Mar 15, 2017

ಗೋವಾ: ಕಾಂಗ್ರೆಸ್ಸಿನ ದಿವ್ಯ ನಿರ್ಲಕ್ಷ್ಯದಿಂದ ಅಧಿಕಾರ ಪಡೆದ ಬಾಜಪ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಬಹುಶ: ಇತಿಹಾಸ ಮರುಕಳಿಸುತ್ತದೆ ಎನ್ನುವ ನಾಣ್ಣುಡಿ ಹುಟ್ಟಿಕೊಂಡಿದ್ದೇ ಇಂಡಿಯಾದ ರಾಜಕಾರಣವನ್ನು ಗಮನದಲ್ಲಿಟ್ಟುಕೊಂಡೆನಿಸುತ್ತಿದೆ. ಕಳೆದ ಆರು ದಶಕಗಳ ಕಾಲ ರಾಜ್ಯಗಳ ರಾಜ್ಯಪಾಲರುಗಳನ್ನು ತನ್ನ ಪಕ್ಷದ ಕಾರ್ಯಕರ್ತರುಗಳಂತೆ ಬಳಸಿಕೊಂಡ ಕಾಂಗ್ರೆಸ್ ಇವತ್ತು ಗೋವಾದಲ್ಲಿ ರಾಜ್ಯಪಾಲರಿಂದ ತನ್ನ ಪಕ್ಷಕ್ಕೆ ಅನ್ಯಾಯವಾಗಿದೆಯೆಂದು ಬೊಬ್ಬೆ ಹೊಡೆಯುತ್ತಿದೆ. ಬಹುಶ: ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತಾಡುವ ಬಾಜಪ ಕಾಂಗ್ರೆಸ್ಸಿನ ಇಂತಹ ನೀತಿಗಳನ್ನು ಅಳವಡಿಸಿಕೊಳ್ಳುವುದರಲ್ಲಿ ಯಾವ ತಪ್ಪೂ ಇಲ್ಲವೆಂದು ಬಾವಿಸಿದಂತಿದೆ.
ಗೋವಾದ 40ಸ್ಥಾನಗಳಲ್ಲಿ 17ಸ್ಥಾನಗಳನ್ನು ಪಡೆದ ಕಾಂಗ್ರೆಸ್ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 13ಸ್ಥಾನಗಳನ್ನು ಪಡೆದ ಬಾಜಪ ಎರಡನೆಯ ದೊಡ್ಡ ಪಕ್ಷವಾಗಿತ್ತು. ಮಹಾರಾಷ್ಟ್ರವಾದಿ ಗೋಮಾಂತಕ ಪಕ್ಷವು 3 ಸ್ಥಾನಗಳನ್ನು,ಗೋವಾ ಫಾರ್ವರ್ಡ ಪಕ್ಷ 3 ಸ್ಥಾನಗಳನ್ನು,ಎನ್.ಸಿ.ಪಿ.1 ಸ್ಥಾನವನ್ನು,ಪಕ್ಷೇತರರು 3 ಸ್ಥಾನವನ್ನೂ ಪಡೆದಿದ್ದರು. ಅತಂತ್ರ ವಿದಾನಸಭೆ ಸೃಷ್ಠಿಯಾಗುವ ಇಂತಹ ಸಂದರ್ಭದಲ್ಲಿ ಹೆಚ್ಚು ಸ್ಥಾನಗಳನ್ನು ಪಡೆದ ಪಕ್ಷವೊಂದನ್ನು ಸರಕಾರದ ರಚನೆಗೆ ಆಹ್ವಾನಿಸುವುದು ರಾಜ್ಯಪಾಲರ ಕರ್ತವ್ಯವಾಗಿರುತ್ತದೆ. ತೀರಾ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ರಾಜ್ಯಪಾಲರು ತಮ್ಮ ವಿವೇಚನೆಯಂತೆ ನಿರ್ದಾರ ತೆಗೆದುಕೊಳ್ಳಬಹುದಾಗಿದೆ. ಸರ್ಕಾರಿಯಾ ವರದಿಯಲ್ಲೂ ಇಂತಹುದೇ ಮಾತುಗಳಿವೆ. ಆದರೆ ರಾಜ್ಯಪಾಲರು ಯಾಕಿಂತ ಅವಸರದ ನಿರ್ದಾರವನ್ನು ತೆಗೆದುಕೊಂಡರು ಎಂದು ನೋಡುತ್ತಾ ಹೋದರೆ ರಾಜ್ಯಪಾಲರು ಬಾಜಪದ ಪರ ಒಂದಿಷ್ಟಾದರು ಪಕ್ಷಪಾತದ ನಿಲುವು ಹೊಂದಿರುವುದು ಗೊತ್ತಾಗುತ್ತದೆ.

