Dec 22, 2016

ಗುಜರಾತ್: ನಿಗದಿತ ಅವಧಿಗೆ ಮುನ್ನವೇ ರಾಜ್ಯ ವಿದಾನಸಭೆಗೆ ಚುನಾವಣೆ ನಡೆಸಲು ರಾಜಕೀಯ ಕಸರತ್ತು!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಆಡಳಿತಾರೂಢ ಪಕ್ಷವೊಂದು ತನ್ನ ಅಧಿಕಾರದ ಅವಧಿ ಮುಗಿದ ನಂತರ ನಡೆಯಲಿರುವ ಚುನಾವಣೆಗಳಲ್ಲಿ ಗೆಲ್ಲುವ ಭರವಸೆ ಕಳೆದುಕೊಂಡಾಗ, ತನ್ನ ಅನುಕೂಲಕ್ಕೆ ತಕ್ಕಂತೆ ಅವಧಿಗೆ ಮುಂಚಿತವಾಗಿಯೇ ಚುನಾವಣೆಗಳನ್ನು ನಡೆಸಿ ಗೆಲ್ಲಲೆತ್ನಿಸುವುದು ಇಂಡಿಯಾದ ರಾಜಕಾರಣದಲ್ಲಿ ಸಹಜವಾಗಿ ನಡೆದು ಬಂದ ಬೆಳವಣಿಗೆ. ಅದಿಕಾರದಲ್ಲಿ ಇರುವ ಪಕ್ಷವೊಂದು ತನಗೆ ಬೇಕಾದಾಗ ವಿದಾನಸಭೆಯನ್ನು ವಿಸರ್ಜಿಸಿ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸುವುದರಲ್ಲಿ ಯಾವ ಕಾನೂನಿನ ತೊಡಕೂ ಇಲ್ಲ. ಸರಕಾರ ಕೇಳಿದಾಗ ಚುನಾವಣೆ ನಡೆಸುವುದಷ್ಟೆ ಆಯೋಗದ ಕೆಲಸವಾಗಿದ್ದು, ಒಂದು ವಿದಾನಸಭೆಯ ಅವಧಿಯನ್ನು ಪೂರ್ಣಗೊಳಿಸಿದ ನಂತರವಷ್ಟೇ ತಾನು ಚುನಾವಣೆ ನಡೆಸುವುದೆಂದು ಹೇಳುವ ಅಧಿಕಾರ ಆಯೋಗಕ್ಕೆ ಇಲ್ಲವಾಗಿರುವುದೆ ಇದಕ್ಕೆ ಕಾರಣ ಎನ್ನಬಹುದು. ಕಳೆದ ಎಪ್ಪತ್ತು ವರ್ಷಗಳಲ್ಲಿ ಬಹಳಷ್ಟು ರಾಜ್ಯಗಳಲ್ಲಿ ಈ ತೆರನಾದ ಅವಧಿಪೂರ್ವ ಚುನಾವಣೆಗಳು ನಡೆದಿವೆ. ತನ್ಮೂಲಕ ಸರಕಾರದ ಬೊಕ್ಕಸಕ್ಕೆ ಹೊರೆಯಾಗಿದ್ದು ಮಾತ್ರವಲ್ಲದೆ, ಜನರ ವಿಶ್ವಾಸಕ್ಕೆ ದ್ರೋಹ ಬಗೆಯುವಲ್ಲಿಯೂ ಸಫಲವಾಗಿವೆ. ಇಂತಹ ವಿಷಯಗಳಲ್ಲಿ ಕಾಂಗ್ರೆಸ್ ಪಕ್ಷದ ನಡವಳಿಕೆಗಳನ್ನು ಕಟುವಾಗಿ ಟೀಕಿಸುತ್ತಿದ್ದ ಬಾಜಪ ಕೂಡ ಇದೀಗ ಅದೇ ದಾರಿಯಲ್ಲಿ ನಡೆಯಲು ತೀರ್ಮಾನಿಸಿದ್ದು, ತಾನು ಯಾವ ವಿಚಾರದಲ್ಲು ಕಾಂಗ್ರೆಸ್ಸಿಗಿಂತ ಭಿನ್ನವೇನಲ್ಲ ಎಂಬುದನ್ನು ಸಾಬೀತು ಪಡಿಸಲು ಹೊರಟಿದೆ.
2012ರ ಡಿಸೆಂಬರ್ ತಿಂಗಳಲ್ಲಿ ಗುಜರಾತ್ ವಿದಾನಸಭೆಗೆ ಚುನಾವಣೆಗಳು ನಡೆದಿದ್ದು, 2017ರ ಡಿಸೆಂಬರಿಗೆ ಅವಧಿ ಪೂರೈಸಲಿದೆ. ಆದರೆ ಗುಜರಾತ್ ಬಾಜಪದ ಪ್ರಮುಖ ನಾಯಕರೊಬ್ಬರು ಮಾಧ್ಯಮಗಳಿಗೆ ನೀಡಿರುವ ಸುದ್ದಿಗಳ ಪ್ರಕಾರ ಕಳೆದ ವಾರದಲ್ಲಿ ಬಾಜಪದ ಹಿರಿಯ ನಾಯಕರುಗಳು ಮತ್ತು ಆರ್.ಎಸ್.ಎಸ್. ಪ್ರಮುಖರಾದ ಶ್ರೀ ಮೋಹನ್ ಬಾಗವತ್ ಅವರುಗಳ ನಡುವೆ ನಡೆಯುತ್ತಿರುವ ಸಭೆಗಳಲ್ಲಿ ಗುಜರಾತ್ ವಿದಾನಸಭೆಯ ಚುನಾವಣೆಗಳನ್ನು 2017ರ ಪೂರ್ವಾರ್ಧದಲ್ಲಿ ನಡೆಯಲಿರುವ ಉತ್ತರಪ್ರದೇಶ ಮತ್ತು ಪಂಜಾಬ್ ರಾಜ್ಯಗಳ ಚುನಾವಣೆಯ ಜೊತೆಗೆ ನಡೆಸುವ ಬಗ್ಗೆ ತೀವ್ರತರವಾದ ಚರ್ಚೆಯೊಂದು ನಡೆಯುತ್ತಿದ್ದು ಈ ನಡೆ ಬಾಜಪಕ್ಕೆ ಅನುಕೂಲಕರವಾಗಿ ಪರಿಣಮಿಸಬಹುದೆಂದು ನಂಬಲಾಗಿದೆ. ಬಾಜಪ ಈ ವಿಚಾರವಾಗಿ ಸಂಘಪರಿವಾರದ ಜೊತೆ ಚರ್ಚೆ ನಡೆಸಿದ್ದು ಇದಕ್ಕಿರಬಹುದಾದ ಕಾರಣಗಳನ್ನು ಸಹ ಪ್ರಸ್ತಾಪಿಸಿದೆ. ಆ ಕಾರಣಗಳನ್ನು ನಾವೀಗ ನೋಡೋಣ:

