Mar 13, 2017

ಪ್ರಾದೇಶಿಕ ಪಕ್ಷಗಳ ತಲೆದಂಡ ಪಡೆಯುತ್ತಿರುವ ಬಾಜಪ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಐದು ರಾಜ್ಯಗಳ ಚುನಾವಣಾ ಪಲಿತಾಂಶಗಳು ಹೊರಬಿದ್ದಿದ್ದು, ಎರಡು ರಾಜ್ಯಗಳಲ್ಲಿ ಬಾಜಪ ಸ್ಪಷ್ಟ ಬಹುಮತವನ್ನು, ಕಾಂಗ್ರೆಸ್ ಒಂದು ರಾಜ್ಯದಲ್ಲಿಯೂ ಬಹುಮತವನ್ನು ಪಡೆದಿವೆ. ಇನ್ನೆರಡು ರಾಜ್ಯಗಳಲ್ಲಿ ಇವೆರಡೂ ಪಕ್ಷಗಳೂ ಇತರೆ ಪುಡಿ ಪಕ್ಷಗಳ ಮತ್ತು ಪಕ್ಷೇತರರ ಸಹಕಾರದೊಂದಿಗೆ ಸರಕಾರ ರಚಿಸುವಷ್ಟು ಸ್ಥಾನಗಳನ್ನು ಪಡೆದಿದ್ದು, ಅವುಗಳನ್ನು ಸೇರಿಸಿಕೊಂಡು ಸರಕಾರ ರಚಿಸುವ ಪ್ರಯತ್ನಕ್ಕೆ ಚಾಲನೆ ಕೊಟ್ಟಿದ್ದು. ಈಗಾಗಲೇ ಈ ಸಂಬಂದ ಮಾತುಕತೆಗಳು ಶುರುವಾಗಿವೆ. ಕೇಂದ್ರದಲ್ಲಿ ಅಧಿಕಾರ ನಡೆಸುತ್ತಿರುವ ಬಾಜಪಕ್ಕೆ ಈ ಕುದುರೆ ವ್ಯಾಪಾರದಲ್ಲಿ ಒಂದಷ್ಟು ಅನಕೂಲವಿದೆ. ಇರಲಿ, ನಾನಿಲ್ಲಿ ಈ ಪಕ್ಷಗಳ ಸೋಲು ಗೆಲುವಿನ ಬಗ್ಗೆ ವಿಶ್ಲೇಷಣೆ ಮಾಡಲು ಇಚ್ಚಿಸುವುದಿಲ್ಲ. ಆದರೆ ಈ ಚುನಾವಣೆಗಳ ಒಂದು ಪರಿಣಾಮದ ಬಗ್ಗೆ ನಾನಿಲ್ಲಿ ಮಾತನಾಡಲು ಬಯಸುತ್ತೇನೆ. ಅದು ಪ್ರಾದೇಶಿಕ ಪಕ್ಷಗಳಿಗೆ ಒದಗಿದ ದುರ್ಗತಿಯ ಬಗ್ಗೆ! 

