Apr 5, 2017

ಒಂದು ಕತೆ....

ಎಸ್. ಅಭಿ ಗೌಡ, ಹನಕೆರೆ.
ಕಳ್ಳ ಸಂಬಂಧಗಳ ಸಿಗ್ನಲ್‍ಗಳು ನೈತಿಕ ಸಂಬಂಧಗಳ ಸಿಗ್ನಲ್‍ಗಳಿಗಿಂತ ಸೂಕ್ಷ್ಮ. ರೂಮಿನೊಳಗೆ “ಯಾ ಆಲಿ” ಹಾಡು ಅಷ್ಟು ಜೋರಾಗಿ ಮೊಳಗುತ್ತಿತ್ತು, ಸ್ನೇಹಿತರೆಲ್ಲ ಕುಡಿತದ ಅಮಲಿನಲ್ಲಿ ಕುಣಿಯುತ್ತಿದ್ದದ್ದು ಮಾತ್ರವಲ್ಲ ಪೂರ್ಣನೂ ಕುಡಿದು ಕುಣಿಯುತ್ತಿದ್ದ. ಆರ್.ಎಕ್ಸ್100 ಬೈಕಿನ ಹಾರ್ನ್ ಒಂದು ಬಾರಿ ಆಗುತ್ತಿದ್ದಂತೆ ಹಾಗೆ ರೂಮಿನಿಂದ ಹೊರಬಂದ ಪೂರ್ಣ ಕತ್ತಲಲ್ಲಿ ಆರ್.ಎಕ್ಸ್ 100 ಏರಿ ಹೊರಟುಹೋದ. ಸಮಯ ರಾತ್ರಿ 10:45. ಯಾರು ಕೂಡ ಅಷ್ಟೊತ್ತು ರಾತ್ರಿಯಲ್ಲಿ ಆರ್.ಎಕ್ಸ್100 ಬೈಕಲ್ಲಿ ಅಲ್ಲಿ ಬಂದು ಪೂರ್ಣನನ್ನು ಕರೆದುಕೊಂಡು ಹೋಗಿದ್ದು ಸುಂದರವಾದ ಹುಡುಗಿಯೆಂದು ಊಹಿಸಲು ಸಾಧ್ಯವಿಲ್ಲ, ಆಕೆ ಎಷ್ಟು ಸುಂದರಿಯೆಂದರೆ ಬೈಕ್ ಹತ್ತಿದ ಮರುಕ್ಷಣವೇ ಹೆಲ್ಮೆಟ್ ತೆಗೆದು ಮುತ್ತಿಕಲು ಆತುರ ಪಡುತ್ತಿದ್ದ ಪೂರ್ಣ.
ಮನೆ ಕಣ್ಣಿಗೆ ಕಾಣುತ್ತಿದೆ ಅಂದಾಗಲೆ ಇಗ್ನಿಷನ್ ಆಪ್ ಮಾಡಿ, ಪಾತಾಳದಂತಿದ್ದ ಡೌನ್‍ನಲ್ಲಿ ಹೆಲ್ಮೆಟ್ ತೆಗೆದಳು ಭವ್ಯ ಇದನ್ನೆ ಕಾಯುತ್ತಿದ್ದ ಪೂರ್ಣ ಹಿಂದಿನಿಂದ ಕುತ್ತಿಗೆಗೆ ಮುತ್ತಿಕ್ಕದ “ಎಷ್ಟು ಕುಡಿದಿದ್ದೀಯ, ಎಷ್ಟು ಸಲ ಹೇಳೋದು ನಿಂಗೆ ಕುಡಿಬೇಡ ಅಂತ, ಆ ನಿನ್ನ ಫ್ರೆಂಡ್ಸ್ ಸರಿಯಿಲ್ಲ”. “ ಅವರು ಫ್ರೆಂಡ್ಸ್ ಅಲ್ಲ ರೂಮ್ ಮೇಟ್ಸ್ ಅಷ್ಟೇ. ಅವರು ನೀನು ಸರಿಯಿಲ್ಲ, ಎಷ್ಟು ಸಲ ಹೇಳೋದು ಅವಳ ಜೊತೆ ಹೋಗಬೇಡ ಅಂತಾರೆ” ಅಂದ ಅಷ್ಟರಲ್ಲಿ ಬೈಕ್ ಪಾರ್ಕ್ ಮಾಡಿ ಮನೆ ಬಾಗಿಲನ್ನು ಸದ್ದು ಆಗದಂತೆ ತೆಗೆದು ಎಲ್ಲರು ಐಷಾರಾಮಿ ಬಂಗಲೆಯ ಅವರವರ ಕೋಣೆಯಲ್ಲಿ ಮಲಗಿರುವುದನ್ನು ಕನ್ ಫರ್ಮ್ ಆಗಿರುವುದ್ದಕ್ಕೆ ಪೂರ್ಣನನ್ನ ಸರಾಗವಾಗಿ ಮನೆಗೆ ಕರೆದುಕೊಂಡು ಬಂದಿರೋದು ಅಂತೆನಿಸಿತು ಭವ್ಯಳಿಗೆ. ತನ್ನ ರೂಮಿನೊಳಕ್ಕೆ ಮೊದಲು ಪೂರ್ಣನನ್ನು ದಬ್ಬಿ ತಾನು ಒಳಗಿನಿಂದ ಬಾಗಿಲು ಹಾಕಿದವಳೆ ಆ ಕತ್ತಲೆಯಲ್ಲೆ ಅವನ ತುಟಿಗೆ ತುಟಿಯನ್ನು ಒತ್ತಿಬಿಟ್ಟಳು. ಭವ್ಯಳ ವೇಗಕ್ಕೆ ಕುಡಿತವು ಸೇರಿದಂತೆ ಎಲ್ಲವೂ ಇಳಿದುಹೋಯ್ತು ಪೂರ್ಣನಿಗೆ, ಈಗ ಪಿಸುಮಾತಿನ ಸರಣಿ ಭವ್ಯ ಒಮ್ಮೊಮ್ಮೆ ಕಥೆ ಹೇಳುತ್ತಿದ್ದಳು, ಅದು ಕೇಳಿದ್ಮೇಲೆ ಗೊತ್ತಾಗುತ್ತಿತ್ತು ಯಾವುದೋ ಸಿನಿಮಾ ಕಥೆಯಂತ. ಅದನ್ನ ಪ್ರಸ್ತಾಪ ಮಾಡುತ್ತಿದ್ದಂತೆ “ಕಂಡು ಹಿಡಿದು ಬಿಟ್ಟ” ಅನ್ನುತ್ತಿದ್ದಳು .

