Dec 23, 2016

ಮೇಕಿಂಗ್ ಹಿಸ್ಟರಿ: ಶತ್ರು ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
ಗೆರಿಲ್ಲಾ ಯುದ್ಧವು ಅಳವಡಿಸಿಕೊಂಡ ಮತ್ತೊಂದು ಕ್ರಮವೆಂದರೆ ಶತ್ರು ಪಾಳಯದ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದ್ದು. 1833ರ ಮಾರ್ಚಿ ತಿಂಗಳಿನಲ್ಲಿ, ಬರ್ರಿನ ಸಿಪಾಯಿ ನದೀಮ್ ಖಾನ್, ಬ್ರಿಟೀಷ್ ಅಧಿಕಾರಿ ಮೇಜರ್ ಜೇಮ್ಸ್ ಮೇಲೆ ಬೆಂಕಿಪುರದಲ್ಲಿ (ಇವತ್ತಿನ ಭದ್ರಾವತಿ) ಅಂತಹುದೊಂದು ದಾಳಿಯನ್ನು ಆಯೋಜಿಸಿದ. ಮಾರ್ಚಿ 25ರ ರಾತ್ರಿ ಜೇಮ್ಸ್ ತನ್ನ ಟೆಂಟಿಗೆ ವಾಪಸ್ಸಾಗುವ ಸಮಯದಲ್ಲಿ, ಬಂಧನಕ್ಕೊಳಗಾಗುವ ಮುನ್ನ ನದೀಮ್ ಖಾನ್ ತನ್ನ ಖಡ್ಗದಿಂದ ಅವನ ತೋಳ ಮೇಲೆ, ತಲೆಯ ಮೇಲೆ ದಾಳಿ ನಡೆಸಿದ, ತದನಂತರ ನದೀಮ್ ಖಾನನನ್ನು ನೇಣಿಗೇರಿಸಲಾಯಿತು. (166) 
ಪತ್ರವೊಂದರಲ್ಲಿ ಕ್ಯಾಮರೂನ್, ನರಸಿಂಗ ರಾವನನ್ನು ಭೇಟಿಯಾಗಿದ್ದ ಗೂಡಚಾರಿಯೊಬ್ಬನಿಂದ ನರಸಿಂಗ ರಾವ್ ಕೊಲ್ಲಬೇಕಿದ್ದ ಎಂಟು ಅಧಿಕಾರಿಗಳ ಪಟ್ಟಿಯನ್ನು ಕಳುಹಿಸಿದ್ದರ ಬಗ್ಗೆ ತಿಳಿಸಿದ್ದರ ಬಗ್ಗೆ ಬರೆದಿದ್ದ. (167) [ನರಸಿಂಗ ರಾವ್ ಬುಡಿ ಬಸಪ್ಪನ ಲೆಫ್ಟಿನೆಂಟುಗಳಲ್ಲಿ ಒಬ್ಬ, ಉತ್ತರ ಕನ್ನಡ ಜಿಲ್ಲೆಯ ಸಶಸ್ತ್ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ]. 