ಆದರಿಲ್ಲಿ ಕಾಂಗ್ರೆಸ್ಸಿನ ತಪ್ಪೂ ಇದೆ. ಯಾಕೆಂದರೆ ಕಾಂಗ್ರೆಸ್ ಪಲಿತಾಂಶ ಬಂದ ಕೂಡಲೆ ತನ್ನ ಶಾಸಕಾಂಗ ಪಕ್ಷದ ನಾಯಕನನ್ನು ಮೊದಲು ಆರಿಸಿಕೊಳ್ಳಬೇಕಾಗಿತ್ತು. ತಕ್ಷಣ ಆ ನಾಯಕ ಸರಕಾರ ರಚನೆಯ ತನ್ನ ಹಕ್ಕನ್ನು ರಾಜ್ಯಪಾಲರ ಮುಂದೆ ಮಂಡಿಸಬೇಕಿತ್ತು. ಆದರೆ ನಿದ್ರೆಯಲ್ಲಿದ್ದಂತೆ ಕಾಣುತ್ತಿದ್ದ ಕಾಂಗ್ರೆಸ್ ಇದನ್ನು ಮಾಡಲೇ ಇಲ್ಲ. ಬಹುಶ: ಅದು ಹೈಕಮ್ಯಾಂಡಿನ ಆದೇಶದ ನಿರೀಕ್ಷೆಯಲ್ಲಿತ್ತು ಎನಿಸುತ್ತದೆ. ಆದರೆ ಬಾಜಪ ಇದನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡಿತು. ಯಾವುದೇ ಗೊಂದಲಕ್ಕೆ ಆಸ್ಪದವಿರದಂತೆ ರಕ್ಷಣಾ ಸಚಿವರಾದ ಶ್ರೀ ಮನೋಹರ್ ಪರಿಕ್ಕರ್ ಅವರನ್ನು ಶಾಸಕಾಂಗ ಪಕ್ಷದ ನಾಯಕನೆಂದು ಘೋಷಿಸಿ, ಮೂವರು ಎಂ.ಜಿ.ಪಿ.ಯ ಶಾಸಕರ ಮತ್ತು ಮೂವರು ಪಕ್ಷೇತರ ಶಾಸಕರ ಸಹಿಯನ್ನುಳ್ಳ ಬೆಂಬಲ ಪತ್ರವನ್ನು ಪಡೆದು ರಾಜ್ಯಪಾಲರನ್ನು ಬೇಟಿಯಾಗಿ ಸರಕಾರ ರಚನೆಯ ತಮ್ಮ ಹಕ್ಕನ್ನು ಅವರ ಮುಂದೆ ಮಂಡಿಸಿದರು.ಇದರ ನಂತರವೂ ರಾಜ್ಯಪಾಲರು ಕಾಂಗ್ರೆಸ್ಸಿನ ಮುಂದಿನ ನಡೆಗಾಗಿ ಕಾಯಬಹುದಿತ್ತು. ಆದರೆ ನಾಯಕನೇ ಇರದ ಶಾಸಕಾಂಗ ಪಕ್ಷದಲ್ಲಿ ರಾಜ್ಯಪಾಲರು ಸಂಪರ್ಕಿಸುವುದಾದರು ಯಾರನ್ನು? ಎಂಬ ಪ್ರಶ್ನೆ ಅಲ್ಲಿ ತಲೆದೋರುತ್ತದೆ. ಹೀಗಾಗಿ ಬಾಜಪಕ್ಕೆ ಅನುಕೂಲಕರವಾದ ಇಂತಹ ಸನ್ನಿವೇಶವೊಂದನ್ನು ಅಲ್ಲಿನ ರಾಜ್ಯಪಾಲರು ವ್ಯರ್ಥ ಮಾಡದೆ ಶ್ರೀ ಮನೋಹರ್ ಪರಿಕ್ಕರ್ ಅವರಿಗೆ ಸರಕಾರ ರಚಿಸಿ, ಹದಿನೈದುದಿನಗಳ ಒಳಗೆ ಬಹುಮತ ಸಾಬೀತು ಪಡಿಸುವಂತೆ ತಿಳಿಸಿಬಿಟ್ಟರು. ಇದು ವಾಸ್ತವ ಸ್ಥಿತಿ. 

