Dec 11, 2016

ಪಂಜಾಬ್ ಚುನಾವಣೆ: ದಲಿತರ ಓಲೈಕೆ ಮತ್ತು ಡ್ರಗ್ಸ್ ಮಾಫಿಯಾ ವಿರುದ್ದ ಹೋರಾಟಗಳೇ ಪ್ರಮುಖ ವಿಷಯಗಳು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಪಂಜಾಬ್ ರಾಜ್ಯದ ವಿದಾನಸಭಾ ಚುನಾವಣೆಗಳು ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳ ಒಳಗೆ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಈ ಚುನಾವಣಾ ರಾಜಕಾರಣವನ್ನು ಹತ್ತಿರದಿಂದ ಗಮನಿಸುತ್ತಿರುವವರಿಗೆ ಪ್ರಮುಖವಾಗಿ ಗೋಚರಿಸುತ್ತಿರುವ ಎರಡು ವಿಷಯಗಳಿವೆ. ಅದರಲ್ಲಿ ಮೊದಲನೆಯದು ಪಂಜಾಬಿನಲ್ಲಿ ತೀವ್ರವಾಗಿ ಚರ್ಚಿತವಾಗುತ್ತಿರುವ ಡ್ರಗ್ಸ್ ಮಾಫಿಯಾದ ಕಾನೂನುಬಾಹಿರ ಚಟುವಟಿಕೆಗಳು. ಇನ್ನೊಂದು ಪಂಜಾಬಿನ ರಾಜಕೀಯ ವಲಯದಲ್ಲಿ ಅಷ್ಟೇನೂ ಪ್ರಾಮುಖ್ಯ ಪಡೆಯದ ದಲಿತ ರಾಜಕಾರಣ ಎಲ್ಲ ಪಕ್ಷಗಳ ಒಳಗೆ ಚರ್ಚಿತವಾಗುತ್ತಿರುವುದಾಗಿದೆ. ಅದು ಇದುವರೆಗು ಪಂಜಾಬಿನ ರಾಜಕಾರಣದಲ್ಲಿ ದಲಿತ ಶಕ್ತಿಯ ಪ್ರಭಾವವೇ ಇರದಂತಹ ವಾತಾವರಣವಿದ್ದು, ಇದೀಗ ಅದು ಬದಲಾಗುವ ಮುನ್ಸೂಚನೆಯೊಂದು ಕಾಣುತ್ತಿರುವುದಾಗಿದೆ. ಈ ವಿಷಯಗಳ ಬಗ್ಗೆ ಒಂದಿಷ್ಟು ನೋಡೋಣ:

ಡ್ರಗ್ಸ್ ಮಾಫಿಯಾ:

ಇವತ್ತು ಡ್ರಗ್ಸ್ ಮಾಫಿಯಾ ಎನ್ನುವುದು ಪಂಜಾಬಿನಲ್ಲಿ ಸಾಮಾಜಿಕ, ಆರ್ಥಿಕ, ರಾಜಕೀಯ ಚಿತ್ರಣಗಳನ್ನೇ ಬದಲಾಯಿಸುವ ಮಟ್ಟಕ್ಕೆ ಬೆಳೆದು ನಿಂತಿದೆ. ರಾಜ್ಯದ ಪ್ರತಿ ಪ್ರಜೆಯೂ ಈ ಡ್ರಗ್ಸ್ ಮಾಫಿಯಾ ಬಗ್ಗೆ ಬಹಿರಂಗವಾಗಿಯೇ ಮಾತಾಡಿದರೂ, ಆಡಳಿತರೂಢ ಅಕಾಲಿದಳದ ಮೈತ್ರಿಕೂಟ ಮಾತ್ರ ಇಂತಹದೊಂದು ಆರೋಪವನ್ನು ಕೆಲವೊಮ್ಮೆ ನಿರಾಕರಿಸುತ್ತ, ಇನ್ನು ಕೆಲವೊಮ್ಮೆ ಇಂತಹ ಸನ್ನಿವೇಶಕ್ಕೆ ವಿರೋಧಪಕ್ಷಗಳೇ ಕಾರಣ ಎಂಬ ಹೇಳಿಕೆ ನೀಡುತ್ತ ಬರುತ್ತಿದೆ. ಇನ್ನು ಕಾಂಗ್ರೆಸ್ ಈ ವರ್ಷದ ಆರಂಭದಿಂದಲೇ ಈ ಡ್ರಗ್ಸ್ ಮಾಫಿಯಾದ ವಿರುದ್ದ ತಾನು ಹೋರಾಡುವುದಾಗಿ ಅನೇಕ ಕಾರ್ಯಕ್ರಮಗಳನ್ನು ಹಾಕಿ ಕೊಂಡಿತ್ತು. ಹಾಗಾದರೆ ವಾಸ್ತವವೇನು ಎಂಬುದನ್ನು ನಾವು ಮೊದಲು ನೋಡಬೇಕಾಗಿದೆ. 