1. 2016 ರ ಉತ್ತರಾರ್ದದಲ್ಲಿ ಪ್ರದಾನಮಂತ್ರಿ ಶ್ರೀ ನರೇಂದ್ರಮೋದಿಯವರ ಕೇಂದ್ರ ಸರಕಾರ ತೆಗೆದುಕೊಂಡ ಕೆಲವು ಮಹತ್ವಪೂರ್ಣ ನಿರ್ದಾರಗಳು ಜನರ ಮೆಚ್ಚುಗೆಗೆ ಪಾತ್ರವಾಗಿವೆ ಎಂದು ನಂಬಿರುವ ಬಾಜಪ ಅವುಗಳ ಲಾಭ ಪಡೆಯಲು ಪ್ರಯತ್ನಸುತ್ತಿದೆ. ಈ ವರ್ಷದ ಸೆಪ್ಟೆಂಬರಿನಲ್ಲಿ ಗಡಿಯಾಚೆಗೆ ನಡೆಸಿದ ಸರ್ಜಿಕಲ್ ಸ್ಟ್ರೈಕ್ ನಿಂದ ದೇಶದ ಭದ್ರತೆಗೆ ಅಪಾಯಕಾರಿಯಾಗಿದ್ದ ಗಡಿಯಾಚೆಯ ಭಯೋತ್ಪಾದನೆ ನಿಗ್ರಹಿಸುವಲ್ಲಿ ಸರಕಾರ ತೆಗೆದುಕೊಂಡ ತೀರ್ಮಾನ ಮಹತ್ವದ್ದೆಂದು ಬಾವಿಸಿರುವ ಜನತೆಯ ದೃಷ್ಠಿಯಲ್ಲಿ ಬಾಜಪದ ವಿಶ್ವಾಸರ್ಹತೆ ಹೆಚ್ಚಿದೆ ಎಂಬ ಲೆಕ್ಕಾಚಾರವು ಇದರಲ್ಲಿ ಅಡಗಿದೆ. ಅದೇ ರೀತಿ ನವೆಂಬರ ಎಂಟನೇ ತಾರೀಖು ದೊಡ್ಡ ಮುಖಬೆಲೆಯ ನೋಟುಗಳನ್ನು ಬ್ಯಾನ್ ಮಾಡಿ, ಭ್ರಷ್ಟಾಚಾರ ಮತ್ತು ಕಪ್ಪುಹಣದ ವಿರುದ್ದ ಹೋರಾಡಲಾಗುತ್ತಿಯೆಂದು ತನ್ನ ಸರಕಾರವನ್ನು ಬಿಂಬಿಸಿಕೊಂಡ ನರೇಂದ್ರ ಮೋದಿಯವರ ಜನಪ್ರಿಯತೆಯನ್ನು ಬಳಸಿಕೊಂಡು ಚುನಾವಣೆ ಗೆಲ್ಲಬಹುದೆಂಬ ನಂಬಿಕೆ ಬಾಜಪದ್ದಾಗಿದೆ.

