Aug 10, 2016

ಹಿವ್ರೆ ಬಜಾರ್ ಗ್ರಾಮ - ಮಳೆನೆರಳಿನ ಗ್ರಾಮಗಳಿಗೆ ಒಂದು ಮಾದರಿ

ಹಿವ್ರೆ ಬಜಾರಿನಲ್ಲಿರುವ ಇಂಗುಗುಂಡಿ
ಆನಂದ ಪ್ರಸಾದ್
10/08/2016
ಮಹಾರಾಷ್ಟ್ರದ ಔರಂಗಾಬಾದ್ ಜಿಲ್ಲೆಯಲ್ಲಿರುವ ಒಂದು ಗ್ರಾಮ ಹಿವ್ರೆ ಬಜಾರ್. ಇಲ್ಲಿ ಬೀಳುವ ಮಳೆಯ ಪ್ರಮಾಣ ವಾರ್ಷಿಕ 300-400 ಮಿ. ಮೀ. ಇಷ್ಟು ಕಡಿಮೆ ಪ್ರಮಾಣದ ಮಳೆಯನ್ನು ಪಡೆದರೂ ಈ ಗ್ರಾಮ ಈ ವರ್ಷದ ಭೀಕರ ಬರಗಾಲದಲ್ಲಿಯೂ ಕುಡಿಯುವ ನೀರಿಗಾಗಿ ಟ್ಯಾಂಕರ್ ನೀರನ್ನು ಅವಲಂಬಿಸಲಿಲ್ಲ. ಈ ಪವಾಡ ಸಾಧ್ಯವಾದದ್ದು ಮಳೆ ನೀರಿನ ಕೊಯ್ಲು ಹಾಗೂ ಸಮರ್ಪಕ ಬೆಳೆ ಪದ್ಧತಿ ಅಳವಡಿಸಿಕೊಂಡಿರುವುದರಿಂದ. ಇಲ್ಲಿ ಪ್ರತಿ ವರ್ಷ ಡಿಸೆಂಬರ್ 31ರಂದು ಆ ವರ್ಷದ ಮಳೆಯ ಪ್ರಮಾಣ ಹಾಗೂ ನೀರಿನ ಲಭ್ಯತೆಯನ್ನು ಪರಾಮರ್ಶಿಸಲು ಗ್ರಾಮಸ್ಥರ ಸಭೆ ನಡೆಸಲಾಗುತ್ತದೆ. ಕಳೆದ ವರ್ಷ ಇಂಥ ಸಭೆಯಲ್ಲಿ ಬರಗಾಲದ ಪರಿಸ್ಥಿತಿಯನ್ನು ಮನಗಂಡು ಮುಂದಿನ ಮಳೆಗಾಲದವರೆಗೆ ಯಾವುದೇ ಬೆಳೆಯನ್ನು ಬೆಳೆಯದೇ ಇರುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇದರಿಂದಾಗಿಯೇ ಇಡೀ ಔರಂಗಾಬಾದ್ ಜಿಲ್ಲೆಯಲ್ಲಿ ಕುಡಿಯುವ ನೀರಿನ ಕೊರತೆ ಆದರೂ ಹಿವ್ರೆ ಬಜಾರ್ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಆಗಲಿಲ್ಲ. ಈ ಗ್ರಾಮದಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಲಾಗಿದೆ. ಹೀಗಾಗಿ 20ರಿಂದ 40 ಆಳದಲ್ಲಿ ತೆರೆದ ಬಾವಿಗಳಲ್ಲಿ ಬರಗಾಲದಲ್ಲಿಯೂ ಕುಡಿಯುವ ನೀರು ಲಭ್ಯ.

