Jul 26, 2016

ಮುಗಿದ ಮಧುಚಂದ್ರದ ಅವಧಿ: ಬಾಜಪಕ್ಕೆ ಸಿದ್ದು ಬೈ! ಸರತಿಯಲ್ಲಿ ಕೀರ್ತಿ ಆಜಾದ್, ಶತ್ರುಘ್ನಸಿನ್ಹಾ?

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
26/07/2016
ತಾನು ಬಹಳ ಶಿಸ್ತಿನ ಪಕ್ಷವೆಂದೂ, ತನ್ನೆಲ್ಲ ಸದಸ್ಯರುಗಳೂ ಪಕ್ಷದ ಸಿದ್ದಾಂತಗಳಿಗೆ ಬದ್ದವಾಗಿದ್ದು ಪಕ್ಷಾಂತರದಂತಹ ಕೆಲಸಗಳನ್ನು ಮಾಡಲಾರರೆಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಬಾಜಪದ ಬಣ್ಣ ಮತ್ತೊಮ್ಮೆ ಬಯಲಾಗಿದೆ. ಇಂಡಿಯಾದ ಮತ್ತೆಲ್ಲ ಪಕ್ಷಗಳಂತೆ ಅದರ ಸದಸ್ಯರುಗಳು ಸಹ ಅಧಿಕಾರದ ಹಸಿವು ನೀಗಿಸಿಕೊಳ್ಳಲೆಂದೇ ರಾಜಕಾರಣ ಮಾಡುತ್ತಿರುವವರು ಹಾಗು ಅಂತಹ ಅವಕಾಶ ಸಿಗದೇ ಹೋದಾಗ ಸಿದ್ದಾಂತಗಳ ಮುಖವಾಡ ಕಿತ್ತೆಸೆದು ಅನ್ಯ ಪಕ್ಷಗಳಿಗೆ ಪಲಾಯನ ಮಾಡುವವರೆಂದು ಅದರೊಳಗೆ ನಡೆಯುತ್ತಿರುವ ವಿದ್ಯಾಮಾನಗಳು ತೋರಿಸಿಕೊಡುತ್ತಿವೆ. ಅದರಲ್ಲಿ ಪಂಜಾಬಿನ ಹಿರಿಯ ಸಂಸದ ಶ್ರೀ ನವಜೋತ್ ಸಿಂಗ್ ಮೊನ್ನೆ ಬಾಜಪದ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ಕೊಟ್ಟದ್ದೂ ಒಂದು. ಇತ್ತೀಚೆಗಷ್ಟೇ ಬಾಜಪ ರಾಜ್ಯಸಭೆಗೆ ಸಿದ್ದೂರವರನ್ನು ಆರಿಸಿ ಕಳಿಸಿದಾಗ ಅಂತೂ ಸಿದ್ದೂರವರಿಗು ಬಾಜಪದಲ್ಲಿ ಮನ್ನಣೆ ದೊರೆತಂತಾಯಿತೆಂದು ಎಲ್ಲರೂ ನಂಬಿದ್ದರು. ಹಾಗು ಬಾಜಪದ ಹೈಕಮ್ಯಾಂಡ್ ಜೊತೆಗಿನ ಅವರ ಭಿನ್ನಾಭಿಪ್ರಾಯಗಳು ಮುಕ್ತಾಯವಾದವೆಂದೇ ಜನ ಬಾವಿಸಿದ್ದರು. ಯಾಕೆಂದರೆ 2004ರಿಂದ 2014ರವರೆಗೆ ಪಂಜಾಬಿನ ಅಮೃತಸರದಿಂದ ಸತತವಾಗಿ ಸಂಸದರಾಗಿ ಆಯ್ಕೆಯಾಗಿ ಬರುತ್ತಿದ್ದ ನವಜೋತ್ ಸಿಂಗ್ ಅವರನ್ನು ಬಾಜಪ ಮನಸ್ಸು ಮಾಡಿದ್ದರೆ ಪಂಜಾಬಿನ ರಾಜ್ಯ ರಾಜಕೀಯದಲ್ಲಿ ತನ್ನ ಮುಖ್ಯ ದಂಡನಾಯಕನನ್ನಾಗಿ ಬಿಂಬಿಸಿ ಬೆಳೆಸಿ ಅಕಾಲಿದಳದ ನೆರಳಿಂದ ಹೊರಬಂದು ಸ್ವತಂತ್ರವಾಗಿ ರಾಜಕಾರಣ ಮಾಡಬಹುದಿತ್ತು. ಆದರೆ ಸಿದ್ದುವನ್ನು ಕಂಡರಾಗದ ಅಕಾಲಿದಳದ ಒತ್ತಡಕ್ಕೆ ಮಣಿದ ಬಾಜಪ ಸಿದ್ದುರವರಿಗೆ ರಾಜ್ಯ ರಾಜಕೀಯದಲ್ಲಿ ಪ್ರಮುಖಪಾತ್ರ ವಹಿಸುವ ಯಾವ ಅವಕಾಶವನ್ನೂ ನೀಡಲೇ ಇಲ್ಲ. ಈ ಬಗ್ಗೆ ಸಿದ್ದೂರವರಿಗೆ ಆಂತರೀಕವಾಗಿ ತೀವ್ರ ಅಸಮಾದಾನವಿದ್ದುದು ಸುಳ್ಳಲ್ಲ. 