2. 2016 ರಲ್ಲಿ ಗುಜರಾತಿನಲ್ಲಿ ಉತ್ತಮ ಮಳೆಯಾಗಿದ್ದು ಕೃಷಿ ಕ್ಷೇತ್ರದಲ್ಲಿ ಅಂತಹ ಸಂಕಷ್ಟವೇನು ಎದುರಾಗಿಲ್ಲ. ಅಕಸ್ಮಾತ್ 2017ರಲ್ಲಿ ಸರಿಯಾಗಿ ಮಳೆಯಾಗದೆ ಹೋದರೆ ಕೃಷಿ ಕ್ಷೇತ್ರದಲ್ಲಿ ಹಿನ್ನಡೆಯಾಗಿ, ಈಗಾಗಲೇ ನೋಟ್ ಬ್ಯಾನಿಂದ ಕಷ್ಟ ಅನುಭವಿಸುತ್ತಿರುವ ಗ್ರಾಮೀಣ ಜನತೆಗೆ ಮತ್ತಷ್ಟು ಸಂಕಷ್ಟ ಎದುರಾದಲ್ಲಿ, ಬಾಜಪದ ಬಗ್ಗೆ ಜನರಿಗೆ ಭ್ರಮನಿರಸನ ಉಂಟಾಗಿ ಚುನಾವಣೆಯಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗಿ ಬರಬಹುದು. ಇದರಿಂದ ತಪ್ಪಿಸಿಕೊಳ್ಳಲು ಮುಂಚಿತವಾಗಿಯೇ ಚುನಾವಣೆ ನಡೆಸುವುದು ಉತ್ತಮ ಎಂಬ ಬಾವನೆ ಬಾಜಪದ ನಾಯಕರುಗಳಿಗೆ ಇದೆ.

