Aug 17, 2016

ಡಿಜಿಟಲ್ ಇಂಡಿಯಾ - ಘೋಷಣೆಗೆ ಮಾತ್ರ ಸೀಮಿತ

ಸಾಂದರ್ಭಿಕ ಚಿತ್ರ
ಆನಂದ ಪ್ರಸಾದ್
17/08/2016
ಭಾರತದಲ್ಲಿ ಅಂತರ್ಜಾಲ ಮೂಲಕ ವಿವಿಧ ಸೇವೆ, ಮನರಂಜನೆ, ಆರೋಗ್ಯ, ಶಿಕ್ಷಣ ನೀಡುವ ಮೋದಿಯವರ ಡಿಜಿಟಲ್ ಇಂಡಿಯಾ ಯೋಜನೆ ಕೇವಲ ಘೋಷಣೆಗೆ ಸೀಮಿತವಾಗಿದೆ. ಭಾರತವು ತನ್ನ ಜನಸಂಖ್ಯೆಯ 34% ಶೇಕಡಾ ಜನರಿಗೆ ಮಾತ್ರ ಅಂತರ್ಜಾಲ ಸೌಲಭ್ಯ ಒದಗಿಸಲು ಶಕ್ತವಾಗಿದೆ. ಉಳಿದ 66% ಶೇಕಡಾ ಜನ ಅಂತರ್ಜಾಲ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಏಷಿಯಾ -ಪ್ಯಾಸಿಫಿಕ್ ವಲಯದಲ್ಲಿ ಭಾರತವು ಅತ್ಯಂತ ಕಡಿಮೆ ವೇಗದ ಅಂತರ್ಜಾಲ ಸೌಲಭ್ಯ ನೀಡುವ ದೇಶ ಎನಿಸಿಕೊಂಡಿದೆ. ಮೋದಿಯವರ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದು ಎರಡು ವರ್ಷಗಳೇ ಉರುಳಿದರೂ ಭಾರತದ ಗ್ರಾಮೀಣ ಭಾಗಗಳಲ್ಲಿ ಅಂತರ್ಜಾಲ ಸೌಲಭ್ಯ ಲಭ್ಯತೆಯಲ್ಲಿ ಯಾವುದೇ ಸುಧಾರಣೆಯೂ ಆಗಿಲ್ಲ. ಗ್ರಾಮೀಣ ಭಾಗಗಳಲ್ಲಿ ಇಂದಿಗೂ ಬಹುತೇಕ ತೆವಳುವ ವೇಗದ 2ಜಿ ಮೊಬೈಲ್ ಇಂಟರ್ನೆಟ್ ಮಾತ್ರ ಲಭ್ಯವಿದೆ. ಭಾರತದ ನಗರಗಳು 4ಜಿ ಮೊಬೈಲ್ ಇಂಟರ್ನೆಟ್ ಸೌಲಭ್ಯವನ್ನು ಪಡೆಯುತ್ತಿರುವಾಗ ಗ್ರಾಮೀಣ ಭಾಗಗಳು ಇಂದಿಗೂ ತೆವಳುವ ವೇಗದ 2ಜಿ ಮೊಬೈಲ್ ಇಂಟರ್ನೆಟ್ ಪಡೆಯುತ್ತಾ ನಗರ ಹಾಗೂ ಹಳ್ಳಿಗಳ ಡಿಜಿಟಲ್ ಕಂದಕ ಮತ್ತಷ್ಟು ಅಗಲವಾಗುತ್ತಿದೆ.

ಖಾಸಗಿ ಬಂಡವಾಳ ಹಾಗೂ ಖಾಸಗಿ ಉದ್ಯಮಗಳು ಬರುವುದರಿಂದ ಮೂಲಭೂತ ಸೌಲಭ್ಯಗಳು ಹೆಚ್ಚುತ್ತವೆ ಎಂಬ ಮಾತಿದೆ. ಈ ವಿಷಯ ಗ್ರಾಮೀಣ ಭಾಗಗಳಲ್ಲಿ ನಿಜವಾಗಿಲ್ಲ. ಭಾರತದ ಖಾಸಗಿ ಮೊಬೈಲ್ ಕಂಪನಿಗಳು ಶೇಕಡಾ 60ಕ್ಕೂ ದೇಶದ ಶೇಕಡಾ 60ಕ್ಕೂ ಹೆಚ್ಚು ಜನ ವಾಸಿಸುವ ಗ್ರಾಮೀಣ ಭಾಗಗಳಿಗೆ ಸೂಕ್ತ ವೇಗದ ಮೊಬೈಲ್ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿವೆ. ಲಾಭದ ಮೇಲೆ ಮಾತ್ರ ಕಣ್ಣಿಟ್ಟಿರುವ ಖಾಸಗಿ ಕಂಪನಿಗಳು ಹೆಚ್ಚು ಲಾಭವಿಲ್ಲದ ಗ್ರಾಮೀಣ ಪ್ರದೇಶಗಳಲ್ಲಿ ಮೊಬೈಲ್ 3ಜಿ ಇಂಟರ್ನೆಟ್ ಸೇವೆ ಒದಗಿಸುವಲ್ಲಿ ಆಸಕ್ತಿ ವಹಿಸುತ್ತಿಲ್ಲ. ಏರ್ಟೆಲ್ ಕಂಪನಿ ತನ್ನ 'ಓಪನ್ ನೆಟ್ವರ್ಕ್' ವೆಬ್ ಸೈಟ್ ಮೂಲಕ ಕರ್ನಾಟಕದ ಹಲವು ಗ್ರಾಮೀಣ ಭಾಗಗಳಲ್ಲಿ 3ಜಿ ಸೇವೆ ಒದಗಿಸುತ್ತಿದ್ದೇನೆ ಎಂದು ಭೂಪಟದಲ್ಲಿ ತೋರಿಸುತ್ತಿದ್ದರೂ ಅದರ 3ಜಿ ಸೇವೆ ಟವರಿನ ಒಂದೆರಡು ಕಿ.ಮೀ. ದೂರಕ್ಕೂ ಲಭ್ಯವಾಗುವುದಿಲ್ಲ. ಇದರಿಂದಾಗಿ ಟವರಿನ ಬುಡದ ಸ್ವಲ್ಪ ದೂರದವರೆಗೆ ಮಾತ್ರ 3ಜಿ ಮೊಬೈಲ್ ಇಂಟರ್ನೆಟ್ ಲಭ್ಯವೇ ಹೊರತು ದೂರದ ಪ್ರದೇಶಗಳಿಗೆ 3ಜಿ ಮೊಬೈಲ್ ಇಂಟರ್ನೆಟ್ ಲಭ್ಯವಿಲ್ಲ. 3ಜಿ ತರಂಗಾಂತರ ಹರಾಜು ನಡೆದು ಆರು ವರ್ಷಗಳೇ ಉರುಳಿದರೂ ಅದನ್ನು ಪಡೆದ ಖಾಸಗಿ ಮೊಬೈಲ್ ಕಂಪನಿಗಳು ಇನ್ನೂ ದೇಶಾದ್ಯಂತ 3ಜಿ ಮೊಬೈಲ್ ಸೇವೆ ಒದಗಿಸಲು ಹಿಂದೇಟು ಹಾಕುತ್ತಿವೆ. ಸರ್ಕಾರದ ಯೋಜನೆಗಳು ಆರಂಭವಾಗಿ ಮುಗಿಯಲು ಹಲವಾರು ವರ್ಷಗಳೇ ಬೇಕಾಗುತ್ತವೆ. ಈಗ ಆ ಜಾಡ್ಯ ಖಾಸಗಿ ಕಂಪನಿಗಳಿಗೂ ಅಂಟಿಕೊಂಡಿದೆ. ರಿಲಯನ್ಸ್ ಜಿಯೋ ಕಂಪನಿ ಕಳೆದ ವರ್ಷದಿಂದಲೇ ದೇಶಾದ್ಯಂತ ತನ್ನ 4ಜಿ ಮೊಬೈಲ್ ಇಂಟರ್ನೆಟ್ ಸೇವೆಯನ್ನು ಸದ್ಯದಲ್ಲಿಯೇ ಆರಂಭಿಸುತ್ತೇನೆ ಎಂದು ಹೇಳುತ್ತಿದ್ದರೂ ಇನ್ನೂ ಅದನ್ನು ಆರಂಭಿಸಿಲ್ಲ. ಅದು ದೇಶಾದ್ಯಂತ ನಗರಗಳಲ್ಲಿ ತನ್ನ ಸೇವೆ ಆರಂಭಿಸಬಹುದಾದರೂ ಗ್ರಾಮೀಣ ಪ್ರದೇಶಗಳಲ್ಲಿ ತನ್ನ ಸೇವೆಯನ್ನು ಆರಂಭಿಸಲು ಇನ್ನೂ ಕೆಲವು ವರ್ಷಗಳು ಬೇಕಾಗಬಹುದು.

