Dec 27, 2016

ರಾಷ್ಟ್ರ ರಾಜಕಾರಣದತ್ತ ಮಮತಾ ಬ್ಯಾನರ್ಜಿ ಚಿತ್ತ!

ಕು.ಸ.ಮಧುಸೂದನ
ರಾಷ್ಟ್ರ ರಾಜಕೀಯದ ಇತ್ತಿಚೆಗಿನ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯು, ತೃಣಮೂಲ ಕಾಂಗ್ರೆಸ್ಸಿನ ನಾಯಕಿಯೂ ಆದ ಮಮತಾಬ್ಯಾನರ್ಜಿಯವರು ನಿದಾನವಾಗಿ ಆದರೆ ಬಹಳ ಎಚ್ಚರಿಕೆಯಿಂದ ರಾಷ್ಟ್ರ ರಾಜಕಾರಣಕ್ಕೆ ಪದಾರ್ಪಣೆ ಮಾಡುವತ್ತ ಮನಸ್ಸು ಮಾಡಿರುವುದನ್ನು ಗಮನಿಸಬಹುದಾಗಿದೆ. ನೋಟ್ ಬ್ಯಾನಿನಂತಹ ಪ್ರಮುಖವಾದ, ಆದರೆ ಅಷ್ಟೇ ಸೂಕ್ಷ್ಮವಾದ ವಿಷಯದಲ್ಲಿ ಅವರು ತೆಗೆದುಕೊಂಡಿರುವ ನಿಲುವುಗಳನ್ನು ಆಧರಿಸಿ ಈ ನಿರ್ದಾರಕ್ಕೆ ಬರಬಹುದಾಗಿದೆ. 
ನವೆಂಬರ್ ಎಂಟರ ರಾತ್ರಿ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ನೋಟ್ ಬ್ಯಾನ್ ವಿಷಯವನ್ನು ಪ್ರಕಟಿಸಿದ ಕೂಡಲೇ ತಮ್ಮ ಟ್ವೀಟರ್ ಮೂಲಕ ಮೊದಲ ಪ್ರತಿಕ್ರಿಯೆ ನೀಡಿದ್ದು ಮಮತಾ ಬ್ಯಾನರ್ಜಿಯವರು. ರಾಷ್ಟ್ರದ ಉಳಿದೆಲ್ಲ ರಾಜಕೀಯ ನಾಯಕರುಗಳಿಗಿಂತ ಮೊದಲೇ ಸ್ಪಷ್ಟವಾದ ಪ್ರತಿಭಟನೆಯ ದ್ವನಿ ಮೊಳಗಿಸಿದ್ದು ಸಹ ಮಮತಾರವರೆ. ಬಹುಮುಖ್ಯವಾದ ವಿರೋಧಪಕ್ಷ ಕಾಂಗ್ರೆಸ್ ಸೇರಿದಂತೆ ಉಳಿದ ಪಕ್ಷಗಳಾದ ಆಮ್ ಆದ್ಮಿ, ಸಮಾಜವಾದಿ ಪಕ್ಷ, ಸಂಯುಕ್ತ ಜನತಾದಳ, ರಾಷ್ಟ್ರೀಯ ಜನತಾದಳ,ಬಹುಜನ ಪಕ್ಷ ಹಾಗು ಎಡಪಕ್ಷಗಳು ಮೋದಿಯವರ ದಿಡೀರ್ ನಡೆಯಿಂದ ವಿಚಲಿತರಾದಂತೆ ಕಂಡುಬಂದಿದ್ದು ಈ ಕ್ರಮವನ್ನು ಸ್ವಾಗತಿಸಬೇಕೊ ಇಲ್ಲ ಟೀಕಿಸಬೇಕೊ ಎಂಬ ಗೊಂದಲಗಳಲ್ಲಿ ಮುಳಗಿರುವಾಗಲೆ. ಈ ಕ್ರೂರವಾದ ಅನಾಗರೀಕ ಕ್ರಮವನ್ನು