1833ರ ಫೆಬ್ರವರಿಯಲ್ಲಿ, ಕೆನರಾದ ಕಲೆಕ್ಟರ್ ಆಗಿದ್ದ ಕ್ಯಾಮರೂನ್ ಸಿರ್ಸಿಯಲ್ಲಿದ್ದ ಸಮಯದಲ್ಲಿ ಆತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸುವ ಯತ್ನಗಳಾಗಿತ್ತು ಎಂಬುದು ನಮಗೆ ತಿಳಿದು ಬರುತ್ತದೆ. ಮುಖ್ಯ ಕಾರ್ಯದರ್ಶಿಗೆ ಬರೆದ ಪತ್ರದಲ್ಲಿ, ತನ್ನ ಕಛೇರಿಯ ಹೊರಗೆ ದೊಂಬಿಯೆಬ್ಬಿಸುವ ಯೋಜನೆ ಹಾಕಿಕೊಂಡು ಆ ದೊಂಬಿಯಿದ್ದೆದ್ದ ಗಲಭೆಯ ಸಂದರ್ಭದಲ್ಲಿ ತನ್ನ ಮೇಲೆ ದಾಳಿ ನಡೆಸಿ ಕೊಲ್ಲಲು ಹವಣಿಸಿದ್ದರು ಎಂದು ಕ್ಯಾಮರೂನ್ ವಿವರಗಳನ್ನು ನೀಡುತ್ತಾನೆ. ಗೆರಿಲ್ಲಾ ನಾಯಕ ಚೂರಿ ಲಿಂಗಾನ ನೇತೃತ್ವದಲ್ಲಿ, ಮತ್ತು ಶೇಖ್ ಮೊಹಮ್ಮದ್ ನ ನೇತೃತ್ವದಲ್ಲಿದ್ದ ಮುಸ್ಲಿಮರ ಬೆಂಬಲದೊಂದಿಗೆ, ಹಂದಿಯನ್ನಿರಿದು ಮಸೀದಿಯೊಳಗೆ ಎಸೆಯಲಾಯಿತು. ಮುಸ್ಲಿಮರು ಹೆಚ್ಚಿನ ಸಂಖೈಯಲ್ಲಿ ಬೇದಿಗಿಳಿದರು ಮತ್ತು ಇದಕ್ಕೆ ಕ್ರಿಶ್ಚಿಯನ್ನಾದ ನೀನೇ ಜವಾಬುದಾರ ಎಂದು ಕ್ಯಾಮರೂನ್ ಗೆ ದೂರು ನೀಡಿದರು. “ಸತ್ತ ಹಂದಿಯನ್ನು ನೋಡಿದ ನಂತರ ಉಂಟಾದ ಗಲಭೆಯು ಇನ್ನೂ ಸರಿಯಾಗಿ ಶುರುವೇ ಆಗಿರಲಿಲ್ಲ, ಅಷ್ಟರಲ್ಲಿ ಹಲವು ಹಿಂದೂಗಳು ಗುಂಪನ್ನು ಸೇರಿದರು ಮತ್ತು ಮುಸಲ್ಮಾನರಿಗಿಂತಲೂ ಹೆಚ್ಚು ಕೋಪೋದ್ರಿಕ್ತರಾಗಿದ್ದರು ಎಂದು ನನಗೆ ನಂತರದಲ್ಲಿ ತಿಳಿಯಿತು. ಅವರ ನಾಯಕತ್ವವನ್ನು ಚೂರಿ ಲಿಂಗ ಎಂಬ ಹೆಸರಿನ ವ್ಯಕ್ತಿ ವಹಿಸಿಕೊಂಡಿದ್ದ, ಈ ಚೂರಿ ಲಿಂಗ ನಗರದ ಗಲಭೆಗಳಲ್ಲಿ ಚಿರಪರಿಚಿತನಾಗಿದ್ದ…. 

ಗುಂಪು ಕಛೇರಿಯ ಎದುರಿಗೆ ಸೇರಿದಾಗ, ಮೈಸೂರಿಗರು ದೊಡ್ಡ ಸಂಖೈಯಲ್ಲಿ ಸೇರಿದ್ದು ಗಮನಕ್ಕೆ ಬಂತು….ಗಲಭೆಕೋರರು ದೊಡ್ಡ ಪಡೆಯೊಂದಿಗೆ ಬಂದಿದ್ದರು ಮತ್ತು ಅವರೀಗ ಶಸ್ತ್ರಸಜ್ಜಿತರಾಗಿದ್ದರು. ಮೊದಲ ದಿನ ಕೆಲವೇ ಕೆಲವು ಬಂದೂಕುಗಳು ಕಾಣಿಸುತ್ತಿದ್ದವು. ಆದರೆ ಎರಡನೇ ದಿನ ಏನು ನಡೆಯುತ್ತಿದೆ ಎಂದು ನೋಡಲು ನಾನು ಕಛೇರಿಯ ಮುಂಭಾಗಕ್ಕೆ ಬಂದಾಗ, ನೆರೆದಿದ್ದ ಜನರಲ್ಲಿ ಅರ್ಧಕ್ಕಿಂತ ಹೆಚ್ಚಿನವರ ಬಳಿ ಬಂದೂಕುಗಳಿವೆ ಎಂದು ತಿಳಿದು ಬಂತು”. (168) 

