Nov 9, 2016

ಮಾಹಿತಿ ಹಕ್ಕು ಮತ್ತು ರಾಜಕೀಯ ಪಕ್ಷಗಳ ಜಾಣಮೌನ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಇವತ್ತು ಮಾಹಿತಿ ಹಕ್ಕು ಕಾಯಿದೆ ದೇಶದಾದ್ಯಂತ ಸಂಚಲನ ಮೂಡಿಸಿದೆ. ಒಂದು ದಶಕದ ಹಿಂದೆ ಶಾಸನವಾಗಿ ಜಾರಿಗೆ ಬಂದಮಾಹಿತಿ ಹಕ್ಕು ಕಾಯಿದೆಯಡಿ ಕೇಂದ್ರ ಹಾಗು ಹಲವು ರಾಜ್ಯ ಸರಕಾರಗಳ ಭ್ರಷ್ಟತೆಯ ಹಲವು ಪ್ರಕರಣಗಳು ಬಯಲಾಗಿವೆ,ಆಗುತ್ತಿವೆ.ಅದರಲ್ಲೂ ಪತ್ರಕರ್ತರುಗಳ ಹಾಗು ನಮ್ಮವರೇ ಆದ ಭ್ರಷ್ಟಾಚಾರದ ವಿರುದ್ದ ಸತತವಾಗಿ ಹೋರಾಡುತ್ತಿರುವ ಶ್ರೀಯುತ ಹಿರೇಮಠರಂತವರ ಕೈಲಿ ಸಿಕ್ಕ ಈ ಆಯುಧ ಬಹುತೇಕ ಎಲ್ಲ ರಾಜಕೀಯ ಪಕ್ಷಗಳ ನಿದ್ದೆಗೆಡಿಸಿದೆ.. ದೇಶದಾದ್ಯಂತ ಇರುವ ನೂರಾರು ಮಾಹಿತಿ ಹಕ್ಕು ಕಾರ್ಯಕರ್ತರು ಈ ಕಾಯಿದೆಯನ್ನು ಬಳಸಿ ಜನರಲ್ಲಿ ಭ್ರಷ್ಟಾಚಾರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಮಾಹಿತಿ ಹಕ್ಕು ಹೋರಾಟಗಾರರೆಂಬ ಹೊಸದೊಂದು ಸಮುದಾಯವೇ ಸೃಷ್ಠಿಯಾಗಿದೆ. ಯಾಕಾದರೂ ಈ ಕಾಯಿದೆಯನ್ನು ಜಾರಿಗೆ ತಂದೆವೋ ಎಂದು ರಾಜಕಾರಣಿಗಳು ಇವತ್ತು ಪರಿತಪಿಸುತ್ತಿದ್ದರೆ ಅದರಲ್ಲಿ ಆಶ್ಚರ್ಯವೇನಿಲ್ಲ. ಇದರ ಜೊತೆಗೆ ಕೆಲವು ಅಡ್ಡ ಪರಿಣಾಮಗಳೂ ಈ ಕಾಯಿದೆಯಿಂದಾಗಿವೆ. ಸಮಾಜಸೇವಕರ ಮುಖವಾಡ ಹಾಕಿಕೊಂಡ ಕೆಲವರು ಈ ಕಾಯ್ದೆಯನ್ನು ಬಳಸಿಕೊಂಡು ಪಡೆದ ಅಧಿಕೃತ ಮಾಹಿತಿಗಳನ್ನೇ ಆಧಾರವಾಗಿಟ್ಟುಕೊಂಡು ಸರಕಾರದ ಅಧಿಕಾರಿಗಳನ್ನು ಬ್ಲಾಕ್ ಮೇಲ್ ಮಾಡುತ್ತ ದುಡ್ಡು ಮಾಡುವ ದಂದೆಯೊಂದನ್ನು ಸಹ ಶುರು ಮಾಡಿರುವುದು ಕೆಲವೆಡೆ ಕಂಡು ಬರುತ್ತಿದೆ. ಇಂತಹ ಕೆಲವು ದೌರ್ಬಲ್ಯಗಳ ಹೊರತಾಗಿಯೂ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ನಿಟ್ಟಿನಲ್ಲಿ ಈ ಕಾಯಿದೆ ಸ್ವಲ್ಪ ಮಟ್ಟಿಗಾದರು ಧನಾತ್ಮಕವಾಗಿ ಕಾರ್ಯನಿರ್ವಹಿಸುತ್ತಿದೆ.