ಪ್ರತಿ ಸಲ ಕೇಳುವ ಪ್ರಶ್ನೆಯನ್ನೆ ಈ ಸಲವು ಕೇಳಿದ ಪೂರ್ಣ “ ಭವ್ಯ ನನ್ನ ಜೊತೆ ಇಷ್ಟು ಸಲ್ಲಾಪ-ಇಷ್ಟು ಪ್ರೀತಿ ತೋರುವ ನೀನು, ಮದುವೆಯಾಗಿ ಜೊತೆಯಲ್ಲೆ ಇರಬಹುದಲ್ಲವೇ?” ಎಂದಿನಂತೆ ಪಿಸುಮಾತಿನಲ್ಲಿ ಕೇಳಿದ “ಜೊತೆಯಲ್ಲಿ ಇರೋದು ಅಂದ್ರೆ ಜವಾಬ್ದಾರಿ, ನಂಗೆ ಸಮಾಜದ ಜವಬ್ದಾರಿಯಿದೆ ಸಂಸಾರದ ಜವಾಬ್ದಾರಿ ಬೇಡ” ಅಂದಳು. ಪೂರ್ಣ ಮನಸಿನಲ್ಲಿಯೇ ನಂದು ಅದೇ ಪ್ರಶ್ನೆ ಅವಳದು ಅದೇ ಉತ್ತರ, ಸಿಕ್ಕಷ್ಟು ಸಮಯ ಖುಷಿಯಾಗಿರುವ ಅನ್ನೋ ನಿರ್ಧಾರವನ್ನೇ ಮುಂದುವರೆಸಿದ ಹಾಗೆಯೆ ಹಾಸಿಗೆಯಲ್ಲೂ ಮತ್ತೊಮ್ಮೆ ಮುಂದುವರೆಯುವುದು ಮರೆಯಲಿಲ್ಲ!

