Jul 17, 2016

ಉತ್ತರ ಪ್ರದೇಶ: ಬ್ರಾಹ್ಮಣ ಸಮುದಾಯದ ಓಲೈಕೆಯಲ್ಲಿ ಮುಳುಗಿರುವ ರಾಜಕೀಯ ಪಕ್ಷಗಳ ಜಾತಿ ರಾಜಕಾರಣದ ಪರಾಕಾಷ್ಠೆ

ಕು.ಸ.ಮಧುಸೂದನನಾಯರ್ ರಂಗೇನಹಳ್ಳಿ
17/07/2016
ಮುಂದಿನ ವರ್ಷ ನಡೆಯಲಿರುವ ಉತ್ತರಪ್ರದೇಶದ ವಿಧಾನಸಭೆ ಚುನಾವಣೆಗಳಿಗೆ ಪೂರ್ವಬಾವಿಯಾಗಿ ಕಾಂಗ್ರೆಸ್ಸಿನ ಹಿರಿಯ ನಾಯಕಿಯು, ಕೇಂದ್ರದ ಮಾಜಿ ಸಚಿವೆಯೂ, ದೆಹಲಿ ರಾಜ್ಯದ ಮೂರು ಅವಧಿಯ ಮಾಜಿ ಮುಖ್ಯಮಂತ್ರಿಯೂ ಆದ ಶ್ರೀಮತಿ ಶೀಲಾದೀಕ್ಷಿತ್ ಅವರನ್ನು ಕಾಂಗ್ರೆಸ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯೆಂದು ಘೋಷಿಸುವುದರ ಮೂಲಕ ಅದರ ಆಂತರಿಕ ತೊಳಲಾಟಕ್ಕೊಂದು ಅಂತ್ಯ ಹಾಡಿದೆ. ಇದು ಚುನಾವಣಾ ತಂತ್ರಗಾರಿಕೆಯ ನಿಪುಣನೆಂದು ಹೆಸರು ಮಾಡಿದ ಪ್ರಶಾಂತ್ ಕಿಶೋರ್ ಅವರ ಸಲಹೆಯೆಂದು ಹೇಳಲಾಗುತ್ತಿದೆ. ದೆಹಲಿಯ ಮುಖ್ಯಮಂತ್ರಿಯಾಗಿ ದೀಕ್ಷಿತ್ ಅವರು ಮಾಡಿದ ಅಭಿವೃದ್ದಿ ಪರ ಕೆಲಸಗಳನ್ನು ಚುನಾವಣೆಯ ಪ್ರಚಾರಕ್ಕೆ ಬಳಸಿಕೊಳ್ಳುವ ತಂತ್ರ ಇದೆಂದು ಹೇಳಲಾಗುತ್ತಿದೆಯಾದರು, ನಿಜವಾದ ವಿಷಯವೇ ಬೇರೆ ಇದೆ. ಎಂತ್ತರ ದಶಕದ ಉತ್ತರಾರ್ದದ ನಂತರ ಕಾಂಗ್ರೆಸ್ಸಿನಿಂದ ದೂರ ಹೋಗಿದ್ದ ಬ್ರಾಹ್ಮಣ ಸಮುದಾಯವನ್ನು ತನ್ನತ್ತ ಸೆಳೆದುಕೊಳ್ಳುವ ಉದ್ದೇಶವೇ ಈ ನಿರ್ದಾರದ ಹಿಂದಿನ ಕಾರಣವೆಂದು ಪಕ್ಷದ ಕೆಲವು ಮೂಲಗಳು ತಿಳಿಸಿವೆ. ಇದು ಬಹುತೇಕ ಸತ್ಯಕ್ಕೆ ಹತ್ತಿರವಾದ ವಿಚಾರವೆನಿಸುತ್ತದೆ. ಯಾಕೆಂದರೆ ತೊಂಭತ್ತರ ದಶಕದವರೆಗು ಕಾಂಗ್ರೆಸ್ಸಿನ ಬೆಂಬಲಿಗ ಸಮುದಾಯವಾಗಿದ್ದ ಬ್ರಾಹ್ಮಣ ಸಮುದಾಯ ೧೯೮೯ ರಿಂದ ೧೯೯೧ ರವರೆಗೆ ನಡೆದ ಮಂಡಲ ವರದಿ ವಿರೋಧಿ ಚಳುವಳಿ ಮತ್ತು ಬಾಬ್ರಿ ಮಸೀದಿಯ ವಿವಾದದ ನಂತರ ಬಾಜಪದತ್ತ ಮುಖ ಮಾಡಿತು. ಅಲ್ಲಿಂದ ಶುರುವಾದ ಕಾಂಗ್ರೆಸ್ಸಿನ ಸೋಲಿನ ಸರಮಾಲೆ ಉತ್ತರಪ್ರದೇಶದಲ್ಲಿ ಇಂದಿಗೂ ಮುಂದುವರೆಯುತ್ತಿದೆ. ರಾಜ್ಯದ ಒಟ್ಟು ಜನಸಂಖ್ಯೆಯ ಶೇಕಡಾ ಹತ್ತರಷ್ಟಿರುವ ಬ್ರಾಹ್ಮಣರು ಸುಮಾರು ನಲವತ್ತರಿಂದ ಐವತ್ತು ಕ್ಷೇತ್ರಗಳಲ್ಲಿ ನಿರ್ಣಾಯಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಬ್ರಾಹ್ಮಣ ಮತಗಳನ್ನು ತನ್ನತ್ತ ಸೆಳೆಯಲು ಶೀಲಾ ದೀಕ್ಷಿತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತಿದೆ.

ಪಂಜಾಬಿನಲ್ಲಿ ಜನಿಸಿದ ಶ್ರೀಮತಿ ಶೀಲಾ ದೀಕ್ಷಿತ್ ಕಾಂಗ್ರೆಸ್ಸಿನ ಅತ್ಯಂತ ಹಿರಿಯ ನಾಯಕರೂ, ಕೇಂದ್ರದ ಮಾಜಿ ಸಚಿವರೂ, ರಾಜ್ಯಪಾಲರೂ ಆಗಿದ್ದ ಉತ್ತರಪ್ರದೇಶದ ದಿವಂಗತ ಉಮಾಶಂಕರ ದೀಕ್ಷಿತ್ ಅವರ ಸೊಸೆ. ಉಮಾಶಂಕರ ದೀಕ್ಷಿತರು ಉತ್ತರ ಪ್ರದೇಶದ ಬ್ರಾಹ್ಮಣ ಸಮುದಾಯದಲ್ಲಿ ಅತ್ಯಂತ ಗೌರವಾನ್ವಿತ ರಾಜಕಾರಣಿಯಾಗಿ ಹೆಸರು ಮಾಡಿದ್ದವರು.ಇಂತವರ ಸೊಸೆಯಾಗಿರುವ ದೀಕ್ಷಿತರು ಮೂರು ಅವಧಿಗೆ ದೆಹಲಿಯ ಮುಖ್ಯಮಂತ್ರಿಯಾಗಿ ಕೆಲಸ ಮಾಡಿ ೨೦೧೩ರಲ್ಲಿ ಆಮ್ ಆದ್ಮಿಯ ಅಲೆಯಲ್ಲಿ ಸೋತವರು. ದೆಹಲಿಯ ಆಡಳಿತದಲ್ಲಿ ತಮ್ಮದೇ ಛಾಪು ಮೂಡಿಸಿ ಜನಪ್ರಿಯರಾಗಿದ್ದ ಅವರ ಬಗ್ಗೆ ಅವರ ವಿರೋಧಿಗಳು ತೀರಾ ಕ್ಷುಲ್ಲಕವಾಗಿ ಮಾತಾಡುತ್ತಿರಲಿಲ್ಲ. ನೆಹರೂ ಕುಟುಂಬಕ್ಕೆ ಅತ್ಯಂತ ನಿಷ್ಠರಾಗಿರುವ ಶೀಲಾರವರು ಆಡಳಿತದ ವಿಚಾರದಲ್ಲಿ ಪರಿಣಿತರೆಂಬ ಮಾತು ಸಹ ಉತ್ತರಪ್ರದೇಶದ ಚುನಾವಣೆಯಲ್ಲಿ ಪ್ರಬಾವ ಬೀರಬಹುದಾಗಿದೆ. ಆದರೆ ಇತ್ತೀಚೆಗೆ ಅವರ ಮೇಲೆ ಮಾಡಲಾಗಿರುವ ವಾಟರ್ ಟ್ಯಾಂಕರ್ ಹಗರಣವನ್ನು ವಿರೋಧಪಕ್ಷಗಳು ಅದರಲ್ಲೂ ಬಾಜಪದವರು ಚುನಾವಣೆಯ ವಿಷಯವನ್ನಾಗಿ ಮಾಡುವ ನಿರೀಕ್ಷೆಯಿದೆ. ಆದರೆ ಕೆಲವು ಸ್ಥಳೀಯ ಕಾಂಗ್ರೆಸ್ಸಿಗರ ಪ್ರಕಾರ, ಬ್ರಾಹ್ಮಣರನ್ನೇ ಮುಖ್ಯಮಂತ್ರಿ ಅಭ್ಯಥಿಯನ್ನಾಗಿ ಘೋಷಿಸಲೇ ಬೇಕೆಂದಿದ್ದರೆ ಎಪ್ಪತ್ತು ವರ್ಷದ ಶೀಲಾದೀಕ್ಷಿತರಿಗಿಂತ ನಲವತ್ತೆರಡು ವರ್ಷದ ಜಿತೇಂದ್ರ ಪ್ರಸಾದ ಉತ್ತಮ ಆಯ್ಕೆಯಾಗುವುದು ಸಾದ್ಯವಿತ್ತು. ಈ ಬಗ್ಗೆ ಕಾಂಗ್ರೆಸ್ಸಿನ ಆಂತರಿಕ ವಲಯದಲ್ಲಿ ಒಂದಷ್ಟು ಪಿಸುಮಾತುಗಳೂ ಕೇಳಿ ಬರುತ್ತಿರುವುದು ನಿಜವಾದರು, ಅನುಭವ, ದಕ್ಷತೆಯ ವಿಚಾರದಲ್ಲಿ ಶೀಲಾರವರೆ ಮೇಲುಗೈ ಸಾದಿಸಿದ್ದಾರೆ. ಹಾಗಾದರೆ ತನ್ನ ಮಾಮೂಲಿ ಸಂಪ್ರದಾಯವನ್ನು ಮುರಿದು ಕಾಂಗ್ರೆಸ್ ಯಾಕೆ ಶೀಲಾದೀಕ್ಷಿತರನ್ನು ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಘೋಷಿಸಿತು ಎಂದು ನೋಡಿದರೆ ಹಲವು ಕಾರಣಗಳು ಕಂಡು ಬರುತ್ತವೆ.

