Oct 5, 2016

ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳು ವಿಫಲವಾಗಲು ಕಾರಣಗಳು: ಒಂದು ಟಿಪ್ಪಣಿ!

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷಗಳಿಗೆ ಮನ್ನಣೆ ಸಿಗುವುದಿಲ್ಲ ಮತ್ತು ಕರ್ನಾಟಕದ ಜನತೆ ಆ ವಿಷಯದ ಮಟ್ಟಿಗೆ ರಾಷ್ಟ್ರೀಯವಾಗಿ ಚಿಂತಿಸುತ್ತಾರೆಂಬ ಮಾತು ಮಾಮೂಲಿಯಾಗಿಬಿಟ್ಟಿದೆ. ಕರ್ನಾಟಕದ ಜನತೆ ಒಕ್ಕೂಟ ವ್ಯವಸ್ಥೆಗೆ ಎಷ್ಟು ಒಗ್ಗಿ ಹೋಗಿದ್ದಾರೆಂದರೆ ನಮ್ಮ ಜನತೆ ಇದುವರೆಗು ಯಾವುದೇ ಪ್ರಾದೇಶಿಕ ಪಕ್ಷವೊಂದನ್ನು ನಮ್ಮದೂ ಎಂದು ಒಪ್ಪಿಕೊಂಡು ಸಂಪೂರ್ಣವಾಗಿ ಅದನ್ನು ಬೆಂಬಲಿಸಿದ ನಿದರ್ಶನಗಳೇ ಸಿಗುವುದಿಲ್ಲ. ಕನ್ನಡದ ನೆಲಜಲಗಳ ಪ್ರಶ್ನೆ ಬಂದಾಗ ಪ್ರಾದೇಶಿಕ ಪಕ್ಷವೊಂದರ ಅನಿವಾರ್ಯತೆಯ ಬಗ್ಗೆ ಆವೇಶದಿಂದ ಮಾತಾಡುವ ಕನ್ನಡಿಗರು ಚುನಾವಣೆಯ ಸಂದರ್ಭದಲ್ಲಿ ಮಾತ್ರ ಬಾಜಪ ಅಥವಾ ಕಾಂಗ್ರೆಸ್ ಅನ್ನುವ ಎರಡು ರಾಷ್ಟ್ರೀಯ ಪಕ್ಷಗಳತ್ತ ವಾಲಿಬಿಡತ್ತಾರೆ ಎನ್ನುವ ಆರೋಪವೂ ಕನ್ನಡಿಗರ ಮೇಲಿದೆ. ಈ ವಿಚಾರದ ವಿಶ್ಲೇಷಣೆಯಲ್ಲಿ ನಾನು ಬಹಳ ಹಿಂದಕ್ಕೇನು ಹೋಗುವುದಿಲ್ಲ. ಎಂಭತ್ತರ ದಶಕದ ನಂತರದ ಕರ್ನಾಟಕದ ರಾಜಕಾರಣದ ಆಗು ಹೋಗುಗಳನ್ನು ಅದ್ಯಯನ ಮಾಡಿದರೆ ಸಾಕು ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ಹಾಗಿದ್ದರೆ ಕರ್ನಾಟಕದ ಜನತೆಗೆ ಯಾಕೆ ಪ್ರಾದೇಶಿಕ ಪಕ್ಷಗಳ ಬಗ್ಗೆ ಈ ರೀತಿಯ ಅಸಡ್ಡೆ? ಯಾಕೆ ಕನ್ನಡಿಗರು ಪ್ರಾದೇಶಿಕ ಪಕ್ಷಗಳತ್ತ ಒಲವು ತೋರಿಸುವುದಿಲ್ಲವೆಂಬ ಪ್ರಶ್ನೆಗೆ ಎರಡು ನೆಲೆಯಲ್ಲಿ ಉತ್ತರ ಕಂಡುಕೊಳ್ಳಬಹುದು:

ಮೊದಲನೆಯದಾಗಿ, ಕನ್ನಡಿಗರು ಮೊದಲಿಂದಲೂ ಸಂಯಮಿಗಳು. ಯಾವುದೇ ವಿಷಯ ಅಥವಾ ಘಟನೆಗೆ ತಕ್ಷಣಕ್ಕೆ ಆವೇಶಭರಿತರಾಗಿ ಪ್ರತಿಕ್ರಿಯೆ ನೀಡುವಂತವರಲ್ಲ. ಹಾಗು ತಮ್ಮ ನೆಲಜಲಗಳ ವಿಚಾರದಲ್ಲಿ ರಾಜಕೀಯ ಬೆರೆಸಿನೋಡುವ ಮನಸ್ಥಿತಿಯವರೂ ಅಲ್ಲ. ಜೊತೆಗೆ ನಮ್ಮ ನೆರೆಹೊರೆಯ ರಾಜ್ಯಗಳ ಜನರಂತೆ ಬಾಷೆಯ ವಿಷಯದಲ್ಲಿ ತೀರಾ ದುರಭಿಮಾನಿಗಳೂ ಅಲ್ಲ.( ಆದರೆ ವಿಶ್ವದ ಮೊದಲ ಕೋತಿಯೂ ತಮಿಳು ಕೋತಿಯೇ ಎನ್ನುವುದು ತಮಿಳರ ಬಾಷಾಭಿಮಾನಕ್ಕೆ ಒಂದು ಉದಾಹರಣೆ-ಡಿ.ಆರ್ ನಾಗರಾಜ್-ಸಂಸ್ಕೃತಿಕಥನದಿಂದ) ಕನ್ನಡಿಗರನ್ನು ಬಾಷೆಯ ವಿಚಾರದಲ್ಲಿ ಯಾರೂ ವಿನಾಕಾರಣ ಕೆರಳಿಸಿ ಆವೇಶಭರಿತರನ್ನಾಗಿ ಮಾಡಲು ಸಾದ್ಯವಿಲ್ಲ. ಇದು ಕನ್ನಡಿಗರ ಒಳ್ಳೆಯತನವೊ ಇಲ್ಲ ದೌರ್ಬಲ್ಯವೋ ಎಂಬುದನ್ನು ನಾನಿಲ್ಲಿ ಚರ್ಚಿಸಬಯಸುವುದಿಲ್ಲ. ಒಟ್ಟಿನಲ್ಲಿ ತಮ್ಮ ಬಾಷೆ ನೆಲಜಲಕ್ಕಾಗಿ ಅವರೆಂದೂ ರಾಜಕೀಯ ಅಸ್ತ್ರವನ್ನು ಬಳಸಿ ಬಲ್ಲವರಂತು ಅಲ್ಲ. ಹೀಗಾಗಿ ತಮ್ಮ ಬಾಷೆ, ನೆಲ(ಗಡಿ), ಜಲ(ನದಿ)ಗಳಿಗಾಗಿ ತಾವೊಂದು ರಾಜಕೀಯ ಪಕ್ಷವನ್ನು ಕಟ್ಟಿಕೊಂಡು ಬದುಕಬೇಕೆಂಬ ಅನಿಸಿಕೆ ಅವೆರಲ್ಲೆಂದೂ ತೀವ್ರವಾಗಿ ಮೂಡಿದಂತೆ ಕಾಣುವುದಿಲ್ಲ.

