Jan 19, 2017

ಉತ್ತರಪ್ರದೇಶ: M.Y FACTOR

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯಾರೇನೆ ಹೇಳಿದರು ಬರಲಿರುವ ಉತ್ತರಪ್ರದೇಶದ ಚುನಾವಣೆಯ ಅಂತಿಮ ಪಲಿತಾಂಶವನ್ನು ನಿರ್ದರಿಸಲಿರುವುದು 'ಮೈಫ್ಯಾಕ್ಟರ್'(M.YFACTOR) ಎನ್ನುವುದಂತು ಬಹುತೇಕ ನಿಜ! ಎಂವೈ ಅಂದರೆ 'ಮುಸ್ಲಿಂ ಮತ್ತು ಯಾದವ' ಎಂದರ್ಥ. ಕಳೆದೆರಡು ಮೂರು ಚುನಾವಣೆಗಳ ಪಲಿತಾಂಶಗಳನ್ನು ಹಾಗು ವರ್ತಮಾನದಲ್ಲಿ ಆ ರಾಜ್ಯದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅದ್ಯಯನ ಮಾಡಿದರೆ ಈ ಮೈ ಫ್ಯಾಕ್ಟೆರಿನ ಬಗ್ಗೆ ನಿಖರವಾದ ಅರ್ಥ ಮತ್ತು ಬಲ ತಿಳಿಯುತ್ತದೆ.

ಕಳೆದ ಬಾರಿ ಒಟ್ಟಾರೆ ಶೇಕಡಾ 29.15ರಷ್ಟು ಮತಗಳನ್ನು ಪಡೆದ ಸಮಾಜವಾದಿ ಪಕ್ಷ 224 ಸ್ಥಾನಗಳನ್ನು ಗೆದ್ದು ಅಧಿಕಾರವನ್ನು ಪಡೆದಿತ್ತು.ಎರಡನೆ ಸ್ಥಾನದಲ್ಲಿ ಬಹುಜನ ಪಕ್ಷವು ಶೇಕಡಾ25.91 ಮತಗಳನ್ನು ಗಳಿಸಿ 80 ಸ್ಥಾನಗಳನ್ನು ಗೆದ್ದುಕೊಂಡಿತ್ತು. ಭಾರತೀಯ ಜನತಾ ಪಕ್ಷವು ಶೇಕಡಾ 15ರಷ್ಟು ಮತಗಳನ್ನು ಪಡೆದು47 ಸ್ಥಾನಗಳಿಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಇನ್ನುಳಿದಂತೆ ಮತ್ತೊಂದು ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಕೇವಲ ಶೇಕಡಾ 11.63 ಮತಗಳಿಸಿ 28 ಸ್ಥಾನಗಳಲ್ಲಿ ವಿಜಯಿಯಾಗಿತ್ತು. ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳವು ಶೇಕಡಾ 2.33 ಮತಗಳಿಸಿ 9 ಸ್ಥಾನಗಳಿಗೆ ಸೀಮಿತವಾಗಿತ್ತು. (ನಂತರ ನಡೆದ 2014ರ ಲೋಕಸಭಾ ಚುನಾವಣೆಯಲ್ಲಿ ಬಾಜಪ ಹೆಚ್ಚು ಸ್ಥಾನಗಳನ್ನು ಗೆದ್ದುತನ್ನ ಮತಗಳಿಕೆಯ ಪ್ರಮಾಣವನ್ನು ಹೆಚ್ಚಿಸಿಕೊಂಡಿದ್ದರೂ, ನಾನಿಲ್ಲಿ ಹಿಂದಿನ ವಿದಾನಸಭಾ ಚುನಾವಣೆಯ ಪಲಿತಾಂಶವನ್ನು ಮಾತ್ರ ವಿಶ್ಲೇಷಣೆಗೆ ಬಳಸಿಕೊಂಡಿದ್ದೇನೆ).
2012ರ ಚುನಾವಣೆಯಲ್ಲಿ ಆಡಳಿತ ರೂಢ ಬಹುಜನಪಕ್ಷವನ್ನು ಸೋಲಿಸಿ ಅಧಿಕಾರಕ್ಕೆ ಏರಿದ ಮುಲಾಯಂ ಸಿಂಗ್ ಅವರ ಸಮಾಜವಾದಿ ಪಕ್ಷದ ಗೆಲುವಿಗೆ ಕಾರಣವಾಗಿದ್ದು ಲೇಖನದ ಮೊದಲಿಗೆ ನಾನು ಹೇಳಿದ 'ಮೈ ಫ್ಯಾಕ್ಟರ್' ಎನ್ನುವುದನ್ನು ಮರೆಯುವಂತಿಲ್ಲ ಆ ಚುನಾವಣೆಯಲ್ಲಿ ಉತ್ತರಪ್ರದೇಶದ ಒಟ್ಟು ಜನಸಂಖ್ಯೆಯ ಶೇಕಡಾ 8ರಷ್ಟಿರುವ ಯಾದವ ಸಮುದಾಯ ಸಂಪೂರ್ಣವಾಗಿ ಸಮಾಜವಾದಿ ಪಕ್ಷದ ಬೆನ್ನಿಗೆ ನಿಂತಿತ್ತು. ಅದರ ಜೊತೆಗೆ ಇತರೆ ಹಿಂದುಳಿದ ವರ್ಗಗಳು ಸಹ ಸಮಾಜವಾದಿ ಪಕ್ಷಕ್ಕೆ ಗಣನೀಯವಾಗಿ ಮತ ಚಲಾಯಿಸಿದ್ದವು. ಹೀಗೆ ಯಾದವ ಮತ್ತು ಹಿಂದುಳಿದ ವರ್ಗಗಳು ಮುಲಾಯಮರ ಬೆನ್ನ ಹಿಂದೆ ದೃಢವಾಗಿ ನಿಲ್ಲಲು ಅವರದೇ ಆದ ಕೆಲ ಕಾರಣಗಳಿದ್ದವು. ಅದಾಗಲೇ ಮಾಯಾವತಿಯವರ ಈ ಸರಕಾರ ಭ್ರಷ್ಟಾಚಾರದ ಹಗರಣಗಳಿಂದ ಹೆಸರು ಕೆಡಿಸಿಕೊಂಡಿದ್ದು, ಸಮಾಜವಾದಿ ಪಕ್ಷ ಮುಲಾಯಮರ ಪುತ್ರರಾದ ಯುವ ನಾಯಕ ಶ್ರೀ ಅಖಿಲೇಶ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿದ್ದು ಯಾದವ ಸಮುದಾಯದ ಮಟ್ಟಿಗೆ ಆಶಾದಾಯಕ ಬೆಳವಣಿಗೆಯಾಗಿತ್ತು. ಉತ್ತರಪ್ರದೇಶಕ್ಕೆ ಸೀಮಿತವಾಗಿ ಅಖಿಲೇಶ್ ಮುಖ್ಯಮಂತ್ರಿ ಆದರೆ, ರಾಷ್ಟ್ರ ಮಟ್ಟದಲ್ಲಿ ಮುಲಾಯಂ ಸಿಂಗ್ ಯಾದವರು ರಾಜಕಾರಣ ಮಾಡಲು ಸಾದ್ಯವಾಗಬಹುದಾದ ಸನ್ನಿವೇಶವೊಂದು ನಿರ್ಮಾಣವಾಗುತ್ತದೆ ಎಂಬ ಬಾವನೆ ಯಾದವರಲ್ಲಿ ಮೊಳೆತಿದ್ದು ಸುಳ್ಳೇನಲ್ಲ. ಆಗಿನ್ನೂ ರಾಷ್ಟ್ರ ರಾಜಕಾರಣದಲ್ಲಿ ಮೋದಿಯವರ ಹೆಸರು ಅಷ್ಟಾಗಿ ಕೇಳಿಬಂದಿರಲಿಲ್ಲ. ಜೊತೆಗೆ ಕಾಂಗ್ರೆಸ್ ಮತ್ತು ಬಾಜಪಕ್ಕೆ ಪರ್ಯಾಯವಾಗಿ ತೃತೀಯ ರಂಗವೊಂದು ಸೃಷ್ಠಿಯಾಗಬೇಕೆಂಬ ಕೂಗು ಬಲವಾಗಿ ಕೇಳಿಬರುತ್ತಿದ್ದ ಕಾಲವದು. ಜೊತೆಗೆ ಮುಲಾಯಮರು ಸಹ ಸಾಕಷ್ಟು ಸಕ್ರಿಯವಾಗಿ ದೇಶದಾದ್ಯಂತ ಸುತ್ತಾಡುತ್ತ ಇತರೇ ಹಲವು ಪಕ್ಷಗಳ ನಾಯಕರುಗಳ ಜೊತೆ ಸಮಾಲೋಚನೆ ನಡೆಸುತ್ತಿದ್ದರು. ಹಾಗೊಂದು ವೇಳೆ ತೃತೀಯ ರಂಗವೊಂದು ಅಸ್ಥಿತ್ವಕ್ಕೆ ಬರುವುದೇ ಆದರೆ ಮುಲಾಯಮರು ಅದರ ನಾಯಕತ್ವ ವಹಿಸುವಲ್ಲಿ ಸಫಲರಾಗುತ್ತಾರೆಂಬ ಬಾವನೆ ಯಾದವ ಸಮುದಾಯದಲ್ಲಿ ಇತ್ತು.