ಆದರೆ ದುರಂತವೆಂದರೆ ಮಾಹಿತಿ ಹಕ್ಕು ಕಾಯಿದೆ ದೇಶದ ಎಲ್ಲ ಕ್ಷೇತ್ರಗಳಿಗೂ ಅನ್ವಯವಾಗದೇ ಇರುವುದು. ಹೀಗಾಗಿ ಈ ಕಾಯಿದೆಯ ಮೂಲ ಆಶಯವಾದ ಎಲ್ಲರಿಗೂ, ಎಲ್ಲ ಮಾಹಿತಿ ಎಂಬ ಘೋಷಣೆ ಹುಸಿಯಾಗಿದೆ. ಹೀಗೆ ಮಾಹಿತಿ ಹಕ್ಕು ಕಾನೂನು ಅನ್ವಯವಾಗದ ಕ್ಷೇತ್ರಗಳ ಬಗ್ಗೆ ಸ್ವಲ್ಪ ನೋಡೋಣ:

ಸಾರ್ವಜನಿಕ ಹಣದಲ್ಲಿ ನಡೆಯುವ ಎನ್.ಜಿ.ಒ.ಗಳನ್ನು, ಖಾಸಗಿ ಟ್ರಸ್ಟ್ ಗಳನ್ನು, ಶಿಕ್ಷಣ ಸಂಸ್ಥೆಗಳನ್ನು ಹಾಗು ಸರಕಾರದ ಹಿಡಿತದಲ್ಲಿರದ ಕ್ರೀಡಾ ಪ್ರಾಧಿಕಾರಗಳನ್ನು, ಬಂಡವಾಳಶಾಹಿ ಮಾಧ್ಯಮಗಳನ್ನು ಈ ಕಾಯಿದೆಯ ವ್ಯಾಪ್ತಿಗೆ ಸೇರಿಸದೆ ಸಾರ್ವಜನಿಕರ ಮಾಹಿತಿ ಪಡೆಯುವ ಹಕ್ಕನ್ನು ನಿರಾಕರಿಸಲಾಗಿದೆ.

ಜೊತೆಗೆ ನಮ್ಮ ದೇಶದ ಆರ್ಥಿಕ ನೀತಿಯನ್ನೇ ನಿರ್ದೇಶಿಸಬಲ್ಲಂತಹ ಮಟ್ಟಕ್ಕೆ ಬೆಳೆದು ನಿಂತ ಖಾಸಗಿ ಕಾರ್ಪೋರೇಟ್ ಕಂಪನಿಗಳನ್ನು ಸಹ ಮಾಹಿತಿ ಹಕ್ಕು ಕಾನೂನಿನ ವ್ಯಾಪ್ತಿಯಿಂದ ಹೊರಗಿಟ್ಟು ಈ ನಾಡಿನ ಜನರಿಗೆ ಮೋಸ ಮಾಡಲಾಗಿದೆ.

