Dec 5, 2016

ನೋಟು ನಿಷೇಧದಿಂದ ಭ್ರಷ್ಟಾಚಾರ ನಿಗ್ರಹ ಅಸಾದ್ಯ: ಸುಧಾರಣೆಯಾಗಬೇಕಿರುವ ಚುನಾವಣಾ ವ್ಯವಸ್ಥೆ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರ ಮೋದಿಯವರು ನವೆಂಬರ್ ಎಂಟನೇ ತಾರೀಖಿನ ರಾತ್ರಿ ದೊಡ್ಡ ಮುಖಬೆಲೆಯ ನೋಟುಗಳನ್ನು ನಿಷೇಧಗೊಳಿಸಿದ್ದಕ್ಕೆ ಕಾರಣಗಳನ್ನು ನೀಡುತ್ತ ಹೇಳಿದ ಬಹುಮುಖ್ಯ ಮಾತುಗಳೆಂದರೆ, ಈ ನಿಷೇಧದಿಂದ ಕಪ್ಪಹಣದ ಹಾವಳಿ ಇಲ್ಲವಾಗುತ್ತದೆ ಮತ್ತು ಭ್ರಷ್ಟಾಚಾರ ಕಡಿಮೆಯಾಗುತ್ತದೆ ಎಂಬುದಾಗಿತ್ತು. ಈ ಮಾತುಗಳನ್ನು ಕೇಳಿಸಿಕೊಂಡ ಜನತೆಗೆ ತಕ್ಷಣಕ್ಕೆ ಇದು ನಿಜವೆನಿಸಿ ಮೋದಿಯವರ ಬಗ್ಗೆ ಮೆಚ್ಚುಗೆ ಮೂಡಿದ್ದು ಸುಳ್ಳಲ್ಲ. ಹಾಗಾಗಿಯೇ ಆರಂಭದಲ್ಲಿ ವಿರೋಧಪಕ್ಷಗಳು ಸಹ ಈ ನಿಷೇಧವನ್ನು ವಿರೋಧಿಸಲು ಹಿಂದೆ ಮುಂದೆ ನೋಡುವಂತಾಯಿತು.

ಆದರೆ ಯಾವಾಗ ತಮ್ಮಲ್ಲಿನ ನೋಟುಗಳ ಬದಲಾವಣೆಗೆ ಮತ್ತು ತಾವೇ ಠೇವಣಿ ಇಟ್ಟಿರುವ ಹಣದಲ್ಲಿ ಕನಿಷ್ಠ ಮೊತ್ತವನ್ನು ಹಿಂಪಡೆಯಲು ಜನಸಾಮಾನ್ಯರು ಉದ್ದುದ್ದನೆಯ ಸಾಲಿನಲ್ಲಿ ನಿಲ್ಲಬೇಕಾಗಿ ಬಂತೊ ಆಗ ಇದೆಷ್ಟು ಸರಿಯಾದ ಕ್ರಮವೆಂಬ ಅನುಮಾನದ ಸ್ವರಗಳು ಕೇಳಲಾರಂಬಿಸಿದವು. ಜೊತೆಗೆ ಇದರಿಂದ ಕಪ್ಪುಹಣ ನಿಷೇಧವಾಗುತ್ತದೆಯೇ ಎಂಬ ಪ್ರಶ್ನೆಯೂ ಕೇಳಬರಲಾರಂಬಿಸಿತು. ನಿಜಕ್ಕೂ ನಮ್ಮ ದೇಶದ ಅಭಿವೃದ್ದಿಯಲ್ಲಿ ದೊಡ್ಡ ಸಮಸ್ಯೆ ಇರುವುದು ಈಗಾಗಲೇ ಸಿರಿವಂತರು ಸಂಗ್ರಹಿಸಿರುವ ಕಪ್ಪುಹಣದಲ್ಲಿ ಅಲ್ಲ. ಜನಸಾಮಾನ್ಯರಿಗೆ ಅದರಿಂದಾಗಬಹುದಾದ ತೊಂದರೆಯ ಪ್ರಮಾಣವೂ ಬೇರೆ ರೀತಿಯದು. ನಮ್ಮ ನಾಡಿನ ಬಹುದೊಡ್ಡ ಸಮಸ್ಯೆ ಇರುವುದು ವ್ಯವಸ್ಥಯೊಳಗಿನ ಭ್ರಷ್ಟಾಚಾರದಲ್ಲಿ. ನೋಟು ನಿಷೇಧದಿಂದ ಭ್ರಷ್ಟಾಚಾರ ಇಲ್ಲವಾಗಿಬಿಡುತ್ತದೆಯೆಂಬ ಭ್ರಮೆಯೇನಾದರು ನಮಗಿದ್ದುದೇ ಆದರೆ ಅದು ನಿಜಕ್ಕೂ ಮೂರ್ಖತನವಾಗಿಬಿಡುತ್ತದೆ. ಯಾಕೆಂದರೆ ಭ್ರಷ್ಟಾಚಾರ ಎನ್ನುವುದು ಹಣದ ರೂಪದಲ್ಲಿಯೇ ನಡೆಯ ಬೇಕಿಲ್ಲ. ವ್ಯಕ್ತಿಯೊಬ್ಬನನ್ನು ಭ್ರಷ್ಟನನ್ನಾಗಿಸಲು ಬಹಳಷ್ಟು ದಾರಿಗಳಿವೆ. ಹಾಗಾಗಿ ನೋಟು ಬ್ಯಾನು ಒಂದರಿಂದಲೇ ಈ ನೆಲದ ಭ್ರಷ್ಟಾಚಾರವನ್ನು ತಡೆಯುವುದು ಅಸಾದ್ಯದ ಮಾತೆಂಬುದನ್ನು ಬಹುಶ: ಮೋದಿಯವರೂ ಒಪ್ಪಿಕೊಳ್ಳುತ್ತಾರೆಂದು ನಾನು ನಂಬುತ್ತೇನೆ.

ಹಾಗಾಗಿ ಭ್ರಷ್ಟಾಚಾರದ ಮೂಲ ಬೇರಿರುವುದೇ ನಮ್ಮ ರಾಜಕೀಯ ವ್ಯವಸ್ಥೆಯಲ್ಲಿ. ಪ್ರಜಾಪ್ರಭುತ್ವದ ಅನಿವಾರ್ಯತೆಯಾಗಿರುವ ಚುನಾವಣಾ ವ್ಯವಸ್ಥೆಯೇ ಎಲ್ಲ ತೆರನಾದ ಭ್ರಷ್ಟಾಚಾರಗಳ ತಾಯಿ ಎನ್ನಬಹುದು. ಚುನಾವಣೆಗಳಲ್ಲಿ ನಡೆಯುವ ಭ್ರಷ್ಟಾಚಾರಗಳು ಮತ್ತು ಈ ಪ್ರಕ್ರಿಯೆಯಲ್ಲಿ ಸಕ್ರಿಯ ಪಾತ್ರವಹಿಸುವ ಹಣದ ಮೂಲದಲ್ಲಿಯೇ ಈ ನಾಡಿನ ಭ್ರಷ್ಟಾಚಾರದ ಮೂಲ ಅಡಗಿದೆ.ನಮ್ಮ ರಾಜಕಾರಣ ಮತ್ತು ಹಣ ವಿನಿಯೋಗ ಒಟ್ಟೊಟ್ಟಿಗೆ ನಡೆಯುತ್ತ ಬರುತ್ತಿದ್ದು ಚುನಾವಣೆಗಳು ಸ್ವತ: ಭ್ರಷ್ಟತೆಯ ಕೂಪದಲ್ಲಿ ಬಿದ್ದಿವೆ. ನಮ್ಮೆಲ್ಲ ಭ್ರಷ್ಟತೆಯ ಹಣ ತೊಡಗುವುದೇ ಚುನಾವಣೆಗಳ ಕ್ರಿಯೆಯಲ್ಲಿ. ದೊಡ್ಡಮೊತ್ತದ ಹಣವನ್ನು ಹೂಡದೆ ಚುನಾವಣೆಗಳನ್ನು ಗೆಲ್ಲಲು ಸಾದ್ಯವಿಲ್ಲ ಎಂಬ ನಿರ್ದಾರಕ್ಕೆ ಬಂದಿರುವ ರಾಜಕಾರಣಿಗಳು ರಾಜಕೀಯ ಪಕ್ಷಗಳು ಇದಕ್ಕೆ ಖರ್ಚು ಮಾಡುವುದು ಸಕ್ರಮವಾಗಿ ಗಳಿಸಿದ ಹಣವನ್ನೇನಲ್ಲ. ಅದೂ ಅಲ್ಲದೆ ಚುನಾವಣಾ ಖರ್ಚಿಗೆ ಇರುವ ಮಿತಿಯೊಳಗೆ ಪ್ರಚಾರಗಳನ್ನು ನಡೆಸಿ ಗೆಲ್ಲುವ ಭರವಸೆಯೂ ಅವುಗಳಿಗೆ ಇಲ್ಲ. ಆದ್ದರಿಂದ ಅನಿವಾರ್ಯವಾಗಿ ಚುನಾವಣೆಯಲ್ಲಿ ಬಾರಿ ಮೊತ್ತದ ಕಪ್ಪುಹಣ ಹೂಡಿಕೆಯಾಗುತ್ತದೆ. ಚಲಾವಣೆಯಲ್ಲಿ ಇರದ ಕಪ್ಪುಹಣ ಚುನಾವಣೆಯ ವೇಳೆ ಬಿಳಿಯಾಗಿ ಮಾರ್ಪಾಟಾಗುತ್ತದೆ. ಹೀಗೆ ಚುನಾವಣೆಗಳಿಗಾಗಿ ಖರ್ಚು ಮಾಡುವ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ನೋಡಿದರೆ ಸಾಕು ಭ್ರಷ್ಟಾಚಾರದ ಬಗ್ಗೆ ನಿಮಗೊಂದು ಸ್ಪಷ್ಟತೆ ಬರುತ್ತದೆ. ಅಧಿಕಾರದ ಖುರ್ಚಿ ಏರುವ ಎಲ್ಲ ರಾಜಕಾರಣಿಗಳು, ಪಕ್ಷಾತೀತವಾಗಿ ಭ್ರಷ್ಟತೆಯ ದಾರಿಗಳನ್ನು ಹುಡುಕಿ ಕೊಳ್ಳುತ್ತ ಹೋಗುತ್ತಾರೆ. ಅಭಿವೃದ್ದಿಯ ಹೆಸರಿನಲ್ಲಿ ನಡೆಯುವ ಎಲ್ಲ ಕಾಮಗಾರಿಗಳಲ್ಲೂ ಅವರು ಅಕ್ರಮ ನಡೆಸಲು ಶುರು ಮಾಡುತ್ತಾರೆ. ಅದು ಹೆದ್ದಾರಿ ನಿಮಾಣವಾಗಿರಬಹುದು, ಅಣೆಕಟ್ಟು ನಿರ್ಮಾಣವಾಗಿರಬಹುದು, ನೀರಾವರಿ ಯೋಜನೆಗಳ ಕಾಮಗಾರಿಯಾಗಿರಬಹುದು, ಹೀಗೇ ಯಾವುದೇ ಸರಕಾರಿ ಕಾಮಗಾರಿಗಳಾಗಿರಬಹುದು. ಅವುಗಳನ್ನು ಗುತ್ತಿಗೆ ನೀಡುವ ಪ್ರಕ್ರಿಯೆಯಲ್ಲಿ ಸಹಜವಾಗಿ ಸ್ವಜನ ಪಕ್ಷಪಾತ ನಡೆಸುವ ರಾಜಕಾರಣಿಗಳು ತಮಗೆ ಚುನಾವಣಾ ಖರ್ಚಿಗೆ ಹಣ ನೀಡಬಲ್ಲಂತಹ ವ್ಯಕ್ತಿ ಸಂಸ್ಥೆಗಳಿಗೆ ಪೂರಕವಾಗಿ ನಿರ್ದಾರಗಳನ್ನು ತೆಗೆದುಕೊಳ್ಳುತ್ತಾ ಹೋಗುತ್ತಾರೆ. ಹೀಗೆ ರಾಜಕಾರಣಿಗಳಿಗೆ ಹಣ ನೀಡುವ ವ್ಯಕ್ತಿ ಸಂಸ್ಥೆಗಳು ಪ್ರಾಮಾಣಿಕವಾಗಿ ಯೋಜನೆಗಳನ್ನು ಕಾರ್ಯರೂಪಗೊಳಿಸಲು ಸಾದ್ಯವಾಗುವುದಿಲ್ಲ. ದೊಡ್ಡ ಮೀನುಗಳನ್ನು ಬುಟ್ಟಿಗೆ ಹಾಕಿಕೊಂಡ ಶಕ್ತಿಗಳಿಗೆ ಸಣ್ಣ ಮೀನುಗಳನ್ನು(ಸರಕಾರಿ ಅಧಿಕಾರಿಗಳನ್ನು) ಪಳಗಿಸುವುದು ಕಷ್ಟವೇನಾಗುವುದಿಲ್ಲ.

ಬಹಳಷ್ಟು ಸಾರಿ ತಮ್ಮ ಮುಂದಿನ ಚುನಾವಣಾ ನಿಧಿಗೆಂದೇ ಕೆಲವು ಹೊಸ ಯೋಜನೆಗಳನ್ನು ಸೃಷ್ಠಿಸುವ ಮಟ್ಟಕ್ಕೂ ಈ ರಾಜಕೀಯ ಶಕ್ತಿಗಳು ಹೋಗುತ್ತವೆ. ಜನರಿಗೆ ಮೂರು ಕಾಸಿನ ಪ್ರಯೋಜನವೂ ಇರದಂತಹ ಇಂತಹ ನೂರರು ಯೋಜನೆಗಳು ನಮ್ಮಲ್ಲಿವೆ. ಆದ್ದರಿಂದ ಚುನಾವಣಾ ನಿಧಿ ಎಂಬ ಕಲ್ಪನೆ ಇಲ್ಲವಾಗುವ ತನಕವು ಈ ಭ್ರಷ್ಟತೆಯ ಬೇರುಗಳು ನಾಶವಾಗುವುದು ಅಸಾದ್ಯ.

೨೦೧೪ರ ಸಾರ್ವತ್ರಿಕ ಚುನಾವಣೆಯಲ್ಲಿ ಬಾಗವಹಿಸಿದ ನಮ್ಮ ರಾಜಕೀಯ ಪಕ್ಷಗಳು ತಾವು ಖರ್ಚು ಮಾಡಿರುವ ಹಣದ ಮೊತ್ತ ಸುಮಾರು ೩ಸಾವಿರ ಕೋಟಿಗಳೆಂದು ಅಧಿಕೃತವಾಗಿ ಹೇಳಿವೆ( ಚುನಾವಣಾ ಆಯೋಗಗಳಿಗೆ ನೀಡಿರುವ ವೆಚ್ಚದ ವಿವರಗಳಿಂದ ಈ ಅಂಕಿಅಂಶಗಳು ದೊರೆತಿವೆ) ಆದರೆ ಖಾಸಗಿ ಸಂಸ್ಥೆಗಳು ನಡೆಸಿರುವ ಸಂಶೋದನೆಗಳು ಈ ವೆಚ್ಚ ಸರಿಸುಮಾರು ೩೫ ಸಾವಿರ ಕೋಟಿಗಳನ್ನು ದಾಟಿದೆ ಎಂದು ಹೇಳುತ್ತಿವೆ. ಹಾಗಿದ್ದರೆ ಅಧಿಕೃತವಾಗಿ ನೀಡಿದ ಲೆಕಕ್ಕಿಂತ ೩೨ಸಾವಿರ ಕೋಟಿಗಳನ್ನು ಹೆಚ್ಚು ಖರ್ಚು ಮಾಡಿರುವ ರಾಜಕೀಯ ಪಕ್ಷಗಳಿಗೆ ಆ ಹಣ ಎಲ್ಲಿಂದ ಬಂದಿತು ಎಂಬುದೇ ಇಲ್ಲಿರುವ ಮುಖ್ಯ ಪ್ರಶ್ನೆ. ಈ ೩೫ ಸಾವಿರ ಕೋಟಿ ರೂಪಾಯಿಗಳು ಸರಕಾರದ ಹಲವು ಇಲಾಖೆಗಳಲ್ಲಿ ನಡೆದ ಭ್ರಷ್ಟಾಚಾರದ ಕೃಪೆಯಿಂದ ಸಂಗ್ರಹಿಸಲ್ಪಟ್ಟ ಹಣವಾಗಿದೆ. ಇದರಲ್ಲಿ ಎಷ್ಟರ ಮಟ್ಟಿಗೆ ರಾಜಕಾರಣಿಗಳ ಪಾಲಿದೆಯೊ ಅಷ್ಟೇ ಪಾಲು ಉನ್ನತ ಅಧಿಕಾರಿಗಳದು ಇದೆ. ಯಾಕೆಂದರೆ ಅಧಿಕಾರಿಯೊಬ್ಬ ಕೋಟ್ಯಾಂತರ ರಪಾಯಿಗಳನ್ನು ಭ್ರಷ್ಟತೆಯ ಮೂಲಕ ಗಳಿಸಿದ್ದರೆ ಅದರಲ್ಲಿ ಒಂದು ಪಾಲನ್ನು