Dec 8, 2016

ನಗದು ರಹಿತ ವಹಿವಾಟಿನ ತಳಮಟ್ಟದ ಸಮಸ್ಯೆಗಳು.

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಯೋಜನೆಗಳನ್ನು ರೂಪಿಸಿ, ಜಾರಿಗೆ ತರುವ ಅಧಿಕಾರಸ್ಥರಿಗೆ ತಳಮಟ್ಟದ ಜನರ ಬದುಕಿನ ವಾಸ್ತತವತೆಯ ಅರಿವಿಲ್ಲದೇ ಹೋದರೆ ಆಗುವ ಪರಿಣಾಮ ಎಂತಹುದೆಂಬುದನ್ನು ನಾವು ನೋಟು ಬ್ಯಾನ್ ಮೂಲಕ ಕಂಡುಕೊಂಡಿದ್ದೇವೆ, ಒಂದಷ್ಟು ಜನ ಕಪ್ಪುಹಣ ಖದೀಮರನ್ನು ಬಲೆ ಹಾಕಿ ಹಿಡಿಯಲು ಕೋಟ್ಯಾಂತರ ಜನರ ಬದುಕನ್ನು ಒಂದಷ್ಟು ದಿನಗಳ ಮಟ್ಟಿಗಾದರು, ಮೂರಾ ಬಟ್ಟೆಯಾಗಿಸುವ ಈ ಕ್ರಮದ ಇನ್ನೊಂದು ಹಂತವಾಗಿ ಇಂಡಿಯಾವನ್ನು ಕ್ಯಾಶ್ ಲೆಸ್ ಎಕಾನಮಿ(ನಗದು ರಹಿತ ಆರ್ಥಿಕ ವ್ಯವಸ್ಥೆ)ಯನ್ನಾಗಿ ಮಾಬೇಕೆಂಬ ಹಂಬಲದಲ್ಲಿ ನಮ್ಮ ಕೇಂದ್ರ ಸರಕಾರ ಆಲೋಚಿಸುತ್ತಿದೆ.
ಇದರ ಒಂದು ಭಾಗವಾಗಿಯೇ ನಮ್ಮ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಮೊನ್ನೆಯ 'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡುತ್ತ, ನಗದು ಇಲ್ಲದೆಯೇ ವ್ಯವಹಾರ ಮಾಡುವುದನ್ನು ಕಲಿತುಕೊಳ್ಳಿ, ಇದಕ್ಕಾಗಿ ಡಿಜಿಟಲ್ ಅರ್ಥವ್ಯವಸ್ಥೆಯನ್ನು ಅರ್ಥಮಾಡಿಕೊಂಡು ವಿವಿಧ ಬ್ಯಾಂಕುಗಳ ಆಪ್ ಬಳಸುವುದನ್ನು ಕಲಿಯಬೇಕೆಂದು ಜನತೆಗೆ ಕರೆ ನೀಡಿದ್ದಾರೆ. ಇದರ ಅರ್ಥ ಇನ್ನು ಮುಂದೆ ಡೆಬಿಟ್ ಕಾರ್ಡುಗಳನ್ನು ಉಪಯೋಗಿಸುವ ಜೊತೆಗೆ ಬ್ಯಾಂಕುಗಳ ಆಪ್ ಬಳಸಿ ಆನ್ಲೈನ್ ವ್ಯವಹಾರ ಮಾಡಲು ಜನ ಸಿದ್ದರಾಗಬೇಕೆಂಬುದಾಗಿದೆ.ಆದರೆ ನಮ್ಮ ದೇಶದಲ್ಲಿ ಇದು ಸಾದ್ಯವೇ ಎಂಬುದನ್ನು ಸದ್ಯ ನಮಗೆ ಲಭ್ಯವಿರುವ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸಿ ನೋಡಬೇಕಾಗಿದೆ. ನಗದು ರಹಿತ ವಹಿವಾಟಿನ ಉಪಯುಕ್ತತೆ-ಅನುಪಯುಕ್ತತೆಗಳೇನೇ ಇದ್ದರು, ವಾಸ್ತವದಲ್ಲಿ ಅದನ್ನು ಜಾರಿಗೆ ತರುವಲ್ಲಿ ಇರಬಹುದಾದ ಅಡಚಣೆಗಳನ್ನು ನೋಡೋಣ:

