Jul 15, 2016

ಮೇಕಿಂಗ್ ಹಿಸ್ಟರಿ: ತೆರಿಗೆ ವಸೂಲು ಮಾಡಲು ನಡೆಸಿದ ಶೋಷಣೆ

making history
ಸಾಕೇತ್ ರಾಜನ್ 
ಕನ್ನಡಕ್ಕೆ: ಡಾ. ಅಶೋಕ್. ಕೆ. ಆರ್
15/07/2016

ವಿಪರೀತದ ತೆರಿಗೆಯನ್ನು ಸಂಗ್ರಹಿಸುವ ಸಲುವಾಗಿ, ಫೌಜುದಾರನಿಂದ ಪಟೇಲ, ಶಾನುಭೋಗರವರೆಗಿನ ಎಲ್ಲ ಕಂದಾಯ ಅಧಿಕಾರಿಗಳು ಜನಸಮೂಹವನ್ನು ಶೋಷಣೆಗೊಳಪಡಿಸುವುದು ಸಾಮಾನ್ಯವಾಗಿಬಿಟ್ಟಿತು, ಕಾನೂನಾತ್ಮಕವಾಗಿಬಿಟ್ಟಿತು. 

ರೈತವಾರಿ ಪದ್ಧತಿಯಲ್ಲಿ ರೈತರು ನೇರವಾಗಿ ಅಧಿಕಾರಶಾಹಿಯೊಂದಿಗೆ ಸಂಪರ್ಕದಲ್ಲಿದ್ದರು. ಬಹಳಷ್ಟು ಸಲ ಹಳ್ಳಿಯ ಮಟ್ಟದಲ್ಲಿ ಭೂಮಾಲೀಕರಾದ ಮತ್ತು ತೆರಿಗೆ ಕಟ್ಟುವವರಾದ ಪಟೇಲರು ಮತ್ತು ಶಾನುಭೋಗರ ಅರ್ಜಿಯನ್ನು ಪರಿಶೀಲಿಸುವಾಗ ಖುದ್ದು ಶಿರಸ್ತೇದಾರರು ತಮ್ಮ ಪಡೆಯೊಂದಿಗೆ ಹಾಜರಿರುತ್ತಿದ್ದರು. ಶರಾತ್ ವ್ಯವಸ್ಥೆಯಲ್ಲಿ, ಶೋಷಣೆಯು ಸಾರ್ವತ್ರಿಕವಾಗಿಬಿಟ್ಟಿತು. ಶೋಷಣೆ ಮತ್ತು ದಬ್ಬಾಳಿಕೆಯ ಕತೆಗಳು ಸಹಜವೆಂಬಂತಾಗಿ, ಋತು ಬದಲವಾವಣೆಯೊಂದಿಗೆ ನಡೆಯುವ ವಾರ್ಷಿಕ ಸಂಗತಿಯಾಯಿತು. 

1832ರಲ್ಲಿ ರೈತವಾರಿ ಪದ್ಧತಿಯ ಲಕ್ಷಣಗಳ ಬಗ್ಗೆ ಬರೆಯುತ್ತ, ಆರ್. ರಿಚರ್ಡ್ ಹೇಳುತ್ತಾನೆ: “ಭೂಕಂದಾಯ ಸಂಗ್ರಹಿಸಲು ನೇಮಕವಾಗಿದ್ದ ಪ್ರತಿಯೊಬ್ಬ ಕಿರಿಯ ಅಧಿಕಾರಿಯೂ ಪೋಲೀಸ್ ಅಧಿಕಾರಿಯಂತಾಗಿದ್ದ; ತನ್ನಾಡಳಿತವಿದ್ದ ಪ್ರದೇಶದ ಯಾವುದೇ ವ್ಯಕ್ತಿಗೆ ದಂಡ ಹಾಕುವ ಅಧಿಕಾರವಿತ್ತು, ಬಂಧಿಸುವ, ಛಡಿ ಏಟು ಹೊಡೆಸುವ ಅಧಿಕಾರವಿತ್ತು. ಪ್ರಕರಣದ ಬಗ್ಗೆ ದಾಖಲಾದ ಯಾವ ಸಾಕ್ಷಿಯೂ ಇರದಿದ್ದರೂ, ಆಪಾದಿತನ ಯಾವೊಂದು ಹೇಳಿಕೆ ಇರದಿದ್ದರೂ ಶಿಕ್ಷೆಗೆ ಒಳಗಾಗಬಹುದಿತ್ತು” ಮುಂದುವರಿಸುತ್ತ, ಇದನ್ನು ನಂಬದವರಿಗಾಗಿ ಎಂಬಂತೆ ರಿಚರ್ಡ್ಸ್ ಹೇಳುತ್ತಾರೆ ಇದು “ಅತಿರಂಜಿತ” ಚಿತ್ರವಲ್ಲ. (342) 

ಬ್ರಿಟೀಷರಾಳ್ವಿಕೆಯ ಮೊದಲ ದಶಕ ಮುಗಿಯುತ್ತಿದ್ದಂತೆ ಮತ್ತು ಶರಾತ್ ವ್ಯವಸ್ಥೆ ಕಂದಾಯ ಸಂಗ್ರಾಹ ವ್ಯವಸ್ಥೆಯ ಮಾದರಿಯಾದಾಗ, ಶೋಷಣೆಗೆ ರೈತ ಸಮೂಹ ನೀಡಿದ ಮೊದಲ ಪ್ರತಿಕ್ರಿಯೆಗಳನ್ನು ನೋಡಬಹುದು. ಥಾಮಸ್ ಮನ್ರೋ ಮತ್ತವನ ಪಟಾಲಂ (ಬಿಳಿ ತೊಗಲಿನವರು ಅಥವಾ ಕಂದು ಚರ್ಮದವರು) ಮೈಸೂರಿನ ರೈತರು ಹವಾಮಾನ ವೈಪರೀತ್ಯದ ವರುಷಗಳಲ್ಲಿ ಹೇಗೆ ಗುಂಪು ಗುಂಪಾಗಿ ತಮ್ಮಳ್ಳಿಗಳಿಂದ ಬೆಳೆ ಕಟಾವಿನ ಸಮಯಕ್ಕೆ ಗುಳೇ ಹೋಗಿಬಿಡುತ್ತಿದ್ದರು ಎಂದು ಶ್ರಮವಹಿಸಿ ಹೇಳಿದ್ದಾರೆ. ಮತ್ತಿದರಿಂದಾಗಿ ಕಲೆಕ್ಟರುಗಳ ಮಾಡಬೇಕಿದ್ದ ವಾಕರಿಕೆ ಬರಿಸುವ ಕೆಲಸದ ಬಗ್ಗೆ ತಿಳಿಸಿದ್ದಾರೆ, ಈ ರೀತಿ ಓಡಿಹೋಗುತ್ತಿದ್ದವರನ್ನು ಕಷ್ಟಪಟ್ಟು ಹಿಡಿದು ಮತ್ತೆ ಅವರ ಹಳೆಯ ‘ಪ್ರೀತಿಪೂರ್ವಕ’ ಮಾಲೀಕರಿಗೆ ಒಪ್ಪಿಸುವ ಕೆಲಸ ಅವರದಾಗಿತ್ತು. 

ಆದರೆ ಈ ನಿರ್ಭಾಗ್ಯ ಆತ್ಮಗಳು ಯಾರಿಂದ ಮತ್ತು ಯಾಕಾಗಿ ಓಡುತ್ತಿದ್ದವು? ಬಾಕಿ ವಸೂಲಾಗುವ ಸಲುವಾಗಿ ಶರಾತ್ ವ್ಯವಸ್ಥೆ ಮುಂದಿನ ಹಂತವನ್ನು ಅನ್ವೇಷಿಸಿತು. “ಸಬಲ ರೈತರನ್ನು” – ಶ್ರೀಮಂತ ರೈತರನ್ನು – ಗುತ್ತಿಗೆದಾರರು ಮತ್ತು ಬಡ – ಮಧ್ಯಮ ರೈತರ ಜಾಮೀನಾಗಿರುವಂತೆ ಅದು ಕೇಳಿಕೊಂಡಿತು. 