3. ಗುಜರಾತಿನ ಪಾಟೀದಾರರ ಮೀಸಲಾತಿ ಮುಷ್ಕರದ ಕಾವು ಇನ್ನೂ ಆರಿಲ್ಲವಾಗಿದ್ದು, ಹಾರ್ದಿಕ್ ಪಟೇಲ್ ಸದ್ಯಕ್ಕೆ ಗುಜರಾತಿಗೆ ಪ್ರವೇಶಿಸದಂತೆ ನ್ಯಾಯಾಲಯ ನಿರ್ಬಂದಿಸಿದ್ದು ಇದರ ಲಾಭ ಪಡೆಯುವುದು ಕೂಡ ಬಾಜಪದ ಉದ್ದೇಶವಾಗಿದೆ. ಯಾಕೆಂದರೆ ಗುಜರಾತಲ್ಲಿ ಪಾಟಿದಾರರು ಬಹುಸಂಖ್ಯಾತರಲ್ಲದಿದ್ದರೂ, ಒಟ್ಟು ಇರುವ 182 ಸ್ಥಾನಗಳ ಪೈಕಿ ಕನಿಷ್ಠ 80 ಸ್ಥಾನಗಳಲ್ಲಿ ಗೆಲುವನ್ನು ನಿರ್ದರಿಸಬಲ್ಲಷ್ಟು ಪ್ರಬಾವ ಹೊಂದಿದ್ದಾರೆ. ಪಾಟೀದಾರರ ಮುನಿಸಿನ ಕಾವು ಇನ್ನಷ್ಟು ಹೆಚ್ಚುವುದಕ್ಕೆ ಮೊದಲೆ ಚುನಾವಣೆ ನಡೆಸಬೇಕೆನ್ನುವುದು ಬಾಜಪದ ನಾಯಕರುಗಳ ಆಶಯವಾಗಿದೆ.

4. ಅದೂ ಅಲ್ಲದೆ ಇತ್ತೀಚೆಗೆ ಹಾರ್ದಿಕ್ ಪಟೇಲ್ ಬಿಹಾರದ ಮುಖ್ಯಮಂತ್ರಿಯಾದ ಶ್ರೀ ನಿತೀಶ್ಕುಮಾರ್ ಅವರನ್ನು ಬೇಟಿಯಾಗಿ ಮಾತುಕತೆ ನಡೆಸಿದ್ದು, ಒಂದು ವರ್ಷದ ಅವಧಿ ಸಿಕ್ಕರೆ ಅವರಿಬ್ಬರು ರಾಜಕೀಯವಾಗಿ ಒಂದಾಗಿ ಬಲಿಷ್ಠರಾಗುವ ಅಪಾಯವನ್ನು ಬಾಜಪ ಮನಗಂಡಿದೆ.

5. ಇದರ ಜೊತೆಗೆ ಇತ್ತೀಚೆಗೆ ಗುಜರಾತಿನ ಗ್ರಾಮೀಣ ಪ್ರದೇಶದಲ್ಲಿ ಆಮ್ ಆದ್ಮಿ ಪಕ್ಷ ಬೇರುಗಳನ್ನು ಬಿಡಲು ಪ್ರಾರಂಬಿಸಿದ್ದು, ಅದು ತಳಮಟ್ಟದಲ್ಲಿ ಭದ್ರವಾದ ನೆಲೆ ಕಂಡುಕೊಳ್ಳುವಷ್ಟರಲ್ಲಿ ಚುನಾವಣೆ ನಡೆಸಿ ಮುಗಿಸುವುದರಿಂದ ಬಾಜಪದ ಗೆಲುವಿಗೆ ಯಾವ ಅಡ್ಡಿಯೂ ಇರುವುದಿಲ್ಲವೆಂಬುದು ಸಹ ಬಾಜಪದ ತಂತ್ರವಾಗಿದೆ. ಅಕಸ್ಮಾತ್ ಪಂಜಾಬ್ ಮತ್ತು ಗೋವಾಗಳಲ್ಲಿ ಆಮ್ ಆದ್ಮಿ ಪಕ್ಷವೇನಾದರು ಗೆಲುವು ಸಾದಿಸಿದರೆ ಅದು ಗುಜರಾತಿನ ಮೇಲೂ ಪರಿಣಾಮ ಬೀರಬಹುದಾದ ಸಾದ್ಯತೆ ಇದ್ದು ಅದಕ್ಕೆ ಅವಕಾಶ ನೀಡಬಾರದೆಂಬುದು ಸಹ ಬಾಜಪದ ನಿರ್ದಾರದ ಹಿಂದಿರುವ ಕಾರಣಗಳಲ್ಲಿ ಒಂದಾಗಿದೆ.

6. ಪಾಟೀದಾರರ ಮುಷ್ಕರದ ನಂತರ ಗುಜರಾತಿನ ಮುಖ್ಯಮಂತ್ರಿಗಳಾಗಿದ್ದ ಶ್ರೀಮತಿ ಆನಂದಿ ಬೆನ್ ಅವರನ್ನು ಬದಲಿಸಿ ಶ್ರೀ ರೂಪಾನಿಯವರನ್ನು ಆ ಸ್ಥಾನಕ್ಕೆ ತಂದು ಕೂರಿಸಲಾಯಿತು. ಶ್ರೀ ರೂಪಾಣಿಯವರು ಮೇಲ್ವರ್ಗದ ಜೈನ ಸಮುದಾಯಕ್ಕೆ ಸೇರಿದವರಾಗಿದ್ದು ಮುಂದಿನ ಚುನವಣೆಯಲ್ಲಿ ಜಾತಿ ಸಮೀಕರಣದ ಪ್ರಕಾರ ಮತಗಳನ್ನು ತಂದು ಕೊಡುವಂತಹ ವ್ಯಕ್ತಿಯೇನಲ್ಲ. ಹೀಗಾಗಿ ರಾಜ್ಯದ ಜನಸಂಖ್ಯೆ ಶೇಕಡಾ 45 ರಷ್ಟಿರುವ ಹಿಂದುಳಿದ ವರ್ಗಗಳ ಒಬ್ಬರನ್ನು ಮುಖ್ಯಮಂತ್ರಿ ಗಾದಿಯಲ್ಲಿ ಕೂರಿಸಿ ಹಿಂದುಳಿದ ವರ್ಗಗಳ ಮತ ಸೆಳೆಯುವುದು ಸಹ ಈ ತಂತ್ರದ ಇನ್ನೊಂದು ಭಾಗವಾಗಿದೆ. ಕಳೆದ ವರ್ಷ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಬಾಜಪದ ಕೈ ಹಿಡಿದ ಮತದಾರರು ಗ್ರಾಮೀಣ ಭಾಗದಲ್ಲಿ ಕಾಂಗ್ರೇಸ್ಸಿಗೆ ಅಚ್ಚರಿಯ ಜಯ ನೀಡಿದ್ದರು. ಇದರಿಂದ ತನ್ನ ತೆಕ್ಕೆಯಿಂದ ಕೈಜಾರುತ್ತಿರುವ ಗ್ರಾಮೀಣ ಪ್ರದೇಶದ ಮೇಲಿನ ಹಿಡಿತವನ್ನು ಮರಳಿ ಪಡೆಯಲು ಹಿಂದುಳಿದ ವರ್ಗದ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿಸಿ ಮತ ಸೆಳೆಯಲು ಸಹ ಅದು ನಿರ್ದರಿಸಿದೆ.

ಹೀಗೆ ಅವಧಿಗೆ ಮುನ್ನವೇ ಚುನಾವಣೆ ನಡೆಸುವ ಬಾಜಪದ ತೀರ್ಮಾನಕ್ಕೆ ಇಂಬು ಕೊಡುವಂತೆ ಗುಜರಾತಿನ ರಾಜಕೀಯ ವಲಯದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸಿನಿಂದ ನಡೆಯುತ್ತವೆ.

1. ಕಳೆದ ಎರಡು ತಿಂಗಳ ಅವಧಿಯಲ್ಲಿ ಪ್ರದಾನಮಂತ್ರಿಗಳಾದ ಶ್ರೀ ನರೇಂದ್ರಮೋದಿಯವರು ಗುಜರಾತಿಗೆ ನಾಲ್ಕು ಬಾರಿ ಬೇಟಿ ನೀಡಿದ್ದಾರೆ. ಅದರಲ್ಲು ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿ ಆಗಬಹುದಾದ ಹಿಂದುಳಿದ ವರ್ಗಗಳ ನಾಯಕ ಶ್ರೀ ಶಂಕರ ಚೌದರಿಯವರ ತವರು ಪ್ರದೇಶವಾದ ಬನಸ್ಕಾತಕ್ಕೆ ಬೇಟಿ ನೀಡಿ ಹಿಂದುಳಿದ ವರ್ಗಗಳ ನಾಯಕರೊಬ್ಬರನ್ನು ಮುಖ್ಯಮಂತ್ರಿಗಾದಿಗೆ ತರುವ ಮಾತಾಡಿದ್ದಾರೆ.

