Sep 16, 2016

ರೋಗಗ್ರಸ್ತ ಸಾರ್ವಜನಿಕ ಉದ್ದಿಮೆಗಳಿಗೆ ಅಂತಿಮ ಸಂಸ್ಕಾರ! ನೀತಿ ಆಯೋಗದಿಂದ ಸರಕಾರಕ್ಕೆ ಸೂಚನೆ

ಕು.ಸ. ಮಧುಸೂದನ್ ರಂಗೇನಹಳ್ಳಿ.
16/09/2016
ನಷ್ಟದಲ್ಲಿವೆಯೆಂದು ಹೇಳಲಾಗುತ್ತಿರುವ ಸುಮಾರು 74 ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳ ಪಟ್ಟಿಯನ್ನು ಸರಕಾರಕ್ಕೆ ನೀಡಿರುವ ನೀತಿ ಆಯೋಗವು ಬಹುತೇಕ ಅವುಗಳನ್ನು ಮುಚ್ಚುವ ಅಥವಾ ಖಾಸಗಿಯವರಿಗೆ ವಹಿಸಿಕೊಡುವ ಪ್ರಸ್ತಾವನೆಯನ್ನು ಸಲ್ಲಿಸಿದೆ.

ತೊಂಭತ್ತರ ದಶಕದಲ್ಲಿ ಆರಂಭಗೊಂಡ ಜಾಗತೀಕರಣದ ಪ್ರಕ್ರಿಯೆಯನ್ನು ಅರ್ಥಮಾಡಿಕೊಂಡವರ್ಯಾರಿಗೂ ನೀತಿ ಆಯೋಗದ ಇವತ್ತಿನ ಈ ನಡೆ ಅಚ್ಚರಿಯನ್ನೇನು ಉಂಟು ಮಾಡುವುದಿಲ್ಲ. ಯಾಕೆಂದರೆ ಮುಕ್ತ ಆರ್ಥಿಕ ನೀತಿಯ ಮೂಲ ಉದ್ದೇಶವೇ ಸರಕಾರಿ ಸ್ವಾಮ್ಯದ ಎಲ್ಲ ಉದ್ದಿಮೆಗಳನ್ನು ಖಾಸಗಿ ಬಂಡವಾಳಶಾಹಿಗಳ ಪಾದಗಳಿಗೆ ಸಮರ್ಪಿಸುವುದಾಗಿತ್ತು. ಸರಕಾರದ ಕೆಂಪು ಪಟ್ಟಿಗಳ, ಲೈಸೆನ್ಸ್ ರಾಜ್ ಬಗ್ಗೆ ಮಾತಾಡುವ ಮುಕ್ತ ಆರ್ಥಿಕ ನೀತಿಯ ಪರವಾದ ಬಂಡವಾಳಶಾಹಿಗಳ ಹುನ್ನಾರವೇ ಸಮಾಜವಾದಿ ವ್ಯವಸ್ತೆಯಲ್ಲಿರಬಹುದಾದ ದೋಷಗಳನ್ನು ಭೂತಗನ್ನಡಿಯಲ್ಲಿ ತೋರಿಸುತ್ತ, ಜನರ ದೃಷ್ಠಿಯಲ್ಲಿ ಸರಕಾರಿ ಸ್ವಾಮ್ಯದ ಉದ್ದಿಮೆಗಳೆಂದರೆ ಭ್ರಷ್ಟಾಚಾರದ ಕೂಪಗಳೆಂಬ ಅನುಮಾನ ಮೂಡಿಸಿ, ಖಾಸಗಿಯವರು ಮಾತ್ರ ಅವುಗಳನ್ನು ಉದ್ದಾರ ಮಾಡಬಲ್ಲರೆಂಬ ನಂಬಿಕೆಯೊಂದನ್ನು ಹುಟ್ಟು ಹಾಕುವುದಾಗಿದೆ.ಕಳೆದ 25 ವರ್ಷಗಳಲ್ಲಿ ಆಗಿ ಹೋದ ಎಲ್ಲ ಸರಕಾರಗಳ ನೀತಿಗಳೂ ಸಹ ಇಂತಹದೊಂದು ಕ್ರಿಯೆಗೆ ಉತ್ತೇಜನ ನೀಡುತ್ತಲೇ ಬಂದವು.

ಸರಕಾರಿ ಸ್ವಾಮ್ಯದ ಹಲವಾರು ಕ್ಷೇತ್ರಗಳಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸುವ ಶಾಸನಗಳನ್ನು ರೂಪಿಸುತ್ತ, ಅದೇ ವೇಳೆಯಲ್ಲಿ ಈಗಿರುವ ಸಾರ್ವಜನಿಕ ಉದ್ದಿಮೆಗಳಿಗೆ ಬೇಕಾದ ಅನುದಾನಗಳನ್ನು ಬಿಡುಗಡೆ ಮಾಡದೆ ಆಟವಾಡುತ್ತಬಂದ ಸರಕಾರಗಳು ಸಾರ್ವಜನಿಕ ಉದ್ದಿಮೆಗಳು ಆತ್ಮಹತ್ಯೆ ಮಾಡಿಕೊಳ್ಳುವಂತಹ ಸನ್ನಿವೇಶವೊಂದನ್ನು ನಿರ್ಮಿಸಿದವು. ಒಂದು ಕಾಲದಲ್ಲಿ ದೇಶದ ಲಕ್ಷಾಂತರ ಮಂದಿಗೆ ಉದ್ಯೋಗವಕಾಶ ದೊರಕಿಸಿಕೊಟ್ಟು ರಾಷ್ಟ್ರೀಯ ಆದಾಯಕ್ಕೆ ಗಣನೀಯ ಪಾಲು ಸಲ್ಲಿಸುತ್ತಿದ್ದ ಸಾರ್ವಜನಿಕ ಉದ್ದಿಮೆಗಳು ಜಾಗತೀಕರಣದ ನಂತರ ದಿಡೀರನೆ ಖಳನಾಯಕರಾಗಿ ಬಿಟ್ಟಿದ್ದು ಅಸಹಜವೇನಲ್ಲ. ಯಾಕೆಂದರೆ ಯಾವ ಬೆಲೆ ತೆತ್ತಾದರೂ ಖಾಸಗೀಕರಣ ಮತ್ತು ಮುಕ್ತ ಮಾರುಕಟ್ಟೆ ನೀತಿಯನ್ನು ಅನುಷ್ಠಾನಗೊಳಿಸಲು ಕಟಿಬದ್ದವಾಗಿದ್ದ ಸರಕಾರಗಳು ಸಾರ್ವಜನಿಕ ಉದ್ದಿಮೆಗಳನ್ನು ನಿರ್ಲಕ್ಷಿಸಿದ್ದರ ಪರಿಣಾಮವಾಗಿ ಇವತ್ತು ಸಾರ್ವಜನಿಕ ಉದ್ದಿಮೆಗಳ ಪರವಾದ ಸಾರ್ವಜನಿಕರ ಸಹಾನುಭೂತಿಯನ್ನೂ ಕಾಣದಂತಾಗಿದೆ. ತೊಂಭತ್ತರ ದಶಕದ ನಂತರ ದೇಶದೊಳಗೆ ಕಾಲಿಟ್ಟ ವಿದೇಶಿ ಮತ್ತು ಸ್ವದೇಶಿ ಬಹುರಾಷ್ಟ್ರೀಯ ಕಂಪನಿಗಳಿಗೆ ಸರಕಾರ ಕೊಡಮಾಡಿದ ರಿಯಾಯಿತಿಗಳಲ್ಲಿ ಶೇಕಡಾ ಹತ್ತರಷ್ಟನ್ನಾದರು ನಮ್ಮ ಸಾರ್ವಜನಿಕ ಉದ್ದಿಮೆಗಳಿಗೆ ನೀಡಿದ್ದೇ ಆಗಿದ್ದರೆ ಇವತ್ತು ಸಾರ್ವಜನಿಕ ಉದ್ದಿಮೆಗಳನ್ನು ಮುಚ್ಚುವ ಪರಿಸ್ಥಿತಿ ಸೃಷ್ಠಿಯಾಗುತ್ತಿರಲಿಲ್ಲ.