ಇಷ್ಟಲ್ಲದೆ ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಿಂದ ತಪ್ಪಿಸಿಕೊಳ್ಳಲು ನಮ್ಮ ಸರಕಾರಗಳು ವಿವಿಧ ರೀತಿಯ ತಂತ್ರಗಳನ್ನು ಸಹ ಅನುಸರಿಸುತ್ತಿವೆ. ಅದರ ಒಂದು ಭಾಗವಾಗಿ ಇವತ್ತು ಸರಕಾರಗಳು ಸಾರ್ವಜನಿಕ ಮತ್ತು ಖಾಸಗಿ ಸಹಬಾಗಿತ್ವ ಹೆಸರಿನಡಿಯಲ್ಲಿ ಅನೇಕ ಯೋಜನೆಗಳನ್ನು ಜಾರಿಗೆ ತರಲು ಶುರು ಮಾಡಿವೆ. ಹೀಗಾಗಿ ಸರಕಾರ ಸಾರ್ವಜನಿಕರ ಕೋಟ್ಯಾಂತರ ರೂಪಾಯಿಗಳನ್ನು ಮತ್ತು ರೈತರ ಭೂಮಿಯನ್ನು ಟೋಲ್ ರಸ್ತೆಗಳ ನಿರ್ಮಾಣಕ್ಕೆ, ಆಸ್ಪತ್ರೆ-ವಿಮಾನ ನಿಲ್ದಾಣ ವಿದ್ಯುತ್ ಯೋಜನೆಗಳ ನಿರ್ಮಾಣಕ್ಕೆಂದು ಖಾಸಗಿ ಸಂಸ್ಥೆಗಳಿಗೆ ನೀಡುತ್ತಿದೆ. ಮಾಹಿತಿ ಹಕ್ಕು ಕಾಯಿದೆ ಅನ್ವಯವಾಗದ ಈ ಸಂಸ್ಥೆಗಳಲ್ಲಿ ನಡೆಯುವ ಬ್ರಷ್ಟಾಚಾರದ ಲೆಕ್ಕ ಯಾರಿಗೂ ಸಿಗುತ್ತಿಲ್ಲ. ಈ ಯೋಜನೆಗಳ ಬಗೆಗಿನ ವಿವರಗಳನ್ನಾಗಲಿ, ಹಣಕಾಸಿನ ದಾಖಲೆಗಳನ್ನಾಗಲಿ ಪಡೆಯುವುದು ಅಸಾದ್ಯವಾಗಿರುವುದರಿಂದ ಸಾರ್ವಜನಿಕರ ಕೋಟ್ಯಾಂತರ ರೂಪಾಯಿಗಳಷ್ಟು ಹಣ ದುರುಪಯೋಗವಾಗುತ್ತಿದೆ.

