Nov 28, 2016

ಪಂಜಾಬ್ ವಿದಾನಸಭಾ ಚುನಾವಣೆ: ಪ್ರಯಾಸ ಪಡಬೇಕಿರುವ ಬಾಜಪ-ಅಕಾಲಿದಳ ಮೈತ್ರಿಕೂಟ!

ಕು.ಸ.ಮಧುಸೂದನ
ಉತ್ತರಪ್ರದೇಶದಲ್ಲಿನ 2017ರ ಚುನಾವಣೆಯ ಮೇಲೆ ಕಣ್ಣಿಟ್ಟಿರುವ ಬಾಜಪ ಇದೀಗ ತಾನು ಶಿರೋಮಣಿ ಅಕಾಲಿದಳದೊಂದಿಗೆ ಮೈತ್ರಿಮಾಡಿಕೊಂಡು ಆಡಳಿತ ನಡೆಸುತ್ತಿರುವ ಪಂಜಾಬ್ ರಾಜ್ಯವನ್ನು ಉಳಿಸಿಕೊಳ್ಳಬೇಕಾದ ಸಂಕಷ್ಟಕ್ಕೆ ಸಿಲುಕಿದೆ. ಸತತವಾಗಿ ಎರಡು ಅವಧಿಗೆ ಅಧಿಕಾರ ನಡೆಸಿರುವ ಬಾಜಪ ಮೈತ್ರಿಕೂಟಕ್ಕೆ ಈ ಬಾರಿಯ ಚುನಾವಣೆ ನಿಜಕ್ಕೂ ಕಷ್ಟಕರವಾಗಲಿದೆ. ಇದಕ್ಕಿರಬಹುದಾದ ಕಾರಣಗಳನ್ನು ನೋಡೋಣ:

ಮೊದಲನೆಯದಾಗಿ ಹತ್ತು ವರ್ಷಗಳ ಕಾಲ ಆಡಳಿತ ನಡೆಸಿದ್ದರ ಪರಿಣಾಮವಾಗಿ ಅದು ಸಹಜವಾಗಿಯೇ ಆಡಳಿತ ವಿರೋಧಿ ಅಲೆಯನ್ನು ಎದುರಿಸಬೇಕಾಗಿದೆ. ಎರಡನೆಯದಾಗಿ ಮೊದಲಿಂದಲೂ ಇದ್ದ ಮಾದಕದ್ರವ್ಯಗಳ ಮಾಫಿಯಾ ಹೆಚ್ಚಾಗಿದ್ದು, ಇದರಲ್ಲಿ ಆಡಳಿತ ಪಕ್ಷದ ಕೆಲವು ಸದಸ್ಯರೂ ಷಾಮೀಲಾಗಿದ್ದಾರೆಂಬ ಆರೋಪವನ್ನು ವಿರೋಧ ಪಕ್ಷಗಳು ಸತತವಾಗಿ ಮಾಡುತ್ತಲೇ ಬಂದಿದ್ದಾರೆ. ಕಳೆದ ವರ್ಷ ಕಾಂಗ್ರೆಸ್ ಉಪಾದ್ಯಕ್ಷರಾದ ಶ್ರೀ ರಾಹುಲ್ ಗಾಂದಿಯವರು ಸಹ ಪಂಜಾಬಿಗೆ ಹೋಗಿ ಈ ಬಗ್ಗೆ ಒಂದಿಷ್ಟು ರ್ಯಾಲಿಗಳನ್ನು ನಡೆಸಿದ್ದರು. ಮೂರನೆಯದಾಗಿ ಈ ಬಾರಿಯ ವಿದಾನಸಭಾ ಚುನಾವಣೆಗಳಲ್ಲಿ ಶ್ರೀ ಅರವಿಂದ್ ಕೇಜ್ರೀವಾಲರ ಆಮ್ ಆದ್ಮಿ ಪಕ್ಷವೂ ತನ್ನ ಅಭ್ಯರ್ಥಿಗಳನ್ನು ಹಾಕುತ್ತಿದ್ದು, ಕಳೆದ ಲೋಕಸಭಾ ಚುನಾವಣೆಯ ತನ್ನ ಸಾಧನೆಯನ್ನು ಪುನರಾವರ್ತಿಸುವ ಉದ್ದೇಶವನ್ನು ಹೊಂದಿದೆ. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷವು ನಾಲ್ಕು ಲೋಕಸಭಾ ಸ್ಥಾನಗಳನ್ನು ಗೆದ್ದು ಎಲ್ಲರ ಅಚ್ಚರಿಗೂ ಕಾರಣವಾಗಿತ್ತು. ಈಗಲೂ ಪಂಜಾಬಿನ ನಗರ ಪ್ರದೇಶಗಳಲ್ಲಿ ಆಮ್ ಆದ್ಮಿಯ ಪ್ರಭಾವ ಹೆಚ್ಚಾಗಿದ್ದು ಅದನ್ನು ಬಳಸಿಕೊಳ್ಳಲು ಕೇಜ್ರೀವಾಲರು ತೀರ್ಮಾನಿಸಿದ್ದಾರೆ. ಅಕ್ಟೋಬರ್ ತಿಂಗಳಲ್ಲಿ ನಡೆದ ಚುನಾವಣಾ ಪೂರ್ವ ಸಮೀಕ್ಷೆಗಳ ಪ್ರಕಾರ ಪಂಜಾಬಿನ 117 ಸ್ಥಾನಗಳ ಪೈಕಿ ಆಮ್ ಆದ್ಮಿಯು 94 ಸ್ಥಾನಗಳನ್ನು, ಬಾಜಪ ಮೈತ್ರಿಕೂಟ 12 ಸ್ಥಾನವನ್ನು ಕಾಂಗ್ರೆಸ್ 8 ಸ್ಥಾನಗಳನ್ನು ಗೆಲ್ಲಬಹುದೆಂದು ಹೇಳಲಾಗಿದೆ. ಹೀಗೆ ಆಮ್ ಆದ್ಮಿಯ ಗೆಲುವಿಗೆ ಅಡ್ಡಿ ಎನ್ನುವುದೇನಾದರು ಇದ್ದರೆ ಅದು ಅದರ ಪಕ್ಷದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಅರ್ಹನಾದ ಒಬ್ಬನೇ ಒಬ್ಬ ಬಲಿಷ್ಠನಾಯಕನಿರದೆ ಹೋಗಿರುವುದು.