ಸಾರ್ವಜನಿಕ ಉದ್ದಿಮೆಗಳು ಸ್ವತ: ಮುಚ್ಚಿಹೋಗುವಂತೆ ಮಾಡಲು ಸರಕಾರಗಳು ತೊಂಭತ್ತರ ದಶಕದ ಪ್ರಾರಂಭದಿಂದಲೇ ಕಾರ್ಯತಂತ್ರಗಳನ್ನು ಅನುಸರಿಸತೊಡಗಿದವು. ಯಾವಾಗ ನಮ್ಮ ಆರ್ಥಿಕತೆಯ ದಿಡ್ಡಿಬಾಗಿಲನ್ನು ತೆರೆಯಲಾಯಿತೊ ಆಗ ಒಳನುಸುಳಿದ ವಿದೇಶಿ ಕಂಪನಿಗಳ ಉತ್ಪಾದನೆ ಮತ್ತು ಸೇವೆಗಳ ಜೊತೆಗೆ ಸ್ಪರ್ದಿಸಲಾಗದೆ ಬಸವಳಿದ ನಮ್ಮ ಸಾರ್ವಜನಿಕ ಉದ್ದಿಮೆಗಳಿಗೆ ಸರಕಾರ ಯಾವುದೇ ಚಿಕಿತ್ಸೆ ನೀಡದೆ ಅವುಗಳು ಸ್ವಯಂನಾಶವಾಗಲೆಂದು ಕಾಯಲು ಶುರು ಮಾಡಿದವು.