1. ಸಾಕ್ಷರತೆಯ ಪ್ರಮಾಣ:

2011ರ ಗಣತಿಯ ಪ್ರಕಾರ ಇಂಡಿಯಾದ ಒಟ್ಟು ಸಾಕ್ಷರತಾ ಪ್ರಮಾಣ ಶೇಕಡಾ 74.04. ಇದರಲ್ಲಿ ಕೇವಲ ಸಹಿ ಮಾತ್ರ ಮಾಡಬಲ್ಲವರು ಕೂಡ ಸೇರಿದ್ದಾರೆಂಬುದನ್ನು ಮರೆಯಬಾರದು. ಈ ಶೇಕಡಾ 74ರಷ್ಟು ಮಂದಿಯೂ ಆನ್ ಲೈನ್ ವ್ಯವಹಾರ ಮಾಡುವಲ್ಲಿ ನಿರತರಾದರೂ ಇನ್ನುಳಿದ ಶೇಕಡಾ 26 ರಷ್ಟು ಜನ ಏನು ಮಾಡಬೇಕು.ಆಧುನಿಕ ತಂತ್ರಜ್ಞಾನಕ್ಕೆ ಅವರು ಹೊಂದಿಕೊಳ್ಳಲಾಗದ ಒಂದೇ ಕಾರಣಕ್ಕೆ ಬದುಕುವ ಅವರ ಹಕ್ಕನ್ನು ನಿರಾಕರಿಸಬೇಕೇ? ಆಧುನಿಕತೆಯ ಉನ್ಮಾದದಲ್ಲಿ ಸಿಲುಕಿದವರಿಗೆ ಇಂತಹ ಪ್ರಶ್ನೆಗಳ ಅಪಥ್ಯವಾಗುತ್ತವೆ. ಅಭಿವೃದ್ದಿ ಎಂಬ ಹುಚ್ಚು ಕುದುರೆಯ ಹಿಂದೆ ಬಿದ್ದಿರುವ ಜನತೆಗೆ, ಅವರನ್ನಾಳುತ್ತಿರುವವರಿಗೆ ಈ ಸತ್ಯ ಅರ್ಥವಾಗುವುದಿಲ್ಲ, ಅರ್ಥವಾದರೂ ಆಗದಂತೆ ನಟಿಸುತ್ತಿದ್ದಾರೆ.

2.ಮೊಬೈಲ್ ಪೋನುಗಳ ಸಂಖ್ಯೆ:

ಒಂದು ಸರ್ವೆಯಂತೆ 2017 ಅಗಸ್ಟ್ ಅಂತ್ಯಕ್ಕೆ ಈ ದೇಶದಲ್ಲಿ ಇರುವ ಮೊಬೈಲುಗಳ ಸಂಖ್ಯೆ 1.11 ಕೋಟಿ. ಇದರಲ್ಲಿ ಶೇಕಡಾ 84ರಷ್ಟು ಪೋನುಗಳು ಕೀಪ್ಯಾಡಿನ(keypad) ಪೋನುಗಳು ಮಾತ್ರ. ಇನ್ನು ಸ್ಮಾರ್ಟಪೋನುಗಳ ಬಳಕೆದಾರರು ಇರುವುದು ಶೇಕಡಾ16.05ರಷ್ಟು ಮಾತ್ರ. ಈ 16.05 ಜನರನ್ನು ಕಳೆದರೆ ಉಳಿಯುವ ಸುಮಾರು ಶೇಕಡಾ 83ರಷ್ಟು ಜನರು ಮೊದಲು ಸ್ಮಾರ್ಟ ಪೋನು ತೆಗೆದುಕೊಳ್ಳುವಂತೆ ಮಾಡಬೇಕಾಗುತ್ತದೆ. ಸರಾಸರಿ ಒಂದು ಪೋನಿಗೆ - ಅತ್ಯಂತ ಕಡಿಮೆ ಬೆಲೆಯದು 6 ಸಾವಿರ ಎಂದಿಟ್ಟಕೊಂಡರೂ,ಅಷ್ಟು ದೊಡ್ಡ ಮೊತ್ತದ ಬಂಡವಾಳವನ್ನು ಜನತೆ ಹೂಡಬೇಕಾಗುತ್ತದೆ. ಸರಾಸರಿ 10ಸಾವಿರ ಮಾಸಿಕ ಆದಾಯವಿರುವ ವ್ಯಕ್ತಿಯೊಬ್ಬ ಒಮ್ಮೆಲೆ ಒಂದು ಪೋನಿಗಾಗಿ 6 ಸಾವಿರ ರೂಪಾಯಿ ವ್ಯಯಿಸುವುದು ಕಷ್ಟಕರವಾದ ವಿಷಯ.

2. ಅಂತರ್ಜಾಲ ಹೊಂದಿರುವವರ ಪ್ರಮಾಣ:

ದೇಶದಲ್ಲಿ ಅಂತರ್ಜಾಲ ಸಂಪರ್ಕ ಹೊಂದಿರುವವರ ಸಂಖ್ಯೆ ಕೇವಲ ಒಟ್ಟು ಜನಸಂಖ್ಯೆಯ 26ರಷ್ಟು ಮಾತ್ರ. ಒಟ್ಟಾರೆಯಾಗಿ ಇದರ ತಿರುಳೆಂದರೆ ಇಂಡಿಯಾದ ಒಟ್ಟು ಜನಸಂಖ್ಯೆಯಲ್ಲಿ 90ಕೋಟಿ ಜನರು ಅಂತರ್ಜಾಲ ಸಂಪರ್ಕ ಹೊಂದಿಲ್ಲದವರೇ ಇದ್ದಾರೆ. ಇವರಿಗೆಲ್ಲ ನಾವು ಅಂತರ್ಜಾಲ ಸಂಪರ್ಕ ಒದಗಿಸಿಕೊಡುವುದು ಹೇಗೆ ಮತ್ತು ಯಾವಾಗ? ಈ ಪ್ರಶ್ನೆಗೆ ಯಾರಲ್ಲೂ ನಿಖರ ಉತ್ತರ ಇಲ್ಲ.

3. ಅಂತರ್ಜಾಲದ ವೇಗ:

ಇನ್ನು ನಮ್ಮ ದೇಶದ ಅಂತರ್ಜಾಲ ವ್ಯವಸ್ಥೆಯ ವೇಗದ ಬಗ್ಗೆ ಮಾತಾಡುವುದೇ ಬೇಡ. ನಗರ ಪ್ರದೇಶಗಳಲ್ಲಿಯಾದರೆ ಬೇರೆಬೇರೆ ಖಾಸಗಿ ಕಂಪನಿಗಳು ಸ್ಪರ್ದೆಗೆ ಬಿದ್ದು ವೇಗದ ಸಂಪರ್ಕ ನೀಡಲು ಪ್ರಯತ್ನಿಸುತ್ತಿವೆ. ಆದರೆ ಸರಕಾರದ ಬಿ.ಎಸ್.ಎನ್.ಎಲ್. ಸಂಪರ್ಕ ಹೊಂದಿರುವ ನಮ್ಮ ಹಳ್ಳಿಗಳಲ್ಲಿ ಅಂತರ್ಜಾಲ ವೇಗ ತೀರಾ ಕಡಿಮೆ ಇದ್ದು, ಇನ್ನು ಲಕ್ಷಾಂತರ ಹಳ್ಳಿಗಳಲ್ಲಿ ಮೊಬೈಲ್ ನೆಟ್ವರ್ಕ ಇಲ್ಲ. ಇಡೀ ಏಶಿಯಾದಲ್ಲೆ ನಮ್ಮ ದೇಶ ಅಂತರ್ಜಾಲ ವೇಗದಲ್ಲಿ ಕೊನೆಯ ಸ್ಥಾನ ಪಡೆದಿದೆ. ಅಂತರ್ಜಾಲದ ವೇಗ ಕಡಿಮೆಯಾದಷ್ಟು ಆನ್ಲೈನ್ ವ್ಯವಹಾರ ಕಷ್ಟವಾಗ ತೊಡಗುತ್ತದೆ (ಈ ಲೇಖಕನ ಸಂಪರ್ಕ ಬಿ.ಎಸ್.ಎನ್.ಎಲ್. ಆಗಿದ್ದು ಒಂದು ಓಟಿಪಿ ಪಡೆದು ನಮೂದಿಸುವಷ್ಟರಲ್ಲಿ ಅದರ ನಿಗದಿತ ಅವಧಿ ಮುಗಿದು ಹೋಗಿರುತ್ತದೆ.) 