ಈ ಚುನಾವಣೆಗಳ ಅಂತಿಮ ಪಲಿತಾಂಶವನ್ನು ನೀವು ಸೂಕ್ಷ್ಮವಾಗಿ ಗಮನಿಸಿದರೆ ಒಂದಂತು ಅರ್ಥವಾಗಬಹುದು. ಅದೆಂದರೆ ಕಾಂಗ್ರೆಸ್ ಮತ್ತು ಬಾಜಪದಂತಹ ಎರಡು ರಾಷ್ಟ್ರೀಯ ಪಕ್ಷಗಳನ್ನು ಹೊರತು ಪಡಿಸಿದರೆ ಉಳಿದಂತೆ ಬಹುತೇಕ ಪ್ರಾದೇಶಿಕ ಪಕ್ಷಗಳು ನೆಲಕಚ್ಚಿವೆ. ನಿಜ, ಉತ್ತರಪ್ರದೇಶದಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನಪಕ್ಷಗಳು ಇನ್ನಿಲ್ಲದಂತೆ ದಯನೀಯವಾಗಿ ಸೋತಿದ್ದರೆ, ಗೋವಾದಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷ, ಎನ್.ಸಿ.ಪಿ.ಪಕ್ಷಗಳು ಕಳಪೆ ಸಾಧನೆ ಮಾಡಿವೆ. ಇನ್ನು ಮಣಿಪುರದಲ್ಲಿ ಎನ್.ಪಿ.ಪಿ. ಎ.ಐ.ಟಿ.ಸಿ. ಗಳು ಸಹ ನಿರೀಕ್ಷಿತ ಸ್ಥಾನ ಗಳಿಸುವಲ್ಲಿ ವಿಫಲವಾಗಿವೆ. ಅದೇ ರೀತಿ ಪಂಜಾಬಿನಲ್ಲಿ ಆಮ್ ಆದ್ಮಿ ಪಕ್ಷವು ( ಆಮ್ ಆದ್ಮಿ ಪಕ್ಷವನ್ನು ಜನತೆ ಇನ್ನೂ ಪ್ರಾದಶಿಕ ಪಕ್ಷವೆಂದೇ ಬಾವಿಸಿದ್ದಾರೆ) ಸಹ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದ್ದರೆ, ಗೋವಾದಲ್ಲಿ ಖಾತೆ ತೆಗೆಯಲು ಸೋತಿದೆ. 

ಹಾಗೆ ನೋಡಿದರೆ ಈ ಐದೂ ರಾಜ್ಯಗಳಲ್ಲಿಯೂ ಯಾಕೆ ಪ್ರಾದೇಶಿಕ ಪಕ್ಷಗಳು ವಿಫಲವಾಗಿವೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಬೇಕಾಗುತ್ತದೆ. ಮೊದಲಿಗೆ ಉತ್ತರಪ್ರದೇಶವನ್ನೇ ನೋಡಿ ಕಳೆದ ಇಪ್ಪತ್ತಾರು ವರ್ಷಗಳಿಂದಲೂ ಸಮಾಜವಾದಿ ಪಕ್ಷ, ಬಹುಜನ ಪಕ್ಷಗಳು ಒಂದಾದ ಮೇಲೊಂದರಂತೆ ಆಡಳಿತ ನಡೆಸಿಕೊಂಡು ಬಂದಿದ್ದವು. ಅಲ್ಲಿಯ ಮತದಾರರು ಸತತವಾಗಿ ಪ್ರಾದೇಶಿಕ ಪಕ್ಷಗಳನ್ನು ಆಯ್ಕೆ ಮಾಡುತ್ತಿದ್ದರ ಪರಿಣಾಮವಾಗಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ರಾಷ್ಟ್ರೀಯ ಪಕ್ಷಗಳ ಮೈತ್ರಿಕೂಟದಲ್ಲಿ ಸಿಗಬೇಕಾದ ಅಧಿಕಾರ ಸಿಗುತ್ತಿರಲಿಲ್ಲ. ಇದರಿಂದ ಕೇಂದ್ರದಿಂದ ಸತತವಾಗಿ ಮಲತಾಯಿ ಧೋರಣೆ ಅನುಸರಿಸಲಾಗುತ್ತಿದೆ ಎಂಬ ಅಸಮಾದಾನ ಜನತೆಯಲ್ಲಿ ಮೂಡುತ್ತಾ ಹೋಯಿತು. ಇದರ ಜೊತೆಗೆ ಪ್ರಾದೇಶಿಕ ಪಕ್ಷಗಳಲ್ಲಿ ಪಕ್ಷದ ರಾಷ್ಟ್ರಾದ್ಯಕ್ಷರೂ ಒಬ್ಬರೇ, ಮುಖ್ಯಮಂತ್ರಿಗಳೂ ಒಬ್ಬರೇ ಅನ್ನುವ ಸ್ಥಿತಿ ಇದ್ದು, ಕೊನೆಗೆ ಪಕ್ಷದಲ್ಲಿ ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಹೈಕಮ್ಯಾಂಡೂ ಅವರೇ ಅನ್ನುವ ವಾತಾವರಣವಿತ್ತು. ಇದು ಪಕ್ಷದ ಕಾರ್ಯಕರ್ತರಿಗೆ ಸರಿಯೆನ್ನಿಸಿದ್ದರೂ, ಮತನೀಡುವ ಜನರಿಗೆ ಅತಿರೇಕದ ಸರ್ವಾಧಿಕಾರಿ ಧೋರಣೆ ಎನಿಸಿದ್ದರೆ ಅಚ್ಚರಿಯೇನಿಲ್ಲ. ಸಮಾಜವಾದಿ ಮತ್ತು ಬಹುಜನ ಪಕ್ಷಗಳಲ್ಲಿ ಆಂತರೀಕ ಪ್ರಜಾಪ್ರಭುತ್ವ ಎನ್ನುವುದೇ ಇಲ್ಲ ಮತ್ತು ತೀರಾ ವೈಯುಕ್ತಿಕ ನೆಲೆಯಲ್ಲಿ ಈ ಪಕ್ಷಗಳನ್ನು ನಿಯಂತ್ರಿಸಲಾಗುತ್ತಿದೆ ಎಂಬುದನ್ನು ಅರಿತ ಜನ ಅನಿವಾರ್ಯವಾಗಿ ಬದಲಾವಣೆಯೊಂದನ್ನು ಬಯಸಿದ್ದರು. ಪ್ರಾದೇಶಿಕ ಪಕ್ಷಗಳು ರಾಜ್ಯದ ಹಿತಕಾಯುತ್ತವೆ ಎಂಬ ಜನರ ನಂಬಿಕೆಯನ್ನು ಈ ಪಕ್ಷಗಳು ಇಲ್ಲವಾಗಿಸಿದ್ದವು.

ಇದಕ್ಕೆ ಸರಿಯಾಗಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಅದ್ಬುತ ಬಹುಮತ ಪಡೆದು ಕೇಂದ್ರದಲ್ಲಿ ಅಧಿಕಾರದ ಗದ್ದುಗೆ ಹಿಡಿದ ಬಾಜಪ ರಾಷ್ಟ್ರೀಯವಾದದ ಬಗ್ಗೆ ಹೆಚ್ಚೆಚ್ಚು ಮಾತನಾಡತೊಡಗಿತು. ಮೊದಲಿಂದಲೂ ಸಾಂಸ್ಕೃತಿಕ ರಾಜಕಾರಣ ಮಾಡುತ್ತಲೇ ಬಂದ ಬಾಜಪ ಅಧಿಕಾರ ದೊರಕಿದೊಡನೆ ತನ್ನ ರಾಷ್ಟ್ರೀಯತೆಯನ್ನು ಸಮರ್ಥಿಸುವ ಮಾತುಗಳನ್ನು ಇನ್ನಷ್ಟು ಗಟ್ಟಿದನಿಯಲ್ಲಿ ಹೇಳತೊಡಗಿತು. ಇದು ಜನರನ್ನು ಆಕರ್ಷಿಸತೊಡಗಿತು. ಅದರಲ್ಲಿಯೂ 18ರಿಂದ 30 ವರ್ಷದೊಳಗಿನ ಈ ಪೀಳಿಗೆಯ ಯುವ ಮತದಾರರನ್ನು ಈ ರಾಷ್ಟ್ರೀಯತೆಯ ವಾದದ ಪೂರಕ ಅಂಶಗಳಾದ 'ದೇಶಭಕ್ತಿ- ಏಕತೆ' ಅಂತಹ ವಿಚಾರಗಳು ಮೋಡಿಮಾಡಿದವು. ಹೀಗಾಗಿ ಪ್ರಾದೇಶಿಕ ಪಕ್ಷಗಳನ್ನು ಹೊರತು ಪಡಿಸಿ ಉಳಿದ ಪರ್ಯಾಯ ಪಕ್ಷಗಳತ್ತ ಜನರು ಕಣ್ಣು ಹಾಯಿಸತೊಡಗಿದರು. ಈಗಾಗಲೇ ಕೇಂದ್ರದಲ್ಲಿ ಮತ್ತು ಹಲವು ರಾಜ್ಯಗಳಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೇಸ್ಸಿನ ಬಗ್ಗೆ ಜನತೆಯಲ್ಲಿ ವಿಶ್ವಾಸ ಮೂಡಲಿಲ್ಲ. ಮತ್ತು ಅಂತಹುದೊಂದು ವಿಶ್ವಾಸವನ್ನು ಮೂಡಿಸುವಲ್ಲಿ ಕಾಂಗ್ರೆಸ್ ನಾಯಕತ್ವವೂ ಸಹ ಸೋತಿದ್ದಲ್ಲದೆ ತಾನೇ ಸಮಾಜವಾದಿ ಪಕ್ಷದಂತಹ ಪ್ರಾದೇಶಿಕ ಶಕ್ತಿಯೊಡನೆ ಮೈತ್ರಿ ಮಾಡಿಕೊಂಡುಬಿಟ್ಟಿತ್ತು. ಉಳಿದಂತೆ ಜನತೆಯ ಮುಂದೆ ಇದ್ದುದು ಬಾಜಪ ಒಂದೇ. ಅದರಲ್ಲೂ ತನ್ನ ಆಕ್ರಮಣಕಾರಿ ಶೈಲಿಯಿಂದ ಮತ್ತು ಅಭಿವೃದ್ದಿಯ ಮಾತುಗಳಿಂದ, ನೋಟುಬ್ಯಾನು, ಸರ್ಜಿಕಲ್ ಸ್ಟ್ರೈಕ್ ಅಂತಹ ಕ್ರಮಗಳಿಂದ ದೃಢನಿರ್ದಾರಗಳನ್ನು ತೆಗೆದುಕೊಳ್ಳಬಲ್ಲ ವ್ಯಕ್ತಿ ಎಂದು ತನ್ನನ್ನು ತಾನು ಬಿಂಬಿಸಿಕೊಂಡಿದ್ದ ಪ್ರದಾನಮಂತ್ರಿಗಳಾದ ಶ್ರೀನರೇಂದ್ರ ಮೋದಿಯವರ ವ್ಯಕ್ತಿತ್ವಕ್ಕೆ ಮರುಳಾದ ಜನತೆ ಬಾಜಪಕ್ಕೆ ಮತ ನೀಡಿದರು. ಹೀಗಾಗಿ ಎಲ್ಲೆಲ್ಲಿ ಪ್ರಾದೇಶಿಕ ಪಕ್ಷಗಳು ಸೋಲುತ್ತ ಬಂದಿವೆಯೊ ಅಲ್ಲೆಲ್ಲ ಬಾಜಪ ಮತ್ತು ಕಾಂಗ್ರೆಸ್ ಆ ಸ್ಥಾನಗಳನ್ನು ಆಕ್ರಮಿಸಿಕೊಳ್ಳುತ್ತ ಬಂದಿದ್ದನ್ನು ಈ ಬಾರಿ ಚುನಾವಣೆಯ ಪಲಿತಾಂಶ ತೋರಿಸುತ್ತಿದೆ. ಆದ್ದರಿಂದಲೇ ಗೋವಾದಲ್ಲಿ ಮತ್ತು ಮಣಿಪುರ ಉತ್ತರಕಾಂಡದಲ್ಲಿ ಕಾಂಗ್ರೆಸ್ ಬಾಜಪಗಳು ಹೆಚ್ಚು ಸ್ಥಾನಗಳನ್ನು ಪಡೆದವು. ಇನ್ನು ಪಂಜಾಬಿಗೆ ಬಂದರೆ ಅಲ್ಲಿನ ಪ್ರಾದೇಶಿಕ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿದ್ದರ ಪರಿಣಾಮವಾಗಿ ಬಾಜಪವೂ ಸಹ ತನ್ನ ನೆಲೆಯನ್ನು ಕಳೆದುಕೊಳ್ಳಬೇಕಾಯಿತು. ಇದರ ಸಂಪೂರ್ಣ ಲಾಭವನ್ನು ಕಾಂಗ್ರೆಸ್ ಪಡೆದುಕೊಂಡಿತು.

