Mar 29, 2017

ಉಪಚುನಾವಣೆಗಳೆಂಬ ಅನಿವಾರ್ಯ ಅನಿಷ್ಠಗಳು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇದೇ ಏಪ್ರಿಲ್ ಒಂಭತ್ತನೇ ತಾರೀಖಿನಂದು ಕರ್ನಾಟಕದ ಎರಡು ವಿದಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆಗಳು ನಡೆಯಲಿವೆ. ಇವುಗಳಲ್ಲಿ ಮೈಸೂರು ಜಿಲ್ಲೆಯ ಗುಂಡ್ಲುಪೇಟೆಯ ಶಾಸಕರಾಗಿದ್ದ ಶ್ರೀ ಮಹದೇವ ಪ್ರಸಾದ್ ನಿಧನರಾಗಿದ್ದರೆ, ಇದೇ ಜಿಲ್ಲೆಯ ನಂಜನಗೂಡು ಕ್ಷೇತ್ರದಲ್ಲಿ ಶಾಸಕರಾಗಿದ್ದ ಶ್ರೀ ಶ್ರೀನಿವಾಸ್ಪ್ರಸಾದ್ ತಾವು ಆಯ್ಕೆಯಾಗಿ ಬಂದಿದ್ದ ಕಾಂಗ್ರೆಸ್ ಪಕ್ಷಕ್ಕೆ ರಾಜಿನಾಮೆ ನೀಡಿದ್ದರ ಮುಂದುವರೆದ ಭಾಗವಾಗಿ ತಮ್ಮ ಶಾಸಕನ ಸ್ಥಾನಕ್ಕೂ ರಾಜೀನಾಮೆ ಸಲ್ಲಿಸಿದ್ದರು. ಹೀಗಾಗಿ ತೆರವಾದ ಈ ಎರಡೂ ಕ್ಷೇತ್ರಗಳಿಗೆ ಇದೀಗ ಉಪಚುನಾವಣೆಗಳು ನಡೆಯುತ್ತಿವೆ.