ಭಾರತದಲ್ಲಿ ವೇಗದ ಮೊಬೈಲ್ ಇಂಟರ್ನೆಟ್ ಸೇವೆಯ ವಿಸ್ತರಣೆಗೆ ಅಡ್ಡಿಯಾಗಿರುವುದು ಅದರ ದುಬಾರಿ ದರ. ಒಂದು ಜಿಬಿ 3ಜಿ ಇಂಟರ್ನೆಟ್ 250 ರೂಪಾಯಿಗಳಷ್ಟು ದುಬಾರಿಯಾಗಿದ್ದು ಇದು ಜನಸಾಮಾನ್ಯರು ಉಪಯೋಗಿಸಲು ಹಿಂಜರಿಯುವಂತಿದೆ ಏಕೆಂದರೆ ಗ್ರಾಮೀಣ ಹಾಗೂ ನಗರವಾಸಿ ಮಧ್ಯಮ ಹಾಗೂ ಕೆಳಮಧ್ಯಮ ವರ್ಗದ ಜನ ಇಷ್ಟು ಹಣ ಕೊಟ್ಟು ಇಂಟರ್ನೆಟ್ ಉಪಯೋಗಿಸುವ ಪರಿಸ್ಥಿತಿಯಲ್ಲಿ ಇಲ್ಲ. ಈ ರೀತಿಯ ದುಬಾರಿ ಇಂಟರ್ನೆಟ್ ದರಕ್ಕೆ ಖಾಸಗಿ ಕಂಪನಿಗಳು ದುಬಾರಿ ಹಣ ನೀಡಿ ತರಂಗಾಂತರ ಖರೀದಿಸಿರುವುದೂ ಒಂದು ಪ್ರಧಾನ ಕಾರಣವಾಗಿದೆ. 'ಮದುವೆಯಾಗದೆ ಹುಚ್ಚು ಬಿಡದು, ಹುಚ್ಚು ಬಿಡದೆ ಮದುವೆಯಾಗದು' ಎಂಬ ನಾಣ್ಣುಡಿಯಂತೆ ಹೆಚ್ಚು ಜನ ಹೆಚ್ಚು ಮೊಬೈಲ್ ಇಂಟರ್ನೆಟ್ ಬಳಸದೆ ದರ ಇಳಿಯದು, ದರ ಇಳಿಯದೆ ಹೆಚ್ಚು ಜನ ಹೆಚ್ಚು ಇಂಟರ್ನೆಟ್ ಬಳಸಲಾರರು ಎಂಬ ಪರಿಸ್ಥಿತಿ ದೇಶದಲ್ಲಿದೆ. ಮೊಬೈಲ್ ಕಂಪನಿಗಳು ವೇಗದ ಇಂಟರ್ನೆಟ್ ದರವನ್ನು ಜಿಬಿ ಒಂದಕ್ಕೆ ಐವತ್ತು ರೂಪಾಯಿಗಳಿಗಿಂಥ ಕಡಿಮೆ ಮಾಡದೆ ಹೋದರೆ ಇದು ಜನಸಾಮಾನ್ಯರಿಗೆ ಎಟುಕಲಾರದು.

