ಮಿಂಚೆಯಲ್ಲಿ 'ಹಿಂಗ್ಯಾಕೆ' ತರಿಸಿಕೊಳ್ಳಿ

12.1.17

ಪೀಳಿಗೆಯ ಅಂತರ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನಮ್ಮ ತಾತ ಎಂದೂ ಕವಿತೆ ಬರೆದವನೇ ಅಲ್ಲ
ಕವಿತೆಯ ಮಾತು ಬಿಡಿ
ಕನಿಷ್ಠ ಅ ಆ ತಿದ್ದಿದವನೂ ಅಲ್ಲ
ತನ್ನಪಾಡಿಗೆ ತಾನು ಗದ್ದೆ ಉತ್ತಿಕೊಂಡು
ಎತ್ತುಗಳ ಸಾಕಿಕೊಂಡು
ಹಸುಗಳ ಹಾಲು ಕರೆದುಕೊಂಡು
ಹೆಂಡತಿ ಮಕ್ಕಳ ಸಲಹಿಕೊಂಡು 
ನೆಮ್ಮದಿಯಾಗಿದ್ದ
ಇನ್ನು ಅವನ ಮಗ ನಮ್ಮ ಅಪ್ಪ
ಕೂಲಿ ಮಠದೊಳಗೆ ಕಲಿತ ನಾಲ್ಕಕ್ಷರಗಳನ್ನಿಟ್ಟುಕೊಂಡೇ
ತನಗಾಗದವರ ವಿರುದ್ದ ಅಮಲ್ದಾರರಿಗೆ 
ಮೂಗರ್ಜಿ ಬರೆಯುತ್ತ,
ಪುಡಾರಿಕೆ ಮಾಡುತ್ತ
ಬದುಕಿಬಿಟ್ಟ
ನಡುವಲ್ಲಿ ಇದ್ದ ನಾಲ್ಕೆಕರೆಯಲ್ಲಿ
ಎರಡೆಕರೆಯನ್ನು ಅದಕ್ಕಾಗಿ ಮಾರಿಯೂ ಆಗಿತ್ತು.

ಇನ್ನು ನಾನು ಅವನ ಮಗ
ನಗರಕ್ಕೆ ಹೋಗಿ ಡಿಗ್ರಿ ಮುಗಿಸಿ ಸರಕಾರಿ ನೌಕರಿ ಗಿಟ್ಟಿಸಿ
ಕವಿತೆಯನ್ನೂ ಬರೆದು ಹೆಸರು ಮಾಡಿದೆ
ಆದರ್ಯಾವತ್ತು ತಾತನ 
ನೆಮ್ಮದಿಯನ್ನು
ಅವನಷ್ಟು ಜವಾಬ್ದಾರಿಯನ್ನೂ ನಿಬಾಯಿಸಲಾಗದೆ
ಅಪ್ಪನಂತೆ ಬೇಜವಾಬ್ದಾರಿಯವನಾಗಿಯೂ ಇರಲಾಗದೆ
ಅತಂತ್ರದಲ್ಲಿ ನರಳುತ್ತಲೇ ಬದುಕುತ್ತಿರುವೆ.

No comments:

Post a Comment

Related Posts Plugin for WordPress, Blogger...