ನಾಲ್ಕನೆಯದಾಗಿ ಬಾಜಪದ ಹಿರಿಯ ನಾಯಕರಾಗಿದ್ದ ರಾಜ್ಯಸಭಾ ಸದಸ್ಯರೂ ಆಗಿದ್ದ ಮಾಜಿ ಕ್ರಿಕೇಟಿಗ ಶ್ರೀ ನವಜೋತ್ ಸಿಂಗ್ ಸಿದ್ದುರವರು ಬಾಜಪವನ್ನು ತೊರೆದು ಹೊರಬಂದಿರುವುದು, ಪಂಜಾಬಿನ ಗ್ರಾಮೀಣ ಭಾಗದಲ್ಲಿ ಜನಪ್ರಿಯರಾಗಿರುವ ಸಿದ್ದುರವರಿಗೆ ಕಳೆದ ಲೋಕಸಭಾ ಚುನಾವಣೆಯಲ್ಲಿ ಅಮೃತಸರ್ ಕ್ಷೇತ್ರದ ಟಿಕೇಟನ್ನು ನೀಡದೆ, ಅವರ ಬದಲಿಗೆ ಈಗ ಹಣಕಾಸು ಸಚಿವರಾಗಿರುವ ಅರುಣ್ ಜೈಟ್ಲಿಯವರಿಗೆ ನೀಡಿ ಅವಮಾನ ಮಾಡಲಾಗಿತ್ತು. ಇದರಿಂದಾಗಿ ಜೈಟ್ಲಿಯವರ ಪರ ಸಿದ್ದು ಪ್ರಚಾರ ಕೈಗೊಳ್ಳಲಿಲ್ಲ. ಹೀಗಾಗಿ ಅವರು ಸೋಲಬೇಕಾಯಿತು. ಸೋತನಂತರವು ಅವರನ್ನು ವಿತ್ತ ಸಚಿವರನ್ನಾಗಿಸಿ ರಾಜ್ಯಸಭೆಗೆ ಆಯ್ಕೆ ಮಾಡಿಸಲಾಯಿತು. ಈ ಬೇಸರದಲ್ಲಿದ್ದ ಸಿದ್ದು ಅವರನ್ನು ರಾಜ್ಯಸಭೆಗೆ ನಾಮಕರಣ ಮಾಡಿದರು ಸಿದ್ದುರವರ ಆಕ್ರೋಶ ಕಡಿಮೆಯಾಗಲೇ ಇಲ್ಲ. ಕಾರಣ ಪಂಜಾಬಿನಲ್ಲಿ ತಾವೆಷ್ಟೇ ಜನಪ್ರಿಯರಾದರು ಪಂಜಾಬ್ ರಾಜ್ಯಘಟಕದ ಅದ್ಯಕ್ಷರನ್ನಾಗಲಿ, ಪದಾಧಿಕಾರಿಗಳನ್ನಾಗಲಿ ನೇಮಿಸುವಾಗ ತಮ್ಮನ್ನು ನಿರ್ಲಕ್ಷಿಸಲಾಗುತ್ತಿದೆಯೆಂಬುದು ಅವರ ಗಮನಕ್ಕೆ ಬಂದಿತ್ತು. ಅಕಾಲಿದಳದ ನಾಯಕರೊಂದಿಗೆ ಉತ್ತಮ ಬಾಂದವ್ಯ ಹೊಂದಿರದ ಸಿದ್ದು ಅವರನ್ನು ತನ್ನ ಮಿತ್ರ ಪಕ್ಷವನ್ನು ಸಂತೃಪ್ತಗೊಳಿಸುವ ಸಲುವಾಗಿಯೇ ಬಾಜಪ ಉದಾಸೀನ ಮಾಡತೊಡಗಿತ್ತು. ಇದರಿಂದ ಬೇಸರಗೊಂಡ ಅವರು ತನ್ನ ರಾಜ್ಯಸಭಾ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಪಕ್ಷ ತೊರೆದು ಹೊರಗೆ ಬಂದಿದ್ದಾರೆ. ಮೊದಲಿಗೆ ಅವರು ಆಮ್ ಆದ್ಮಿ ಪಕ್ಷವನ್ನು ಸೇರಬಹುದೆಂಬ ನಿರೀಕ್ಷೆ ಪಂಜಾಬಿನ ಜನತೆಗೆ ಇದ್ದರೂ ಕೇಜ್ರೀವಾಲರ ಸವರ್ಾಧಿಕಾರಿ ನಡವಳಿಕೆ ಸಿದ್ದುವನ್ನು ಕೆರಳಿಸಿ, ತಾವೇ ಆವಾಜ್-ಎ- ಪಂಜಾಬ್ ಎಂಬ ಹೊಸ ಪಕ್ಷವನ್ನು ಕಟ್ಟಲು ಕಾರಣವಾಯಿತು. ಬಾಯಿಮಾತಿಗೆ ಸಿದ್ದುರವರು ಇದು ರಾಜಕೀಯ ವೇದಿಕೆ ಅಲ್ಲವೆಂದರು ತಮ್ಮನ್ನು ಬೆಂಬಲಿಸುವ ಪಕ್ಷಗಳಿಗೆ ತಾವೂ ಬೆಂಬಲಿಸುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಪಂಜಾಬಿನ ಮಟ್ಟಿಗೆ ನವಜೋತ್ ಸಿಂಗ್ ನಿರ್ಣಾಯಕ ಪಾತ್ರವಹಿಸಲಿರುವುದಂತು ಖಚಿತವಾಗಿದೆ. ಈ ಹಂತದಲ್ಲಿ ಕಾಂಗ್ರೆಸ್ ಸಿದ್ದುರವರೊಂದಿಗೆ ಮೈತ್ರಿಯ ಮಾತುಕತೆ ನಡೆಸುತ್ತಿದ್ದು ಮುಂದಿನ ಬೆಳವಣಿಗೆಗಳನ್ನು ಕಾದು ನೋಡಬೇಕಿದೆ.