ಕೆಲವು ಸರಕಾರದ ಅಧಿಕೃತ ವರದಿಗಳು ಮತ್ತು ಸರಕಾರೇತರ ಸಂಘಸಂಸ್ಥೆಗಳ ವರದಿಗಳು ತಿಳಿಸುವಂತೆ ಕಳೆದ ಹತ್ತು ವರ್ಷಗಳಲ್ಲಿ ಪಂಜಾಬಿನ ಬಹುತೇಕ ಯುವಕ ಯುವತಿಯರು ಮಾದಕವಸ್ತುಗಳ ವ್ಯಸನಿಗಳಾಗುತ್ತಿದ್ದಾರೆ. ಒಂದು ಅಂದಾಜಿನಂತೆ ಸುಮಾರು 40 ಲಕ್ಷ ಯುವಕರು ಈ ವ್ಯಸನದ ಬಲಿಪಶುಗಳಾಗಿದ್ದಾರೆಂದು ವಿರೋಧ ಪಕ್ಷಗಳು ಅರೋಪ ಮಾಡುತ್ತಿವೆ. ಹಾಗಿದ್ದರೆ ಕಳೆದ ಹತ್ತು ವರ್ಷಗಳಲ್ಲಿ ಈ ಮಾಫಿಯಾ ಇಷ್ಟೊಂದು ಮಟ್ಟದಲ್ಲಿ ಬೇರು ಬಿಡಲು ಕಾರಣಗಳೇನು ಎಂಬುದನ್ನು ನೋಡಬೇಕಾಗುತ್ತದೆ.

1. ಅವ್ಯವಸ್ಥೆಗೊಂಡ ಶಿಕ್ಷಣ ವ್ಯವಸ್ಥೆಯಿಂದಾಗಿ ಅರ್ದಕ್ಕೆ ಶಾಲೆ ಬಿಡುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಅರೆ ಶಿಕ್ಷಿತ ನಿರುದ್ಯೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚಳವಾಗುತ್ತಿದೆ. ನಗರ ಪ್ರದೇಶಗಳ ಬಹುತೇಕ ಉದ್ಯೋಗಗಳು ಮೇಲು ಮಧ್ಯಮವರ್ಗದ ಮಕ್ಕಳ ಪಾಲಾಗುತ್ತಿದ್ದು, ಗ್ರಾಮಾಂತರ ಮತ್ತು ಸಣ್ಣಪುಟ್ಟ ನಗರಗಳ ಯುವಕರುಗಳಿಗೆ ಉದ್ಯೋಗಾವಕಾಶಗಳು ಕಡಿಮೆಯಾಗುತ್ತಿವೆ. ಇಂತಹ ನಿರುದ್ಯೋಗಿ ಯುವಕರು ಮಾದಕ ವ್ಯಸನಿಗಳಾಗಿ ಬದಲಾಗುತ್ತಿದ್ದಾರೆ.