4 ಬಾಷೆಯ ಸಮಸ್ಯೆ:

ಇನ್ನು ಈ ಅಂತರ್ಜಾಲದ ಮತ್ತು ಬ್ಯಾಂಕು ವ್ಯವಹಾರಗಳಲ್ಲಿರುವ ಪ್ರಮುಖ ಸಮಸ್ಯೆ ಎಂದರೆ ಬಾಷೆಯದು. ಇವತ್ತಿಗೂ ರಾಷ್ಟ್ರೀಕೃತ ಬ್ಯಾಂಕುಗಳು ತಮ್ಮ ವ್ಯವಹಾರವನ್ನು ಇಂಗ್ಲೀಷ್ ಮತ್ತು ಹಿಂದಿ ಬಾಷೆಗಳಲ್ಲಿಯೇ ನಡೆಸುತ್ತಿವೆ. ಪೋನಿಗೆ ಬರುವ ಬ್ಯಾಂಕಿನ ಸಂದೇಶಗಳು ಇಂಗ್ಲೀಷ್ ಬಾಷೆಯಲ್ಲಿರುವುದರಿಂದ ಅವನ್ನು ಓದಿ ಅರ್ಥ ಮಾಡಿಕೊಂಡು ವ್ಯವಹಾರ ನಡೆಸುವುದು ಅನಕ್ಷರಸ್ಥರಿಗಂತು ಆಗದ ಮಾತು. ಸರಕಾರಿ ಬ್ಯಾಂಕುಗಳದೇ ಈ ಹಣೆಬರಹವೆಂದರೆ ಇನ್ನು ಖಾಸಗಿ ಬ್ಯಾಂಕುಗಳು, ಖಾಸಗಿ ಕಂಪನಿಗಳು ಇಂಗ್ಲೀಷನ್ನು ಹೊರತು ಪಡಿಸಿ ಬೇರಿನ್ಯಾವುದೇ ಬಾಷೆಯನ್ನೂ ಬಳಸಲಾರವು. ಎಲ್ಲಿಯವರೆಗು ನಮ್ಮ ಬ್ಯಾಂಕುಗಳು ಪ್ರಾದೇಶಿಕ ಬಾಷೆಗಳಲ್ಲಿ ವ್ಯವಹರಿಸುವ ಸೌಲಭ್ಯ ಒದಗಿಸುವುದಿಲ್ಲವೊ ಅಲ್ಲಿಯವರೆಗು ಈ ನೆಟ್ ಬ್ಯಾಂಕಿಂಗ್ ಎನ್ನುವುದು ಅಸಾದ್ಯದ ಮಾತು. ಒಂದೊ ಸರಕಾರ ಪ್ರಾದೇಶಿಕ ಬಾಷೆಗಳನ್ನು ಬಳಸುವತ್ತ ಮನಸ್ಸು ಮಾಡಬೇಕು. ಇಲ್ಲ, ಇಡೀ ದೇಶದ ಜನರಿಗೆ ಇಂಗ್ಲೀಷ್ ಹಿಂದಿ ಕಲಿಸಬೇಕು. ಇವೆರಡರಲ್ಲಿ ಯಾವುದು ಸುಲಭ ಎಂಬುದನ್ನು ಸರಕಾರವೇ ನಿರ್ದರಿಸಿ ಕಾರ್ಯರೂಪಕ್ಕೆ ತರಬೇಕು.