ಜನರ ನಡುವೆ ಸಾಹಸ ಮಾಡಲಿಲ್ಲ ಕ್ಯಾಮರೂನ್, ತನ್ನ ಕಛೇರಿಯೊಳಗೇ ಉಳಿದುಕೊಂಡ. ಯೋಜನೆ ಏನಿತ್ತೆಂದರೆ, ಶೇಖ್ ಮೊಹಮ್ಮದ್ ಮತ್ತು ಚೂರಿ ಲಿಂಗ ಕಂಬಳಿಯೊಳಗೆ ತಮ್ಮ ಖಡ್ಗಗಳನ್ನು ಕಾಣದಂತೆ ಅವಿಸಿಕೊಂಡಿರಬೇಕು ಮತ್ತು ಮೊದಲು ಶೇಖ್ ಮೊಹಮ್ಮದ್ ಖಡ್ಗವನ್ನೆಳೆಯಬೇಕು, ಅದರಿಂದೆಯೇ ಚೂರಿ ಲಿಂಗ ಖಡ್ಗವನ್ನಿರಿದು ಕ್ಯಾಮರೂನನನ್ನು ಕತ್ತರಿಸಿ ಹಾಕಬೇಕು. (169) 

xi) ಸಶಸ್ತ್ರ ಹೋರಾಟಕ್ಕೆ ಸಿಕ್ಕ ಅಭೂತಪೂರ್ವ ಬೆಂಬಲ 
ಸಶಸ್ತ್ರ ಹೋರಾಟವು ಹೆಚ್ಚಾದಂತೆ ಜನಸಮೂಹದ ಬೆಂಬಲವನ್ನು ಗಳಿಸಲಾರಂಭಿಸಿತು. ಸಶಸ್ತ್ರ ಹೋರಾಟವು ಶುರುವಾಗುವುದಕ್ಕೆ ಮುಂಚೆ ಜನ ಸಮೂಹವನ್ನು ಸಜ್ಜುಗೊಳಿಸಿದ್ದನ್ನು ನಾವು ನೋಡಿದ್ದೇವೆ; ಈ ಸಜ್ಜುಗೊಳಿಸುವಿಕೆ ಜನರಲ್ಲಿ ಮಿಂಚಿನ ಸಂಚಾರವಾಗುವಂತೆ ಮಾಡಿ ಬಂಡಾಯಕ್ಕೆ ಅವರನ್ನು ಎಚ್ಚರಗೊಳಿಸಿತು. ರೈತ ಸಮೂಹದ ಮತ್ತು ನಗರವಾಸಿಗಳ ಈ ವ್ಯಾಪಕ ಬೆಂಬಲದ ಕಾರಣದಿಂದಲೇ ಗೆರಿಲ್ಲಾ ಯುದ್ಧವು ಬೆಳೆದಿದ್ದು ಮತ್ತು ಪ್ರಮುಖ ಸಾಧನೆಗಳನ್ನು ಮಾಡಲು ಸಾಧ್ಯವಾಗಿದ್ದು. 

ಒಕ್ಕಲಿಗರು, ಲಿಂಗಾಯತರು, ಬೇಡರು, ಕುರುಬರು, ಈಡಿಗರು, ಕೊರಮರು, ದಲಿತರು ಮತ್ತು ಮುಸ್ಲಿಮರಲ್ಲಿನ ಶೋಷಿತ ರೈತರ ಭಾಗವಹಿಸುವಿಕೆ ಹಾಗೂ ಕೆಲವು ಬ್ರಾಹ್ಮಣರ ಭಾಗವಹಿಸುವಿಕೆಯು ಸಶಸ್ತ್ರ ಹೋರಾಟವು ಕಂಡುಕೊಂಡಿದ್ದ ವಿಶಾಲ ತಳಹದಿಯ ಬಗ್ಗೆ ಮತ್ತು ಅದರ ಜನಪ್ರಿಯತೆಯ ಬಗ್ಗೆ ತಿಳಿಸುತ್ತದೆ, ಈ ಕಾರಣದಿಂದ ಸಶಸ್ತ್ರ ಹೋರಾಟದಲ್ಲಿ ಜನರ ಮತ್ತು ಸಾಮಗ್ರಿಗಳು ಮತ್ತೆ ಮತ್ತೆ ಭರ್ತಿಯಾಗುತ್ತಿತ್ತು. 