ಭಾರತ ಸರ್ಕಾರವು ರಾಷ್ಟ್ರೀಯ ಆಪ್ಟಿಕ್ ಫೈಬರ್ ಜಾಲ ರೂಪಿಸಿ ದೇಶದ ಎಲ್ಲ ಗ್ರಾಮಗಳಿಗೆ ವೇಗದ ಇಂಟರ್ನೆಟ್ ಸೇವೆಯನ್ನು ವಿಸ್ತರಿಸುವ ಯೋಜನೆಯನ್ನು 2010ರಲ್ಲಿಯೇ ರೂಪಿಸಿದ್ದರೂ ಅದು ಆರು ವರ್ಷಗಳ ನಂತರವೂ ಕುಂಟುತ್ತಾ ಸಾಗಿದೆ. ಈ ಯೋಜನೆಯನ್ವಯ ಕರ್ನಾಟಕದಲ್ಲಿ 5500 ಗ್ರಾಮ ಪಂಚಾಯತಿಗಳ ಪೈಕಿ ಅಂದಾಜು 3000 ಗ್ರಾಮಪಂಚಾಯತಿಗಳಿಗೆ ಆಪ್ಟಿಕ್ ಫೈಬರ್ ಅಳವಡಿಸುವ ಕಾಮಗಾರಿ ಮುಗಿದಿದ್ದರೂ ಗ್ರಾಮೀಣ ಜನರಿಗೆ ಅದರ ಪ್ರಯೋಜನ ಲಭ್ಯವಾಗುವಂತೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಕೇವಲ ಗ್ರಾಮ ಪಂಚಾಯತಿಗಳಲ್ಲಿ ಮಾತ್ರ ವೇಗದ ಇಂಟರ್ನೆಟ್ ಲಭ್ಯವಾಗಿದೆಯೇ ಹೊರತು ಈ ಆಪ್ಟಿಕ್ ಫೈಬರ್ ಜಾಲವನ್ನು ಉಪಯೋಗಿಸಿ ಗ್ರಾಮೀಣ ಪ್ರದೇಶಗಳಲ್ಲಿ ಜನರಿಗೆ ಎಟಕುವ ದರದಲ್ಲಿ 3ಜಿ ಅಥವಾ 4ಜಿ ಮೊಬೈಲ್ ಸೇವೆ ರೂಪಿಸಲು ಬಿಎಸ್ಸೆನ್ನೆಲ್ ಯಾವುದೇ ಕ್ರಮಗಳನ್ನೂ ಕೈಗೊಂಡಿಲ್ಲ. ಹೀಗಾಗಿ ಆಪ್ಟಿಕ್ ಫೈಬರ್ ಜಾಲ ಅಳವಡಿಸಿದರೂ ಅದು ಜನಸಾಮಾನ್ಯರ ಪಾಲಿಗೆ ವ್ಯರ್ಥವೇ ಸರಿ. ಕೇಂದ್ರ ಸರ್ಕಾರಕ್ಕೆ ವೈಜ್ಞಾನಿಕ ಸಲಹೆ ನೀಡುವ ಯಾವುದೇ ಯೋಗ್ಯ ವ್ಯಕ್ತಿಗಳು ಇಂದು ಇಲ್ಲದಿರುವುದೇ ಇದಕ್ಕೆ ಕಾರಣವಾಗಿರುವಂತೆ ಕಾಣುತ್ತದೆ. ರಾಜೀವ ಗಾಂಧಿಯವರು ಪ್ರಧಾನಿಯಾಗಿದ್ದಾಗ ಸ್ಯಾಮ್ ಪಿಟ್ರೋಡಾ ಅವರು ಸೂಕ್ತ ಯೋಜನೆ ಹಾಗೂ ಸಲಹೆ ನೀಡಿ ದೇಶದಲ್ಲಿ ಟೆಲಿಕಾಂ ಸೌಲಭ್ಯ ಬೆಳೆಯಲು ಕಾರಣರಾದರು. ಇಂದು ಮೋದಿಯವರಿಗೆ ಗ್ರಾಮೀಣ ಜನರ ಬಗ್ಗೆ ಕಾಳಜಿ ಉಳ್ಳ ಸೂಕ್ತ ಸಲಹೆ ನೀಡುವ ವೈಜ್ಞಾನಿಕ ಸಲಹೆಗಾರರು ಇಲ್ಲದಿರುವುದು ದುರಂತವೇ ಸರಿ. ಇದರಿಂದಾಗಿ ಡಿಜಿಟಲ್ ಇಂಡಿಯಾ ಎಂಬ ಯೋಜನೆ ಕುಂಟುತ್ತಾ ಸಾಗುತ್ತಿದೆ. ಬಿಎಸ್ಸೆನ್ನೆಲ್ ಬಹುತೇಕ ಗ್ರಾಮೀಣ ಪ್ರದೇಶಗಳಲ್ಲಿ 2ಜಿ ಮೊಬೈಲ್ ಟವರುಗಳನ್ನು ಈಗಾಗಲೇ ಹೊಂದಿದ್ದು ಇವುಗಳನ್ನು ಮೇಲ್ದರ್ಜೆಗೆ ಏರಿಸುವುದು ಸರ್ಕಾರದ ಸಹಾಯದಿಂದ ಶೀಘ್ರವಾಗಿ ಸಾಧ್ಯ.

ಖಾಸಗಿ ಕಂಪನಿಗಳು ಸೌಲಭ್ಯ ಒದಗಿಸಲು ಹಿಂಜರಿಯುವ ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯ ಒದಗಿಸುವುದು ಸರ್ಕಾರದ ಬಾಧ್ಯತೆ ಆಗಿದೆ. ಉದಾಹರಣೆಗೆ ಹೆಚ್ಚು ಕಲೆಕ್ಷನ್ ಇಲ್ಲದ ಕಡೆ ಖಾಸಗಿಯವರು ಬಸ್ಸು ಓಡಿಸುವುದಿಲ್ಲ. ಇಂಥಲ್ಲಿ ಸರ್ಕಾರವು ಸರ್ಕಾರೀ ಬಸ್ಸುಗಳನ್ನು ಓಡಿಸುತ್ತದೆ. ಸರ್ಕಾರೀ ಬಸ್ಸುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕಾಗಿ ಪೇಟೆಗೆ ಹೋಗಿ ಬರಲು ರಿಯಾಯತಿ ದರದ ಪಾಸ್ ಸೌಲಭ್ಯ ಒದಗಿಸುತ್ತದೆ. ಅದೇ ರೀತಿ ಗ್ರಾಮೀಣ ರಸ್ತೆ, ಗ್ರಾಮೀಣ ವಿದ್ಯುದೀಕರಣ ಮೊದಲಾದವುಗಳನ್ನು ಹೆಸರಿಸಬಹುದು. ಇದು ಸರಕಾರಕ್ಕೆ ಇರಬೇಕಾದ ಬಾಧ್ಯತೆ. ಅದೇ ರೀತಿ ಖಾಸಗಿ ಮೊಬೈಲ್ ಕಂಪನಿಗಳು ಬರಲು ಹಿಂಜರಿಯುವ ಗ್ರಾಮೀಣ ಪ್ರದೇಶಗಳಿಗೆ ಬಿಎಸ್ಸೆನ್ನೆಲ್ ಮೂಲಕ 3ಜಿ ಅಥವಾ 4ಜಿಯಂಥ ವೇಗದ ಅಂತರ್ಜಾಲ ಸೌಲಭ್ಯ ಒದಗಿಸುವುದು ಸರ್ಕಾರದ ಬಾಧ್ಯತೆ ಆಗಿದೆ. ಇದಕ್ಕೆ ತರಂಗಾಂತರ ಹರಾಜಿನಲ್ಲಿ ಸರ್ಕಾರ ಸಂಗ್ರಹಿಸಿದ ಲಕ್ಷಾಂತರ ರೂಪಾಯಿಗಳ ಒಂದು ಅಂಶವನ್ನು ಬಿಎಸ್ಸೆನ್ನೆಲ್ ಸಂಸ್ಥೆಗೆ ಒದಗಿಸಿದರೆ ಸಾಕು. ಇಂದು 4ಜಿ ಮೊಬೈಲ್ಗಳು ರೂಪಾಯಿ 3000ಕ್ಕೆ ಲಭ್ಯ ಇವೆ. ಇದು ಒಂದು ಮಿನಿ ಕಂಪ್ಯೂಟರಿಗೆ ಸಮ. ಇದರ ಮೂಲಕ 20,000 ರೂಪಾಯಿ ಕೊಟ್ಟು ಕಂಪ್ಯೂಟರ್ ಕೊಳ್ಳಲಾಗದವರು ಕೂಡ ವೇಗದ ಇಂಟರ್ನೆಟ್ ಸೌಲಭ್ಯ ಇದ್ದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿಯೂ ನಗರಗಳಲ್ಲಿ ಲಭ್ಯವಾಗುವ ಮಾಹಿತಿ, ಶಿಕ್ಷಣ, ಆರೋಗ್ಯ ಮಾಹಿತಿಗಳನ್ನು ಪಡೆಯಬಹುದು. ಗ್ರಾಮೀಣ ವಿದ್ಯಾರ್ಥಿಗಳು 3ಜಿ/4ಜಿ ಮೊಬೈಲ್ ಮೂಲಕ ವೇಗದ ಇಂಟರ್ನೆಟ್ ಸೌಲಭ್ಯ ಇದ್ದಲ್ಲಿ ಸೂಕ್ತ ಮಾಹಿತಿ, ಪಠ್ಯ, ಇಂಗ್ಲೀಷ್ ಶಿಕ್ಷಣವನ್ನು ವಿಡಿಯೋಗಳನ್ನು ನೋಡುವುದರ ಮೂಲಕ ಪಡೆಯಬಹುದು. ಇಂದು ಯುಟ್ಯೂಬ್, ಫೇಸ್ಬುಕ್ಗಳಲ್ಲಿ ಕೃಷಿಗೆ ಸಂಬಂಧಿಸಿದ ಬೇರೆ ಬೇರೆ ದೇಶಗಳ, ಬೇರೆ ಬೇರೆ ರಾಜ್ಯಗಳ ಕೃಷಿಗೆ ಸಂಬಂಧಿಸಿದ ಲಕ್ಷಾಂತರ ವಿಡಿಯೋಗಳು ಲಭ್ಯ ಇವೆ. ಇವುಗಳನ್ನು ವೇಗದ ಇಂಟರ್ನೆಟ್ ಸೌಲಭ್ಯ ಲಭ್ಯವಿದ್ದಲ್ಲಿ ನೋಡಿ ಪರಸ್ಪರ ಸಂವಹನದ ಮೂಲಕ ತಮ್ಮ ಕೃಷಿ ಪದ್ಧತಿಯನ್ನು ಬದಲಾಯಿಸಿಕೊಳ್ಳಬಹುದು. ಟಿವಿ, ಪತ್ರಿಕೆಗಳಂತಲ್ಲದೆ ಅಂತರ್ಜಾಲದಲ್ಲಿ ಪರಸ್ಪರ ಸಂವಹನಕ್ಕೆ ಅವಕಾಶ ಇರುವುದು ಹಾಗೂ ಕೂಡಲೇ ಪ್ರತಿಕ್ರಿಯೆ ಲಭ್ಯವಾಗುವುದು ಗ್ರಾಮೀಣ ಜನರಲ್ಲಿ ಜಾಗೃತಿ ಮೂಡಿಸಲು ಸಹಕಾರಿ. ಪತ್ರಿಕೆಗಳು ಗ್ರಾಮೀಣ ಜನರನ್ನು ಬಹಳ ಕಡಿಮೆ ಪ್ರಮಾಣದಲ್ಲಿ ತಲುಪುತ್ತವೆ. ಅಂತರ್ಜಾಲದಲ್ಲಿ ಮೊಬೈಲ್ ಹಾಗೂ ಇ-ಆವೃತ್ತಿ ಲಭ್ಯವಿರುವುದರಿಂದ ವೇಗದ ಅಂತರ್ಜಾಲ ಸೌಲಭ್ಯ ಇದ್ದಲ್ಲಿ ಯಾವುದೇ ಹಳ್ಳಿ ಮೂಲೆಗೂ ಪತ್ರಿಕೆಗಳ ಮಾಹಿತಿ ತಲುಪಲು ಸಾಧ್ಯ. ಅದೇ ರೀತಿ ವೇಗದ ಅಂತರ್ಜಾಲ ಲಭ್ಯವಿದ್ದರೆ ಅಂತರ್ಜಾಲ ಪತ್ರಿಕೆಗಳು, ಬ್ಲಾಗುಗಳು ಹೆಚ್ಚು ಹೆಚ್ಚು ಜನರನ್ನು ತಲುಪಲು ತನ್ಮೂಲಕ ಪರಸ್ಪರ ಚರ್ಚೆ, ಸಂವಹನದಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜಾಗೃತಿ ರೂಪುಗೊಳ್ಳಲು ಸಹಾಯಕ.

No comments:

Post a Comment