ಆದರೆ ಈ ನಿಯಮವೂ ಆದಾಯ ತರುವಲ್ಲಿ ವಿಫಲವಾದಾಗ, ಊಳಿಗಮಾನ್ಯ ಅಧಿಕಾರಶಾಹಿ ಈ ವರ್ಗದ ಜನರನ್ನೂ ಶೋಷಿಸಿದರು, ಅವರ ಭೂಮಿಯನ್ನೂ ಕಿತ್ತುಕೊಳ್ಳಲಾರಂಭಿಸಿದರು. 1820ರ ಕೊನೆಯ ಭಾಗದಲ್ಲಿ ಈ ಕಟು ವಾಸ್ತವ ಸಂಗತಿಯನ್ನು ಸರಕಾರಕ್ಕೆ ಬಂದಿದ್ದ ಎಷ್ಟೋ ಅರ್ಜಿಗಳು ಧೃಡಪಡಿಸುತ್ತವೆ. 

1857ರ ಬಂಡಾಯ ಮುಗಿದ ತಕ್ಷಣವೇ, ಬ್ರಿಟೀಷ್ ಸರಕಾರ ಸಮಿತಿಯೊಂದನ್ನು ರಚಿಸಿ “ಕಂದಾಯ ಕಟ್ಟಿಸಿಕೊಳ್ಳುವ ಸಲುವಾಗಿ ಸಾಮಾನ್ಯವಾಗಿ ನಡೆದಿದೆಯೆನ್ನಲಾದ ಶೋಷಣೆಯನ್ನು” ತನಿಖೆ ಮಾಡಲು ಆದೇಶಿಸಿತು. 

ಈ ಶೋಷಣಾ ಸಮಿತಿ, ಬ್ರಿಟೀಷರ ಪೂರ್ವಾಗ್ರಹಪೀಡಿತ ಮನಸ್ಸಿನಂತೆಯೇ “ಒಂದಲ್ಲ ಒಂದು ರೀತಿಯಲ್ಲಿ ಕೆಳ ಹಂತದ ಅಧಿಕಾರಿಗಳು ಬ್ರಿಟೀಷರ ಪ್ರತಿ ಪ್ರಾಂತ್ಯದಲ್ಲೂ ಶೋಷಣೆ ನಡೆಸಿದ್ದಾರೆ” ಎಂದು ಒಪ್ಪಿಕೊಂಡಿತು. 

ಈ ಸಾಲುಗಳಿಗೆ ಪ್ರತಿಕ್ರಯಿಸುತ್ತ ಮಾರ್ಕ್ಸ್, ಸಭ್ಯ ನಾಗರೀಕನಂತಿದ್ದವನು ಅಸಲಿಗೆ ಬೆತ್ತಲೆ ಬೇಟೆಗಾರ ಎಂಬುದನ್ನು ಸಾಬೀತುಮಾಡುತ್ತ ಹೀಗೆ ಹೇಳಿದ: “ಶೋಷಣೆಯು ಬ್ರಿಟೀಷ್ ಇಂಡಿಯಾದಲ್ಲಿ ಸರ್ವವ್ಯಾಪಿಯಾಗಿದ್ದ ಆರ್ಥಿಕ ವ್ಯವಸ್ಥೆಯಾಗಿತ್ತು ಎನ್ನುವುದನ್ನು ಅಧಿಕೃತವಾಗಿ ಒಪ್ಪಿಕೊಳ್ಳಲಾಗಿದೆ.” (246) 