“ಸಮಾಜದ ಎಲ್ಲಾ ಸ್ತರದ ಜನರು, ಪರಯ್ಯಾಗಳು ಮತ್ತು ಎಲ್ಲಾ ಜಾತಿಯ ಜನರು” ಸಶಸ್ತ್ರ ಹೋರಾಟದಲ್ಲಿ ಸೇರಿದ್ದರು ಎಂದು ಕ್ಯಾಮರೂನ್ ತಿಳಿಸುತ್ತಾನೆ. (170) 

1833ರ ಫೆಬ್ರವರಿ ತಿಂಗಳಿನ ಒಂದು ಬೆಳಿಗ್ಗೆ ಸಿರ್ಸಿಯಲ್ಲಿದ್ದಾಗ, ಸರಕಾರವನ್ನು ಜನರು ಸಂಪೂರ್ಣವಾಗಿ ವಿರೋಧಿಸಿದ್ದರ ಬಗ್ಗೆ ತಿಳಿಸುತ್ತಾನೆ. “….ಎಲ್ಲಾ ಪರಯ್ಯಾಗಳನ್ನು ಪಟ್ಟಣದ ಪಟೇಲ ಸೇರಿಸಿ ನನ್ನ ಸಹಾಯಕ್ಕೆ ಕರೆತರಬೇಕೆಂದು ನಾಯಕ್ ಶಿರಸ್ತೇದಾರ ಇಚ್ಛಿಸಿದ….. ಯಾರೂ ಸಿಗಲಿಲ್ಲ……ಒಬ್ಬನೇ ಒಬ್ಬ ಪರಯ್ಯಾ ಮನೆಯಲ್ಲಿರಲಿಲ್ಲ”. (171) 

ಆನಂದಪುರದಿಂದ ಕಾಸಾಮೈಯೂರನಿಗೆ ಬರೆದ ಪತ್ರದಲ್ಲಿ ಲೆಫ್ಟಿನೆಂಟ್ ಕಲೋನಲ್ ಈವಾನ್ಸ್, ಅಸಹಕಾರದ ತಡೆಗೋಡೆಗೆ ಎದುರಾದದ್ದರ ಬಗ್ಗೆ ತಿಳಿಸುತ್ತಾನೆ: “ನಗರದ ಬಗೆಗಿನ ಯಾವುದೇ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಈ ಪ್ರದೇಶದಲ್ಲಿ ಯಾರೂ ವಾಸವಿದ್ದಂತೆಯೇ ಕಾಣುವುದಿಲ್ಲ ಮತ್ತು ಇಡೀ ದೇಶವೇ ಹಗೆತನದಿಂದ ಕೂಡಿರುವಂತೆ ನನಗನ್ನಿಸುತ್ತಿದೆ. ಹಾಗಾಗಿ ನನ್ನ ಪ್ರಕಾರ ಇಲ್ಲೊಂದು ಕಮಿಷನರ್ ಕಛೇರಿಯನ್ನು ತೆರೆದು ಕಾರ್ಯಾಚರಣೆ ಮಾಡುವುದು ಉತ್ತಮ. ಇಲ್ಲಿ ನನಗೋಸ್ಕರ ಅಕ್ಕಿ ತಂದುಕೊಟ್ಟಿದ್ದರು, ಆದರೆ ಅದನ್ನು ಸಾಗಿಸಲು ಒಂದೇ ಒಂದು ಎತ್ತಿನಗಾಡಿಯನ್ನು ಪಡೆಯಲು ಸಾಧ್ಯವಾಗಲಿಲ್ಲ”. (172) 