ಇರಲಿ, ನಮ್ಮ ರಾಜ್ಯದ ವಿದಾನಸಭೆಯ ಐದು ವರ್ಷಗಳ ಅವಧಿ ಮುಗಿಯುವುದು ಮುಂದಿನ ವರ್ಷದ ಅಂದರೆ 2018ರ ಮೇ ತಿಂಗಳಿಗೆ. ಅಂದರೆ ಈ ಸದನದ ಅವಧಿ ಬಾಕಿ ಇರುವುದು ಇನ್ನು ಕೇವಲ ಹದಿನಾಲ್ಕು ತಿಂಗಳುಗಳು ಮಾತ್ರವಾದರು, ಮೂರು ತಿಂಗಳ ಮುಂಚೆಯೇ ಚುನಾವಣೆಯ ಅಧಿಕೃತ ಅದಿಸೂಚನೆ ಹೊರಬೀಳುವುದರಿಂದ ಶಾಸಕರು ಸಕ್ರಿಯವಾಗಿ ಕೆಲಸ ಮಾಡಲು ಉಳಿದಿರುವುದು ಕೇವಲ 11 ತಿಂಗಳುಗಳು ಮಾತ್ರ. ಇಷ್ಟು ಕಡಿಮೆ ಅವಧಿಗಾಗಿ ಒಂದು ಚುನಾವಣೆ ನಡೆಸಬೇಕೇ ಮತ್ತು ಸರಕಾರವೊಂದು ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಬೇಕೇ ಎಂಬ ಸರಳ ಪ್ರಶ್ನೆ ಜನತೆಯಲ್ಲಿ ಉದ್ಭವವಾದರೆ ಅಚ್ಚರಿಯೇನಿಲ್ಲ. ಆದರೆ ಪ್ರಜಾಪ್ರಭುತ್ವದಲ್ಲಿ, ಸರಕಾರದಲ್ಲಿ ಜನರ ಬಾಗವಹಿಸುವಿಕೆ ಬಹಳ ಮುಖ್ಯವಾಗಿರುವುದರಿಂದ ಇಂತಹ ಚುನಾವಣೆಗಳಿಗೆ ಸರಕಾರ ವೆಚ್ಚ ಮಾಡಲೇ ಬೇಕಾದುದು ಅನಿವಾರ್ಯವಾಗಿದೆ ಎಂಬುದು ಸಹ ಅಷ್ಟೇ ಸತ್ಯ. ನನ್ನ ತಕರಾರು ಇರುವುದು ಈ ವೆಚ್ಚದ ಬಗೆಗಲ್ಲ. ಬದಲಿಗೆ ಉಪಚುನಾವಣೆಗಳಿಗೆ ಕಾರಣವಾಗುವ ವಿಷಯಗಳ ಬಗ್ಗೆ. ಅದರ ಬಗ್ಗೆ ಒಂದಿಷ್ಟು ನೋಡೋಣ:
ಮೊದಲಿಗೆ ಈ ಉಪಚುನಾವಣೆಗಳನ್ನೇ ಗಮನಿಸೋಣ. ಗುಂಡ್ಲುಪೇಟೆಯ ಉಪಚುನಾವಣೆಗೆ ಒಂದು ಅರ್ಥವಿದೆ. ಅಲ್ಲಿನ ಶಾಸಕರಾಗಿದ್ದವರು ದಿಡೀರನೇ ನಿಧನರಾಗಿದ್ದರಿಂದಾಗಿ ಆ ಚುನಾವಣೆ ನಡೆಯುತ್ತಿದೆ, ಮತ್ತದು ನ್ಯಾಯಯುತವೂ ಆಗಿದೆ. ಏಕೆಂದರೆ ಸಾವು ಯಾರನ್ನೂ ಕೇಳಿ ಬರುವುದಲ್ಲ, ಬಿಡಿ. ಇನ್ನು ನಂಜನಗೂಡು ಕ್ಷೇತ್ರದ ಉಪಚುನಾವಣೆಯ ಬಗ್ಗೆ ಹಾಗೆ ಹೇಳುವಂತಿಲ್ಲ. ಯಾಕೆಂದರೆ ಇದುವರೆಗು ಅದರ ಶಾಸಕರಾಗಿದ್ದ ಶ್ರೀ ಶ್ರೀನಿವಾಸಪ್ರಸಾದ್ ಅವರು ತಮ್ಮ ವೈಯುಕ್ತಿಕ ಕಾರಣಗಳಿಗಾಗಿ ರಾಜಿನಾಮೆ ಕೊಟ್ಟು ಅಲ್ಲಿ ಚುನಾವಣೆಗೆ ಕಾರಣರಾಗಿದ್ದಾರೆ. ಈ ಚುನಾವಣೆಯನ್ನು ಜನರ ಮೇಲೆ ಹೇರಿದ (ಹೌದು, ಇದನ್ನು ಜನತೆಯ ಮೇಲೆ ಹೇರಿದ ಎನ್ನಲೇ ಬೇಕಾಗುತ್ತದೆ. ಯಾಕೆಂದರೆ ಈ ಚುನಾವಣೆಗೆ ಸರಕಾರ ಖರ್ಚು ಮಾಡುವ ಹಣ ಸಾರ್ವಜನಿಕರದ್ದಾಗಿದೆ ಅಂದರೆ ಸರಕಾರದ್ದಾಗಿದೆ) ಕೀರ್ತಿಯು ಸನ್ಮಾನ್ಯ ಶ್ರೀನಿವಾಸ ಪ್ರಸಾದ್ ಅವರದ್ದೇ ಆಗಿದೆ. ಕ್ಷಮಿಸಿ, ಇಲ್ಲಿ ನಾನು ಕೇವಲ ಶ್ರೀನಿವಾಸ್ ಪ್ರಸಾದ್ ಅವರೊಬ್ಬರನ್ನೇ ಗುರಿಯಾಗಿಟ್ಟುಕೊಂಡು ಮಾತಾಡುತ್ತಿಲ್ಲ. ಕಳೆದೊಂದು ದಶಕದಲ್ಲಿ ಇಂತಹ ಹತ್ತು ಹಲವು ಚುನಾವಣೆಗಳಿಗೆ ಕಾರಣವಾಗಿರುವ ರಾಜಕಾರಣಿಗಳ ಮತ್ತು ರಾಜಕೀಯ ಪಕ್ಷಗಳ ಬಗ್ಗೆಯೂ ಹೇಳುತ್ತಿರುವೆ. ಅದಕ್ಕಾಗಿ ನಾನು 2005ನೇ ಇಸವಿಯನ್ನು ಬೇಸ್ ಆಗಿಟ್ಟುಕೊಂಡಿದ್ದೇನೆ.(ಈಗೇನು ಶ್ರೀನಿವಾಸ್ ಪ್ರಸಾದ್ ಮಾಡಿದ್ದಾರೆಯೋ ಅದನ್ನೇ ಈ ಹಿಂದೆ ಈಗಿನ ಮುಖ್ಯಮಂತ್ರಿಗಳಾಗಿರುವ ಶ್ರೀ ಸಿದ್ದರಾಮಯ್ಯನವರು 2006ರಲ್ಲಿಯೇ ಮಾಡಿದ್ದರು.)