ನ್ಯಾಯಾಲಯದ ಇತಿಹಾಸಕಾರರಾದ ಶಾಮ ರಾವ್ ಮತ್ತು ಹಯವದನ ರಾವ್ ಹಾಗು ನಗರದ ಬಂಡಾಯವನ್ನು ತನಿಖೆ ಮಾಡಿದ ಬ್ರಿಟೀಷ್ ತನಿಖಾ ಸಮಿತಿ ಇದೇ ಮಾದರಿಯಲ್ಲಿ ರಾಜನನ್ನು ಮೈಸೂರು ರೇಷ್ಮೆ ಸೀರೆಯಲ್ಲಿ ಅಲಂಕರಿಸಿದರು. ಆದರೆ ಈ “ಆರ್ಥಿಕ ವ್ಯವಸ್ಥೆಯ” ಮೈಸೂರಿನ ಪ್ರಮುಖ ದಲ್ಲಾಳಿಯಾಗಿದ್ದ ಮೂರನೇ ಕೃಷ್ಣರಾಜ ಒಡೆಯರ್ ಬೆತ್ತಲಾಗಿ ನಿಂತರು, ಮಿಥ್ಯಾಕಥೆಗಳ ‘ಬಟ್ಟೆಯಿಲ್ಲದ ರಾಜನಂತೆ’. 

ಶೋಷಣೆಯ ಎಲ್ಲಾ ರೀತಿಯ ಮಾದರಿಗಳನ್ನೂ ಪಾಲಿಸಲಾಗುತ್ತಿತ್ತು. ಬೆನ್ನ ಮೇಲೆ ಮಣಭಾರದ ಕಲ್ಲನ್ನು ಹೇರಿ ಉರಿವ ಬಿಸಿಲಲ್ಲಿ ನಿಲ್ಲಿಸುವುದು ಹೆಚ್ಚು ಖ್ಯಾತವಾಗಿತ್ತು ಮತ್ತು ಮದ್ರಾಸ್ ಪ್ರಾಂತ್ಯದಲ್ಲೂ ಪಾಲಿಸಲಾಗುತ್ತಿತ್ತು. ಕಿತ್ತೂರು ಪ್ರದೇಶದಲ್ಲಿನ ಅಸಂಖ್ಯಾತ ಜನಪದ ಹಾಡುಗಳು ರಾಯಣ್ಣನ ಹೆತ್ತವರನ್ನು ಶೋಷಿಸಿದ್ದನ್ನು ತಿಳಿಸುತ್ತದೆ. ಒಬ್ಬ ಬಾಕಿದಾರನನ್ನು ಮತ್ತೊಬ್ಬ ಕಿವಿ ಹಿಡಿದು ಎತ್ತುವುದು, ಛಡಿ ಏಟು ನೀಡುವುದು, ಉರಿಬಿಸಿಲಿನಲ್ಲಿ ಮೊಣಕಾಲೂರಿ ನಿಲ್ಲುವುದು ಮತ್ತು ಶೋಷಕರ ಪುರುಷಹಂಕಾರವನ್ನು ತಣಿಸುವ ಸಲುವಾಗಿ ಮಹಿಳೆಯರ ಎದೆಯ ಮೇಲೆ ಭಾರವನ್ನೇರಲಾಗುತ್ತಿತ್ತು. ಇವೆಲ್ಲವೂ ಕಡಿಮೆ ಪ್ರಮಾಣದ ಶಿಕ್ಷೆಗಳಷ್ಟೇ. ಶಿಕ್ಷೆಗೊಳಪಟ್ಟ ವ್ಯಕ್ತಿ ಒಂದಷ್ಟು ದಿಟ್ಟತನ ತೋರಿದಾಗ ಶಿಕ್ಷೆಯ ರೀತಿ ಗಂಭೀರವಾಗಿರುತ್ತಿತ್ತು, ಇನ್ನಷ್ಟು ಹಿಂಸಾತ್ಮಕವಾಗುತ್ತಿತ್ತು. ಮುಖಕ್ಕೆ ಬೆಂಕಿಯಿಡುವುದು, ಕಿವಿ, ಮೂಗು, ಮೊಲೆಯನ್ನು ಹರಿದು ಹಾಕುವುದು. 