ಇನ್ನು ಎರಡನೆಯ ಕಾರಣ, 1980ರಿಂದ ಈ ದಿನದವರೆಗು ಒಂದೆರಡು ಪ್ರಾದೇಶಿಕ ಪಕ್ಷಗಳು ತಲೆಯೆತ್ತಿದರೂ ಅವುಗಳ ಉದ್ದೇಶಗಳ ಸಾಚಾತನದ ಬಗ್ಗೆ ಕನ್ನಡಿಗರಿಗೆ ಅನುಮಾನವಿದ್ದುದು ಸಹ ಆ ಪಕ್ಷಗಳು ಅಸ್ಥಿತ್ವ ಉಳಿಸಿಕೊಳ್ಳುವಲ್ಲಿ ವಿಫಲವಾಗಲು ಕಾರಣವಾಯಿತು. ಎಂಭತ್ತರ ದಶಕದಲ್ಲಿ ಕಾಂಗ್ರೆಸ್ಸಿನ ನಾಯಕರಾಗಿ, ಸಚಿವರೂ ಆಗಿದ್ದ ಶ್ರೀ ಬಂಗಾರಪ್ಪನವರು 1983ರಲ್ಲಿ ಕಾಂಗ್ರೆಸ್ ಅನ್ನು ತೊರೆದು ತಮ್ಮದೇ ಆದ ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸಿದರು. ಹೀಗೆ ತಮ್ಮದೇ ಆದ ಒಂದು ಪ್ರಾದೇಶಿಕ ಪಕ್ಷವೊಂದನ್ನು ಕಟ್ಟುವ ಬಂಗಾರಪ್ಪನವರ ಉದ್ದೇಶದ ಹಿಂದೆ ಇದ್ದುದು, ರಾಷ್ಟೀಯ ಪಕ್ಷಗಳ ಬಗೆಗಿನ ಕೋಪವಾಗಲಿ, ಕನ್ನಡಿಗರ ಆಶೋತ್ತರಗಳಿಗೆ ದನಿಯಾಬೇಕೆಂಬ ಪ್ರಾಮಾಣಿಕ ಕಳಕಳಿಯೂ ಆಗಿರಲಿಲ್ಲ. ದೇವರಾಜ್ ಅರಸರ ನಂತರ ತಾವೇ ಹಿಂದುಳಿದ ವರ್ಗಗಳ ನಾಯಕನೆಂಬ ಮತ್ತು ತಾನು ಮಾತ್ರ ದೇವರಾಜ ಅರಸರ ಉತ್ತರಾಧಿಕಾರಿಯಾಗಬಲ್ಲೆನೆಂಬ ಮನೋಬಾವನೆಯಿಂದವರು ಪ್ರಾದೇಶಿಕ ಪಕ್ಷವೊಂದನ್ನು ಹುಟ್ಟು ಹಾಕಿ ಕಾಂಗ್ರೆಸ್ ಅನ್ನು ಸೋಲಿಸುವ ಹಟಕ್ಕೆ ಬಿದ್ದರು. ಅರಸರ ನಂತರ ಗುಂಡೂರಾಯರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿದ ಕಾಂಗ್ರೆಸ್ಸಿನ ಮೇಲಿದ್ದ ಅವರ ಸಿಟ್ಟು ಒಂದು ಪಕ್ಷವೊಂದನ್ನು ಕಟ್ಟುವ ಕೆಲಸಕ್ಕೆ ನಾಂದಿಯಾಯಿತು. ಇಷ್ಟೇ ಹೊರತು ಕನ್ನಡಿಗರ ಯಾವ ಆಶೋತ್ತರಗಳನ್ನೂ ಅವರ ಪ್ರಾದೇಶಿಕ ಪಕ್ಷ ಬಿಂಬಿಸಲು ಪ್ರಯತ್ನಿಸಿರಲ್ಲ. ಕಾಂಗ್ರೆಸ್ ಅನ್ನು ಸೋಲಿಸುವ ಏಕೈಕ ಅಜೆಂಡಾದಿಂದ ಹುಟ್ಟಿಕೊಂಡ ಕ್ರಾಂತಿರಂಗ ಜನತಾ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡು 1983ರ ಚುನಾವಣೆ ಎದುರಿಸಿತು. ಬಂಗಾರಪ್ಪನವರ ಹಿಂದುಳಿದ ವರ್ಗಗಳ ನಾಯಕನೆಂಬ ಇಮೇಜು ಈ ಚುನಾವಣೆಯಲ್ಲಿ ಜನತಾ ಪಕ್ಷದ ಪಾಲಿಗೆ ವರದಾನವಾಗಿ ಪರಿಣಮಿಸಿತು. 