ಗಾಯದ ಮೇಲೆ ಬರೆ ಎಳೆದಂತೆ 2014ರ ಲೋಕಸಭಾ ಚುನಾವಣೆಯಲ್ಲಿ ಅಮೃತಸರದಿಂದ ಸಿದ್ದೂಗೆ ಪಕ್ಷದ ಟಿಕೇಟ್ ನೀಡದೆ ಅರುಣ್ ಜೈಟ್ಲಿಯವರಿಗೆ ಟಿಕೇಟ್ ನೀಡಲಾಯಿತು. ಆದರೆ ಕ್ಯಾಪ್ಟನ್ ಅಮರಿಂದರ್ ಸಿಂಗ್ ಎದುರು ಸೋತ ಜೇಟ್ಲಿಯನ್ನು ತದನಂತರ ಸಂಪುಟದ ಅತ್ಯಂತ ಪ್ರಮುಖವಾದ ಹಣಕಾಸು ಖಾತೆಗೆ ಸಚಿವರನ್ನಾಗಿ ಮಾಡಲಾಯಿತು. ಪಕ್ಷದ ಇಂತಹ ನಡೆಗಳಿಂದ ತೀವ್ರ ಅಸಮಾದಾನಗೊಂಡಿದ್ದ ಸಿದ್ದೂರವರನ್ನು ಸಮಾದಾನ ಮಾಡಲು ಇತ್ತೀಚೆಗೆ ಅವರನ್ನು ರಾಜ್ಯಸಭೆಗೆ ಕಳಿಸಲಾಯಿತು. ಆದರೆ ಪಂಜಾಬಿನ ರಾಜ್ಯ ರಾಜಕೀಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಸಿದ್ದೂರವರಿಗೆ ಇದರಿಂದ ತೃಪ್ತಿಯೇನೂ ಆಗಲಿಲ್ಲ. ಯಾಕೆಂದರೆ ಅವರ ಆಪ್ತರು ಹೇಳುವಂತೆ, ಮೊದಲಿನಿಂದಲು ಸಿದ್ದೂರವರಿಗೆ ರಾಜ್ಯ ರಾಜಕಾರಣದಲ್ಲಿಯೇ ಆಸಕ್ತಿಯಿದ್ದು ಪಂಜಾಬಿನ ಮುಖ್ಯಮಂತ್ರಿಯಾಗುವ ಹಂಬಲ ಹೊಂದಿದ್ದರು. ಹಾಗಾಗಿಯೇ ಅವರು ಅರುಣ್ ಜೇಟ್ಲಿಯ ಪರವಾಗಿ ಚುನಾವಣಾ ಪ್ರಚಾರವನ್ನೂ ಮಾಡಲಿಲ್ಲ. ಜೊತೆಗೆ ಒಂದಷ್ಟು ಕಾಲ ಸಕ್ರಿಯ ರಾಜಕಾರಣದಿಂದ ದೂರವಿದ್ದು ಎಂದಿನಂತೆ ಕ್ರಿಕೇಟ್ ವೀಕ್ಷಕ ವಿವರಣೆಯಲ್ಲಿ ಮತ್ತು ಕಪಿಲ್ ಶರ್ಮಾರವರ ಜನಪ್ರಿಯ ಕಾಮೆಡಿ ಶೋನಲ್ಲಿ ನಿರತರಾಗಿ ಬಿಟ್ಟರು.