ನರಸಿಂಗ ರಾವನ ಹೇಳಿಕೆ ಇದಕ್ಕೆ ಸಂಪೂರ್ಣ ವಿರುದ್ಧ ದಿಕ್ಕಿನಲ್ಲಿದೆ. ಬಂಡಾಯ ನಾಯಕರಲ್ಲೊಬ್ಬನಾಗಿದ್ದ ನರಸಿಂಗರಾವ್ ಹೇಳಿಕೆಯನ್ನು ಗೂಢಚಾರಿಯೊಬ್ಬ ಕ್ಯಾಮರೂನ್ ಗೆ ತಿಳಿಸಿದ್ದ. ನರಸಿಂಗರಾವ್ ಹೀಗೆ ಹೇಳಿದನೆನ್ನುತ್ತಾರೆ: “ಇದನ್ನು ನಾನೇಗೆ ಗ್ರಹಿಸಲಿ..... ಪ್ರತಿನಿತ್ಯ ದೊಡ್ಡ ಸಂಖೈಯಲ್ಲಿ ರೈತರು ನನ್ನ ಬಳಿಗೆ ಬರುತ್ತಿದ್ದಾರೆ ಮತ್ತು ಯಥೇಚ್ಛವಾಗಿ ದವಸ ಧಾನ್ಯಗಳನ್ನು ಹೊತ್ತು ತರುತ್ತಿದ್ದಾರೆ’, ಹೀಗೆ ಹೇಳುತ್ತ ನರಸಿಂಗ ರಾವ್ ದವಸ ಧಾನ್ಯದ ದೊಡ್ಡ ಸಂಗ್ರಹವನ್ನು ತೋರಿಸಿದ”. (173) 

ಗಾಜನೂರಿನಿಂದ ಬರೆಯುತ್ತ ಕ್ಯಾಪ್ಟನ್ ಕ್ಲೇಮನ್ಸ್ ಹೇಳುತ್ತಾನೆ: “ನನಗನ್ನಿಸುವ ಹಾಗೆ ಲಕ್ಕವಳ್ಳಿಯಿಂದ ಶಾಂತಯುತವಾಗಿ ತೆರಳಿದ ಅಲ್ಲಿನ ನಿವಾಸಿಗಳು ಬಂಡಾಯಗಾರರ ಸಂಪೂರ್ಣ ನಿಯಂತ್ರಣದಲ್ಲಿದ್ದಾರೆ. ಬಂಡಾಯಗಾರರು ಆಶ್ರಯ ಪಡೆದಿರುವ ಅರಣ್ಯದೊಳಗಿನ ಪ್ರತಿ ಹಳ್ಳಿಯಲ್ಲೂ ತಮ್ಮ ಪ್ರಭಾವ ಹೊಂದಿದ್ದಾರೆ ಮತ್ತವರ ಆಡಳಿತದಲ್ಲಿದೆ”. (174) 

1831ರ ಎಪ್ರಿಲ್ 12ರಂದು ಲಷಿಂಗ್ಟನ್ ಬರೆಯುತ್ತಾನೆ: “ನಗರದಲ್ಲಿ ಹೊತ್ತಿಕೊಂಡ ದಂಗೆಯ ಕಿಚ್ಚಿನ ಬೆಂಕಿಯು ಈಗ ಕಂಪನಿಯ ಕೆನರಾ ಪ್ರಾಂತ್ಯಕ್ಕೆ ವ್ಯಾಪಿಸಿದೆ, ಕೆನರಾ ಪ್ರಾಂತ್ಯವು ಈ ಮುಂಚೆ ಬಿದನೂರು ರಾಜನಾಳ್ವಿಕೆಯಲ್ಲಿತ್ತು; ಮೈಸೂರಿನಲ್ಲಿ ಈಗಾಗಲೇ ರಕ್ತದ ಕೋಡಿ ಹರಿದಿದ್ದರೂ ಪ್ರಭುತ್ವಕ್ಕಾಗಿ ರಾಜನ ಅನಿಯಮಿತ ಪಡೆಗಳು ಮತ್ತು ಪಾಳೇಗಾರರು ಹಾಗೂ ಮೂಲನಿವಾಸಿಗಳ ನಡುವಿನ ಹೋರಾಟದ ಮಧ್ಯೆ ರಾಜನ ಆಳ್ವಿಕೆ ಸಬಲವಾಗಿ ಜಾರಿಯಾಗಿದೆ ಎಂದು ಕೊಚ್ಚಿಕೊಳ್ಳಲು ನನಗೆ ಸಾಧ್ಯವಿಲ್ಲ....” (175) 