ಮೊದಲನೆಯದಾಗಿ ಮೋದಿಯವರನ್ನು ಮತ್ತು ನಿತೀಶ್ ಕುಮಾರ್ ಯಾದವರನ್ನು ಚುನಾವಣೆಗಳಲ್ಲಿ ಗೆಲ್ಲಿಸುವ ತಂತ್ರಗಳನ್ನು ಹೆಣೆದರು ಎನ್ನಲಾದ ಪ್ರಶಾಂತ್ ಕಿಶೋರ್ ಅವರನ್ನು ಈ ಬಾರಿ ತನ್ನ ಬೆನ್ನಿಗಿಟ್ಟುಕೊಂಡ ಕಾಂಗ್ರೆಸ್ ಅವರ ಸಲಹೆಯಂತೆಯೇ ಶೀಲಾರನ್ನು ಆಯ್ಕೆ ಮಾಡಿದ್ದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಇನ್ನು ಎರಡನೆಯದಾಗಿ ಶೀಲಾದೀಕ್ಷಿತರ ಬ್ರಾಹ್ಮಣ ಜಾತಿ ಅವರ ಆಯ್ಕೆಯಲ್ಲಿ ಕೆಲಸ ಮಾಡಿದೆ. ಮೂರನೆಯದಾಗಿ ಉತ್ತರಪ್ರದಶದ ಅತ್ಯಂತ ಹಿರಿಯ ಮತ್ತು ಗೌರವಾನ್ವಿತ ನಾಯಕರಾದ ಉಮಾಶಂಕರ ದೀಕ್ಷಿತರ ಕುಟುಂಬದ ಸೊಸೆ ಎಂಬುದು ಸಹ ಶೀಲಾರವರ ಆಯ್ಕೆಯಲ್ಲಿ ಪ್ರದಾನ ಪಾತ್ರ ವಹಿಸಿದೆ. ನಾಲ್ಕನೆಯದಾಗಿ ಉತ್ತರಪ್ರದೇಶದ ಕಾಂಗ್ರೆಸ್ ಮುಖ್ಯಸ್ಥೆಯಾಗಿ ೧೯೮೪ರಲ್ಲಿ ಆಕೆ ಪಕ್ಷವನ್ನು ಗೆಲ್ಲಿಸಿಕೊಂಡು ಬಂದಿದ್ದು ಉತ್ತರ ಪ್ರದೇಶದ ರಾಜಕೀಯ ಸ್ಥಿತಿಗತಿಗಳು ಮತ್ತು ಕಾರ್ಯಕರ್ತರು ಆಕೆಗೆ ಚಿರಪರಿಚಿತವಾಗಿರುವುದು. ಐದನೆಯದಾಗಿ ಆಕೆಯನ್ನು ಉತ್ತರಪ್ರದೇಶಕ್ಕೆ ಕಳಿಸುವುದರಿಂದ ದೆಹಲಿ ಕಾಂಗ್ರೆಸ್ಸಿನ ನಾಯಕತ್ವವನ್ನು ಇನ್ನೊಬ್ಬ ದೆಹಲಿಯ ನಾಯಕ ಅಜಯ್ ಮಕ್ವಾನರಿಗೆ ಹಸ್ತಾಂತರಿಸುವುದು ಸುಲಭದ ಕಾರ್ಯವಾಗಿದೆ. ಆರನೆಯದು ತೀರಾ ಇತ್ತೀಚೆಗೆ ಅವರ ಮೇಲೆ ಮಾಡಲಾದ ವಾಟರ್ ಟ್ಯಾಂಕರ್ ಹಗರಣದ ಹೊರತಾಗಿ ಅವರ ಮೇಲೆ ಇನ್ಯಾವ ಆಪಾದನೆಯೂ ಇಲ್ಲವಾಗಿದ್ದು ದೆಹಲಿಯಲ್ಲಿ ಸತತವಾಗಿ ಮೂರು ಬಾರಿ ಪಕ್ಚವನ್ನು ಗೆಲ್ಲಿಸಿದ ಕೀರ್ತಿ ಅವರ ಬೆನ್ನಿಗಿರುವುದಾಗಿದೆ. 