ಇದೆಲ್ಲಕ್ಕೂ ಕಳಸವಿಟ್ಟಂತೆ ನಮ್ಮ ರಾಜಕೀಯ ಪಕ್ಷಗಳು ಸಹ ಸಾರ್ವಜನಿಕರ ಯಾವುದೇ ಕಟ್ಟುಪಾಡುಗಳಿಗೂ ಒಳಪಡದೇ , ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಿಂದ ಹೊರಗುಳಿದಿವೆ. ಕೇಂದ್ರ ಮಾಹಿತಿ ಹಕ್ಕು ಆಯೋಗವು ರಾಜಕೀಯ ಪಕ್ಷಗಳು ಸಹ ಸಾರ್ವಜನಿಕರು ಪ್ರತಿನಿಧಿಸುವ ಸಂಸ್ಥೆಗಳಾಗಿರುವುದರಿಂದ ಅವೂ ಸಹ ನಾಗರೀಕರು ಬಯಸಿದಾಗ ಮಾಹಿತಿ ನೀಡುವುದು ಅಗತ್ಯವೆಂದು ಈ ಕಾನೂನನ್ನು ವ್ಯಾಖ್ಯಾನಿಸಿತ್ತು. ಆದರೆ ಈ ಬಗ್ಗೆ ಯಾವ ರಾಜಕೀಯ ಪಕ್ಷಗಳು ಕೂಡ ಗಂಬೀರವಾಗಿ ಸ್ಪಂದಿಸದೆ ಹೋದವು. ಮತ್ತು ಆಯೋಗದ ವ್ಯಾಖ್ಯೆಯನ್ನು ತಿರಸ್ಕರಿಸಿದವು. ಆದರೆ ತಮ್ಮ ಬುಡಕ್ಕೆ ಬಂದಾಗ ಎಲ್ಲ ರಾಜಕೀಯ ಪಕ್ಷಗಳು ಸಹ ಒಂದಾಗಿ ಜನರನ್ನು ಮೋಸಗೊಳಿಸಲು ಸಿದ್ದವಾಗಿಬಿಡುತ್ತವೆ. ಹೀಗಾಗಿಯೇ ಅವತ್ತಿನ ಯು.ಪಿ.ಎ. ಸರಕಾರ ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಿಂದ ರಾಜಕೀಯ ಪಕ್ಷಗಳನ್ನು ಹೊರಗಿಡಲು ಸದರಿ ಕಾಯಿದೆಗೆ ತಿದ್ದುಪಡಿಯೊಂದನ್ನು ಸಂಸತ್ತಿನಲ್ಲಿ ಮಂಡಿಸಿತು. ಇದರ ಬಗ್ಗೆ ವರದಿಯೊಂದನ್ನು ನೀಡಲು ಒಂದು ಸ್ಟ್ಯಾಂಡಿಂಗ್ ಕಮಿಟಿಯನ್ನು ಸಹ ರಚಿಸಲಾಗಿ, ಆ ಸಮಿತಿಯು ಸರಕಾರ ಮಂಡಿಸಿರುವ ತಿದ್ದುಪಡಿ ಮಸೂದೆ ಸರಿಯಾಗಿದ್ದು ರಾಜಕೀಯ ಪಕ್ಷಗಳನ್ನು ಈ ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡುವುದು ಸೂಕ್ತವೆಂದು ಹೇಳಿತು. ಈ ತಿದ್ದುಪಡಿಯ ವಿರುದ್ದ ಸಾರ್ವಜನಿಕ ಹಿತಾಸಕ್ತಿಯ ಮೊಕದ್ದಮೆಯೊಂದನ್ನು ಸುಪ್ರೀಂ ಕೋರ್ಟಿನಲ್ಲಿ ಹೂಡಿದಾಗ ಸರಕಾರ ನ್ಯಾಯಾಲಯಕ್ಕೆ ಒಂದು ಅಫಿಡೆವಿಟ್ ಸಲ್ಲಿಸಿತು. ಅದರ ಪ್ರಕಾರ ರಾಜಕೀಯ ಪಕ್ಷಗಳನ್ನು ಸಾರ್ವಜನಿಕ ಸಂಸ್ಥೆಗಳೆಂದು ಮಾಹಿತಿ ಹಕ್ಕು ಆಯೋಗ ವ್ಯಾಖ್ಯಾನಿಸಿರುವುದೇ ತಪ್ಪು ನಡೆಯಾಗಿದ್ದು, ಈ ಕಾಯಿದೆಯಿಂದಾಗಿ ಪಕ್ಷಗಳ ಆಂತರಿಕ ಚಟುವಟಿಕೆಗಳು ಸುಗಮವಾಗಿ ನಡೆಯಲು ತೊಂದರೆಯಾಗುತ್ತದೆ. ಇಷ್ಟಲ್ಲದೆ ರಾಜಕೀಯ ವಿರೋಧಿಗಳು ಸದರಿ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಂಡು ಪಕ್ಷಗಳ ರಾಜಕೀಯ ಚಟುವಟಿಕೆಗಳಿಗೆ ತೊಂದರೆ ಉಂಟು ಮಾಡುವ ಸಾದ್ಯತೆ ಇದೆಯೆಂದು ವಾದಿಸಿತು. ಸುದೀರ್ಘ ವಾದವಿವಾದಗಳ ನಂತರ ನ್ಯಾಯಮೂರ್ತಿ ಶ್ರೀ ಹೆಚ್.ಎಲ್.ದತ್ತುರವರು ರಾಜಕೀಯ ಪಕ್ಷಗಳು ಸಾರ್ವಜನಿಕ ಸಂಸ್ಥೆಗಳಾಗಿರಲು ಸಾದ್ಯವಿಲ್ಲ ಆದ್ದರಿಂದ ಅವುಗಳು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ಒಳಪಡಲಾರವೆಂಬ ತೀರ್ಪು ನೀಡುತ್ತ, ಹಾಗೊಂದು ವೇಳೆ ರಾಜಕೀಯ ಪಕ್ಷಗಳ ಹಣಕಾಸಿನ ವ್ಯವಹಾರಗಳ ಬಗ್ಗೆ ಅನುಮಾನಗಳಿದ್ದರೆ ಆದಾಯ ತೆರಿಗೆ ಇಲಾಖೆ ಮತ್ತು ಚುನಾವಣಾ ಆಯೋಗಗಳು ಕ್ರಮ ತೆಗೆದುಕೊಳ್ಳಬಹುದಾಗಿದೆ ಎಂದರು. ಇಷ್ಟೆಲ್ಲ ಆಗಿ ಸಂಸತ್ತಿನಲ್ಲಿ ತಿದ್ದುಪಡಿ ಮಸೂದೆ ಅಂಗೀಕಾರವಾಗುವಷ್ಟರಲ್ಲಿ ಸಂಸತ್ತು ವಿಸರ್ಜನೆಯಾಗಿದ್ದರಿಂದ ಸದರಿ ತಿದ್ದುಪಡಿ ಮಸೂದೆಯ ಕಾಲಮಿತಿ ಮುಕ್ತಾಯವಾಗಿತ್ತು. ಹೀಗಾಗಿ ಇವತ್ತಿಗೂ ನಮ್ಮ ರಾಜಕೀಯ ಪಕ್ಷಗಳು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಯಿಂದ ಹೊರಗಿಡಲ್ಪಟ್ಟು ಸಾರ್ವಜನಿಕ ಹೊಣೆಗಾರಿಕೆಯಿಂದ ನುಣುಚಿಕೊಂಡಿವೆ