ಇವತ್ತು ದೇಶದಲ್ಲಿ ಕೇಂದ್ರ ಸರಕಾರವು ಸರಿಸುಮಾರು 260ಕ್ಕೂ ಅಧಿಕ ಸಾರ್ವಜನಿಕ ಉದ್ದಿಮೆಗಳನ್ನು ನಡೆಸುತ್ತಿದ್ದರೆ, ರಾಜ್ಯ ಸರಕಾರಗಳು ಕೂಡ ನೂರಾರು ಉದ್ದಿಮೆಗಳನ್ನು ನಡೆಸುತ್ತಿವೆ. ಇವತ್ತು ಬಹುತೇಕ ಉದ್ದಿಮೆಗಳು ನಷ್ಟದಲ್ಲಿ ನಡೆಯುತ್ತಿದ್ದು, ಇವುಗಳ ಪುನಶ್ಚೇತನದ ಬಗ್ಗೆ ಯಾವ ನಾಯಕರುಗಳಿಗೂ ಆಸಕ್ತಿಯಿಲ್ಲದಂತಾಗಿದೆ. ಕೇವಲ ಜಾಗತೀಕರಣದಿಂದ ಮಾತ್ರ ಈ ಉದ್ದಿಮೆಗಳು ನಷ್ಟವನ್ನನುಭವಿಸುತ್ತವೆಯೇ ಎಂದು ನೋಡಿದರೆ ಸಿಗುವ ಉತ್ತರ ಅಚ್ಚರಿದಾಯಕವಾಗಿವೆ. ಯಾಕೆಂದರೆ ದೇಶದ ಯಾವುದೇ ಆರ್ಥಿ ತಜ್ಞರುಗಳನ್ನು ಕೇಳಿದರೂ ಅವರು ನೀಡುವ ಉತ್ತರ ಸರಳ, ಸಾರ್ವಜನಿಕ ಉದ್ಯಮಗಳ ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪ, ಆಡಳಿತ ನಡೆಸುವ ಅಧಿಕಾರಿವೃಂದದ ಭ್ರಷ್ಟತೆ ಮತ್ತು ಹೆಚ್ಚುತ್ತಿರುವ ಉತ್ಪಾದನಾ ವೆಚ್ಚಗಳ ಬಗ್ಗೆ ಹೇಳುತ್ತಾ ಹೋಗುತ್ತಾರೆ. ಯಾಕೆ ಹೀಗೆ ಎಂದು ನೋಡಿದರೆ ಸಾರ್ವಜನಿಕ ಉದ್ಯಮಗಳಿಗೆ ರಾಜಕೀಯ ವ್ಯಕ್ತಿಗಳನ್ನು ಅದ್ಯಕ್ಷರುಗಳನ್ನಾಗಿ ನೇಮಿಸುವುದು, ಸದರಿ ಕ್ಷೇತ್ರದ ಬಗ್ಗೆ ಕುಶಲತೆ ಇರದ ಭ್ರಷ್ಟ ಐ.ಎ.ಎಸ್. ಅಧಿಕಾರಿಗಳನ್ನು ಆಡಳಿತ ನೋಡಿಕೊಳ್ಳಲು ನೇಮಿಸುವ ಸರಕಾರದ ಪರಿಪಾಠ, ಆ ಸಂಸ್ಥೆಗಳನ್ನು ನಡೆಸುವವರ ಭ್ರಷ್ಟತೆಯನ್ನು ನಿಯಂತ್ರಣ ಮಾಡಲಾಗದ ಸರಕಾರಗಳ ಹೊಣೆಗೇಡಿತನ ಈ ಉದ್ದಿಮೆಗಳ ನಷ್ಟಕ್ಕೆ ಕಾರಣವಾಗಿದೆ.ಇನ್ನು ಬದಲಾದ ಕಾಲಮಾನಕ್ಕೆ ತಕ್ಕಂತೆ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದೆ ಇರುವುದು. ತನ್ನ ಕಾರ್ಮಿಕರ ಕುಶಲತೆ ಹೆಚ್ಚಿಸಲು ಬೇಕಾದ ನವನವೀನ ತಂತ್ರಜ್ಞಾನಗಳ ಪರಿಚಯವನ್ನಾಗಲಿ ತರಭೇತಿಯನ್ನಾಗಲಿ ಕೊಡಿಸುವ ಮನಸ್ಸು ಮಾಡದಿರುವುದು. ಜಾಗತೀಕರಣದ ನಂತರ ಪರಿಚಯಿಸಲ್ಪಟ್ಟ ಹೊಸ ಹೊಸ ಮಾಧ್ಯಮಗಳನ್ನು ಬಳಸಿಕೊಂಡು ಮಾರುಕಟ್ಟೆಯ ಆಳ-ಅಗಲಗಳನ್ನು ಪರಿಚಯಿಸಿಕೊಂಡು ಮಾರ್ಕೆಟಿಂಗ್ ಮಾಡುವಲ್ಲಿ ವಿಫಲವಾಗಿರುವುದು. ಜೊತೆಗೆ ತನ್ನ ಸಾಂಪ್ರದಾಯಿಕ ಉತ್ಪಾದನಾ ರೀತಿಯನ್ನು ಬದಲಾಯಿಸಿಕೊಳ್ಳದೆ ಇರುವುದು. ಆಡಳಿತಾತ್ಮಕವಾಗಿ ಅನಗತ್ಯ ವೆಚ್ಚಗಳನ್ನು ಮಾಡುವ ರಾಜಕೀಯದ ಮತ್ತು ಅಧಿಕಾರಿಗಳ ಮೇಲೆ ನಿಯಂತ್ರಣ ಸಾದಿಲಾಗದೇ ಇರುವುದು, ಇವೆಲ್ಲದರ ಜೊತೆಗೆ ನಮ್ಮ ಮಾರುಕಟ್ಟೆಯಲ್ಲಿನ ಎಲ್ಲ ನಿಯಂತ್ರಣಗಳನ್ನು ತೆಗೆದುಹಾಕಿ ವಿದೇಶಿ ಸರಕುಗಳಿಗೆ ಅವಕಾಶ ನೀಡಿದ್ದು, ಅವುಗಳೊಂದಿಗೆ ಸ್ಪರ್ದಿಸುವ ಶಕ್ತ್ನಿ ನಮ್ಮ ಉದ್ದಿಮೆಗಳಿಗೆ ಇಲ್ಲದಿರುವುದೂ ಒಂದು ಕಾರಣವಾಗಿದೆ. ಹೀಗೆ ಇಂತಹ ಹಲವಾರುಕೊರತೆಗಳ ನಡುವೆಯೂ ನಮ್ಮ ಸಾರ್ವಜನಿಕ ಉದ್ದಿಮೆಗಳು ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ನೀಡಿಸಮಾಜವಾದದ ಆಶಯಗಳನ್ನು ಈಡೇರಿಸುವ ದಿಸೆಯಲ್ಲಿ ಕೆಲಸ ಮಾಡುತ್ತಿದ್ದವು. ಆದರೆ ಸರಕಾರಗಳನ್ನು ನಡೆಸುವವರ ಅನಾಸಕ್ತಿ ,ಭ್ರಷ್ಟಾಚಾರಗಳು ಸದರಿ ಉಧ್ಯಮಗಳನ್ನು ರೋಗಗ್ರಸ್ತವನ್ನಾಗಿ ಮಾಡಿವೆ.