ಇನ್ನು 'ಮೈ' ಫ್ಯಾಕ್ಟರಿಗೆ ಬಂದರೆ ಉತ್ತರಪ್ರದೇಶದ ಒಟ್ಟು ಜನಸಂಖ್ಯೆಯ ಶೇಕಡಾ 19.3 ರಷ್ಟಿರುವ ಮುಸ್ಲಿಂ ಸಮುದಾಯವು ಸಹ ಯಾದವರಂತೆ ಸಂಪೂರ್ಣವಾಗಿ ಸಮಾಜವಾದಿ ಪಕ್ಷದ ಜೊತೆ ನಿಂತಿತ್ತು. ಇದಕ್ಕೆ ಕಾರಣಗಳೂ ಇವೆ: 1991ರ ಬಾಬ್ರಿ ಮಸೀದಿ ದ್ವಂಸದಂತಹ ಘಟನೆಯ ನಂತರ ಮುಸ್ಲಿಂ ಸಮುದಾಯ ಅಲ್ಪಸಂಖ್ಯಾತರ ಸ್ವಯಂ ರಕ್ಷಣೆಯ ಹೆಸರಿನಲ್ಲಿ ಒಂದು ಸಂಘಟಿತ ಸಮುದಾಯವಾಗಿಮತ ಚಲಾಯಿಸಲು ಪ್ರಾರಂಬಿಸಿದ್ದವು. ಅದರಲ್ಲು ಬಾಜಪ ಪಕ್ಷವನ್ನು ಮುಸ್ಲಿಂ ವಿರೋಧಿ ಪಕ್ಷವೆಂದು ಪರಿಬಾವಿಸಿದ ಆ ಸಮುದಾಯ ಬಾಜಪದ ವಿರುದ್ದ ಮತ ಚಲಾಯಿಸಲು ಪ್ರಾರಂಬಿಸಿತ್ತು. ಉತ್ರರಪ್ರದೇಶದಲ್ಲಿ ಆದದ್ದು ಇದೇ. 2007ರಲ್ಲಿ ಬಾಜಪವನ್ನು ಸೋಲಿಸಲು ಸಶಕ್ತವೆಂದು ಅನಿಸಿದ್ದರಿಂದಾಗಿ ಮುಸ್ಲಿಂ ಸಮುದಾಯ ಬಹುಜನಪಕ್ಷಕ್ಕೆ ಮತ ಚಲಾಯಿಸಿ ಅದರ ಗೆಲುವಿಗೆ ಕಾರಣವಾಯಿತು. 2012ರ ಹೊತ್ತಿಗೆ ಇನ್ನಷ್ಟು ಸದೃಢವಾಗಿದ್ದ ಸಮಾಜವಾದಿ ಪಕ್ಷ ಮಾತ್ರ ಬಾಜಪವನ್ನು ಸೋಲಿಸಬಹುದು ಎನಿಸಿದ್ದರಿಂದ ಆ ಸಮುದಾಯ ಇಡಿಯಾಗಿ ಆ ಪಕ್ಷವನ್ನು ಬೆಂಬಲಿಸಿ ಮತಚಲಾಯಿಸಿತ್ತು. ಬಾಜಪವನ್ನು ಸೋಲಿಸಲು ಯಾವ ಪಕ್ಷಕ್ಕೆ ಸಾದ್ಯವೋ ಆ ಪಕ್ಷಕ್ಕೆ ಮತ ನೀಡುವ ಕೆಲಸವನ್ನು ಮುಸ್ಲಿಂ ಸಮುದಾಯ ಮಾಡಿಕೊಂಡು ಬರುತ್ತಿದೆ. ಈ ಕಾರಣದಿಂದಾಗಿ 2012ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಮುಸ್ಲಿಂ ಮತ್ತು ಯಾದವ ಸಮುದಾಯಗಳ ಬೆಂಬಲ ಪಡೆದು ಅಧಿಕಾರಕ್ಕೆ ಏರಿದ್ದಂತು ನಿಜ. ಅಷ್ಟರ ಮಟ್ಟಿಗೆ ಆ ರಾಜ್ಯದಲ್ಲಿ 2012ರಲ್ಲಿ ಮೈ ಫ್ಯಾಕ್ಟರ್ ಕೆಲಸ ಮಾಡಿತ್ತು.

