Nov 11, 2016

ದಲಿತಶಕ್ತಿಯ ವಿರುದ್ದ ಒಗ್ಗಟ್ಟಾಗುತ್ತಿರುವ ಉತ್ತರಪ್ರದೇಶದ ರಾಜಕೀಯ ಪಕ್ಷಗಳು.

ku sa madhusudhan
ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಒಬ್ಬ ದಲಿತ ನಾಯಕಿ ಮಾಯಾವತಿಯವರನ್ನು ಮತ್ತು ದಲಿತರ ರಾಜಕೀಯ ದ್ವನಿಯಾದ ಬಹುಜನ ಪಕ್ಷವನ್ನು ಮುಗಿಸುವ ಒಂದು ಷಡ್ಯಂತ್ರ ಉತ್ತರ ಪ್ರದೇಶದಲ್ಲಿ ಸದ್ದಿರದೆ ನಡೆಯುತ್ತಿದೆ. ಇನ್ನೇನು ಮುಂದಿನ ವರ್ಷದ ಪೂರ್ವಾರ್ದದಲ್ಲಿ ನಡೆಯಲಿರುವ ಚುನಾವಣೆಗಳಲ್ಲಿ ಬಹುಜನ ಪಕ್ಷವನ್ನು ಸೋಲಿಸುವ ಮೂಲಕ ದಲಿತರ ದನಿಯನ್ನು ಹತ್ತಿಕ್ಕುವ ರಾಜಕೀಯ ಚದುರಂಗದಾಟ ಈಗಾಗಲೇ ಶುರುವಾಗಿದೆ. ಕಳೆದ ಬಾರಿ ಚುನಾವಣೆಯಲ್ಲಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದ ಮುಸ್ಲಿಂ ಸಮುದಾಯ ತದನಂತರ ನಡೆದ ಕೆಲವು ಕೋಮುಗಲಭೆಗಳಲ್ಲಿ ಸಮಾಜವಾದಿ ಪಕ್ಷ ತೆಗೆದುಕೊಂಡ ನಿರ್ದಾರಗಳಿಂದ ಅಸಮಾದಾನಗೊಂಡು ಅದರಿಂದ ದೂರ ಸರಿಯುತ್ತಿದೆಯೆಂಬ ಬಾವನೆ ಸಾರ್ವಜನಿಕರಲ್ಲಿ ಮೂಡಿತ್ತು. ಇದರ ಲಾಭ ಪಡೆಯಲು ಹೊರಟ ಬಹುಜನ ಪಕ್ಷ ಈಗಾಗಲೇ ತಾನು ಸಿದ್ದಪಡಿಸಿಕೊಂಡಿರುವ ದಲಿತ ಮತ್ತು ಬ್ರಾಹ್ಮಣ ಮತಬ್ಯಾಂಕಿನ ಜೊತೆಗೆ ಮುಸ್ಲಿಂ ಸಮುದಾಯದ ಬೆಂಬಲ ಪಡೆಯಲು ನಿರ್ದರಿಸಿ ಪಶ್ಚಿಮ ಉತ್ತರಪ್ರದೇಶದ ಸುಮಾರು 125ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೇಟು ನೀಡಲು ನಿರ್ದರಿಸಿತು. ಇದರ ಜೊತೆಗೆ ಯಾವುದೇ ಪ್ರಚಾರವಿರದೆ ದಲಿತರ ಮತ್ತು ಮುಸ್ಲಿಮರ ಗುಪ್ತ ಸಭೆಗಳನ್ನು ನಡೆಸುತ್ತ ಆ ಎರಡೂ ಸಮುದಾಯಗಳನ್ನು ಒಂದೇ ಕೊಡೆಯ ಅಡಿಯಲ್ಲಿ ತರುವ ಪ್ರಯತ್ನ ನಡೆಸುತ್ತಿತ್ತು. ಆದರೆ ಈ ವಿಚಾರದಲ್ಲಿ ಅದಕ್ಕೆ ಎರಡು ರೀತಿಯ ಸಮಸ್ಯೆಗಳು ಎದುರಾದವು.. ಮೊದಲನೆಯದು ಮುಸ್ಲಿಮರನ್ನು ಹೆಚ್ಚು ಓಲೈಸಿದಷ್ಟೂ ಬ್ರಾಹ್ಮಣ ಮತದಾರರು ಅದರಿಂದ ದೂರ ಸರಿಯುತ್ತ ಹೋಗುತ್ತಾರೆಂಬ ಭಯ ಒಂದೆಡೆಯಾದರೆ, ಇನ್ನೊಂದೆಡೆ ಮುಸ್ಲಿಂ ಸಮುದಾಯದ ಶ್ರೀಮಂತ ವರ್ಗ ಇವತ್ತಿಗೂ ಸಮಾಜವಾದಿ ಪಕ್ಷದ ಪರವೇ ನಿಂತಿರುವುದಾಗಿದೆ. ರಾಜ್ಯದ ಬಹುತೇಕ ಮಸೀದಿ, ಮದರಸ ಮತ್ತು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳನ್ನು ನಡೆಸುವ ಆ ವರ್ಗ ಬಡ ಮತ್ತು ಕೆಳ ಮುಸ್ಲಿಂ ಸಮುದಾಯವನ್ನು ರಾಜಕೀಯವಾಗಿ ನಿರ್ದೇಶಿಸುವ ಮತ್ತು ನಿಯಂತ್ರಿಸುವ ಶಕ್ತಿಯನ್ನು ಹೊಂದಿದ್ದು, ಇದು ಸಹ ಬಹುಜನ ಪಕ್ಷಕ್ಕೆ ವಿರೋಧವಾಗಿ ಹೋಗಬಹುದಾಗಿದೆ. ಇಷ್ಟಲ್ಲದೆ ಕಾಂಗ್ರೆಸ್ ಪಕ್ಷ ಪ್ರಶಾಂತ್ ಕಿಶೋರ್ ಸಲಹೆಯಂತೆ ಬ್ರಾಹ್ಮಣ ಸಮುದಾಯದ ಶ್ರೀಮತಿ ಶೀಲಾ ದೀಕ್ಷಿತರನ್ನು ಮುಖ್ಯಮಂತ್ರಿಯ ಅಭ್ಯರ್ಥಿಯಾಗಿ ಘೋಷಿಸಿ ಬ್ರಾಹ್ಮಣ ಮತಗಳನ್ನು ಸೆಳೆಯುವ ಪ್ರಯತ್ನದಲ್ಲಿದ್ದರೆ, ಇದಕ್ಕೆ ಪ್ರತಿಯಾಗಿ ಬಾಜಪ ಕಾಂಗ್ರೆಸ್ಸಿನ ಹಿರಿಯ ನಾಯಕಿಯಾಗಿದ್ದ ಬ್ರಾಹ್ಮಣ ಸಮುದಾಯದ ರೀಟಾ ಬಹುಗುಣರವರನ್ನು ತನ್ನ ಪಕ್ಷಕ್ಕೆ ಸೇರಿಸಿಕೊಳ್ಳುವುದರ ಮೂಲಕ ಬಹುಜನ ಪಕ್ಷದ ಆಸೆಗೆ ಅದೂ ಕೂಡ ತಣ್ಣೀರೆರಚಿದೆ. ಹೀಗೆ ಶೇಕಡಾ ಹತ್ತರಷ್ಟಿರುವ ಬ್ರಾಹ್ಮಣ ಮತಗಳು ಒಟ್ಟಾಗಿ ಬಹುಜನ ಪಕ್ಷಕ್ಕೆ ಹೋಗುವ ಸಾದ್ಯತೆ ಕಡಿಮೆಯಾಗಿದೆ. ಅದೇ ರೀತಿ ಮುಸ್ಲಿಂ ಮತಗಳು ಸಹ ಸಮಾಜವಾದಿ ಪಕ್ಷ ಮತ್ತು ಬಹುಜನ ಪಕ್ಷಗಳ ನಡುವೆ ಹಂಚಿಹೋಗುವುದರಿಂದ ಅಲ್ಲಿಯೂ ಬಹುಜನಪಕ್ಷಕ್ಕೆ ನಷ್ಟವಾಗುವ ಸಂಭವವಿದೆ.

