Jan 19, 2017

ಸ್ವರ್ಗದಿಂದೊಂದು ಸ್ವಗತ: ಎಂ.ಕೆ.ಗಾಂದಿ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ನನ್ನ ದೇಶದಲ್ಲಿ ನೋಟುಗಳ ಮೇಲಿದ್ದ ನನ್ನ ಬಾವಚಿತ್ರವನ್ನು ತೆಗೆದು ಹಾಕಿದ್ದಾರೆ ಮತ್ತು ನಾನು ಬಹಳವಾಗಿ ಪ್ರೀತಿಸುತ್ತಿದ್ದ ಖಾದಿಯನ್ನು ಪ್ರಚಾರ ಮಾಡುತ್ತಿದ್ದ ಖಾದಿಗ್ರಾಮೋದ್ಯೋಗದ ಕ್ಯಾಲೆಂಡರಿನಿಂದಲೂ ನನ್ನ ಬಾವಚಿತ್ರವನ್ನು ತೆಗೆದು ಬೇರೆಯವರದನ್ನು ಹಾಕಿದ್ದಾರೆಂದು ಇದೀಗ ಬಂದವರೊಬ್ಬರು ನನಗೆ ಹೇಳಿದರು. ನನಗೇನೂ ಅನಿಸಲಿಲ್ಲ. ಯಾಕೆಂದರೆ ಅವರು ಮುದ್ರಿಸುತ್ತಿದ್ದ ನೋಟುಗಳ ವ್ಯಾಮೋಹ ನಾನಲ್ಲಿ ಇದ್ದಾಗಲೂ ನನಗಿರಲಿಲ್ಲ. ಇನ್ನು ಕ್ಯಾಲೆಂಡರ್ ಡೈರಿಗಳ ಮೂಲಕ ಪ್ರಚಾರ ನಡೆಸುವ ತಂತ್ರಗಳು ನನ್ನ ಕಾಲದಲ್ಲಿರಲಿಲ್ಲ. ಮತ್ತು ಅಂತವುಗಳ ಬಗ್ಗೆ ನನಗೆ ನಂಬಿಕೆಯೂ ಹಿಂದೆ ಇರಲಿಲ್ಲ, ಈಗಲೂ ಇಲ್ಲ.
ಮೊನ್ನೆ ಕೇಳಿದ ಈ ವಿಷಯದಿಂದ ನನಗೆ ಆಶ್ಚರ್ಯವೇನೂ ಆಗಲಿಲ್ಲವಾದರೂ ….. ನಗುವಂತು ಬಂತು. ಇಲ್ಲಿರುವ ನನ್ನ ಜೊತೆಗಾರರಿಗೆ ವಿಚಾರ ತಿಳಿಸಿದಾಗ, ಅವರುಗಳು ನನ್ನಂತೆಯೇ ಶಬ್ದವಾಗದಂತೆ ನಕ್ಕರು. ಆವರ ಆ ನಗು ನಾಟಕೀಯವೆಂದು ನನಗನ್ನಿಸಿತು. ಯಾಕೆಂದರೆ ಆ ನಗುವಿನ ಹಿಂದಿನ ವಿಷಾದ ನನಗರ್ಥವಾಯಿತು. ಜವಾಹರ್ ಒಬ್ಬ ಮಾತ್ರ ಇದೆಲ್ಲ ಅದೇ ಮತೀಯವಾದಿಗಳ ಹುನ್ನಾರವಿರಬೇಕು ಎಂದಾಗ ನಾನು ಮರುಮಾತಾಡಲಿಲ್ಲ.