ಈ ಹಿವ್ರೆ ಬಜಾರ್ ಗ್ರಾಮದಲ್ಲಿ ಇಂಥ ಪವಾಡ ನಡೆಸಿದ ರೂವಾರಿ ಪೋಪಟ್ ರಾವ್ ಪವಾರ್. ಇವರ ಮುತುವರ್ಜಿ ಹಾಗೂ ಮಾರ್ಗದರ್ಶನದಿಂದ 20 ವರ್ಷಗಳ ಅವಧಿಯಲ್ಲಿ ಒಣಗಿ ಬೆಂಗಾಡಾಗಿದ್ದ ಹಿವ್ರೆ ಬಜಾರ್ ನಂದನವನವಾಗಿ ಹಸುರಿನಿಂದ ತುಂಬಿ ಕಂಗೊಳಿಸುತ್ತಿದೆ. ಹಿವ್ರೆ ಬಜಾರ್ ಇಂದು ಇಡೀ ದೇಶದಲ್ಲಿಯೇ ಇಂದು ಮಾದರಿ ಗ್ರಾಮವಾಗಿ ಗುರುತಿಸಿಕೊಂಡಿದೆ ಹಾಗೂ ಗಾಂಧೀಜಿಯವರ ಗ್ರಾಮ ಸ್ವರಾಜ್ಯವನ್ನು ನನಸಾಗಿಸಿದೆ. ಇಂದು ಹಿವ್ರೆ ಬಜಾರ್ ಗ್ರಾಮದಲ್ಲಿ 60 ಜನ ಮಿಲಿಯಾಧೀಶ್ವರ ರೈತರು ಇದ್ದಾರೆ. 1994ಕ್ಕೂ ಮೊದಲು ಈ ಗ್ರಾಮ ಬರಗಾಲ ಹಾಗೂ ನೀರಿನ ಕೊರತೆಯಿಂದ ಬಳಲಿ ಜನ ಕೆಲಸ ಅರಸಿ ನಗರಗಳಿಗೆ ಹೋಗುತ್ತಿದ್ದರು. ಹಾಗೆ ವಲಸೆ ಹೋದ ಸಾಕಷ್ಟು ಮಂದಿ ಇಂದು ನಗರಗಳಿಂದ ವಾಪಸ್ ಬಂದು ಗ್ರಾಮದಲ್ಲಿ ನೆಲೆಸಿದ್ದಾರೆ. ಪೋಪಟ್ ರಾವ್ ಅವರು ನಗರದಲ್ಲಿ ವಾಣಿಜ್ಯ ಸ್ನಾತಕೋತ್ತರ ಪದವಿ ಪಡೆದರೂ ನಗರ ಜೀವನದ ಆರಾಮ ಬದುಕಿನ ಸಾಧ್ಯತೆ ಇದ್ದರೂ ಮರಳಿ ಗ್ರಾಮಕ್ಕೆ ಬಂದು ಇಡೀ ಗ್ರಾಮದ ಚಿತ್ರಣವನ್ನೇ ಬದಲಿಸಿದರು. ಸರಕಾರಿ ಯೋಜನೆಯನ್ನು ಉಪಯೋಗಿಸಿಕೊಂಡು ಹಾಗೂ ಗ್ರಾಮಸ್ಥರ ಶ್ರಮದಾನದ ಮೂಲಕ ಗ್ರಾಮದಲ್ಲಿ ೪೦,೦೦೦ ಮಳೆ ನೀರು ತಡೆ ಹಿಡಿಯುವ ಕಣಿ ಹಾಗೂ ಬದುಗಳನ್ನು ನಿರ್ಮಿಸಲು ಮುಂದಾಳತ್ವ ವಹಿಸಿದರು. ಗ್ರಾಮದಲ್ಲಿ 10 ಲಕ್ಷಕ್ಕೂ ಅಧಿಕ ಮರಗಳನ್ನು ಬೆಳೆಸಿದರು. ಮಳೆನೀರು ತಡೆಹಿಡಿದು ನೀರಿಂಗಿಸುವ ತಡೆಗಟ್ಟ, ಇಂಗು ಗುಂಡಿ, ಕೆರೆಗಳ ಹೂಳೆತ್ತಿ ನೀರು ನಿಲ್ಲುವಂತೆ ಮಾಡಿ ಅಂತರ್ಜಲ ಹೆಚ್ಚುವಂತೆ ಮಾಡಿದರು. ಇದರ ಪರಿಣಾಮಾವಾಗಿ ಮೊದಲು ಬಹಳ ಆಳದಲ್ಲಿದ್ದ ನೀರಿನ ಮಟ್ಟ 15-20 ಅಡಿಗೆ ಏರಿತು. ಗ್ರಾಮದಲ್ಲಿ ಹೆಚ್ಚು ನೀರು ಬೇಡುವ ಭತ್ತ, ಬಾಳೆ, ಕಬ್ಬು ಮೊದಲಾದ ಬೆಳೆ ಬೆಳೆಯುವುದನ್ನು ನಿಷೇಧಿಸಿದರು. ಕಡಿಮೆ ನೀರು ಬಳಸಿ ಅಥವಾ ಹನಿ ನೀರಾವರಿ ಬಳಸಿ ಬೆಳೆಯುವ ಜೋಳ, ಬಾಜ್ರಾ, ನೀರುಳ್ಳಿ, ದ್ವಿದಳ ಧಾನ್ಯಗಳು, ಹೂವು, ಹಣ್ಣು, ತರಕಾರಿ ಬೆಳೆಗಳನ್ನು ಬೆಳೆಯುವ ಯೋಜನೆ ರೂಪಿಸಿ ಗ್ರಾಮಸ್ಥರ ಆದಾಯ ಹೆಚ್ಚುವಂತೆ ಮಾಡಿದರು. ಜೊತೆಗೇ ಹೈನುಗಾರಿಕೆ ಅಭಿವೃದ್ಧಿಪಡಿಸಿ ಇಂದು ಗ್ರಾಮದಲ್ಲಿ ಬರಗಾಲದ ಪರಿಸ್ಥಿತಿಯಲ್ಲಿಯೂ ದೈನಿಕ 4000 ಲೀ. ಹಾಲು ಉತ್ಪಾದನೆ ಆಗುವಂತೆ ಆಗಿದೆ. ಹೈನುಗಾರಿಕೆಗೆ ಬೇಕಾಗುವ ಹುಲ್ಲು ಗ್ರಾಮದಲ್ಲಿಯೇ ಉತ್ಪಾದನೆಯಾಗುತ್ತದೆ.