ಈ ನಡುವೆ ಆರು ವರ್ಷಗಳ ಅಮಾನತ್ತಿನ ನಂತರ ಸಮಾಜವಾದಿ ಪಕ್ಷಕ್ಕೆ ಹಿಂದಿರುಗಿರುವ ಅಮರ್ ಸಿಂಗ್ ಸಮಾಜವಾದಿ ಪಕ್ಷದಲ್ಲಿ ಬಿರುಗಾಳಿಯನ್ನೆಬ್ಬಿಸಿ, ಮುಲಾಯಂ ಕುಟುಂಬದಲ್ಲಿ ಆಂತರೀಕ ಕಲಹ ಉಂಟಾಗಲು ಕಾರಣರಾಗಿದ್ದಾರೆ. ಪಕ್ಷಕ್ಕೆ ಮರಳಿದ ಅಮರ್ ಸಿಂಗ್ ಮುಲಾಯಂ ಸಿಂಗ್ ಅವರ ಸಹೋದರ ಶಿವಪಾಲ್ ಅವರನ್ನು ಅಖಿಲೇಶರ ವಿರುದ್ದ ಎತ್ತಿಕಟ್ಟಿ ಇಡೀ ಕುಟುಂಬವನ್ನು ಒಡೆಯುವ ಪ್ರಯತ್ನದಲ್ಲಿದ್ದಾರೆ. ಇದರಿಂದಾಗಿ ಉತ್ತರಪ್ರದೇಶದ ಯುವಕರಿಗೆ ಅಚ್ಚುಮೆಚ್ಚಾಗಿರುವ ಅಖಿಲೇಶರ ವರ್ಚಸ್ಸು ಹೆಚ್ಚುತ್ತ ಹಳೆಯ ಹುಲಿ ಮುಲಾಯಮರ ವರ್ಚಸ್ಸಿಗೆ ಕುಂದು ಬರುತ್ತಿದೆ. ಒಂದು ಮೂಲದ ಪ್ರಕಾರ ಮುಲಾಯಮರನ್ನು ಬಾಜಪದ ಸನಿಹಕ್ಕೆ ಸೆಳೆಯಲು ಅಮರ್ ಸಿಂಗ್ ಇಂತಹ ಕೃತ್ಯ ನಡೆಸಿದ್ದಾರೆಂದು ಹೇಳಲಾಗುತ್ತಿದೆ. ಯಾಕೆಂದರೆ ಸಮಾಜವಾದಿ ಪಕ್ಷದ ಒಳಜಗಳ ಪ್ರಾದಾನ್ಯಕ್ಕೆ ಬರುವುದರಿಂದ ಬಹುಜನ ಪಕ್ಷದ ಬಗ್ಗೆ ಜನರ ಗಮನ ಕಡಿಮೆಯಾಗುವ ಮತ್ತು ಈ ಸಮಯದಲ್ಲಿ ತನ್ನ ಹಿಂದೂ ಮತಬ್ಯಾಂಕನ್ನು ಗಟ್ಟಿಗೊಳಿಸಿಕೊಳ್ಳುವ ದಿಸೆಯಲ್ಲಿ ಬಾಜಪ ಮುಂದುವರೆದರೆ ಮುಂದಿನ ಚುನಾವಣೆಯ ಹೊತ್ತಿಗೆ ಬಾಜಪ ಮತ್ತು ಸಮಾಜವಾದಿ ಪಕ್ಷದ ನಡುವೆಯೇ ಸ್ಪರ್ದೆಯಿರುವುದೆಂಬ ಬಾವನೆಯನ್ನು ಜನರಲ್ಲಿ ಬಿತ್ತಿದರೆ ಸಹಜವಾಗಿ ಜನ ಬಹುಜನ ಪಕ್ಷದ ಕಡೆ ಮುಖ ಮಾಡುವುದಿಲ್ಲ. ಮೊದಲೇ ರಾಜಕೀಯ ದಲ್ಲಾಳಿಯೆಂದು ಕರೆಸಿಕೊಳ್ಳುವ ಅಮರಸಿಂಗರು ಇಂತಹ ಚಾಣಾಕ್ಷ್ಯ ನಡೆಗಳನ್ನು ನಡೆಸುವುದಿಲ್ಲ ಎಂದು ಹೇಳಲಾಗುವುದಿಲ್ಲ.