ಆದರೆ ಮತ್ತೆ ಸಿದ್ದೂರವರನ್ನು ರಾಜ್ಯಸಭೆಗೆ ನೇಮಕ ಮಾಡಿದಾಗ ಎಲ್ಲವೂ ಸರಿಯಾಯಿತೆಂದು ಜನತೆ ಬಾವಿಸಿದ್ದರು. ಅದಕ್ಕೆ ತಕ್ಕ ಹಾಗೆ ಪಂಜಾಬಿನ ರಾಜಕಾರಣದ ಮಟ್ಟಿಗೆ ಸಿದ್ದೂರವರ ಅಗತ್ಯವನ್ನು ಮನಗಂಡಿತೇನೋ ಎಂಬಂತೆ ಅವರನ್ನು ರಾಜ್ಯ ಬಾಜಪದ ಕೋರ್ ಕಮಿಟಿಗೆ ಸೇರಿಸಲಾಯಿತು. ಇದು ಸಿದ್ದುರವರು ರಾಜ್ಯ ರಾಜಕೀಯಕ್ಕೆ ಎಷ್ಟು ಅನಿವಾರ್ಯವೆಂಬುದನ್ನು ಬಾಜಪ ಅರ್ಥ ಮಾಡಿಕೊಂಡಿದೆಯೆಂದು ಜನ ಬಾವಿಸಿದ್ದರು. ಸ್ವತ: ಸಿದ್ದು ಸಹ ಹಾಗೇ ಅಂದುಕೊಂಡಿದ್ದರು. ಆದರೆ ಮುಂದಿನ ವರ್ಷ ನಡೆಯಲಿರುವ ವಿದಾನಸಭೆಯ ಚುನಾವಣೆಗಳಿಗೆ ಪಕ್ಷದೊಳಗೆ ನಡೆಯುತ್ತಿರುವ ಸಿದ್ದತೆಗಳಲ್ಲಿ ಸಿದ್ದೂರವರನ್ನು ಸೇರಿಸಿಕೊಳ್ಳುವ ಯಾವ ಕ್ರಮವನ್ನು ಬಾಜಪ ಮಾಡಲಿಲ್ಲ. ಹೀಗಾಗಿ ಸಿದ್ದೂರವರು ಅನಿವಾರ್ಯವಾಗಿ ತಮ್ಮ ರಾಜ್ಯಸಭಾ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದರು. ಇದನ್ನೇ ಕಾದು ಕೂತಂತೆ ಕಂಡ ಬಾಜಪದ ನಾಯಕರುಗಳು ಸಿದ್ದೂರವರನ್ನು ಸಂಪರ್ಕಿಸುವ ಯಾವ ಪ್ರಯತ್ನವನ್ನೂ ಮಾಡದೆ ತಕ್ಷಣವೇ ಅವರ ರಾಜಿನಾಮೆಯನ್ನು ಸ್ಪೀಕರ್ ಅಂಗೀಕರಿಸುವಂತೆ ನೋಡಿಕೊಂಡರು.