ಈ ಎಲ್ಲಾ ಕಾರಣದಿಂದ ಹಳ್ಳಿಗಳ ಪಟೇಲರು ಮತ್ತು ಶಾನುಭೋಗರು, ಅವರ ಕೈಗೊಂಬೆ ರಾಜ, ರಾಜನಾಸ್ಥಾನದ ಆಪ್ತರು ಮತ್ತೀ ಪ್ರತಿಗಾಮಿ ವ್ಯವಸ್ಥೆಯನ್ನು ಪೋಷಿಸುತ್ತಿದ್ದ ವಸಾಹತು ದೊರೆಗಳು ಜನರ ದ್ವೇಷಕ್ಕೆ ಗುರಿಯಾಗಿದ್ದರಲ್ಲಿ ಯಾವುದೇ ಅಚ್ಚರಿಯಿಲ್ಲ. ಕರ್ನಾಟಕದ ಶೋಷಿತರು ಈ ಶೋಷಕರಿಗೆ ಬಿಸಿ ಮುಟ್ಟಿಸಲು ಕಾಯುತ್ತಿದ್ದದ್ದು ಹೌದು. ಅವರಿಗೆ ರಕ್ತ ಬೇಕಿತ್ತು ಮತ್ತು ತಮ್ಮ ಬಾಕಿಯನ್ನು ವಸೂಲಿ ಮಾಡಬೇಕಿತ್ತು. 

ನಗರದ ಬಂಡಾಯ ರೈತರು, ಹೊಸಂತೆಯಲ್ಲಿನ ತಮ್ಮ ಸಮಾವೇಶದ ನಂತರ “ಎಲ್ಲಾ ರೈತ ಕಾರ್ಮಿಕರು ಶೋಷಣೆಯ ವಿರುದ್ಧ ಒಂದಾಗಬೇಕು” ಎಂದು ಘೋಷಿಸಿದ್ದನ್ನು ಅರ್ಥ ಮಾಡಿಕೊಳ್ಳಬಹುದು. (247) ಮತ್ತು, ರೈತರು ಹೆಚ್ಚೆಚ್ಚು ಬಂಡಾಯವೆದ್ದಷ್ಟು, ತಮ್ಮ ಮೆರವಣಿಗೆಯಲ್ಲಿ ಒಬ್ಬ ನಿರ್ದಿಷ್ಟ ಅಮಲ್ದಾರ ಅಥವಾ ಶಿರಸ್ತೇದಾರನನ್ನು ತಮ್ಮ ಕೈವಶಕ್ಕೆ ಒಪ್ಪಿಸಬೇಕು ಎಂದು ಕೇಳುವುದು ಸಾಮಾನ್ಯವಾಯಿತು. ಜನರ ಗುಂಪೀಗ ಸಮೂಹವಾಗಿ ಬದಲಾಗಿತ್ತು. ಇಂಗ್ಲೀಷರ ಭಾಷೆ ಈ ರೀತಯ ಸೂಕ್ಷ್ಮತೆಗಳನ್ನೇ ತುಂಬಿಕೊಂಡಿದೆ. ಹೌದು, ಅವರು ತಮ್ಮ ಹಸಿ ಕೈಗಳನ್ನುಪಯೋಗಿಸಿ ಈ ಜನರನ್ನು ಸೀಳಿ ಸಾರ್ವಜನಿಕವಾಗಿ ನೇಣಿಗಾಕಬೇಕಿತ್ತು.

ಮುಂದಿನ ವಾರ
ಉತ್ಪಾದನೆಯ ನಾಶ

No comments:

Post a Comment