2. ಇದರ ಪರಿಣಾಮವಾಗಿ ಕಾಂಗ್ರೆಸ್ಸಿನಲ್ಲು ತುರುಸಿನ ಚಟುವಟಿಕೆಗಳು ಆರಂಭಗೊಂಡಿದ್ದು, ಕಳೆದ ವಾರ ಕಾಂಗ್ರೆಸ್ ಉಪಾದ್ಯಕ್ಷರಾದ ಶ್ರೀ ರಾಹುಲ್ ಗಾಂದಿಯವರು ಸಹ ಗುಜರಾತಿಗೆ ಬೇಟಿ ನೀಡಿದ್ದಾರೆ. ಮುಂದಿನ ತಿಂಗಳು ಅರವಿಂದ್ ಕೇಜ್ರೀವಾಲ್ ಮತ್ತು ನಿತೀಶ್ ಕುಮಾರ್ ಸಹ ರಾಜ್ಯಕ್ಕೆ ಬೇಟಿ ನೀಡಲಿದ್ದಾರೆ.

ಇವೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿದರೆ ಗುಜರಾತ್ ವಿದಾನಸಭೆಗೆ ಅವಧಿಗೆ ಮುನ್ನವೇ ಚುನಾವಣೆಗಳು ನಡೆಯುವುದು ಖಚಿತವಾದಂತಿದೆ. ಚುನಾವಣಾ ವ್ಯವಸ್ಥೆಯ ಸುಧಾರಣೆಯ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ರಾಜಕೀಯ ಪಕ್ಷಗಳು ಚುನಾವಣಾ ಆಯೋಗದ ಅಸ್ಥಿತ್ವವನ್ನೇ ಅಲ್ಲಗೆಳೆಯುವಂತೆ ತಮಗೆ ಬೇಕಾದಾಗ ಚುನಾವಣೆಗಳನ್ನು ನಡೆಸಿ ಅಧಿಕಾರ ಗಳಿಸಿಕೊಳ್ಳುವ, ಉಳಿಸಿಕೊಳ್ಳುವ ಮಾರ್ಗ ಹಿಡಿದಿದ್ದಾರೆ. ಇದರಿಂದಾಗಿ ನಮ್ಮ ಚುನಾವಣಾ ವ್ಯವಸ್ಥೆಯ ನಿಗದಿತ ವೇಳಾ ಪಟ್ಟಿಯಲ್ಲಿ ಏರುಪೇರುಗಳಾಗುವುದು ಮಾಮೂಲಿಯಾಗಿದೆ. ಪೂರ್ವ ನಿಗದಿತ ಸಮಯದಲ್ಲಿ ಮಾತ್ರ ಚುನಾವಣೆ ನಡೆಸುವ ನಿರ್ದಾರ ತೆಗೆದುಕೊಳ್ಳುವಂತಹ ಪೂರ್ಣ ಪ್ರಮಾಣದ ಅಧಿಕಾರ ಎಲ್ಲಿಯವರೆಗು ಚುನಾವಣಾ ಆಯೋಗಕ್ಕೆ ದೊರೆಯುವುದಿಲ್ಲವೊ ಅಲ್ಲಿಯವರೆಗು ರಾಜಕೀಯ ಪಕ್ಷಗಳು ತಮ್ಮ ಇಚ್ಚಾನುಸಾರವಾಗಿ ನಡೆದುಕೊಳ್ಳುವುದು ನಿಲ್ಲುವುದಿಲ್ಲ. 

No comments:

Post a Comment