ತಮ್ಮನ್ನು ಮುಖ್ಯಮಂತ್ರಿಗಳು ಸಂಪುಟದಿಂದ ಹೇಳದೆ ಕೇಳದೆ ಬಿಟ್ಟಿದ್ದನ್ನು ಅವಮಾನವೆಂದು ಬಾವಿಸಿದ ಪ್ರಸಾದ್ ರಾಜಿನಾಮೆ ನೀಡಿದ್ದು ಈಗ ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ತಮ್ಮ ಸ್ವಾಬಿಮಾನಕ್ಕೆ ದಕ್ಕೆ ಬಂದ ಕಾರಣ ತಾವು ರಾಜಿನಾಮ ನೀಡುತ್ತಿರುವುದಾಗಿ ಅವರೇ ಹೇಳಿಕೊಂಡಿದ್ದಾರೆ. ಇದು ಅವರ ವೈಯುಕ್ತಿಕ ಅನಿಸಿಕೆ, ಮತ್ತದನ್ನು ವ್ಯಕ್ತಪಡಿಲು ಅವರಿಗೆ ಸಾತಂತ್ರವೂ ಇದೆ. ಆದರೆ ನಂಜನಗೂಡಿನ ಜನತೆಗೆ ಈ ಚುನಾವಣೆ ಬೇಕಿತ್ತೇ? ನಿಜಕ್ಕೂ ಆ ಕ್ಷೇತ್ರದ ಜನರಿಗೆ ಪ್ರಸಾದರು ರಾಜೀನಾಮೆ ನೀಡುವುದರ ಬಗ್ಗೆ ಸಮ್ಮತಿಯಿತ್ತೇ? ಮತ್ತು ಈ ಉಪಚುನಾವಣೆಗಾಗಿ ತಮ್ಮ ಹಣವನ್ನು ಖರ್ಚು ಮಾಡಲು ರಾಜ್ಯದ ಜನತೆಗೆ ಯಾವುದೇ ಆಕ್ಷೇಪಗಳಿರಲಿಲ್ಲವೇ? ಸರಕಾರ ಇವತ್ತು ಖರ್ಚು ಮಾಡುವ ಹಣವನ್ನು ಭರಿಸುವುದು ಜನರೇ ಆದ್ದರಿಂದ ಇದಕ್ಕೆ ಜನತೆಯ ಅಂಗೀಕಾರ ಬೇಕೆನಿಸುವುದಿಲ್ಲವೇ? ಈ ಯಾವ ಪ್ರಶ್ನೆಗಳಿಗೂ ಉತ್ತರ ಕೊಡಲೇ ಬೇಕಾದ ಅನಿವಾರ್ಯತೆ ಸರಕಾರಕ್ಕಾಗಲಿ ಪ್ರಸಾದರಿಗಾಗಲಿ ಕಾನೂನಾತ್ಮಕವಾಗಿ ಇಲ್ಲದೇ ಇರಬಹುದು ಆದರೆ ನೈತಿಕವಾಗಿಯಾದರು ಉತ್ತರಿಸುವ ಹೊಣೆಗಾರಿಕೆ ಇಲ್ಲವೇ? ಇಂತಹ ಹತ್ತು ಹಲವು ಪ್ರಶ್ನೆಗಳು ಜನರಲ್ಲಿ ಮೂಡಿದ್ದು ಈಗಲಾದರೂ ಕೇಂದ್ರ ಸರಕಾರ ಮತ್ತು ಚುನಾವಣಾ ಆಯೋಗ ಇದಕ್ಕೆ ಉತ್ತರ ಕಂಡುಕೊಂಡು ಇಂತಹ ಅನಗತ್ಯ ಚುನಾವಣೆಗಳನ್ನು ತಡೆಯ ಬೇಕಾಗಿದೆ.