ಇಷ್ಟೆಲ್ಲಾ ಆಗಿರುವುದು ಕೇವಲ 300-400 ಮಿ. ಮೀ. ವಾರ್ಷಿಕ ಮಳೆಯ ನೀರನ್ನು ಇಂಗಿಸಿ ತೆರೆದ ಬಾವಿ, ಕೆರೆಗಳಲ್ಲಿ ಲಭ್ಯವಾಗುವ ನೀರಿನಿಂದ ಮಾತ್ರವೇ ಹೊರತು ಯಾವುದೇ ಅಣೆಕಟ್ಟಿನ ನೀರು ಅಥವಾ ಕಾಲುವೆಗಳ ನೀರಿನಿಂದ ಅಥವಾ ಕೊಳವೆ ಬಾವಿ ನೀರಿನಿಂದ ಅಲ್ಲ. ಇದನ್ನೆಲ್ಲ ಸಾಧಿಸಲು ಪೋಪಟ್ ರಾವ್ ಪವಾರ್ ಅವರಿಗೆ ಸ್ಫೂರ್ತಿ ಹಾಗೂ ಮಾದರಿ ಹಿವ್ರೆ ಬಜಾರ್ ಗ್ರಾಮದಿಂದ 35 ಕಿ.ಮೀ. ದೂರದಲ್ಲಿರುವ ಅಣ್ಣಾ ಹಜಾರೆಯವರ ರಾಲೇಗಾವ್ ಸಿದ್ಧಿ ಗ್ರಾಮದಲ್ಲಿ ಅವರು ನೀರಿಂಗಿಸುವಿಕೆ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು. ಕರ್ನಾಟಕದಲ್ಲಿ ಕಳಸಾ ಬಂಡೂರಿ ಯೋಜನೆ ಅನುಷ್ಠಾನಕ್ಕೆ ಇರುವ ತಡೆ, ನೀರಿಗಾಗಿ ಹೋರಾಟ, ನ್ಯಾಯಾಧಿಕರಣದ ಕರ್ನಾಟಕಕ್ಕೆ ಅನುಕೂಲಕರವಲ್ಲದ ಮಧ್ಯಂತರ ತೀರ್ಪು, ಎತ್ತಿನ ಹೊಳೆ ಯೋಜನೆಗಾಗಿ ನಡೆಯುತ್ತಿರುವ ಹೋರಾಟ, ಅದಕ್ಕಾಗಿ ವೆಚ್ಚವಾಗುವ ಅಪಾರ ಹಣ ಇವುಗಳನ್ನೆಲ್ಲ ನೋಡಿದಾಗ ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಹಾಗೂ ಆಣೆಕಟ್ಟು ಹಾಗೂ ಕಾಲುವೆ ನೀರು ಲಭ್ಯವಿಲ್ಲದ ಪ್ರದೇಶಗಳಿಗೆ ಮಹಾರಾಷ್ಟ್ರದ ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳು 300-500 ಮೀ.ಮೀ. ವಾರ್ಷಿಕ ಮಳೆಯನ್ನು ಪಡೆದೂ ನೀರಿನ ಮಿತವ್ಯಯ ಹಾಗೂ ಮರ ಬೆಳೆಸಿ ಸಾಧಿಸಿದ ಯಶಸ್ಸು ಮಾದರಿಯೆನಿಸುತ್ತದೆ. ಏಕೆಂದರೆ ಕರ್ನಾಟಕದಲ್ಲಿ 500 ಮಿ.ಮೀ.ಗಿಂಥ ಕಡಿಮೆ ಮಳೆಯಾಗುವ ಜಿಲ್ಲೆಗಳು ಇಲ್ಲ (ಬರಗಾಲದ ವರ್ಷಗಳನ್ನು ಹೊರತುಪಡಿಸಿ).