5. ಪಿ.ಓಎಸ್.ಯಂತ್ರಗಳ ಕೊರತೆ:

ದೇಶದ ಜನತೆ ಪಿ.ಒ.ಎಸ್.ಯಂತ್ರಗಳನ್ನು ಬಳಸಿ ವ್ಯವಹಾರ ಮಾಡಲು ಇಚ್ಚಿಸಿದರೂ ದೇಶದಲ್ಲಿರುವ ಸದರಿ ಯಂತ್ರಗಳ ಸಂಖ್ಯೆ ಕೇವಲ 15 ಲಕ್ಷ ಮಾತ್ರ.ಇವುಗಳಲ್ಲಿ ಶೇಕಡಾ 75ರಷ್ಟು ಯಂತ್ರಗಳು ಕೇವಲ ದೊಡ್ಡ ನಗರಗಳಲ್ಲಿ ಇವೆ. ಹೀಗಾಗಿ ತಾಲ್ಲೂಕು ಕೇಂದ್ರದಲ್ಲಿ ಖರೀಧಿ ಮಾಡುವ ಜನರು ಡೆಬಿಟ್ ಕಾರ್ಡ ಬಳಸುವ ಸಾದ್ಯತೆ ಬಹಳ ಕಡಿಮೆ. 

6. ಸಣ್ಣವರ್ತಕರುಗಳ ಸಮಸ್ಯೆ:

ಈಗಾಗಲೇ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಬಂಡವಾಳ ಹೂಡಿಕೆ ಮಾಡುವತ್ತ ಕಣ್ಣು ನೆಟ್ಟಿರುವ ಸರಕಾರದ ಕ್ರಮಗಳಿಂದ ಕಂಗಾಲಾಗಿರುವ ಸಣ್ಣಪುಟ್ಟ ವರ್ತಕರುಗಳಿಗೆ ಈ ವ್ಯವಸ್ಥೆ ಸಾಕಷ್ಟು ಹೊಡೆತ ಕೊಡುತ್ತದೆ.

7. ಮಾನವೀಯತೆಯನ್ನು ಮರೆಸುವ ಆಧುನಿಕತೆ:

ಇದೆಲ್ಲಕ್ಕಿಂತ ಮುಖ್ಯವಾಗಿ ಇಂಡಿಯಾದಂತಹ ರಾಷ್ಟ್ರದಲ್ಲಿ ಗ್ರಾಮೀಣ ಮತ್ತು ಸಣ್ಣ ನಗರಗಳಲ್ಲಿ ವ್ಯವಹಾರ ನಡೆಯುವುದೇ ನಂಬಿಕೆ ಮತ್ತು ವಿಶ್ವಾಸಗಳ ಅಡಿಯಲ್ಲಿ. ತಮ್ಮ ಕೈಲಿ ಹಣವಿರದೆ ಇದ್ದರು ಪರಿಚಯದ ಅಂಗಡಿಗಳಲ್ಲಿ ನಂಬಿಕೆಯ ಮೇಲೆ ಸಾವಿರಾರು ರೂಪಾಯಿಗಳ ಸಾಮನಾನುಗಳನ್ನು ಸಾಲವಾಗಿ ಖರೀಧಿ ಮಾಡುವ ಸಂಬಂದವೊಂದು ಗ್ರಾಮೀಣ ಸಮಾಜದ ಗ್ರಾಹಕ ಮತ್ತು ವ್ಯಾಪಾರಿಗಳಲ್ಲಿ ಬೆಳೆದಿದೆ. ನಮ್ಮ ಹಳ್ಳಿಯ ಕಡೆ ಮದುವೆ ನಿಗದಿಯಾದ ನಂತರ ಕೈಲಿ ಕಾಸಿರದೆ ಇದ್ದರು, ಪರಿಚಿತರ ಅಂಗಡಿಗಳಲ್ಲಿ ಒಡವೆ,ಜವಳಿ, ದಿನಸಿ ಸಾಲತಂದು ಮದುವೆ ಮುಗಿಸುವ ಪದ್ದತಿ ಇದೆ. ಆಧುನಿಕತೆ ಇಂತಹ ವಿಶ್ವಾಸಗಳನ್ನು, ಸೌಲಭ್ಯಗಳನ್ನು ನಿರಾಕರಿಸುತ್ತದೆ. (ಈ ಬಗ್ಗೆ ಬರೆದರೆ ಅದೇ ಪ್ರತ್ಯೇಕ ಲೇಖನವಾಗುತ್ತದೆ)ಹಾಗೆಂದು ಆಧುನಿಕ ತಂತ್ರಜ್ಞಾನವನ್ನು ನಾನು ನಿರಾಕರಿಸಿ ಬದುಕಬೇಕೆಂದು ಹೇಳುತ್ತಿಲ್ಲ. ಮಾನವೀಯತೆಯನ್ನು ಮರೆತ ಯಾವ ಆಧುನಿಕತೆಯು ನಮ್ಮನ್ನು ರಕ್ಷಿಸಲಾರದೆಂಬ ಕಿಂಚಿತ್ ಅರಿವಿನಿಂದ ಇದನ್ನು ಬರೆದಿದ್ದೇನೆ

ಕೊನೆ ಮಾತು:
ದೇಶದ ಜನತೆಯನ್ನು ಆಧುನಿಕ ತಂತ್ರಜ್ಞಾನ ಬಳಸುವಂತೆ ಮಾಡಲು ಬೇಕಾದ ಕ್ರಮಗಳನ್ನು ಕೈಗೊಳ್ಳುವ ಮುಂಚೆಯೇ ಅವರನ್ನು ಒತ್ತಡದ ತಂತ್ರಕ್ಕೆ ಸಿಲುಕಿಸುವುದರಿಂದ ಯಾವುದೇ ಪ್ರಯೋಜನವೂ ಆಗುವುದಿಲ್ಲ. ಸರಕಾರ ಇದನ್ನು ಮೊದಲು ಮಾನವೀಯ ನೆಲೆಯಲ್ಲಿ ನೋಡಿ, ಈ ಬಗ್ಗೆ ಮರುಚಿಂತನೆ ಮಾಡಬೇಕಾದ ಅಗತ್ಯವಿದೆ. 

1 comment:

  1. ಭಾರತದ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ ಬಸವನ ಹುಳುವಿನಂತೆ ತೆವಳುವ ವೇಗದ ೨ಜಿ ಮೊಬೈಲ್ ನೆಟ್ ವರ್ಕ್ ಇಂದಿಗೂ ಕಂಡುಬರುತ್ತಿದೆ. ೨ಜಿ ಮೊಬೈಲ್ ನೆಟ್ ವರ್ಕ್ ೨೦೧೦ರಲ್ಲಿಯೇ ಹಳ್ಳಿಗಳಿಗೆ ಬಂದಿತ್ತು. ಅದರ ನಂತರ ಐದಾರು ವರ್ಷಗಳು ಗತಿಸಿದರೂ ಭಾರತದ ಹಳ್ಳಿಗಳಿಗೆ ೩ಜಿ ಮೊಬೈಲ್ ನೆಟ್ ವರ್ಕ್ ಅನ್ನು ಒದಗಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ಖಾಸಗಿ ಮೊಬೈಲ್ ಕಂಪನಿಗಳೂ ಈ ವಿಷಯದಲ್ಲಿ ವಿಫಲವಾಗಿವೆ. ಮೋದಿ ಅಧಿಕಾರಕ್ಕೆ ಬಂದ ನಂತರವಾದರೂ ಗ್ರಾಮೀಣ ಇಂಟರ್ನೆಟ್ ಕ್ಷೇತ್ರದಲ್ಲಿ ಏನಾದರೂ ಪ್ರಗತಿಯಾಗಿದೆಯೋ ಎಂದು ನೋಡಿದರೆ ಯಾವುದೇ ಪ್ರಗತಿ ಆಗಿಲ್ಲ. ಹಿಂದಿನ ಯುಪಿಎ ಸರ್ಕಾರ ಇದ್ದಾಗಲೇ ೨ಜಿ ಮೊಬೈಲ್ ನೆಟ್ ವರ್ಕ್ ಹಾಗೂ ಲ್ಯಾಂಡ್ ಲೈನ್ ಬ್ರಾಡ್ಬ್ಯಾಂಡ್ ಸಂಪರ್ಕ ಹಳ್ಳಿಗಳಿಗೆ ಬಂದಿತ್ತು. ಮೋದಿ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಆದರೂ ಗ್ರಾಮೀಣ ಇಂಟರ್ನೆಟ್ ಕ್ಷೇತ್ರದಲ್ಲಿ ಒಂದಿನಿತೂ ಪ್ರಗತಿ ಆಗಿಲ್ಲ. ಹೀಗಿರುವಾಗ ನಗದುರಹಿತ ಅಥವಾ ಕಡಿಮೆ ನಗದು ಇರುವ ಸಮಾಜವನ್ನು ರೂಪಿಸುವುದು ಅಸಂಭವ. ಒಳ್ಳೆಯ ವೇಗದ ಮೊಬೈಲ್ ಇಂಟರ್ನೆಟ್ ಲಭ್ಯಗೊಳಿಸದೆ ನಗದುರಹಿತ ಸಮಾಜ ಆಗಬೇಕು ಎಂದು ಹೊರಡುವುದು ಗಾಡಿಯ ಹಿಂದಕ್ಕೆ ಕುದುರೆ ಕಟ್ಟಿದಂತೆ ವ್ಯರ್ಥವೇ ಸರಿ.

    ಈಗಾಗಲೇ ಅಮಾಯಕ ಜನರಿಗೆ ಫೋನ್ ಕರೆ ಮಾಡಿ ಎಟಿಎಂ ಕಾರ್ಡ್ ನಂಬರ್, ಪಾಸ್ವರ್ಡ್ ಕೇಳಿ ಬ್ಯಾಂಕ್ ಖಾತೆಯಿಂದ ಹಣ ದೋಚುವ ವಿದ್ಯಮಾನ ಆಗಾಗ ನಡೆಯುತ್ತಿರುತ್ತದೆ. ಅಮಾಯಕ ಗ್ರಾಮೀಣ ಜನರನ್ನು ನಗದುರಹಿತ ಮಾಡಬೇಕು ಎಂದು ಹೊರಟರೆ ಇಂಥ ಆನ್ಲೈನ್ ದೋಚುವಿಕೆ ಇನ್ನಷ್ಟು ಹೆಚ್ಚಬಹುದು. ಭಾರತೀಯರು ಆನ್ಲೈನ್ ವ್ಯವಹಾರಕ್ಕಾಗಿಯೇ ಸ್ಮಾರ್ಟ್ ಫೋನ್ ಖರೀದಿಸುವ ಸಾಧ್ಯತೆ ಇಲ್ಲ. ಈಗಾಗಲೇ ಇರುವ ಕೀಪ್ಯಾಡ್ ಇರುವ ಹಳೆಯ ಮೊಬೈಲ್ ಹಾಳಾಗುವವರೆಗೂ ಜನಸಾಮಾನ್ಯರು ಹೊಸ ಸ್ಮಾರ್ಟ್ಫೋನ್ ಖರೀದಿಸುವುದು ಅಸಂಭವ.

    ReplyDelete