ಅರವತ್ತೆಂಟು ವರ್ಷಗಳು!
ಒಂದು ದೇಶದ ಇತಿಹಾಸದಲ್ಲಿ ಅರವತ್ತೆಂಟು ವರ್ಷಗಳು ಅಂತಹ ದೀರ್ಘ ಅವಧಿಯೇನಲ್ಲ.....
ಕಳೆದ ಅರವತ್ತೆಂಟು ವರ್ಷಗಳ ಹಿಂದೆ ನಾನಲ್ಲಿದ್ದಾಗಲೇ ನನ್ನನ್ನು ಜನರ ಮನಸ್ಸಿನಿಂದ ಮರೆಯಾಗಿಸಲು ಒಂದಷ್ಟು ಜನ ಪ್ರಯತ್ನಿಸಿದ್ದರು! ಮತ್ತು ದೈಹಿಕವಾಗಿ ನನ್ನನ್ನು ಮುಗಿಸಿದ್ದರು. ಈಗ ಆಗುತ್ತಿರುವುದು ಅದರ ಮುಂದುವರೆದ ಭಾಗವಷ್ಟೆ! ಮನುಷ್ಯನೊಬ್ಬನ ಚಿತ್ರವನ್ನು ಇಲ್ಲವಾಗಿಸಿದೊಡನೆ ಅವನು ತುಳಿದ ಹಾದಿಯಾಗಲಿ, ಆ ಹಾದಿಯೊಳಗೆ ಅವನು ನಡೆಸಿದ ಸಂರ್ಘರ್ಷಗಳಾಗಲಿ, ಅವನು ಪ್ರತಿಪಾದಿಸಿದ ಸಿದ್ದಾಂತಗಳಾಗಲಿ ಇಲ್ಲವಾಗಿ ಬಿಡುವುದಿಲ್ಲ. ಹಾಗೆಯೇ ನನಗಿಂತ ಮುಂಚೆಯೇ ಆಗಿಹೋದ ಏಸು,ಬುದ್ದ ಬಸವಣ್ಣ ಅಂತವರನ್ನು ಯಾರೆಷ್ಟೇ ಇಲ್ಲವಾಗಿಸಲು ಪ್ರಯತ್ನಸಿದರು ಅದು ವ್ಯರ್ಥ ಕಸರತ್ತಷ್ಟೇ!

ಅಷ್ಟಕ್ಕೂ ನನ್ನ ಬಾವಚಿತ್ರ ಇಲ್ಲವಾಗಿಸುವುದರಿಂದ ನಾನು ಪ್ರತಿಪಾದಿಸಿದ ಸತ್ಯ, ಅಹಿಂಸೆ, ಸತ್ಯಾಗ್ರಹಗಳನ್ನು ಇಲ್ಲವಾಗಿಸಲಾಗುತ್ತದೆಯೇ? ಜನರಿಗೆ ಅವುಗಳು ಅಗತ್ಯವಾಗಿರುವತನಕ ಅವು ಇದ್ದೇ ಇರುತ್ತವೆ. ಈಗಿರುವ ರೂಪದಲ್ಲಿ ಇಲ್ಲ ಬೇರೊಂದು ರೂಪದಲ್ಲಿ! ಎಲ್ಲಿಯವರೆಗು ಭೂಮಿಯೊಳಗೆ ಅನ್ಯಾಯ, ವಂಚನೆ, ಶೋಷಣೆಗಳು ನಡೆಯುತ್ತಲೇ ಇರುತ್ತವೆಯೊ ಅಲ್ಲಿಯವರೆಗು ನಾನು ಕೊಟ್ಟ ಆಯುಧಗಳ ಅಗತ್ಯ ಇದ್ದೇ ಇರುತ್ತದೆ.ಯಾರೋ ಒಂದಷ್ಟು ಮಂದಿಗೆ ಅವು ಬೇಡವಾದೊಡನೆ ಜನತೆ ಅವನ್ನು ತೊರೆದುಬಿಡುತ್ತಾರೆಂದು ದು:ಖಿಸುವುದು ಸಲ್ಲದು.

ಇವತ್ತಿನವರ ಅಭಿವೃದ್ದಿಯ ಕಲ್ಪನೆಗೂ ಅವತ್ತಿನ ಬ್ರಿಟೀಷರ ಕಲ್ಪನೆಗೂ ಅಂತಹ ವ್ಯತ್ಯಾಸವಿದೆ ಎಂದು ಅನಿಸುವುದಿಲ್ಲ. ದೊಡ್ಡ ಯಂತ್ರಗಳನ್ನು ಬಳಸಿ ವಸ್ತುಗಳ ಉತ್ಪಾದಿಸಿ ಮಾರುತ್ತ, ಬಡವರನ್ನು ಕೆಲಸವಿಲ್ಲದವರನ್ನಾಗಿಸಿ ತಮಾಷೆ ನೋಡುವುದನ್ನು ಎಲ್ಲಕಾಲದ ಬಂಡವಾಳಶಾಹಿಗಳು ಮಾಡುತ್ತಲೇ ಬಂದಿದ್ದಾರೆ. ಇವತ್ತು ನನ್ನ ದೇಶ ಅಂತಹ ಬಂಡವಾಳಶಾಹಿಗಳ ಕೈಗೊಂಬೆಯಾಗಿರುವಾಗ ಅವರಿಗೆ ಚರಕವೆನ್ನುವುದು ಬಡವರನ್ನು ಮೋಸಗೊಳಿಸುವ ಒಂದು ಆಯುಧ ಮಾತ್ರ. ಯಂತ್ರಗಳನ್ನು ಪೂಜಿಸುವವರಿಗೆ ಅದರ ಕೆಳಗೆ ಸಿಕ್ಕಿ ನುಚ್ಚುನೂರಾದವರ ಪರಿಚಯವೇ ಇರುವುದಿಲ್ಲ.