2. ಕೃಷಿಯಲ್ಲಿನ ಹಿನ್ನಡೆಯಿಂದಾಗಿ ಕೃಷಿ ಕ್ಷೇತ್ರದಲ್ಲಿಯೂ ಉದ್ಯೋಗಸಮಸ್ಯೆ ತಾಂಡವವಾಡುತ್ತಿದೆ. ಇದರ ಹೊರತಾಗಿ ಕೃಷಿ ಕ್ಷೇತ್ರದಾಚೆಗೂ ಉದ್ಯೋಗಗಳು ದೊರೆಯದೇ ಇರುವುದು ಯುವಕರನ್ನು ಡ್ರಗ್ಸ್ ದಾರಿ ಹಿಡಿಸುವಲ್ಲಿ ಮುಖ್ಯ ಕಾರಣಗಳಾಗುತ್ತಿದೆ. ಒಂದು ಕಾಲಕ್ಕೆ ಕೃಷಿಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದ್ದ ಪಂಜಾಬ್ ಇದೀಗ ಬದಲಾದ ಆರ್ಥಿಕ ವ್ಯವಸ್ಥೆಯ ಹಿನ್ನೆಲೆಯಲ್ಲಿ ಬಿಕ್ಕಟ್ಟನ್ನು ಎದುರಿಸುತ್ತಿದ್ದು ಯುವಕರು ಡ್ರಗ್ಸ್ ಮಾರಾಟ ಸರಬರಾಜನ್ನು ಪರ್ಯಾಯ ಉದ್ಯೋಗವನ್ನಾಗಿಸಿಕೊಳ್ಳುತ್ತಿದ್ದಾರೆ.

3. ಇಷ್ಟಲ್ಲದೆ ಪಂಜಾಬಿನ ಗಡಿಗೆ ಹೊಂದಿಕೊಂಡಿರುವ ಪಾಕಿಸ್ತಾನ ಈ ಡ್ರಗ್ಸ್ ಸರಬರಾಜು ಮಾಡುತ್ತಿದ್ದು ಇಂಡಿಯಾದ ಸಾಮಾಜಿಕ ಆರ್ಥಿಕ ವ್ಯವಸ್ಥೆಯನ್ನು ಹಾಳು ಮಾಡಲು ಈ ಡ್ರಗ್ಸ್ ಮಾಫಿಯಾವನ್ನು ಬಳಸಿಕೊಳ್ಳುತ್ತಿದೆ. ಜೊತೆಗೆ ಮಾದಕ ವ್ಯಸನಕ್ಕೆ ಬಲಿಯಾದ ಯುವಕರು ತಮ್ಮ ಹಣಕಾಸಿನ ಕೊರತೆ ನೀಗಿಸಿಕೊಳ್ಳಲು ತಾವೇ ಮಾದಕವಸ್ತುಗಳ ಬೇಡಿಕೆ ಪೂರೈಕೆಗಳ ನಡುವಿನ ಕೊಂಡಿಗಳಾಗಿ ಕೆಲಸ ಮಾಡಲು ತೊಡಗಿದ್ದಾರೆ. ನಿಜ ಹೇಳಬೇಕೆಂದರೆ ಈ ಡ್ರಗ್ಸ್ ಮಾಫಿಯಾ ತನ್ನದೇ ಆದ ಒಂದು ಪ್ಯಾರಲಲ್ ಆರ್ಥಿಕ ವ್ಯವಸ್ಥೆನ್ನು ನಡೆಸುವ ಹಂತಕ್ಕೆ ಹೋಗಿದೆ. ಜೊತೆಗೆ ಈ ಎಲ್ಲ ಸಮಜವಿರೋಧಿ ಶಕ್ತಿಗಳಿಗೆ ಅಧಿಕಾರಸ್ಥರು ಮಾತ್ರವಲ್ಲದೆ, ಬಹುತೇಕ ರಾಜಕೀಯ ಶಕ್ತಿಗಳು ಸಹ ಬೆಂಬಲ ನೀಡುತ್ತಿರುವುದು ಕಂಡು ಬರುತ್ತಿದೆ. ಮಾಜಾ ಮತ್ತು ಮಾಲ್ವಾ ಪ್ರದೇಶಗಳು ಈ ಡ್ರಗ್ಸ್ ಮಾಫಿಯಾದ ಪ್ರಮುಖ ಪ್ರದೇಶಗಳಾಗಿದ್ದು ಇಲ್ಲಿನ ರಾಜಕೀಯ ಬೆಳವಣಿಗೆಗಳನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿವೆ.