95 ಸ್ಥಾನಗಳನ್ನು ಗೆದ್ದ ಜನತಾ ಪಕ್ಷ 18 ಸ್ಥಾನಗಳನ್ನು ಗಳಿಸಿದ ಭಾರತೀಯ ಜನತಾಪಕ್ಷದ ಬಾಹ್ಯ ಬೆಂಬಲದೊಂದಿಗೆ ಅಧಿಕಾರ ಹಿಡಿಯಲು ಶಕ್ತವಾಯಿತು. ದುರಂತವೆಂದರೆ ಈ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗುವ ಎಲ್ಲ ಅರ್ಹತೆಗಳನ್ನೂ ಹೊಂದಿದ್ದ ಬಂಗಾರಪ್ಪನವರನ್ನು ಕಡೆಗಣಿಸಿ, ರಾಜ್ಯದ ರಾಜಕೀಯ ಚಿತ್ರದಲ್ಲಿ ಕಾಣಿಸಿಕೊಳ್ಳದೇ ಇದ್ದ ಶ್ರೀ ರಾಮಕೃಷ್ಣ ಹೆಗಡೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಯಿತು. (ಹೀಗೆ ಬ್ರಾಹ್ಮಣರಾದ ಶ್ರೀ ಹೆಗಡೆಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ತಂತ್ರಗಾರಿಕೆ ಮಾಡಿದ ಮೇಲ್ಜಾತಿಗಳು, ಮತ್ತು ಅವುಗಳಿಗೆ ಬೆಂಬಲವಾಗಿ ನಿಂತ ಶಕ್ತಿಗಳ ಬಗ್ಗೆ ಮತ್ತೊಮ್ಮೆ ಬರೆಯುವೆ). ಇದರಿಂದ ಭ್ರಮನಿರಸನರಾದ ಬಂಗಾರಪ್ಪನವರು ಕೆಲವು ಕಾಲದ ನಂತರ ತಮ್ಮ ಮಾತೃಪಕ್ಷವಾದ ಕಾಂಗ್ರೆಸ್ಸಿಗೆ ಹಿಂದಿರುಗಿ ಸಚಿವರೂ, ಮುಖ್ಯಮಂತ್ರಿಗಳೂ ಆದರು. ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿ ಸ್ವಲ್ಪಮಟ್ಟಿಗೆ ಯಶಸ್ವಿಯಾಗಿದ್ದ ಬಂಗಾರಪ್ಪನವರು ತಾವು ಹೀಗೆ ಪಕ್ಷವೊಂದನ್ನು ಕಟ್ಟುವುದರ ಹಿಂದೆ ತಮ್ಮ ಸ್ವಹಿತಾಶಕ್ತಿಗಿಂತ ರಾಜ್ಯದ ನೆಲಜಲಗಳ ಬಗ್ಗೆ ಹೆಚ್ಚಿನ ಕಾಳಜಿ ಇದೆಯೆಂಬುದನ್ನು ಯಾವತ್ತಿಗೂ ಜನರಿಗೆ ಮನವರಿಕೆ ಮಾಡಿಕೊಡಲು ಯತ್ನಿಸಲೇ ಇಲ್ಲ. ಜೊತೆಗೆ ಅವತ್ತಿನ ಮಟ್ಟಿಗೆ ಬಂಗಾರಪ್ಪನವರಿಗೆ ಅಂತಹ ಯಾವುದೇ ಪ್ರಾದೇಶಿಕ ಆಸಕ್ತಿಯೂ ಇರಲಿಲ್ಲ. ಕನಿಷ್ಠ ನಂತರದಲ್ಲಾದರು ಬಂಗಾರಪ್ಪನವರು ಕ್ರಾಂತಿರಂಗದ ಅಸ್ಥಿತ್ವವನ್ನು ಪ್ರತ್ಯೇಕವಾಗಿ ಉಳಿಸಿಕೊಂಡು ರಾಜಕಾರಣ ಮುಂದುವರೆಸಿದ್ದರೆ ಜನರು ಅದನ್ನು ಒಪ್ಪಿಕೊಳ್ಳುವ ಸಾಧ್ಯತೆಯಿತ್ತು. ಆದರೆ ಕಾಂಗ್ರೆಸ್ಸಿನ ಮೇಲಿನ ಕೋಪ ಮತ್ತು ತಕ್ಷಣದ ಅಧಿಕಾರದ ಮೋಹ ಕ್ರಾಂತಿರಂಗ ಕನ್ನಡಿಗರ ಪಕ್ಷವಾಗುವುದನ್ನು ತಪ್ಪಿಸಿತು. ಇದು ಎಂಭತ್ತರ ದಶಕದ ನಂತರ ಸ್ಥಾಪನೆಯಾದ ಮೊದಲ ಪ್ರಾದೇಶಿಕ ಪಕ್ಷವೊಂದರ ಕತೆ.