ಪ್ರತಿ ವರ್ಷ ಹಲವು ಕಾರ್ಪೋರೇಟ್ ಕಂಪನಿಗಳು ಬಹುತೇಕ ಎಲ್ಲ ಪಕ್ಷಗಳಿಗೂ ದೇಣಿಗೆಯನ್ನು ನೀಡುತ್ತವೆ. ಕೊಡುವ ಕಂಪನಿಗಳಾಗಲಿ, ಪಡೆಯುವ ಪಕ್ಷಗಳಾಗಲಿ ಇದರ ಮಾಹಿತಿಯನ್ನು ಸಾರ್ವಜನಿಕವಾಗಿ ಹಂಚಿಕೊಳ್ಳುವುದಿಲ್ಲ. ನಮಗೆ ತಿಳಿದಿರುವಂತೆ ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಸಾವಿರಾರು ಕೋಟಿ ರೂಪಾಯಿಗಳನ್ನು ಖರ್ಚು ಮಾಡುತ್ತವೆ. ಆದರೆ ಎಲ್ಲವೂ ಗುಪ್ತ್-ಗುಪ್ತ್! ಹೀಗೆ ಎಲ್ಲ ಭ್ರಷ್ಟಾಚಾರಗಳಿಗೂ ಮೂಲವಾದ ಚುನಾವಣಾ ವೆಚ್ಚಕ್ಕೆ ಫಂಡ್ ಸಂಗ್ರಹಿಸುವ ರಾಜಕೀಯ ಪಕ್ಷಗಳನ್ನು,ಅವುಗಳಿಗೆ ಫಂಡ್ ನೀಡುವ ಉಧ್ಯಮಿಗಳನ್ನು ಮಾಹಿತಿ ಹಕ್ಕು ಕಾಯಿದೆಯ ವ್ಯಾಪ್ತಿಗೆ ತಂದರೆ ಮಾತ್ರ ಈ ಕಾಯಿದೆಯ ನಿಜ ಉದ್ದೇಶ ಸಫಲವಾಗುತ್ತದೆ.ನ್ಯಾಯಾಲಯ ಇದಕ್ಕೆ ಆದಾಯತೆರಿಗೆ ಇಲಾಖೆ ಮತ್ತು ಚುನಾವಣಾ ಆಯೋಗ ಸಕ್ರಿಯವಾಗಬೇಕೆಂದು ಹೇಳಿದರೂ ಸಹ ಅವುಗಳಿಗಿರುವ ಅಧಿಕಾರದ ಮಿತಿಯಲ್ಲಿ ರಾಜಕೀಯ ಪಕ್ಷಗಳಿಗೆ ಉದ್ಯಮಿಗಳಿಂದ ನೀಡಲ್ಪಡುವ ದೇಣಿಗೆ ರೂಪದ ಕಪ್ಪುಹಣದ ಲೆಕ್ಕವನ್ನು ಪಡೆಯಲಾಗಲಿ, ನಿಲ್ಲಿಸಲಾಗಲಿ ಸಾದ್ಯವಿಲ್ಲದಾಗಿದೆ