ತನ್ನ ರಾಜೀನಾಮೆಯ ಬಗ್ಗೆ ವಿವರಣೆ ನೀಡಿದ ಸಿದ್ದು ಪಂಜಾಬಿನ ಅಭಿವೃದ್ದಿಯ ಕಿಟಕಿಗಳನ್ನು ಮುಚ್ಚಿದವರ ಜೊತೆಗೆ ತಾವು ಇರಲು ಸಾದ್ಯವಿಲ್ಲ. ಮನುಷ್ಯ ಸರಿ ತಪ್ಪುಗಳ ನಡುವೆ ಆಯ್ಕೆ ಬಂದಾಗ ಸರಿಯನ್ನು ಆಯ್ಕೆ ಮಾಡಿಕೊಳ್ಳಬೇಕೇ ಹೊರತು, ತಟಸ್ಥವಾಗಿರುವುದು ಸರಿಯಲ್ಲ. ನಾನು ಸ್ವಪ್ರತಿಷ್ಠೆಗಿಂತ ಪಂಜಾಬಿನ ಕಲ್ಯಾಣವೇ ಮುಖ್ಯವೆಂದು ಬಾವಿಸಿದವನು ಎಂದಿದ್ದಾರೆ. ಆದರೆ ಬಾಜಪದ ನಾಯಕರುಗಳು ಮಾತ್ರ ಸಿದ್ದುವಿನ ಈ ನಡೆ ಅವಕಾಶವಾದಿತನದಿಂದ ಕೂಡಿದ್ದು ಎಂದು ಹೇಳಿಕೆ ನೀಡಿದ್ದಾರೆ. ಆದರೆ ಸಿದ್ದು ಆಮ್‍ಆದ್ಮಿ ಪಕ್ಷವನ್ನು ಸೇರುತ್ತಾರೆಂಬ ವದಂತಿಗಳಿಂದ ಸಂತಸಗೊಂಡಿರುವ ಆಪ್ ಮಾತ್ರ ರಾಜ್ಯದ ಹಿತದೃಷ್ಠಿಗಾಗಿ ತನ್ನÀ ಸಂಸತ್ ಸ್ಥಾನವನ್ನು ತೊರೆದಿರುವ ಸಿದ್ದುರವರ ನಡೆ ನಿಜಕ್ಕೂ ಹೊಗಳಿಕೆಗೆ ಅರ್ಹವಾದುದೆಂದು ಹೇಳಿದೆ. ಆದರೆ ಬಾಜಪ ಮತ್ತು ಅಕಾಲಿದಳದ ಮೈತ್ರಿಕೂಟ ಮಾತ್ರ ಸಿದ್ದುರವರ ಈ ನಡೆಯನ್ನು ವಿಶ್ವಾಶಘಾತುಕತನವೆಂದು ಬಣ್ಣಿಸಿದ್ದಾರೆ.