ಇದನ್ನೇ ಕಾಯುತ್ತಿದ್ದಂತಹ ಬಂಡವಾಳಶಾಹಿಪರ ನಿಲುವಿನ ಸರಕಾರಗಳು ಇದೀಗ ನಷ್ಟದಲ್ಲಿರುವ ಅನೇಕ ಸಾರ್ವಜನಿಕ ಉದ್ದಿಮೆಗಳನ್ನು ಹಂತಹಂತವಾಗಿ ಖಾಸಗೀಕರಣ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿವೆ. ಕೆಲವೇ ದಿನಗಳ ಹಿಂದೆ ನಮ್ಮ ಬಹುದೊಡ್ಡ ಉದ್ಯಮವಾಗಿದ್ದ ಹೆಚ್.ಎಂ.ಟಿ.ಯನ್ನು ಮುಚ್ಚಿದ್ದನ್ನು ನಾವು ನೆನಪಿಸಿಕೊಳ್ಳಬಹುದು. ಇದೀಗ ಆ ಸಾಲಿಗೆ. ದೇಶದ ಅತ್ಯಂತ ಹಳೆಯದಾದ ಬಿ.ಎಸ್.ಎನ್.ಎಲ್, ಓ.ಎನ್.ಜಿ.ಸಿ., ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಹಿಂದುಸ್ಥಾನ್ ಪೋಟೋಫಿಲ್ಮ್ಸ್, ಹಿಂದುಸ್ಥಾನ ಫರ್ಟಿಲೈಸರ್ ಕಾರ್ಪೋರೇಶನ್ ಮುಂತಾದವುಗಳನ್ನು ಮುಚ್ಚಲು ನೀತಿ ಆಯೋಗವು ಸರಕಾರಕ್ಕೆ ಶಿಫಾರಸ್ಸು ಮಾಡಿದೆ. ಈ ಉದ್ದಿಮೆಗಳ ಬಗ್ಗೆ ಒಂದಿಷ್ಟು ಮಾಹಿತಿ ನೋಡಿ.

ಸರಕಾರಿ ಸ್ವಾಮ್ಯದ ಬಿ.ಎಸ್.ಎನ್.ಎಲ್. ಇವತ್ತು ನಷ್ಟದಲ್ಲಿದ್ದರೆ ಅದಕ್ಕೆ ಕಾರಣ ಸ್ವತ: ಸರಕಾರದ ನೀತಿಗಳೇ: ಉದಾರೀಕರಣದ ನಂತರ ದೂರಸಂವಹನದ ತರಂಗಾಂತರಗಳನ್ನು ಖಾಸಗಿಯವರಿಗು ಲಭ್ಯವಾಗುವಂತೆ ಹರಾಜು ಹಾಕಿ ಅನೇಕ ಬಹುರಾಷ್ಟ್ರೀಯ ಕಂಪನಿಗಳೂ ಈ ಸೇವಾ ಕ್ಷೇತ್ರಕ್ಕೆ ಕಾಲಿಡಲು ಅನುವು ಮಾಡಿಕೊಡಲಾಯಿತು. ಇದನ್ನು ಬಳಸಿಕೊಂಡ ಖಾಸಗಿ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು, ಎಲ್ಲಿ ಬಿ.ಎಸ್.ಎನ್.ಎಲ್. ಕಾಲಿಟ್ಟಿರಲಿಲ್ಲವೊ ಅಂತಹ ಕಡೆಯಲ್ಲಿಯೂ ತನ್ನ ಸೇವೆ ದೊರೆಯುವಂತೆ ಮಾಡಿ ಹಲವಾರು ಉಚಿತ ಕೊಡುಗೆಗಳ ಆಕರ್ಷಣೆಯ ಮೂಲಕ ಗ್ರಾಹಕರನ್ನು ಸೆಳೆದವು. ಇಂತಹ ಸ್ಪರ್ದೆಯನ್ನು ನಿರೀಕ್ಷಿಸಿ ಸರಕಾರಿ ಸ್ವಾಮ್ಯದ ದೂರವಾಣಿ ಇಲಾಖೆಯ ಸುಧಾರಣೆಗೆ ಮುಂದಾಗ ಬೇಕಿದ್ದ ಕೇಂದ್ರ ಸರಕಾರ ಯಾವ ಕ್ರಮಗಳನ್ನೂ ಕೈಗೊಳ್ಳದೆ ತಟಸ್ಥವಾಗುಳಿಯಿತು. ಇದು ಎಷ್ಟರಮಟ್ಟಿಗಿನ ನಿರ್ಲಕ್ಷ್ಯವೆಂದರೆ ಬಹಳಷ್ಟು ವರ್ಷಗಳಿಂದ ಹೊಸ ಉದ್ಯೋಗಿಗಳನ್ನೇ ನೇಮಕ ಮಾಡಿಕೊಳ್ಳದಷ್ಟು ಉದಾಸೀನತೆ ತೋರಿತು. ಮೊಬೈಲ್ ಭರಾಟೆಯಲ್ಲಿ ಹಾಗು ನಗರಗಳಲ್ಲಿ ಖಾಸಗಿಯವರಿಗೆ ಆಪ್ಟಿಕ್ ಫೈಬರ್ ಅಳವಡಿಸಿಕೊಳ್ಳಲು ಅವಕಾಶ ಕೊಟ್ಟು ತನ್ನ ಸಂಸ್ಥೆಯನ್ನು ತಾನೇ ನಾಶ ಮಾಡುತ್ತಿದೆ. ಇದೀಗ ಈ ಸಂಸ್ಥೆ ಸಾವಿರಾರು ಕೋಟಿಗಳಷ್ಟು ನಷ್ಟ ಅನುಭವಿಸುತ್ತಿದ್ದು, ಇನ್ನೇನು ಕೆಲದಿನಗಳಲ್ಲಿ ಇದೂ ಸಹ ಮುಚ್ಚಲ್ಪಡುವ ಸಾಧ್ಯತೆ ಹೆಚ್ಚಾಗಿದೆ.

ಹೀಗೆ ಸಾರ್ವಜನಿಕ ಉದ್ದಿಮೆಗಳನ್ನು ನಾಶ ಮಾಡುವ ಎರಡು ವಿಧಾನಗಳಿವೆ: ಒಂದು, ಉದ್ಯಮದ ಷೇರುಗಳನ್ನು ಖಾಸಗಿ ವ್ಯಕ್ತಿ ಮತ್ತು ಕಂಪನಿಗಳಿಗೆ ಮಾರುವುದು. ಹೆಚ್ಚು ಶೇರುಗಳನ್ನು ಮಾರಿದ ನಂತರ ಸರಕಾರಕ್ಕೆ ಅದರ ಮೇಲೆ ಯಾವುದೇ ಹಿಡಿತ ಇರುವುದಿಲ್ಲ. ಇನ್ನು ಎರಡನೆಯದು, ಯಾರೂ ಷೇರುಗಳನ್ನು ಖರೀಧಿ ಮಾಡದೆ ಹೋದಂತಹ ಕಂಪನಿಗಳನ್ನು ಮುಚ್ಚಿ, ಅದರ ಚರ ಮತ್ತು ಸ್ಥಿರ ಆಸ್ತಿಯನ್ನು ಮಾರುತ್ತಾ ಹೋಗುವುದು. ಈ ರೀತಿಯ ಪ್ರಕ್ರಿಯೆಗೆ ಕಾದುಕೂತಿರುವ ಖಾಸಗಿ ಬಂಡವಾಳಶಾಹಿಗಳು ಸರಕಾರದ ಮೇಲೆ ಒತ್ತಡ ಹೇರುತ್ತ ಬರುತ್ತಿರುವುದೇ ಇವತ್ತು ನೀತಿ ಆಯೋಗ ಇಂತಹದೊಂದು ಕ್ರಮಕ್ಕೆ ಮುಂದಾಗಿರುವುದು. ಈ ವಿಚಾರದಲ್ಲಿ ಮಾತ್ರ ಯಾವ ಪಕ್ಷಗಳೂ ಹಿಂದೆ ಬಿದ್ದಿಲ್ಲ ಮತ್ತು ವಿರೋಧವನ್ನೂ ವ್ಯಕ್ತ ಪಡಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕ ಉದ್ದಿಮೆಗಳನ್ನು ಮಾರುವ-ಮುಚ್ಚುವ ಪ್ರಕ್ರಿಯೆ ಯಾವ ಅಡೆತಡೆಯೀ ಇಲ್ಲದೆ ನಡೆಯುವುದು ಖಚಿತ!