ಕೂಡಲೆ ಹಿಂಪಡೆಯಿರಿ ಎಂಬ ಟ್ವೀಟಿನೊಂದಿಗೆ ನೋಟ್ ಬ್ಯಾನ್ ವಿರುದ್ದ ಪ್ರತಿಭಟನೆಯ ಹಾದಿ ಹಿಡಿದ ಮಮತಾ ಬ್ಯಾನರ್ಜಿಯವರು ಈ ಕ್ಷಣದವರೆಗು ತಮ್ಮ ಈ ನಿಲುವಿನಲ್ಲಿ ಯಾವ ಬದಲಾವಣೆಯನ್ನು ಮಾಡಿಕೊಳ್ಳದೆ ಮುಂದುವರೆದಿದ್ದಾರೆ. ನಂತರದ 24 ಗಂಟೆಗಳಲ್ಲ್ಲಿ ಈ ಕಾನೂನನ್ನು ವಿರೋಧಿಸಿ ಸುಮಾರು ಏಳು ಟ್ವೀಟ್ ಮಾಡಿ ಮಮತಾರವರು ಹೇಳಿದ್ದು, ಬಡವರಲ್ಲಿ ಬಡವರಾದ ನನ್ನ ಸಹೋದರ ಸಹೋದರಿಯರು ತಮ್ಮ ಕೂಲಿಯನ್ನು ಪಡೆಯುತ್ತಿರುವುದೆ ಈ ಐನೂರು ರೂಪಾಯಿಗಳಲ್ಲಾಗಿದ್ದು ಈ ಮುಖಬೆಲೆಯ ನೋಟು ನಿಷೇಧದಿಂದ ಅವರ ದೈನಂದಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಸಾದ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಲಿದ್ದು ಎನ್ನುತ್ತಾ ಈ ಅವಾಸ್ತವೀಕ ಕಾನೂನನ್ನು ಹಿಂಪಡೆಯಲು ಕೇಂದ್ರ ಸರಕಾರದ ಮೇಲೆ ತೀವ್ರವಾದ ಒತ್ತಡ ಹೇರುವ ಕ್ರಮಕ್ಕೆ ಮುಂದಾಗಿದ್ದರು. 

ಉಳಿದ ಪಕ್ಷಗಳು ನೋಟ್ ಬ್ಯಾನಿನ ಬಗ್ಗೆ ಸ್ಪಷ್ಟವಾದ ನಿಲುವೊಂದನ್ನು ತೆಗೆದುಕೊಳ್ಳಲು ಮೀನಾಮೇಷ ಎಣಿಸುತ್ತಿರುವ ಹೊತ್ತಿಗೆ ಮಮತಾ ಬ್ಯಾನರ್ಜಿ ತಮ್ಮ ಪ್ರತಿಭಟನೆಯ ನಿಲುವನ್ನು ಅಧಿಕೃತವಾಗಿ ಹೊರಹಾಕಿಯಾಗಿತ್ತು, ಮತ್ತು ತನ್ಮೂಲಕ ರಾಷ್ಟ್ರೀಯ ಮಾದ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡಿಯಾಗಿತ್ತು. ಬಹುಶ: ಉಳಿದೆಲ್ಲ ರಾಜಕೀಯ ನಾಯಕರುಗಳಿಗಿಂತ ಮೊದಲಿಗೆ ನೋಟು ಬ್ಯಾನಿನ ಪ್ರತಿಕೂಲ ಪರಿಣಾಮಗಳನ್ನು ಅರ್ಥಮಾಡಿಕೊಂಡಂತೆ ಕಂಡ ಮಮತಾರವರು ಈ ವಿಚಾರದಲ್ಲಿ ಸ್ಪಷ್ಟವಾದ ನಿಲುವೊಂದನ್ನು ತೋರಿಸಿದ ಮೊದಲ ನಾಯಕರಾಗಿ ಹೊರಹೊಮ್ಮಿದ್ದರು. ಸಂಯುಕ್ತ ಜನತಾದಳದ ನಿತೀಶ್ ಕುಮಾರ್ ಮತ್ತು ರಾಷ್ಟ್ರೀಯ ಜನತಾದಳದ ಲಾಲುಪ್ರಸಾದ್ ಯಾದವರು ಈ ಬ್ಯಾನಿನ ಬಗ್ಗೆ ತಕ್ಷಣಕ್ಕೆ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದು, ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವರು ಸಹ ಕಾದು ನೋಡುವ ತಂತ್ರಕ್ಕೆ ಶರಣಾಗಿದ್ದರು. ಇನ್ನು ಕಾಂಗ್ರೆಸ್ ಮತ್ತು ಎಡಪಕ್ಷಗಳು ತಮ್ಮ ನಿಲುವನ್ನು ಬಾಯಿಬಿಡುವ ಮುಂಚೆಯೇ ನವೆಂಬರ್ 12ನೇ ತಾರೀಖಿನಂದು ಮಮತಾರವರು ಪ್ರತಿಭಟನೆಗಾಗಿ ಬೀದಿಯಲ್ಲಿ ಇಳಿದಾಗಿತ್ತು. ನವೆಂಬರ್ 12ರಂದು ಕೊಲ್ಕತ್ತಾದ ಹಝಾರ ರಸ್ತೆಯ ಎ.ಟಿ.ಎಂ.ಗೆ ಬೇಟಿ ನೀಡಿ ಸಾರ್ವಜನಿಕರ ಪ್ರತಿಕ್ರಿಯೆಯನ್ನು ಅಂದಾಜಿಸಲು ಪ್ರಯತ್ನಿಸಿದ್ದರು ನಂತರ ಅದೇ ದಿನ ಕೊಲ್ಕತ್ತಾದ ರಿಸರ್ವ ಬ್ಯಾಂಕ್ ಕಚೇರಿ ಮತ್ತು ಬುರಾ ಬಜಾರುಗಳಿಗೆ ಬೇಟಿ ನೀಡಿ ಜನತೆಯ ಪ್ರತಿಕ್ರಿಯೆಯನ್ನು ತಿಳಿಯಲು ಪ್ರಯತ್ನಿಸಿದರು. 

ಬಹುಶ: ಇವತ್ತಿಗೂ ಈ ನೋಟ್ ಬ್ಯಾನ್ ವಿಚಾರದಲ್ಲಿ ಮೋದಿಯವರು ಮಾಧ್ಯಮಗಳಲ್ಲಿ ಪಡೆಯುತ್ತಿರುವ ಪ್ರಚಾರಕ್ಕೆ ಸರಿಸಮಾನವಾಗಿ ಪ್ರಚಾರ ಪಡೆಯುತ್ತಿರುವುದು ಮಮತಾ ಬ್ಯಾನರ್ಜಿಯವರೇ! ಕಳೆದ 42 ದಿನಗಳಲ್ಲಿ ಮಮತಾರವರು ಉಳಿದೆಲ್ಲ ವಿಷಯಗಳನ್ನು ಪಕ್ಕಕ್ಕೆ ಸರಿಸಿ ನೋಟು ಬ್ಯಾನನ್ನು ಪ್ರಮುಖ ಚರ್ಚೆಯ ವಿಷಯವನ್ನಾಗಿಸಿ, ಬಾಜಪ ಏಕುಮುಖವಾಗಿ ಪ್ರಚಾರ ಪಡೆಯುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನರೇಂದ್ರಮೋದಿಯವರ ಕಟು ಟೀಕಾಕಾರರಾದ ಶ್ರೀ ಅರವಿಂದ್ ಕೇಜ್ರೀವಾಲ್ ಮತ್ತು ಎಡಪಕ್ಷದ ಸೀತಾರಾಮ ಯಚ್ಚೂರಿಯವರು ಸಹ ಮಮತಾರವರ ಈ ಪ್ರತಿಭಟನೆಯ ಜೊತೆ ಸೇರುವಂತೆ ಮಾಡುವಲ್ಲಿ ಮಮತಾರವರು ಸಫಲರಾಗುತ್ತ ಹೋದರು. ಬಹುಶ: ಅವರ ರಾಜಕೀಯ ಬದುಕಿನಲ್ಲಿ ಪ್ರಪ್ರಥಮ ಬಾರಿಗೆ ಒಬ್ಬ ರಾಷ್ಟ್ರೀಯ ನಾಯಕಿಯಂತೆ ಮಮತಾ ವರ್ತಿಸುತ್ತ ಹೋದರು. ಸಂಸತ್ತಿನ ಹೊರಗೆ ನಡೆಸಿದ ಪ್ರತಿಭಟನೆಗಳಿಗೆ ಉಳಿದ ಪಕ್ಷಗಳು ಸಹ ಅನಿವಾರ್ಯವಾಗಿ ಕೈಜೋಡಿಸಲೇ ಬೇಕಾದಂತಹ ಸನ್ನಿವೇಶವೊಂದನ್ನು ಮಮತಾ ಸೃಷ್ಠಿಸಿದ್ದರು. ನಂತರ ಜಂತರಮಂತರ್ ನಲ್ಲಿ ವಿರೋಧ ಪಕ್ಷಗಳ ರ್ಯಾಲಿಯೊಂದನ್ನು ಆಯೋಜಿಸಿದ ಮಮತಾ ಬ್ಯಾನರ್ಜಿ ನೇರವಾಗಿ ನರೇಂದ್ರ ಮೋದಿಯವರನ್ನು ಟೀಕಿಸುವ ಮೂಲಕ ನೋಟು ಬ್ಯಾನ್ ವಿರುದ್ದದ ತಮ್ಮ ಆಕ್ರೋಶವನ್ನು ಹೊರಹಾಕಿದರು.ತನ್ಮೂಲಕ ರಾಷ್ಟ್ರ ವಿವಿದ ಕಡೆಗಳಲ್ಲಿ ಈ ಬಗ್ಗೆ ನಡೆಯ ತೊಡಗಿದ ಪ್ರತಿಭಟನೆಗಳಿಗೆ ಕಾರಣರಾದರು 

ಇದಕ್ಕೆ ಕಾರಣಗಳಿವೆ: ಪಶ್ಚಿಮ ಬಂಗಾಳದ ವಿದಾನಸಭೆಗೆ ಈ ವರ್ಷದ ಮೇ ತಿಂಗಳಲ್ಲಿ ಚುನಾವಣೆಗಳು ನಡೆಯುವ ಮೊದಲು ಮಮತಾ ಬ್ಯಾನರ್ಜಿಯವರು ಮೋದಿಯವರೊಂದಿಗೆ ತೀರಾ ಸಂಘರ್ಷವನ್ನೇನು ಮಾಡಿಕೊಂಡಿರಲಿಲ್ಲ. ಬಹುಶ: ಶಾರದಾ ಚಿಟ್ ಫಂಡ್ ಹಗರಣದಲ್ಲಿ ಸಿಬಿಐನ ತನಿಖೆ ಮಮತಾರವರನ್ನು ಮೌನವಾಗಿರುವಂತೆ ಮಾಡಿತ್ತು. ಆದರೆ ನಂತರ ನಡೆದ ವಿದಾನಸಭಾ ಚುನಾವಣೆಗಳಲ್ಲಿ ಬಾಜಪವನ್ನು ದೂರವಿಟ್ಟು ಏಕಾಂಗಿಯಾಗಿ ಸ್ಪರ್ದಿಸಿ ಸ್ಪಷ್ಟ ಬಹುಮತದೊಂದಿಗೆ ಗೆದ್ದನಂತರ ಮಮತಾರವರ ನಡವಳಿಕೆ ಬದಲಾಗುತ್ತ ಹೋಯಿತು. ಕೇಂದ್ರ ಸರಕಾರದ ನೀತಿಗಳ ವಿರುದ್ದ ಉಳಿದೆಲ್ಲ ರಾಜಕೀಯ ನಾಯಕರುಗಳಿಗಿಂತ ಹೆಚ್ಚಾಗಿ ಟೀಕಾಪ್ರಹಾರ ಮಾಡತೊಡಗಿದರು. ತಾನು ತನ್ನ ಚುನಾವಣಾ ಘೋಷಣೆಗಳಲ್ಲಿ ಬಳಸಿಕೊಂಡ ಮಾ, ಮಾಟಿ, ಮಾನುಷ್ (ತಾಯಿ, ತಾಯಿನಾಡು, ಸಾಮಾನ್ಯಜನತೆ) ವರ್ಗಗಳಿಗೆ ಈ ನೋಟು ಬ್ಯಾನಿಂದ ತೊಂದರೆಯಾಗುತ್ತಿರುವ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಆಕೆಯೀಗ ಕೇಂದ್ರ ಸರಕಾರದ ವಿರುದ್ದ ಹೋರಾಟ ನಡೆಸಿದ್ದಾರೆ. ತನ್ಮೂಲಕ ರಾಷ್ಟ್ರರಾಜಕಾರಣದಲ್ಲಿಯು ತಾನು ಬಹುಮುಖ್ಯ ಪಾತ್ರವಹಿಸಬಲ್ಲೆನೆಂಬ ಸಂದೇಶವನ್ನು ರವಾನಿಸುವಲ್ಲಿ ಯಶಸ್ವಿಯಾಗಿದ್ದಾರೆ. ಯಾಕೆಂದರೆ ಅವರು ಪ್ರಸ್ತಾಪಿಸಿರುವ ಮೂರೂ ವರ್ಗಗಳು ರಾಷ್ಟ್ರದ ಮೂಲೆಮೂಲೆಯಲ್ಲಿ ಇದ್ದು ತಾನವರ ನಿಜವಾದ ಪ್ರತಿನಿಧಿಯೆಂದು ತೋರಿಸಲು ಪ್ರಯತ್ನಿಸುತ್ತಿದ್ದಾರೆ. ರಾಷ್ಟ್ರ ರಾಜಕಾರಣದಲ್ಲಿ ಸಮಸ್ತ ದೇಶವನ್ನುಪ್ರತಿನಿಧಿಸಬಲ್ಲಂತಹ ನಾಯಕರ್ಯಾರು ವಿರೋಧ ಪಕ್ಷಗಳಲ್ಲಿ ಕಾಣುತ್ತಿಲ್ಲವೆಂಬ ಸತ್ಯ ಗೊತ್ತಿರುವವ ಮಮತಾ ಬ್ಯಾನರ್ಜಿ ಆ ಸ್ಥಾನದಲ್ಲಿ ತಮ್ಮನ್ನು ಪ್ರತಿಷ್ಠಾಪಿಸಿಕೊಳ್ಳಲು ಹೊರಟಿದ್ದಾರೆ. ಈ ಕಾರಣದಿಂದಾಗಿಯೇ ಅವರು ಭಾರತ್ ಯಾತ್ರಾವನ್ನು ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಬಿಹಾರ ಮತ್ತು ಉತ್ತರಪ್ರದೇಶದ ಲಕ್ನೋಗಳಲ್ಲಿ ಬೃಹತ್ ರ್ಯಾಲಿಗಳನ್ನು ಮಾಡಿ ತಮ್ಮನ್ನು ರಾಷ್ಟ್ರ ಮಟ್ಟದಲ್ಲಿ ಬಿಂಬಿಸಿಕೊಳ್ಳಲು ಸಿದ್ದತೆ ನಡೆಸಿದ್ದಾರೆ. 

