Aug 9, 2016

ಉತ್ತರಪ್ರದೇಶದ ಜಾತಿ ರಾಜಕಾರಣ: ದಲಿತರು ವರ್ಸಸ್ ಸವರ್ಣೀಯರು

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
09/08/2016
ನಾನು ಈ ಹಿಂದೆಯೇ ಬಹಳಷ್ಟು ಬಾರಿ ಬರೆದಂತೆ ಜಾತಿ ರಾಜಕಾರಣ ಈ ದೇಶದ ಕ್ರೂರ ವಾಸ್ತವವಾಗಿದ್ದು ಅದನ್ನು ಕಡೆಗಣಿಸಿ ಚುನಾವಣಾ ರಾಜಕೀಯ ಮಾಡುವುದು ಕಷ್ಟಸಾದ್ಯದ ಮಾತಾಗಿದೆ. ಅದರಲ್ಲೂ ಉತ್ತರಪ್ರದೇಶದಂತಹ ರಾಜ್ಯದ ಸಮಾಜದಲ್ಲಿ ಜಾತಿ ಎನ್ನುವುದು ಆಳವಾಗಿ ಬೇರು ಬಿಟ್ಟಿದ್ದು ಅದನ್ನು ಮೀರಿ ರಾಜಕಾರಣ ಮಾಡಲು ಇದುವರೆಗೂ ಯಾವ ಪಕ್ಷಕ್ಕೂ ಸಾದ್ಯವಾಗಿಲ್ಲ. ಇನ್ನೇನು ಮುಂದಿನ ವರ್ಷ ಈ ರಾಜ್ಯದಲ್ಲಿ ವಿದಾನಸಭಾ ಚುನಾವಣೆಗಳು ನಡೆಯುತ್ತಿದ್ದು, ಜಾತಿಸಮೀಕರಣಗಳ ಲೆಕ್ಕಾಚಾರಗಳು ಈಗಾಗಲೇ ಶುರುವಾಗಿ, ತಮ್ಮ ಪರಾಕಾಷ್ಠೆ ತಲುಪಿವೆ. ಮೊನ್ನಿನ ಮಾಯಾವತಿಯವರ ಪ್ರಕರಣವಾದ ನಂತರ ಈ ಜಾತಿ ಲೆಕ್ಕಾಚಾರಗಳು ಇನ್ನಷ್ಟು ತೀವ್ರಗೊಂಡು ಸ್ವಲ್ಪ ಬದಲಾವಣೆಯೊಂದಿಗೆ ದಲಿತ ವರ್ಸಸ್ ಸವರ್ಣೀಯ ಎನ್ನುವ ಮಟ್ಟಕ್ಕೆ ಹೋಗಿ ನಿಂತಿದೆ.

ಕಳೆದ ತಿಂಗಳು ಉತ್ತರಪ್ರದೇಶದ ಬಾಜಪ ಪಕ್ಷದ ರಾಜ್ಯ ಘಟಕದ ಉಪಾದ್ಯಕ್ಷರಾದ ಶ್ರೀ ದಯಾಶಂಕರ್ ಸಿಂಗ್ ಅವರು ಮಾಯಾವತಿಯವರು ಚುನಾವಣಾ ಟಿಕೇಟುಗಳನ್ನು ಮಾರಾಟ ಮಾಡುತ್ತಿದ್ದಾರೆಂಬ ಅವರ ಪಕ್ಷದ ನಾಯಕರುಗಳ ಆರೋಪವನ್ನು ಪ್ರಸ್ತಾಪಿಸುತ್ತ. ಹೀಗೆ ಟಿಕೇಟು ಮಾರುವ ಮಾಯಾವತಿಯವರನ್ನು ವೇಶ್ಯೆಗೆ ಹೋಲಿಸಿದ್ದರು. ಈ ಮಾತು ಉತ್ತರಪ್ರದೇಶ ಮಾತ್ರವಲ್ಲದೆ ಇಡಿ ರಾಷ್ಟ್ರದಾದ್ಯಂತ ಅಲ್ಲೋಲ ಕಲ್ಲೋಲವನ್ನೇ ಸೃಷ್ಠಿಸಿತು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಮಾಯಾವತಿಯವರು ದಯಾಶಂಕರ್ ಅವರನ್ನು ಬಂದಿಸಿ ಕ್ರಮ ತೆಗೆದುಕೊಳ್ಳಬೇಕೆಂದೂ, ಹಾಗು ಬಾಜಪ ಕ್ಷಮೆ ಕೋರಬೇಕೆಂದು ಒತ್ತಾಯಿಸಿದರು. ಇಷ್ಟರಲ್ಲಿ ಬಾಜಪಕ್ಕೆ ಆದ ಅನಾಹುತದ ಅರಿವಾಗಿದ್ದಂತಿತ್ತು. ಅದು ದಯಾಶಂಕರ್ ಅವರನ್ನು ಉಪಾದ್ಯಕ್ಷ ಹುದ್ದೆಯಿಂದ ವಜಾ ಮಾಡಿತು. ಆದರೆ ಇಷ್ಟಕ್ಕೆ ತೃಪ್ತರಾಗದ ಬಹುಜನ ಪಕ್ಷದ ನಾಯಕರುಗಳು ರಾಜ್ಯದೆಲ್ಲೆಡೆ ಪ್ರತಿಭಟನೆಗಳನ್ನು ಶುರು ಮಾಡಿದ್ದರು. ದೇಶದಲ್ಲಿ ಹೆಚ್ಚಾಗುತ್ತಿರುವ ದಲಿತರ ಮೇಲಿನ ಹಲ್ಲೆಗಳ ಬಗ್ಗೆ ರಾಷ್ಟ್ರದಲ್ಲಿ ಚರ್ಚೆಯಾಗುತ್ತಿರುವಾಗಲೇ ನಡೆದ ಈ ಘಟನೆ ಬಾಜಪದ ಮಟ್ಟಿಗೆ ದೊಡ್ಡ ಹೊಡೆತವಾಗಿತ್ತು. ಮುಂದಿನ ವರ್ಷ ನಡೆಯಲಿರುವ ವಿದಾನಸಭಾ ಚುನಾವಣೆಗಳ ಮೇಲೆ ದಯಾಶಂಕರ್ ಅವರ ಹೇಳಿಕೆ ಪ್ರತಿಕೂಲ ಪರಿಣಾಮ ಬೀರುವ ಸಾದ್ಯತೆಗಳನ್ನು ಗಮನಿಸಿದ ಬಾಜಪ ಅವರನ್ನು ಪಕ್ಷದಿಂದ ಆರು ವರ್ಷಗಳ ಅವಧಿಗೆ ಉಚ್ಚಾಟನೆ ಮಾಡಿತು. ಉತ್ತರಪ್ರದೇಶದ ಪೋಲಿಸರು ಅವರ ಮೇಲೆ ಕೇಸು ದಾಖಲಿಸಿ ಬಂದಿಸಲು ಪ್ರಯತ್ನಿಸಿದರು. ಆದರೆ ಈ ನಡುವೆ ದಯಾಶಂಕರ್ ಸಿಂಗ್ ಯಾರ ಕೈಗೂ ಸಿಗದೆ ನಾಪತ್ತೆಯಾಗಿದ್ದರು. ಗುಜರಾತಿನಲ್ಲಿ ನಡೆದ ದಲಿತ ಯುವಕರ ಮೇಲಿನ ಹಲ್ಲೆಯ ವಿಚಾರದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ಮತ್ತು ವಿರೋಧಪಕ್ಷಗಳ ಟೀಕೆಯನ್ನು ಎದುರಿಸುತ್ತಿರುವಾಗಲೇ ದಯಾಶಂಕರ್ ಮಾಡಿಕೊಂಡ ಈ ಎಡವಟ್ಟು ಮುಂದಿನ ಚುನಾವಣೆಯಲ್ಲಿ ದಲಿತರ ಬೆಂಬಲ ಗಳಿಸುವ ಬಾಜಪದ ಪ್ರಯತ್ನಕ್ಕೆ ತಣ್ಣೀರೆರಚಿದಂತಾಯಿತು. ಬಹುತೇಕ ಬಾಜಪೇತರ ಪಕ್ಷಗಳು ಮಾಯಾವತಿಯವರ ಬೆಂಬಲಕ್ಕೆ ನಿಂತಿದ್ದು ಬಾಜಪದ ಮಟ್ಟಿಗೆ ನುಂಗಲಾಗದ ತುತ್ತಾಗಿ ಪರಿಣಮಿಸಿತು. ಇನ್ನೇನು ಉತ್ತರಪ್ರದೇಶದಲ್ಲಿ ಬಹುಜನ ಪಕ್ಷಕ್ಕೆ ಪೂರಕವಾದ ವಾತಾವರಣ ನಿರ್ಮಾಣವಾಗುತ್ತಿದೆಯೆಂದು ಅಂದುಕೊಳ್ಳುವಷ್ಟರಲ್ಲಿ ಮಾಯಾವತಿಯವರ ಬೆಂಬಲಿಗರು ಬಹುಜನ ಪಕ್ಷದ ಮಾಜಿ ಸಚಿವ ನಸೀಮುದ್ದೀನ್ ಸಿದ್ದೀಕಿ ನೇತೃತ್ವದಲ್ಲಿ ಲಕ್ನೋವಿನ ಹಜರತ್‍ಗಂಜಿನಲ್ಲಿ ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಎಲ್ಲ ಮಿತಿಗಳನ್ನು, ಮರ್ಯಾದೆಗಳನ್ನೂ ಮೀರಿ, ದಯಾಶಂಕರ್ ಅವರ ಪತ್ನಿ ಸ್ವಾತಿ ಸಿಂಗ್ ಮತ್ತು ಅವರ ಹದಿಮೂರು ವರ್ಷ ವಯಸ್ಸಿನ ಅಪ್ರಾಪ್ತ ಮಗಳ ಬಗ್ಗೆ ಕೂಗಿದ ಘೋಷಣೆಗಳು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸಿದವು. ತಮ್ಮ ಪಕ್ಷದ ಮೇಲಾದ ಈ ಆಘಾತದಿಂದ ಚೇತರಿಸಿಕೊಳ್ಳದ ಬಾಜಪ ನಾಯಕರುಗಳು ಮೌನಕ್ಕೆ ಶರಣಾಗಿ ಬಿಟ್ಟಿದ್ದರು. 

ಆಗಲೇ ಕೇಳಿಬಂದಿದ್ದು ದಯಾಶಂಕರ್ ಅವರ ಪತ್ನಿ ಸ್ವಾತಿ ಸಿಂಗ್ ಅವರ ಮರು ಪ್ರತಿಭಟನೆಯ ದ್ವನಿ! ತನ್ನ ಹಾಗು ತನ್ನ ಮಗಳ ವಿರುದ್ದ ಕೇಳಿಬಂದ ಅಸಭ್ಯ ಘೋಷಣೆಗಳನ್ನು ಗಂಭೀರವಾಗಿ ತೆಗೆದುಕೊಂಡ ಆಕೆ ಈ ಬಗ್ಗೆ ಮಾಯಾವತಿಯವರನ್ನು, ಅವರ ಪಕ್ಷವನ್ನು ಬಹಿರಂಗವಾಗಿ ಎದುರಿಸಲು ಸಿದ್ದರಾಗಿ ಬಿಟ್ಟಿದ್ದರು. ಈ ಕುರಿತಂತೆ ಆಕೆ ಮಾಯಾವತಿ ಮತ್ತು ಉಳಿದವರ ಮೇಲೆ ಪೋಲಿಸ್ ಠಾಣೆಗೆ ದೂರನ್ನು ಕೂಡ ಸಲ್ಲಿಸಿದರು. ಸ್ವಾತಿಯವರ ಈ ಒಂದು ನಡೆ ಹಿಂಜರಿಕೆಯಲ್ಲಿದ್ದ ಬಾಜಪಕ್ಕೆ ಹೊಸ ಚೈತನ್ಯ ನೀಡಿತು, ಅದುವರೆಗು ಮೌನವಾಗಿದ್ದ ಬಾಜಪ ಈ ಅವಕಾಶವನ್ನೂ, ಸ್ವಾತಿಯವರ ಪ್ರತಿ ಆಕ್ರಮಣಕಾರಿ ನಿಲುವನ್ನೂ ಬಳಸಿಕೊಂಡು ಬಹುಜನ ಪಕ್ಷದ ದಯಾಶಂಕರ್ ಕುಟುಂಬದ ಹೆಣ್ಣು ಮಕ್ಕಳ ಬಗೆಗಿನ ಅಸಭ್ಯ ಮಾತುಗಳನ್ನು ಠಾಕೂರ್ ಸಮಾಜದ ವಿರುದ್ದದ ದಲಿತರ ಉದ್ದಟತನದ ಹೇಳಿಕೆಗಳೆಂದು ಬಿಂಬಿಸಿ ಎರಡೂ ಪಕ್ಷಗಳ ಇಬ್ಬರು ನಾಯಕರುಗಳ ಜಟಾಪಟಿಯನ್ನು ಎರಡು ಜಾತಿಗಳ ಜಗಳವನ್ನಾಗಿ ಪರಿವರ್ತಿಸುವಲ್ಲಿ ಯಶಸ್ವಿಯಾಯಿತು. ಸ್ವಾತಿಸಿಂಗ್ ಮೇಲಿನ ಅಸಭ್ಯತನದ ಮಾತುಗಳು ತಮ್ಮ ಠಾಕೂರ್ ಸಮುದಾಯದ ಆತ್ಮಗೌರವಕ್ಕೆ ಬಿದ್ದ ಪೆಟ್ಟೆಂಬಂತೆ ಆ ಸಮುದಾಯದ ನಾಯಕರುಗಳು ಹೇಳಿಕೆ ನೀಡತೊಡಗಿದರು. ಇದರ ನಡುವೆ ಮೊದಲಿಂದಲು ದಲಿತರ ಮೇಲೆ ಅಸಹನೆ ಹೊಂದಿದ್ದ ಉಳಿದೆಲ್ಲ ಮೇಲ್ಜಾತಿಗಳು ಸಹ ಸ್ವಾತಿ ಸಿಂಗ್ ಬೆಂಬಲಕ್ಕೆ ನಿಂತು ಬಿಟ್ಟವು. ಇದೇ ಸಮಯದಲ್ಲಿ ಸ್ವಾತಿಸಿಂಗ್‍ರವರು ಮಾಯಾವತಿ, ಸಿದ್ದೀಕಿ,ಮತ್ತು ಇನ್ನಿತರೇ ಬಹುಜನ ಪಕ್ಷದ ನಾಯಕರುಗಳ ಮೇಲೆ ಎಫ್.ಐ.ಆರ್.ದಾಖಲಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು. ಅಲ್ಲಿಯವರೆಗು ರಕ್ಷಣಾತ್ಮಕವಾಗಿ ತನ್ನ ನಡೆಗಳನ್ನು ನಡೆಸುತ್ತಿದ್ದ ಬಾಜಪ ಪ್ರತಿ ಆಕ್ರಮಣದ ತೀವ್ರತೆಯನ್ನು ಹೆಚ್ಚಿಸಿ, ಇಡೀ ಘಟನೆಯನ್ನು ದಲಿತರು ವರ್ಸಸ್ ಸವರ್ಣೀಯರು ಎನ್ನುವ ಮಟ್ಟಕ್ಕೆ ತಂದು ನಿಲ್ಲಿಸಿತು. ಇದರಿಂದ ವಿಚಲಿತರಾದ ಮಾಯಾವತಿ ಪ್ರತಿಭಟನೆಗಳ ತೀವ್ರತೆಯನ್ನು ಕಡಿಮೆ ಮಾಡಿ ಸಾರ್ವಜನಿಕ ಹೇಳಿಕೆಗಳನ್ನು ನೀಡದಂತೆ ತಮ್ಮ ಪಕ್ಷದವರಿಗೆ ತಾಕೀತು ಮಾಡಬೇಕಾಯಿತು. ಈ ಹಂತದಲ್ಲಿ ಮಾಯಾವತಿಯವರಿಗೆ ವಾಸ್ತವದ ಅರಿವಾಗಿತ್ತು. ಅವರಿಗೆ ಕೇವಲ ಠಾಕೂರ್ ಸಮುದಾಯದ ಮತಗಳ ಅಗತ್ಯಕ್ಕಿಂತ ಹೆಚ್ಚಾಗಿ ಬೇರೆ ಸವರ್ಣೀಯರ ಮತಗಳೂ ಬಹುಮುಖ್ಯವೆಂದು ಗೊತ್ತಿತ್ತು. ಯಾಕೆಂದರೆ ಶೇಕಡಾ 22 ರಷ್ಟಿರುವ ದಲಿತ ಮತಗಳು ಸಂಪೂರ್ಣವಾಗಿ ಬಹುಜನ ಪಕ್ಷಕ್ಕೆ ಬಂದರೂ ಅಧಿಕಾರ ಹಿಡಿಯಲು ಉಳಿದ ಸುಮಾರು ಶೇಕಡಾ 12ರಿಂದ 14 ರಷ್ಟು ಮತಗಳು ಬೇರೆ ಸಮುದಾಯಗಳಿಂದಲೇ ಬರಬೇಕಾಗಿತ್ತು. ಇನ್ನು ಕಳೆದಬಾರಿ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದ್ದ ಮುಸ್ಲಿಮರು ಈ ಬಾರಿ ಯಾವ ಪಕ್ಷವನ್ನು ಬೆಂಬಲಿಸಬಹುದೆಂಬ ಬಗ್ಗೆ ಯಾರಿಗೂ ನಿಖರ ಮಾಹಿತಿಯಿಲ್ಲ. ಹೀಗಾಗಿ ಶೇಕಡಾ ಹತ್ತರಷ್ಟಿರುವ ಬ್ರಾಹ್ಮಣ ಸಮುದಾಯದ ಮತಗಳು ಸಹ ದಲಿತ-ಸವರ್ಣೀಯರ ಜಟಾಪಟಿಯಲ್ಲಿ ಬೇರೆ ಪಕ್ಷಗಳಿಗೆ ಹೋದರೆ ತಮ್ಮ ಪಕ್ಷ ಬಹುಮತ ಗಳಿಸಿವುದು ಕಷ್ಟವೆಂಬುದು ಅವರಿಗೆ ಗೊತ್ತಾಗಿದೆ. ಅವರ ಇಂತಹ ಸಂಕಷ್ಟ ಸಮಯದಲ್ಲಿಯೇ ಇಬ್ಬರು ಶಾಸಕರು ಮಾಯಾವತಿಯವರು ಟಿಕೇಟುಗಳನ್ನು ಮಾರುತ್ತಿದ್ದಾರೆಂದು ಆರೋಪಿಸಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟಿದ್ದಾರೆ. ಇವರಿಬ್ಬರನ್ನೂ ಸೇರಿಸಿದರೆ ಇದುವರೆಗೂ ಸುಮಾರು ಆರುಜನ ನಾಯಕರು ಬಹುಜನ ಪಕ್ಷ ತೊರೆದಿದ್ದಾರೆಂಬುದು ಮಾಯಾವತಿಯವರ ಆತಂಕಕ್ಕೆ ಕಾರಣವಾಗಿದೆ.

ತಮ್ಮ ಪಕ್ಷಗಳ ನಾಯಕರುಗಳನ್ನು, ಕಾರ್ಯಕರ್ತರುಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳದೇ ಹೋದರೆ ಎಂತೆಂತಹ ದುಷ್ಪರಿಣಾಮಗಳು ಸಂಭವಿಸುತ್ತವೆಯೆಂಬುದನ್ನು ಉತ್ತರಪ್ರದೇಶದ ಬಾಜಪ ಮತ್ತು ಬಹುಜನ ಪಕ್ಷಗಳ ನಡವಳಿಕೆಗಳೀಗ ತೋರಿಸಿಕೊಟ್ಟಿವೆ. ಎರಡು ಪಕ್ಷಗಳ ಇಬ್ಬರು ನಾಯಕರುಗಳ ವಾಕ್ ಸಮರ ಉತ್ತರಪ್ರದೇಶದ ಸಮಾಜವನ್ನು ನಿಖರವಾಗಿ ಎರಡು ಹೋಳಾಗಿ ಮಾಡಿದೆ. ಉತ್ತರಪ್ರದೇಶ ಬಾಜಪದ ರಾಜ್ಯಘಟಕದ ಉಪಾದ್ಯಕ್ಷ ಶ್ರೀ ದಯಾಶಂಕರ್ ಸಿಂಗ್ ಆಡಿದ ಒಂದು ಮಾತು ಮತ್ತು ಅದಕ್ಕೆ ಪ್ರತ್ಯುತ್ತರವಾಗಿ ಮಾಯಾವತಿ ಮತ್ತವರ ಹಿಂಬಾಲಕರು ನೀಡಿದ ಸಾರ್ವಜನಿಕ ಹೇಳಿಕೆಗಳಿಂದಾಗಿ ದಲಿತರ ಮತ್ತು ಸವರ್ಣೀಯರ ನಡುವಿನ ಬಿರುಕು ಒಂದು ಹೆಜ್ಜೆ ಮುಂದೆ ಹೋಗಿ ಮಾಯಾವತಿ( ದಲಿತರ ಮಗಳು) ಮತ್ತು ಸ್ವಾತಿಸಿಂಗ್ (ಮಾನವತೆಯ ಮಗಳು) ಎಂಬಲ್ಲಿಗೆ ಬಂದು ನಿಂತಿದೆ.

ಮುಂದಿನ ದಿನಗಳಲ್ಲಿ ಇಂತಹ ಜಾತಿ ರಾಜಕಾರಣದ ಒಳಸುಳಿಗಳು ಇನ್ನಷ್ಟು ಹೆಚ್ಚಾಗಲಿದ್ದು ಮತಗಳಿಕೆಗಾಗಿ ಎಂತಹ ಕೃತ್ಯಗಳಿಗು ಸಿದ್ದವಾಗುವ ರಾಜಕೀಯ ಪಕ್ಷಗಳ ಭವಿಷ್ಯದ ನಡೆಗಳು ಗಾಬರಿಗೊಳಿಸುವಂತಿವೆ.

No comments:

Post a Comment