ರಾಲೇಗಾವ್ ಸಿದ್ಧಿ ಹಾಗೂ ಹಿವ್ರೆ ಬಜಾರ್ ಗ್ರಾಮಗಳಲ್ಲಿ ನಡೆದ ಮಳೆ ನೀರಿಂಗಿಸುವ ಹಾಗೂ ಹಸುರು ಬೆಳೆಸುವ ಯೋಜನೆಯನ್ನು ಅನುಸರಿಸಲು ಕೋಟ್ಯಂತರ ರೂಪಾಯಿಗಳ ಅಗತ್ಯವಿಲ್ಲ. ಸರಕಾರದ ಯೋಜನೆಗಳನ್ನು ಬಳಸಿಕೊಂಡು ಮತ್ತು ಗ್ರಾಮೀಣ ಜನರ ಶ್ರಮದಾನದಿಂದ ಇಂಥ ಯೋಜನೆಗಳನ್ನು ಗ್ರಾಮಸ್ಥರೇ ನಡೆಸಲು ಸಾಧ್ಯವಿದೆ. ನೂರಾರು ಅಥವಾ ಸಾವಿರಾರು ಕೋಟಿ ರೂಪಾಯಿಗಳ ಯೋಜನೆ ಮುಗಿಯಲು ಹಲವಾರು ವರ್ಷಗಳನ್ನೇ ತೆಗೆದುಕೊಳ್ಳುವ ಕಾಮಗಾರಿಗಳ ಬದಲು ಅಥವಾ ನ್ಯಾಯಾಧಿಕರಣದ ತೀರ್ಪಿಗಾಗಿ ಕಾಯುತ್ತಾ ಹಲವಾರು ವರ್ಷಗಳನ್ನೇ ವ್ಯರ್ಥ ಮಾಡುವ ಬದಲು ಹಿವ್ರೆ ಬಜಾರ್ ಗ್ರಾಮದ ಯಶಸ್ಸನ್ನು ನಮ್ಮ ರಾಜ್ಯದ ಮಳೆ ಕಡಿಮೆ ಬೀಳುವ ಪ್ರದೇಶಗಳಲ್ಲಿ ಅಳವಡಿಸಿಕೊಳ್ಳಲು ಸಾಧ್ಯವಿದೆ. ಇದಕ್ಕಾಗಿ ನಮ್ಮ ರೈತ ಸಂಘಟನೆಗಳು, ಕನ್ನಡ ಸಂಘಟನೆಗಳು ಜನರಲ್ಲಿ ಅರಿವನ್ನು ಮೂಡಿಸುವ ಅಗತ್ಯ ಇದೆ. ನಮ್ಮ ಮಾಧ್ಯಮಗಳು ಈ ವಿಚಾರವಾಗಿ ನಿರಂತರವಾಗಿ ಜಾಗೃತಿ ರೂಪಿಸುವ ಅಗತ್ಯ ಇದೆ.

No comments:

Post a Comment