ಒಟ್ಟಿನಲ್ಲಿ ಸಿದ್ದುರವರು ರಾಜಿನಾಮೆ ನೀಡಿದ ಹಿನ್ನೆಲೆಯಲ್ಲಿ ಇದೀಗ ಪಂಜಾಬಿನಲ್ಲಿ ಬಾಜಪದ ಶಾಸಕಿಯಾಗಿರುವ ಅವರ ಪತ್ನಿ ಶ್ರೀಮತಿ ನವಜೋತ್ ಕೌರ್ ಅವರು ಕೂಡ ಬಾಜಪವನ್ನು ತೊರೆಯುತ್ತಾರೆಯೇ ಎಂಬುದು ಪ್ರಶ್ನೆಯಾಗಿ ಉಳಿದಿದೆ. ಕೌರ್ ಅವರು ಹಿಂದಿನಿಂದಲೂ ತಮ್ಮದೇ ಮೈತ್ರಿ ಸರಕಾರದ ಹಲವು ತಪ್ಪು ನಡೆಗಳ ಬಗ್ಗೆ ಸಾರ್ವಜನಿಕವಾಗಿ ಟೀಕಿಸಿ ಪಕ್ಷದ ಕೆಂಗಣ್ಣಿಗೆ ತುತ್ತಾದವರಾಗಿದ್ದಾರೆ. ಸಿದ್ದು ರಾಜಿನಾಮೆಯ ನಂತರ ಆಕೆಯೂ ಪಕ್ಷವನ್ನು ತೊರೆಯಬಹುದೆಂಬ ನಿರೀಕ್ಷೆ ಸದ್ಯಕ್ಕಂತು ಹುಸಿಯಾಗಿದೆ. ಬಾಜಪದ ನಾಯಕರುಗಳು ಕೌರ್ ಜೊತೆ ಕೆಲವು ಸುತ್ತುಗಳ ಮಾತುಕತೆ ನಡೆಸಿದ ನಂತರ ತಾನಿನ್ನು ಪಕ್ಷ ತೊರೆದಿಲ್ಲ, ಬಾಜಪ ಅಕಾಲಿದಳದೊಂದಿಗಿನ ಮೈತ್ರಿಗಾಗಿ ಸಿದ್ದುವನ್ನು ಕಳೆದುಕೊಂಡಿದ್ದು, ಮುಂದಿನ ಚುನಾವಣೆಯಲ್ಲಿದು ಪಕ್ಷಕ್ಕೆ ಪ್ರತಿಕೂಲ ಪರಿಣಾಮ ಉಂಟುಮಾಡಬಹುದೆಂದು ಸೂಚ್ಯವಾಗಿ ಹೇಳಿದ್ದಾರೆ.ಸಿದ್ದು ಯಾವತ್ತಿಗೂ ತಮ್ಮ ನಿರ್ದಾರವನ್ನು ಬದಲಾಯಿಸುವುದಿಲ್ಲವೆಂದೂ ಅಭಿಪ್ರಾಯ ನೀಡಿದ್ದಾರೆ.

ಇಲ್ಲಿ ನಿಜವಾದ ಲಾಭವಾಗುತ್ತಿರುವುದು ಆಪ್ ಪಕ್ಷಕ್ಕೆ. ಈ ನಿಟ್ಟಿನಲ್ಲಿ ಅರವಿಂದ್ ಕೇಜ್ರೀವಾಲ್ ಸಿದ್ದುರವರೊಂದಿಗೆ ಹಲವು ಸುತ್ತುಗಳ ರಹಸ್ಯ ಮಾತುಕತೆಯನ್ನು ನಡೆಸಿದ್ದಾರೆಂಬ ವದಂತಿ ಹಬ್ಬಿದ್ದು ಮುಂದಿನ ವಿದಾನಸಭಾ ಚುನಾವಣೆ ಎದುರಿಸಲು ಕ್ಲೀನ್ ಇಮೇಜ್ ಇರುವ ಮತ್ತು ಗ್ರಾಮೀಣ ಪಂಜಾಬಿನಲ್ಲಿ ಜನಪ್ರಿಯತೆ ಪಡೆದಿರುವ ಸಿದ್ದುರವರಿಂದ ಆಪ್ ಪಕ್ಷಕ್ಕೆ ಹೆಚ್ಚು ಲಾಭವಾಗಲಿದೆಯೆಂದು ಹೇಳಲಾಗುತ್ತಿದೆ.

ಇದರಿಂದ ಈಗಾಗಲೇ ಆಡಳಿತ ವಿರೋದಿ ಅಲೆಯ ನಡುವೆಯೇ ಚುನಾವಣೆ ಎದುರಿಸಬೇಕಾಗಿ ಬಂದಿರುವ ಬಾಜಪ ಮತ್ತು ಅಕಾಲಿದಳದ ಮೈತ್ರಿಕೂಟಕ್ಕೆ ನವಜೋತ್ ಸಿಂಗ್ ಸಿದ್ದುರವರ ರಾಜಿನಾಮೆಯಿಂದಾಗಿ ಮತ್ತಷ್ಟು ಸಂಕಷ್ಟ ಎದುರಾಗಿರುವುದಂತು ಸತ್ಯ.