ಇನ್ನು ಈ ಬಾರಿಯೂ ಈ ಮೈ ಫ್ಯಾಕ್ಟರ್ ಹೇಗೆ ಕೆಲಸ ಮಾಡುತ್ತದೆಯೆಂಬ ಅಂಶದ ಮೇಲೆ ಚುನಾವಣಾ ಪಲಿತಾಂಶ ನಿರ್ದಾರವಾಗಲಿದೆ ಎನ್ನಬಹುದು. ಯಾಕೆಂದರೆ 2012ರ ಪರಿಸ್ಥಿತಿ ಈಗಿಲ್ಲ. ಅಂದು ವಿರೋಧಪಕ್ಷವಾಗಿದ್ದ ಸಮಾಜವಾದಿ ಪಕ್ಷ ಇವತ್ತು ಸ್ವತ: ಆಡಳಿತ ನಡೆಸುತ್ತಿದೆ. ಅಲ್ಲದೆ ಸಾರ್ವಜನಿಕವಾಗಿ ತನ್ನ ಕಾರ್ಯದಕ್ಷತೆಯನ್ನು ಸಾಬೀತು ಪಡಿಸಿಕೊಳ್ಳದಿದ್ದ ಅಂದಿನ ಯುವನಾಯಕ ಅಖಿಲೇಶ್ ಇಂದು ಸ್ವತ: ಮುಖ್ಯಮಂತ್ರಿಯಾಗಿದ್ದಾರೆ.

ಇಷ್ಟಲ್ಲದೆ ಮುಲಾಯಂ ಮತ್ತು ಅಖಿಲೇಶ್ ನಡುವಿನ ಭಿನ್ನಾಭಿಪ್ರಾಯದಿಂದಾಗಿ ಪಕ್ಷ ಹೆಚ್ಚೂ ಕಡಿಮೆ ವಿಭಜನೆಯಾಗಿದೆ. ಅಖಿಲೇಶ ಬಣವೇ ನಿಜವಾದ ಸಮಾಜವಾದಿ ಪಕ್ಷವೆಂದು ತೀರ್ಮಾನಿಸಿರುವ ಚುನಾವಣಾ ಆಯೋಗ ಅದಕ್ಕೆ ಪಕ್ಷದ ಸೈಕಲ್ ಗುರುತನ್ನು ನೀಡಿದೆ. ಇದರ ನಡುವೆ ಅಖಿಲೇಶ್ ಬಿಹಾರ ಮಾದರಿಯ ಮಹಾಘಟಬಂದನ್ ಒಂದನ್ನು ರಚಿಸಲು ಓಡಾಡುತ್ತಿದ್ದಾರೆ. ಉತ್ತರಪ್ರದೇಶದಲ್ಲಿ ತೀರಾ ದುರ್ಬಲವಾಗಿರುವ ಕಾಂಗ್ರೆಸ್ ಜೊತೆಗೆ ಮತ್ತು ಜಾಟ್ ಸಮುದಾಯದ ನಾಯಕರಾದ ಅಜಿತ್ ಸಿಂಗ್ ಅವರ ರಾಷ್ಟ್ರೀಯ ಲೋಕದಳದ ಜೊತೆಗೆ ಮೈತ್ರಿ ಮಾಡಿಕೊಳ್ಳಲು ಮಾತುಕತೆ ನಡೆದಿದ್ದು ಇನ್ನೆರಡು ದಿನಗಳಲ್ಲಿ ಅಂತಿಮ ನಿರ್ದಾರ ಹೊರಬೀಳಲಿದೆ. ಈ ಮೈತ್ರಿಯ ಅಂಗವಾಗಿ ಕಾಂಗ್ರೆಸ್ ಸರಿಸುಮಾರು 90ಕ್ಷೇತ್ರಗಳನ್ನು, ರಾಷ್ಟ್ರೀಯ ಲೋಕದಳ 25 ಸ್ಥಾನಗಳನ್ನೂ ಪಡೆಯುವ ಸಾದ್ಯತೆ ಇದೆ. ಇದುವರೆಗು ಒಗ್ಗಟ್ಟಿನ ಮನೆಯಾಗಿದ್ದ ಸಮಾಜವಾದಿ ಪಕ್ಷವನ್ನು ಯಾದವ ಸಮುದಾಯ ಬೆಂಬಲಿಸುತ್ತ ಬಂದಿದ್ದು ಇದೀಗ ಅದರ ನಡೆ ಕುತೂಹಲದಾಯಕವಾಗಿದೆ. ಅಕಸ್ಮಾತ್ ಮುಲಾಯಮರು ತಟಸ್ಥವಾಗಿ ಉಳಿದರೆ ಯಾದವ ಸಮುದಾಯ ಅಖಿಲೇಶರ ಬೆಂಬಲಕ್ಕೆ ನಿಲ್ಲುವುದು ಖಚಿತ. ಆದರೆ ಮುಲಾಯಮರೇನಾದರು ಬೇರೆ ಪಕ್ಷ ಸ್ಥಾಪಿಸುವ ಅಥವಾ ಬೇರೆ ಪಕ್ಷಕ್ಕೆ ಬೆಂಬಲ ನೀಡಲು ಸಿದ್ದವಾದರೆ ಕನಿಷ್ಠ ಶೇಕಡಾ 25ರಿಂದ 30 ರಷ್ಟು ಯಾದವ ಸಮುದಾಯ ಹಿರಿಯರಾದ ಮುಲಾಯಂ ಹಿಂದೆ ಹೋಗಬಹುದಾಗಿದ್ದು ಉಳಿದವರು ಯುವನಾಯಕರಾದ ಅಖಿಲೇಶರ ಬೆಂಬಲಕ್ಕೆ ನಿಲ್ಲವುದು ನಿಶ್ಚಿತ. ರಾಜಕೀಯವಾಗಿ ತನ್ನನ್ನು ನಗಣ್ಯವಾಗಿಸಿಕೊಳ್ಳಲು ಬಯಸದ ಯಾದವರು ತಂದೆ ಮಗನ ಮದ್ಯೆ ಆಯ್ಕೆಯೆಂದು ಬಂದರೆ ಬಹುತೇಕ ಮಗನ ಪರವಾಗಿ ನಿಲ್ಲುವ ಸಂಭವವೇ ಜಾಸ್ತಿಯಾಗಿದೆ. ಒಟ್ಟಿನಲ್ಲಿ ಕಳೆದ ಎರಡೂವರೆ ದಶಕಗಳಿಂದಲೂ ರಾಜಕೀಯವಾಗಿ ಪ್ರಬಾವಶಾಲಿಯಾಗಿದ್ದ ಯಾದವ ಸಮುದಾಯಕ್ಕೀಗ ಪರೀಕ್ಷೆ ಎದುರಾಗಿದೆ. ಹೀಗಾಗಿ ಈ ಬಾರಿಯ ಚುನಾವಣೆಯಲ್ಲಿಯೂ ಈ ವೈ ಫ್ಯಾಕ್ಟರ್ ಮುಖ್ಯವಾಗಲಿದೆ.