ದುರಂತವೆಂದರೆ ಕಾಂಗ್ರೆಸನ್ನು ಕಟುವಾಗಿ ಟೀಕಿಸುವ ಬಿ.ಜೆ.ಪಿ.ಯಾಗಲಿ, ಕೇಜ್ರೀವಾಲರಂತ ಹೋರಾಟಗಾರರಾಗಲಿ ಇದನ್ನು ಗಂಭೀರವಾಗಿ ಪರಿಗಣಿಸಿ ಈ ಬಗ್ಗೆ ಸರಕಾರವನ್ನು ಒತ್ತಾಯಿಸದ ಹಿನ್ನೆಲೆಯಲ್ಲಿ ಅವರುಗಳ ಹಿತಾಸಕ್ತಿಯೂ ಕೆಲಸ ಮಾಡುತ್ತಿದೆಯೆಂಬುದನ್ನು ನಾವು ಮರೆಯಬಾರದು. ಇವೆಲ್ಲದರ ಜೊತೆಗೆ ಭ್ರಷ್ಟಾಚಾರದ ಬಗ್ಗೆ ಮಾತಾಡುತ್ತಲೇ ಅಧಿಕಾರಕ್ಕೆ ಬಂದ ಬಾಜಪವಾಗಲಿ, ಅದರ ಪ್ರದಾನಮಂತ್ರಿಯವರಾದ ಶ್ರೀ ನರೇಂದ್ರ ಮೋದಿಯವರಾಗಲಿ ಮಾಹಿತಿ ಹಕ್ಕು ಕಾಯಿದೆಯ ಅಡಿ ರಾಜಕೀಯ ಪಕ್ಷಗಳನ್ನು ತರುವತ್ತ ಮನಸ್ಸು ಮಾಡುತ್ತಿಲ್ಲ. ಇನ್ನು ವಿರೋಧಪಕ್ಷವಾದ ಕಾಂಗ್ರೆಸ್ ಈ ಬಗ್ಗೆ ಉಸಿರು ಬಿಡುತ್ತಿಲ್ಲ. ಇನ್ನುಳಿದ ಪಕ್ಷಗಳು ಸಹ ಈ ವಿಷಯದ ಬಗ್ಗೆ ಚಕಾರವೆತ್ತುತ್ತಿಲ್ಲ.

ಒಟ್ಟಿನಲ್ಲಿ ಮಾಹಿತಿ ಹಕ್ಕು ಕಾಯಿದೆ ಯಶಸ್ವಿಯಾಗಬೇಕೆಂದರೆ ಅದರ ವ್ಯಾಪ್ತಿಯನ್ನು ಹಿಗ್ಗಿಸಿ, ಅದರ ಪರಿಣಾಮವನ್ನು ಹೆಚ್ಚಿಸ ಬೇಕಾಗಿದೆ. ತಾವು ಜನಪರವೆಂದು ಘೋಷಿಸಿಕೊಳ್ಳುವ ರಾಜಕೀಯ ಪಕ್ಷಗಳು ಆಂತರಿಕ ಚಟುವಟಿಕೆಗಳಿಗೆ ತೊಂದರೆಯಾಗುತ್ತಿದೆಯೆಂಬ ನೆಪದಲ್ಲಿ ಮಾಹಿತಿ ಪಡೆಯುವ ಜನರ ಹಕ್ಕನ್ನೇ ನಿರಾಕರಿಸುತ್ತ ಬಂದಿವೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಮುಂದೊಂದು ದಿನ ನಮ್ಮ ರಾಜಕೀಯ ಪಕ್ಷಗಳು ಸದರಿ ಮಾಹಿತಿ ಹಕ್ಕು ಕಾಯಿದೆಯನ್ನೇ ರದ್ದು ಮಾಡಿದರೂ ಮಾಡಬಹುದು. ಇದನ್ನು ಸಂತೋಷವೆನ್ನಬೇಕೊ ವಿಷಾದನೀಯವೆನ್ನಬೇಕೊ ಗೊತ್ತಿಲ್ಲ: ಇಂತಹ ವಿಚಾರಗಳಲ್ಲಿ ಎಲ್ಲ ರಾಜಕೀಯ ಪಕ್ಷಗಳು ಒಮ್ಮತದಲ್ಲಿ ಕೆಲಸ ಮಾಡಬಲ್ಲವು! 

No comments:

Post a Comment