ಇನ್ನು ಈ ಬಾರಿ ಉತ್ತರಪ್ರದೇಶದ ಬಹುತೇಕ ಎಲ್ಲ ರಾಜಕೀಯ ಪಕ್ಷಗಳು ಬ್ರಾಹ್ಮಣರನ್ನು ಓಲೈಸುವ ಕಾರ್ಯಕ್ಕೆ ಮುಂದಾಗಿರುವುದು ವಿಶೇಷವಾಗಿದೆ, ಬಹುಶ: ತೊಂಭತ್ತರ ದಶಕದ ನಂತರ ಇದೇ ಮೊದಲಬಾರಿಗೆ ಬ್ರಾಹ್ಮಣ ಸಮುದಾಯಕ್ಕೆ ಈ ಮಟ್ಟಿಗಿನ ಪ್ರಾದಾನ್ಯತೆ ನೀಡಲಾಗುತ್ತಿದೆಯೆನ್ನಬಹುದು. ಈಗಾಗಲೇ ಬಹುಜನ ಪಕ್ಷದ ಮಾಯಾವತಿಯವರು ಐವತ್ತಕ್ಕು ಅಧಿಕ ಸ್ಥಾನಗಳಿಗೆ ಬ್ರಾಹ್ಮಣ ಅಭ್ಯರ್ಥಿಗಳನ್ನು ಘೋಷಣೆ ಮಾಡಿಯಾಗಿದ್ದು, ಈ ಸಮುದಾಯದ ಓಲೈಕೆಯಲ್ಲಿ ಮುಂದಿದ್ದಾರೆ. ಮೊನ್ನೆ ತಾನೇ ಬಾಜಪವು ಉತ್ತರಪ್ರದೇಶದ ಬ್ರಾಹ್ಮಣ ನಾಯಕರಾದ ಶ್ರೀ ಶಿವಪ್ರಕಾಶ್ ಶುಕ್ಲಾರವರನ್ನು ರಾಜ್ಯಸಭೆಗೆ ಕಳಿಸಿ, ಬ್ರಾಹ್ಮಣರ ಓಲೈಕೆಗೆ ತನ್ನ ಕಾಣಿಕೆಯನ್ನೂ ನೀಡಿದೆ. ಬಹಳ ಹಿಂದೆ ಕಲ್ಯಾಣ್ ಸಿಂಗ್ ಸರಕಾರದಲ್ಲಿ ಸಚಿವರಾಗಿದ್ದು ನಂತರ ಅಜ್ಞಾತವಾಸದಲ್ಲಿದ್ದ ಶುಕ್ಲಾರವರನ್ನು ಪುನ: ಸಕ್ರಿಯ ರಾಜಕಾರಣಕ್ಕೆ ತರುವುದರ ಹಿಂದೆ ಬಾಜಪದ ಬ್ರಾಹ್ಮಣ ಓಲೈಕೆಯ ತಂತ್ರವೇ ಅಡಗಿದೆ. ಇದೇ ರೀತಿ ಸಮಾಜವಾದಿ ಪಕ್ಷವು ಸಹ ಮೂರು ಜನ ಬ್ರಾಹ್ಮಣರನ್ನು ರಾಜ್ಯಸಬೆಗೆ ಕಳಿಸುವ ಮೂಲಕ ತಾವೇನು ಹಿಂದೆ ಬಿದ್ದಿಲ್ಲವೆಂಬುದನ್ನು ತೋರಿಸಿಕೊಟ್ಟಿದ್ದಾರೆ.

ಹೀಗೆ ಉತ್ತರಪ್ರದೇಶದಲ್ಲಿನ ನಾಲ್ಕೂ ಪಕ್ಷಗಳು ಬ್ರಾಹ್ಮಣ ಮತದಾರರನ್ನು ಓಲೈಸುವ ದಾರಿ ಹಿಡಿದಿದ್ದು ಅದು ಎಷ್ಟರ ಮಟ್ಟಿಗೆ, ಯಾವ ಪಕ್ಷಕ್ಕೆ ಸಫಲತೆಯನ್ನು ತಂದು ಕೊಡುತ್ತದೆಯೆಂಬವುದನ್ನು ನಾವು ಕಾದು ನೋಡಬೇಕಿದೆ.

No comments:

Post a Comment