ಆದರಿಲ್ಲಿ ಇನ್ನೊಂದು ಅಂಶವನ್ನೂ ರಾಜ್ಯಪಾಲರು ಗಮನಿಸಬೇಕಿತ್ತು. ಇನ್ನು ರಾಜಕೀಯ ನೈತಿಕತೆ ಮತ್ತು ಪಾರದರ್ಶಕ ರಾಜಕಾರಣದ ಬಗ್ಗೆ ಮಾತಾಡುವ ಬಾಜಪವು ಸಹ ಸೂಕ್ಷ್ಮವಾಗಿ ಅವಲೋಕಿಸಿ ಸರಕಾರ ರಚಿಸುವ ತನ್ನ ನಿರ್ದಾರದ ಬಗ್ಗೆ ಪರಿಶೀಲಿಸಬೇಕಿತ್ತು. ಅದೆಂದರೆ ತನಗೆ ಬೆಂಬಲ ನೀಡಿರುವ ಮಹಾರಾಷ್ಟ್ರವಾದಿ ಗೋಮಾಂತಕ್ ಪಕ್ಷವು ಗೋವಾ ಸುರಕ್ಷಾ ಮಂಚ್ ಪಕ್ಷದ ಜೊತೆ ಚುನಾವಣಾಪೂರ್ವ ಮೈತ್ರಿಮಾಡಿಕೊಂಡಿದ್ದು ಅದು ಬಾಜಪದ ವಿರುದ್ದವೇ ಸ್ಪರ್ದಿಸಿತ್ತು. ಜೊತೆಗೆ ಎಂ.ಜಿ.ಪಿ.ಯ ಚುನಾವಣಾ ಪೂರ್ವ ಮೈತ್ರಿಯ ಪಾಲುದಾರ ಪಕ್ಷವಾದ ಗೋವಾ ಸುರಕ್ಷಾ ಮಂಚ್ ಯವುದೇ ಸ್ಥಾನಗಳನ್ನೂ ಗೆಲ್ಲದೇ ಹೋದರು ಬಾಜಪಕ್ಕೆ ಬೆಂಬಲ ನೀಡುವುದನ್ನು ವಿರೋಧಿಸಿದೆ. ಬಾಜಪ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸ್ವಚ್ಚ ರಾಜಕಾರಣ ಮಾಡುವಲ್ಲಿ ಪ್ರಾಮಾಣಿಕವಾಗಿದ್ದಲ್ಲಿ ಎಂ.ಜಿ.ಪಿಯ ಬೆಂಬಲವನ್ನು ಪಡೆಯದಿರಬಹುದಿತ್ತು. ಚುನಾವಣಾ ಪೂರ್ವ ಮೈತ್ರಿಯನ್ನು ಗೌರವಿಸಬೇಕೆಂಬ ಅರಿವು ರಾಜ್ಯಪಾಲರಿಗೂ ಇರಬೇಕಿತ್ತು. ಆದರಿವತ್ತಿನ ಶಕ್ತಿರಾಜಕಾರಣದ ಮೇಲಾಟದಲ್ಲಿ ಅಧಿಕಾರ ಹೊಂದುವುದೇ ಅಂತಿಮ ಗುರಿಯಾಗಿರುವಾಗ ತತ್ವ ಸಿದ್ದಾಂತಗಳನ್ನು ಯಾವುದೇ ಪಕ್ಷವೂ ಪಾಲಿಸುವುದಿಲ್ಲ. ಅದಕ್ಕೆ ಬಾಜಪ ಸಹ ಹೊರತೇನಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ

(ಇದೀಗ ಈ ವಿಷಯವನ್ನು ಸುಪ್ರೀಂ ಕೋರ್ಟಿನವರೆಗು ತೆಗೆದುಕೊಂಡು ಹೋದ ಕಾಂಗ್ರಸ್ಸಿಗೆ ಸೋಲಾಗಿದ್ದು ಕೋರ್ಟು ಸಹ ಬಾಜಪಕ್ಕೆ ಸರಕಾರ ರಚಿಸಿದ 48 ಗಂಟೆಗಳಲ್ಲಿ ವಿಶ್ವಾಸಮತ ಸಾಬೀತು ಪಡಿಸುವಂತೆ ನಿರ್ದೇಶನ ನೀಡಿದೆ). ಮುಂದಿನ ದಿನಗಳಲ್ಲಿ ಗೋವಾದ ಮೈತ್ರಿ ಸರಕಾರ ಎಷ್ಟರ ಮಟ್ಟಿಗೆ ಸುಭದ್ರವೆಂಬುದನ್ನು ಕಾಲವೇ ನಿರ್ಣಯಿಸುತ್ತದೆ.

No comments:

Post a Comment