ಅವರು ತಮ್ಮನ್ನು ರಾಷ್ಟ್ರೀಯ ಮಟ್ಟದ ನಾಯಕಿಯೆಂದು ತೋರಿಸಿಕೊಳ್ಳುವ ಪ್ರಯತ್ನದಲ್ಲಿ ಕೆಲವು ಅಂಶಗಳು ಸಹ ಅವರಿಗೆ ಪೂರಕವಾಗಿಯೇ ಇವೆ. ಸದ್ಯಕ್ಕೆ ಅವರಿಗೆ ಪಶ್ಚಿಮ ಬಂಗಾಳದಲ್ಲಿ ಬಲಿಷ್ಠ ಎದುರಾಳಿಗಳು ಕಾಣುತ್ತಿಲ್ಲ. ತಳ ಮಟ್ಟದಲ್ಲಿ ಬೇರು ಬಿಟ್ಟಿರುವ ತೃಣಮೂಲ ಕಾಂಗ್ರೆಸ್ ಎಡಪಕ್ಷಗಳಿಗೆ ಚೇತರಿಸಿಕೊಳ್ಳುವ ಅವಕಾಶ ನೀಡದಷ್ಟು ಬಲಾಢ್ಯವಾಗಿ ಬೆಳೆದು ನಿಂತಿದೆ. ಜೊತೆಗೆ ರಾಷ್ಟ್ರ ರಾಜಕಾರಣದಲ್ಲಿ ಮಹತ್ವದ ಪಾತ್ರ ನಿರ್ವಹಿಸಬಲ್ಲವರಾಗಿದ್ದ ಮುಲಾಯಂಸಿಂಗ್ ಅವರು ತಮ್ಮ ರಾಜ್ಯದಲ್ಲಿ ಅಧಿಕಾರ ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದು, ತಮ್ಮದೇ ಕುಟುಂಬದ ಆಂತರೀಕ ಕಲಹಗಳಿಂದ ಕಂಗೆಟ್ಟಿದ್ದು ರಾಷ್ಟ್ರ ರಾಜಕಾರಣದತ್ತ ಹೊರಳಲು ಸಾದ್ಯವಾಗದ ಸ್ಥಿತಿಯಲ್ಲಿದ್ದಾರೆ. ಇನ್ನು ಬಿಹಾರದ ಮುಖ್ಯಮಂತ್ರಿಯಾದ ನಿತೀಶ್ ಕುಮಾರ್ ನೋಟುಬ್ಯಾನಿನ ವಿಚಾರದಲ್ಲಿ ಮೋದಿಯವರನ್ನು ಬೆಂಬಲಿಸುವ ಮಾತಾಡಿದ್ದು ಉಳಿದ ಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ. ಅದೂ ಅಲ್ಲದೆ ಲಾಲು ಪ್ರಸಾದ್ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಬಿಹಾರವನ್ನು ಮುನ್ನಡೆಸುವಲ್ಲಿಯೇ ಅವರ ಬಹುಪಾಲು ಶಕ್ತಿ ವ್ಯಯವಾಗುತ್ತಿದೆ. ಇನ್ನು ಎಡಪಕ್ಷಗಳು ಬಂಗಾಳದ ಸೋಲಿನಿಂದ ಚೇತರಿಸಿಕೊಂಡಂತೆ ಕಾಣುತ್ತಿಲ್ಲ. ಬಹುಜನ ಪಕ್ಷದ ಮಾಯಾವತಿಯವರಿಗೆ ಈ ಬಾರಿಯ ಉತ್ತರಪ್ರದೇಶದ ವಿದಾನಸಭಾ ಚುನಾವಣೆಗಳು ಮಾಡು ಇಲ್ಲವೆ ಮಡಿ ಎನ್ನುವಂತಾಗಿದ್ದು ರಾಷ್ಟ್ರ ರಾಜಕಾರದ ಬಗ್ಗೆ ಯೋಚಿಸುವಷ್ಟು ವ್ಯವದಾನವಿರುವಂತೆ ಕಾಣುತ್ತಿಲ್ಲ. ಒಡಿಸ್ಸಾದ ಮುಖ್ಯಮಂತ್ರಿ ನವೀನ್ ಪಟ್ಮಾಯಕ್ ತಮ್ಮ ರಾಜ್ಯದ ಆಚೆಗಿನ ಯಾವ ವಿಷಯದಲ್ಲೂ ಆಸಕ್ತಿ ತೋರಿಸುತ್ತಿಲ್ಲ. ಮಿಕ್ಕಂತೆ ಇದ್ದ ಇನ್ನೊಬ್ಬ ಉಕ್ಕಿನ ಮಹಿಳೆ ಜಯಲಲಿತಾ ಈಗ ಇಲ್ಲವಾಗಿದ್ದಾರೆ. ಕಾಂಗ್ರೆಸ್ಸಿನ ರಾಹುಲ್ ಗಾಂದಿ ತಮ್ಮೆಲ್ಲ ಪ್ರಯತ್ನಗಳ ನಂತರವು ಜನರಲ್ಲಿ ಭರವಸೆ ಮೂಡಿಸುವಲ್ಲಿ ವಿಫಲರಾಗುತ್ತ ಹೋಗುತ್ತಿದ್ದಾರೆ. ಈ ಎಲ್ಲದರ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಕಾರಣದಲ್ಲಿ ತಮ್ಮ ಛಾಪು ಮೂಡಿಸುವ ಅವಕಾಶಗಳು ಇರುವುದರಿಂದ ಇದೀಗ ಮಮತಾ ಬ್ಯಾನರ್ಜಿಯವರು ನೋಟುಬ್ಯಾನಿನ ವಿಷಯವನ್ನು ಗಂಬೀರವಾಗಿ ತೆಗೆದುಕೊಂಡು ಹೋರಾಡತೊಡಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ತಾವಿದ್ದ ವಿಮಾನ ಇಳಿಯುವಲ್ಲಿ ವಿಳಂಬವಾದುದದನ್ನೆ ತಮ್ಮ ಜೀವಕ್ಕೆ ಕೇಂದ್ರದಿಂದ ಅಪಾಯವಿದೆಯೆಂಬ ರೀತಿಯಲ್ಲಿ ಜನತೆಯಲ್ಲಿ ಅನುಕಂಪ ಮೂಡಿಸಲು ಯತ್ನಿಸುತ್ತಿದ್ದಾರೆ. ಸೈನ್ಯದ ಸಾಮಾನ್ಯ ಕವಾಯತನ್ನು ಸಹ ಮಿಲಿಟರಿ ಪ್ರಯೋಗೆವೆಂದು ಬಣ್ಣಿಸುತ್ತ ಕೇಂದ್ರದ ವಿರುದ್ದ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ. 

ಮಮತಾ ಬ್ಯಾನರ್ಜಿಯವರ ರಾಷ್ಟ್ರ ರಾಜಕಾರಣದ ನಾಯಕಿಯಾಗುವ ಕನಸು ಎಷ್ಟರಮಟ್ಟಿಗೆ ಸಫಲವಾಗುತ್ತದೆ ಎಂಬುದನ್ನು ಕಾಲವೇ ನಿರ್ದರಿಸಬೇಕಾಗಿದೆ. ಯಾಕೆಂದರೆ ಉತ್ತರ ಭಾರತದಲ್ಲಿ ಆಕೆ ಯಶಸ್ಸು ಸಾಧಿಸಬಹುದಾದರು ದಕ್ಷಿಣ ಭಾರತದಲ್ಲಿ ಆ ಮಟ್ಟಿಗೆ ಜನರನ್ನು ಒಲಿಸಿಕೊಳ್ಳುವುದು ಕಷ್ಟದ ವಿಷಯವೇ ಸರಿ. ನೋಟು ಬ್ಯಾನಿನಂತಹ ವಿಚಾರದಲ್ಲಿ ಮಮತಾರವರು ತೆಗೆದುಕೊಂಡಿರುವ ನಿಲುವು ಎಷ್ಟರ ಮಟ್ಟಿಗೆ ಜನರ ಮನ್ನಣೆ ಗಳಿಸಲಿದೆ ಎಂಬುದನ್ನು ನೋಡಲು ನಾವು ಮೋದಿಯವರು ಕೇಳಿಕೊಂಡಿರುವ ಐವತ್ತು ದಿನಗಳ ಅವಧಿ ಮುಗಿಯುವವರೆಗು ಕಾಯಬೇಕಾಗುತ್ತದೆ. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಮಮತಾರವರು ಇನ್ನಷ್ಟು ಸಕ್ರಿಯವಾಗಿ ರಾಷ್ಟ್ರೀಯ ಸಮಸ್ಯೆಗಳ ಕುರಿತಾಗಿ ದನಿ ಎತ್ತಲಿರುವುದಂತು ನಿಜ. ಆದರೆ ಅದು ನೋಟು ಬ್ಯಾನಿನ ಸಫಲತೆ-ವಿಫಲತೆಯ ಮೇಲೆ ಅವಲಂಬಿತವಾಗಿದೆ. 

No comments:

Post a Comment