ಇದೀಗ ನೀತಿ ಆಯೋಗವು ಸರಿಸುಮಾರು 74 ಇಂತಹ ಉದ್ದಿಮೆಗಳನ್ನು ಗುರುತಿಸಿದ್ದು, ಇವುಗಳಲ್ಲಿ 26 ಉದ್ದಿಮೆಗಳು ಸಂಪೂರ್ಣವಾಗಿ ಪುನಶ್ಚೇತನಗೊಳ್ಳಲು ಅಸಾದ್ಯವೆನಿಸಿವೆ ಎಂದು ಹೇಳಿದೆ. ಇವುಗಳನ್ನು ಮುಚ್ಚುವುದೇ ಆದರೆ ನೀತಿ ಆಯೋಗವು ಮುಂದೆ ಏನು ಮಾಡಬಹುದೆಂಬುದನ್ನು ಸಹ ಹೇಳಿದೆ. ಅದರ ಪ್ರಕಾರ ಉದ್ದಿಮೆಗಳ ಕಟ್ಟಡಗಳನ್ನು, ಅದರ ಯಂತ್ರೋಪಕರಣಗಳನ್ನು, ಹರಾಜು ಹಾಕಲಾಗುತ್ತದೆ. ಇಂತಹವನ್ನು ಸಾಮಾನ್ಯಾರ್ಯಾರು ಖರೀದಿಸಲು ಸಾದ್ಯವಿಲ್ಲ. ಹೀಗಾಗಿ ಅತಿ ಕಡಿಮೆ ಬೆಲೆಗೆ ಖಾಸಗಿ ಕಂಪನಿಗಳೇ ಖರೀದಿಸುವುದು ಗ್ಯಾರಂಟಿ. ಇನ್ನು ಸದರಿ ಉದ್ದಿಮೆಗೆ ಸೇರಿದ ಭೂಮಿಯನ್ನು ಆಯಾ ರಾಜ್ಯಸರಕಾರಗಳಿಗೆ ನೀಡುವುದಾಗಿ ಹೇಳಿದ್ದರೂ, ಸರಕಾರಗಳನ್ನು ನಿಯಂತ್ರಿಸುತ್ತಿರುವ ರಿಯಲ್ ಎಷ್ಟೇಟ್ ಮಾಫಿಯಾ ಹೇಗಾದರು ಮಾಡಿ ಈ ನೆಲವನ್ನು ಕಬಳಿಸುವುದುಸಹ ಖಚಿತ.

ಹೀಗೆ ಸಾರ್ವಜನಿಕ ಉದ್ದಿಮೆಗಳನ್ನು ಪುನಶ್ಚೇತನಗೊಳಿಸುವ ಯಾವ ಉದ್ದೇಶಗಳನ್ನು ಹೊಂದಿರದ ಸರಕಾರ ಪರೋಕ್ಷವಾಗಿ ಖಾಸಗಿ ಬಂಡವಾಳಶಾಹಿಗಳಿಗೆ ನೆರವಾಗಲು ಹೊರಟಿದ್ದು, ಈ ಉದ್ದಿಮೆಗಳನ್ನು ನಂಬಿ ಬದುಕುತ್ತಿರುವ ಲಕ್ಷಾಂತರ ಕಾರ್ಮಿಕರ ಬದುಕನ್ನೂ ಸಹ ಅತಂತ್ರಗೊಳಿಸಲು ಹೊರಟಿದೆ.

ಮುಕ್ತ ಆರ್ಥಿಕ ನೀತಿಯ ಒಂದೊಂದೇ ದುಷ್ಪರಿಣಾಮಗಳು ಈ ರೀತಿಯಲ್ಲಿ ಅನಾವರಣಗೊಳ್ಳುತ್ತಿರುವ ಸಂದರ್ಭದಲ್ಲಿ ನಾವಿಂದು ನಿಂತಿದ್ದೇವೆ. ಮುಂದೊಂದು ದಿನ ಸಂವಿದಾನದಲ್ಲಿನ ಸಮಾಜವಾದಿ ಸಮಾಜದ ಆಶಯವನ್ನು ತೆಗೆದುಹಾಕುವ ಕಾಲ ದೂರವಿಲ್ಲವೆನಿಸುತ್ತದೆ

No comments:

Post a Comment