಸಿರುವುದು ನಾನು ನಿಮ್ಮ ಸಿದ್ದಾಂತಗಳಿಂದ ಹೊರತಾದವನೆಂದೇನು ಅಲ್ಲ. ಒಳಗಿನವನಾಗಿ ಪ್ರಶ್ನೆ ಕೇಳುವುದಕ್ಕಿಂತ ಹೊರಗಿನವನಾಗಿ ಕೇಳುವುದು ಸುಲಭವೆನಿಸಿತು ಅಷ್ಟೇ!

ನನಗೆ ನಿನ್ನಷ್ಟು ಚಂದವಾಗಿ, ತೂಕದ ಶಬ್ದಗಳನ್ನು ಬಳಸಿ ಬರೆಯುವುದಾಗಲಿ ಇಲ್ಲ ಓದುವವನ್ನು ಹಿಡಿದಿಡುವ ಹಾಗೆ ಬರೆಯುವುದಾಗಲಿ ಸಿದ್ದಿಸಿಲ್ಲ. ಅಷ್ಟಕ್ಕೂ ಇದು ಒಂದು ಸಾರ್ವಜನಿಕ ಪತ್ರ.

ನಾನು ಎತ್ತಿರುವ ಪ್ರಶ್ನೆಗಳು ಉತ್ತರ ಕೊಡಲು ಯೋಗ್ಯವಾದವುಗಳಲ್ಲವೆಂದು ನೀನು ಬಾವಿಸಿದರೆ, ನನ್ನದೇನೂ ತಕರಾರಿಲ್ಲ. ಪ್ರತಿ ಪ್ರಶ್ನೆಗೂ ಉತ್ತರ ಬೇಕೇ ಬೇಕೆಂಬ ಹಟವೂ ನನಗಿಲ್ಲ. ಆದರೆ ನಿಮ್ಮೆಲ್ಲ ಬರಹಗಳನ್ನು, ಜನಪರ ಚುಟುವಟಿಕೆಗಳನ್ನು ಅವಲೋಕಿಸುತ್ತಿರುವವರಿಗೆ ಇಂತಹ ಪ್ರಶ್ನೆಗಳು ಕಾಡುತ್ತಿವೆ. ಅಂತವರಲ್ಲಿ ನಾನೂ ಒಬ್ಬ. ನನ್ನನ್ನು ಬಲಪಂಥೀಯನೆಂದೊ ಇಲ್ಲ ಯಾವುದಕ್ಕೂ ಬದ್ದನಾಗದ ಅವಕಾಶವಾದಿಯೆಂದೋ ಪರಿಗಣಿಸಿ ನಿರ್ಲಕ್ಷ ತೋರಿಸಿ ನಡೆದು ಬಿಡುವುದು ನಿನಗೇನು ಕಷ್ಟವಲ್ಲ. ಇಲ್ಲ, ನನ್ನ ಪ್ರಶ್ನೆಗಳೇ ಓದುಗರಿಗೆ ಮರೆತು ಹೋಗುವಮತಹ ಚಾಲಾಕಿನ ಜಾಣತನದ ಉತ್ತರಗಳನ್ನು ಕೊಟ್ಟು ನನ್ನ ಆತ್ಮ ವಿಶ್ವಾಸವನ್ನು ಉಡುಗಿಸುವುದು ಸಹ ನಿನಗೆ ಅಸಾದ್ಯವೇನಲ್ಲ. ಯಾಕೆಂದರೆ ಅಸಹಿಷ್ಣುತೆ ಎನ್ನುವುದು ಬಲಪಂಥೀಯರಲ್ಲಿ ಮಾತ್ರವಲ್ಲ ತಮ್ಮನ್ನು ಪ್ರಶ್ನಿಸುವ ಎಲ್ಲರಲ್ಲೂ ಇರುವುದನ್ನು ನಾನು ನೋಡುತ್ತಿದ್ದೇನೆ….. ಇದು ನನ್ನ ಅನುಭವ! 

ನಮ್ಮೆಲ್ಲ ಭಿನ್ನಾಭಿಪ್ರಾಯಗಳ ನಡುವೆಯೂ ಪ್ರೀತಿಉಳಿಸಿಕೊಳ್ಳೋಣ,


ನಿನ್ನ ಗೆಳೆಯ 
ಎಂ. 

No comments:

Post a Comment