ವರ್ತಮಾನದ ರಾಜಕಾರಣದ ತಂತ್ರಗಳು ತೀವ್ರವಾಗಿ ಬದಲಾಗಿವೆ. ಜಾತಿ ಸಮೀಕರಣಗಳ ಜೊತೆಜೊತೆಗೆ ರಾಷ್ಟ್ರೀಯವಾದ ಮತ್ತು ದೇಶಭಕ್ತಿಗಳಂತಹ ಬಲಪಂಥೀಯ ನಿಲುವುಗಳತ್ತ ಜನ ಆಕರ್ಷಿತರಾಗುತ್ತಿದ್ದಾರೆ. ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿರುವ ಭಯೋತ್ಪಾದನೆಯ ಆತಂಕ ಸಹಜವಾಗಿಯೇ ಭಾರತೀಯರಲ್ಲಿ ಸೃಷ್ಠಿಯಾಗಿದೆ. ಈ ಬಾರಿಯ ಚುನಾವಣಾ ಪ್ರಚಾರದಲ್ಲಿ ಬಾಜಪ ಈ ಭಯೋತ್ಪಾದಕತೆ ಮತ್ತು ರಾಷ್ಟ್ರೀಯತೆಯ ಬಗ್ಗೆ ಹೆಚ್ಚು ಒತ್ತು ಕೊಟ್ಟಿದ್ದು ಇದೇ ಕಾರಣಕ್ಕೆ ಮತ್ತು ಇದು ಅದಕ್ಕೆ ಅನುಕೂಲಕರವಾಗಿ ಪರಿಣಮಿಸಿತು.

ಇನ್ನೂ ಒಂದು ವಿಶೇಷವೆಂದರೆ ಹಿಂದಿನಿಂದಲೂ ಬಾಜಪ ಪ್ರಾದೇಶಿಕ ಪಕ್ಷಗಳನ್ನು ಉಪಯೋಗಿಸಿಕೊಂಡು ದೂರ ತಳ್ಳುವ ನೀತಿಯನ್ನೇ ಅನುಸರಿಸುತ್ತ ಬಂದಿರುವುದನ್ನು ನಾವು ಕಾಣಬಹುದು. ಹೀಗೆ ಅದು ಒಂದು ಪ್ರಾದೇಶಿಕ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡು, ನೆಲೆ ಕಂಡುಕೊಂಡ ನಂತರ ಆ ಪಕ್ಷವನ್ನು ಬಿಟ್ಟು ಹಾಕಿದ ಉದಾಹರಣೆಗಳು ಬಹಳ ಇವೆ. ತೀರಾ ಸನಿಹದ ಉದಾಹರಣೆ ನೋಡುವುದಾದರೆ ಮಹಾರಾಷ್ಟ್ರದಲ್ಲಿ ಅದು ಮೂರುದಶಕಗಳ ಕಾಲ ತನ್ನ ಜೊತೆಗಿದ್ದ ಶಿವಸೇನೆಯ ಮತ್ರಿಯಿಂದ ಹೊರಬಂದು ಸ್ವತಂತ್ರವಾಗಿಯೇ ವಿದಾನಸಭಾ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಎದುರಿಸಿ ಗೆದ್ದಿದೆ. ಮೂರು ದಶಕಗಳ ಹಿಂದೆ ಬಾಳಾ ಠಾಕ್ರೆಯವರ ಮೈತ್ರಿ ಇರದೇ ಹೋಗಿದ್ದರೆ ಮಹಾರಾಷ್ಟ್ರದ ರಾಜಕಾರಣದಲ್ಲಿ ಹೆಜ್ಜೆಗುರುತು ಮೂಡಿಸಲೂ ಬಾಜಪಕ್ಕೆ ಸಾದ್ಯವಿರಲಿಲ್ಲ. ಶಿವಸೇನೆಯನ್ನು ಬಳಸಿಕೊಂಡು ತನ್ನ ರಾಜಕೀಯ ಅಸ್ತಿತ್ವವನ್ನು ಕಂಡುಕೊಂಡ ಬಾಜಪ ಇದೀಗ ಅದನ್ನೆಲ್ಲ ಮರೆತಿದೆ. ಇನ್ನೂ ವಿಶೇಷವೆಂದರ ಹೀಗೆ ಶಿವಸೇನೆಯ ಸಖ್ಯ ತೊರೆದ ನಂತರವೂ ಬಾಜಪ ಉತ್ತಮ ಸಾಧನೆಯನ್ನು ಮಾಡಿರುವುದಾಗಿದೆ. ಇದೀಗ ಪಂಜಾಬಿನಲ್ಲಿಯೂ ಬಾಜಪ ಅಕಾಲಿದಳದೊಂದಿಗೆ ಮೈತ್ರಿ ಮುರಿದುಕೊಂಡು ಸ್ವತಂತ್ರವಾಗಿ ಸ್ಪರ್ದಿಸಿದ್ದರೆ ಬಹುಶ: ಅದು ಇನ್ನಷ್ಟು ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದಿತ್ತೆಂಬುದು ಬಾಜಪದ ನಾಯಕರು ಆಲೋಚಿಸುತ್ತಿದ್ದರೆ ಅಚ್ಚರಿಯೇನಿಲ್ಲ.