“ಶುಕ್ರವಾರ ಬೆಳಿಗ್ಗೆಯೆ ಬಿರಿಯಾನಿ ತಿನ್ನಿಸಿ ಈ ರೀತಿ ದೇವಸ್ಥಾನಕ್ಕೆ ಕರೆದುಕೊಂಡು ಬರುವುದರಲ್ಲಿ ಯಾವ ಮೌಢ್ಯ ನಿಮೂರ್ಲನೆ ಆಗುತ್ತೆ ಭವ್ಯ” ಪೂರ್ಣ ಕೇಳಿದ. “ಮೆಲ್ಲಗೆ ಮಾತಾಡು, ದೇವರಿಗೆ ಕೇಳಿಸಲ್ಲ ನಿಜ, ಭಕ್ತರಿಗೆ ಕೇಳಿಸಿ ಬಿಡುತ್ತೆ” ಭವ್ಯ ನಗುತ್ತ ಪಿಸುಗುಟ್ಟಿದಳು. ಕತ್ತಲೆಯಲ್ಲಿ ಪಿಸುಗುಡ್ತೀವಿ ಸರಿ, ಬೆಳಕಲ್ಲು ಪಿಸುಗುಡೋದು ಅಂದ್ರೆ ಹೇಗೆ” ಪೂರ್ಣನ ಮಾತು ಪೂರ್ಣವಾಗುವ ಮೊದಲೆ ಭವ್ಯ “ಪ್ರಪಂಚದ ಎಲ್ಲಾ ದೇವಸ್ಥಾನಗಳು ಹೆಣ್ಣಿಗೆ ಎಂದಿಗೂ ಬೆಳಕೆ ಕೊಡದ ಕತ್ತಲೆ ತುಂಬಿರುವ ಜಾಗ ಕಣೋ” ಅಂದಳು. ದೇವರು-ದೇವಸ್ಥಾನದ ಮೇಲೆ ಅಷ್ಟೇನು ವ್ಯಮೋಹವಿಲ್ಲದ ಪೂರ್ಣನಿಗೆ ಪಾಪ ಹೆಣ್ಣು ಮಕ್ಕಳು ಹೆಚ್ಚು ಶೋಷಣೆಗೆ ಒಳಗಾಗ್ತರೆ ಹಾಗಾಗಿ ಹೆಚ್ಚು ದೇವರನ್ನ ನಂಬುತ್ತಾರೆ ಬಟ್ ಜಾಸ್ತಿ advantage ಪೂಜಾರಿಗಳು ತೆಗೆದುಕೊಳ್ತಾರೆ ಅನಿಸಿದರೂ, ಸರಸ -ಸಲ್ಲಾಪ ನೆನಪಾಗಿ ತಾನು advantage ತೆಗೆದುಕೊಳ್ಳುತ್ತಿದ್ದೀನಿ ಅನಿಸಿ ಕಸಿವಿಸಿ ಉಂಟಾಯಿತು ಮನದಲ್ಲಿ “ನೀವ್ ಗಂಡಸರು ಯಾಕೆ ನಾವು ಮಾತಾಡಿದವರ ಜೊತೆಯಲ್ಲೆಲ್ಲ ಸಂಬಂಧ ಕಲ್ಪಿಸ್ತೀರಿ, ಎಲ್ಲರ ಜೊತೆ ಮಾತಾಡ್ತಿವಿ ಎಲ್ಲರ ಜೊತೆ ಮಲಗಲ್ಲ ನಿಮ್ಮ್ ಥರಾನೇ ನಾವು ಮನುಷ್ಯರೇ” ಕೋಪದಿಂದ ಭವ್ಯ ಹೇಳಿದಳು ಮುನಿಸಿಕೊಂಡ ಪೂರ್ಣ “ಲೇ ನಾನೇನ್ ಮಾಡ್ದೆ, ನೈಟ್ ಒಂಥರ ಕಾಟ ಕೊಡ್ತೀಯ ಡೇ ಟೈಮ್‍ ಅಲ್ಲಿ ಬಿರಿಯಾನಿ ತಿನ್ನಿಸಿ ತಿನ್ನಿಸಿ ಕಾಟ ಕೊಡ್ತೀಯ” ಎಂದು ದೂರ ಸರಿದ. ಹತ್ತಿರಕ್ಕೆ ಬಂದ ಭವ್ಯ “ನೈಟ್ ಒಂಥರ ಅಂತೆ, ಡೇ ಬಿರಿಯಾನಿ ಅಂತೆ, ನೈಟ್ ಏನ್ ಮಾಡ್ತಿವಿ ಅಂತ ಹೇಳೋಕೆ ಮುಜುಗರನ ನಿಂಗೆ” ಅನ್ನುತ್ತಾ ದೂರ ಹೋಗ್ತಿದ್ದ ಪೂರ್ಣನನ್ನು ಹಿಂಬಾಲಿಸಿಕೊಂಡು ಹೊರ ಬಂದು ಇಬ್ಬರು ಕಾರಿನಲ್ಲಿ ಹೊರಟರು