2006ರಲ್ಲಿ ಜಾತ್ಯಾತೀತ ಜನತಾದಳದಲ್ಲಿದ್ದ ಶ್ರೀ ಸಿದ್ದರಾಮಯ್ಯನವರು ಪಕ್ಷ ತೊರೆದು ಹೊರಬಂದಾಗ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿ ಒಂದು ಉಪಚುನಾವಣೆಗೆ ಕಾರಣರಾಗಿದ್ದರು. ನಂತರ 2008ರಲ್ಲಿ ಅಧಿಕಾರಕ್ಕೆ ಬಂದ ಬಾಜಪವು ತನ್ನ ಸಂಖ್ಯಾಬಲವನ್ನು ಹೆಚ್ಚಿಸಿಕೊಳ್ಳಲು ಆಪರೇಷನ್ ಕಮಲ ಮಾಡಿ ಇಂತಹ ಹಲವು ಉಪಚುನಾವಣೆಗಳಿಗೆ ಕಾರಣವಾಗಿದ್ದು ಉಂಟು. ಹೀಗಾಗಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳೂ ತಮಗೆ ಅನುಕೂಲವಾಗುವಾಗೆಲ್ಲ ಇಂತಹ ಉಪಚುನಾವಣೆಗಳನ್ನು ಜನರ ಮೇಲೆ ಹೇರುವಲ್ಲಿ ಮುಖ್ಯಪಾತ್ರ ವಹಿಸುತ್ತಲೇ ಬರುತ್ತಿವೆ. ನೀವು 2008ರಲ್ಲಿ ನಡೆದ ಆಪರೇಷನ್ ಕಮಲದ ಉಪಚುನಾವಣೆಗಳನ್ನೇ ನೋಡಿ ಅಷ್ಟೊಂದು ಜನ ಶಾಸಕರು ಒಬ್ಬರಾದ ಮೇಲೆ ಒಬ್ಬರಂತೆ ತಾವು ಗೆದ್ದ ಪಕ್ಷಕ್ಕೆ ಮತ್ತು ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಆಗ ಅಧಿಕಾರದಲ್ಲಿದ್ದ ಬಾಜಪ ಸೇರಿಕೊಂಡು ಮತ್ತೆ ಚುನಾವಣೆ ಎದುರಿಸಿ ಗೆದ್ದು ಬಂದರು. ತಾಂತ್ರಿಕವಾಗಿ ಇದು ಸರಿಯೇ ಇರಬಹುದು ಮತ್ತು ಜನಪ್ರತಿನಿಧಿ ಕಾಯ್ದೆಯಲ್ಲಿ ಇದಕ್ಕೆ ಅವಕಾಶವೂ ಇರಬಹುದು. ಆದರೆ ಅನಗತ್ಯವಾಗಿ ಚುನಾವಣೆಗಳು ನಡೆಯುವಂತೆ ಮಾಡುವುದು ಜನತೆಯ ದೃಷ್ಠಿಯಿಂದಲಾದರು ಅಪರಾಧವೆಂದು ಇವರ್ಯಾರಿಗೂ ಅನ್ನಿಸಲೇ ಇಲ್ಲ. ಇವತ್ತು ಶ್ರೀನಿವಾಸ್ ಪ್ರಸಾದ್ ಅವರಂತಹ ಸಜ್ಜನ ರಾಜಕಾರಣಿಗಳಿಗೀ ಈ ಅಪರಾಧಿ ಪ್ರಜ್ಞೆ ಕಾಡುತ್ತಲೇ ಇಲ್ಲ ಎನ್ನುವುದು ಈ ನಾಡಿನ ದುರಂತವಂತೂ ಹೌದು.

ಇಷ್ಟಲ್ಲದೆ ಉಪಚುನಾವಣೆಗಳು ನಡೆಯಲೂ ಇನ್ನೂ ಕೆಲವು ಕಾರಣಗಳಿವೆ. ಅವುಗಳನ್ನೊಂದಿಷ್ಟು ನೋಡೋಣ:

ಲೋಕಸಭಾ ಚುನಾವಣೆಗಳು ಬಂದಾಗ ಕೆಲವು ಪಕ್ಷಗಳಿಗೆ ಸೂಕ್ತ ಅಭ್ಯರ್ಥಿಗಳು ಸಿಗದೇ ಇದ್ದಾಗ ಹಾಲಿ ಶಾಸಕರುಗಳನ್ನು ಲೋಕಸಭೆಯ ಅಭ್ಯರ್ಥಿಗಳನ್ನಾಗಿ ಮಾಡಿ ನಿಲ್ಲಿಸುತ್ತವೆ. ಆಗ ಆತನೇನಾದರು ಗೆದ್ದರೆ, ಆತನ ರಾಜೀನಾಮೆಯಿಂದ ತೆರವಾಗುವ ವಿದಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಲೇ ಬೇಕಾಗುತ್ತದೆ. 2014ರ ಲೋಕಸಭಾ ಚುನಾವಣೆಯಲ್ಲಿಯೂ ಈ ರೀತಿ ನಡೆದಿದ್ದನ್ನು ನಾವು ಕಾಣಬಹುದಾಗಿದೆ. ವಿದಾನಸಭೆಯ ಶಾಸಕರಾಗಿದ್ದ ಶ್ರೀ ಪ್ರಕಾಶ್ಹುಕ್ಕೇರಿಯವರನ್ನು ಕಾಂಗ್ರೆಸ್ ಲೋಕಸಭೆಗೆ ನಿಲ್ಲಿಸಿ ಆರಿಸಿ ಕಳಿಸಿತ್ತು. ತದನಂತರ ಅವರ ವಿದಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಿತು.

ಇನ್ನು ಕೆಲವೊಮ್ಮೆ ಇದು ಉಲ್ಟಾ ಕೂಡ ಆಗುತ್ತದೆ. ಹೇಗೆಂದರೆ ವಿದಾನಸಭಾ ಚುನಾವಣೆಗಳು ಬಂದ ಕೂಡಲೇ ರಾಜ್ಯ ರಾಜಕೀಯದತ್ತ ಆಸಕ್ತಿ ಇರುವ ಹಲವು ಸಂಸದರು ವಿದಾನಸಭಾ ಚುನಾವಣೆಗಳಲ್ಲಿ ಸ್ಪರ್ದಿಸುತ್ತಾರೆ. ಇಲ್ಲಿ ಗೆದ್ದರೆ ಲೋಕಸಭಾ ಸ್ಥಾನಕ್ಕೆ ಮತ್ತೆ ಚುನಾವಣೆ ನಡೆಯುವುದು ಗ್ಯಾರಂಟಿ. ಹೀಗೆ ಮಾಡುವುದರಿಂದಲೂ ಸಹ ಜನರ ಮೇಲೆ ಅನಗತ್ಯವಾಗಿ ಉಪಚುನಾವಣೆಯನ್ನು ಹೇರುವುದು ನಡೆಯುತ್ತಲೇ ಇದೆ. ಈ ವಿಚಾರವನ್ನು ಹೇಳುವಾಗ ನಾನು ಹುಕ್ಕೇರಿಯವರ ಹೆಸರನ್ನು ಒಂದು ಉದಾಹರಣೆಯಾಗಿ ಮಾತ್ರ ಬಳಸಿಕೊಂಡಿದ್ದೇನೆ. ಲೇಖನ ದೀರ್ಘವಾಗಿಬಿಡುವ ಉದ್ದೇಶದಿಂದ ನಾನು ಎಲ್ಲರ ಹೆಸರುಗಳನ್ನೂ ಹೇಳಹೋಗಿಲ್ಲ.