1989ರ ರಾಜ್ಯ ವಿದಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ಜಯಗಳಿಸಿ ವೀರೇಂದ್ರ ಪಾಟೀಲರು ಮುಖ್ಯಮಂತ್ರಿಯಾದಾಗ, ಅವರ ಸಂಪುಟದಲ್ಲಿ ಬಂಗಾರಪ್ಪನವರು ಕೃಷಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದರು. 1990ರಲ್ಲಿ ವೀರೇಂದ್ರ ಪಾಟೀಲರ ಅನಾರೋಗ್ಯದ ನೆಪದಲ್ಲಿ ರಾಜೀವ್ ಗಾಂದಿಯವರು ಅವರನ್ನು ಕೆಳಗಿಳಿಸಿ ಬಂಗಾರಪ್ಪನವರನ್ನು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಿದರು. ಈ ಸಮಯದಲ್ಲಿ ಒಂದಷ್ಟು ಕಾಲ ಉತ್ತಮ ಆಡಳಿತ ನಡೆಸುತ್ತಿದ್ದ ಬಂಗಾರಪ್ಪನವರ ಮೇಲೆ ಭ್ರಷ್ಟಾಚಾರದ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೈಕಮ್ಯಾಂಡ್ ಅವರನ್ನು ಪದಚ್ಯುತಗೊಳಿಸಿ ಇನ್ನೊಬ್ಬ ಹಿಂದುಳಿದ ವರ್ಗದ ನಾಯಕ ವೀರಪ್ಪಮೊಯ್ಲಿಯವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿತು. 1992ರಲ್ಲಿ ಅಧಿಕಾರ ಕಳೆದುಕೊಂಡ ಬಂಗಾರಪ್ಪನವರು ಮತ್ತೆ ತಮ್ಮ ಪದಚ್ಯುತಿಯ ಸಿಟ್ಟನ್ನು ತೋರಿಸಿಕೊಳ್ಳಲು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು(ಕೆಸಿಪಿ) ಸ್ಥಾಪಿಸಿದರು. ಈ ಕೆಸಿಪಿಯನ್ನು ಪ್ರಾರಂಭಿಸುವಾಗಲು ಅವರು ಕನ್ನಡಿಗರ ಹಿತಕಾಯುವ ಯಾವ ಮಾತುಗಳನ್ನೂ ಆಡಿರಲಿಲ್ಲ. ಬದಲಿಗೆ ಕಾಂಗ್ರೆಸ್ಸನ್ನು ಸೋಲಿಸುವುದೊಂದೆ ತಮ್ಮ ಗುರಿಯೆಂದು ಘೋಷಿಸಿದ್ದರು. ಹೀಗಾಗಿ ಈ ಪ್ರಾದೇಶಿಕ ಪಕ್ಷವೂ ಕನ್ನಡಿಗರ ಮನಸ್ಸನ್ನು ಗೆಲ್ಲುವಲ್ಲಿ ವಿಫಲವಾಯಿತು. ಹೀಗೆ ಅಧಿಕಾರ ಕಳೆದುಕೊಂಡ ಬಂಗಾರಪ್ಪನವರು ಕನ್ನಡಿಗರ ಹಿತಕಾಯಬಲ್ಲಂತಹ ಉದ್ದೇಶಗಳನ್ನು ಹೊಂದಿದ ಪ್ರಾದೇಶಿಕ ಪಕ್ಷವೊಂದನ್ನು ಸ್ಥಾಪಿಸುವಲ್ಲಿ ವಿಫಲರಾದ ಪರಿಣಾಮ ಅವರು ಕಟ್ಟಿದ ಎರಡೂ ಪ್ರಾದೇಶಿಕ ಪಕ್ಷಗಳಿವತ್ತು ಹೆಸರಿಲ್ಲದೆ ಮಾಯವಾಗಿ ಹೋಗಿವೆ. ವೈಯುಕ್ತಿಕ ಲಾಭ ಮತ್ತು ಸ್ವಹಿತಾಸಕ್ತಿಗಳ ಪಕ್ಷವನ್ನು ಕರ್ನಾಟಕದ ಜನತೆ ಬೆಂಬಲಿಸಲಾರರು ಎಂಬುದಕ್ಕೆ ಇದೊಂದು ಉದಾಹರಣೆ. ನಂತರ ಬಂಗಾರಪ್ಪನವರು ಕಾಂಗ್ರೆಸ್ ಬಾಜಪ, ಜನತಾದಳವೆಂದು ನಾನಾ ಪಕ್ಷಗಳಿಗೆ ಅತಿಥಿಗಳಾಗಿ ಹೋಗಿಬರುವುದನ್ನು ಶುರು ಮಾಡಿ ಕರ್ನಾಟಕದ ಜನತೆಯ ಆಶೋತ್ತರಗಳನ್ನು ಈಡೇರಿಸಬಲ್ಲ ಪ್ರಾದೇಶಿಕ ಪಕ್ಷವೊಂದನ್ನು ಕಟ್ಟಿ ಬೆಳೆಸುವ ಕ್ರಿಯೆಯಲ್ಲಿ ಸೋತರು ಎನ್ನಬಹುದು. 

ನಂತರ 2012ರಲ್ಲಿ ಮಾಜಿಮುಖ್ಯಮಂತ್ರಿಗಳಾದ ಶ್ರೀ ಯಡಿಯೂರಪ್ಪನವರು ಅದಾಗಲೇ ನೋಂದಣಿಯಾಗಿದ್ದ ಕರ್ನಾಟಕ ಜನತಾಪಕ್ಷ (ಕೆಜೆಪಿ)ವನ್ನು ಪುನರ್ ನವೀಕರಿಸಿಕೊಂಡು ಅದರ ಅದ್ಯಕ್ಷರಾಗಿ ಹೊಸದೊಂದು ಪ್ರಾದೇಶಿಕ ಪಕ್ಷವನ್ನು ಹುಟ್ಟು ಹಾಕಿದ್ದರು. ಭ್ರಷ್ಟಾಚಾರದ ಆರೋಪಗಳಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡು ಮಾಜಿಯಾಗಿದ್ದ ಯಡಿಯೂರಪ್ಪನವರಿಗೆ ತಮಗೆ ದ್ರೋಹ ಮಾಡಿದೆಯೆಂದು ಅನಿಸಿದ ಬಾಜಪವನ್ನು ಸೋಲಿಸಲೇಬೇಕೆಂಬ ಹಟಕ್ಕೆ ಬಿದ್ದು ಕೆಜೆಪಿಯ ಸಂಘಟನೆಯಲ್ಲಿ ತೊಡಗಿದರು. ಅವರಿಗೂ ಸಹ ಬಂಗಾರಪ್ಪನವರಿಗಿದ್ದಂತಹ ಹಟ ಮತ್ತು ಸೇಡಿನ ತವಕವಿತ್ತೇ ಹೊರತು ಕನ್ನಡಿಗರ ಹಿತ ಕಾಯುವ ಒಂದು ಪಕ್ಷ ಕಟ್ಟಿ ಬೆಳೆಸಬೇಕೆಂಬ ಇರಾದೆಯೇನೂ ಇದಂತಿರಲಿಲ್ಲ. ಹೀಗಾಗಿ ಬಾಜಪವನ್ನು ಸೋಲಿಸುವ ಏಕೈಕ ಉದ್ದೇಶದಿಂದಲೇ ಕೆಜೆಪಿಯನ್ನು ಕಟ್ಟಿ 2013ರ ಚುನಾವಣೆಯಲ್ಲಿ ತಮ್ಮ ಉದ್ದೇಶವನ್ನು ಈಡೇರಿಸಿಕೊಂಡರು. ತದನಂತರ ತಮ್ಮ ಕೆಜೆಪಿಯನ್ನು ಬಾಜಪದೊಳಗೆ ವಿಲೀನಗೊಳಿಸಿ ತಾವು ಬಾಜಪದ ಅದ್ಯಕ್ಷರೂ ಆದರು.

1980ರ ನಂತರದಲ್ಲಿ ಕರ್ನಾಟಕದ ಇಬ್ಬರು ಜನಸಮುದಾಯಗಳ ದೀಮಂತ ನಾಯಕರುಗಳು ತಮ್ಮ ವೈಯುಕ್ತಿಕ ಹಟಸಾಧನೆಗಾಗಿ ಮತ್ತು ಸೇಡಿನ ರಾಜಕಾರಣಕ್ಕಾಗಿ ಪ್ರಾದೇಶಿಕ ಪಕ್ಷಗಳನ್ನು ಸ್ಥಾಪಿಸಿದರೇ ಹೊರತು ಕರ್ನಾಟಕದ ಜನತೆಯ ಹಿತಕಾಯುವ ಪಕ್ಷವೊಂದನ್ನು ಕಟ್ಟುವ ಯಾವ ಆಶಯವನ್ನೂ ಅವರು ಹೊಂದಿರಲೇ ಇಲ್ಲ. ಹೀಗಾಗಿ ತಮ್ಮದೇ ಆದ ಪ್ರಾದಶಿಕ ಪಕ್ಷವೊಂದನ್ನು ಹೊಂದಿ ತಮ್ಮ ನೆಲ-ಜಲವನ್ನು ಕಾಪಾಡಿಕೊಳ್ಳುವಂತಹ ಅವಕಾಶ ಕನ್ನಡಿಗರಿಗೆ ಒದಗಿ ಬರಲೇ ಇಲ್ಲ. ಇದೀಗ ಕನ್ನಡಿಗರಿಗೆ ಪ್ರಾದೇಶಿಕ ಪಕ್ಷವೊಂದರ ಅನಿವಾರ್ಯತೆಯ ಬಗ್ಗೆ ಅರಿವಾದರೂ ಅದನ್ನು ಪೂರೈಸಬಲ್ಲ, ಸಶಕ್ತಪಕ್ಷವೊಂದನ್ನು ಕಟ್ಟುವ ಜನಸಮುದಾಯದ ನಾಯಕನಾಗಲಿ, ಅದಕ್ಕೆ ಬೇಕಾದ ಸಂಪನ್ಮೂಲಗಳನ್ನು ಹೊಂದಿದ ನಾಯಕನಾಗಲಿ ಕಂಡು ಬರುತ್ತಿಲ್ಲ. ಇದು ಕನ್ನಡಿಗರ ದೌರ್ಭಾಗ್ಯವೆನ್ನಬಹುದು. ಇನ್ನು ರಾಜ್ಯದಲ್ಲಿ ನೊಂದಣಿಯಾಗಿರುವ ಹಲವು ಪ್ರಾದೇಶಿಕ ಪಕ್ಷಗಳಿದ್ದರೂ ಅವುಗಳಿಂದ ಹೆಚ್ಚೇನನ್ನು ನಿರೀಕ್ಷಿಸಲು ಸಾದ್ಯವಿಲ್ಲ. ಆ ಪಟ್ಟಿಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್, ವಾಟಾಳ್ ಪಕ್ಷ, ಬಡವ ಶ್ರಮಿಕರ ರೈತ ಕಾರ್ಮಿಕರ ರೈತ ಕಾಂಗ್ರೆಸ್, ಕನ್ನಡ ನಾಡು, ಕರ್ನಾಟಕ ಜನತಾ ಪಕ್ಷ, ಸರ್ವೋದಯ ಪಕ್ಷಗಳಿದ್ದರೂ ಇವ್ಯಾವು ಜನಸಮುದಾಯದ ಸಂಪೂರ್ಣ ಬೆಂಬಲ ಗಳಿಸಲು ವಿಫಲವಾಗಿವೆ. ಯಾಕೆಂದರೆ ಇವುಗಳಲ್ಲಿ ಬಹಳಷ್ಟು ಪಕ್ಷಗಳು ಸೀಮಿತ ಉದ್ದಶಗಳನ್ನಿಟ್ಟುಕೊಂಡು ಮೂಲೆ ಸೇರಿದ್ದರೆ ಇನ್ನು ಕೆಲವು ಕೆಲವೇ ಕೆಲವು ಜನರ ವೈಯುಕ್ತಿಕ ಹಿತಾಸಕ್ತಿಗಳಿಗನುಗುಣವಾಗಿ ಕೆಲಸ ಮಾಡುತ್ತಿವೆ.

ಆದರೆ, ಇವೆಲ್ಲದರ ನಡುವೆಯೂ ಕನ್ನಡಿಗರಿಗೆ ಆಶಾಕಿರಣದಂತಿರುವ ಒಂದು ಪಕ್ಷವಿದ್ದರೆ ಅದು ಮಾಜಿ ಪ್ರದಾನಮಂತ್ರಿ ಶ್ರೀ ದೇವೇಗೌಡರ ನೇತೃತ್ವದ ಜನತಾದಳ(ಜಾತ್ಯಾತೀತ) ಮಾತ್ರ. ಯಾಕೆಂದರೆ ಜನತಾದಳ ರಾಷ್ಟ್ರೀಯ ಪಕ್ಷವಾದರು ಕೆಲವು ವಿಷಯಗಳಲ್ಲಿ ಅದು ಕರ್ನಾಟಕದ ಮಟ್ಟಿಗೆ ರಾಜ್ಯದ ಪ್ರಾದೇಶಿಕ ಪಕ್ಷದಂತೆಯೇ ಕೆಲಸ ಮಾಡುತ್ತಿದೆ. ಕರ್ನಾಟಕದ ನೆಲಜಲದ ವಿಚಾರಗಳಲ್ಲಿ ತೀವ್ರವಾದ ಒತ್ತಡಗಳಿಗೆ ಒಳಗಾಗಿರುವ ಈ ದಿನಗಳಲ್ಲಿ ಜಾತ್ಯಾತೀತ ಜನತಾದಳವು ಪ್ರಾದೇಶಿಕ ಪಕ್ಷದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತ ಕನ್ನಡಿಗರ ಹಿತರಕ್ಷಣೆ ಮಾಡಬಲ್ಲುದೇ ಎಂಬುದು ಸದ್ಯದ ಪ್ರಶ್ನೆಯಾಗಿದ್ದು, ಮುಂದಿನ ಲೇಖನದಲ್ಲಿ ಆ ಬಗ್ಗೆ ಚರ್ಚಿಸೋಣ.

No comments:

Post a Comment