ನನ್ನ ಕಾಲದ ಎಲ್ಲ ಬಂಡವಾಳಶಾಹಿಗಳು ಮತ್ತು ಸರ್ವಾಧಿಕಾರಿಗಳು ಮಾಡಿದ್ದು ಇದನ್ನೇ! ತಮ್ಮ ಅಸ್ತಿತ್ವಕ್ಕಾಗಿ ಅವರು ಯಾರನ್ನು ಬೇಕಾದರು ಇಲ್ಲವಾಗಿಸಬಲ್ಲರು, ಯಾವುದನ್ನು ಬೇಕಾದರು ಸುಳ್ಳಾಗಿಸಬಲ್ಲರು. ಇನ್ನು ನನ್ನಂತಹ ತುಂಡು ಬಟ್ಟೆ ಧರಿಸಿದ ಫಕೀರ ಅವರಿಗೆ ಯಾವ ಲೆಕ್ಕ? 

ಏನಿತ್ತು? ಏನಿದೆ? ನನ್ನ ಬಳಿ: ತುಂಡು ಬಟ್ಟೆ, ಮುರಿದ ಕನ್ನಡಕ, ಸಣ್ಣದೊಂದು ಊರುಗೋಲಿನ ಹೊರತಾಗಿ? 

ಯಾರಿಗೆ ಯಾವುದರ ಭಯವಿರುತ್ತದೆಯೊ ಅವರು ಅದನ್ನು ಇಲ್ಲವಾಗಿಸಲು ಪ್ರಯತ್ನಿಸುವುದು ಮನುಷ್ಯನ ಗುಣ. ಅವರುಗಳಿಗಿರುವುದು ಹುಲುಮಾನವನಾದ ನನ್ನ ಭಯವಲ್ಲ. ಬದಲಿಗೆ ಮುಂದೊಂದು ದಿನ ಅವರನ್ನು ನಗಣ್ಯವಾಗಿಸಿಬಿಡಬಹುದಾದ ಸತ್ಯ,ಅಹಿಂಸೆ, ಸತ್ಯಾಗ್ರಹಗಳ ಬಗೆಗಿನ ಭಯ!

ಸತ್ಯವನ್ನು ಶಾಶ್ವತವಾಗಿ ಹೂತು ಹಾಕಲು ಯಾರಿಂದಲೂ ಸಾದ್ಯವಿಲ್ಲವೆಂಬ ಸಾರ್ವಕಾಲಿಕ ಸತ್ಯವನ್ನು ಅರ್ಥಮಾಡಿಕೊಳ್ಳಲಾಗದವರಿಂದಷ್ಟೇ ಇಂತಹ ಕ್ರಿಯೆಗಳನ್ನು ಮಾಡಲು ಸಾದ್ಯ.

ಇಲ್ಲಿಂದ ಅಲ್ಲಿಗೆ ಹೋಗುವವರು ಯಾರಾದರು ಇದ್ದಿದ್ದರೆ ನನ್ನ ಜನರಿಗೆ ಒಂದು ಮಾತು ಹೇಳಿಕಳಿಸಬಹುದಿತ್ತು. ಏನು ಮಾಡುವುದು ಹಾಗೆ ಯಾರೂ ಇಲ್ಲ. ಹಾಗಾಗಿ ಆ ಮಾತುಗಳನ್ನೂ ಇಲ್ಲಿಯೇ ಹೇಳಿಬಿಡುತ್ತೇನೆ:

ಸತ್ಯದ ಹಾದಿಯಲ್ಲಿಯೇ ನಡೆಯಿರಿ, ಯಾವತ್ತಿಗೂ ಅಹಿಮಸೆಯ ಹೊರತಾದ ಯಾವುದೇ ಆಯುಧಗಳನ್ನೂ ಹಿಡಿಯಬೇಡಿ, ಚಿತ್ರಗಳಲ್ಲಿ ನಾನಿಲ್ಲವಾದರು ನಿಮ್ಮ ಬದುಕಿನ ಭಾಗವಾಗಿ ನಾನು ಯಾವಾಗಲೂ ಇರುತ್ತೇನೆ!

ಹೇ… ರಾಮ್! 

No comments:

Post a Comment