ಮುಂದಿನ ಚುನಾವಣೆಗಳನ್ನು ದೃಷ್ಠಿಯಲ್ಲಿಟ್ಟುಕೊಂಡ ಕಾಂಗ್ರೆಸ್ ಈ ಡ್ರಗ್ಸ್ ಮಾಫಿಯಾ ವಿಚಾರವನ್ನು ಇಟ್ಟುಕೊಂಡು ಕಳೆದ ಜುಲೈ ಅಗಸ್ಟ್ ತಿಂಗಳಿಂದಲೇ ರಾಜ್ಯದಲ್ಲಿ ಹೋರಾಟ ಶುರು ಮಾಡಿತ್ತು. ಸ್ವತ: ಕಾಂಗ್ರೆಸ್ಸಿನ ರಾಷ್ಟ್ರೀಯ ಉಪಾದ್ಯಕ್ಷರಾದ ರಾಹುಲ್ ಗಾಂದಿಯವರೇ ಪಂಜಾಬಿನಲ್ಲಿ ಪ್ರತಿಭಟನೆ ಮತ್ತು ರ್ಯಾಲಿಗಳಲ್ಲಿ ಬಾಗವಹಿಸಿ ಮಾಧ್ಯಮಗಳ ಗಮನ ಸೆಳೆಯುವ ಪ್ರಯತ್ನವನ್ನೂ ಮಾಡಿದ್ದರು. ಆಡಳಿತಾರೂಢ ಅಕಾಲಿದಳದ ಮೈತ್ರಿಕೂಟವು ಡ್ರಗ್ಸ್ ಮಾಫಿಯಾಗೆ ಬೆಂಬಲ ನೀಡುತ್ತಿದೆಯೆಂಬ ಗಂಬೀರ ಆರೋಪವನ್ನೂ ಅವರು ಮಾಡಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ ಅಕಾಲಿದಳವು ರಾಹುಲರು ಪಂಜಾಬಿ ಯುವಕರು ಮಾದಕ ವ್ಯಸನಿಗಳೆಂದು ರಾಷ್ಟ್ರದಾದ್ಯಂತ ಬಿಂಬಿಸುತ್ತ ಪಂಜಾಬಿನ ಜನತೆಗೆ ಅವಮಾನ ಮಾಡುತ್ತಿದ್ದಾರೆಂದು ಆಪಾದಿಸಿದೆ. ಇಷ್ಟಲ್ಲದೆ ಹಿಂದೆ ಅವರ ಅಜ್ಜಿ ಮಾಜಿ ಪ್ರದಾನಿ ಶ್ರೀಮತಿ ಇಂದಿರಾಗಾಂದಿಯವರು ಪಂಜಾಬಿನ ಜನರನ್ನು ಉಗ್ರಗಾಮಿಗಳೆಂದು ಬಿಂಬಿಸಿ ಅವಮಾನ ಮಾಡಿದ್ದನ್ನು ನಾವು ಮರೆತಿಲ್ಲವೆಂದು ತಿರುಗೇಟನ್ನೂ ನೀಡಿದೆ. 

ಈ ನಡುವೆ ರಂಗಕ್ಕೆ ಇಳಿದ ಮತ್ತೊಂದು ಪಕ್ಷ ಅರವಿಂದ್ ಕೇಜ್ರೀವಾಲಾರ ಆಮ್ ಆದ್ಮಿ ಪಕ್ಷ ಸಹ ಈ ಡ್ರಗ್ಸ್ ಮಾಫಿಯಾದ ವಿಚಾರವನ್ನು ಚುನಾವಣೆಯ ಪ್ರಮುಖ ವಿಷಯವನ್ನಾಗಿಸಿ ಲಾಭ ಪಡೆಯಲು ಪ್ರಯತ್ನಿಸುತ್ತಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಡ್ರಗ್ಸ್ ಮಾಫಿಯಾ ವಿಚಾರವನ್ನು ಎತ್ತಿಕೊಂಡು ಧರಣಿ ಪ್ರತಿಭಟನೆಗಿಳಿದ ಕಾಂಗ್ರೆಸ್ ತದನಂತರದಲ್ಲಿ ಒಂದಿಷ್ಟು ಮೌನಕ್ಕೆ ಶರಣಾಯಿತು. ಕಳೆದ ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಸ್ಥಾನಗಳನ್ನು ಗೆದ್ದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದ ಆಮ್ ಆದ್ಮಿ ಪಕ್ಷ ಈ ಬಾರಿ ಪಂಜಾಬಿನ ಚುನಾವಣೆಯನ್ನು ಗಂಬೀರವಾಗಿ ಪರಿಗಣಿಸಿದ್ದು ಡ್ರಗ್ ಮಾಫಿಯಾ ವಿಷಯವನ್ನು ಕಾಂಗ್ರೇಸ್ಸಿನಿಂದ ಹೈಜಾಕ್ ಮಾಡಿದ ಹಾಗೆ ಕಾಣುತ್ತಿದೆ. ಹೀಗಾಗಿಯೇ ಅದೀಗ ಪಂಜಾಬ್ ಸರಕಾರದ ವಿರುದ್ದ ವಾಗ್ದಾಳಿಯನ್ನು ತೀವ್ರಗೊಳಿಸಿದೆ. ಸರಕಾರದ ವೈಫಲ್ಯವೇ ಪಂಜಾಬಿನಲ್ಲಿ ಡ್ರಗ್ ಮಾಫಿಯಾ ಹೆಚ್ಚಾಗಲು ಕಾರಣ ಎಂದಿರುವ ಅದು ಈ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಅಕಾಲಿದಳ ಮೈತ್ರಿಕೂಟ ಪರಸ್ಪರ ಶಾಮೀಲಾಗಿವೆ ಎಂದೂ ಆರೋಪಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯ ಹೊತ್ತಿಗೆ ಡ್ರಗ್ಸ್ ಮಾಫಿಯಾದ ವಿಚಾರವೇ ಮುಖ್ಯ ಚರ್ಚೆಯ ವಸ್ತುವಾಗುವ ನಿರೀಕ್ಷೆ ಇದೆ.

ದಲಿತ ರಾಜಕಾರಣ:

ಹಾಗೆ ನೋಡಿದರೆ ಉತ್ತರಪ್ರದೇಶ ಮತ್ತು ಮಹಾರಾಷ್ಟ್ರವನ್ನು ಹೊರತು ಪಡಿಸಿದರೆ ಅತಿ ಹೆಚ್ಚು ದಲಿತರನ್ನು ಹೊಂದಿರುವ ರಾಜ್ಯ ಪಂಜಾಬ್. ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ 32ರಷ್ಟು ದಲಿತರಿರುವ ಪಂಜಾಬಿನಲ್ಲಿ ಇವತ್ತಿಗೂ ಮೇಲ್ಜಾತಿಗಳೇ ಶಕ್ತಿರಾಜಕಾರಣದ ನಿಜವಾದ ಸೂತ್ರದಾರರು ಎನ್ನಬಹುದು. ಅದರೆ ಸ್ವಾತಂತ್ರಾನಂತರ ಇಲ್ಲಿ ಯಾವುದೇ ಬಲಿಷ್ಠ ದಲಿತ ಚಳುವಳಿಗಳು ನಡೆದಿಲ್ಲ. ನಡೆದಿದ್ದರೂ ಅವ್ಯಾವು ರಾಜಕೀಯ ಬದಲಾವಣೆಗಳನ್ನು ಉಂಟುಮಾಡುವ ಮಟ್ಟಕ್ಕೆ ಬೆಳೆಯಲಿಲ್ಲ. ಸ್ವಾತಂತ್ರಪೂರ್ವದಲ್ಲಿ 1920ರಲ್ಲಿ ದಲಿತನಾಯಕ ಮಾಂಗೂರಾಮ್ ನೇತೃತ್ವದಲ್ಲಿ ನಡೆದ ಚಳುವಳಿಯನ್ನು, ನಂತರದ ದಿನಗಳಲ್ಲಿ ಸ್ವತ: ದಲಿತರೇ ಮರೆಯುವಂತಾಗಿದ್ದು ಪಂಜಾಬಿನ ದಲಿತರ ದುರಂತ ಎನ್ನಬಹುದು. ಈಗಿರುವ ಶೇಕಡಾ 32 ರಷ್ಟು ದಲಿತರಲ್ಲಿ ಹೆಚ್ಚಿನ ಸಂಖ್ಯೆ ಅಂದರೆ ಶೇಕಡಾ 73ರಷ್ಟು ದಲಿತರು ಗ್ರಾಮೀಣ ಪ್ರದೇಶದವರಾಗಿದ್ದು ಇವತ್ತಿಗೂ ಮೇಲ್ಜಾತಿಗಳ ಕಪಿಮುಷ್ಠಿಯಲ್ಲಿದ್ದಾರೆ.

ಶೇಕಡಾ 32ರಷ್ಟಿರುವ ದಲಿತರು ಇವತ್ತಿಗೂ ಒಂದು ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆಯದೇ ಇರಲು ಹಲವು ರಾಜಕೀಯ ಕಾರಣಗಳಿವೆ. ಪಂಜಾಬಿನ ದಲಿತರಲ್ಲಿ ಸುಮಾರು 37 ಜಾತಿಗಳಿದ್ದು, ಯಾವತ್ತಿಗೂ ಇವು ಒಂದೇ ವೇದಿಕೆಯ ಅಡಿಯಲ್ಲಿ ಬರಲು ಸಾದ್ಯವಾಗಲೇ ಇಲ್ಲ.1975 ರ ಹೊತ್ತಿಗೆ ಕಾಂಗ್ರೆಸ್ ರಾಜಕಾರಣದ ವಿರುದ್ದ ಸೆಟೆದು ನಿಂತ ಸಿಕ್ ಸಮುದಾಯವನ್ನು ಹಣಿಯುವ ಸಲುವಾಗಿ ಕಾಂಗ್ರೆಸ್, ಗ್ಯಾನಿ ಜೈಲ್ ಸಿಂಗ್( ಮಾಜಿ ರಾಷ್ಟ್ರಪತಿಗಳು)ರಂತಹ ನಾನ್ ಜಾಟ್ ಸಿಕ್ ರನ್ನು ಮುಂಚೂಣಿಗೆ ತಂದು ಹಿಂದುಳಿದ ವರ್ಗಗಳ ಒಗ್ಗೂಡಿಕೆಗೆ ಕಾರಣವಾಯಿತು. ಆದರೆ ಇಂತಹ ಪರಿವರ್ತನೆಯ ಸಮಯದಲ್ಲಿಯೂ ಅದು ದಲಿತರನ್ನು ಒಂದು ಶಕ್ತಿಯನ್ನಾಗಿಪರಿಗಣಿಸಲೇ ಇಲ್ಲ. ನಂತರದಲ್ಲಿ ಅಕಾಲಿದಳ ಸಹ ತನ್ನ ಬೆಂಬಲಿಗ ಸಿಕ್ ಸಮುದಾಯದ ಕಡೆ ಗಮನ ಹರಿಸಿತೇ ಹೊರತು ದಲಿತರ ಬಗ್ಗೆ ಯೋಚಿಸಲಿಲ್ಲ. ಇದಕ್ಕೆ ಪೂರಕವಾಗಿ ಇದ್ದ ಕೆಲವು ದಲಿತ ನಾಯಕರುಗಳು ಸಹ ಕಾಂಗ್ರೆಸ್ ಅಥವಾ ಅಕಾಲಿದಳಗಳ ಒಳಗೆ ಸೇರಿ ತಮ್ಮ ದಲಿತ ಸಮುದಾಯವನ್ನು ಬಲಿಷ್ಠಗೊಳಿಸುವ ಪ್ರಯತ್ನ ಮಾಡಲೇ ಇಲ್ಲ.