ಈ ಕಾರಣಗಳಿಗಾಗಿಯೇ ಮಾಜಿ ಪ್ರದಾನಮಂತ್ರಿಗಳಾದ ಶ್ರೀ ಹೆಚ್.ಡಿ.ದೇವೇಗೌಡರು ಈ ಪಲಿತಾಂಶಗಳು ಬರುವ ಮುನ್ನವೇ, ಅಕಸ್ಮಾತ್ ಬಾಜಪ ಏನಾದರು ಈ ಚುನಾವಣೆಗಳಲ್ಲಿ ಗೆದ್ದರೆ, ಪ್ರಾದೇಶಿಕ ಪಕ್ಷಗಳು ಅಪಾಯಕ್ಕೆ ಸಿಲುಕಲಿವೆ ಎಂದು ಹೇಳಿದ್ದು. ಬಾಜಪದಂತಹ ರಾಷ್ಟ್ರೀಯ ಪಕ್ಷವನ್ನು ಎದುರಿಸಲು ಬೇಕಾದ ಸಂಪನ್ಮೂಲಗಳಾಗಲಿ, ಶಕ್ತಿಯಾಗಲಿ ಪ್ರಾದೇಶಿಕ ಪಕ್ಷಗಳಿಗಿರುವುದು ಸಾದ್ಯವೇ ಇಲ್ಲದಂತಹ ಪರಿಸ್ಥಿತಿ ಇದ್ದು, ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವೇ ಇಲ್ಲದಂತಹ ಸನ್ನಿವೇಶ ಸೃಷ್ಠಿಯಾಗಿದೆ. ಇದೆ ಇಂಡಿಯಾದ ಪ್ರಜಾಪ್ರಭುತ್ವಕ್ಕೆ ಮಾರಕವಾಗಲಿದೆಯೆಂದೂ ಸಹ ಅವರು ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿನ್ನೆಯಲ್ಲಿ ನಾವು ಮುಂದಿನ ವರ್ಷ ಕರ್ನಾಟಕದಲ್ಲಿ ನಡೆಯಲಿರುವ ರಾಜ್ಯವಿದಾನಸಭಾ ಚುನಾವಣೆಗಳಿಗೆ ನಮ್ಮ ಪ್ರಾದೇಶಿಕ ಪಕ್ಷವಾದ ಜಾತ್ಯಾತೀತ ಜನತಾದಳ ಹೇಗೆ ಸನ್ನದ್ದವಾಗಲಿದೆಯೆಂಬುದನ್ನು ನಾವು ಕುತೂಹಲದಿಂದ ಕಾದು ನೋಡಬೇಕಿದೆ. ಆದರೆ ಆಗಬಹುದಾದ ಅಪಾಯದ ಅರಿವಿರುವ ದೇವೇಗೌಡರು ಸೂಕ್ತವಾದ ತಂತ್ರಗಾರಿಕೆಯನ್ನು ಮಾಡಬಲ್ಲರೇ ಎಂಬುದೇ ಈಗ ನಮ್ಮ ಮುಂದಿರುವ ಪ್ರಶ್ನೆ! 

No comments:

Post a Comment