ಜಗತ್ತಿನ ಮೊದಲ ಸಂಘಟನೆ ಸಂಸಾರ, ಅದು ಸಮಾಜವೋ? ಇಲ್ಲ ವಿಜ್ಞಾನವೋ? ಎಂಬ ಗೊಂದಲ ಹಲವು ದಿನ ಬಾಧಿಸಿದರು ಮರೆತು ಸುಮ್ಮನಾಗ್ತಿದ್ದ ಭವ್ಯ ಇಂದೇಕೋ ಹೆಚ್ಚು ಅದರ ಬಗ್ಗೆಯೆ ಆಲೋಚಿಸಲು.... ಬೇರೆ ಬೇರೆ ಆಯಾಮಗಳು ತನ್ನ ಕಲ್ಪನೆಯನ್ನ ವೃದ್ದಿಸಿಕೊಳ್ಳಲು ಸಹಕಾರಿಯಾಗಿ ಭವ್ಯಳ ಕೈಯಲ್ಲಿದ್ದ ಪೆನ್ನು ಬರೆಯತೊಡಗಿತು “ಪೂರ್ಣ ನಿನ್ನ ಎಷ್ಟು ಪ್ರೀತಿ ಮಾಡ್ತೀನಿ ಅಂದ್ರೆ ಅದನ್ನ ಹೇಳುತ್ತಾ ಹೋದರೆ ಎಂದಿಗೂ ಪೂರ್ಣವಾಗುವುದೇ ಇಲ್ಲ, ಇಷ್ಟು ದಿನವಾಯ್ತು ಒಂದೇ ಒಂದು ದಿನ ಇಡೀ ಜೀವನ ನಿನ್ನ ಕೆಲಸಗಳಿಗೆ ನಾನು ಅಡ್ಡಿ ಬರುವುದಿಲ್ಲ, ನಿನ್ನ ಸಮಯಕ್ಕೆ ನಾನೇ ಹೊಂದಿಕೊಳ್ತೀನಿ, ಅದೇನು ಸಮಾಜಮುಖಿ ಕೆಲಸವೋ ಸಾಧನೆಯೋ ಮಾಡಿಕೋ ನಾನ್ ಯಾವಾಗ್ಲು ನಿನ್ನ ಜೊತೆಯಲ್ಲಿರ್ತಿನಿ ಅಂತ ಯಾಕೆ ಹೇಳಲ್ಲ ನೀನು? ಸಂಸಾರ ವ್ಯವಸ್ಥೆ ರೂಪಿತವಾಗಿರುವುದೆ ಹೆಣ್ಣು ಗಂಡಿಗೆ ಹೊಂದಿಕೊಂಡು ಹೋಗಲಿ ಎಂಬುದರಾಧಾರದ ಮೇಲೆ; ಹಾಗಾಗಿ ನಿನ್ನೊಂದಿಗೆ ಸರಸ-ಸಲ್ಲಾಪಕ್ಕೆ ತೋರುವ ಉತ್ಸಾಹ ಸಂಸಾರದ ವಿಚಾರಕ್ಕೆ ಬರಲ್ಲ.... ಬಹುಶಃ ಗಂಡು ಹೆಣ್ಣಿಗೆ ಹೊಂದಿಕೊಳ್ಳುವುದು ಸರಸ-ಸಲ್ಲಾಪದ ಸಮಯದಲ್ಲಿ ಮಾತ್ರವೇನೋ!? ನಿನ್ನ ಹೆಸರು ಪೂರ್ಣವಿರಬಹುದು ನನ್ನ ಮಾತು-ಪತ್ರ-ಪ್ರೀತಿ ಯಾವಾಗಲು ಅಪೂರ್ಣ ಎಂದು ಬರೆದು ಮುಗಿಸಿದಳು ತನ್ನ ಮೊಬೈಲ್‍ನಲ್ಲಿ ಪೋಟೋ ತೆಗೆದು ಪೂರ್ಣನಿಗೆ ಇಮೇಜ್ನ ವಾಟ್ಸಾಪ್ ಮಾಡಿದಳು
ಅಪೂರ್ಣ

No comments:

Post a Comment