ಇನ್ನು ಎಂ ಫ್ಯಾಕ್ಟರಿಗೆ ಬಂದರೆ ಅಲ್ಲಿಯೂಸಹ ಸಾಕಷ್ಟು ಬದಲಾವಣೆಗಳಾಗಿ ಹೋಗಿವೆ. ಕಳೆದ ಬಾರಿ ಸಮಾಜವಾದಿ ಪಕ್ಷ ಅದಿಕಾರಕ್ಕೆ ಬಂದನಂತರ ಮುಸ್ಲಿಂ ಸಮುದಾಯಕ್ಕೆ ಸೂಕ್ತ ಸ್ಥಾನಮಾನ ಕೊಡಲಿಲ್ಲವೆಂಬ ಅತೃಪ್ತಿ ಮುಸ್ಲಿಂ ಸಮುದಾಯದಲ್ಲಿ ಮೂಡಿದೆ. ಅದೂಅಲ್ಲದೆ ಮುಜಾಫರ್ ನಗರದ ಕೋಮುಗಲಬೆಗಳು ಸಹ ಮುಸ್ಲಿಮರಲ್ಲಿ ಸಮಾಜವಾದಿ ಪಕ್ಷದ ಬಗ್ಗೆ ಅಸಮಾದಾನ ಉಂಟು ಮಾಡಿದೆ. ಗಲಭೆಗಳಾದ ಆರು ತಿಂಗಳವರೆಗು ಮುಲಾಯಮರಾಗಲಿ, ಅಖಿಲೇಶರಾಗಲಿ ಮುಜಾಫರ್ ನಗರಕ್ಕೆ ಬೇಟಿ ನೀಡಲಿಲ್ಲವೆಂಬುದು ಮುಸ್ಲಿಮರ ಆರೋಪವಾಗಿದೆ. ಜೊತೆಗೆ ಸಂತ್ರಸ್ತ ಮುಸ್ಲಿಮರ ಪರವಾಗಿ ಸಮಾಜವಾದಿ ಸರಕಾರ ನಿಲ್ಲಲಿಲ್ಲವೆಂಬ ದೂರು ಮುಸ್ಲಿಂ ಯುವಜನತೆಯದಾಗಿದೆ. ಹೀಗೆ ಅಸಮಾದಾನಗೊಂಡಿರುವ ಮುಸ್ಲಿಮರನ್ನು ತಮ್ಮ ಪಕ್ಷದತ್ತ ಸೆಳೆಯಲು ಬಹುಜನ ಪಕ್ಷದ ಮಾಯಾವತಿಯವರು ಈ ಬಾರಿ 100 ಕ್ಕೂ ಅಧಿಕ ಸ್ಥಾನಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೇಟು ನೀಡಿದ್ದಾರೆ. ಆದರೆ ಮುಸ್ಲಿಂ ಸಮುದಾಯ ಬಾಜಪದ ವಿರುದ್ದ ನಕಾರಾತ್ಮಕವಾಗಿ ಮತ ಚಲಾಯಿಸುವ ತಮ್ಮ ಎಂದಿನ ಕ್ರಮವನ್ನು ಮುಂದುವರೆಸಿದ್ದೇ ಆದಲ್ಲಿ ಕ್ಷೇತ್ರವಾರು ಯಾವ ಪಕ್ಷ ಬಾಜಪವನ್ನು ಸೋಲಿಸಬಲ್ಲದೊ ಆ ಪಕ್ಷಕ್ಕೆ ಅದು ಮತ ಚಲಾಯಿಸುವುದು ಗ್ಯಾರಂಟಿ. ಹೀಗಾಗಿ ಅದು ಯಾವುದೇ ಒಂದು ಪಕ್ಷದ ಪರವಾಗಿ ಈ ಬಾರಿ ನಿಲ್ಲಲಾರದು ಎನಿಸಿದರೂ ಕಡೇ ಗಳಿಗೆಯಲ್ಲಿ ಅಧಿಕಾರ ಹಿಡಿಯಬಹುದೆಂದು ತನಗೆ ನಂಬಿಕೆ ಬರುವಂತಹ ಪಕ್ಷದತ್ತ ವಾಲಬಹುದೆನಿಸುತ್ತದೆ. 

ಒಟ್ಟಿನಲ್ಲಿ ಶೇಕಡಾ 28ರಷ್ಟಿರುವ ಈ ಎಂವೈ ಫ್ಯಾಕ್ಟರ್ ಮುಂದಿನ ಚುನಾವಣೆಯ ಪಲಿತಾಂಶದ ಮೇಲೆ ಪ್ರಬಾವ ಬೀರುವುದು ಸತ್ಯವಾದರೂ ಉತ್ತರಪ್ರದೇಶದ ಜಾತಿ ಲೆಕ್ಕಾಚಾರಗಳು ಕ್ಷಣಕ್ಕೊಂದು ತಿರುವು ಪಡೆದುಕೊಳ್ಳುವುದರಿಂದ ಯಾವುದನ್ನು ಈಗಲೇ ಹೇಳಲಾಗುವುದಿಲ್ಲ. 

No comments:

Post a Comment