ಒಟ್ಟಿನಲ್ಲಿ ಇಂತಹ ತಂತ್ರಗಾರಿಕೆಗಳಿಂದಾಗಿ ಅಂತಿಮವಾಗಿ ಬಹುಜನ ಪಕ್ಷಕ್ಕೆ ಹೊಡೆತ ಬೀಳುವುದು ವಾಸ್ತವದ ಸಂಗತಿಯಾಗಿದೆ. ಆದರೆ ಎಂತಹ ಸನ್ನಿವೇಶದಲ್ಲಿಯೂ ತನ್ನ ಎದೆಗಾರಿಕೆಯಿಂದ ಪ್ರತಿತಂತ್ರವನ್ನು ಹೂಡಬಲ್ಲ ಮಾಯಾವತಿಯವರು ಅಷ್ಟು ಸುಲಭಕ್ಕೆ ಮಣಿಯಲಾರರೆಂಬ ಭರವಸೆಯಿಂದ ಬಹುಜನ ಪಕ್ಷದ ಕಾರ್ಯಕರ್ತರು ಕಾಯುತ್ತಿದ್ದಾರೆ. ಈ ರೀತಿಯಾಗಿ ಒಬ್ಬ ದಲಿತ ನಾಯಕಿಯನ್ನು, ದಲಿತ ದನಿಯಾದ ಬಹುಜನ ಪಕ್ಷವನ್ನು ಮುಗಿಸಲು ಬಲಾಢ್ಯ ರಾಜಕೀಯ ಶಕ್ತಿಗಳು ಪರೋಕ್ಷವಾಗಿ ಒಂದಾಗಿ ಕೆಲಸ ಮಾಡುತ್ತಿವೆ.

No comments:

Post a Comment