ಉಪಚುನಾವಣೆಗಳನ್ನು ಅನಗತ್ಯವಾಗಿ ಜನರ ಮೇಲೆ ಹೇರುವ ಇನ್ನೊಂದು ಕಾರಣವೂ ಇದೆ: ಅದೆಂದರೆ ಒಬ್ಬ ಅಭ್ಯರ್ಥಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದು. ಅಕಸ್ಮಾತ್ ಎರಡರಲ್ಲೂ ಗೆದ್ದರೆ ಬೇಕಾದ ಸ್ಥಾನ ಇಟ್ಟುಕೊಂಡು ಇನ್ನೊಂದಕ್ಕೆ ರಾಜಿನಾಮೆ ಸಲ್ಲಿಸಿ ಅಲ್ಲಿ ಮತ್ತೆ ಚುನಾವಣೆ ನಡೆಯುವಂತೆ ಮಾಡುವುದು ಇದೂ ಸಹ ಕಾನೂನಿನ ಪ್ರಕಾರವೇ ನಡೆದರೂ ಜನರಿಗೆ ಹೊರೆಯಂತೂ ಹೌದು. ಇದಕ್ಕೆ ಇತ್ತೀಚೆಗಿನ ಬಹುದೊಡ್ಡ ಉದಾಹರಣೆ ಎಂದರೆ ನಮ್ಮ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ಕಳೆದ 2014ರ ಲೋಕಸಭಾ ಚುನಾವಣೆಯಲ್ಲಿ ಗುಜರಾತಿನ ವಡೋದರ ಹಾಗು ಉತ್ತರಪ್ರದೇಶದ ವಾರಣಾಸಿಯಿಂದಲು ಸ್ಪರ್ದಿಸಿ ಎರಡರಲ್ಲೂ ಗೆಲುವು ಸಾದಿಸಿದ್ದರು. ಆದರೆ ನಂತರದಲ್ಲಿ ವಡೋದರ ಸ್ಥಾನಕ್ಕೆ ರಾಜೀನಾಮೆ ನೀಡಿ ವಾರಣಾಸಿಯನ್ನು ಉಳಿಸಿಕೊಂಡಿದ್ದರು. ಇದರಿಂದಾಗಿ ವಡೋದರದಲ್ಲಿ ಉಪಚುನಾವಣೆ ನಡೆಯಬೇಕಾಗಿ ಬಂದಿತ್ತು. ದೇಶದ ಪ್ರದಾನಮಂತ್ರಿಯಂತವರೆ ಹೀಗೆ ಉಪಚುನಾವಣೆಗಳನ್ನು ಅನಿವಾರ್ಯವಾಗಿಸುತ್ತಿರುವಾಗ ಉಳಿದ ರಾಜಕಾರಣಿಗಳ ಬಗ್ಗೆ ಹೇಳುವುದಾದರು ಏನು?

ಹಾಗಿದ್ದರೆ ಇಂತಹ ಅನಗತ್ಯ ಚುನಾವಣೆಗಳನ್ನು ತಪ್ಪಿಸಲು ಏನು ಮಾಡಬಹುದು ಎಂಬ ಪ್ರಶ್ನೆ ಎದುರಾಗುವುದು ನಿಜ. ಕೇಂದ್ರ ಚುನಾವಣಾ ಆಯೋಗವು ಕೆಲವು ಹೊಸ ಕಾನೂನುಗಳನ್ನು ಜಾರಿಗೊಳಿಸುವುದರಿಂದ ಇಂತಹ ಉಪಚುನಾವಣೆಗಳನ್ನು ನಿಯಂತ್ರಿಸಬಹುದಾಗಿದೆ. 

ಯಾವುದೇ ಹಾಲಿ ಶಾಸಕ, ಸಂಸದ ತನ್ನ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾದದಲ್ಲಿ, ಆತ ಯಾವುದೇ ಕಾರಣ ನೀಡಲಿ, ರಾಜಿನಾಮೆ ನೀಡಿದ ನಂತರ ನಡೆಯುವ ಉಪಚುನಾವಣೆಗೆ ಸರಕಾರ ಖರ್ಚು ಮಾಡುವ ಹಣವನ್ನು ಆತನೇ ಭರಿಸುವಂತೆ ಒಂದು ಶಾಸನ ರೂಪಿಸಬೇಕು. ನಂತರ ಹತ್ತು ವರ್ಷಗಳ ತನಕವೂ ಆತ ಆ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸದಂತೆ ನಿರ್ಬಂದ ವಿಧಿಸಬೇಕು ಹೀಗಾದಾಗ ಮಾತ್ರ ತಮಗಿಷ್ಟ ಬಂದ ಹಾಗೆ ರಾಜಿನಾಮೆ ನೀಡಿ ಉಪಚುನಾವಣೆಗಳಿಗೆ ಕಾರಣವಾಗುವ ರಾಜಕಾರಣಿಗಳ ಬೇಜವಾಬ್ದಾರಿ ವರ್ತನೆಗೆ ಕಡಿವಾಣ ಹಾಕಬಹುದಾಗಿದೆ. ಆದರೆ ಅದಿಕಾರ ಗಳಿಕೆಯನ್ನೇ ತಮ್ಮ ಸಿದ್ದಾಂತವನ್ನಾಗಿ ಮಾಡಿಕೊಂಡಿರುವ ನಮ್ಮ ರಾಜಕಾರಣಿಗಳು ಇಂತಹದೊಂದು ಶಾಸನ ರೂಪಿಸಲು ಮುಂದಾಗುತ್ತಾರೆಯೇ ಎನ್ನುವ ಪ್ರಶ್ನೆಗೆ ನನ್ನಲ್ಲಂತೂ ಉತ್ತರವಿಲ್ಲ 

No comments:

Post a Comment