ಅವನು ತನಗೆ ಬೇಕಾದ ರಾಜಕಾರಣಿಯ ಪರವಾಗಿ ಚುನಾವಣೆಗಳಲ್ಲಿ ವಿನಿಯೋಗ ಮಾಡುತ್ತಾನೆ. ಆಕಸ್ಮಿಕವಾಗಿ ಆ ರಾಜಕಾರಣಿ ಅಧಿಕಾರಕ್ಕೆ ಬಂದರೆ ಆ ಅಧಿಕಾರಿಗೆ ಸರಕಾರದ ಆಯಕಟ್ಟಿನ ಸ್ಥಾನ ದೊರೆಯುವಂತೆ ನೋಡಿಕೊಳ್ಳಲಾಗುತ್ತದೆ. ಮತ್ತೆ ಆ ಇಬ್ಬರೂ ಸೇರಿ ಮುಂದಿನ ಚುನಾವಣೆಗಳಿಗೆ ಆಗಿ ಮಿಗುವಷ್ಟು ಹಣ ಗಳಿಸಲು ಪ್ರಯತ್ನ ನಡೆಸುತ್ತಾರೆ. ಇದೊಂದು ವಿಷ ವರ್ತುಲ. ಇನ್ನು ಖಾಸಗಿ ಉದ್ಯಮದಾರರು ಸಹ ತಮಗೆ ಅನುಕೂಲಕರ ನೀತಿಗಳನ್ನು ರೂಪಿಸಿ ಜಾರಿಗೆ ತರಬಲ್ಲಂತಹ ರಾಜಕೀಯ ಪಕ್ಷವೊಂದರ ಪರವಾಗಿ ಹಣ ಖರ್ಚು ಮಾಡುತ್ತ ಹೋಗುತ್ತವೆ. ರಾಜಕಾರಣಿಯೊಬ್ಬ ತನ್ನ ಕ್ಷೇತ್ರದಲ್ಲಿ ಚಲಾವಣೆಯಲ್ಲಿ ಇರಬೇಕೆಂದು ಬಯಸಿದರೆ ಆತ ವರ್ಷವಿಡಿ ತನ್ನ ಪಕ್ಷದ ಕಾರ್ಯಕರ್ತರನ್ನು ಸಂಪ್ರೀತಗೊಳಿಸುತ್ತಲೇ ಇರಬೇಕು. ಹಲವಾರು ಸಾಮಾಜಿಕ ಕಾರ್ಯಕ್ರಮಗಳಿಗೆ ಆತ ದೇಣಿಗೆ ನೀಡುತ್ತಲೇ ಇರಬೇಕಾಗುತ್ತದೆ. ಬಹುಶ: ನಮ್ಮ ಹಳ್ಳಿಗಳ ಕಡೆ ನೋಡಿದರೆ ಇದು ಅರ್ಥವಾಗುತ್ತದೆ. ವರ್ಷವರ್ಷ ನಡೆಯುವ ರಾಜ್ಯೋತ್ಸವಗಳಿಗೆ, ಗಣೇಶನನ್ನು ಕೂರಿಸುವ ಕಾರ್ಯಕ್ರಮಗಳಿಗೆ, ದೇವರಉತ್ಸವಗಳಿಗೆ, ಸಾಮೂಹಿಕ ವಿವಾಹದಂತಹ ಕಾರ್ಯಕ್ರಮಗಳಿಗೆ ರಾಜಕಾರಣಿಯೊಬ್ಬ ಉದಾರವಾಗಿ ಹಣ ನೀಡುತ್ತಲೇ ಇರಬೇಕಾಗಿದೆ. ಅದರಲ್ಲೂ ಶಾಸಕನಾದವನು ಇದನ್ನು ಕಡೆಗಣಿಸುವಂತಿಲ್ಲ. ನಾನು ನೋಡಿದ ಹಾಗೆ ಬಹುತೇಕ ಶಾಸಕರುಗಳು ತಮ್ಮಕ್ಷೇತ್ರದ ಗುತ್ತಿಗೆದಾರರ ಕೈಲಿ ಈ ಹಣ ಕೊಡಿಸುತ್ತಾರೆ ಮತ್ತು ಆ ಗುತ್ತಿಗೆದಾರನಿಗೆ ಸರಕಾರದ ಗುತ್ತಿಗೆಗಳು ಸಿಗುವಂತೆ ನೋಡಿಕೊಳ್ಳುತ್ತಾರೆ. ಶಾಸಕನೊಬ್ಬ ಇಂತಹ ವಿಷಚಕ್ರದಲ್ಲಿ ಸಿಲುಕುವ ಅನಿವಾರ್ಯತೆ ನಮ್ಮ ರಾಜಕೀಯದಲ್ಲಿ ಸಹಜ ಕ್ರಿಯೆಯಾಗಿದೆ. ಇದರಿಂದ ಹೊರಬಂದು ರಾಜಕೀಯ ಮಾಡುವುದು ಸದ್ಯಕ್ಕಂತು ಅಸಾದ್ಯವೆಂದು ಹಲವು ರಾಜಕಾರಣಿಗಳು ಆಂತರೀಕ ಸಂಬಾಷಣೆಯಲ್ಲಿ ಹೇಳುತ್ತಿರುತ್ತಾರೆ.

ಆದ್ದರಿಂದಲೇ ಲೇಖನದ ಮೊದಲಿಗೆ ನಾನು ಹೇಳಿದ್ದು ದೊಡ್ಡ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿದ ಕೂಡಲೆ ಕಪ್ಪುಹಣದ ಮತ್ತು ಭ್ರಷ್ಟತೆಯ ಸಮಸ್ಯೆ ಬಗೆಹರಿಯುವುದಿಲ್ಲವೆಂದು. ಆ ದಿಸೆಯಲ್ಲಿದು ಒಂದು ಸಣ್ಣ ಹೆಜ್ಜೆಯಾಗಬಹುದಷ್ಟೇ ಹೊರತು ಬೇರೇನಲ್ಲ.ನಮ್ಮ ದೇಶದ ಎಲ್ಲ ಕೆಡುಕುಗಳಿಗೂ ಕಾರಣವಾಗಿರುವುದೇ ನಮ್ಮ ಚುನಾವಣಾ ವ್ಯವಸ್ಥೆಯಾಗಿದ್ದು ಅದನ್ನು ಸರೆಪಡಿಸುವತ್ತ ಸರಕಾರಗಳು ಗಮನಹರಿಸಬೇಕೇ ಹೊರತು ನೋಟ್ ಬ್ಯಾನಿನಂತಹ ಜನಪ್ರಿಯ ಮಾರ್ಗಗಳನ್ನು ಘೋಷಿಸುವುದರಿಂದಲ್ಲ.

ಚುನಾವಣಾ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳನ್ನು ತರಲೆಂದೇ ಹಲವು ಆಯೋಗಗಳನ್ನು ಈಗಾಗಲೇ ರಚಿಸಲಾಗಿದ್ದು, ಅವು ನೀಡಿದ ವರದಿಗಳು ದೂಳು ಹಿಡಿಯುತ್ತ ಕೂತಿವೆ. ಈಗಿನ ಕೇಂದ್ರಕ್ಕೆ ಭ್ರಷ್ಟಾಚಾರವನ್ನು ನಿಗ್ರಹಿಸುವ ಯೋಜನೆ ನಿಜಕ್ಕೂ ಇರುವುದೇ ಆದರೆ ಮೊದಲು ಚುನಾವಣಾ ವ್ಯವಸ್ಥೆಯನ್ನು ಸುಧಾರಿಸುವ ಕ್ರಮಗಳತ್ತ ಮನಸ್ಸು ಮಾಡಬೇಕು. ಇಂಡಿಯಾದ ಎಲ್ಲ ರಾಜಕೀಯ ಪಕ್ಷಗಳೂ ಈ ನಿಟ್ಟಿನಲ್ಲಿ ಒಂದಾಗಿ ಕೆಲಸ ಮಾಡಲು ಮುಂದಾಗಬೇಕು.

No comments:

Post a Comment