ಕೊನೆಯದಾಗಿ, ಬ್ರಿಗ್ಸ್ ನ ಹೇಳಿಕೆಯು (ಅನುಬಂಧ 2ನ್ನು ನೋಡಿ) ಬಹಳ ಸ್ಪಷ್ಟವಾಗಿದೆ: “ಪೋಲೀಸರ ಸಂಪೂರ್ಣ ಕಾರ್ಯವೈಫಲ್ಯ ಮತ್ತು ಸ್ಥಳೀಯ ಪಡೆಗಳ ಸೀಮಿತ ಯಶಸ್ಸಿಗೆ ಕಾರಣ ಜನರಿಂದ ಸರಿಯಾದ ಮಾಹಿತಿ ಸಿಗದಿರುವುದೇ ಆಗಿದೆ. ಸರಕಾರದೆಡೆಗಿನ ಭಯ ಅಥವಾ ಅಸಂತುಷ್ಟತೆಯ ಕಾರಣದಿಂದಾಗಿ ಜನರು ಮಾಹಿತಿ ನೀಡಲಿಲ್ಲ”. (176) 

ಹೌದು, ಜನಪ್ರಿಯ ಜನಸಮೂಹವು ಸಶಸ್ತ್ರ ಹೋರಾಟದ ಬೆನ್ನೆಲುಬಾಗಿದ್ದರು, ಮತ್ತು ಈ ಪರಿಸ್ಥಿತಿ ಎಲ್ಲಿಯವರೆಗೆ ಇತ್ತೋ, ವಸಾಹತುಶಾಹಿಗಳು ಯುದ್ಧದಲ್ಲಿ ಮುನ್ನಡೆ ಸಾಧಿಸುವ ಭರವಸೆ ಇಟ್ಟುಕೊಳ್ಳುವಂತಿರಲಿಲ್ಲ. 

ರೈತರು ಆಯ್ದುಕೊಂಡ ಸಶಸ್ತ್ರ ಹೋರಾಟದ ವಿಧಾನವು, ಆ ವಿಧಾನವನ್ನು ಅವರು ದಿನನಿತ್ಯ ಅಭಿವೃದ್ಧಿಪಡಿಸಿದ ರೀತಿ ಮತ್ತು ಜನಸಮೂಹವು ಮುಲಾಜಿಲ್ಲದೆ ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದೆಲ್ಲವೂ ಬ್ರಿಟೀಷ್ ಆಕ್ರಮಣಕಾರರ ಆಡಳಿತ ಯಂತ್ರದಲ್ಲಿ ತೀರ್ವಸ್ವರೂಪದ ಬಿಕ್ಕಟ್ಟನ್ನು ರೂಪಿಸಿತು. ಅವರು ಗೊಂದಲದಿಂದ ಕೂಡಿದ ಅಂದಾಜುಗಳನ್ನು ಮಾಡಿದರು, ಸ್ವಯಂ ತದ್ವಿರುದ್ಧ ನೆಲೆಯಲ್ಲಿದ್ದ ತಂತ್ರಗಳನ್ನು ಅಳವಡಿಸಿಕೊಂಡರು ಮತ್ತು ತಮ್ಮ ವ್ಯಾಪಾರದ ಎಲ್ಲಾ ಉಪಾಯಗಳನ್ನೂ ಪ್ರಯತ್ನಿಸಿ ನೋಡಿದರು. ಪ್ರತಿ ತಿರುವಿನಲ್ಲೂ ಅವರು ಹೀನಾಮಾನವಾಗಿ ಸೋತರು. ಮಲೆನಾಡು ಅವರ ದಾರಿ ತಪ್ಪಿಸುವ, ತಬ್ಬಿಬ್ಬುಗೊಳಿಸುವ ಜಟಿಲ ಮಾರ್ಗವಾಗಿಬಿಟ್ಟಿತ್ತು. ಅವರು ಸುತ್ತಿದ ವೃತ್ತಗಳೆಡೆಗೆ ಒಮ್ಮೆ ಕಣ್ಣಾಯಿಸೋಣ.

ಮುಂದಿನ ವಾರ: ಸವಾಲು, ಭ್ರಾಂತಿ ಮತ್ತು ಬಿಕ್ಕಟ್ಟು

No comments:

Post a Comment