ಆದರೀಗ ದಲಿತರಲ್ಲಿ ರಾಜಕೀಯ ಜಾಗೃತಿ ಮೂಡುತ್ತಿದ್ದು ಅವರನ್ನು ಒಲಿಸಿಕೊಳ್ಳಲು ಪಕ್ಷಗಳು ತಮ್ಮ ಯಥಾಪ್ರಕಾರದ ಸರ್ಕಸ್ಸುಗಳನ್ನು ಮಾಡಲು ಹೊರಟಿವೆ. ಹೀಗಾಗಿಯೇ ಬಾಜಪ ತನ್ನ ಪಕ್ಷದ ರಾಜ್ಯಾದ್ಯಕ್ಷನನ್ನಾಗಿ ಒಬ್ಬ ದಲಿತರನ್ನು ನೇಮಕ ಮಾಡಿದ್ದರೆ, ಮುಂದಿನ ಚುನಾವಣೆಯಲ್ಲಿ ತಾನು ಅಧಿಕಾರಕ್ಕೆ ಬಂದರೆ ದಲಿತರೊಬ್ಬರನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವುದಾಗಿ ಆಮ್ ಆದ್ಮಿ ಪಕ್ಷ ಭರವಸೆ ನೀಡಿದೆ. ಇಷ್ಟಾದರು ಪಂಜಾಬಿನ ದಲಿತ ವರ್ಗವನ್ನು ಒಂದು ಬಲಿಷ್ಠ ರಾಜಕೀಯ ಶಕ್ತಿಯನ್ನಾಗಿಸುವ ಯಾವ ಪ್ರಯತ್ನವೂ ನಡೆಯುತಿಲ್ಲವೆಂಬುದೇ ವಿಷಾದನೀಯ. ಯಾಕೆಂದರೆ ಸಂವಿದಾನದ ಪ್ರಕಾರ ಮೀಸಲಿರುವ ಸ್ಥಾನಗಳನ್ನು ಹೊರತು ಪಡಿಸಿ ಸಾಮಾನ್ಯಕ್ಷೇತ್ರಗಳಲ್ಲಿ ಸ್ಪರ್ದಿಸಲು ದಲಿತರಿಗೆ ಯಾವ ಪಕ್ಷವೂ ಅವಕಾಶ ನೀಡುವುದಿಲ್ಲವೆಂಬುದು ಖಚಿತ. ಗೆದ್ದ ನಂತರವೂ ಬಹು ಮುಖ್ಯವಾದ ಅಧಿಕಾರ ಸ್ಥಾನಗಳನ್ನು ದಲಿತರಿಗೆ ನೀಡುವ ಸಾದ್ಯತೆಯು ಕಡಿಮೆಯೇ!

No comments:

Post a Comment