ಹೀಗೆ ಈ ಎಲ್ಲ ಕಾರಣಗಳಿಂದ ಪಂಜಾಬಿನಲ್ಲಿ ಬಾಜಪ ಅಕಾಲಿದಳದ ಮೈತ್ರಿಕೂಟ ಈ ಬಾರಿಯ ಚುನಾವಣೆ ಗೆಲ್ಲುವುದು ಕಷ್ಟಸಾದ್ಯವಾಗಿ ಪರಿಣಮಿಸಿದೆ. ಆದರೆ ತ್ರಿಕೋನ ಸ್ಪರ್ಧೆಯೇನಾದರು ಏರ್ಪಟ್ಟರೆ ಮಾತ್ರ ಬಾಜಪ ಗೆಲ್ಲಬಹುದಾಗಿದೆ. ಯಾಕೆಂದರೆ ಕಳೆದ ಬಾರಿಯ 2012ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಾಜಪ ಮೈತ್ರಿಕೂಟಗಳೆರಡು ಶೇಕಡಾ 41 ರಷ್ಟು ಮತಗಳಿಸಿದ್ದರೂ ಮನ್ ಪ್ರೀತ್ ಬಾದಲರ ಸಾಂಜಾಮೋರ್ಚ ಶೇಕಡಾ 4 ರಷ್ಟು ಮತ ಪಡೆದು ಕಾಂಗ್ರೆಸ್ಸಿಗೆ ಕಡಿಮೆ ಸ್ಥಾನ ದೊರೆಯುವಂತೆ ಮಾಡಿತ್ತು. ಹಾಗಾಗಿ ಈ ಬಾರಿ ಚುನಾವಣೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟರೆ ಅತಂತ್ರ ವಿದಾನಸಭೆ ರಚನೆಯಾಗುವ ಸಾದ್ಯತೆ ಹೆಚ್ಚಿದೆ.

ಹೀಗಾಗಿ ಪಂಜಾಬಿನ ಚುನಾವಣೆಗಳಲ್ಲಿ ಗೆಲ್ಲಲು ಬಾಜಪ ಮತ್ತು ಅಕಾಲಿದಳ ಪ್ರಯಾಸ ಪಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ.

No comments:

Post a Comment