======

ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷದ ನಾಯಕ ಕುಮಾರ್ ವಿಶ್ವಾಸ್ ಅವರು ಇನ್ನೊಂದು ಸ್ಪೋಟಕ ಸುದ್ದಿಯನ್ನು ಬಹಿರಂಗ ಗೊಳಿಸಿದ್ದಾರೆ: ಈಗ ಬಾಜಪದಿಂದ ಅಮಾನತಾಗಿರುವ ಮಾಜಿ ಕ್ರಿಕೇಟಿಗ  ಕೀರ್ತಿ ಆಜಾದ್ ಮತ್ತು ಶತ್ರುಘ್ನ ಸಿನ್ಹಾ ರವರು ಸಹ ಆದಷ್ಟು ಬೇಗ ಬಾಜಪ ತೊರೆದು ಆಪ್ ಸೇರಲಿದ್ದಾರೆಂದು ಟ್ವೀಟ್ ಮಾಡಿದ್ದಾರೆ.

ಇದರಲ್ಲಿ ಮುಖ್ಯವಾಗಿರುವುದು ಕೀರ್ತಿ ಆಜಾದ್ ಅವರ ಮುಂದಿನ ನಡೆ. ಯಾಕೆಂದರೆ ದೆಹಲಿ ಕ್ರಿಕೇಟ್ ಸಂಸ್ಥೆಯ ಆಡಳಿತಕ್ಕೆ ಸಂಬಂದಿಸಿದಂತೆ ಕೀರ್ತಿಯವರು ಕೇಂದ್ರ ಹಣಕಾಸು ಸಚಿವರಾದ ಅರುಣ್ ಜೇಟ್ಲಿಯವರ ವಿರುದ್ದ ಹಣ ದುರುಪಯೋಗದ ಆರಂಭ ಮಾಡಿದ್ದರು. ಈ ಕಾರಣಕ್ಕಾಗಿ ಕೀರ್ತಿಯವರನ್ನು ಪಕ್ಷದಿಂದ ಅಮಾನತ್ತು ಮಾಡಲಾಗಿತ್ತು. ಇದೀಗ ಅವರ ಪತ್ನಿ ಶ್ರೀಮತಿ ಪೂನಂ ಆಜಾದ್ ಸಹ ಪಕ್ಷ ತೊರೆದು ಆಪ್ ಸೇರಲಿದ್ದಾರೆಂಬುದು ಸುದ್ದಿಯಾಗಿದೆ. ಪೂನಂ ಸಹ ಬಾಜಪ ದೆಹಲಿ ಘಟಕದ ಮಾಜಿ ಉಪಾದ್ಯಕ್ಷೆಯಾಗಿದ್ದು ಮೂರು ಬಾರಿ ಬಾಜಪದ ರಾಷ್ಟ್ರೀಯ ಕಾರ್ಯಕಾರಿಯ ಸದಸ್ಯೆಯಾಗಿ ಕೆಲಸ ನಿರ್ವಹಿಸಿದ್ದು ಇದೀಗ ದೆಹಲಿಯ ಬಾಜಪದ ವಕ್ತಾರರಾಗಿ ಕೆಲಸ ಮಾಡುತ್ತಿದ್ದು ದೆಹಲಿಯ ಬಾಜಪದ ಮಹಿಳಾ ಕಾರ್ಯಕರ್ತರಲ್ಲಿ ಜನಪ್ರಿಯರಾಗಿದ್ದಾರೆ. ಕೀರ್ತಿ ಆಜಾದರ ಅಮಾನತಿನ ನಂತರ ಪೂನಂ ಅವರನ್ನು ಸಹ ಪಕ್ಷ ಕಡೆಗಣಿಸುತ್ತಿದೆಯೆಂಬ ಆರೋಪ ಬಾಜಪ ನಾಯಕರ ಮೇಲಿದ್ದು ಇದರಿಂದ ಬೇಸರಗೊಂಡಿರುವ ಪೂನಂ ಬಾಜಪ ತೊರೆದು ಆಪ್ ಸೇರುವ ಸಾದ್ಯತೆ ಹೆಚ್ಚಿದೆ. 

ಇನ್ನು ಮಾಜಿ ಸಿನಿಮಾ ನಟರೂ ಬಾಜಪದ ಬಿಹಾರದ ಮುಖ್ಯ ನಾಯಕರೂ ಆದ ಶತ್ರುಘ್ನಸಿನ್ಹಾರವರು ಸಹ ಬಾಜಪದ ನಾಯಕರುಗಳಿಂದ ನಿಲ್ರ್ಯಕ್ಷಕ್ಕೆ ಗುರಿಯಾಗಿದ್ದಾರೆ. ಕಳೆದ ಬಾರಿ ನಡೆದ ಬಿಹಾರದ ವಿದಾನಸಭಾ ಚುನಾವಣೆಗಳಲ್ಲಿ ಸಿನ್ಹಾರವರನ್ನು ಸರಿಯಾಗಿ ಬಳಸಿಕೊಳ್ಳದೆ ಪ್ರಚಾರದಿಂದ ದೂರವಿಟ್ಟು ಅದಕ್ಕೆ ಪ್ರತಿಯಾಗಿ ಸೋಲನ್ನಪ್ಪಿತು. ನಂತರವೂ ಸಿನ್ಹಾರವರಿಗೆ ಸೂಕ್ತವಾದ ಸ್ಥಾನಮಾನಗಳನ್ನು ಬಾಜಪ ನೀಡಿಲ್ಲವೆಂಬ ಹಿನ್ನೆಲೆಯಲ್ಲಿ ಸದ್ಯಕ್ಕೆ ಪಕ್ಷದ ಚಟುವಟಿಕೆಗಳಿಂದ ದೂರವಿರುವ ಅವರು ಸಹ ಕೆಲವೇ ದಿನಗಳಲ್ಲಿ ಆಪ್ ಸೇರಲಿದ್ದಾರೆಂಬ ಮಾತು ಕೇಳಿ ಬರುತ್ತಿದ್ದು, ಬಾಜಪದ ಮಟ್ಟಿಗಿದು ಸಿಹಿ ಸುದ್ದಿಯೇನಲ್ಲ.

ಒಟ್ಟಿನಲ್ಲಿ 2014 ರಲ್ಲಿ ಅಭೂತಪೂರ್ವ ಜಯಗಳಿಸಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಬಾಜಪದ ಮಧುಚಂದ್ರದ ದಿನಗಳು ಮುಗಿಯುತ್ತಿರುವಂತೆ ಕಾಣುತ್ತಿವೆ. ಆಡಳಿತ ಪಕ್ಷವೊಂದು ಎದುರಿಸಬೇಕಾದ ಎಲ್ಲ ರೀತಿಯ ಆಂತರೀಕ ಬಿರುಕುಗಳೂ ಆಪಕ್ಷದಲ್ಲಿ ಕಾಣತೊಡಗಿವೆ. ಆದರೆ ಇಂತಹ ಬಿರುಕುಗಳು ಮುಂದಿನ ವರ್ಷ ನಡೆಯಲಿರುವ ಹಲವು ರಾಜ್ಯವಿದಾನಸಭಾ ಚುನಾವಣೆಗಳ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮಗಳು ಬೀರಬಹುದೆನ್ನುವುದನ್ನು ನಾವು ಕಾದು ನೋಡ ಬೇಕಾಗಿದೆ,

No comments:

Post a Comment